ಕೆ. ನಾಗರಾಜ ಶಾನುಭೋಗ್
ಸರಿಯಾಗಿ ಆರು ವರ್ಷಗಳ ಹಿಂದೆ, 8ನೇ ನವೆಂಬರ್ 2016ರಂದು ರಾತ್ರಿ 8 ಗಂಟೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ರೂ.1000 ಮತ್ತು ರೂ 500 ಮುಖ ಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಭಾರತದಲ್ಲಿ, ಆ ಮೂಲಕ ಆ ದಿನದ ಮಧ್ಯರಾತ್ರಿಯಿಂದ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ 86% ನ್ನು ನಿಷೇಧಿಸಲಾಯಿತು.
ಲಕ್ಷಾಂತರ ಕುಟುಂಬಗಳು ಹಣವಿಲ್ಲದೆ ಪರದಾಡುವಂತಾಯಿತು. ಹಲವಾರು ವ್ಯಕ್ತಿಗಳು, ಅವರಲ್ಲಿ ಅನೇಕರು ವಯಸ್ಸಾದವರು, ಈ ನೋಟುಗಳನ್ನು ಮಾನ್ಯ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಾಗ ಸಾವನ್ನಪ್ಪಿದ್ದರು.
ದೇಶಾದ್ಯಂತ ನೌಕರರು ಮತ್ತು ಅಧಿಕಾರಿಗಳು ಬಿಡುವಿಲ್ಲದೆ ತಡರಾತ್ರಿಯವರೆಗೆ ಕೆಲಸ ಮಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಯಿತು. ಕೆಲಸದ ಒತ್ತಡದಿಂದ ನೂರಕ್ಕೂ ಹೆಚ್ಚು ಬ್ಯಾಂಕ್ ನೌಕರರು ತಮ್ಮ ಅಮೂಲ್ಯವಾದ ಪ್ರಾಣವನ್ನು ತೆರಬೇಕಾಗಿ ಬಂತು. ಹೆಚ್ಚಾಗಿ ನಗದು ವ್ಯವಹಾರದ ಮೇಲೆ ಅವಲಂಬಿತವಾಗಿರುವ ಸಣ್ಣ ವ್ಯಾಪಾರ, ಉದ್ದಿಮೆಗಳು ಅನೌಪಚಾರಿಕ ಆರ್ಥಿಕತೆ, ಈ ಕ್ರಮದಿಂದ ಹಾನಿಗೊಳಗಾದ ಮತ್ತು ಇದರಿಂದ ಉಂಟಾದ ಲಕ್ಷಾಂತರ ಉದ್ಯೋಗ ನಷ್ಟಗಳ ಕುರಿತು ಹಲವಾರು ವರದಿಗಳು ಪ್ರಕಟವಾದವು.
ಆರ್‌ಬಿಐ ಬಿಡುಗಡೆ ಮಾಡಿದ ಹಣ ಪೂರೈಕೆಯ ಪಾಕ್ಷಿಕ ವರದಿಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಾರ್ವಜನಿಕರ ಬಳಿ ಇರುವ ಕರೆನ್ಸಿಯು ಅಕ್ಟೋಬರ್ 21, 2022ಕ್ಕೆ 30.88 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು 2016ರ ನವಂಬರ್ 4ರಂದು ಚಲಾವಣೆಯಲ್ಲಿದ್ದ ಕರೆನ್ಸಿ ರೂ 17.7 ಲಕ್ಷ ಕೋಟಿಗಿಂತ 72% ಹೆಚ್ಚಾಗಿದೆ.
ಪ್ರಧಾನಿಯವರ ಘೋಷಣೆ ಮಾಡಿದಂತೆ ನೋಟು ಅಮಾನ್ಯೀಕರಣ ನಗದು ರಹಿತ ಆರ್ಥಿಕತೆಯೆಡೆಗೆ ಪರಿವರ್ತನೆ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೇಲೆ ಯುದ್ಧ, ಉಗ್ರಗಾಮಿ ಶಕ್ತಿಗಳಿಗೆ ಅಕ್ರಮ ಹಣ ಪೂರೈಕೆ ತೊಡೆದು ಹಾಕುವುದು ಇತ್ಯಾದಿ ಬರೀ ಪೊಳ್ಳು ಎಂದು ಸಾಬೀತಾಗಿದೆ. ದೇಶದ ಜನತೆಯನ್ನು, ಇಡೀ ಆರ್ಥಿಕತೆಯನ್ನು ಸಂಕಷ್ಟಕ್ಕೆ ದೂಡಿದ ಈ ವಿವೇಚನಾ ರಹಿತ ನಿರ್ಧಾರದ ಬಗ್ಗೆ ಪ್ರಧಾನ ಮಂತ್ರಿಯವರು ಹಾಗೂ ಕೇಂದ್ರ ಸರ್ಕಾರ ಉತ್ತರದಾಯಿಯಾಗಿದೆ.
ನೋಟು ಅಮಾನ್ಯೀಕರಣದ ಘೋಷಣೆಯಾದ ಮೊದಲ ದಿನದಿಂದಲೂ ಬಿಇಎಫ್‌ಐ ಈ ಕ್ರಮವನ್ನು ವಿರೋಧಿಸಿದೆ. ನಾವು ಮುಂದಿಟ್ಟ ಅಂಕಿ ಅಂಶಗಳು ಮತ್ತು ತರ್ಕ ಅಂತಿಮವಾಗಿ ನಿಜವೆಂದು ಸಾಬೀತಾಯಿತು. ಈ ಸಂದರ್ಭದಲ್ಲಿ, ನಾವು ದೇಶಕ್ಕೆ ಮತ್ತು ಜನತೆಗೆ ಹಾನಿಕಾರಕವಾದ ಸರ್ಕಾರದ ಯಾವುದೇ ಜನ ವಿರೋಧಿ ಕ್ರಮಗಳನ್ನು ನಿರ್ದಾಕ್ಷಣ್ಯವಾಗಿ ಪ್ರತಿಭಟಿಸುವಲ್ಲಿ ನಮ್ಮ ದೃಢವಾದ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ.
(ಲೇಖಕರು – ರಾಜ್ಯ ಪ್ರಧಾನ ಕಾರ್ಯದರ್ಶಿ, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ), ಕರ್ನಾಟಕ)