ನಿರಂತರ ದೌರ್ಜನ್ಯದ ನಡುವೆ ಈ ಒಂದು ದಿನ

ಮಹಿಳಾ ದಿನ ಎಂದ ಕೂಡಲೇ ಸಾಧಕರ ಪಟ್ಟಿಯನ್ನು ಸಿದ್ಧಪಡಿಸಲು ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ತುದಿಗಾಲಲ್ಲಿ ನಿಂತಿರುತ್ತವೆ. ಐಎಎಸ್ ತೇರ್ಗಡೆಯಾದ ಮಹಿಳೆ ಮುಖ್ಯ ಸುದ್ದಿಯಾಗುತ್ತಾಳೆ. ಅಂದರೆ ಮಹಿಳೆಯರ ಸಾಧನೆ ಸಹಜ ಸುದ್ದಿಯಾಗುವುದಕ್ಕಿಂತಲೂ ಸಂಭ್ರಮದ ಸುದ್ದಿಯಾಗುತ್ತದೆ. ಕಾರಣ, ಭಾರತದ ಪುರುಷ ಸಮಾಜದ ಆಂತರ್ಯದಲ್ಲಿ ಇನ್ನೂ ಸ್ತ್ರೀ ಸಂವೇದನೆ ಗಟ್ಟಿಯಾಗಿಲ್ಲ. ಈ ಸೂಕ್ಷ್ಮ ದ್ವಂದ್ವ ನಮಗೆ ಅರ್ಥವಾಗುವುದು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆದಾಗ. ಪುರುಷ ಸಮಾಜ ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ನೋಡುವಂತೆಯೇ ಮಾಧ್ಯಮಗಳು ಟಿ ಆರ್ ಪಿ ಸರಕುಗಳಂತೆ ನೋಡುತ್ತವೆ. ನಿರ್ಭಯಾಳಿಂದ ಹಥ್ರಾಸ್‍ವರೆಗೆ ಈ ದ್ವಂದ್ವವನ್ನು ಗಮನಿಸುತ್ತಲೇ ಬಂದಿದ್ದೇವೆ.

ವಿಶ್ವ ಮಹಿಳಾ ದಿನ ಕೇವಲ ಮಹಿಳೆಯರ ಪ್ರತಿರೋಧದ ದಿನ ಆಗಬಾರದು, ಮಹಿಳೆಯರ ಹಕ್ಕೊತ್ತಾಯಗಳ ದಿನ ಆಗಬಾರದು. ಮಾರ್ಚ್ 8 ಭಾರತದಂತಹ ಸಾಂಪ್ರದಾಯಿಕ ಸಮಾಜಕ್ಕೆ ಆತ್ಮಾವಲೋಕನದ ದಿನ ಆಗಬೇಕು. ಈ ಒಂದು ದಿನವಾದರೂ ಆತ್ಮಾವಲೋಕನದ ಬಗ್ಗೆ ಆಲೋಚನೆ ಮಾಡುವ ಮನಸ್ಥಿತಿಯನ್ನು ಭಾರತದ ಪುರುಷ ಸಮಾಜ ಹೊಂದಿರಬೇಕು. ಆಗ ಮಾತ್ರ ಸ್ತ್ರೀ ಸಮಾನತೆ, ಸ್ತ್ರೀ ಸಂವೇದನೆ, ಹೆಣ್ತನದ ಘನತೆ, ಲಿಂಗತ್ವ ಸಮಾನತೆ ಮುಂತಾದ ಉದಾತ್ತ ಪದಗಳು ಅರ್ಥಪೂರ್ಣವಾಗುತ್ತವೆ.  

