ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಮತ್ತು ನಾಣ್ಯಗಳ ಮೊತ್ತ ಈಗ 30.88 ಲಕ್ಷ ಕೋಟಿ ರೂ. ಇದು ನವಂಬರ್ 8, 2016ರಂದು ಪ್ರಧಾನಿಗಳು ರಾತ್ರಿ 8ಗಂಟೆಗೆ ನೋಟುರದ್ಧತಿಯ ಪ್ರಕಟಣೆ ಮಾಡುವ ವೇಳೆಗೆ ಚಲಾವಣೆಯಲ್ಲಿದ್ದ ಮೊತ್ತಕ್ಕಿಂತ 71.84% ಹೆಚ್ಚು. ಆಗ ಚಲಾವಣೆಯಲ್ಲಿದ್ದ ನಗದಿನ ಒಟ್ಟು ಮೊತ್ತ 17.7 ಲಕ್ಷ ಕೋಟಿ ರೂ. ಇತ್ತು.
ನೋಟುರದ್ಧತಿಯ 6ನೇ ವಾರ್ಷಿಕದಂದು ಎಲ್ಲರ ಗಮನ ಸೆಳೆದಿರುವ ಸುದ್ದಿ ಇದು. 6 ವರ್ಷಗಳ ಹಿಂದೆ ಪ್ರಧಾನಿಗಳು ಇದರ ಉದ್ದೇಶ ಭಾರತವನ್ನು “ಕಡಿಮೆ ನಗದು” ಅರ್ಥವ್ಯವಸ್ಥೆಯಾಗಿ ಮಾಡುವುದು, ಈ ಮೂಲಕ ಕಪ್ಪು ಹಣದ ಮತ್ತು ಖೋಟಾ ನೋಟುಗಳ ಪ್ರಭಾವ ಇಲ್ಲವಾಗುತ್ತದೆ ಎಂದಿದ್ದರು.
ಇದರ ಮರುದಿನವೇ ಬಂದ ಇನ್ನೊಂದು ಸುದ್ದಿ-ಸರಕಾರದ ಈ ಕ್ರಮಕ್ಕೆ ಬಂದ ಸವಾಲುಗಳನ್ನು ಕುರಿತ 50ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಸುಮಾರು 6 ವರ್ಷಗಳ ನಂತರ ಕೈಗೆತ್ತಿಕೊಂಡ ಸುಪ್ರಿಂ ಕೋರ್ಟಿನ ಸಂವಿಧಾನ ಪೀಠ ಈ ಕುರಿತು ಅಫಿಡವಿಟ್‌ನ್ನು ಸಲ್ಲಿಸಬೇಕು ಎಂದು ಅಕ್ಟೋಬರ್ 12ರಂದು ನೀಡಿದ ಆದೇಶವನ್ನು ಸರಕಾರ ಪಾಲಿಸಿಲ್ಲ. ನವಂಬರ್ 9ರಂದು ವಿಚಾರಣೆ ಆರಂಭವಾದಾಗ ಅಟಾರ್ನಿ-ಜನರಲ್ ಅವರು ಕ್ಷಮೆ ಯಾಚಿಸುತ್ತ ಇನ್ನೂ ಒಂದು ವಾರದ ಸಮಯ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸುತ್ತ ಸಂವಿಧಾನ ಪೀಠ “ಸಾಮಾನ್ಯವಾಗಿ, ಇಂತಹ ಒಂದು ಸಂವಿಧಾನ ಪೀಠದ ವಿಚಾರಣೆ ಆರಂಭವಾದ ಮೇಲೆ ಈ ರೀತಿ ಮುಂದೂಡಲ್ಪಡುವುದಿಲ್ಲ. ಇದು ಈ ನ್ಯಾಯಾಲಯಕ್ಕೆ ಬಹಳ ಮುಜುಗರದ ಸಂಗತಿ” ಎಂದು ಟಿಪ್ಪಣಿ ಮಾಡುತ್ತ, ವಿಚಾರಣೆಯನ್ನು ನವಂಬರ್ 24ಕ್ಕೆ ಮುಂದೂಡಿದೆ. -ಅಟಾರ್ನಿ ಜನರಲ್ ತನಗೂ ಇದನ್ನು ಕೇಳಲು ಮುಜುಗರವಾಗುತ್ತಿದೆ ಎಂದರಂತೆ!
. ಒಂದು ದೃಷ್ಟಿಯಲ್ಲಿ ಈ ಎರಡೂ ಸುದ್ದಿಗಳಿಂದ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ, ಪ್ರಧಾನಿಗಳ ಪ್ರಕಟಣೆಯ ಮರುದಿನದಿಂದ ಜನಸಾಮಾನ್ಯರು ಉದ್ದುದ್ದ ಸಾಲುಗಳಲ್ಲಿ ಸಂಕಟ ಪಡುತ್ತಿದ್ದಾಗ, ಪ್ರಾಣಗಳನ್ನೂ ಕಳೆದುಕೊಳ್ಳುತ್ತಿದ್ದಾಗ, ಇದೊಂದು ಕಠಿಣ ಕ್ರಮ, ಆದರೆ ಇದರ ಪ್ರಯೋಜನಗಳನ್ನು ಮನಗಾಣಿಸಲು 50 ದಿನಗಳ ಸಮಯ ಕೊಡಿ ಎಂದ ಪ್ರಧಾನಿಗಳು ಆ ಮೇಲೆ ಇದರ ಬಗ್ಗೆ ಮಾತೇ ಆಡಿಲ್ಲ, ಇದೊಂದು ಸಾಧನೆ ಎಂದು ಭಕ್ತ ವೃಂದದವರೂ ಯಾರೂ ಭಜನೆ ಮಾಡುತ್ತಿಲ್ಲ.
ಅಲ್ಲದೆ ಸುಪ್ರಿಂ ಕೋರ್ಟ್ ಕೊನೆಗೂ ಸುಮಾರು 6 ವರ್ಷಗಳ ನಂತರ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಾಗ, ಇದು ಮುಗಿದುಹೋದ ಕತೆ, ಆದ್ದರಿಂದ ಇದರ ವಿಚಾರಣೆಗಾಗಿ ಸಮಯ ‘ವ್ಯರ್ಥಮಾಡಬಾರದು’ ಎಂದು ಈ ಮೊದಲು ಸರಕಾರ ನ್ಯಾಯಾಲಯವನ್ನು ಆಗ್ರಹಿಸಿತ್ತು ಎಂಬುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು.
ನಗದಿನ ಪ್ರಮಾಣದಲ್ಲಿ ಸುಮಾರು 72% ಏರಿಕೆಯ ಸುದ್ದಿ ಕೇಳಿ ಆಶ್ಚರ್ಯವೇನೂ ಆಗಬೇಕಿಲ್ಲ ಎಂದು ಅರ್ಥಶಾಸ್ತ್ರಜ್ಞರು ಕೂಡ ಹೇಳುತ್ತಾರೆ. ಏಕೆಂದರೆ ಅದು ಖಂಡಿತಾ ಸಾಧ್ಯವೂ ಇರಲಿಲ್ಲ. ಬಹುಶಃ ಅದು ಈ ‘ವೀರಾವೇಶದ’ ಕ್ರಮದ ನಿಜ ಉದ್ದೇಶವೂ ಆಗಿರಲಿಕ್ಕಿಲ್ಲ ಎಂದು ಈಗ ಹಲವರಿಗೆ ಸಂದೇಹವೂ ಬರುತ್ತಿದೆ. ವಿಶೇಷವಾಗಿ ಆಗ ಪರಿಚಯಿಸಿದ್ದ 2000ರೂ. ನೋಟುಗಳನ್ನು ಈಗ ನಿಲ್ಲಿಸಲಾಗುತ್ತದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ.
ಕಪ್ಪು ಹಣ ಮತ್ತು ಖೋಟಾ ನೋಟುಗಳು ವಾಪಾಸು ಬರುವುದಿಲ್ಲ ಎಂಬ ಘೋಷಿತ ನಿರೀಕ್ಷೆ ಸುಳ್ಳೆಂಬುದನ್ನು ಈ ಮೊದಲೇ ರಿಜರ್ವ್ ಬ್ಯಾಂಕ್ 99%ಕ್ಕಿಂತಲೂ ಹೆಚ್ಚಿನ ನೋಟುಗಳು ವಾಪಾಸು ಬಂದವು ಎಂದು ಪ್ರಕಟಿಸಿದಾಗಲೇ ಸ್ಪಷ್ಟವಾಗಿತ್ತು. ಅಂದಿನಿಂದಲೇ ಆಳುವ ಪಕ್ಷದ ಭಕ್ತರು, ಮಡಿಲ ಮಾಧ್ಯಮದ ತುತ್ತೂರಿಗಳು ಈ ಬಗ್ಗೆ ಮಾತಾಡುವುದನ್ನೇ ಬಿಟ್ಟುಬಿಟ್ಟಿದ್ದರು. ಆದರೆ ಇದರಿಂದ ಸಂಕಟಪಟ್ಟ ಜನರು ಈ ದುರಂತದ ವಾರ್ಷಿಕದಂದು ಅದನ್ನು ನೆನಪಿಸಿಕೊಳ್ಳುವದನ್ನು ಬಿಟ್ಟಿಲ್ಲ. ಅರ್ಥಶಾಸ್ತ್ರಜ್ಞರೂ ತಮ್ಮ ಟೀಕೆ ಹೆಚ್ಚೆಚ್ಚು ಸ್ಪಷ್ಟವಾಗಿ ಸಾಬೀತಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ಅತಿ ದೊಡ್ಡ ಹಣಕಾಸು ಮೂರ್ಖತನ–ಪ್ರೊ.ಐಸಾಕ್
ಇದು ಸ್ವತಂತ್ರ ಭಾರತ ಹಿಂದೆಂದೂ ಕಾಣದ ಅತಿ ದೊಡ್ಡ ಹಣಕಾಸು ಮೂರ್ಖತನ ಎಂದು ಸುಮಾರಾಗಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಕೇರಳದ ಹಿಂದಿನ ಎಲ್‌ಡಿಎಫ್ ಸರಕಾರದಲ್ಲಿ ಹಣಕಾಸು ಮಂತ್ರಿಗಳಾಗಿದ್ದ ಪ್ರೊ. ಥಾವiಸ್ ಐಸಾಕ್ ಹೇಳುತ್ತಾರೆ. ಇವರು ಆರು ವರ್ಷಗಳ ಹಿಂದೆ ಈ ಪ್ರಕಟಣೆಯ ರಾತ್ರಿಯೇ ಪತ್ರಿಕಾಗೋಷ್ಠಿಯಲ್ಲಿ ಇದೊಂದು ಹುಚ್ಚು ಕ್ರಮ ಎಂದಿದ್ದರು. ಕಪ್ಪು ಹಣ ಕಡಿಮೆಯಾಗಲಿಲ್ಲ, ಖೋಟಾ ನೋಟುಗಳು ಕಡಿಮೆಯಾಗಲಿಲ್ಲ, ಭಯೋತ್ಪಾದನೆಯೂ ಕಡಿಮೆಯಾಗಿಲ್ಲ. ಬದಲಾಗಿ 2016ರ ನಂತರ ಎಲ್ಲ ಆರ್ಥಿಕ ಸೂಚ್ಯಂಕಗಳು ಕೆಳಮುಖ ಮಾಡಿವೆ. ಆರ್ಥಿಕ ಅಭಿವೃದ್ಧಿ ದರ 8%ದಿಂದ 2018-19ರಲ್ಲಿ 4%ಕ್ಕೆ ಇಳಿಯಿತು. ನಿರುದ್ಯೋಗ 2-3%ದಿಂದ 7.7%ಕ್ಕೆ ಏರಿತು. ಅಧಿಕೃತ ಅಂಕಿ-ಅಂಶಗಳ ಪ್ರಕಾರ 2016ರಿಂದ ಜಾಗತಿಕ ಸೂಚ್ಯಂಕಗಳಲ್ಲಿ ಭಾರತ ಎಲ್ಲ ದೇಶಗಳಿಗಿಂತ ಹಿಂದೆ ಬಿದ್ದಿದೆ. ದೇಶದ ಅರ್ಥವ್ಯವಸ್ಥೆಗೆ ಇಂತಹ ಅಗಾಧ ನಷ್ಟಗಳ ನಂತರವೂ ಪ್ರಧಾನಿಗಳು ಏನೂ ಆಗಿಲ್ಲ ಎಂಬಂತೆ ಹೊಸ ವೀರಾವೇಶದ ಮಾತುಗಳನ್ನಾಡುತ್ತ ಅಡ್ಡಾಡುತ್ತಿದ್ದಾರೆ ಎಂದು ಪ್ರೊ. ಐಸಾಕ್ ಖೇದ ವ್ಯಕ್ತಪಡಿಸಿದ್ದಾರೆ.
ತಿಳಿಗೇಡಿತನದ ಪರಮಾವಧಿ–ಪ್ರೊ.ಪಟ್ನಾಯಕ್
ಇನ್ನೊಬ್ಬ ಹಿರಿಯ ಅರ್ಥಶಾಸ್ತçಜ್ಞ ಪ್ರೊ.ಪ್ರಭಾತ್ ಪಟ್ನಾಯಕ್ ಕೂಡ ಸ್ವಾತಂತ್ರ್ಯಾನಂತರದ ಭಾರತದ ಚರಿತ್ರೆಯಲ್ಲಿ ಯಾವುದೇ ಆರ್ಥಿಕ ಕ್ರಮ ಜನಗಳಿಗೆ ಈ ನೋಟುರದ್ಧತಿಯಷ್ಟು ವಿಧ್ವಂಸಕಾರಿಯಾಗಿರಲಿಲ್ಲ, ಮತ್ತು ತನ್ನ ಘೋಷಿತ ಗುರಿಗಳನ್ನು ತಲುಪುವಲ್ಲಿ ಇಷ್ಟೊಂದು ನಿರರ್ಥಕವಾಗಿರಲಿಲ್ಲ ಎಂದು ವರ್ಣಿಸಿದ್ದಾರೆ. (ನ್ಯೂಸ್‌ಕ್ಲಿಕ್, ನ.8) ಇದರಲ್ಲಿ ಅಚ್ಚರಿ ಪಡುವಂತದ್ದು ಕೂಡ ಏನೂ ಇಲ್ಲ, ಏಕೆಂದರೆ, ಇದೊಂದು ತಿಳಿಗೇಡಿತನದ ಪರಮಾವಧಿ ಎಂಬುದು ಇದನ್ನು ಪ್ರಧಾನಿಗಳು ಪ್ರಕಟಿಸುತ್ತಿದ್ದಾಗಲೇ, ಸರಕಾರದ ಭಟ್ಟಂಗಿಗಳನ್ನು ಬಿಟ್ಟು ಬೇರೆಲ್ಲ ಅರ್ಥಶಾಸ್ತ್ರಜ್ಞರಿಗೂ ಗೊತ್ತಿತ್ತು ಎಂದು ಅವರು ಹೇಳುತ್ತಾರೆ,
ಈ ಪ್ರಕ್ರಿಯೆಯ ಒಟ್ಟು ಫಲಿತಾಂಶವೆಂದರೆ, ಹಳೆಯ ನೋಟುಗಳ ಬದಲು ಹೊಸ ನೋಟುಗಳನ್ನು ಚಲಾವಣೆಗೆ ತಂದದ್ದು, ಅದೂ ಜನಗಳಿಗೆ ಹೇಳತೀರದ ಅನಾನುಕೂಲತೆಯನ್ನು ಸೃಷ್ಟಿಸಿ. ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸಾಲುಗಳಲ್ಲಿ , ಹಲವು ಜೀವಗಳೂ ಬಲಿಯಾದವು.
ಇಂತಹ ಅನಾನುಕೂಲತೆ ಸೃಷ್ಟಿಸಿದ್ದಷ್ಟೇ ಅಲ್ಲ, ನಗದು ಹಣವನ್ನೇ ಬಹಳವಾಗಿ ಆಧರಿಸಿರುವ ರೈತರೂ ಸೇರಿದಂತೆ ಸಣ್ಣಪ್ರಮಾಣದ ಉತ್ಪಾದಕರನ್ನು ಅಥವ ಅನೌಪಚಾರಿಕ ಎನ್ನಲಾಗುವ ವಲಯವನ್ನು ಇದು ಸಂಪೂರ್ಣ ಜರ್ಝರಿತಗೊಳಿಸಿತು. ಅದನ್ನು ಸಾಲಗ್ರಸ್ತಗೊಳಿಸಿತು. ಇದು ಈ ವಲಯದ ಮೇಲೆ ಶಾಶ್ವತ ಹೊರೆಯನ್ನು ಬಿಟ್ಟು ಹೋಗಿದೆ. ದೇಶದಲ್ಲಿನ ಉದ್ಯೋಗಾವಕಾಶಗಳಲ್ಲಿ 94% ಈ ವಲಯದಲ್ಲೇ ಇರುವಂತದ್ದು ಎಂಬುದನ್ನು ಗಮನಿಸಿದರೆ, ಇದು ಎಂತಹ ಅಗಾಧ ಆರ್ಥಿಕ ಅನಾಹುತವನ್ನು ತಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಪ್ರೊ. ಪಟ್ನಾಯಕ್ ಹೇಳುತ್ತಾರೆ. ಅಲ್ಲದೆ ಇದು ನೇರವಾಗಿ ಸಂಘಟಿತ ಅಥವ ಔಪಚಾರಿಕ ವಲಯದ ಮೇಲೂ ಕೆಟ್ಟ ಪರಿಣಾಮ ಬೀರಿದೆ.
ಈ ಅಗಾಧ ದುಷ್ಪರಿಣಾಮಗಳನ್ನು ನೆನಪಿಸಿದ ನಂತರ ಅವರು ಒಂದು ಮಾರ್ಮಿಕ ಪ್ರಶ್ನೆ ಕೇಳುತ್ತಾರೆ- ಯಾರಾದರೂ ಜನಗಳ ಸಂಕಟಗಳ ಬಗ್ಗೆ ನೋಟುರದ್ದತಿಯ ಫರ್ಮಾನು ಹೊರಡಿಸಿದ ಮೋದಿ ಸರಕಾರದಷ್ಟು ನಿರ್ಲಕ್ಷ್ಯದಿಂದಿರಲು ಸಾಧ್ಯವೇ? ಇದಕ್ಕೆ ಉತ್ತರ- “ಆಘಾತ ಮತ್ತು ಬೆರಗು” ಉಂಟುಮಾಡುವ ಅದರ ಬಯಕೆ ಮತ್ತು ಜನರು ಹೆಚ್ಚು ಸಂಕಟ ಪಟ್ಟಷ್ಟು, ಸರಕಾರ ಒಂದು ಉನ್ನತ ಗುರಿಸಾಧನೆಗಾಗಿಯಲ್ಲದೆ ಇಂತಹ ಕಷ್ಟಗಳನ್ನು ಕೊಡುತ್ತಿರಲಿಕ್ಕಿಲ್ಲ ಎಂದು ಜನರಿಗೆ ಖಚಿತ ಭಾವನೆ ಉಂಟಾಗುತ್ತದೆ ಎಂಬ ಅದರ ನಂಬಿಕೆ ಎನ್ನುವ ಪ್ರೊ. ಪಟ್ನಾಯಕ್, ಸರಕಾರದ ಅಜ್ಞಾನ, ಭಂಡತನ ಮತ್ತು “ಆಘಾತ ಮತ್ತು ಬೆರಗು” ಉಂಟುಮಾಡುವ ಬಯಕೆ ಇವುಗಳ ಸಂಯೋಜನೆ ಸಾಕಷ್ಟು ಮಾರಣಾಂತಿಕವಾಗಬಲ್ಲದು ಎಂಬುದನ್ನು ಭಾರತೀಯ ಜನತೆ ಬಹಳ ಬೆಲೆ ತೆತ್ತು ಕಲಿತಿದ್ದಾರೆ ಎಂದು ಖೇದದಿಂದ ಹೇಳುತ್ತಾರೆ.
