ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿರುವ ಬಿಹಾರ ಆಡಳಿತ ರೂಢ ಮಹಾಘಟಬಂಧನ್ ಮೈತ್ರಿ ಕೂಟ ‘ಯಾವ ರಾಜನೂ ಶಾಶ್ವತವಲ್ಲ’ ಎಂದು ಮಂಗಳವಾರ ಹೇಳಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೂ ‘ರಾಜಕೀಯ ಭಾಷಣ’ ಮಾಡಿದ ಪ್ರಧಾನಿ ಮೋದಿಯನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ತೀವ್ರವಾಗಿ ಟೀಕಿಸಿದ್ದಾರೆ.
“ಸ್ವಾತಂತ್ರ್ಯ ದಿನದಂದು ಅವರು ರಾಜಕೀಯ ಮಾಡಬಾರದಿತ್ತು. ಯಾವ ರಾಜನೂ ಶಾಶ್ವತವಲ್ಲ. ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಪ್ರಧಾನಿ ಹೇಳಿರುವುದು ಅವರ ದುರಹಂಕಾರವನ್ನು ಬಿಂಬಿಸುತ್ತದೆ. ದರ್ಭಾಂಗ ಏಮ್ಸ್ ಬಗ್ಗೆಯೂ ಅವರು ತಪ್ಪು ಹೇಳಿಕೆ ನೀಡಿದ್ದಾರೆ. ಅವರು ಯಾರಿಗೂ ಗೌರವ ನೀಡುತ್ತಿಲ್ಲ ಎಂಬುದು ಅವರ ತಪ್ಪಾಗಿದೆ” ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷವು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತೇನೆ : ಪ್ರಧಾನಿ ಮೋದಿ
ಪ್ರಧಾನಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದರೆ ನಂತರ ಪಕ್ಷಕ್ಕೆ ಅಜಿತ್ ಪವಾರ್ ಅವರನ್ನೂ ಸ್ವಾಗತಿಸುತ್ತಾರೆ ಎಂದು ತೇಜಸ್ವಿ ಯಾದವ್ ಹೇಳಿದರು.
ಜೆಡಿಯು ಅಧ್ಯಕ್ಷ ಲಾಲನ್ ಸಿಂಗ್ ಅವರು ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದಕ್ಕೆ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡು, “ಪ್ರಧಾನಿ ವಿರೋಧ ಪಕ್ಷಗಳ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ತಮ್ಮ ಪಕ್ಷದತ್ತ ನೋಡುತ್ತಿಲ್ಲ. ಹಲವಾರು ಬಿಜೆಪಿ ನಾಯಕರು ರಾಜಕೀಯ ಕುಟುಂಬಗಳಿಂದ ಬಂದವರು. ಅವರ ಬಗ್ಗೆ ಏಕೆ ಮೌನ ವಹಿಸಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿಯವರು ಭ್ರಷ್ಟಚಾರ ರಹಿತ ಸರ್ಕಾರದ ಬಗ್ಗೆ ಸದಾ ಜಂಬ ಕೊಚ್ಚಿಕೊಳ್ಳುತ್ತಾರೆ ಆದರೆ ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಏಕೆ ನೋಡುತ್ತಿಲ್ಲ ಎಂದು ಲಾಲನ್ ಸಿಂಗ್ ಹೇಳಿದ್ದಾರೆ. “ಅವರು ಎನ್‌ಸಿಪಿಯ 70 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಎನ್‌ಸಿಪಿ ನಾಯಕರು ಎನ್‌ಡಿಎಗೆ ಸೇರಿ ಮಹಾರಾಷ್ಟ್ರ ಸರ್ಕಾರದ ಭಾಗವಾದ ನಂತರ ಅದರ ಬಗ್ಗೆ ಈಗ ಮೌನವಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಹೋರಾಟದ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?! Janashakthi Media