ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು( ಡಿಜಿಎಂಒ)ಗಳು ಮೇ 10ರ ಸಂಜೆ 5ರಿಂದ ಎಲ್ಲ ಗುಂಡು ಹಾರಾಟಗಳನ್ನು ನೆಲ, ಜಲ, ಆಕಾಶದಿಂದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿರುವುದಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿಗಳು ಸಂಜೆ 6 ಗಂಟೆಯ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಅಪರಾಹ್ನ 3.35ಕ್ಕೆ ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒರಿಗೆ ಕರೆ ಮಾಡಿದರು, ಇಬ್ಬರೂ ಡಿಜಿಎಂಒ ಗಳು ಮೇ12ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಮಾತುಕತೆ ನಡೆಸುವರು ಎಂದೂ ಅವರು ತಿಳಿಸಿದರು.
ಇದಕ್ಕೆ ಸ್ವಲ್ಪವೇ ಮೊದಲು ವಾಶಿಂಗ್ಟನ್ ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನ “ಪೂರ್ಣ ಮತ್ತು ತಕ್ಷಣದ” ಕದನ ವಿರಾಮಕ್ಕೆ ಯುಎಸ್‍ನ ಮಧ್ಯಸ್ಥಿಕೆಯಲ್ಲಿ ಮಾತುಕತೆಯ ನಂತರ ಒಪ್ಪಿರುವುದಾಗಿ ಪ್ರಕಟಿಸಿದ್ದರು.
ಭಾರತದ ವಿದೇಶಾಂಗ ಮಂತ್ರಿಗಳು ತಮ್ಮ ‘ಎಕ್ಸ್’ ಪೋಸ್ಟಿನಲ್ಲಿ ಈ ಬಗ್ಗೆ ಹೇಳುತ್ತ, ಭಾರತ ಭಯೋತ್ಪಾದನೆಯ ವಿರುದ್ಧ ಎಲ್ಲ ರೀತಿಗಳಲ್ಲೂ, ಸ್ವರೂಪಗಳಲ್ಲೂ ನಿರಂತರವಾಗಿ ಒಂದು ದೃಢ ಮತ್ತು ರಾಜಿಯಾಗದ ನಿಲುವನ್ನು ತಳೆದುಕೊಂಡು ಬಂದಿದೆ, ಇನ್ನು ಮುಂದೆಯೂ ಅದು ಮುಂದುವರೆಯುತ್ತದೆ ಎಂದಿದ್ದಾರೆ.
ಅತ್ತ, ಪಾಕಿಸ್ತಾನದ ಉಪ ಪ್ರಧಾನಿಗಳು ಕೂಡ ಕದನವಿರಾಮವನ್ನು ದೃಢೀಕರಿಸುತ್ತ, ಪಾಕಿಸ್ತಾನ ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಸದಾ ಶಾಂತಿ ಮತ್ತು ಭದ್ರತೆಗೆ ಪ್ರಯತ್ನಿಸಿಕೊಂಡು ಬಂದಿದೆ ಎಂದು ಹೇಳಿದ್ದಾರಂತೆ.
ಈ ನಡುವೆ ಟ್ರಂಪ್ ಆಡಳಿತ ಕದನವಿರಾಮ ಘೋಷಣೆಯಲ್ಲಿ ತನ್ನ ಪಾತ್ರವಿದೆ ಎಂದು ಹೇಳಿಕೊಂಡಿದೆ. ಅಧ್ಯಕ್ಷ ಟ್ರಂಪ್ ತಮ್ಮ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ಮಾತುಕತೆ ನಡೆಯಿತು ಎಂದು ಹೇಳಿದರೆ, ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೊಬಿಯೋ ಕಳೆದ 48 ಗಂಟೆಗಳಿಗಿಂತಲೂ ಹೆಚ್ಚು ಸಮಯದಿಂದ ತಾನು ಇಬ್ಬರೂ ಪ್ರಧಾನ ಮಂತ್ರಿಗಳೂ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ಉನ್ನತ ಮುಖಂಡರೊಂದಿಗೆ ಮಾತುಕತೆಗಳಲ್ಲಿ ತೋಡಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಸಕಾರಾತ್ಮಕ ಬೆಳವಣಿಗೆ- ಸಿಪಿಐ(ಎಂ) ಪೊಲಿಟ್‍ಬ್ಯುರೊ
ಭಾರತ ಮತ್ತು ಪಾಕಿಸ್ತಾನದ ನಡುವೆ ತಕ್ಷಣವೇ ಕದನ ವಿರಾಮ ಜಾರಿಗೆ ಬರಲಿದೆ ಎಂಬ ಪ್ರಕಟಣೆಯನ್ನು ಸಕಾರಾತ್ಮಕವಾಗಿ ಗಮನಿಸಿರುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಎರಡೂ ದೇಶಗಳ ಜನತೆ ತಮ್ಮ ಪ್ರಗತಿ ಮತ್ತು ಸಮೃದ್ಧಿಗಾಗಿ ಶಾಂತಿಗೆ ಅರ್ಹರು. “ಎರಡೂ ದೇಶಗಳು ಇದನ್ನು ಬಳಸಿಕೊಳ್ಳಬೇಕೆಂಬುದು ನಮ್ಮ ಕಳಕಳಿಯ ನಿರೀಕ್ಷೆ “ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಪಾಕಿಸ್ತಾನವು ತನ್ನ ಗಡಿಗಳೊಳಗೆ ಭಯೋತ್ಪಾದಕ ಚಟುವಟಿಕೆಯನ್ನು ಕೊನೆಗೊಳ್ಳುವಂತೆ ನೋಡಿಕೊಳ್ಳಬೇಕು ಎನ್ನುತ್ತ, ಇನ್ನು ಮುಂದೆ ಯಾವುದೇ ಸಂಘರ್ಷ ನಡೆಯದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಶಿಸಿದೆ.