ಭಾರತದ ಆರ್ಥಿಕ ಸೂಚಕಗಳು ಈಗ ಬಹಳಷ್ಟು ಉತ್ತೇಜನಕಾರಿಯಾಗಿವೆ, ಅರ್ಥವ್ಯವಸ್ಥೆ ನಿರೀಕ್ಷಿತ ದರಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಡಿಸೆಂಬರ್ 12ರಂದು ದೊಡ್ಡ ಉದ್ಯಮಿಗಳ ಸಂಘಟನೆ ಎಫ್.ಐ.ಸಿ.ಸಿ.ಐ. (ಫಿಕಿ)ಯ ವಾರ್ಷಿಕ ಅಧಿವೇಶವನ್ನುಉದ್ದೇಶಿಸಿ ಮಾತಾಡುತ್ತ ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
ಆದರೆ ಇದುವರೆಗೆ ಪ್ರಕಟವಾಗಿರುವ ಅಂಕಿ-ಅಂಶಗಳು ಬೇರೆಯ ಚಿತ್ರವನ್ನೇ ಕೊಡುತ್ತಿವೆ ಎನ್ನುತ್ತಾರೆ ಪರಿಣಿತರು. ಪ್ರಸಕ್ತ ಎರಡನೇ ತ್ರೈಮಾಸಿಕದ ಜಿಡಿಪಿಯಲ್ಲಿ ಚೇತರಿಕೆಯ ಸಂಕೇತ ನಿಜವಾಗಿಯೂ ಚೇತರಿಕೆಯನ್ನೇನೂ ಸೂಚಿಸುತ್ತಿಲ್ಲ ಎಂಬುದನ್ನು ಹಲವು ಅರ್ಥಶಾಸ್ತ್ರಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಈ ಎರಡು ಹೇಳಿಕೆಗಳನ್ನು ನೋಡಬೇಕಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿ ಕುರಿತಂತೆ ಪ್ರತಿತಿಂಗಳು ಸರ್ವೆ ನಡೆಸುವ ಸಿ.ಎಂ.ಐ.ಇ. ನ ಇತ್ತೀಚಿನ ಸರ್ವೆಯ ಆಧಾರದಲ್ಲಿ, ಈ ಭಾಷಣದ ಎರಡು ದಿನಗಳ ಹಿಂದೆ, ಡಿಸೆಂಬರ್ 10ರಂದು ಪ್ರಕಟಿಸಿರುವ ಉದ್ಯೋಗ/ನಿರುದ್ಯೋಗ ಅಂಕಿ-ಅಂಶಗಳ ಪ್ರಕಾರ ಅಕ್ಟೋಬರ್‌ನಲ್ಲಿ ಉದ್ಯೋಗದಲ್ಲಿದ್ದವರ ಸಂಖ್ಯೆಯಲ್ಲಿ ಹಿಂದಿನ ತಿಂಗಳಿಗೆ ಹೋಲಿಸಿದರೆ 0.1ಶೇ. ಇಳಿಕೆಯಾಗಿದ್ದರೆ, ನವಂಬರ್‌ನಲ್ಲಿ 0.9ಶೇ. ಇಳಿಕೆಯಾಗಿದೆ, ಅಂದರೆ 35ಲಕ್ಷದಷ್ಟು ಇಳಿದಿದೆ. ಉದ್ಯೋಗಗಳ ಸಂಖ್ಯೆ ಇನ್ನೂ ಕೊವಿಡ್-ಪೂರ್ವ ಸ್ಥಿತಿಗೆ ಮರಳಿಲ್ಲ. ಮಾರ್ಚ್ 2020ರಲ್ಲಿ ಲಾಕ್ಡೌನಿನಿಂದ ಇಳಿಯಲಾರಂಭಿಸಿದ್ದ ಇದು ನಂತರ ಸ್ವಲ್ಪ ಚೇತರಿಕೆ ಕಂಡರೂ ಜುಲೈನಿಂದ ಮೂರು ತಿಂಗಳು ಸತತ ಇಳಿಕೆ ತೋರಿಸಿತ್ತು. ಅಕ್ಟೋಬರ್‌ನಲ್ಲಿ ತುಸು ಚೇತರಿಕೆ ಕಂಡಿತ್ತು, ಈಗ ಈ ಚೇತರಿಕೆಯ ಘಟ್ಟ ಮುಗಿದಿರುವಂತೆ ಕಾಣುತ್ತದೆ ಎಂದು ಸಿ.ಎಂ.ಐ.ಇ. ನ ಸಿಇಒ ಮಹೇಶ ವ್ಯಾಸ್ ಹೇಳಿದ್ದಾರೆ.
ಕಳೆದ ವರ್ಷದ ನವೆಂಬರ್‍ಗೆ ಹೋಲಸಿದರೆ ಉದ್ಯೋಗಗಳ ಸಂಖ್ಯೆಯಲ್ಲಿ 2.4ಶೇ. ಇಳಿಕೆಯಾಗಿದೆ.
ವಿಶಿಷ್ಟ ಸಂಗತಿಯೆಂದರೆ ನಿರುದ್ಯೋಗಿಗಳ ಸಂಖ್ಯೆಯೂ ‘ಇಳಿಯುತ್ತಿದೆ’. ಎಪ್ರಿಲ್-ಮೇನಲ್ಲಿ ಇದು 8.7 ಕೋಟಿಗೇರಿತ್ತು. ನಂತರ ಆಗಸ್ಟ್, ಸೆಪ್ಟಂಬರ್ ಮತ್ತು ನವಂಬರ್‌ನಲ್ಲಿ ಅನುಕ್ರಮವಾಗಿ 3.57 ಕೋಟಿ, 2.84 ಕೋಟಿ ಮತ್ತು 2.74 ಕೋಟಿಗೆ ಇಳಿಯಿತು.
ಈ ವೈಪರೀತ್ಯಕ್ಕೆ ಕಾರಣ ಉದ್ಯೋಗಗಳು ಸತತವಾಗಿ ಕಡಿಮೆಯಾಗುತ್ತಿರುವುದರಿಂದ, ಜತೆಗೆ ಸಂಬಳಗಳೂ ಕಡಿಮೆಯಾಗುತ್ತಿರುವುದರಿಂದ ಉದ್ಯೋಗದ ಹುಡುಕಾಟವನ್ನೇ ನಿಲ್ಲಿಸಿ ಬಿಟ್ಟಿರುವವರ ಸಂಖ್ಯೆ ಏರಿರುವುದನ್ನು ಇದು ತೋರಿಸುತ್ತದೆ ಎಂದು ಪರಿಣಿತರು ಹೇಳುತ್ತಾರೆ. ನವಂಬರ್ 2020ರಲ್ಲಿ ‘ನಿಷ್ಕ್ರಿಯವಾಗಿ ನಿರುದ್ಯೋಗಿ’ಗಳಾಗಿದ್ದವರ, ಅಂದರೆ ಉದ್ಯೋಗ ಹುಡುಕುವುದರಲ್ಲಿ ಆಸಕ್ತಿ ಕಳಕೊಂಡವರ ಸಮಕ್ಯೆ 2.25 ಕೊಟಿ. 2019-20ರಲ್ಲಿ ಇದು 1.16 ಕೋಟಿ ಇತ್ತು, ಅಂದರೆ ಸುಮಾರು ದುಪ್ಪಟ್ಟಾಗಿದೆ!
ಇದು ದೇಶದ ಅರ್ಥವ್ಯವಸ್ಥೆಗೆ ಉತ್ತೇಜನಕಾರಿ ಅಂಶವೇನೂ ಅಲ್ಲ. ನವಂಬರ್ 2020ರಲ್ಲಿ ಉದ್ಯೋಗಿಗಳ ಸಂಖ್ಯೆ 44.35 ಕೋಟಿ, 2019-20ರಲ್ಲಿ ಇದು 44.84 ಕೋಟಿ ಇತ್ತು. ಅಂದರೆ 49 ಲಕ್ಷದಷ್ಟು ಅಥವ 1.1ಶೇ. ಇಳಿಕೆ.
95ಶೇ. ಕುಟುಂಬಗಳ ನಿಜವಾದ ಆದಾಯ ಇಳಿದಿದೆಯೆಂದು ಮತ್ತೊಂದು ಅಂಕಿ-ಅಂಶ ಹೇಳುತ್ತದೆ.
ಪ್ರಧಾನಿಗಳ ಫಿಕಿ ಭಾಷಣದ ಮರುದಿನವೇ, ಡಿಸೆಂಬರ್ 13 ರಂದು ಸಿ.ಎಂ.ಐ.ಇ. ಪ್ರಕಟಿಸಿದ ಮತ್ತೊಂದು ಸರ್ವೆಯಿಂದ ಪಡೆದ ದತ್ತಾಂಶದ ಪ್ರಕಾರ, ಮೇ ತಿಂಗಳ ನಂತರ ಮೊದಲ ಬಾರಿಗೆ ಬಳಕೆದಾರರ ಭಾವನೆಗಳ ಸೂಚ್ಯಂಕ (Index of Consumer Sentiments) ಇಳಿದಿದೆ. ಅಕ್ಟೋಬರ್‌ನಲ್ಲಿ ಅದು 52.5 ಇತ್ತು. ನವಂಬರ್‌ನಲ್ಲಿ 51.8ಕ್ಕೆ ಇಳಿದಿದೆ. ಬಳಕೆದಾರರು ಖರೀದಿಗೆ ಹಿಂಜರಿಯುತ್ತಿದ್ದಾರೆ, ಅಂದರೆ ಮಾರುಕಟ್ಟೆಯಲ್ಲಿ ಹಬ್ಬಗಳ ಸಮಯದಲ್ಲಿ ತುಸು ಚೇತರಿಸಿಕೊಂಡ ಬೇಡಿಕೆಯ ಪ್ರಮಾಣ ಈಗ ಮತ್ತೆ ಕುಸಿಯುತ್ತಿದೆ.
ನವಂಬರ್ ತಿಂಗಳಲ್ಲಿ ಕುಟುಂಬಗಳ ಆದಾಯಗಳಲ್ಲಿಯೂ, ಮೇಲೆ ಹೇಳಿದಂತೆ, ಉದ್ಯೋಗಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇದು ಹೊಸ ಖರೀದಿಗಳಿಗೆ ಜನಗಳು ಹಿಂಜರಿಯುವಂತೆ ಮಾಡಿದೆ. ಒಟ್ಟಿನಲ್ಲಿ ಸರಾಸರಿ ಕುಟುಂಬಗಳ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಹೇಶ ವ್ಯಾಸ್ ಹೇಳುತ್ತಾರೆ.
(ಈ ಬಳಕೆದಾರರ ಖರೀದಿ ಭಾವನೆಯಲ್ಲಿ ಇಳಿಕೆ-ಫೆಬ್ರುವರಿ 2020ರಿಂದ-ಕೃಪೆ: ದಿ ಪ್ರಿಂಟ್)
ಮೇಲಿನ ಗ್ರಾಫ್ ತೋರಿಸುವಂತೆ ಲಾಕ್‌ಡೌನಿನ ಮೊದಲು ಫೆಬ್ರುವರಿ 2020ರಲ್ಲಿ ಸಿ.ಎಂ.ಐ.ಇ. ಸರ್ವೆ ಮಾಡಿದ ಕುಟುಂಬಗಳಲ್ಲಿ 27.2ಶೇ. ಮಂದಿ ಇದೀಗ ಬಾಳಿಕೆಯ ವಸ್ತುಗಳನ್ನು ಕೊಳ್ಳುವ ಒಳ್ಳೆಯ ಸಮಯ ಎಂದಿದ್ದರು. ಇದು ಲಾಕ್‌ಡೌನ್ ಹಾಕಿದ ಸ್ವಲ್ಪ ಸಮಯದಲ್ಲೇ ಮಾರ್ಚ್ ತಿಂಗಳಲ್ಲಿ 22.3ಶೇ. ಕ್ಕೆ ಇಳಿಯಿತು. ಎಪ್ರಿಲ್‌ನಲ್ಲಿ ಒಮ್ಮೆಲೇ 2.1ಶೇ.ಕ್ಕೆ, ಮೇನಲ್ಲಿ 1.3ಶೇ.ಕ್ಕೆ ಕುಸಿಯಿತು. ನಂತರ ಕ್ರಮೇಣ ಏರುತ್ತ ಬಂದು ಅಕ್ಟೋಬರ್‌ನಲ್ಲಿ ಇದು 7.4ಶೇ. ತಲುಪಿತು. ಈಗ ನವಂಬರಿನಲ್ಲಿ 6.5ಶೇ.ಕ್ಕೆ ಇಳಿದಿದೆ.
ಇಂತಹ ಸಮಯದಲ್ಲೇ ಪೆಟ್ರೋಲ್-ಡೀಸೆಲ್ ಬೆಲೆಗಳು ಒಂದು ವಾರ ಸತತವಾಗಿ ಏರಿವೆ. ಅಡುಗೆ ಅನಿಲದ ಬೆಲೆ 100ರೂ.ಗಳಷ್ಟು ಏರಿದೆ!