  • ನಾ ದಿವಾಕರ

ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮತ್ತೊಂದು ಒಕ್ಕೊರಲ ಪ್ರತಿರೋಧದ ದಿನ, ಮತ್ತೊಂದು ಕಪ್ಪು ಬಾವುಟ ಪ್ರದರ್ಶನ. ಭಾರತದಲ್ಲಿ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ, ಶಾಶ್ವತವಾಗಿ ಹೋರಾಡುತ್ತಿರುವ ಸಮುದಾಯಗಳೆಂದರೆ ಅಸ್ಪೃಶ್ಯರು-ದಲಿತರು ಮತ್ತು ಮಹಿಳೆಯರು. 70 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಒಂದು ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಇದು ಅಪಭ್ರಂಶ ಎನಿಸಬಹುದು. ಆದರೆ ಇದು ಭಾರತದ ವಾಸ್ತವ. ವಸಾಹತು ಕಾಲಘಟ್ಟಕ್ಕಿಂತಲೂ ಕ್ರೂರವಾದ ಒಂದು ಆಡಳಿತ ವ್ಯವಸ್ಥೆಯನ್ನು ಈ ದೇಶದ ಮಹಿಳೆಯರು ಎದುರಿಸುತ್ತಿದ್ದಾರೆ. ತುಳಿತಕ್ಕೊಳಗಾದ ಸಮುದಾಯಗಳ ಮಹಿಳೆಯರು ದಿನದಿಂದ ದಿನಕ್ಕೆ ಇನ್ನೂ ಹೆಚ್ಚಿನ ದೌರ್ಜನ್ಯ ಎದುರಿಸುತ್ತಿದ್ದಾರೆ. ಇತ್ತೀಚಿನ ಕೆಲವು ಪ್ರಸಂಗಗಳಲ್ಲಿ ನ್ಯಾಯ ವ್ಯವಸ್ಥೆಯೂ ಪಿತೃಪ್ರಧಾನ ಮೌಲ್ಯಗಳನ್ನು ಪುಷ್ಟೀಕರಿಸುವಂತಹ ತೀರ್ಪುಗಳನ್ನು ನೀಡುತ್ತಿದೆ.

ಮಹಿಳಾ ದಿನ ಎಂದ ಕೂಡಲೇ ಸಾಧಕರ ಪಟ್ಟಿಯನ್ನು ಸಿದ್ಧಪಡಿಸಲು ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ತುದಿಗಾಲಲ್ಲಿ ನಿಂತಿರುತ್ತವೆ. ಮೇಡಂ ಕ್ಯೂರಿ ಇಂದ ಇತ್ತೀಚಿನ ಹಿಮಾದಾಸ್‍ವರೆಗೆ ಮಹಿಳಾ ಸಾಧಕಿಯರ ಚಿತ್ರಗಳು ರಾರಾಜಿಸುತ್ತವೆ. ಇದು ಅವಶ್ಯವೂ ಹೌದು. ಏಕೆಂದರೆ ಈ ದೇಶದಲ್ಲಿ ಓರ್ವ ಹುಡುಗಿ ಹತ್ತನೆ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುವುದೇ ಪತ್ರಿಕೆಯ ಮುಖ್ಯ ಸುದ್ದಿಯಾಗುತ್ತದೆ. ಐಎಎಸ್ ತೇರ್ಗಡೆಯಾದ ಮಹಿಳೆ ಮುಖ್ಯ ಸುದ್ದಿಯಾಗುತ್ತಾಳೆ. ಅಂದರೆ ಮಹಿಳೆಯರ ಸಾಧನೆ ಸಹಜ ಸುದ್ದಿಯಾಗುವುದಕ್ಕಿಂತಲೂ ಸಂಭ್ರಮದ ಸುದ್ದಿಯಾಗುತ್ತದೆ. ಕಾರಣ, ಭಾರತದ ಪುರುಷ ಸಮಾಜದ ಆಂತರ್ಯದಲ್ಲಿ ಇನ್ನೂ ಸ್ತ್ರೀ ಸಂವೇದನೆ ಗಟ್ಟಿಯಾಗಿಲ್ಲ.