ಸರಕಾರ–ಪ್ರಚೋದಿತ ಬಿಕ್ಕಟ್ಟು–ಪ್ರೊ. ಅರುಣ್ ಕುಮಾರ್
ನೋಟುರದ್ದತಿ ದೇಶವನ್ನು ಒಂದು ಧೋರಣೆ-ಪ್ರಚೋದಿತ ಬಿಕ್ಕಟ್ಟಿನತ್ತ ಒಯ್ದಿತು, ಇದಕ್ಕೆ ತೆತ್ತ ಮಾನವ ಬೆಲೆ ಅಪಾರ, ಮತ್ತು ಇದು ಬಹಳವಾಗಿ ಬಾಧಿಸಿದ್ದು ಸಮಾಜದ ಅತಿ ದುರ್ಬಲ ವಿಭಾಗಗಳನ್ನೇ. ಇದಕ್ಕೆ ಪ್ರತಿಯಾಗಿ ಸರಕಾರ ಇವರಿಗೆ ಕೊಡುತ್ತಿರುವ ಕೊಡುಗೆಗಳು, ಬಕ್ಷಿಸುಗಳು, ರೆವ್ಡಿಗಳು ಏನೇನೂ ಅಲ್ಲ ಎನ್ನುತ್ತಾರೆ ಮತ್ತೊಬ್ಬ ಅರ್ಥಶಾಸ್ತçಜ್ಞ ಪ್ರೊ. ಅರುಣ್‌ಕುಮಾರ್
ನೋಟುರದ್ಧತಿ ಕಪ್ಪು ಹಣವನ್ನು ನಿರ್ಮೂಲ ಮಾಡಿದೆ ಎಂದಿಟ್ಟುಕೊಂಡರೂ, ಅದಕ್ಕೆ ಅಸಂಘಟಿತ ವಲಯ ತೆರಬೇಕಾಗಿ ಬಂದಿರುವ ಬೆಲೆ ಸಮರ್ಥನೀಯವೇ ಎಂದು ಪ್ರೊ. ಅರುಣ್ ಕುಮಾರ್ ಪ್ರಶ್ನಿಸುತ್ತಾರೆ ? (ದಿ ಲೀಫ್‌ಲೆಟ್, ನ.11).
ಈ ವಲಯದಲ್ಲಿ ಆದಾಯಗಳು ತೆರಿಗೆಮಿತಿಯ ಆದಾಯಗಳಿಗಿಂತ ಬಹಳ ಕೆಳಗಿರುವಾಗ ಇಲ್ಲಿ ಕಪ್ಪು ಹಣ ನಿರ್ಮಾಣ ಸಾಧ್ಯವಿಲ್ಲ. ಹೀಗೆ ಈ ನೋಟುರದ್ಧತಿ ಕಪ್ಪು ಹಣವನ್ನು ನಿರ್ಮಿಸುವಲ್ಲಿ ಏನೇನೂ ಪಾತ್ರವಿರದವರನ್ನು ವಿಪರೀತವಾಗಿ ತಟ್ಟಿದರೆ, ಕಪ್ಪು ಆದಾಯಗಳನ್ನು ಪಡೆಯುವವರಿಗೆ ಪ್ರಯೋಜನ ತಂದಿದೆ. ಅದೇ ರೀತಿಯಲ್ಲಿ, ಕಪ್ಪು ಅರ್ಥವ್ಯವಸ್ಥೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದರೆ, ಪ್ರತಿಪಕ್ಷಗಳವರ ಕಪ್ಪು ಆದಾಯಗಳನ್ನಷ್ಟೇ ಆರಿಸಿ ಗುರಿಯಿಡುವ ಕ್ರಮಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಕಪ್ಪು ಅರ್ಥವ್ಯವಸ್ಥೆಯ ವಿರುದ್ಧ ಹೋರಾಟದ ಈ ಅನಪೇಕ್ಷಿತ ಪರಿಣಾಮಗಳನ್ನು ತಪ್ಪಿಸಬೇಕಾಗಿದೆ ಎಂಬುದು ಕಲಿಯಬೇಕಾದ ಪಾಠ ಎಂದು ಪ್ರೊ. ಅರುಣ್ ಕುಮಾರ್ ಹೇಳುತ್ತಾರೆ.
ಸುಪ್ರಿಂ ಕೋರ್ಟಿನ ”ಮುಜುಗರ”
ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ಕೂಡಲೇ ಸುಪ್ರಿಂ ಕೋರ್ಟಿನ ಮುಂದೆ ಸಲ್ಲಿಸಿದ್ದ ಸುಮಾರು 50 ಅರ್ಜಿಗಳನ್ನು ಸ್ವಲ್ಪದಿನಗಳ ನಂತರ ಕೈಗೆತ್ತಿಕೊಂಡ ಮೂವರು ನ್ಯಾಯಾಧೀಶರ ಪೀಠ ಈ ಕುರಿತು 9 ಪ್ರಶ್ನೆಗಳನ್ನು ರೂಪಿಸಿ ಅವನ್ನು ಡಿಸೆಂಬರ್ 2016ರಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವಹಿಸಿತು. ಈ ಕ್ರಮ ಸಮಾನತೆ, ಬದುಕು ಮತ್ತು ಸ್ವಾತಂತ್ರ್ಯ, ಆಸ್ತಿ, ಹಾಗೂ ವೃತ್ತಿಯನ್ನು ಮತ್ತು ವ್ಯಾಪಾರವನ್ನು ನಡೆಸಿಕೊಂಡು ಹೋಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆಯೇ, 1934ರ ಕಾಯ್ದೆಯ ಅಡಿಯಲ್ಲಿ ನೋಟುರದ್ದತಿಯ ಅಧಿಸೂಚನೆ ಕಾನುನುಬದ್ಧವಾಗಿತ್ತೇ, ಅಲ್ಲದೆ ಇದಕ್ಕೆ ಅಂಗೀಕರಿಸಿದ ವಿಧಾನ ನ್ಯಾಯಬದ್ಧವಾಗಿತ್ತೇ ಇತ್ಯಾದಿ ಪ್ರಶ್ನೆಗಳು ಇದರಲ್ಲಿ ಸೇರಿವೆ.
ಸುಮಾರು ಆರು ವರ್ಷಗಳ ನಂತರ ಈ ಸಂವಿಧಾನ ಪೀಠ ಈ ವರ್ಷದ ಅಕ್ಟೋಬರ್ 12ರಂದು, ಆರಂಭಿಕ ವಿಚಾರಣೆಯಲ್ಲಿ, ಈ ಕ್ರಮದ ಮೂಲಕ ಕಪ್ಪು ಹಣವನ್ನು, ಭಯೋತ್ಪಾದನೆಗೆ ಹಣಕಾಸನ್ನು ಮತ್ತು ಖೋಟಾ ನೋಟುಗಳನ್ನು ತಡೆಯುವ ಘೋಷಿತ ಗುರಿಗಳು ಈಡೇರಿವೆಯೇ ಎಂದು ಒಂದು ಸಮಗ್ರ ಅಫಿಡವಿಟ್ ಸಲ್ಲಿಸಲು ಸರಕಾರಕ್ಕೆ ಹಾಗೂ ರಿಝರ್ವ್ ಬ್ಯಾಂಕಿಗೆ ಸುಪ್ರಿಂ ಕೋರ್ಟ್ ಹೇಳಿತು. ಆದರೆ ಅದನ್ನು ನಿಗದಿತ ಅವಧಿ ಕಳೆದರೂ ಸರಕಾರ ಸಲ್ಲಿಸಿಲ್ಲ.
ಇದು ಮುಗಿದುಹೋದ ಕತೆ, ಆದ್ದರಿಂದ ಈ ವಿಚಾರಣೆಗೆ ಸಮಯ ‘ವ್ಯರ್ಥಮಾಡಬಾರದು’, ಇದೊಂದು ‘ಅಕೆಡೆಮಿಕ್ ಕಸರತ್ತಷ್ಟೇ’ ಆಗುತ್ತದೆ ಎಂದು ಈ ಮೊದಲು ಸರಕಾರ ನ್ಯಾಯಾಲಯಕ್ಕೆ ಆಗ್ರಹಪೂರ್ವಕವಾಗಿ ಬಿನ್ನಹ ಸಲ್ಲಿಸಿದ್ದರೂ ಈ ಸಂವಿಧಾನ ಪೀಠ ಅದನ್ನು ಮನ್ನಿಸಲಿಲ್ಲ. ಇದೊಂದು ಗಂಭೀರ ವಿಷಯ, ಈ ಬಗ್ಗೆ ಕೇಂದ್ರ ಸರಕಾರದಿಂದ ಮತ್ತು ರಿಝರ್ವ್ ಬ್ಯಾಂಕಿನಿಂದ ಇದರಲ್ಲಿ ಅಂಗೀಕರಿಸಿದ ವಿಧಾನದ ಕಾನೂನುಬದ್ಧತೆಯ ಬಗ್ಗೆ ವಿವರವಾದ ಉತ್ತರಗಳು ಬೇಕು ಎಂದಿತು. ಆದ್ದರಿಂದಲೇ ಅದು ಒಂದು ಸಮಗ್ರವಾದ ಅಫಿಡವಿಟ್ ಸಲ್ಲಿಸುವಂತೆ ಹೇಳಿದ್ದು. ಮುಂಬರುವ ಎಲ್ಲ ಸಮಯಕ್ಕೂ ಕಾನೂನನ್ನು ಘೋಷಿಸುವುದು ಒಂದು ಸಂವಿಧಾನ ಪೀಠದ ಪ್ರಧಾನ ಕರ್ತವ್ಯಗಳಲ್ಲಿ ಎಂದ ಪೀಠ ಯಾವುದಾದರೂ ಪ್ರಶ್ನೆಯ ಪರಿಶೀಲನೆಯನ್ನು ವಹಿಸಿಕೊಟ್ಟಾಗ ಅದನ್ನು ಉತ್ತರಿಸುವುದು ಸಂವಿಧಾನ ಪೀಠದ ಕರ್ತವ್ಯ, ಅದು ಈ ಕುರಿತು ಮಾಡುವ ಯಾವುದೇ ಘೋಷಣೆ ಮುಂದಿನ ಪೀಳಿಗೆಗಾಗಿ ಎಂದೂ ಹೇಳಿತ್ತು.
ಪ್ರಧಾನ ಮಂತ್ರಿಗಳು ಈ ಪ್ರಕಟಣೆಯನ್ನು ಮಾಡುವ ಮೊದಲು ನಡೆಸಿದ ವಿಚಾರ-ವಿಮರ್ಶೆಗಳ ಕುರಿತ ಕಡತಗಳನ್ನು, ಅಜೆಂಡಾ ಮತ್ತು ನಿರ್ಣಯಗಳಿಗೆ ಸಂಬಂಧಪಟ್ಟ ದಸ್ತಾವೇಜುಗಳನ್ನು, 2016ರ ನವಂಬರ್ 7ಮತ್ತು 8ರ ನಡುವೆ ಕೇಂದ್ರ ಸರಕಾರ ಹಾಗೂ ರಿಝರ್ವ್ ಬ್ಯಾಂಕ್ ನಡುವಿನ ಪತ್ರವ್ಯವಹಾರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದೂ ಪೀಠ ಅಟಾರ್ನಿ ಜನರಲ್ ಅವರಿಗೆ ಹೇಳಿದೆ.
ಒಟ್ಟಿನಲ್ಲಿ ಇದೊಂದು ಸರ್ಜಿಕಲ್ ಪ್ರಹಾರವಾಗಿರಲಿಲ್ಲ, ನಿರರ್ಥಕ ಕಸರತ್ತು ಆಯಿತು, ಅದನ್ನು ಮರೆತು ಬಿಡಬೇಕು ಎಂದು ಸರಕಾರ ಬಯಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ಆರ್ಥಿಕ ವಿಷಯಗಳಲ್ಲಿ ‘ಲಕ್ಷ್ಮಣ ರೇಖೆ’ಯ ಅರಿವು ತನಗೆ ಇದೆ ಎಂದೂ ಹೇಳಿರುವ ಸಂವಿಧಾನ ಪೀಠ ಈ ಬಗ್ಗೆ ಅಂತಿಮವಾಗಿ ಏನು ಹೇಳಲಿದೆ ಎಂಬುದೂ ಕಾದು ನೋಡಬೇಕಾದ ಸಂಗತಿ. ಏಕೆಂದರೆ ಈ ‘ಲಕ್ಷ್ಮಣ ರೇಖೆ’ ಇದುವರೆಗೆ, ನ್ಯಾಯಾಲಯದ ಕಟು ಮಾತುಗಳ ಹೊರತಾಗಿಯೂ, ಆಳುವ ಸರಕಾರಕ್ಕೇ ಪ್ರಯೋಜನಕಾರಿಯಾದ ಸಂದರ್ಭಗಳೇ ಹೆಚ್ಚು.