ಬೆಂಗಳೂರು: ನವೆಂಬರ್ 26ಕ್ಕೆ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಸಾಮೂಹಿಕ ಪ್ರತಿಭಟನೆ, ರಾಜ್ಯದ ಕೃಷಿ ಕಾಯ್ದೆಗಳ ದುಷ್ಪರಿಣಾಮ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚನೆ ಹಾಗೂ ರಾಜ್ಯಾದ್ಯಂತ ಕಿಸಾನ್ ಮಹಾ ಪಂಚಾಯತಿಗಳ ಆಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಯುಕ್ತ ಹೋರಾಟ ಕರ್ನಾಟಕ ನಿರ್ಧರಿಸಿದೆ.
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಪ್ರಮುಖ ಸಭೆ ನಡೆಯಿತು. ಸಭೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ಮುಂದಿನ ಹೋರಾಟಗಳ ರೂಪುರೇಷೆ ಕುರಿತು ವಿವರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ವಿವಿಧ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಸಂಯುಕ್ತ ಹೋರಾಟ ಕರ್ನಾಟಕ ಪ್ರಮುಖ ಮುಖಂಡರುಗಳಾದ ನೂರ್ ಶ್ರೀಧರ್, ಹೆಚ್.ವಿ.ದಿವಾಕರ್, ಪಿ.ಆರ್.ಎಸ್ ಮಣಿ, ಎಸ್.ಆರ್.ಹಿರೇಮಠ್, ದೇವಿ, ಕೆ.ವಿ.ಭಟ್, ಟಿ.ಯಶವಂತ, ರವಿಕಿರಣ್ ಪೂಣಚ್ಚ, ಪಿ.ಗೋಪಾಲ್, ಭಕ್ತರಹಳ್ಳಿ ಭೈರೇಗೌಡ ಮುಂತಾದವರು ಭಾಗವಹಿಸಿದ್ದರು.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ನ ರಾಷ್ಟ್ರೀಯ ನಾಯಕಿ ಕವಿತಾ ಕುರುಗುಂಟಿ ಸಭೆಯಲ್ಲಿ ಉಪಸ್ಥಿತಿ ಇದ್ದು ರಾಷ್ಟ್ರೀಯ ಮಟ್ಟದ ಚಳುವಳಿಯ ರೂಪುರೇಷೆಗಳ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡರು.