‘5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ’ಯಲ್ಲಿ ಸಾರ್ವತ್ರಿಕ ಪಿಂಚಣಿ ಯೋಜನೆಗೆ ಹಣವಿಲ್ಲ!

ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ವಿಶ್ವದಲ್ಲೇ “ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ”ಎಲ್ಲ ವೃದ್ಧ ನಾಗರಿಕರಿಗೆ ಪಿಂಚಣಿ ಕೊಡುವಷ್ಟು ಆರ್ಥಿಕ ಬಲ ಹೊಂದಿಲ್ಲ ಎಂದು ತೋರುತ್ತದೆ.ಸರಕಾರದ ಪ್ರಕಾರವೇ ಜಿಡಿಪಿಯ ಬೆಳವಣಿಗೆಯು ಒಂದು ರಭಸದ ದರದಲ್ಲಿ ಸಂಭವಿಸುತ್ತಿರುವಾಗ, ಅದರ ಆದಾಯವೂ ಅದೇ ದರದಲ್ಲಿ ವಿಸ್ತರಿಸದೇ ಇರಲು ಕಾರಣವೇ ಇಲ್ಲ. ನಿಜ ಕಾರಣವೆಂದರೆ,ಈ ಜಿಡಿಪಿ ಹೆಚ್ಚಳದ ಪ್ರಯೋಜನವು ಬಂಡವಾಳಶಾಹಿಗಳು ಮತ್ತು ಶ್ರೀಮಂತರಿಗೆ ಹೋಗಬೇಕೆಂದು ಸರ್ಕಾರ ಬಯಸುತ್ತದೆ. ಇದು ವರ್ಗ ಪಕ್ಷಪಾತದ  ಒಂದು ಸ್ಪಷ್ಟ ಪ್ರದರ್ಶನ.ಮೇಲ್ತುದಿಯ ಕೇವಲ ಶೇ.1ರಷ್ಟು ಮಂದಿ ಶ್ರೀಮಂತರ ಸಂಪತ್ತಿನ ಮೇಲೆ ಕೇವಲ ಶೇ.1ರಷ್ಟು ತೆರಿಗೆ ವಿಧಿಸುವ ಮೂಲಕ ಸಾರ್ವತ್ರಿಕ ಪಿಂಚಣಿ ಯೋಜನೆಗೆ ಬೇಕಾಗುವ ಹಣವನ್ನು ಆರಾಮವಾಗಿ ಸಂಗ್ರಹಿಸಬಹುದು. ಸಾರ್ವತ್ರಿಕ ದೇಣಿಗೆ-ರಹಿತ ಪಿಂಚಣಿ ಯೋಜನೆ ಮಾನವ ಘನತೆಯೊಂದಿಗೆ ಬದುಕಲು ವಯಸ್ಸಾದವರಿಗೆ ಸಹಾಯ ಒದಗಿಸುವುದಷ್ಟೇ ಅಲ್ಲ, ಇಂತಹ ಕ್ರಮಗಳು ನವ ಉದಾರವಾದ ತಂದಿರುವ ಬಿಕ್ಕಟ್ಟಿನಿಂದ ಹೊರಬರಲು ನೆರವಾಗುತ್ತವೆ ಮತ್ತು ಒಂದು ಹೊಸ ವ್ಯವಸ್ಥೆಯ ಆಗಮನದ ಮುನ್ಸೂಚನೆಯಾಗುತ್ತವೆ. ಅರ್ಥವ್ಯವಸ್ಥೆ

