ನವದೆಹಲಿ: ಹಿಂಸಾಚಾರ ಪ್ರಕರಣದ ಆರೋಪಿಗಳ ಮನೆಗಳನ್ನು ಅಕ್ರಮವಾಗಿ ನೆಲಸಮಗೊಳಿಸುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಕಟ್ಟಡ ನೆಲಸಮಗೊಳಿಸುವ ಕ್ರಮವು ಕಾನೂನಿನ ಪ್ರಕಾರವೇ ಇರಬೇಕು’ಎಂದು ಹೇಳಿದೆ.
ಬಿಜೆಪಿ ಪಕ್ಷದಿಂದ ಅಮಾನತ್ತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಉತ್ತರ ಪ್ರದೇಶ ಒಳಗೊಂಡು ದೇಶದ ವಿವಿಡೆದೆ ನಡೆದ ಪ್ರತಿರೋಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
“ಎಲ್ಲವೂ ನ್ಯಾಯಯುತವಾಗಿರಬೇಕು” ಮತ್ತು ಅಧಿಕಾರಿಗಳು ಕಾನೂನಿನಡಿ ಸರಿಯಾದ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಇಂದು(ಜೂನ್ 16) ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವಾರ ಹಿಂಸಾಚಾರದಲ್ಲಿನ ಆರೋಪಿಗಳ ಮನೆಗಳನ್ನು ಕಾನೂನುಬಾಹಿರವಾಗಿ ಕೆಡವಲಾಗಿದೆ ಎಂದು ಆರೋಪಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಸರ್ಕಾರ ಹಾಗೂ ಪ್ರಯಾಗ್‌ರಾಜ್ ಮತ್ತು ಕಾನ್ಪುರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಗ್ಗೆ 3 ದಿನಗಳಲ್ಲಿ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಅನಧಿಕೃತ ಕಟ್ಟಡಗಳ ತೆರವಿಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ ತೆರವಿಗೆ ಮುನ್ನ ಕಟ್ಟಡಗಳ ದಾಖಲೆ ಪರಿಶೀಲಿಸಬೇಕು. ಕಾನೂನಿನ ಅನುಸಾರವಾಗಿ ಕ್ರಮಕೈಗೊಳ್ಳುವಂತೆ ಸೂಚಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕಟ್ಟಡದ ಅನಧಿಕೃತ, ಅಧಿಕೃತದ ಬಗ್ಗೆ ಖಚಿತಪಡಿಸಿಕೊಳ್ಳಲು ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಕಾನ್ಪುರ ಮತ್ತು ಪ್ರಯಾಗ್‌ರಾಜ್ ನಾಗರಿಕ ಅಧಿಕಾರಿಗಳ ಪರವಾಗಿ ಪ್ರತಿನಿಧಿಸುವ ಹಿರಿಯ ವಕೀಲ ಹರೀಶ್ ಸಾಳ್ವೆ, ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. 2020 ರ ಆಗಸ್ಟ್ ತಿಂಗಳಿನಲ್ಲಿ ನೀಡಿದ ಆದೇಶ ಪತ್ರದ ಆಧಾರದ ಮೇಲೆ ನೆಲಸಮ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಯು ಸಿಂಗ್, ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರ ವಿರುದ್ಧ ಮಾತ್ರವೇ ಕ್ರಮ ಕೈಗೊಳ್ಳಲು ಬುಲ್ಡೋಜರ್ ಬಳಸಲಾಗಿದೆ. ಪದೇ ಪದೇ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಿರುತ್ತವೆ. ಆದ್ದರಿಂದ ಕಟ್ಟಡಗಳನ್ನು ಧ್ವಂಸಗೊಳಿಸುವುದು ಆಘಾತಕಾರಿ ಮತ್ತು ಭಯಾನಕವಾಗಿದೆ ಎಂದು ಸಿಂಗ್ ವಾದಿಸಿದರು. ಈ ಕಟ್ಟಡಗಳು ತುರ್ತುಪರಿಸ್ಥಿತಿಯ ಕಾಲದಲ್ಲಾಗಲೀ, ಸ್ವಾತಂತ್ರ್ಯಪೂರ್ವದಲ್ಲಿಯಾಗಲೀ ನಿರ್ಮಿಸಿಲ್ಲ. ಇವು 20 ವರ್ಷಗಳಿಗೂ ಹೆಚ್ಚು ಕಾಲ ನಿಂತಿರುವ ಮನೆಗಳಾಗಿದ್ದು, ಕೆಲವೊಮ್ಮೆ ಆರೋಪಿಗಳಿಗೂ ಸೇರಿರುವುದಿಲ್ಲ. ಅವರ ವಯಸ್ಸಾದ ಪೋಷಕರಿಗೆ ಸೇರಿರುತ್ತವೆ ಎಂದು ವಾದಿಸಿದರು.
ರಾಜ್ಯದಲ್ಲಿ ಇತ್ತೀಚಿನ ಹಿಂಸಾಚಾರದ ಆರೋಪಿತರ ಆಸ್ತಿಗಳನ್ನು ಮುಂದೆಯೂ ಧ್ವಂಸಗೊಳಿಸದಂತೆ ಖಚಿತಪಡಿಸಿಕೊಳ್ಳಲು ಜಮಾಯತ್ ಉಲಮಾ ಐ ಹಿಂದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮನೆಗಳ ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿತ್ತು.
ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆ ಎಂಬ ಭಾವನೆ ನಾಗರಿಕರಲ್ಲಿ ಇರಬೇಕು ಎಂದು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರ ರಜಾಕಾಲದ ಪೀಠವು ಮುಂದಿನ ಮಂಗಳವಾರ(ಜೂನ್ 21)ಕ್ಕೆ ವಿಚಾರಣೆಗೆ ಮುಂದೂಡಿದೆ.