ಬೆಂಗಳೂರು : ಬಿಜೆಪಿಯ ಯಾವ ಶಾಸಕರೂ ಸತ್ತು ಹೋಗಿರುವ ಕಾಂಗ್ರೆಸ್ ಜೊತೆ ಹೋಗಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿದ್ದಾರೆ.
ಧರ್ಮಸ್ಥಳದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಪೂರ್ವಭಾವಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ದೇಶದ ರಕ್ಷಣೆ ಮಾಡುವ ಮತ್ತು ಸಂಘಟನೆ ಇರುವ ಬಿಜೆಪಿ ದೇಶದೆಲ್ಲೆಡೆ ಯಶ ಪಡೆಯುತ್ತಿದೆ. ಯಾರು ತಾನೇ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಇಷ್ಟ ಪಡುತ್ತಾರೆ? ಈಶಾನ್ಯ ರಾಜ್ಯಗಳ 180 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು 7 ಸ್ಥಾನ ಮಾತ್ರ. ಬಿಜೆಪಿ ಮೂರೂ ಕಡೆ ಅಧಿಕಾರಕ್ಕೆ ಬಂದಿದೆ ಎಂದರು.
ಇದನ್ನೂ ಓದಿ : ಬಿಜೆಪಿ ಮನೆ ತುಂಬೆಲ್ಲ ಹಗರಣ
ಅವರು ಬರ್ತಾರೆ, ಇವರು ಬರ್ತಾರೆ ಎಂದು ಕಾಂಗ್ರೆಸ್ಸಿನವರು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಎಂಎಲ್‍ಎಗಳು ಬರ್ತಾರೋ? ನಾಯಕರು ಬರ್ತಾರೋ ನೋಡೋಣ. ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹೋಗ್ತಾರೋ ಎಂಬ ಪ್ರಶ್ನೆಗೆ ಭವಿಷ್ಯವೇ ಉತ್ತರ ಕೊಡಲಿದೆ ಎಂದು ತಿಳಿಸಿದರು.
ಬಿಜೆಪಿ ಅಸೆಂಬ್ಲಿ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯಲು ವಿಜಯ ಸಂಕಲ್ಪ ಯಾತ್ರೆಯಿಂದ ಲಾಭ ಆಗಲಿದೆ. ನಿನ್ನೆ ಸುಳ್ಯ, ಪುತ್ತೂರಿನಲ್ಲಿ ಯಾತ್ರೆ ನಡೆದಿದೆ. ಇವತ್ತು ಬೆಳ್ತಂಗಡಿಯಲ್ಲಿ ಯಾತ್ರೆ ನಡೆಯಲಿದೆ. ಯಾತ್ರೆಗೆ ನಿರೀಕ್ಷೆಗೆ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವ, ಅಭಿವೃದ್ಧಿ ಕಾರ್ಯಗಳು ಮತ್ತು ಸಂಘಟನೆಯ ಶಕ್ತಿಯಿಂದ ಜನಸಾಮಾನ್ಯರಿಗೆ ಸ್ಪಂದಿಸುವುದು, ದೇಶದ ರಕ್ಷಣೆ, ಸಂಸ್ಕೃತಿಯನ್ನು ಕಾಪಾಡುವಿಕೆ ಬಿಜೆಪಿಯಿಂದಲೇ ಸಾಧ್ಯ ಎಂಬ ನಂಬಿಕೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.