ಒಂದು ವಿಚಿತ್ರವಾದ ವಿದ್ಯಮಾನವನ್ನು ನಿತ್ಯವೂ ನಾವು ಗಮನಿಸುತ್ತಲೇ ಇರುತ್ತೇವೆ. ಈ ವಿಚಿತ್ರ ವಿದ್ಯಮಾನವು ಸಾಮಾನ್ಯವಾಗಿ ಗಮನದಲ್ಲಿ ಉಳಿಯದೇ ಹೋಗುವುದೂ ವಿಚಿತ್ರವೇ. ಪ್ರಧಾನ ಮಂತ್ರಿಯವರಿಂದ ಹಿಡಿದು ಸರ್ಕಾರದ ವಕ್ತಾರರ ವರೆಗೆ ಎಲ್ಲರೂ ವಿಶ್ವದಲ್ಲಿ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆ ಎಂದರೆ ಭಾರತವೇ; ಶೀಘ್ರದಲ್ಲೇ ಅದು 5 ಟ್ರಿಲಿಯನ್ ಡಾಲರ್ ಮಟ್ಟವನ್ನು ತಲುಪಲಿದೆ ಮತ್ತು ಬೆಳವಣಿಗೆಯ ದರ ಲೆಕ್ಕದಲ್ಲಿ ಈಗಾಗಲೇ ಚೀನಾವನ್ನು ಹಿಂದಿಕ್ಕಿದೆ ಎಂಬ ಹಳೆಯ ಹಾಡನ್ನು ದಿನ ಬೆಳಗಾದರೆ ಹಾಡುತ್ತಾರೆ. ಆದರೆ, ಇದೇ ಸರ್ಕಾರದ ಇದೇ ವ್ಯಕ್ತಿಗಳು, ಸರ್ಕಾರಿ ನೌಕರರಿಗೆ ಹಿಂದಿನ ಯೋಜನೆಯ ಪ್ರಕಾರ ಪಿಂಚಣಿಯನ್ನು ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. ಆದ್ದರಿಂದ, ತಮ್ಮ ದುಡಿಮೆಯ ವರ್ಷಗಳಲ್ಲಿ ಅಸಂಘಟಿತ ವಲಯದ ನೌಕರರಾಗಿ ದುಡಿದ ಕೋಟಿಗಟ್ಟಲೆ ಜನರಿಗೆ ಒಂದು ಯೋಗ್ಯ ಮತ್ತು ದೇಣಿಗೆ-ರಹಿತ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮಾತೆಲ್ಲಿ? ಅರ್ಥವ್ಯವಸ್ಥೆ

ವಿಶ್ವದಲ್ಲೇ “ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ”ಯು ದೇಶದ ಶೇ. 57 ಮಹಿಳೆಯರಿಗೆ ತಕ್ಕಷ್ಟು ಪೋಷಕ ಆಹಾರವನ್ನು ಒದಗಿಸಲು ಸಾಧ್ಯವಾಗದ ರೀತಿಯಲ್ಲೇ, ದೇಶದ ವೃದ್ಧರಿಗೆ ಪಿಂಚಣಿಗಳನ್ನು ಕೊಡುವಷ್ಟು ಆರ್ಥಿಕ ಬಲ ಹೊಂದಿಲ್ಲ ಎಂದು ತೋರುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ ಪ್ರಕಾರ, 2019-21ರಲ್ಲಿ, 15ರಿಂದ 49 ವರ್ಷ ವಯಸ್ಸಿನ ಶೇ. 57ರಷ್ಟು (2015-16ರಲ್ಲಿದ್ದ ಶೇ. 53ರಿಂದ) ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು. ಅದೇ ರೀತಿಯಲ್ಲಿ ವಿಶ್ವದಲ್ಲೇ “ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ”ಯು ತನ್ನ ಜನರಿಗೆ ಸಾಮಾನ್ಯವಾಗಿ ತಕ್ಕಷ್ಟು ಪೌಷ್ಟಿಕತೆಯನ್ನು ಒದಗಿಸುವುದೂ ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿಯೇ, 125 ದೇಶಗಳನ್ನು ಒಳಗೊಂಡಿರುವ ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ; ಮತ್ತು, ಬಡತನವನ್ನು ಹಿಂದಿನ ಯೋಜನಾ ಆಯೋಗವು ವ್ಯಾಖ್ಯಾನಿಸಿದ ಮಾನದಂಡದ ಪ್ರಕಾರ ದಿನ ಪ್ರತಿ ಕನಿಷ್ಠ 2200 ಕ್ಯಾಲೊರಿಗಳ ತಲಾ ಆಹಾರವನ್ನು ಸೇವಿಸಲು ಸಾಧ್ಯವಾಗದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು, ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶಗಳ ಪ್ರಕಾರವೇ, 2011-12 ರಲ್ಲಿದ್ದ ಶೇ. 68ರಿಂದ 2017-18ರ ವೇಳೆಗಾಗಲೇ ಶೇ. 80ಕ್ಕಿಂತಲೂ ಅಧಿಕವಾಗಿತ್ತು. ಅರ್ಥವ್ಯವಸ್ಥೆ

