ನವದೆಹಲಿ: ವಿವಾದಿತ ಕರಾಳ ಮೂರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಂ ಸಂದರ್ಭದಲ್ಲಿ ರೈತರು ಸಾವೀಗೀಡಾಗಿದ್ದರು. ಹೋರಾಟದಲ್ಲಿ ಮಡಿದವರ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಹಾಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ ಅಧಿವೇಶನದಲ್ಲಿ ಹೇಳಿದರು.
ಚಳಿಗಾಲ ಅಧಿವೇಶನದ ಮೂರನೇ ದಿನವಾದ ಇಂದು ಪ್ರತಿಪಕ್ಷಗಳು ಕಳೆದ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರ ರೈತರಲ್ಲಿ ಕೆಲವು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಯಾವಾಗ ಪರಿಹಾರ ನೀಡುತ್ತೀರಿ ಎಂಬ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಸಚಿವರು “ಕೃಷಿ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ ಮತ್ತು ಆದ್ದರಿಂದ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದರು.
ಇದನ್ನು ಓದಿ: ರೈತರು ಕಲಿಸಿದ ಪಾಠಗಳನ್ನು ಸರ್ಕಾರ ಕಲಿತರೆ ಭಾರತಕ್ಕೆ ಒಳ್ಳೆಯದು : ಬೃಂದಾ ಕಾರಟ್
ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಮೇಲೆ ಕಾರ್ಪೋರೇಟ್ ಕೃಷಿ ಪದ್ಧತಿಯನ್ನು ಹೇರುವುದು, ಖಾಸಗೀಕರಣಕ್ಕೆ ಒತ್ತು ನೀಡುವುದು, ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ಹಾಗೂ ಈಗಲೂ ಮುಂದುವರಿದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ರೈತರ ಬೇಡಿಕೆ ಬಗ್ಗೆ ಚರ್ಚಿಸಲು ಕರೆ
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ರದ್ಧತಿ ಮಸೂದೆ, 2021 ಅಂಗೀಕರಿಸಲಾಗಿದೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಪೂರ್ಣವಾಗಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದರು.
ಇದನ್ನು ಓದಿ: ಲೋಕಸಭೆಯಲ್ಲಿ ವಿವಾದಿತ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ರ ಅಂಗೀಕಾರ
ದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಬಾರದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ ವಿಷಯಗಳು ಕುರಿತು ಯಾವುದೇ ಚರ್ಚೆ ನಡೆಸದ ಸರ್ಕಾರ ಅದೇಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳುತ್ತದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಪ್ರತಿಭಟನಾ ಸ್ಥಳದಿಂದ ವಾಪಸ್ ಹೋಗುವುದಿಲ್ಲ ಎಂದು ಎಚ್ಚರಿಸಿದ್ದರು.
ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಬಗ್ಗೆ ಸಮಿತಿ ರಚನೆ
“ಕನಿಷ್ಛ ಬೆಂಬಲ ಬೆಲೆ ಮೇಲಿನ ರೈತರ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸುತ್ತಿದೆ. ಹೊಲಗದ್ದೆಯಲ್ಲಿ ಪೈರಿನ ನಂತರ ಕಸ ಸುಡುವುದನ್ನು ಅಪರಾಧ ಅಲ್ಲದಂತೆ ಪರಿಗಣಿಸಲು ರೈತ ಸಂಘಟನೆಗಳು ಒತ್ತಾಯಿಸಿದ್ದವು. ಭಾರತ ಸರ್ಕಾರ ಈ ಬೇಡಿಕೆಯನ್ನೂ ಒಪ್ಪಿಕೊಂಡಿದೆ. ಹೀಗಿರುವಾಗ ರೈತರು ಆಂದೋಲನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು.
ಕೇಂದ್ರ ಸರ್ಕಾರದ ಘೋಷಣೆಗೆ ಪ್ರತಿಕ್ರಿಯಿಸಿದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ “ನಾವು ರಚಿಸಲಾದ ಸಮಿತಿಯ ವಿವರಗಳನ್ನು ಓದಿಲ್ಲ. ವಿವರಗಳ ಬಗ್ಗೆ ನಮಗೆ ತಿಳಿಸಿದ ನಂತರವೇ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಕ್ರಮಕೈಗೊಳ್ಳುತ್ತೇವೆ” ಎಂದು ತಿಳಿಸಿದರು.