ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಪೌಲ್ ಪರ ವಕೀಲರು ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ. ಅಮೃತ್ ಪೌಲ್ ವಿರುದ್ಧ ಆರೋಪ ಬಂದ ಬಂತರ ಅವರನ್ನು ಬಂಧಿಸಲಾಗಿತ್ತು ಹಾಗೂ ಅಧಿಕಾರದಿಮದ ಅಮಾನತುಗೊಳಿಸಲಾಗಿತ್ತು.
“ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ಓಎಂಆರ್ ಶೀಟ್‌ಗಳನ್ನು ಇಟ್ಟಿದ್ದ ಸ್ಟ್ರಾಂಗ್ ರೂಮ್‌ನ ಮತ್ತೊಂದು ಕೀ ನೇಮಕಾತಿ ವಿಭಾಗದಲ್ಲಿ ಸಹಾಯಕ ಆಡಳಿತಾತ್ಮಕ ಅಧಿಕಾರಿ ಸುನೀತಾ ಬಾಯಿ ಅವರ ಬಳಿ ಇತ್ತು. ಆದರೆ, ಇಲ್ಲಿ ಆಕೆಯನ್ನು ಸಾಕ್ಷಿಯಾಗಿ ಪರಿಗಣಿಸಿ, ನನ್ನನ್ನು ಆರೋಪಿ ಮಾಡಲಾಗಿದೆ. ನನ್ನ ವಿರುದ್ಧದ ಯಾವುದೇ ಆರೋಪಕ್ಕೆ ಸಾಕ್ಷಿ ಇಲ್ಲ. ಬದಲಿಗೆ ಇರುವುದು ಬರೀ ಹೇಳಿಕೆಗಳಷ್ಟೇ” ಎಂದು ಅಮೃತ್ ಪೌಲ್ ಪರವಾಗಿ ಅವರ ವಕೀಲ ನ್ಯಾಯಾಲಯದಲ್ಲಿ ವಾದಿಸಿದ್ದಾರೆ ಎಂದು barandbench ವರದಿ ಹೇಳಿದೆ.
ಇದನ್ನೂ ಓದಿ: ಪಿಎಸ್‌ಐ ಅಕ್ರಮ: ಮಧ್ಯವರ್ತಿ ಗಣಪತಿ ಭಟ್ ಶವವಾಗಿ ಪತ್ತೆ
ಅಮೃತ್ ಪೌಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಮಂಗಳವಾರವೂ ಮುಂದುವರಿಸಿತ್ತು. ಸುಮಾರು ಒಂದು ತಾಸು ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
545 ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧನಕ್ಕೀಡಾಗಿದ್ದ ಅಮೃತ್ ಪೌಲ್ ಅವರು ಮೂಲತಃ ಪಂಜಾಬ್‌ವರಾಗಿದ್ದಾರೆ. 1995ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೌಲ್, 2000ದಿಂದ 2003ರವರೆಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಗಿ ಕೆಲಸ ಮಾಡಿ, ಆ ನಂತರ 2018ರಲ್ಲಿ ಸೆಂಟ್ರಲ್ ರೇಂಜ್ ಐಜಿಯಾಗಿ ನೇಮಕ ಆಗಿದ್ದರು.
ಎಡಿಜಿಪಿ ಅಮೃತ್ ಪೌಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ 1.36 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದೆ. ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ಆರೋಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಪೌಲ್ ಅವರನ್ನು ಕಳೆದ ಜುಲೈ 4ರಂದು ಸಿಐಡಿ ಅಧಿಕೃತವಾಗಿ ಬಂಧಿಸಿತ್ತು.
ಇದನ್ನೂ ಓದಿ: ಯುವ ವಕೀಲನ ಮೇಲೆ ದೌರ್ಜನ್ಯ ಆರೋಪ: ಪಿಎಸ್‌ಐ ಸುತೇಶ್ ಅಮಾನತು
ಹಗರಣದಲ್ಲಿ ಪೌಲ್ ಸೇರಿದಂತೆ 79 ಜನರನ್ನು ಬಂಧಿಸಿರುವ ಸಿಐಡಿ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿತ್ತು. 2021ರ ಅಕ್ಟೋಬರ್‌ನಲ್ಲಿ ನೇಮಕಾತಿ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಪಿಎಸ್‌ಐ ಪರೀಕ್ಷೆಗಳು ನಡೆದಿದ್ದವು. ಹಗರಣ ಹೊರಬಿದ್ದ ಕೂಡಲೇ ಸರ್ಕಾರವು ಪೌಲ್‌ನನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಿತ್ತು.
545 ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಭ್ರಷ್ಟಾಚಾರ ಮಾಡಿಸಿದ್ದಾರೆ ಎಂಬ ಆರೋಪವಿದೆ.