-ಅರವಿಂದ ಮಾಲಗತ್ತಿ
501 ಪುಟಗಳ “ಹೊಸ ಮನುಸ್ಮೃತಿ” ಸಿದ್ಧವಾಗಿದೆ ಎಂದು ವಿಷಯ ಪತ್ರಿಕೆಗಳಲ್ಲಿ ಅನುರಣನಗೊಳ್ಳುತ್ತಿದೆ. ಇದಕ್ಕೆ “ಹೊಸ ಸಂವಿಧಾನ” ಎಂದು ಕರೆಯುವುದು ಅಪರಾಧ. ಸಂವಿಧಾನ ಎನ್ನುವ ಶಬ್ದ ಕಾನೂನು ಬದ್ಧ ಪದವಾಗಿದೆ. ದೇಶದ ಜನಪ್ರತಿನಿಧಿಗಳು ಸೇರಿ ಸಂವಿಧಾನದ ಪ್ರತಿ ಪದವೂ ಒರೆಗಲ್ಲಿಗೆ ಹಚ್ಚಿ, ಮಥನದ ನಡುವೆ ರೂಪಗೊಂಡದ್ದು, ಭಾರತದ ಸಂವಿಧಾನ. ಈ ಸಂವಿಧಾನಕ್ಕೆ ಪ್ರತಿ ಸಂವಿಧಾನವನ್ನು ರೂಪಿಸುವುದು ಎಂದರೆ, ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ. ಅಂಥವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಿಷ್ಕರಿಸುತ್ತಾರೆ ಎಂದರ್ಥ. ಇಂಥ ಬಹಿಷ್ಕೃತರಿಂದ ಧರ್ಮದ ಹೆಸರಿನಲ್ಲಿ ಹೊರ ಬರುವ ಕೃತಿ “ಸಂವಿಧಾನ” ಎಂದು ಕರೆಯಲಾಗದು. ಅದಕ್ಕೆ “ಪರಿಷ್ಕೃತ ಮನುಸ್ಮೃತಿ” ಅಥವಾ “ಹೊಸ ಮನುಸ್ಮೃತಿ” ಎಂದೇ ಕರೆಯಬೇಕಾಗುತ್ತದೆ.
“ಹೊಸ ಮನುಸ್ಮೃತಿ”ಯಲ್ಲಿ ಹಿಂದೂ ಧರ್ಮದ ಅನುಯಾಯಿಗಳಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆಯಂತೆ. ಮತ್ತು ಜೈನ ಸಿಖ್ ಬೌದ್ಧ ಧರ್ಮದ ಅನುಯಾಯಿಗಳು ಮಾತ್ರ ಮತ ಚಲಾವಣೆಯ ಹಕ್ಕನ್ನು ಹೊಂದಿರುತ್ತಾರಂತೆ.” ಹೀಗಿದ್ದ ಮೇಲೆ ಅದು ಈ ಹಿಂದೆ ಆಳಲ್ಪಡುತ್ತಿದ್ದ ಮನುಸ್ಮೃತಿಯ ಮುಂದುವರಿಕೆಯಾಗಿರುತ್ತದೆ ಅಷ್ಟೇ. ಇಂಥ ವಿಚಾರಗಳು ವರ್ತಮಾನದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರಾಕರಿಸುವುದೇ ಆಗಿದೆ.
ನಾವು ಪ್ರತಿಸಂವಿಧಾನವನ್ನು ರೂಪಿಸಿಕೊಳ್ಳುತ್ತೇವೆ ಎನ್ನುವುದು ರಾಷ್ಟ್ರದ್ರೋಹದ ಚಟುವಟಿಕೆಯಾಗುತ್ತದೆ. ಈ ಹಿಂದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರನ್ನು ಶಿಕ್ಷಿಸಲಾಗಿದೆ. ಅಂತಹ ಸಂದರ್ಭಗಳನ್ನು ಸ್ಮರಿಸಿಕೊಂಡರೆ, ಇದು ಅದಕ್ಕಿಂತಲೂ ಘೋರವಾದ ಅಪರಾಧವೇ ಸರಿ. ಸಂವಿಧಾನಿಕವಾದ ಸಾಮಾನ್ಯ ಜ್ಞಾನ ಇರುವವರಾರು ಇಂಥ ಕೆಲಸವನ್ನು ಮಾಡಲಾರರು.
ಇದನ್ನೂ ಓದಿ: ಹೈಕೋರ್ಟ್ ಮಹತ್ವದ ತೀರ್ಪು| ಕಟ್ಟಡ ಕಾರ್ಮಿಕ ಮಕ್ಕಳಿಂದ ವಿಜಯೋತ್ಸವ
ಸಂಸತ್ತಿನ ಮಾನ್ಯತೆ ಇಲ್ಲದ್ದು ಸಂವಿಧಾನ ಎನಿಸಿಕೊಳ್ಳಲಾರದು. ಯಾರೋ ನಾಲ್ಕು ಜನ ಸೇರಿ ನಾವು ‘ಹೊಸ ಮನುಸ್ಮೃತಿ’ ಮಾಡಿದ್ದೇವೆ ಎಂದರೆ, ಒಬ್ಬ ಅನಕ್ಷರಸ್ಥನೂ ಒಪ್ಪಲಾರ. ಅದು ಸಾಮೂಹಿಕ ವ್ಯಭಿಚಾರದ ಅನೈತಿಕ ಶಿಶುವಾಗುತ್ತದೆ. ಇಂಥ “ಅನೈತಿಕ ಶಿಶುಗಳನ್ನು ನಮ್ಮ ಸಮಾಜಕ್ಕೆ ಮಾತ್ರ ರೂಪಿಸಿಕೊಳ್ಳುತ್ತೇವೆ” ಎನ್ನುವುದು ಕೂಡ ಅಪರಾಧವೆ ಆಗಿದೆ.
ಈ ರೀತಿ ಹಾಡು ಹಗಲೇ ಚಟುವಟಿಕೆಗಳು ನಡೆಯುತ್ತಿರಬೇಕಾದರೆ, ವ್ಯವಸ್ಥೆ ಮೌನವಾಗಿ ಅಸಹಾಯಕರಂತೆ ಕುಳಿತುಕೊಳ್ಳಬಾರದು. ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಪ್ರಮಾಣವಚನವನ್ನು ಸ್ವೀಕರಿಸುವಾಗ ತೋರಿದ ರಾಷ್ಟ್ರಭಕ್ತಿಯನ್ನು ಈ ಸಂದರ್ಭದಲ್ಲಿ ತೋರಬೇಕು. ನಾವು ವಚನಭ್ರಷ್ಟರಲ್ಲ ಎಂದು ತಮ್ಮ ರಾಷ್ಟ್ರದ ಮತ್ತು ಸಂವಿಧಾನದ ಬದ್ಧತೆಯನ್ನು ಸ್ಪಷ್ಟಪಡಿಸಬೇಕು. ಹೀಗಾಗದೆ ಹೊದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳು ಕುಸಿಯುತ್ತಿವೆ.
‘ಹೊಸ ಮನುಸ್ಮೃತಿ’ಯ ವಿಚಾರವನ್ನು ಪ್ರಯಾಗ್ ರಾಜ್ಯದ ಕುಂಭಮೇಳದೊಂದಿಗೆ ತಳಕು ಹಾಕುವಂಥದ್ದು ” ಸಾಂಸ್ಕೃತಿಕ ರಾಜಕಾರಣದ ರೂಪ” ಎನಿಸುತ್ತದೆ. ಕುಂಭಮೇಳ ಒಂದು ಧಾರ್ಮಿಕ ಆಚರಣೆಗೆ ಸಂಬಂಧಪಟ್ಟದ್ದು. ಅದರೊಂದಿಗೆ ಈ ಸಂಗತಿಯನ್ನು ತಳಕು ಹಾಕಿ ಲಾಭ ಪಡೆಯಲಿಚ್ಚಿಸುವುದು ಧರ್ಮದ ದುರ್ಬಳಕೆಯಾಗುತ್ತದೆ. ಇದು ಧಾರ್ಮಿಕ ಪಾವಿತ್ರತೆಯನ್ನು ಹಾಳು ಮಾಡಿದಂತಾಗುತ್ತದೆ.
ಪ್ರಜಾವಾಣಿ ಪತ್ರಿಕೆಯಲ್ಲಿ ’50 ವರ್ಷಗಳ ಹಿಂದೆ’ ಎನ್ನುವ ಕಾಲಮ್ನಲ್ಲಿ (28-1-2000) ಪ್ರಕಟವಾಗಿರುವ ಸುದ್ದಿಯಲ್ಲಿ ಆಗಿನ ರಾಷ್ಟ್ರಪತಿಗಳಾಗಿದ್ದ ಕೆ ಆರ್ ನಾರಾಯಣ್ ಅವರು ಸರ್ಕಾರದ ಅಸ್ಥಿರತೆಯನ್ನು ನೆಪವಡ್ಡಿ ಬೇರೆ ವ್ಯವಸ್ಥೆ ತರಬೇಕೆನ್ನುವ, ಹೊಸ ಸಂವಿಧಾನ ರಚಿಸಬೇಕು ಎನ್ನುವ ವಿಚಾರಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾ – ನಮ್ಮ ಸಂಸದೀಯ ವ್ಯವಸ್ಥೆಯು ಜವಾಬ್ದಾರಿ ಆಡಳಿತ ವ್ಯವಸ್ಥೆಯ ನಿರ್ವಹಣೆಗಾಗಿ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಸ್ಥಿರತೆ ಕಂಡು ಬರುತ್ತಿದೆ. ಅದಕ್ಕಾಗಿ ಸಂಸದೀಯ ವ್ಯವಸ್ಥೆಯನ್ನೇ ಬದಲಿಸಬೇಕೆನ್ನುವುದು ಸರಿಯಾದ ಆಲೋಚನೆಯಲ್ಲ ಎಂದಿದ್ದರು.
ಈ ಮಾತಿನಲ್ಲಿ ಸ್ಪಷ್ಟವಾಗುವ ಎರಡು ಅಂಶಗಳು ಎಂದರೆ, ಮೊದಲನೆಯದು ಹೊಸ ಸಂವಿಧಾನದ ಪರಿಕಲ್ಪನೆಗೆ ರಾಷ್ಟ್ರಪತಿಗಳು ಸಂಸತ್ ಸೆಂಟ್ರಲ್ ಭವನದಲ್ಲಿ, ಸಂವಿಧಾನದ ಐವತ್ತನೇ ವರ್ಷದ ಸಮಾರಂಭದಲ್ಲಿ ಬಹಿರಂಗವಾಗಿ ವಿರೋಧದ ಧ್ವನಿಯನ್ನು ವ್ಯಕ್ತಪಡಿಸಿದ್ದು. ಎರಡನೆಯದಾಗಿ, ಸಂವಿಧಾನದ ಬದಲಾವಣೆಯ ವಿಚಾರ ಇದೇ ಮೊದಲನಯದ್ದು ಎಂದೇನಲ್ಲ ಎನ್ನುವುದು.
ರಾಷ್ಟ್ರಪತಿಗಳಾಗ್ಗಿದ್ದ ಕೆ ಆರ್ ನಾರಾಯಣ್ ಅವರು ತಾವು ಪ್ರಮಾಣ ವಚನವನ್ನು ಸ್ವೀಕರಿಸಿದಂತೆ ತಮ್ಮ ಬದ್ಧತೆಯನ್ನು ಅಕ್ಷರಶಹ ಪಾಲಿಸಿಕೊಂಡು ಬಂದರು. ಇದೇ ರೀತಿ ಹಲವಾರು ರಾಜಕಾರಣಿಗಳು ಆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ಆದರೆ ಇಂದಿನ ಸಂದರ್ಭದಲ್ಲಿ ಆ ಧ್ವನಿ ಮಾಯವಾಗಿದ್ದು, ಸಂವಿಧಾನ ಬದ್ಧತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಪ್ರಮಾಣವಚನದ ಮಾತುಗಳು “ಅರ್ಥ ರಹಿತ” ಎನ್ನುವುದನ್ನು ದೇಶದ ಚುನಾಯಿತ ಪ್ರತಿನಿಧಿಗಳು ಸೂಚಿಸುತ್ತಿದ್ದಾರೆಯೇ ಎನ್ನುವ ಸಂದೇಹ ಮನೆಮಾಡುವಂತಾಗಿದೆ.
