ನೋಟುರದ್ಧತಿಗೆ ಸವಾಲು ಹಾಕಿದ ಅರ್ಜಿಗಳ ವಿಚಾರಣೆಯ ವೇಳೆಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯ ಪೀಠದ ಕೇಳಿಕೆಯಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐ (ಭಾರತೀಯ ರಿಝರ್ವ್ ಬ್ಯಾಂಕ್)ಸಲ್ಲಿಸಿರುವ ಅಫಿಡವಿಟ್(ಶಪಥಪತ್ರ)ಗಳಲ್ಲಿ ಹೇಳಿರುವುದಕ್ಕಿಂತ ಹೇಳದಿರುವ ಸಂಗತಿಗಳೇ ಮಹತ್ವದ್ದಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಕುರಿತು ವಿಚಾರಣೆಗಳು ಮುಗಿದಿದ್ದು, ಜನವರಿ 2ರಂದು ತೀರ್ಪು ಬರುವ ನಿರೀಕ್ಷೆಯಿದೆ.
ಸರಕಾರದ ಅಫಿಡವಿಟ್‌ನಲ್ಲಿ ಅದು ಚೆನ್ನಾಗಿ ಪರಿಶೀಲಿಸಿ ಕೈಗೊಂಡ ಕ್ರಮ, ಅದನ್ನು ಕೈಗೊಳ್ಳುವ 9 ತಿಂಗಳ ಮೊದಲಿಂದಲೇ ಆರ್‌ಬಿಐ ನೊಂದಿಗೆ ಈ ಕುರಿತು ಸಮಾಲೋಚನೆಗಳು ಆರಂಭವಾಗಿದ್ದವು ಎಂದಿದ್ದರೆ, ಆರ್‌ಬಿಐ ನ ಅಫಿಡವಿಟ್‌ನಲ್ಲಿ ಈ ಕ್ರಮದಲ್ಲಿ ಅಗತ್ಯ ವಿಧಿ-ವಿಧಾನಗಳನ್ನು ಅನುಸರಿಸಲಾಗಿದೆ, ತಾನೇ ಇದನ್ನು ಶಿಫಾರಸು ಮಾಡಿದ್ದು ಎಂದು ಹೇಳಿದೆಯಂತೆ.
ಇದನ್ನು ಓದಿ : ನೋಟು ಅಮಾನ್ಯೀಕರಣ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ದಾಖಲೆ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಕರೆನ್ಸಿ ನೋಟುಗಳಿಗೆ ಸಂಬಂಧಪಟ್ಟಂತೆ ಯಾವುದೇ ಕ್ರಮವನ್ನು ರಿಝರ್ವ್ ಬ್ಯಾಂಕಿನ ಶಿಫಾರಸಿನ ಮೇಲೆ ಮಾತ್ರವೇ ಮಾಡಬೇಕು. 2016ರ ನೋಟುರದ್ಧತಿಯಲ್ಲಿ ಇದನ್ನು ಅನುಸರಿಸಲಾಗಿಲ್ಲ ಎಂಬ ಟೀಕಾಕಾರರ ವಾದವನ್ನು ಈ ಎರಡೂ ಅಫಿಡವಿಟ್‌ಗಳು ಮೇಲ್ನೊಟಕ್ಕೆ ತಳ್ಳಿ ಹಾಕುತ್ತವೆ. ಆದರೆ ಪ್ರಧಾನ ಮಂತ್ರಿಗಳು ಈ ಕ್ರಮದ ಪ್ರಕಟಣೆ ಮಾಡುವ ಕೇವಲ ಎರಡೂವರೆ ಗಂಟೆಗಳ ಮೊದಲಷ್ಟೇ ನಡೆದ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಸಭೆ ಅದರ ಶಿಫಾರಸು ಮಾಡುವ ಮೊದಲು ಕೇಂದ್ರ ಸರಕಾರ ಇದಕ್ಕೆ ನೀಡಿದ್ದ ಸಮರ್ಥನೆಗಳಲ್ಲಿ ಕನಿಷ್ಟ 4 ಅಂಶಗಳನ್ನು ಒಪ್ಪಿರಲಿಲ್ಲ, ಮತ್ತು ಈ ಅಂಶವನ್ನು ಈ ಎರಡೂ ಅಫಿಡವಿಟ್‌ಗಳಲ್ಲಿ ಸುಪ್ರಿಂ ಕೋರ್ಟಿಗೆ ತಿಳಿಸಲಾಗಿಲ್ಲ ಎಂದು ತಿಳಿದು ಬಂದಿದೆ. (ಉದಿತ್ ಶರ್ಮ, ಇಂಡಿಯನ್ ಎಕ್ಸ್ ಪ್ರೆಸ್, ಡಿಸೆಂಬರ್27)
ಅದ್ಭುತ ಎಡಿಟಿಂಗ್ -ನಗದು ಬಹುಮಾನ ಅಥವ
ಅದಕ್ಕಿಂತಲೂ ಹೆಚ್ಚಾಗಿ ಚಿನ್ನದ ಪದಕ ಸಲ್ಲಬೇಕು
ಸರಕಾರ ಮತ್ತು ಆರ್‌ಬಿಐನ ಅಫಿಡವಿಟ್‌ಗಳು
ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್
* ಜಿಡಿಪಿಯ ಅನುಪಾತವಾಗಿ ಚಲಾವಣೆಯಲ್ಲಿರುವ ಕರೆನ್ಸಿಯ ಪ್ರಮಾಣ ಭಾರತದಲ್ಲಿ ಬಹಳ ಹೆಚ್ಚಾಗಿದ್ದು. ಇದು ನೇರವಾಗಿ ಭ್ರಷ್ಟಾಚಾರದ ಮಟ್ಟಕ್ಕೆ ತಳುಕು ಹಾಕಿಕೊಂಡಿರುವುದರಿಂದ ಅದನ್ನು ಕಡಿಮೆ ಮಾಡಬೇಕಾಗಿದೆ ಎಂಬುದು ಈ ಕ್ರಮಕ್ಕೆ ಸರಕಾರದ ಒಂದು ಸಮರ್ಥನೆ. ಆದರೆ ನೋಟು ರದ್ಧತಿಯ ಮೂರೇ ವರ್ಷಗಳಲ್ಲಿ ಈ ಪ್ರಮಾಣ ಮೊದಲಿದ್ದ 12%ಕ್ಕೆ ಬಂತು, ನಂತರ ಇನ್ನೂ ಹೆಚ್ಚಿ 2020-21ರಲ್ಲಿ 13.7% ತಲುಪಿದೆ, ಎಂಬ ಆರ್‌ಬಿಐ ವರದಿಯ ಮಾಹಿತಿ ಅಫಿಡವಿಟ್‌ಗಳಲ್ಲಿ ಇಲ್ಲ.
* 500 ರೂ. ಮತ್ತು 1000ರೂ. ನೋಟುಗಳ ಪ್ರಮಾಣ ತೀವ್ರವಾಗಿ ಹೆಚ್ಚಿದೆ ಎಂಬುದನ್ನು ಆರ್‌ಬಿಐ ಪೂರ್ಣವಾಗಿ ಒಪ್ಪಿರಲಿಲ್ಲ.
* ಖೋಟಾ ನೋಟುಗಳ ಪ್ರಮಾಣ ಪ್ರತಿಕೂಲ ಪರಿಣಾಮ ಬೀರಿದೆ ಎಂಬ ಸರಕಾರದ ವಾದವನ್ನು ಕೂಡ ರಿಝರ್ವ್ ಬ್ಯಾಂಕ್ ಒಪ್ಪಿರಲಿಲ್ಲ. ಖೋಟಾ ನೋಟುಗಳ ಪ್ರಮಾಣ ಗಮನಾರ್ಹವಾಗಿಯೇನೂ ಇಲ್ಲ ಎಂದು ಅದು ಹೇಳಿತ್ತು.