ಅಸಮರ್ಥನೀಯ ತರ್ಕ

ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀಲನೆ ಮಾಡೋಣ. ಹಳೆಯ ಪಿಂಚಣಿ ಯೋಜನೆಯ ಬದಲಾಗಿ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆಯನ್ನು ಸಮರ್ಥಿಸುವವರು ಮಂಡಿಸುವ ವಾದದ ಏಕೈಕ ಅಂಶವೆಂದರೆ, ಹಣಕಾಸು ಪರಿಸ್ಥಿತಿಯೇ. ಇದು ಬಹುತೇಕ ಏಲ್ಲರಿಗೂ ಗೊತ್ತಿರುವ ವಿಷಯವೂ ಹೌದು. ಹಳೆಯ ಪಿಂಚಣಿ ಯೋಜನೆಯನ್ನು ಪ್ರಸ್ತಾಪಿಸಿದ ಕೂಡಲೇ, ಮಾಧ್ಯಮಗಳ ಬಹಳ ಮಂದಿ ಮತ್ತು ಅರ್ಥಶಾಸ್ತ್ರಜ್ಞರು ಪ್ರತಿಕ್ರಿಯೆಯಾಗಿ ತಕ್ಷಣವೇ ಹೇಳುವುದೇನೆಂದರೆ:”ಅದಕ್ಕೆ ಬೇಕಾಗುವ ಹಣದ ಹೊರೆಯನ್ನು ಸರ್ಕಾರ ಹೊರಲಾರದು”. ಈ ಹಳೆಯ ಪಿಂಚಣಿ ಯೋಜನೆಯ ಪ್ರಕಾರ, ಒಬ್ಬ ಸರ್ಕಾರಿ ನೌಕರನು ನಿವೃತ್ತಿಯ ನಂತರ, ತನ್ನ ಕೊನೆಯ ಮೂಲ ವೇತನ+ತುಟ್ಟಿಭತ್ಯೆಯ ಅರ್ಧದಷ್ಟು ಹಣವನ್ನು ಪಿಂಚಣಿಯಾಗಿ ಪಡೆಯುತ್ತಾನೆ. ಈ ಪಿಂಚಣಿಯನ್ನು ಹಣದುಬ್ಬರದೊಂದಿಗೆ (ಬೆಲೆ ಏರಿಕೆಯಾದಾಗ ಸೇವೆಯಲ್ಲಿರುವ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಏರಿಸುವ ರೀತಿಯಲ್ಲಿ) ಹೊಂದಿಸಲಾಗಿದೆ. ಹಾಗಾಗಿ, ಹಲವಾರು ವರ್ಷಗಳ ನಂತರ ಸಂದರ್ಭಾನುಸಾರವಾಗಿ ಮೂಲ ಪಿಂಚಣಿ ವೇತನವನ್ನು ನವೀಕರಿಸುವ ವರೆಗೂ “ನಿಜ” ಪಿಂಚಣಿಯು ಹೆಚ್ಚು ಕಡಿಮೆ ಸ್ಥಿರವಾಗಿಯೇ ಇರುತ್ತದೆ. ಸರ್ಕಾರವು ಹೆಮ್ಮೆಯಿಂದ ಈಗ ಹೇಳಿಕೊಳ್ಳುತ್ತಿರುವ ರೀತಿಯಲ್ಲಿ ಅರ್ಥವ್ಯವಸ್ಥೆಯು “ನಿಜಕ್ಕೂ” ವಾರ್ಷಿಕ ಶೇ. 6ರಿಂದ 7ರ ವರೆಗೆ ಬೆಳೆಯುತ್ತಿದ್ದರೆ, ಆಗ, ಪಿಂಚಣಿ ಪಡೆಯುವ ಸರ್ಕಾರಿ ನೌಕರರ ಸಂಖ್ಯೆಯು ಅದೇ ದರದಲ್ಲಿ ಹೆಚ್ಚುತ್ತಿಲ್ಲವಾದ್ದರಿಂದ, ಒಂದು ವೇಳೆ ಪಿಂಚಣಿಯಲ್ಲಿ ನಿಜಕ್ಕೂ ಹೆಚ್ಚಳವಾಗಿದ್ದರೂ ಸಹ ಅದು ಗಣನೀಯ ವಿಳಂಬದ ನಂತರವೇ ಆಗಿರುವುದರಿಂದ, ಜಿಡಿಪಿಯ ಅನುಪಾತದಲ್ಲಿ ಪಿಂಚಣಿಗೆ ಬೇಕಾದ ಒಟ್ಟು ಮೊತ್ತವು ಕಾಲಕ್ರಮದಲ್ಲಿ ಕುಸಿಯುತ್ತಿರಲೇಬೇಕು. ಅರ್ಥವ್ಯವಸ್ಥೆ

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪಿಂಚಣಿ ಬಾಬ್ತಿನಲ್ಲಿ ಕಾಲಕ್ರಮದಲ್ಲಿ ಸರ್ಕಾರದ ಹೊರೆ ಹೆಚ್ಚುತ್ತದೆ ಎಂಬುದು ಸರಿಯಲ್ಲ. ಆರ್ಥಿಕ ಬೆಳವಣಿಗೆಯ ಬಗ್ಗೆ ಸ್ವತಃ ಸರ್ಕಾರದ ಅಂಕಿಅAಶಗಳನ್ನು ಗಂಭೀರವಾಗಿ ತೆಗೆದುಕೊಂಡರೆ, ಕಾಲಕ್ರಮದಲ್ಲಿ ಪಿಂಚಣಿಯ ಒಟ್ಟು ಮೊತ್ತವು ಪ್ರಮಾಣಾನುಸಾರವಾಗಿ ತಗ್ಗಲೇಬೇಕು. ಹಾಗಾಗಿ, ಪಿಂಚಣಿಗೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ಳುವುದು ಕಷ್ಟವಲ್ಲ. ಆದರೆ, ಪಿಂಚಣಿಯ ಹೊರೆ ಕಾಲಕ್ರಮದಲ್ಲಿ ಹೆಚ್ಚುತ್ತದೆ ಎಂಬ ಹೇಳಿಕೆಯು ವಾಸ್ತವ ಪರಿಸ್ಥಿತಿಗೆ ವಿರುದ್ಧವಾಗಿದೆ, ಏಕೆ? ಜಿಡಿಪಿಯ ಬೆಳವಣಿಗೆಯು ಒಂದು ರಭಸದ ದರದಲ್ಲಿ ಸಂಭವಿಸುತ್ತಿರುವಾಗ, ಸರ್ಕಾರದ ಆದಾಯವು ಅದೇ ದರದಲ್ಲಿ ವಿಸ್ತರಿಸದೇ ಇರಲು ಕಾರಣವೇ ಇಲ್ಲ. ಆದ್ದರಿಂದ, ನಿಜ ಕಾರಣವೆಂದರೆ, ಜಿಡಿಪಿಯ ಹೆಚ್ಚಿನ ಪ್ರಯೋಜನವು ಬಂಡವಾಳಶಾಹಿಗಳು ಮತ್ತು ಶ್ರೀಮಂತರಿಗೆ ಹೋಗಬೇಕೆಂದು ಸರ್ಕಾರ ಬಯಸುತ್ತದೆ. ತನ್ನ ಈ ನಿಲುವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಬಂಡವಾಳಗಾರರಿಗೆ ಹೋಗುವ ಈ ವರ್ಗಾವಣೆಗಳು ಹೂಡಿಕೆಯನ್ನು ಹೆಚ್ಚಿಸುತ್ತವೆ ಮತ್ತು ಆ ಮೂಲಕ ಜಿಡಿಪಿಯ ಬೆಳವಣಿಗೆಯಾಗುತ್ತದೆ ಎಂಬ ವಿವರಣೆಯನ್ನು ಸರ್ಕಾರ ಕೊಡುತ್ತದೆ.

ಜಿಡಿಪಿಯ ಮೂಢಾರಾಧನೆ

ಸರ್ಕಾರ ಕೊಡುವ ಈ ವಿವರಣೆಯು ಸಮರ್ಥನೀಯವಲ್ಲ. ಬಂಡವಾಳಗಾರರಿಗೆ ಹೆಚ್ಚು ಹಣ ನೀಡಿದರೆ ಅವರು ಹೆಚ್ಚು ಹೂಡಿಕೆ ಮಾಡುತ್ತಾರೆ ಎಂಬುದು ಒಂದು ಸಾಮಾನ್ಯ ಮತ್ತು ಬಾಲಿಶ ಹೇಳಿಕೆ ಎಂಬುದನ್ನು ಪ್ರಖ್ಯಾತ ಬೂರ್ಜ್ವಾ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ಸುಮಾರು ಒಂದು ಶತಮಾನದ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಪೋಲಿಷ್ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞ ಮೈಕಲ್ ಕಲೇಕಿ ಅವರೊಂದಿಗೆ ಕೀನ್ಸ್ ಕೂಡ, ಬಂಡವಾಳಶಾಹಿಯು ಸಾಮಾನ್ಯವಾಗಿ “ಬೇಡಿಕೆ-ನಿರ್ಬಂಧಿತ ವ್ಯವಸ್ಥೆ” ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂತಹ ಒಂದು ವ್ಯವಸ್ಥೆಯಲ್ಲಿ, ಉತ್ಪಾದನೆ, ಹೂಡಿಕೆ ಮತ್ತು ಬೆಳವಣಿಗೆಯು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಉತ್ತೇಜಿಸಲ್ಪಡುತ್ತದೆಯೇ ವಿನಃ ಬಂಡವಾಳಗಾರರಿಗೆ ವರ್ಗಾವಣೆ ಮಾಡುವ ಮೂಲಕ ಅಲ್ಲ. ಈ ಪ್ರತಿಪಾದನೆಯು ನಿಜವೆಂಬುದನ್ನು ಅನುಭವದ ಮೂಲಕವೇ ಸ್ಪಷ್ಟವಾಗಿ ಸಾಬೀತುಪಡಿಸಲಾಗಿದೆ. ಮೋದಿ ಸರ್ಕಾರವೂ ಸಹ ಅದರ ಸತ್ಯಾಸತ್ಯತೆಯನ್ನು ನಂಬದಿರಲು ಸಾಧ್ಯವಿಲ್ಲ. ಆದ್ದರಿಂದ, ತನ್ನ ಸ್ವಂತ ನೌಕರರಿಗಾಗಲಿ ಅಥವಾ ವಯಸ್ಸಾದ ಜನರಿಗಾಗಲಿ, ಪಿಂಚಣಿಗಳನ್ನು ಒದಗಿಸಲು ಹೆಚ್ಚು ಸಂಪನ್ಮೂಲಗಳು ಲಭಿಸದಂತೆ ನೋಡಿಕೊಳ್ಳುವ ಸರ್ಕಾರದ ಕ್ರಮವು ವರ್ಗ-ಪಕ್ಷಪಾತದ ಒಂದು ಸ್ಪಷ್ಟ ಪ್ರದರ್ಶನವಾಗುತ್ತದೆ. ಈ ವರ್ಗ-ಪಕ್ಷಪಾತಕ್ಕೂ ಮತ್ತು ವಿವೇಕಯುತ ಆರ್ಥಿಕ ತರ್ಕಕ್ಕೂ ಯಾವ ಸಂಬಂಧವೂ ಇಲ್ಲ. ಅರ್ಥವ್ಯವಸ್ಥೆ

ಒಂದು ತೀವ್ರ ಬಿಕ್ಕಟ್ಟಿನ ನಡುವೆಯೂ ಬೆಳವಣಿಗೆಯ ದರದ ಬಗ್ಗೆ ಸರ್ಕಾರ ಕೇಕೆ ಹಾಕುತ್ತದೆ ಮತ್ತು ಜಿಡಿಪಿಯನ್ನು ಹೆಚ್ಚಿಸುವ ಹೆಸರಿನಲ್ಲಿ ಈ ಸಂಕಷ್ಟವನ್ನು ನಿವಾರಿಸಲು ನಿರಾಕರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಜಿಡಿಪಿ-ಆರಾಧನೆ ಹಿಂದಿನ ಕಾಲದ ರಾಜ ಮಹಾರಾಜರ ಆಳ್ವಿಕೆಯಲ್ಲಿ ತಾರಕಕ್ಕೇರಿದ್ದ ಅಸಂಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ರಾಜ ಮಹಾರಾಜರುಗಳಲ್ಲಿ ಅನೇಕರು ಜನಗಳ ಬಿಟ್ಟಿದುಡಿಮೆಯನ್ನು ತಮಗಾಗಿ ಅರಮನೆಗಳನ್ನು ನಿರ್ಮಿಸಲು ಬಳಸಿಕೊಳ್ಳುತ್ತಿದ್ದರು. ಈ ಜನರ ಮೇಲೆ ಹೇರಿದ ದಬ್ಬಾಳಿಕೆಯು ಅಮಾನವೀಯವಾಗಿದ್ದರೂ ಸಹ, ಅಂತಹ ನಿರ್ಮಾಣವು ಉನ್ನತ ಜಿಡಿಪಿ ಬೆಳವಣಿಗೆಯ ದರವನ್ನು ದಾಖಲಿಸುತ್ತಿತ್ತು. ಹಾಗಾಗಿ, ಈ ಜಿಡಿಪಿ-ಆರಾಧಕರು ಬಿಟ್ಟಿ ಚಾಕರಿಯ ಬಗ್ಗೆ ಹೆಮ್ಮೆ ಪಡುವವರೇ. ಅಂತೆಯೇ, ಕೋಟಿಗಟ್ಟಲೆ ವೃದ್ಧರನ್ನು ನಾವು ಅಮಾನವೀಯ ಜೀವನ ಪರಿಸ್ಥಿತಿಗಳಿಗೆ ತಳ್ಳುತ್ತಿದ್ದೇವೆ. ಅವರಲ್ಲಿ ಕೇವಲ ಕೆಲವರಿಗಷ್ಟೇ ಕೇಂದ್ರ ಸರ್ಕಾರದಿಂದ ತಿಂಗಳಿಗೆ ತಲಾ 200 ರೂ. ವೃದ್ಧಾಪ್ಯ ಪಿಂಚಣಿ ಸಿಗುತ್ತದೆ. ಈ ನಿಕೃಷ್ಟ ಮೊತ್ತಕ್ಕೆ ಅವರು ತೃಪ್ತಿಪಟ್ಟುಕೊಳ್ಳಬೇಕು. ಅವರಿಗೆ ಒಂದು ಹೆಚ್ಚಿನ ಮೊತ್ತವನ್ನು ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದಲ್ಲ. ಅವರಿಗೆ ಲಭಿಸಬೇಕಾದ ಸಂಪನ್ಮೂಲಗಳು ಬಂಡವಾಳಗಾರರು ಮತ್ತು ಶ್ರೀಮಂತರ ಪಾಲಾಗುತ್ತವೆ. ಈ ಬಂಡವಾಳಗಾರರು ಜಿಡಿಪಿಯ ಬೆಳವಣಿಗೆಯನ್ನು ಹೆಚ್ಚಿಸುವ ಒಂದು ಹುಸಿ ವಾದವನ್ನು ಬಳಸಿಕೊಂಡು ಬಡವರಿಗೆ ಸೇರಬೇಕಿದ್ದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ. ಅರ್ಥವ್ಯವಸ್ಥೆ

ಇದನ್ನು ಓದಿ : ಕನಿಷ್ಠ ವೇತನಕ್ಕೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಕಾರ್ಮಿಕರ ಧರಣಿ

ಸಂಪನ್ಮೂಲಗಳ ಕೊರತೆಯಿಲ್ಲ

ಪಿಂಚಣಿಗಳಿಗೆ ಬೇಕಾಗುವ ಸಂಪನ್ಮೂಲಗಳ ಈ ಪ್ರಶ್ನೆಯನ್ನು ಸ್ವಲ್ಪ ಜಾಗರೂಕತೆಯಿಂದ ನೋಡೋಣ. ಉದಾಹರಣೆಗೆ, 2018-19ರಲ್ಲಿ, 60ವರ್ಷಕ್ಕಿಂತ ಹೆಚ್ಚು ವಯಸ್ಸಿನವರ ಸಂಖ್ಯೆಯು ಸುಮಾರು 13 ಕೋಟಿ ಇತ್ತು. ಅವರ ಜೀವನೋಪಾಯಕ್ಕೆ ತಿಂಗಳಿಗೆ ಸುಮಾರು 3000 ರೂಗಳ ತಲಾ ಪಿಂಚಣಿ ಅಗತ್ಯವಾಗುತ್ತದೆ. ಆ ವರ್ಷದಲ್ಲಿ ದೇಶದ ಒಟ್ಟು ರಾಷ್ಟ್ರೀಯ ವರಮಾನವು 187 ಲಕ್ಷ ಕೋಟಿ ರೂ.ಗಳಷ್ಟಿತ್ತು. ವಯಸ್ಸಾದ ಈ 13 ಕೋಟಿ ಜನರಿಗೆ ತಿಂಗಳಿಗೆ ತಲಾ 3000 ರೂಗಳ ಪಿಂಚಣಿಯನ್ನು ಪಾವತಿಸಲು ಬೇಕಾಗುವ ಹಣವೆಷ್ಟು ಎಂದರೆ, ಒಟ್ಟು ರಾಷ್ಟ್ರೀಯ ವರಮಾನದ ಶೇ. 2.5ರಷ್ಟು. ಈ ಹಣವನ್ನು ಸರ್ಕಾರ ಖರ್ಚು ಮಾಡುತ್ತದೆ. ಅದರಲ್ಲಿ ಒಂದು ಭಾಗ ಸರಕಾರಕ್ಕೆ ತೆರಿಗೆಯಾಗಿ ವಾಪಾಸು ಬರುತ್ತದೆ. ಅದನ್ನು ಮತ್ತೆ ಖರ್ಚು ಮಾಡಬಹುದು. ಪಿಂಚಣಿ ಪಡೆದವರು ಈ ಹಣವನ್ನು ಖರ್ಚುಮಾಡುತ್ತಾರೆ. ಅದರಲ್ಲಿಯೂ ಒಂದು ಭಾಗವು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ. ಅಂದರೆ, ಸರ್ಕಾರದ ಖರ್ಚುಗಳು ಉತ್ಪಾದನೆಗೆ ಕಾರಣವಾಗುತ್ತವೆ. ಉತ್ಪಾದನೆಯಿಂದ ವರಮಾನ ಬರುತ್ತದೆ. ವರಮಾನ ಖರ್ಚಾಗುತ್ತದೆ. ಖರ್ಚುಗಳಿಂದ ತೆರಿಗೆ ಬರುತ್ತದೆ. ಈ ಹಣ ಮತ್ತೆ ಖರ್ಚಾಗುತ್ತದೆ. ಈ ರೀತಿಯ ಬಹುಸುತ್ತಿನ ಚಟುವಟಿಕೆಗಳ ಪರಿಣಾಮವಾಗಿ, ಕಡಿಮೆ ಎಂದರೂ ಸರಕಾರ ಮಾಡಿದ ಖರ್ಚುಗಳ ಶೇ. 30ರಷ್ಟು ಹಣ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಮರಳುತ್ತದೆ ಎಂದಿಟ್ಟುಕೊಂಡರೆ, ಈ ಪಿಂಚಣಿಗಳಿಗಾಗಿ ಬೇಕಾಗುವ ಒಟ್ಟು ರಾಷ್ಟ್ರೀಯ ವರಮಾನದ ಶೇ. 2.5ರಷ್ಟು ಮೊತ್ತದ ಖರ್ಚುಗಳಿಗೆ, ಆರಂಭದಲ್ಲಿ ರಾಷ್ಟ್ರೀಯ ಒಟ್ಟು ವರಮಾನದ ಶೇ. 1.75ರಷ್ಟು ಮೊತ್ತದ ಬೇಡಿಕೆಯನ್ನು ಅರ್ಥವ್ಯವಸ್ಥೆಗೆ ತುಂಬಬೇಕಾಗುತ್ತದೆ. ಅರ್ಥವ್ಯವಸ್ಥೆ

ಶ್ರೀಮಂತರು ಹೆಚ್ಚು ತೆರಿಗೆಗಳನ್ನು ಪಾವತಿಸಿದಾಗ ಅವರು ತಮ್ಮ ಬಳಕೆಯನ್ನು ಹಿಡಿತಕ್ಕೊಳಪಡಿಸುವ ಅಗತ್ಯವಿರುವುದಿಲ್ಲ (ತೆರಿಗೆಗಳು ಯದ್ವಾ ತದ್ವಾ ಪ್ರಮಾಣದಲ್ಲಿದ್ದಾಗ ಮಾತ್ರ ಅವರಿಗೆ ತೊಂದರೆಯಾಗಬಹುದು) ಎಂದು ಊಹಿಸಿಕೊಳ್ಳುವುದು ಅವಾಸ್ತವಿಕವಾಗುವುದಿಲ್ಲ. ಆದ್ದರಿಂದ, ಮೇಲ್ತುದಿಯ ಕೇವಲ ಶೇ. 1ರಷ್ಟು ಮಂದಿ ಶ್ರೀಮಂತರ ಸಂಪತ್ತಿನ ಮೇಲೆ ಕೇವಲ ಶೇ. 1ರಷ್ಟು ತೆರಿಗೆ ವಿಧಿಸುವ ಮೂಲಕ ಈ ಪಿಂಚಣಿಗಳಿಗೆ ಬೇಕಾಗುವ ಹಣವನ್ನು ಆರಾಮವಾಗಿ ಸಂಗ್ರಹಿಸಬಹುದು. ಆದ್ದರಿಂದ, ಒಂದು ಸಾರ್ವತ್ರಿಕ, ದೇಣಿಗೆ-ರಹಿತ ಪಿಂಚಣಿ ಕಾರ್ಯಕ್ರಮವನ್ನು ಆರಂಭಿಸಲು ದೇಶದಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈಗಾಗಲೇ ಯಾವುದಾದರು ಒಂದು ಪಿಂಚಣಿ ಯೋಜನೆಯಲ್ಲಿರುವವರು (ಮತ್ತು 2018-19ರ ಬೆಲೆಗಳಲ್ಲಿ ತಿಂಗಳಿಗೆ 3000 ರೂಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವವರು) ಈ ಹೊಸ ಯೋಜನೆಯ ವ್ಯಾಪ್ತಿಯಿಂದ ತಾವಾಗಿಯೇ ಹೊರಗುಳಿಯುತ್ತಾರೆ. ಅರ್ಥವ್ಯವಸ್ಥೆ

2018-19ಕ್ಕೆ ಹೋಲಿಸಿದರೆ ಸಂಭಾವ್ಯ ಪಿಂಚಣಿದಾರರ ಸಂಖ್ಯೆಯು ಈಗ ಇನ್ನೂ ದೊಡ್ಡದಿರುತ್ತದೆ ಮತ್ತು ಹಣದುಬ್ಬರದ ಕಾರಣದಿಂದಾಗಿ ತಿಂಗಳಿಗೆ 3000ರೂಗಳ ಮೊತ್ತವನ್ನೂ ಸಹ ಹೆಚ್ಚಿಸಬೇಕಾಗುತ್ತದೆ ಎಂದು ಖಂಡಿತವಾಗಿಯೂ ಹೇಳಬಹುದು. ಮತ್ತು, ಈ ಎರಡೂ ಕಾರಣಗಳಿಂದಾಗಿ ಸರ್ಕಾರ ಮಾಡಬೇಕಾದ ಒಟ್ಟು ಖರ್ಚು ಬಹಳವಾಗಿ ಹೆಚ್ಚುವುದಿಲ್ಲವೇ? “ಇಲ್ಲ” ಎಂಬುದೇ ಉತ್ತರ. ಏಕೆಂದರೆ, ಈ ಅವಧಿಯಲ್ಲಿ, ನಿಜ ಬೆಳವಣಿಗೆ ಮತ್ತು ಬೆಲೆ ಏರಿಕೆಯು ರಾಷ್ಟ್ರೀಯ ವರಮಾನವನ್ನು ಹೆಚ್ಚಿಸಿದೆ. ವಾಸ್ತವವಾಗಿ, ಸಂಭಾವ್ಯ ಫಲಾನುಭವಿಗಳ ಸಂಖ್ಯೆಯು ನಿಜ ರಾಷ್ಟ್ರೀಯ ವರಮಾನದ ದರದಲ್ಲಿ ಹೆಚ್ಚದ ಕಾರಣ, ಅದೇ ಪ್ರಮಾಣದ “ನಿಜ” ಪಿಂಚಣಿಯನ್ನು (2018-19 ಬೆಲೆಯಲ್ಲಿ ತಿಂಗಳಿಗೆ ರೂ 3000) ಒದಗಿಸಲು ಬೇಕಾಗುವ ರಾಷ್ಟ್ರೀಯ ವರಮಾನದ ಅನುಪಾತವು ಕಡಿಮೆ ಇರುತ್ತದೆ. ಆದ್ದರಿಂದ, ಪಿಂಚಣಿಗಳ ಬಾಬ್ತು ಸರ್ಕಾರದ ಒಟ್ಟು ಖರ್ಚು ಹೆಚ್ಚುವುದಿಲ್ಲ. ಅರ್ಥವ್ಯವಸ್ಥೆ

ಇಂಥಹ ಒಂದು ಪಿಂಚಣಿ ಯೋಜನೆಯು ಮಾನವ ಘನತೆಯೊಂದಿಗೆ ಬದುಕಲು ವಯಸ್ಸಾದವರಿಗೆ ಸಹಾಯ ಒದಗಿಸುವುದರ ಹೊರತಾಗಿ ಇನ್ನೂ ಹೆಚ್ಚಿನ ಪ್ರಯೋಜನವನ್ನು ತರುತ್ತದೆ. ನವ-ಉದಾರವಾದಿ ಬಂಡವಾಳಶಾಹಿಯು ಅಧಿಕ-ಉತ್ಪಾದನೆಯ ಬಿಕ್ಕಟ್ಟನ್ನು ತಲುಪಿದೆ. ಇದರಿಂದ ಹೊರಬರಬೇಕಾದರೆ ಪ್ರಭುತ್ವದ ಖರ್ಚುಗಳಲ್ಲಿ ಏರಿಕೆಯಾಗಬೇಕಾಗುತ್ತದೆ. ಇದನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ತೆರಿಗೆಗಳನ್ನು ಹಾಕುವ ಮೂಲಕ ತುರ್ತಾಗಿ ಒದಗಿಸಿಕೊಳ್ಳಬೇಕಾಗುತ್ತದೆ. ಆದರೆ, ನವ-ಉದಾರವಾದವು ಹೆಚ್ಚಿನ ವಿತ್ತೀಯ ಕೊರತೆಯನ್ನು ಹೊಂದುವ ಮತ್ತು ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಎರಡೂ ಕ್ರಮಗಳನ್ನು ವಿರೋಧಿಸುತ್ತದೆ. ಹಾಗಾಗಿಯೇ, ನವ-ಉದಾರವಾದದ ಚೌಕಟ್ಟಿನೊಳಗೆ ಈ ಬಿಕ್ಕಟ್ಟಿಗೆ ಪರಿಹಾರವಿಲ್ಲ. ಈ ಸಂದರ್ಭದಲ್ಲಿ ಸಾರ್ವತ್ರಿಕ ದೇಣಿಗೆ-ರಹಿತ ಪಿಂಚಣಿ ಯೋಜನೆಯಂತಹ ಕ್ರಮಗಳು ಬಿಕ್ಕಟ್ಟನ್ನು ಪರಿಹರಿಸುತ್ತವೆ ಮತ್ತು ಒಂದು ಹೊಸ ವ್ಯವಸ್ಥೆಯ ಆಗಮನದ ಮುನ್ಸೂಚನೆಯಾಗುತ್ತವೆ. ಅರ್ಥವ್ಯವಸ್ಥೆ

ಇದನ್ನು ನೋಡಿ : ದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *