ನೋಟು ರದ್ದತಿಗೆ ಐದು ವರ್ಷ: ಸಾಧಿಸಿದ್ದು ಮಾತ್ರ ಲಕ್ಷ ಲಕ್ಷ ಉದ್ಯೋಗ ನಷ್ಟ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಇಂದಿಗೆ (ನವೆಂಬರ್ 8ಕ್ಕೆ) ಐದು ವರ್ಷ ತುಂಬಿದೆ. ನೋಟು ರದ್ದತಿಯು ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಪ್ರಧಾನಿ ಹೇಳಿದರು. ನಕಲಿ ನೋಟುಗಳ ಹಾವಳಿ ವ್ಯಾಪಕವಾಗಿದೆಯೆಂಬ ನೆಪವೊಡ್ಡಿ ನೋಟು ರದ್ದತಿ ಮಾಡಿದರೂ ಶೇ. 99.9ರಷ್ಟು ನೋಟುಗಳು ವಾಪಸ್ ಬಂದಿದ್ದವು.

ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದಿಢೀರ್ ನೋಟು ರದ್ದುಗೊಳಿಸುವುದಾಗಿ ಘೋಷಿಸಿದರು. ತತ್ತಕ್ಷಣದಿಂದಲೇ 1000 ಮತ್ತು 500 ರೂಪಾಯಿ ಚಲಾವಣೆಗೊಳ್ಳದ ಕೇವಲ ಕಾಗದವಾಗಿಬಿಟ್ಟಿತು. ಇದರಿಂದ ದೇಶದ ಜನತೆಗೆ ಎದುರಾದ ಸಂಕಷ್ಟಗಳಿಗೆ ಕೊನೆ ಇಲ್ಲದಂತೆ ಇಂದಿಗೂ ಅದರ ಹೊಡೆತವನ್ನು ಅನುಭವಿಸುತ್ತಿದ್ದಾರೆ.

ಕಪ್ಪುಹಣ ತಡೆ, ಭಯೋತ್ಪಾದಕರಿಗೆ ನೆರವು ನೀಡುವುದನ್ನು ನಿಯಂತ್ರಿಸುವುದು ಮತ್ತು ನಕಲಿ ನೋಟುಗಳ ಹಾವಳಿ ತಡೆಯುವುದು ನೋಟು ಅಮಾನ್ಯೀಕರಣದ ಉದ್ದೇಶವೆಂದು ಹೇಳಲಾಗಿತ್ತು. ಆದರೆ, ನೋಟು ರದ್ದತಿಯಿಂದ ಕಪ್ಪುಹಣಕ್ಕೆ ಕಡಿವಾಣವೂ ಬೀಳಲಿಲ್ಲ, ನಕಲಿ ನೋಟುಗಳ ಚಲಾವಣೆಯೂ ಕಡಿಮೆಯಾಗಲಿಲ್ಲ.

ಅಲ್ಲದೆ, ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ನೋಟು ಬದಲಾವಣೆಗಾಗಿ ಹಲವು ದಿನಗಳು ಅಲೆಯುವ ಪರಿಸ್ಥಿತಿಯು ಎದುರಾಯಿತು. ಹಾಗೆಯೇ ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಬಡಜನತೆ  ಅಸಹಾಯಕತೆಯಿಂದ ಕಂಗಾಲಾಗಿದ್ದರು. ನೋಟು ರದ್ದತಿ ಆದ ಒಂದು ವರ್ಷದ ಅವಧಿಯಲ್ಲೇ ಒಂದು ಅಧ್ಯಯನದ ಪ್ರಕಾರ ಬರೋಬ್ಬರಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಕಳವಳಕಾರಿಯನ್ನುಂಟು ಮಾಡಿತು.

ನಿಷೇಧಗೊಂಡಿದ್ದ ನೋಟುಗಳು ಆರ್‌ಬಿಐಗೆ ಮರಳಿದ್ದವು. ನೋಟು ನಿಷೇಧ ಕ್ರಮ ಸಂಪೂರ್ಣ ವಿಫಲವಾಗಿದೆ ಎಂದು ನೋಟು ಅಮಾನ್ಯೀಕರಣಗೊಂಡ ಕೆಲವೇ ದಿನಗಳಲ್ಲಿ ವಿತ್ತ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆಫೀಸ್‌ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ 2017-18ರ ಉದ್ಯೋಗವಕಾಶಗಳ ಸಮೀಕ್ಷೆಯಲ್ಲಿ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅಧಿಕ ಎಂದು ಬಹಿರಂಗಗೊಂಡಿದ್ದವು.

ನೋಟು ಅಮಾನ್ಯೀಕರಣಗೊಂಡ ಮರುದಿನದಿಂದಲೇ ದೇಶದ ಬ್ಯಾಂಕುಗಳ ಮುಂದೆಯೂ ಸರತಿ ಸಾಲುಗಳಲ್ಲಿ ವೃದ್ಧರು ಮಹಿಳೆಯರು ಬಿಸಿಲನ್ನು ಲೆಕ್ಕಿಸದೆ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ನೋಟು ರದ್ದತಿಯ ವಿಷಯ ತಿಳಿಯುತ್ತಿದ್ದಂತೆ ಆಘಾತಗೊಳಲಾಗದ ಹಲವಾರು ಮಂದಿ ಮೃತಪಟ್ಟರು. ಸರದಿ ಸಾಲಿನಲ್ಲಿ ನಿಂತಿದ್ದವರಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ದೇಶದ ಹಲವು ಭಾಗಗಳಲ್ಲಿ ಪ್ರತಿಪಕ್ಷಗಳು ಸಹ ಪ್ರತಿರೋಧ ವ್ಯಕ್ತಪಡಿಸಿದವು. ನೋಟು ಅಮಾನ್ಯೀಕರಣ ದೊಡ್ಡ ಹಗರಣ ಎಂದು ಪ್ರತಿಭಟನೆಗಳ ನಡೆದವು.

ನೋಟು ಅಮಾನ್ಯೀಕರಣದ ನಂತರದಲ್ಲಿ ಡಿಜಿಟಲ್‌ ಪಾವತಿ ವ್ಯವಹಾರ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಡಿಜಿಟಲ್‌ ಪಾವತಿಗಿಂತ ನಗದು ರೂಪದಲ್ಲಿಯೇ  ಮಾಡಲು ಇಚ್ಛಿಸುತ್ತಿದ್ದಾರೆಂಬ ಅಂಶವನ್ನು ಇಂಡಿಯನ್‌ ಎಕ್ಸ್‌‌ಪ್ರೆಸ್ .ಕಾಂ ವರದಿ ಮಾಡಿದೆ.

ನವೆಂಬರ್ 8, 2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಸಂದರ್ಭದ ಹೊತ್ತಿಗೆ ಜನರ ಬಳಿಯಿದ್ದ ನಗದು ರೂ 17.97 ಲಕ್ಷ ಕೋಟಿಯಾಗಿದ್ದರೆ ಜನವರಿ 2017ರಲ್ಲಿ ಈ ಪ್ರಮಾಣ ಶೇ 7.8 ಲಕ್ಷ ಕೋಟಿಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಜನರು ನಗದು ರೂಪದಲ್ಲಿಯೇ ವ್ಯವಹಾರಿಸಲು ಆದ್ಯತೆ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ಜನರ ಕೈಯ್ಯಲ್ಲಿ  ನಗದು ಪ್ರಮಾಣ ಏರಿಕೆಯಾಗುತ್ತಲೇ ಇದೆ.

ಅಕ್ಟೋಬರ್ 8, 2021ರಲ್ಲಿದ್ದಂತೆ ದೇಶದಲ್ಲಿ ನಗದು ಪ್ರಮಾಣ ಗರಿಷ್ಠ ರೂ 28.30 ಕೋಟಿಯಾಗಿದೆ ಇದು ನವೆಂಬರ್ 4, 2016ರಲ್ಲಿದ್ದ ರೂ 17.97 ಲಕ್ಷಕ್ಕಿಂತ ಶೇ 57.48ರಷ್ಟು ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿಯಂತೆ ಅಕ್ಟೋಬರ್ 23, 2020ರಲ್ಲಿದ್ದಂತೆ  ಅದು ಕೂಡ ದೀಪಾವಳಿಯ ಮುನ್ನ ಜನರ ಕೈಯ್ಯಲ್ಲಿದ್ದ ನಗದು ರೂ 15,582 ಕೋಟಿಯಷ್ಟು  ಹೆಚ್ಚಾಗಿದೆ  ಅಥವಾ ವರ್ಷಕ್ಕೆ ಶೇ 8.5ರಷ್ಟು  ಅಥವಾ ರೂ 2.21 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ ಎಂದು ವರದಿ ಉಲ್ಲೇಖಿಸಿದೆ.

2016ರ ನೋಟು ಅಮಾನ್ಯೀಕರಣಗೊಂಡ ಮರು ವರ್ಷವೇ ಅಂದರೆ, 2017ರ ಜುಲೈ 1ರಿಂದ ಜಾರಿಗೊಂಡ ಜಿಎಸ್‌ಟಿಯಿಂದಾಗಿ ದೇಶದ ಅರ್ಥವ್ಯವಸ್ಥೆ ಮೇಲೆ ಗಂಭೀರ ಪರಿಣಾಮವನ್ನು ಬೀರಿದವು. ಪ್ರಮುಖವಾಗಿ ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಸ್ಥರು, ಸ್ವ-ಉದ್ಯೋಗಿಗಳು, ರೈತರು, ಕಾರ್ಮಿಕರ ಜೀವನ ಸ್ಥಿತಿ ಇಂದಿಗೂ ಸುಧಾರಣೆಗೊಂಡಿಲ್ಲ. ಕಳೆದ ವರ್ಷ ಆರಂಭದಿಂದ ಕೋವಿಡ್‌ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರಗಳು ಅನುಸರಿಸಿದ ನೀತಿಗಳು ಸಹ ಜನರ ಮೇಲೆ ದುಷ್ಪರಿಣಾಮ ಬೀರಿದ್ದು, ಇಂದಿಗೂ ಸಹ ಸಾಕಷ್ಟು ಸಂಕಷ್ಟಗಳಿಗೆ ಗುರಿಯಾಗಿದ್ದಾರೆ.

ಮಹಮ್ಮದ್ ಶರೀಫ್ ಕಾಡುಮಠ ಅವರು ನೋಟು ಅಮಾನ್ಯೀಕರಣಗೊಂಡ ಒಂದು ವರ್ಷ ತರುವಾಯ ತಮ್ಮ ಲೇಖನವೊಂದರಲ್ಲಿ ಹೀಗೆ ಬರೆದಿದ್ದರು ʻʻಹೇಳಲೇಬೇಕಾದ ಒಂದು ಸಂಗತಿಯೆಂದರೆ, ನೋಟು ರದ್ದಾದ ಸಂದರ್ಭ ಮೋದಿ ಭಕ್ತರೆಲ್ಲ ಅದನ್ನು ಹೇಗೆಲ್ಲಾ ಮಾಡಿ ಸಮರ್ಥಿಸಲು ಪ್ರಯತ್ನಿಸಿದರು. ಎಷ್ಟೇ ಟೀಕಿಸಿದರೂ ಅವರು ಮಾತ್ರ ಸಮರ್ಥನೆಯಲ್ಲೇ ಕಾಲ ಕಳೆದರು. ಕೆಂಡದಂತಹ ಜ್ವರ ಬರುತ್ತಿದ್ದರೂ, ‘ಇಲ್ಲ ನನಗೆ ಜ್ವರವೇ ಬರಲಿಲ್ಲ’ ಎಂದು ಹೇಳುತ್ತಾ ಕೂತರೆ ಮುಂದೊಂದು ದಿನ ಅದು ಗಂಭೀರ ರೋಗವಾಗಿ ಉಲ್ಬಣಿಸದೆ ಇರುತ್ತದೆಯೇ. ನೋಟು ರದ್ದತಿ ವಿಚಾರದಲ್ಲೂ ಆಗಿದ್ದು ಇದೇ. ಅಂದು, ಭಾರತ ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದು ಕುಣಿದು, ಕುಪ್ಪಳಿಸಿ, ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸಿದವರೆಲ್ಲ ಇಂದು ತಮ್ಮ ಮನೆಯ ಅಟ್ಟ ಹುಡುಕುತ್ತಿದ್ದಾರೆ.ʼʼ

Donate Janashakthi Media

Leave a Reply

Your email address will not be published. Required fields are marked *