ಇದನ್ನು ಓದಿ: ನೋಟು ಅಮಾನ್ಯೀಕರಣ ಕರಾಳ ದಿನದ ಆರನೇ ವಾರ್ಷಿಕ
* 500ರೂ. ಮತ್ತು 1000ರೂ. ನೋಟುಗಳನ್ನು ಕಪ್ಪು ಹಣದ ದಾಸ್ತಾನಿಗೆ ಬಳಸಲಾಗುತ್ತಿದೆ ಎಂಬ ವಾದವನ್ನಂತೂ ಆರ್‌ಬಿಐ ತಳ್ಳಿ ಹಾಕಿತ್ತು. ಹೆಚ್ಚಿನ ಕಪ್ಪು ಹಣವನ್ನು ರಿಯಲ್ ಎಸ್ಟೇಟ್, ಚಿನ್ನ ಮುಂತಾದವುಗಳಲ್ಲಿ ಇಡಲಾಗುತ್ತದೆ, ಆದ್ದರಿಂದ ನೋಟುರದ್ಧತಿ ಕಪ್ಪು ಹಣದ ಮೇಲೆ ಬೀರುವ ಪ್ರಭಾವ ಬಹಳೇನೂ ಇಲ್ಲ ಎಂದೇ ಅದು ಹೇಳಿತ್ತು.
* 500/1000ರೂ. ನೋಟುಗಳನ್ನು ಭಯೋತ್ಪಾದನೆಗೆ ಹಣ ಒದಗಿಸಲು ಬಳಸುವ ಪ್ರಶ್ನೆಯ ಉಲ್ಲೇಖ ಬ್ಯಾಂಕಿನ ಕೇಂದ್ರ ಮಂಡಳಿಯ ಸಭೆಯ ಕಲಾಪದಲ್ಲಿ ಇರಲಿಲ್ಲ.
* ರಿಝರ್ವ್ ಬ್ಯಾಂಕ್ ಹೇಗಿದ್ದರೂ ಹೊಸ ಕರೆನ್ಸಿಗಳನ್ನು ಚಲಾವಣೆಗೆ ತರುವ ಬಗ್ಗೆ ಯೋಚಿಸುತ್ತಿತ್ತು, ಆದ್ದರಿಂದ ನೋಟುರದ್ಧತಿಯ ಕ್ರಮಕ್ಕೆ ಇದು ತಕ್ಕ ಸಮಯ ಎಂದೂ ತಾನು ಬ್ಯಾಂಕ್ ಕೇಂದ್ರೀಯ ಮಂಡಳಿಗೆ ಹೇಳಿದುದಾಗಿ ಸರಕಾರದ ಅಫಿಡವಿಟ್ ಹೇಳುತ್ತದಂತೆ. ಆದರೆ ಮಂಡಳಿಯ ಸಭೆಯ ಕಲಾಪಪಟ್ಟಿಯಲ್ಲಿ ಈ ಅಂಶ ಇರಲಿಲ್ಲ. ಅಲ್ಲದೆ, ಅದೂ ಇದು ತಕ್ಕ ಸಮಯ ಎಂದು ಭಾವಿಸಿದ್ದರೆ, ನೋಟುರದ್ಧತಿಯ ನಂತರ ಹೊಸ ನೋಟುಗಳನ್ನು ಒದಗಿಸುವಲ್ಲಿ ಅಷ್ಟೊಂದು ಸಮಸ್ಯೆಗಳು ಏಕೆ ಬಂದವು, ಅದು ಎಟಿಎಂಗಳನ್ನು ಇದಕ್ಕೆ ಸಿದ್ಧಪಡಿಸುವ ಕಾರ್ಯಪಡೆಯನ್ನು ರಚಿಸಲು ಒಂದು ವಾರ ತೆಗೆದುಕೊಂಡದ್ದೇಕೆ ಎಂಬುದರ ಉಲ್ಲೇಖ ಅಫಿಡವಿಟ್‌ನಲ್ಲಿಲ್ಲ. ಈ ಬಗ್ಗೆ ಕೇಂದ್ರ ಹಣಕಾಸು ಇಲಾಖೆ ಮತ್ತು ರಿಝರ್ವ್ ಬ್ಯಾಂಕ್‌ಗೆ ಕಳಿಸಿದ ಈಮೇಲ್‌ಗಳಿಗೆ ಸ್ಪಂದನ ಸಿಕ್ಕಿಲ್ಲ ಎಂದೂ ಇಂಡಿಯನ್ ಎಕ್ಸ್ ಪ್ರೆಸ್‍ನ ಈ ಕುರಿತ ವರದಿಯಲ್ಲಿ ಹೇಳಲಾಗಿದೆ.
“ಸದ್ಯಕ್ಕೆ ಕಾರ್ಯಸಾಧ್ಯವಲ್ಲ” ಎಂದಿದ್ದ ಆರ್‌ಬಿಐ
ಗಮನಾರ್ಹ ಸಂಗತಿಯೆಂದರೆ, ಆ ಸಮಯದಲ್ಲೇ (ಮಾರ್ಚ್ 2016ರಲ್ಲಿ) ಆರ್‌ಬಿಐನ ಶಿಫಾರಸು ನೋಟುರದ್ಧತಿಗೆ ಸುಮಾರಾಗಿ ಸರಕಾರ ಕೊಟ್ಟ ಕಾರಣಗಳನ್ನೇ ಪಟ್ಟಿ ಮಾಡಿ ಭೂಕಬಳಿಕೆಯ ಅಧ್ಯಯನ ಮಾಡಿದ ಕರ್ನಾಟಕದ ಸದನ ಸಮಿತಿಯ ಅಧ್ಯಕ್ಷ ಎ ಟಿ ರಾಮಸ್ವಾಮಿ ಪ್ರಧಾನ ಮತ್ರಿಗಳು, ಆಗಿನ ಹಣಕಾಸು ಮಂತ್ರಿಗಳು ಮತ್ತು ಆರ್‌ಬಿಐಗೆ ಪತ್ರ ಬರೆದಿದ್ದರಂತೆ. ಅದರಲ್ಲಿ ಕಪ್ಪು ಹಣದ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತ 500/1000ರೂ. ನೋಟುಗಳ ರದ್ಧತಿಯ ಬಗ್ಗೆಯೂ ಸೂಚಿಸಲಾಗಿತ್ತಂತೆ.
ಇದನ್ನು ಓದಿ: ಮಕ್ಕಳ ಟಿವಿ ಕಾರ್ಯಕ್ರಮದಲ್ಲಿ ನೋಟು ಅಮಾಣ್ಯೀಕರಣದ ಬಗ್ಗೆ ವಿಡಂಬನೆ; ಖಾಸಗಿ ವಾಹಿನಿಗೆ ಕೇಂದ್ರದಿಂದ ಪತ್ರ
ಇದಕ್ಕೆ ಪ್ರಧಾನಿಗಳ ಕಚೇರಿಯಿಂದಾಗಲೀ, ಹಣಕಾಸು ಇಲಾಖೆಯಿಂದಾಗಲೀ ಉತ್ತರ ಬಂದಿರಲಿಲ್ಲ. ಆದರೆ ಆರ್‌ಬಿಐ ಮಾರ್ಚ್ 15, 2016ರಂದು ಬರೆದ ಪತ್ರದಲ್ಲಿ ಈ ನೋಟುಗಳು ಚಲಾವಣೆಯಲ್ಲಿರುವ ನೋಟುಗಳ 85% ದಷ್ಟು ಮೌಲ್ಯವನ್ನು ಹೊಂದಿದ್ದು, ಸಾರ್ವಜನಿಕರ ನೈಜ ಅಗತ್ಯಗಳನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ, ಆದ್ದರಿಂದ ಇವನ್ನು ಹಿಂದಕ್ಕೆ ತೆಗೆದುಕೊಳ್ಳುವುದು “ಸದ್ಯಕ್ಕೆ ಕಾರ್ಯಸಾಧ್ಯವಲ್ಲ” ಎಂದಿತ್ತು. ( ದಿ ವೈರ್, ಡಿ.30., 2022) ಆ ‘ಸದ್ಯ’ದ ಸಮಯ ನವಂಬರ್ 2016ರಲ್ಲಿ ಬಂದಂತೆ ಕಾಣುತ್ತದೆ.
“ಮಬ್ಬುಗೊಳಿಸುವ ಅಫಿಡವಿಟ್”
ನಿಜವಾಗಿ ಹೇಳಬೇಕೆಂದರೆ, ರಿಝರ್ವ್ ಬ್ಯಾಂಕಿನ ಅಫಿಡವಿಟ್ ವಿಷಯವನ್ನು ಮಬ್ಬುಗೊಳಿಸುತ್ತದೆ ಎನ್ನುತ್ತಾರೆ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಅರುಣ್ ಕುಮಾರ್. ಸರಕಾರ ತನ್ನ ಅಫಿಡವಿಟ್‌ನಲ್ಲಿ ಹೇಳಿರುವ 8-9 ತಿಂಗಳಲ್ಲಿ ಬಹುಪಾಲು ಡಾ. ರಘುರಾಮ ರಾಜನ್ ಬ್ಯಾಂಕಿನ ಗವರ್ನರ್ ಆಗಿದ್ದರು, ಅವರು ತಾನು ಈ ಸಲಹೆ ನೀಡಿದುದಾಗಿ ಎಲ್ಲೂ ದಾಖಲಿಸಿಲ್ಲ. ವಾಸ್ತವವಾಗಿ, ಅವರು ಅದನ್ನು ತಿರಸ್ಕರಿಸಿದ್ದರು ಎಂದೂ ಹೇಳಲಾಗುತ್ತಿದೆ. ನಂತರ ಆ ಸ್ಥಾನಕ್ಕೆ ಬಂದ ಡಾ.ಉರ್ಜಿತ್ ಪಟೇಲ್ ಕೂಡ ಇದರ ಪರವಾಗಿರಲಿಲ್ಲ ಎಂದು ಹೇಳಲಾಗಿದೆ. ಅಂದರೆ ಸರಕಾರ ಹೇಳಿರುವಂತೆ ಸಮಾಲೋಚನೆ ನಡೆದಿದ್ದರೂ, ರಿಝರ್ವ್ ಬ್ಯಾಂಕಿನ ಸಮ್ಮತಿ ಇರಲಿಲ್ಲ ಎಂದೇ ಊಹಿಸಬೇಕಾಗುತ್ತದೆ ಎಂದು ಪ್ರೊ. ಅರುಣ್ ಕುಮಾರ್ ಹೇಳುತ್ತಾರೆ. ರಿಝರ್ವ್ ಬ್ಯಾಂಕ್ ಬಡ್ಡಿದರದ ವಿಷಯ ಚರ್ಚಿಸಲೂ ಎರಡು ದಿನ ತೆಗೆದುಕೊಳ್ಳುತ್ತದೆ. ಹಾಗಿರುವಾಗ, ನೋಟುರದ್ಧತಿಯಂತಹ ಗಂಭಿರ ವಿಷಯದ ಬಗ್ಗೆ ಶಿಫಾರಸಿನ ನಿರ್ಣಯ ನಿಮಿಷಗಳಲ್ಲಿ ಸಾಧ್ಯವೇ ಎಂದು ಅವರು ಪ್ರಶ್ನಿಸುವ ಅವರು, ಸರಕಾರ ಶಿಫಾರಸು ಕೊಡಬೇಕು ಎಂದು ಆಗ್ರಹಿಸಿದ್ದರೆ, ಆಗ ಮಾತ್ರ ಅದಕ್ಕೆ ಕೆಲವೇ ನಿಮಿಷಗಳು ಸಾಕು ಎನ್ನುತ್ತಾರೆ. ಈ ಸಭೆಯಲ್ಲಿ ಮಂಡಳಿಯ ಎಲ್ಲ ಸದಸ್ಯರೂ ಭಾಗವಹಿಸಿರಲಿಲ್ಲ ಎಂಬ ವರದಿಗಳೂ ಇವೆ ಎಂದೂ ಅವರು ಹೇಳುತ್ತಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಆದ್ದರಿಂದ ಇದು ಸರಕಾರದ ಮುತುವರ್ಜಿಯಿಂದ ನಡೆದ ಕಾರ್ಯಾಚರಣೆ, ಆರ್‌ಬಿಐ ನ ಮುತುವರ್ಜಿಯಿಂದ ಅಲ್ಲ. ನಿಜ, ರಿಝರ್ವ್ ಬ್ಯಾಂಕಿನ ಅಫಿಡವಿಟ್ ತನ್ನ ಶಿಫಾರಸಿನಿಂದ ಈ ಕ್ರಮ ಕೈಗೊಳ್ಳಲಾಗಿತ್ತು ಎನ್ನುತ್ತದೆ, ಏಕೆಂದರೆ ಅದು ಆರ್‌ಬಿಐ ನ ಕೇಂದ್ರೀಯ ಮಂಡಳಿಯಂತೆಯೇ, ಸರಕಾರದ ನಿರ್ದೇಶನವನ್ನು ಪಾಲಿಸದಿರುವುದೂ ಸಾಧ್ಯವಿಲ್ಲವಲ್ಲ ಎನ್ನುತ್ತಾರೆ ಪ್ರೊ. ಅರುಣ್ ಕುಮಾರ್.
ಈ ಮೂಲಕ, ಈಗ ನೋಟುರದ್ದತಿ ವಿಫಲವಾಗಿದ್ದರೆ ಅದಕ್ಕೆ ಈಗ ರಿಝರ್ವ್ ಬ್ಯಾಂಕ್ ಹೊಣೆಯಾಗುತ್ತದೆ, ಸರಕಾರವಲ್ಲ!
“ಅಪರಾಧಕ್ಕೆ ಉತ್ತರದಾಯಿಯಾಗಬೇಕು”
ಸುಪ್ರಿಂ ಕೋರ್ಟಿನಿಂದ ನಿಜಸಂಗತಿಗಳನ್ನು ಮರೆಮಾಚಿದ್ದರೆ, ಅದು ಒಂದು ಅಪರಾಧ ಎಂದು ಈ ಸುದ್ದಿಗೆ ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.
ನೋಟು ರದ್ಧತಿ ಜೀವಗಳನ್ನು, ಜೀವಾಧಾರಗಳನ್ನು ಧ್ವಂಸ ಮಾಡಿತು. ನಮ್ಮ ಅರ್ಥವ್ಯವಸ್ಥೆ ಅದರಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ತಮ್ಮದೇ ಹಣ ಪಡೆಯಲು ಸಾಲಿನಲ್ಲಿ ನಿಂತ ನೂರಕ್ಕೂ ಹೆಚ್ಚು ಜನ ಪ್ರಾಣ ಕಳಕೊಂಡಿದ್ದಾರೆ. ಬಿಜೆಪಿಸರಕಾರ ಹಲವಾರು ನಿರ್ಣಯಗಳಿಗೆ ಇಂತಹುದೇ ನಿರ್ಲಕ್ಷ್ಯದ ದಾರಿ ಬಳಸಿಕೊಂಡಿದೆ. ಇವೆಲ್ಲಕ್ಕೂ ಅದು ಜವಾಬುದಾರನಾಗಬೇಕಿದೆ ಎಂದು ಅವರು ಹೇಳಿದ್ದಾರೆ.