ಭಾರತದ ಸಂವಿಧಾನ ರಚನೆಯಾಗುವ ಸಂದರ್ಭದಲ್ಲಿ, ಸಂವಿಧಾನದಲ್ಲಿ ಏನಿರಬೇಕು ಎನ್ನುವುದರ ಕುರಿತು ಚರ್ಚೆ ಆರಂಭವಾದಾಗಲೇ ಆರ್ ಎಸ್ ಎಸ್ ಸಿ ನ ಪಡೆ ತನ್ನ ಪುಟ್ಟ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಬಗ್ಗೆ ವಿವರಗಳಿವೆ. 1950 ರ ನಂತರ ಬಹಿರಂಗ ಹೇಳಿಕೆಗಳು ಹೊರ ಬಂದರೂ ಅವುಗಳಿಗೆ ಅಷ್ಟು ಬಲವಿರಲಿಲ್ಲ. ಅನಂತರದಲ್ಲಿ ಅದು ಪ್ರಣಾಳಿಕೆಯಾಗಿ ಒಂದು ಪುಟದಿಂದ ಹಲವು ಪುಟಗಳಿಗೆ ವಿಸ್ತರಣೆಗೊಳ್ಳುತ್ತ, ಭೂಗತ ಪರಂಪರೆಯಂತೆ ಒಳಗೊಳಗೆ ಹರಿದಾಡುತ್ತಿತ್ತು.
ಅದರಲ್ಲಿ ಅಸ್ಪೃಶ್ಯರನ್ನು ಅಸ್ಪೃಶ್ಯರಾಗಿಯೇ ಇಡುವ ವಿಧಾನ ಯಾವುದು ಎನ್ನುವ ಸಂಹಿತಿಯ ರೂಪವೇ ಪ್ರಧಾನವಾಗಿತ್ತು. ಇಷ್ಟು ವರ್ಷಗಳ ಕಾಲ ಗುಪ್ತವಾಗಿ ನಡೆಯುತ್ತಿದ್ದ ಈ ಚಟುವಟಿಕೆ ಈಗ ಬಹಿರಂಗವಾಗಿಯೇ ಚರ್ಚೆಗೆ ಮಣೆ ಹಾಕಿ ಎದ್ದು ನಿಂತಿದೆ. ಹೀಗಿದ್ದು ಸಂವಿಧಾನದ ರಕ್ಷಕರಾಗಬೇಕಾಗಿದ್ದ ಜನಪ್ರತಿನಿಧಿಗಳು ಮಾತನಾಡದೆ ಮೌನವಾಗಿರುವುದು, ದೇಶದ ಭವಿಷ್ಯತ್ತಿನ ಕುರಿತು ಆತಂಕವನ್ನು ಸೃಷ್ಟಿ ಮಾಡುತ್ತದೆ. ಇಂಥ ಬೇಸೂರಿನ ಸ್ವರಗಳು ಏಳುವುದಕ್ಕಿಂತ ಮುಂಚಿತವಾಗಿಯೇ ಹತ್ತಿಕ್ಕಬೇಕು, ಇಲ್ಲದೆ ಹೋದರೆ ದೊಡ್ಡ ಗಂಡಾಂತರವನ್ನು ನಾವಾಗಿಯೇ ಆಹ್ವಾನಿಸಿಕೊಂಡಂತೆ ಆಗುತ್ತದೆ.
ಹಿಂದೂ ಧರ್ಮ ಕೇಂದ್ರೀತ “ಹೊಸ ಮನುಸ್ಮೃತಿ”ಯನ್ನು ಹೊರ ಹಾಕಿದಂತೆ, ಇಸ್ಲಾಂ ಧರ್ಮೀಯರು, ಕ್ರೈಸ್ತ ಧರ್ಮೀಯರು, ಸಿಖ್ ಧರ್ಮೀಯರು, ಜೈನ ಧರ್ಮೀಯರು, ಹೀಗೆ ತಮ್ಮ ತಮ್ಮ ಧರ್ಮ ಕೇಂದ್ರಿತ ಹೊಸ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲು ಮುಂದಾದರೆ ಗತಿ ಏನಾಗಬಹುದು ಎಂಬ ಊಹೆ ತಲ್ಲಣವನ್ನು ಸೃಷ್ಟಿಸುತ್ತದೆ. ಇವೆಲ್ಲ ದೇಶದ ಛಿದ್ರಿಕರಣಕ್ಕೆ ಅನುವು ಮಾಡಿಕೊಡುವ ಹೊಸ ಮಾರ್ಗಗಳಾಗುತ್ತವೆ.
ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶ ಎಂದು ಕರೆಸಿಕೊಳ್ಳುವ ರಾಷ್ಟ್ರ ನಮ್ಮದು. ಅಂತೆಯೇ ಅತಿ ದೊಡ್ಡ ಸಂವಿಧಾನವೂ ನಮ್ಮದೇ ಎಂಬ ಹೆಗ್ಗಳಿಕೆ ಅದರ ಜೊತೆಗಿದೆ. ವಿಶ್ವಕ್ಕೆ ಭಾರತದ ಪ್ರಜಾಪ್ರಭುತ್ವ ಆಡಳಿತ ಮಾದರಿಯಾಗಿರುವಾಗ ಅದನ್ನು ಕಾಯ್ದುಕೊಂಡು ಹೋಗಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ನಮ್ಮ ಸಂವಿಧಾನ ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೇಶದ ಅತ್ಯುನ್ನತ ಎನಿಸಿಕೊಳ್ಳುವ ವ್ಯಕ್ತಿಗೂ ಸರ್ವ ಬಗೆಯ ಸ್ವಾತಂತ್ರ್ಯವನ್ನು ನೀಡಿದೆ, ಆತ್ಮವಿಶ್ವಾಸ, ಗೌರವ, ರಕ್ಷಣೆ, ಮೂಲಭೂತ ಸೌಕರ್ಯ ಎಲ್ಲವನ್ನೂ ಒದಗಿಸಿದೆ. ಅಷ್ಟೇ ಅಲ್ಲ, ಹೊಸ ಆಲೋಚನೆ ಹೊಸ ಬದುಕಿಗೆ ಅನುಗುಣವಾಗಿ ಹೊಸತ್ತನ್ನು ರೂಪಿಸಿಕೊಳ್ಳಲು ಸಂವಿಧಾನಾತ್ಮಕವಾಗಿಗೆ ಅವಕಾಶವಿದೆ.
ಸಂವಿಧಾನಾತ್ಮಕವಾದ ತೊಡಕುಗಳು ಎದುರಾದಲ್ಲಿ ಅಂಥವುಗಳನ್ನು ಪರಿಷ್ಕರಿಸಿಕೊಳ್ಳಲೂ ಅವಕಾಶವಿದೆ. ಇಷ್ಟೊಂದು ಮುಕ್ತ ಸಂವಿಧಾನದ ವ್ಯವಸ್ಥೆ ನಮ್ಮದಾಗಿರುವಾಗ, ಇದರ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳಬೇಕಿದೆ ಮತ್ತು ಪ್ರಪಂಚವನ್ನು ಪ್ರತಿನಿಧಿಸಬಲ್ಲ ವಿಶ್ವ ಮಾನ್ಯವಾದ ಎಲ್ಲ ಲಕ್ಷಣಗಳು ನಮ್ಮಲ್ಲಿ ಹುದುಗಿಕೊಂಡಿರುವಾಗ ಅಂಥವುಗಳನ್ನು ಕಳಚಿಕೊಂಡು, ವಿಶ್ವದ ಎದುರು ಬೆತ್ತಲಾಗುವ ರೀತಿಯಲ್ಲಿ ದೇಶವನ್ನು ತಂದು ನಿಲ್ಲಿಸುವುದು, ವಿಶ್ವಗುರುವಿನ ಲಕ್ಷಣವಲ್ಲ. ಇರುವ ದೇಶವನ್ನು ಯಥಾ ಸ್ಥಿತಿಯಲ್ಲಿ ನಡೆಸಿಕೊಂಡು ಹೋದದ್ದೆ ಆದರೆ ದೇಶ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ಹೀಗೆ ದೇಶವನ್ನು ವಿಶ್ವಗುರುವಾಗಿಸುವ ಅಥವಾ ಭಿಕ್ಷಾ ಗುರುವಾಗಿಸುವ ಎಲ್ಲಾ ಶಕ್ತಿ ನಮ್ಮನ್ನಾಳುವ ಜನಪ್ರತಿನಿಧಿಗಳ ಕೈಯಲ್ಲಿದೆ ಎನ್ನುವುದನ್ನು ಮರೆಯಬಾರದು.
ಇದನ್ನೂ ನೋಡಿ: ಹಾಸ್ಟೆಲ್, ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಪ್ರತಿಭಟನೆ Janashakthi Media