ನೈರುತ್ಯ ರೈಲ್ವೆ: 120 ನಿಲ್ದಾಣಗಳಲ್ಲಿ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದನೆ

ಬೆಂಗಳೂರು: ನೈರುತ್ಯ ರೈಲ್ವೆಯು ಪ್ರಮುಖ ನಿಲ್ದಾಣಗಳಲ್ಲಿ ಸೌರಶಕ್ತಿ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ಸಂರಕ್ಷಣೆಯ ಗುರಿಯನ್ನು ಸಾಧಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.

ನೈರುತ್ಯ ವಲಯದಾದ್ಯಂತ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವೆಲ್ ಕ್ರಾಸಿಂಗ್ ಗೇಟ್ ಗಳು ಮತ್ತಿತರ ಕಡೆಗಳಲ್ಲಿ ಸೌರಫಲಕಗಳನ್ನು ಅಳವಡಿಸಲು ಮುಂದಾಗಿದೆ. ಇದರಿಂದ ನಿಲ್ದಾಣಗಳ ವಿದ್ಯುತ್ ಅಗತ್ಯವು ಪೂರೈಕೆಯಾಗುವುದರ ಜೊತೆಗೆ ರೈಲ್ವೆಯ ವಿದ್ಯುತ್ ಮೇಲಿನ ವೆಚ್ಚದಲ್ಲಿಯೂ ಸಹಾ ಉಳಿತಾಯ ಮಾಡಲು ಕ್ರಮವಹಿಸಿದೆ.

ಸೇವಾಕಟ್ಟಡಗಳು ಸೇರಿದಂತೆ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಈಗಾಗಲೇ ಒಟ್ಟಾರೆ 4656.60 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಿದೆ. ನೈರುತ್ಯ ರೈಲ್ವೆಯು 120 ನಿಲ್ದಾಣಗಳ ಛಾವಣಿಗಳ ಮೇಲೆ (ಪ್ರಮುಖ ನಿಲ್ದಾಣಗಳು- ಎಸ್.ಎಸ್.ಎಸ್. ಹುಬ್ಬಳ್ಳಿ, ಕೆ.ಎಸ್.ಆರ್. ಬೆಂಗಳೂರು, ಮೈಸೂರು, ಯಶವಂತಪುರ ಇತ್ಯಾದಿ) ಮತ್ತು 7 ಸೇವಾ ಕಟ್ಟಡಗಳಲ್ಲಿ (ನೈರುತ್ಯ ರೈಲ್ವೆಯ ಪ್ರಧಾನ ಕಾರ್ಯಾಲಯ, ರೈಲ್ ಸೌಧ, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯಗಳು, ಹುಬ್ಬಳ್ಳಿ ಮತ್ತು ಬೆಂಗಳೂರಿನ ರೈಲ್ವೆ ಆಸ್ಪತ್ರೆಗಳು ಹಾಗೂ ಬೆಂಗಳೂರಿನ ಸರಕು ಸಾಗಣೆ ಕಾರ್ಯಾಲಯ) ಸೌರಫಲಕಗಳನ್ನು ಒದಗಿಸಿದೆ.

ರೈಲ್ವೇ ವಿಭಾಗಕ್ಕೆ ಸಂಬಂಧಿಸಿದಂತೆ ದುರಸ್ತಿ ಕಾರ್ಯಕಗಳನ್ನು ಕೈಗೊಳ್ಳು ಕಟ್ಟಡಗಳು ಅಂದರೆ, ಹುಬ್ಬಳ್ಳಿ-1045 ಕೆ.ಡಬ್ಲ್ಯು.ಪಿ.; ಮೈಸೂರು-500 ಕೆ.ಡಬ್ಲ್ಯು.ಪಿ. ಮತ್ತು ಶೆಡ್ ಗಳಲ್ಲಿಯೂ ಸಹಾ ಛಾವಣಿಯ ಮೇಲೆ ಸೌರಘಟಕಗಳನ್ನು ಒದಗಿಸಿದೆ. ಕೃಷ್ಣರಾಜಪುರಂ ಡೀಸೆಲ್ ಶೆಡ್ (240 ಕೆ.ಡಬ್ಲ್ಯು.ಪಿ.), ಹುಬ್ಬಳ್ಳಿ ಇ.ಎಮ್‌.ಡಿ. ಶೆಡ್ (640 ಕೆ.ಡಬ್ಲ್ಯು.ಪಿ.) ಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗಿದೆ. ಜೊತೆಗೆ 295 ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸೌರಫಲಕ ಅಳವಡಿಸಲಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸೌರಶಕ್ತಿಯ ಮೂಲಕ ಒಟ್ಟಾರೆ 46.11 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು ವಿದ್ಯುತ್ ಬಿಲ್ ನಲ್ಲಿ 1.96 ಕೋಟಿ ರೂಪಾಯಿಗಳ ಉಳಿತಾಯವಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್ ಅಗತ್ಯತೆಯ ಸುಮಾರು 70% ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ.

2021-22 ನೇ ಆರ್ಥಿಕ ವರ್ಷದಲ್ಲಿ, ರೈಲ್ ಸೌಧದಲ್ಲಿ ಅಳವಡಿಸಲಾಗಿರುವ 250 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರ ಫಲಕಗಳಿಂದ 2.75 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು 15.51 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. 2021-22 ನೇ ಆರ್ಥಿಕ ವರ್ಷದಲ್ಲಿ ಎಸ್.ಎಸ್.ಎಸ್. ಹುಬ್ಬಳ್ಳಿ ರೈಲು ನಿಲ್ದಾಣದ ಸೌರಫಲಕಗಳಿಂದ 3.38 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.

ಯಶವಂತಪುರ ರೈಲು ನಿಲ್ದಾಣದ 80 ಕೆ.ಡಬ್ಲ್ಯು.ಪಿ. ಸೌರ ಫಲಕಗಳಿಂದ 0.95 ಲಕ್ಷ ಯುನಿಟï, ಮೈಸೂರು ರೈಲು ನಿಲ್ದಾಣದ 110 ಕೆ.ಡಬ್ಲ್ಯು.ಪಿ. ಸೌರಫಲಕಗಳಿಂದ 1.42 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಈ ಎಲ್ಲ ನಿಲ್ದಾಣಗಳಿಂದ ಒಟ್ಟಾರೆ 21.42 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ.

ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪರಿಸರ ಸ್ನೇಹಿ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರಹೊಮ್ಮುವ ಗುರಿಯನ್ನು ಹೊಂದಲಾಗಿದೆ ಎಂದರು.

ಪ್ರಧಾನ ಮುಖ್ಯ ವಿದ್ಯುತ್ ಇಂಜಿನಿಯರ್ ಜೈಪಾಲ್ ಸಿಂಗ್ ನೇತೃತ್ವದಲ್ಲಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮತ್ತು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅವರುಗಳ ಮಾರ್ಗದರ್ಶನದಲ್ಲಿ ಮೂರೂ ರೈಲ್ವೆ ವಿಭಾಗಗಳಲ್ಲಿ ಸೌರಶಕ್ತಿ ಬಳಕೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *