ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಬಿಸಿಯೂಟ ತಯಾರಿಸುವ ಮಹಿಳಾ ನೌಕರರು ಲಕ್ಷಾಂತರ ಸಂಖ್ಯೆಯಲ್ಲಿ ರಾಜ್ಯದಲ್ಲಿದ್ದಾರೆ. ಸದ್ಯ ಈ ಯೋಜನೆಯಲ್ಲಿ ದುಡಿಯುತ್ತಿದ್ದ ಸುಮಾರು 6,500ಕ್ಕೂ ಹೆಚ್ಚಿನ ನೌಕರರನ್ನು 60 ವರ್ಷ ವಯಸ್ಸಾಗಿದೆ ಎಂದು ಯಾವ ಪರಿಹಾರವನ್ನು ವಿತರಣೆ ಮಾಡದೇ ವಜಾಗೊಳಿಸಿರುವ ಕ್ರಮದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದೆ.
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಇಂದಿನಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿಯಲ್ಲಿ ಕುಳಿತಿದ್ದಾರೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ ಮಾತನಾಡಿ, ಸರ್ಕಾರಿ ಯೋಜನೆಯ ಜಾರಿಯ ಭಾಗವಾಗಿ ಕೆಲಸಗಾರರನ್ನಾಗಿ ನೇಮಕ ಮಾಡಿಕೊಂಡರು. ಇಷ್ಟು ವರ್ಷಗಳ ಕಾಲ ದುಡಿಮೆ ಮಾಡಿಕೊಂಡು ಬಂದ ನೌಕರರಿಗೆ 60 ವರ್ಷ ವಯಸ್ಸಾಗಿದೆ ಎಂದು ಏಕಾಏಕಿಯಾಗಿ ಸೇವೆಯಿಂದ ಕಿತ್ತು ಹಾಕಿರುವ ರಾಜ್ಯ ಸರ್ಕಾರದ ನಡೆ ಅಮಾನವೀಯವಾದದ್ದು. ನಿವೃತ್ತಗೊಂಡ ಎಲ್ಲಾ ನೌಕರರಿಗೆ ರಾಜ್ಯ ಸರ್ಕಾರ ಕನಿಷ್ಠ 1 ಲಕ್ಷ ರೂಪಾಯಿಗಳ ಇಡಿಗಂಟು(ಪರಿಹಾರ) ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರಿಗೆ ನಿವೃತ್ತಿ ಹೆಸರಿನಲ್ಲಿ ಅಮಾನವೀಯತೆ: ಅಕ್ಷರ ದಾಸೋಹ ನೌಕರರ ಮುಷ್ಕರ
ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದು ಶೈಕ್ಷಣಿಕ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಈ ಯೋಜನೆಯಲ್ಲಿ ಯಾವುದೇ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಬಾರದು. ನಮ್ಮ ರಾಜ್ಯ ಶಿಕ್ಷಣ ಇಲಾಖೆಯ ಶಿಫಾರಸಿನಂತೆ ₹6000 ಮತ್ತು ₹5000 ಹೆಚ್ಚಳ ಮಾಡಬೇಕು. ಬೇಸಿಗೆ ಮತ್ತು ದಸರಾ ರಜೆಗಳನ್ನು ವೇತನ ಸಹಿತ ಪರಿಗಣಿಸಿ ವಿತರಿಸಬೇಕೆಂದು ಹೇಳಿದರು.
ಅಕ್ಷರ ದಾಸೋಹ ಯೋಜನೆ 2001-2002ರ ಸಾಲಿನಿಂದ ಜಾರಿಯಲ್ಲಿದೆ. ಯೋಜನೆಗೆ ಜಾರಿಗಾಗಿ ಯಾವ ಷರತ್ತುಗಳನ್ನು ವಿಧಿಸದೆ ಸುಮಾರು 1 ಲಕ್ಷ 19 ಸಾವಿರ ನೌಕರರು ನೇಮಕ ಮಾಡಿಕೊಳ್ಳಲಾಯಿತು. ಈಗಾಗಲೇ ಯಾವ ಸೌಲಭ್ಯ ವಿತರಣೆ ಮಾಡದೇ, 60 ವರ್ಷ ಮೇಲ್ಪಟ್ಟವರನ್ನು ನಿವೃತ್ತಗೊಳಿಸುತ್ತಾ ಹೋದರೆ, ಬಿಸಿಯೂಟ ನೌಕರರ ಭವಿಷ್ಯ ಅತಂತ್ರವಾಗಲಿದೆ.
2022ರ ಮಾರ್ಚ್ 31ರಂದು ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆ ಬದಲಾಯಿಸಿ 2022 ಏಪ್ರಿಲ್ 10ಕ್ಕೆ ಮರು ಆದೇಶವಾಗಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವವರೆಗೂ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಇವರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ಐದು ತಿಂಗಳಿನಿಂದ ವೇತನವಿಲ್ಲದ ಕಾರ್ಯನಿರ್ವಹಿಸುತ್ತಿದ್ದಾರೆ ಅಕ್ಷರ ದಾಸೋಹ ನೌಕರರು
6 ಸಾವಿರ ಮಂದಿ ಮಹಿಳಾ ನೌಕರರನ್ನು ಕೆಲಸದಿಂದ ತೆಗೆದಿರುವ ಕ್ರಮವನ್ನು ಖಂಡಿಸಿ, 3-4 ಹಂತದಲ್ಲಿ ಹೋರಾಟವನ್ನು ಸಂಘಟಿಸಿ ಸರ್ಕಾರವನ್ನು ಎಚ್ಚರಿಸಲಾಗಿತ್ತು. ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಯಿತು. ಆದರೂ, ಇದರ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಬೇಡಿಗಳು ಪರಿಗಣಿಸದೆ ಇದ್ದಲ್ಲಿ ನೌಕರರು ಇಲ್ಲಿಂದ ವಾಪಸ್ಸು ಹೋಗವುದಿಲ್ಲ ಎಂದು ಮಾಲಿನಿ ಮೆಸ್ತಾ ತಿಳಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಲಕ್ಷ್ಮಿದೇವಿ ಮಾತನಾಡಿ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರ ಮಟ್ಟದಲ್ಲಿ ಜಂಟಿ ಸಭೆ ನಡೆದಿದೆ. ಆ ವೇಳೆ ಇಡಿಗಂಟು ಕೊಡಬೇಕೆಂದು 2022ರ ಅಕ್ಟೋಬರ್ 27ರಂದು ಶಿಫಾರಸ್ಸು ಮಾಡಲಾಗಿದೆ. ಇಲಾಖೆಯ ಸುತ್ತೋಲೆ ಇದನ್ನು ತಿರಸ್ಕರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಈ ವಿಚಾರ ತಿಳಿಸಿದೆ. ಆದರೂ ಸಹ ಶಿಫಾರಸ್ಸುಗಳನ್ನು ತಿರಸ್ಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಳೆದ ವರ್ಷ ನಡೆದ ಹೋರಾಟದ ಬಳಿಕೆ ಎಚ್ಚೆತ್ತುಕೊಂಡ ಬಿಜೆಪಿ ಸರ್ಕಾರ ಕಳೆದ ಬಾರಿಯ ಬಜೆಟ್ ನಲ್ಲಿ ಹೇಳಿದ 1000 ರೂ ಜಾರಿಗೆ, ಶಿಕ್ಷಣ ಇಲಾಖೆ ಕೂಡಲೇ 5000-6000 ರೂ. ಮಂಜೂರು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿ ಎಸ್ ಡಿ ಎಂ ಸಿ ಗೆ ವಹಿಸಿರುವುದನ್ನು ವಿರೋಧಿಸಿ ಮೊದಲಿನಂತೆ ಮುಖ್ಯ ಅಡುಗೆ ಯವರಿಗೆ ಜವಾಬ್ದಾರಿ ನೀಡಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: ಮಹಿಳೆಗೆ ಜವಾಬ್ದಾರಿ ನೀಡದೆಯೇ ಅನುಭವ ಇಲ್ಲ ಎನ್ನುತ್ತಾರೆ: ಡಾ.ಆರ್ ಇಂದಿರಾ
ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ಅಕ್ಷರ ದಾಸೋಹ ನೌಕರರಿಗೆ ಘನತೆಯ ಬದುಕಿನ ಹಕ್ಕನ್ನು ಕಲ್ಪಿಸಿಕೊಳ್ಳಲು ರೂ. 1 ಲಕ್ಷ ಮೊತ್ತದ ಇಡಿಗಂಟು ಕೊಡಬೇಕು. ಡಿಸೆಂಬರ್ ನಲ್ಲಿ ಬೆಳಗಾವಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದ ವೇಳೆ ಧರಣಿ ನಡೆಸಲಾಯಿತು. ಅಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಧ್ಯಪ್ರವೇಶಿಸಿ ಸಚಿವರು ಮತ್ತು ಅಧಿಕಾರಿಗಳು, ಸಂಘಟನೆಯ ಮುಖಂಡರ ಮದ್ಯೆ ಜಂಟಿ ಸಭೆಯನ್ನು ಏರ್ಪಿಸಲಾಗುವುದು, 2023ರ ಜನವರಿ 05ರಂದು ದಿನಾಂಕವನ್ನು ನಿಗದಿಪಡಿಸಲಾಯಿತು. ಆದರೂ ಸಭೆಯೂ ನಡೆಯಲಿಲ್ಲ ಮತ್ತು ನೌಕರರ ಸಮಸ್ಯೆಯೂ ಬಗೆಹರಿಯಲಿಲ್ಲ. ಹಾಗಾಯೇ ಸರ್ಕಾರಕ್ಕೆ ತಿಳಿಸಲು ಇಂದು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಶಾಲೆಗಳಲ್ಲಿ ಗ್ರೂಪ್ ʻʻಡಿʼʼ ನೌಕರರು ಇಲ್ಲದಿರುವುದರಿಂದ ಅಕ್ಷರ ದಾಸೋಹ ನೌಕರರಿಂದಲೇ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ, ಶಾಲಾ ಸಮಯದಲ್ಲಿ ಗಂಟೆ ಬಾರಿಸುವುದು ಇನ್ನಿತರ ಕೆಲಸಗಳನ್ನು ನಿರ್ವಹಿಸುವಂತೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ಆದೇಶಿಸಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಇಲಾಖೆಯ ಅಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಪ್ರತಿ ಶಾಲೆಯಲ್ಲಿ ಇಬ್ಬರು ಅಡುಗೆ ಸಿಬ್ಬಂದಿಗಳು ಇರುವಂತೆ ನೇಮಿಸಿಕೊಳ್ಳಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಆಗ್ರಹವಾಗಿದೆ.
ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಅಕ್ಷರ ದಾಸೋಹ ಮಹಿಳೆಯರನ್ನು ಕಾರ್ಮಿಕರೆಂದು ಗುರುತಿಸಬೇಕು. ಶಾಲಾ ಅವಧಿಯ ನಂತರ ನರೇಗಾ ಯೋಜನೆ ಅಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು.
ಸಿಐಟಿಯು ರಾಜ್ಯ ಪದಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ.ಬಿ. ನಾಡಗೌಡ ಮಾತನಾಡಿ, ನಮ್ಮ ಸಂಘಟನೆಯು ಅಕ್ಷರ ದಾಸೋಹ ನೌಕರರ ಹೋರಾಟಕ್ಕೆ ಬೆಂಬಲ ನೀಡಲಿದೆ. ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಲೇಬೇಕು ಮತ್ತು ನೌಕರರ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡಬೇಕು. ನೌಕರರಿಗೆ ಭವಿಷ್ಯ ನಿಧಿ ನೀಡುವಲ್ಲಿ ಸರ್ಕಾರ ಕಾಳಜಿ ವಹಿಸುವುದಿಲ್ಲ. ಆದರೆ, ಶಾಸಕರು, ಮಂತ್ರಿಗಳು, ಜನಪ್ರತಿನಿಧಿಗಳು ತಮ್ಮ ಸಂಬಳ, ಭತ್ಯೆ, ಪ್ರಯಾಣ ವೆಚ್ಚ ಇತ್ಯಾದಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುತ್ತದೆ. ನೌಕರರಿಗೆ ನೀಡಲು ಮಾತ್ರ ಹಣವಿಲ್ಲ ಎನ್ನುವುದು ಅವರಿಗೆ ನಾಚಿಕೆಯಾಗಬೇಕೆಂದು ಹೇಳಿದರು.
ಸಿಐಟಿಯು ರಾಜ್ಯ ಪದಾಧಿಕಾರಿ ಹಾಗೂ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ಹೆಚ್.ಎಸ್. ಮಾತನಾಡಿ, ಅಕ್ಷರ ದಾಸೋಹ ನೌಕರರ ಹೋರಾಟ ನ್ಯಾಯಯುತವಾಗಿದೆ. ಅಂಗವನಾಡಿ ನೌಕರರ ಬಲಿಷ್ಠ ಹೋರಾಟದಿಂದ ಒಂದಷ್ಟು ಉತ್ತಮ ಸೌಲಭ್ಯಗಳನ್ನು ಜಾರಿಮಾಡಿಕೊಳ್ಳಲು ಸಾಧ್ಯವಾಗಿದೆ. ಅದೇ ರೀತಿ ಅಕ್ಷರ ದಾಸೋಹ ನೌಕರರು ಸಹ ಹೋರಾಟಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಲವು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಭರವಸೆ ಪಡೆದಿದ್ದಾರ ವಿನಃ ಬೇಡಿಕೆಗಳು ಮಾತ್ರ ಈಡೇರಿಲ್ಲ. ಈಗಲೂ ನೌಕರರು ತುಂಬಾ ತಾಳ್ಮೆಯಿಂದ ಧರಣಿಯಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಸರ್ಕಾರ ನೌಕರರ ಬೇಡಿಕೆಗಳನ್ನು ಪರಿಗಣಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಖಜಾಂಚಿ ಮಹಾದೇವಮ್ಮ, ಸಿಐಟಿಯು ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್, ಆರ್ ಎಸ್ ಬಸವರಾಜು, ಜಿ. ರಾಮಕೃಷ್ಣ, ವಸಂತ ಆಚಾರಿ ಮತ್ತಿತರ ಮುಖಂಡರು ಮಾತನಾಡಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