ಸಿಲೆಂಡರ್ ಕೊಳ್ಳಲು ಸರಕಾರದ ಬಳಿ ಹಣವಿಲ್ಲ – ಶಿಕ್ಷಕರ ಜೇಬಿಗೆ ಬೀಳುತ್ತಿದೆ ಕತ್ತರಿ!

ಗುರುರಾಜ ದೇಸಾಯಿ

ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸರ್ಕಾರ ರೂಪಿಸಿರುವ ಅಕ್ಷರ ದಾಸೋಹ ಯೋಜನೆಗೆ ಸೌಕರ್ಯಗಳ ಕೊರತೆ ಕಾಡುತ್ತಿದೆ. ಅವಶ್ಯಕವಾಗಿರುವ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಹಣ ವಿತರಣೆ ವಿಳಂಭವಾಗುತ್ತಿದ್ದು,  ಬಹಳಷ್ಟು ಶಾಲೆಗಳಿಗೆ ಇದು ತಲೆ ನೋವಾಗಿದೆ.  ಇದು ಹೇಗೆ ಮುಂದುವರೆದಲ್ಲಿ ಮಧ್ಯಾನ್ಹದ ಬಿಸಿ ಊಟದ ಯೋಜನೆಗೆ ಇನ್ನು ಕೆಲವೇ ದಿನಗಳಲ್ಲಿ ಗರ ಬಡಿಯುವ ಎಲ್ಲ ಲಕ್ಷಣಗಳು ಗೋಚರಿಸಿತ್ತಿವೆ.

ಸರಕಾರಿ ಶಾಲೆಗಳಿಗೆ ಇಂತಹದ್ದೊಂದು  ಹೀನಾಯ ಸ್ಥಿತಿಯನ್ನು ರಾಜ್ಯ ಸರಕಾರ ತಂದಿಟ್ಟಿದೆ.  ನವ ಉದಾರವಾದಿ ನೀತಿಯ ಪರಿಣಾಮವಾಗಿ ವಿದ್ಯಾರ್ಥಿ – ಶಿಕ್ಷಕರು ಶಿಕ್ಷೆ ಅನುಭವಿಸುವಂತಾಗಿದೆ.  ಗ್ಯಾಸ್ ಏಜೆನ್ಸಿಯವರಿಗೆ ಕೊಡಲು ಸರಕಾರದ ಬಳಿ ಹಣವಿಲ್ಲ. ಶಾಲಾ ಮಕ್ಕಳಿಗೆ ಅಡುಗೆ ಮಾಡುವುದನ್ನು ನಿಲ್ಲಿಸುವಂತಿಲ್ಲ. ಅಡುಗೆ ಮಾಡಲು ಸಿಲಿಂಡರ್ಗಳನ್ನು ಮುಖ್ಯ ಗುರುಗಳೇ ಹಣ ಕೊಟ್ಡು ಖರೀದಿಸಲೇ ಬೇಕಾದ ಪರಿಸ್ಥಿತಿ ಉಂಟಾಗಿದೆ.  ಸದ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕರಿಗೆ, ಶಿಕ್ಷಣ ಇಲಾಖೆಯು (ಅಕ್ಷರ ದಾಸೋಹ ಯೋಜನೆ) ನೀವೇ ಲಭ್ಯವಿರುವ ನಿಧಿ ಬಳಸಿ  ಗ್ಯಾಸ್‌, ಎಣ್ಣೆ, ಬೇಳೆ, ಉಪ್ಪು, ಸಕ್ಕರೆ ಖರೀದಿಸಿ, ಬಿಲ್‌ ಕೊಡುವಂತೆ ಹೇಳಿದೆ. ಕೆಲವು ಶಾಲೆಗಳಲ್ಲಿ ನಿಧಿ ಕೊರತೆಯಿಂದ ಶಿಕ್ಷಕರೇ ತಮ್ಮ ಜೇಬಿನಿಂದ ಖರ್ಚು ಮಾಡುವ ಪರಿಸ್ಥಿತಿ ಇದೆ

ಬಿಸಿಯೂಟದ ಲೆಕ್ಕಾಚಾರ ಏನು?: ರಾಜ್ಯ ಸರಕಾರ ಮಕ್ಕಳಿಗಾಗಿ ಕಡಿಮೆ ಹಣವನ್ನು ಖರ್ಚು ಮಾಡುತ್ತಿರುವುದು ಈ ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಗೆ ಕಾರಣವಾಗಿದೆ. ಮಕ್ಕಳ ವಯಸ್ಸಿನ ಆಧಾರದ ಮೇಲೆ ಸರಕಾರ ಒಂದು ದಿನಕ್ಕೆ ಇಂತಿಷ್ಟು ಹಣ ಎಂದು ನಿಗದಿಪಡಿಸಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ 4.97 ರೂಪಾಯಿ, 6ರಿಂದ 10 ನೇ ತರಗತಿಯ ಮಕ್ಕಳಿಗೆ 7.89 ರೂಪಾಯಿ ಹಣವನ್ನು ಸರ್ಕಾರ ನಿಗದಿಪಡಿಸಿದೆ. ಆದರೆ ಇದೀಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಸರ್ಕಾರ ನೀಡುವ ಹಣದಲ್ಲಿ ಮಕ್ಕಳಿಗೆ ರುಚಿಯಾದ ಊಟ ನೀಡುವುದು ಕಷ್ಟಕರವಾಗಿದೆ.

ಮಕ್ಕಳಿಗೆ ಅನ್ನ, ಸಾಂಬಾರ್‌, ಬಿಸಿಬೇಳೆ ಬಾತ್‌, ಉಪ್ಪಿಟ್ಟು, ಪಲಾವ್‌ ಸೇರಿದಂತೆ ವಿವಿಧ ಆಹಾರ ತಯಾರಿಸಬೇಕು. ಸರಕಾರ ನಿಗದಿಪಡಿಸಿದ ಹಣದಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ, ತರಕಾರಿ, ಎಣ್ಣೆ, ಸಾಂಬಾರ್‌ ಪುಡಿ, ಖಾರದ ಪುಡಿ, ಅಡುಗೆ ಅನಿಲದ ಜತೆಗೆ ಸಾರಿಗೆ ವೆಚ್ಚವೂ ಸೇರಿರುತ್ತದೆ. ಆದರೆ ತರಕಾರಿ ಹಾಗೂ ಆಹಾರ ಸಾಮಗ್ರಿ ಬೆಲೆಗಳು ಏರಿಕೆಯಾಗಿವೆ. ಹೀಗಾಗಿ ಸರಕಾರ ನೀಡುವ ಹಣದಲ್ಲಿ ಮಕ್ಕಳಿಗೆ ಊಟ ಹಾಕುವುದು ಸವಾಲಿನ ಕೆಲಸವಾಗಿದೆ. ಕಡಿಮೆ ಬೆಲೆಯ ಅಡುಗೆ ವಸ್ತುಗಳನ್ನು ಅಡುಗೆ ತಯಾರಕರು ತರಬೇಕು. ಇಲ್ಲದಿದ್ದರೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಳಸಬೇಕಾಗುತ್ತದೆ. ಹೀಗಾಗಿ ಮಕ್ಕಳಿಗೆ ಕೊಡುವ ಬಿಸಿಯೂಟ ಸಪ್ಪೆಯಾಗುತ್ತಿದೆ.

ಒಂದು ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದರೆ, ಆ ಶಾಲೆಗೆ ನಾಲ್ಕು ದಿನಕ್ಕೆ ಒಂದು ಅನಿಲ ಸಿಲಿಂಡರ್‌ ಬೇಕಾಗುತ್ತದೆ. ಆದರೆ, ಸರಕಾರ ಪೂರೈಕೆ ಮಾಡುತ್ತಿರುವುದು ತಿಂಗಳಿಗೆ 4 ಸಿಲಿಂಡರ್‌ ಮಾತ್ರ. ಎಷ್ಟೋಬಾರಿ ಶಿಕ್ಷಕರು ಕಾಳಸಂತೆಯಲ್ಲಿ ಸಿಲಿಂಡರ್‌ ತಂದು ಅಡುಗೆ ಮಾಡಿಸಿದ ಉದಾಹರಣೆಗಳಿವೆ. ಪಾಠದ ಜೊತೆ ಎರಡು ದಿನಕ್ಕೊಮ್ಮೆ ಅಡುಗೆ ಅನಿಲದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುವ ಸ್ಥಿತಿ ಈಗ ಶಿಕ್ಷಕರದ್ದಾಗಿದೆ. ಇಲಾಖೆ ಹಾಗೂ ಅಧಿಕಾರಿಗಳ ಆಡಳಿತ ವ್ಯವಸ್ಥೆಯಲ್ಲಿನ ಲೋಪವೇ ಇಡೀ ಸಮಸ್ಯೆಗೆ ಕಾರಣವಾಗಿದೆ. ಅಧಿಕಾರಿಗಳು ತ್ವರಿತ ಸ್ಪಂದನೆ ಮಾಡಿ ಸಮಸ್ಯೆ ಪರಿಹರಿಸುವ ಬದಲು ಯಾವುದೇ ಕಾರಣಕ್ಕೂ ಬಿಸಿಯೂಟ ಸ್ಥಗಿತಗೊಳ್ಳುವಂತಿಲ್ಲ ಎಂದು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಾಕೀತು ಮಾಡುತ್ತಿದ್ದಾರೆ.

ಗ್ಯಾಸ್‌ ಏಜೆನ್ಸಿಗಳಿಗೆ ಪಾವತಿಯಾಗದ ಹಣ : ಮಧ್ಯಾನ್ಹದ ಬಿಸಿ ಊಟ ಯೋಜನೆಯ ಅಡಿಯಲ್ಲಿ ಪ್ರತಿ  ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ  ಶಾಲೆಗಳಿಗೆ ವಿತರಿಸಿದ ಸಿಲೆಂಡರ್ಗಳ ಬಾಕಿ ಮೊತ್ತವನ್ನು ಸರಕಾರ ಗ್ಯಾಸ್ ಏಜೆನ್ಸಿ ಅವರಿಗೆ ಕೊಟ್ಟೇ ಇಲ್ಲ ಎನ್ನಲಾಗುತ್ತಿದೆ. ಪ್ರತಿ ತಾಲೂಕಿನ ಗ್ಯಾಸ್ ಏಜೆನ್ಸಿಯವರಿಗೆ ಸರಕಾರ ಕನಿಷ್ಠ ಏನಿಲ್ಲವೆಂದರೂ 40 ರಿಂದ 50 ಲಕ್ಷ ರೂಪಾಯಿಗಳನ್ನು ಪಾವತಿಸದೇ ಬಾಕಿ ಇಟ್ಡಿದೆ ಎನ್ನಲಾಗಿದೆ. ಈ ಕುರಿತು ಕೆಲ ಜಿಲ್ಲೆಗಳ ಏಜೆನ್ಸಿಯವರ ಜೊತೆ ಮಾತನಾಡಿದಾಗ, “ ಹೌದು ಸರ್‌ ಬಾಕಿ ಉಳಿಸಿಕೊಂಡಿದ್ದಾರೆ, ಮೂರ್ನಾಲ್ಕು ತಿಂಗಳಲ್ಲಿ ಬಿಲ್‌ ಮಾಡುತ್ತೇವೆ ಎಂದು ಹೇಳುತ್ತಾರೆ. ಅಲ್ಲಿಯವರೆಗೆ ನಮ್ಮ ಕತೆ ಕೇಳುವವರು ಯಾರು? ಹಣ ಕೊಡದೆ ಹೋದರೆ ಸರಬರಾಜು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಹಾಗಾಗಿ,  ಸರಕಾರಿ ಶಾಲೆಗಳಿಗೆ ಮಧ್ಯಾನ್ಹದ ಬಿಸಿ ಊಟದ ಯೋಜನೆಯ ಅನುಷ್ಠಾನಕ್ಕೆ ಕೊಡಲಾಗುತ್ತಿದ್ದ ಸಿಲೆಂಡರ್ಗಳನ್ನು ಇನ್ನು ಮುಂದೆ ಕೊಡಲು ಆಗುವುದಿಲ್ಲ. ಸಿಲಿಂಡರ್ ಬೇಕೆಂದಾದಲ್ಲಿ ಮುಖ್ಯ ಶಿಕ್ಷಕರು ಪ್ರತಿ ಸಿಲೆಂಡರ್ಗೆ ಕನಿಷ್ಠ ಏನಿಲ್ಲವೆಂದರೂ 1100 ರೂಪಾಯಿಗಳನ್ನು ಪಾವತಿಸಿಯೇ ಖರೀದಿ ಮಾಡಬೇಕು ಇಲ್ಲವಾದಲ್ಲಿ ಬಿಟ್ಟುಕೊಳ್ಳಲಿ ನಮಗೇನು? ಎಂದು ಏಜೆನ್ಸಿಯವರು ಖಡಕ್ಕಾಗಿ ಹೇಳುತ್ತಿದ್ದಾರೆ.

ಮಧ್ಯಾನ್ಹದ ಬಿಸಿ ಊಟದ ಯೋಜನೆಯ ಅನುಷ್ಠಾನಕ್ಕೆ ಇರುವ ಬ್ಯಾಂಕ್ ಖಾತೆಗಳಲ್ಲಿ ಕೆಲವೇ ಕೆಲವು ಶಾಲೆಗಳಲ್ಲಿ ಸ್ವಲ್ಪ ಪ್ರಮಾಣದ ಹಣ ಇದ್ದು, ಆ  ಹಣವನ್ನು ಬಳಸಿ ಸಿಲಿಂಡರ್ ಖರೀದಿಸುವಂತೆ ಕೆಲವು ಸಹಾಯಕ ನಿರ್ದೇಶಕರು ತಮ್ಮ ವ್ಯಾಪ್ತಿಯ ಮುಖ್ಯ ಗುರುಗಳಿಗೆ ಮೌಖಿಕ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಖಾತೆಯಲ್ಲಿ ಹಣವೇ ಇಲ್ಲದ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸಂಬಳದ ಹಣದಿಂದಲೇ ಸಿಲಿಂಡರ್ ಖರೀದಿದಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಮುಖ್ಯ ಗುರುಗಳು ತಿಳಿಸಿದ್ದಾರೆ.

ಈ ಕುರಿತು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ಪ್ರತಿಕ್ರಿಯಿಸಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಜೆಟ್‌ನಲ್ಲಿ ಹಣ ಮೀಸಲಿಡದಿರುವುದು ಕಾರಣವಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಬೀಗುವವರಿಗೆ ಬಡವರ ಮಕ್ಕಳೆಂದರೆ ಚೆಲ್ಲಾಟವಾಗಿದೆ. ಅಡುಗೆ ಅನಿಲಕ್ಕೂ ಇವರ ಬಳಿ ದುಡ್ಡು ಇಲ್ಲ, ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ವೇತನ ನೀಡಲು ಹಣವಿಲ್ಲ. ಪ್ರತಿಯೊಂದಕ್ಕೂ ಬಜೆಟ್‌ ಕೊರತೆಯ ನೆಪ ಒಡ್ಡುತ್ತಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಸರಕಾರ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಪರಿಸ್ಥಿತಿ ಮುಂದುವರೆದರೆ ಬಿಸಿಯೂಟದ ಬದಲಾಗಿ ಮಕ್ಕಳು ಹಸಿಯೂಟ ಸೇವಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಸರಕಾರ ಇಂತಹ ಸ್ಥಿತಿಗೆ ಅವಕಾಶ ನೀಡಿದೆ ಅಡುಗೆ ಅನಿಲವನ್ನು ಸಮರ್ಪಕವಾಗಿ ವಿತರಿಸಬೇಕು. ಏಜೆನ್ಸಿದಾರರ ಬಾಕಿ ಹಣವನ್ನು ಹಾಗೂ ಅಡುಗಾದಾರರ ಗೌರವಧನವನ್ನು ಬಿಡುಗಡೆ ಮಾಡುವ ಮೂಲಕ ಮಕ್ಜಳಿಗೆ ಮಧ್ಯಾನ್ಹ ಬಿಸಿ ಊಟ ನಿರಂತರವಾಗಿ ಸಿಗುವಂತೆ ಆಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *