ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ರೈತರಿಗೆ ಮಾರಕವಾಗಿರುವ ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ನಿರಂತರ ಚಳುವಳಿಗೆ ನವೆಂಬರ್ 26ಕ್ಕೆ ಒಂದು ವರ್ಷವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸಮಾರಂಭವೊಂದರಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದರು. ನೆನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿಯೂ ಕಾಯ್ದೆ ವಾಪಸ್ಸಾತಿ ಬಗ್ಗೆ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಸರ್ಕಾರದ ಬಾಯಿಮಾತಿನ ಹೇಳಿಕೆಗಳ ಬಗ್ಗೆ ನಂಬಿಕೆಯಿಲ್ಲದ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ರೈತ ಹೋರಾಟವು ಮುಂಬರುವ ಸಂಸತ್ತಿನ ಚಳಿಗಾಲದಲ್ಲಿ ಮಂಡನೆಯಾಗುವವರೆಗೂ ಹೋರಾಟ ಮುಂದುವರೆಸಿದೆ. ಅಲ್ಲದೆ, ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಟ್ರ್ಯಾಕ್ಟರ್ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಕರ್ನಾಟದಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಕರೆ ನೀಡಿರುವ ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯವು ಎಪಿಎಂಸಿ ಮತ್ತು ಭುಸುಧಾರಣ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಸಹ ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದೆ. ಈ ಕಾಯ್ದೆಗಳ ರದ್ದತಿಗಾಗಿ ನವೆಂಬರ್ 26 ರಂದು ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಕರೆ ನೀಡಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ನರೇಂದ್ರ ಮೋದಿಯವರು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಎಂಎಸ್‌ಪಿ ಬಗ್ಗೆ, ವಿದ್ಯುಚ್ಛಕ್ತಿ ಮಸೂದೆ ಅವರು ಮಾತನಾಡಿಲ್ಲ. ಗಡಿಗಳಲ್ಲಿ ಹುತಾತ್ಮರಾದ 700ಕ್ಕೂ ಹೆಚ್ಚು ರೈತರ ಬಗ್ಗೆ, ಅವರಿಗೆ ಪರಿಹಾರ ಕೊಡುವ ಚಕಾರವೆತ್ತಿಲ್ಲ. ಇನ್ನು ರಾಜ್ಯ ಸರ್ಕಾರವೂ ತನ್ನ ಕಾಯ್ದೆಗಳನ್ನು ವಾಪಸ್ ಪಡೆಯಬೇಕಾಗಿತ್ತು. ಅದಕ್ಕಾಗಿ ನಾವು ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ್ದೇವೆ. ಹಾಗಾಗಿ ಎಲ್ಲಾ ಪ್ರಯಾಣಿಕರು ಅಂದು ಹಗಲಿನ ಪ್ರಯಾಣವನ್ನು ಜನತೆ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಕೇಂದ್ರದ ಕರಾಳ ಕಾಯ್ದೆಗಳು ಸಂಸತ್ತಿನಲ್ಲಿ ರದ್ದುಗೊಳ್ಳಬೇಕಿದೆ. ಜೊತೆಗೆ ಎಂಎಸ್‌ಪಿ ಜಾರಿಗೆ ಕಾನೂನು ಬೇಕೆಂದು ಆಗ್ರಹಿಸಿ ಚಳವಳಿ ಮುಂದುವರೆಯಲಿದೆ. ಕರ್ನಾಟಕ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ನವೆಂಬರ್ 26 ರಂದು ಹೆದ್ದಾರಿ ಬಂದ್ ನಡೆಯಲಿದೆ. ಸಾರ್ವಜನಿಕರು ಅಂದು ಪ್ರಯಾಣ ಮಾಡದೇ ರೈತ ಹೋರಾಟಕ್ಕೆ ಬೆಂಬಲಿಸಿಬೇಕು” ಎಂದು ಮನವಿ ಮಾಡಿದ್ದಾರೆ.ಬೆಂಗಳೂರಿನ ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆಯಿಂದ ಬೈಕ್ ಮತ್ತು ಕಾರು ರ‍್ಯಾಲಿ ನಡೆಯಲಿದೆ. ವಿವಿಧ ಜಿಲ್ಲೆಗಳ ಹೆದ್ದಾರಿ ಬಂದ್ ಹೋರಾಟಗಳು ನಡೆಯಲಿವೆ.