ಉಡುಪಿ: ಕೋವಿಡ್ ಸಾಂಕ್ರಾಮಿಕತೆ ಹರಡದಂತೆ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ವಾರಾಂತ್ಯ ಕರ್ಫ್ಯೂ ಘೋಷಿಸಿದೆ, ಜನ ಸಾಮಾನ್ಯರ ಅಂಗಡಿ ಮುಗ್ಗಟ್ಟನ್ನು ಮುಚ್ಚಿಸಿದೆ. ಇನ್ನೊಂದೆಡೆ ರಥ ಬೀದಿಯಲ್ಲಿ ಭಾರೀ ಜನಸ್ತೋಮದೊಂದಿಗೆ ರಥೋತ್ಸವ ನಡೆಯುತ್ತಿದೆ.
ಮಕರ ಸಂಕ್ರಮಣದಂದು ಉಡುಪಿ ಶ್ರೀಕೃಷ್ಣನ ಪ್ರತಿಷ್ಠೆಯ ಸಂಸ್ಮರಣೆಗಾಗಿ ಸಂಕ್ರಮಣದ ಮರುದಿನ ಹಗಲು ಬ್ರಹ್ಮ ರಥೋತ್ಸವ, ಚೂರ್ಣೋತ್ಸವದೊಂದಿಗೆ ಸಪ್ತೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ಈ ಮೂಲಕ ಸರಕಾರದ ಕೋವಿಡ್ ನಿಯಮಾವಳಿ ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜನ ಸಂಚಾರ ವಿರಳವಾಗಿರುವುದರಿಂದ ಹೆಚ್ಚಿನ ಬಸ್ಗಳು ರಸ್ತೆಗೆ ಇಳಿದಿಲ್ಲ. ಆದರೆ ಬೆಳಗ್ಗೆ ರಥಬೀದಿಯಲ್ಲಿ ನಡೆದ ಹಗಲು ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ಕಂಡುಬಂತು. ವಾರಾಂತ್ಯ ಕರ್ಫ್ಯೂ ಜಾರಿಯ ಮಧ್ಯೆ ಇಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದು ಮತ್ತು ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ಹಿಂಡುಹಿಂಡಾಗಿ ಜನ ನೆರೆದಿರುವುದು ಸರಕಾರದ ಕೋವಿಡ್-19 ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿಭಟನೆ, ಮೆರವಣಿಗೆ, ಸಮಾವೇಶಗಳು ನಡೆಯದಂತೆ ಕ್ರಮವಹಿಸಬೇಕಾದ ಸರಕಾರ ಇಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಜಿಲ್ಲಾಡಳಿತ ಈ ವಿಚಾರದಲ್ಲಿ ದಿವ್ಯ ಮೌನಕ್ಕೆ ಶರಣಾಗಿದೆ. ಜನರು ಅಂಗಡಿ ಮುಗ್ಗಟ್ಟು ತೆರೆಯದಂತೆ ನಿಯಮ ರೂಪಿಸಿದರೆ, ಇಲ್ಲಿ ಜನ ಸೇರಿ ರಥೋತ್ಸವ ಮಾಡಬಹುದೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದೀಗ ಇಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪ್ರಕರಣ ದಾಖಲಾಗಬಹುದೇ ಎಂಬುವುದನ್ನು ಕಾದು ನೋಡಬೇಕಾಗಿದೆ.