ಈ ಸೂಕ್ಷ್ಮ ದ್ವಂದ್ವ ನಮಗೆ ಅರ್ಥವಾಗುವುದು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆದಾಗ. ಒಬ್ಬ ಆಟೋ ಚಾಲಕನ ಮಗಳು, ಬೀದಿ ವ್ಯಾಪಾರಿಯ ಮಗಳು ಹತ್ತನೆ ತರಗತಿಯಲ್ಲಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ ಅವರ ಮನೆ ಬಾಗಿಲಿಗೆ ಹೋಗಿ ಸಂದರ್ಶನ ನಡೆಸಿ ಮೇಳೈಸುವ ದೃಶ್ಯ ಮಾಧ್ಯಮಗಳು, ಇದೇ ಶ್ರಮಜೀವಿಗಳ ಹೆಣ್ಣು ಮಕ್ಕಳು ಬಾಲ್ಯ ವಿವಾಹದ ಪೀಡನೆಗೆ ಬಲಿಯಾದಾಗ, ವೇಶ್ಯಾವಾಟಿಕೆಗೆ ಬಲಿಯಾದಾಗ, ಮಾನವ ಸಾಕಾಣಿಕೆಗೆ ಬಲಿಯಾದಾಗ, ಅತ್ಯಾಚಾರ ಮತ್ತು ಹತ್ಯೆಗೀಡಾದಾಗ, ಮರ್ಯಾದಾ ಹತ್ಯೆಗೀಡಾದಾಗ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕುಳಿತುಬಿಡುತ್ತವೆ. ಪುರುಷ ಸಮಾಜ ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ನೋಡುವಂತೆಯೇ ಮಾಧ್ಯಮಗಳು ಟಿ ಆರ್ ಪಿ ಸರಕುಗಳಂತೆ ನೋಡುತ್ತವೆ. ನಿರ್ಭಯಾಳಿಂದ ಹಥ್ರಾಸ್‍ವರೆಗೆ ಈ ದ್ವಂದ್ವವನ್ನು ಗಮನಿಸುತ್ತಲೇ ಬಂದಿದ್ದೇವೆ.

ಮಹಿಳೆ ಎಂದಾಕ್ಷಣ ತಾಯಿ, ಮಗಳು, ಮಡದಿ, ಸೋದರಿ ಹೀಗೆ ಮನುಜ ಸಂಬಂಧಗಳ ಸಂಕೋಲೆಗಳಲ್ಲಿ ಬಂಧಿಯಾಗುವ ಚಿತ್ರಣವನ್ನೇ ವೈಭವೀಕರಿಸುತ್ತಾ, ಭವ್ಯ ಪರಂಪರೆ, ಸಂಸ್ಕೃತಿಯ ನೆಲೆಗಳಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ನಿಷ್ಕರ್ಷೆ ಮಾಡುವ ನಾವು ಇದೇ ತಾಯಂದಿರು, ಅಕ್ಕ ತಂಗಿಯರು, ಹೆಣ್ಣು ಮಕ್ಕಳು, ಮಡದಿಯರು ಈ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು, ಮನುಜ ಸೇತುವೆಗಳನ್ನು ಕಟ್ಟಲು, ಭವ್ಯ ಭಾರತವನ್ನು ಕಟ್ಟಲು ಹಗಲಿರುಳು ಶ್ರಮಿಸುವುದನ್ನು ಸಾಧನೆಗಳ ಶಿಖರಗಳ ಛಾಯೆಯಲ್ಲೇ ಕಾಣಲು ಬಯಸುತ್ತೇವೆ. ಈ ಸಾಧನೆಯ ಹಾದಿಯಲ್ಲಿ ಮಹಿಳೆಯರು ಅನುಭವಿಸುವ ನೋವು , ಸಂಕಷ್ಟ, ಬವಣೆ ಮತ್ತು ಕಿರುಕುಳಗಳು ನಮ್ಮ ಗಮನಕ್ಕೆ ಬರುವುದು ಹಾಳೆಗಳ ಮೇಲೆ ಮಾತ್ರ.

ಅಂಗನವಾಡಿ ಸಹಾಯಕರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಗಳಲ್ಲಿ ದುಡಿಯುವ ದಾದಿಗಳು, ಪೌರ ಕಾರ್ಮಿಕರಾಗಿ ಶ್ರಮಿಸುವ ಕೋಟ್ಯಂತರ ಮಹಿಳೆಯರು ಪುರುಷ ಸಮಾಜದ ದರ್ಪ ಮತ್ತು ಅಟ್ಟಹಾಸದ ನಡುವೆಯೇ ನಿತ್ಯ ಕಿರುಕುಳ ಅನುಭವಿಸುವುದನ್ನು ಕಂಡೂ ಕಾಣದಂತೆ ಮೈಮರೆತಿರುತ್ತೇವೆ. ಲೈಂಗಿಕ ಕಿರುಕುಳ ಅನುಭವಿಸುವವರಲ್ಲಿ ಈ ಕಾಯಕ ಜೀವಿಗಳಷ್ಟೇ ಇದ್ದಾರೆ ಎನ್ನುವುದು ಅರ್ಧಸತ್ಯ. ಸುಶಿಕ್ಷಿತ ಸಮಾಜದ ಒಂದು ಭಾಗವಾಗಿರುವ,  ಮಧ್ಯಮ ವರ್ಗದವರೇ ತುಂಬಿರುವ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲೂ ಮಹಿಳೆಯರು ಪುರುಷ ಸಮಾಜದ ಕಾಕದೃಷ್ಟಿಗೆ ಬಲಿಯಾಗುತ್ತಲೇ, ಮೌನಕ್ಕೆ ಜಾರಿರುತ್ತಾರೆ. ಕಾರ್ಯಕ್ಷೇತ್ರದಲ್ಲಿ ಲೈಂಗಿಕ ಕಿರುಕುಳವನ್ನು ನಿರ್ಬಂಧಿಸಲು, ನಿಯಂತ್ರಿಸಲು ಕಾನೂನು ಜಾರಿಮಾಡಿದ್ದರೂ ಇಂದಿಗೂ ಕಚೇರಿಗಳಲ್ಲಿ ಕಿರುಕುಳ ನಿಂತಿಲ್ಲ ಎನ್ನುವುದನ್ನು ಅನುಭವಿಸಿದವರೇ ಬಲ್ಲರು. ಇದು ಕಟು ವಾಸ್ತವ.

ಭಾರತದ ಸುಶಿಕ್ಷಿತ ಸಮಾಜ ಆಧುನಿಕತೆಯತ್ತ ಹೊರಳುತ್ತಿರುವಂತೆಲ್ಲಾ ತನ್ನ ಸೂಕ್ಷ್ಮ ಸಂವೇದನೆಯನ್ನೂ ಕಳೆದುಕೊಳ್ಳುತ್ತಿರುವುದನ್ನು ಈ ಬೆಳವಣಿಗೆಗಳಲ್ಲಿ ಕಾಣಬಹುದು.  ರಾಜಕೀಯ ವಲಯದಲ್ಲಿ ಇಂದು ಮಹಿಳೆ ನಿರ್ಲಕ್ಷಿತಳಾಗುತ್ತಿದ್ದಾಳೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಚಾರಿತ್ರಿಕ ಮಸೂದೆ ಪುರುಷಾಧಿಪತ್ಯದ ಅಧಿಕಾರ ರಾಜಕಾರಣದಲ್ಲಿ ಶಾಶ್ವತವಾಗಿ ಕಳೆದುಹೋಗಿದೆ. ತಮ್ಮ ಪ್ರಣಾಳಿಕೆಗಳಲ್ಲೂ ಈ ಮಸೂದೆಯನ್ನು ಜಾರಿಗೊಳಿಸುವ ಆಶ್ವಾಸನೆಯನ್ನು ಯಾವುದೇ ಪಕ್ಷಗಳು ನೀಡುತ್ತಿಲ್ಲ. ಏಕೆಂದರೆ ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಇದಕ್ಕೆ ಅವಕಾಶವೇ ಇರುವುದಿಲ್ಲ. ರಾಜಕೀಯ ಪಕ್ಷಗಳಲ್ಲೂ ಸಹ ಮಹಿಳಾ ಸದಸ್ಯರಿಂದ ಈ ನಿಟ್ಟಿನಲ್ಲಿ ಒತ್ತಾಯ ಕಾಣದೆ ಇರುವುದು ಗಮನಿಸಬೇಕಾದ ಅಂಶ.

ಇತ್ತೀಚಿನ ಕೆಲವು ಬೆಳವಣಿಗೆಗಳಲ್ಲಿ ನ್ಯಾಯಾಂಗದ ಆವರಣದಲ್ಲೂ ಸ್ತ್ರೀ ಸಂವೇದನೆಯೇ ಇಲ್ಲದ ಕೆಲವು ತೀರ್ಪುಗಳನ್ನು ಕಾಣುತ್ತಿದ್ದೇವೆ. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರು ಒಂದು ಪ್ರಕರಣದಲ್ಲಿ ಸಂತ್ರಸ್ತೆಯು ಬಾಲಕಿಯಾಗಿದ್ದಾಗ ಆಕೆಯ ಮೇಲೆ ನಿರಂತರ ಲೈಂಗಿಕ ಅತ್ಯಾಚಾರ ನಡೆಸಿದ ವ್ಯಕ್ತಿಗೆ  “ ಸಂತ್ರಸ್ತೆಯನ್ನು ಮದುವೆಯಾಗುವೆಯಾ ” ಎಂದು ಕೇಳುವ ಮೂಲಕ ಆಯ್ಕೆ ಸ್ವಾತಂತ್ರ್ಯವನ್ನು ನೀಡುತ್ತಾರೆ. ಮದುವೆಯಾಗುವುದಾದರೆ ಶಿಕ್ಷೆಯಿಂದ ಪಾರಾಗಬಹುದಲ್ಲವೇ ? ಇದು ಸ್ತ್ರೀ ಸೂಕ್ಷ್ಮತೆಯನ್ನು ಕೊಲ್ಲುವಂತಹ ಒಂದು ಬೆಳವಣಿಗೆ. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ಬೇಗುದಿಯನ್ನು, ಅಂತರಿಕ ವೇದನೆಯನ್ನು ಮತ್ತು ಆಕೆಯ ಹೆಣ್ತನವನ್ನು ಗೌರವಿಸದ ಸಮಾಜದಲ್ಲಿ ಮಾತ್ರವೇ ಇಂತಹ ಪ್ರಸಂಗಗಳನ್ನು ಕಾಣಲು ಸಾಧ್ಯ.

ಇದರ ವ್ಯತಿರಿಕ್ತ ಅತಿರೇಕವನ್ನು ದೇಶಾದ್ಯಂತ ನಿರಂತರವಾಗಿ ನಡೆಯುತ್ತಲೇ ಇರುವ “ ಮರ್ಯಾದಾ-ಗೌರವ ಹತ್ಯೆಗಳಲ್ಲಿ ” ಕಾಣುತ್ತಿದ್ದೇವೆ. ಅನ್ಯ ಜಾತಿಯವನನ್ನು, ಅನ್ಯ ಕೋಮಿನ ವ್ಯಕ್ತಿಯನ್ನು ಪ್ರೀತಿಸುವ ಹೆಣ್ಣು ಮಕ್ಕಳನ್ನು ನಿರ್ಭೀತಿಯಿಂದ ಕೊಲೆ ಮಾಡುವ ಅಲಿಖಿತ ಕಾನೂನು ಭಾರತದಲ್ಲಿ ಇಂದಿಗೂ ಜಾರಿಯಲ್ಲಿದೆ. ಇಲ್ಲಿ ಹೆಣ್ಣು ಮಾತ್ರ ಅಪರಾಧಿಯಾಗುತ್ತಾಳೆ, ಗಂಡು ತನ್ನ ಹಕ್ಕು ಪ್ರತಿಪಾದಿಸುತ್ತಾನೆ. ಈ ಹತ್ಯೆಗಳನ್ನು ಮರ್ಯಾದಾ-ಗೌರವ ಹತ್ಯೆ ಎಂದು ಸಾಮಾನ್ಯವಾಗಿ ಗುರುತಿಸಲಾಗುವುದಾದರೂ, ಇದು ಯಾರ ಗೌರವ ಅಥವಾ ಮರ್ಯಾದೆಯನ್ನು ಉಳಿಸುತ್ತದೆ ಎನ್ನುವ ಜಿಜ್ಞಾಸೆ ಕಾಡುವುದಂತೂ ಸತ್ಯ. ಒಂದು ಪ್ರಬುದ್ಧ ಸಮಾಜ ಇಂತಹ ಅಮಾನುಷ ಹತ್ಯೆಗಳಿಗೆ ಮುಂದಾಗುವುದರಿಂದ ತನ್ನ ಗೌರವವನ್ನು, ಮರ್ಯಾದೆಯನ್ನು ಕಳೆದುಕೊಳ್ಳುತ್ತದೆ.

ಮತಾಂಧತೆಯಿಂದ ಆವರಿಸಲ್ಪಟ್ಟಿರುವ ಭಾರತದ ಜಾತಿ ಪೀಡಿತ ಸಮಾಜದಲ್ಲಿ ಹೆಣ್ಣು ಲಕ್ಷ್ಮಣ ರೇಖೆಯನ್ನು ದಾಟುವುದೇ ಗೌರವಕ್ಕೆ ಚ್ಯುತಿ ಬರುವ ಕೃತ್ಯ ಎನಿಸಿಬಿಡುತ್ತದೆ. ನಮ್ಮ ಸುಶಿಕ್ಷಿತ ಸಮಾಜಕ್ಕೆ ಈ ಹತ್ಯೆಗಳು ಅಪರಾಧ ಎನಿಸುವುದೇ ಇಲ್ಲ. ಕೆಲವೊಮ್ಮೆ ಅತ್ಯಾಚಾರಗಳೂ ತಪ್ಪು ಎನಿಸುವುದಿಲ್ಲ ಎನ್ನುವುದನ್ನು ಹಥ್ರಾಸ್ ಸಂದರ್ಭದಲ್ಲಿ ಕಂಡಿದ್ದೇವೆ, ನಿರ್ಭಯಾ ಘಟನೆಯಲ್ಲೂ ಕಂಡಿದ್ದೇವೆ. ದಲಿತ ಅಥವಾ ಅಲ್ಪ ಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು, ಅತ್ಯಾಚಾರಗಳು ಭಾರತದ ಒಂದು ಬೃಹತ್ ಬೌದ್ಧಿಕ ವಲಯಕ್ಕೆ ಸ್ವೀಕಾರಾರ್ಹವೇ ಆಗಿಬಿಡುತ್ತದೆ. ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪುವ ಸಂತ್ರಸ್ತೆಯನ್ನು ನಡುರಾತ್ರಿಯಲ್ಲಿ ಪೊಲೀಸರೇ ಸುಟ್ಟುಹಾಕಿದರೂ ನಮ್ಮ ಸಮಾಜ ವಿಚಲಿತವಾಗುವುದಿಲ್ಲ. 2018ರಲ್ಲಿ ಉತ್ತರಪ್ರದೇಶದ ಹಥ್ರಾಸ್‍ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯ ತಂದೆ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿಯಿಂದಲೇ ಹತ್ಯೆಗೀಡಾಗಿರುವುದು ಈ ಅಸೂಕ್ಷ್ಮತೆಯ ಮತ್ತೊಂದು ಮಜಲನ್ನು ನಮಗೆ ಪರಿಚಯಿಸುತ್ತದೆ.

ಲಿಂಗತ್ವ ಸಮಾನತೆಯನ್ನು ಸಾಧಿಸಲು ದೇಶದಲ್ಲಿ ಸಾಕಷ್ಟು ಕಾಯ್ದೆ ಕಾನೂನುಗಳನ್ನು ಜಾರಿಮಾಡಲಾಗಿದೆ. ನಿರ್ಭಯ ಪ್ರಕರಣದ ನಂತರದಲ್ಲಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕೆಲವು ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಇಂತಹ ಕಾಯ್ದೆಗಳಲ್ಲಿ ಒಂದು. ಆದರೆ ಈ ಕಾಯ್ದೆಗಳನ್ನು ಜಾರಿಮಾಡುವ ನಿಟ್ಟಿನಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಸೋಲುತ್ತಲೇ ಇದೆ. ಸಮಾಜದಲ್ಲಿ ಅಂತರ್ಗತವಾಗಿರುವ ಪಿತೃಪ್ರಧಾನ ಧೋರಣೆ ಮತ್ತು ಪುರುಷ ಪ್ರಧಾನ ಮನಸ್ಥಿತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ಕೇವಲ ಮಹಿಳಾ ಚಳುವಳಿಗಳಿಂದ ನಡೆಯುತ್ತಿವೆ.

ಮಹಿಳೆಯ ಘನತೆ ಮತ್ತು ಜೀವಿಸುವ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗ ಹಲವು ಚಾರಿತ್ರಿಕ ತೀರ್ಪುಗಳನ್ನು ನೀಡಿದೆ. ಇದೇ ವೇಳೆ ದೌರ್ಜನ್ಯಕ್ಕೊಳಗಾಗುವ ಮಹಿಳೆಯ ರಕ್ಷಣೆಗೆ ಬರುವಲ್ಲಿ ವಿಫಲವಾಗಿರುವುದನ್ನೂ ಭಾವರಿ ದೇವಿಯಂತಹ ಪ್ರಕರಣಗಳಲ್ಲಿ ಕಂಡಿದ್ದೇವೆ. ಇಂದಿಗೂ ಕಾಣುತ್ತಿದ್ದೇವೆ. ಪಿತೃ ಪ್ರಧಾನ ಜಾತಿಪೀಡಿತ ಸಮಾಜದಲ್ಲಿ ನ್ಯಾಯ ವ್ಯವಸ್ಥೆಯನ್ನು ಪ್ರತಿನಿಧಿಸುವವರು ಜಾತ್ಯತೀತ ಮನೋಭಾವದೊಂದಿಗೇ ಸ್ತ್ರೀ ಸಂವೇದನೆಯನ್ನೂ ಹೊಂದಿರುವುದು ಎಷ್ಟು ಮುಖ್ಯ ಎನ್ನುವುದನ್ನು ಅನೇಕ ಪ್ರಕರಣಗಳಲ್ಲಿ ಗಮನಿಸಬಹುದು. ಇತ್ತೀಚೆಗೆ ಹಿಂದುತ್ವ ರಾಜಕಾರಣದ ಒಂದು ಭಾಗವಾಗಿಯೇ ರೂಪುಗೊಂಡಿರುವ ಲವ್ ಜಿಹಾದ್ ಕಾಯ್ದೆಗಳೂ ಸಹ ಮೂಲತಃ ಮಹಿಳಾ ವಿರೋಧಿಯಾಗಿದ್ದು ಇಲ್ಲಿಯೂ ಸಹ ಮಹಿಳೆಯ ಜೀವಿಸುವ ಹಕ್ಕು, ಘನತೆಯ ಹಕ್ಕು ಹಲ್ಲೆಗೊಳಗಾಗುತ್ತಿದೆ.

ಆಡಳಿತಾರೂಢ ಸರ್ಕಾರಗಳು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತು ಖಾಪ್ ಪಂಚಾಯತ್‍ಗಳಿಗೆ, ಸಾಂಸ್ಕೃತಿಕ ಆರಕ್ಷಕ ಪಡೆಗಳಿಗೆ ಮತ್ತು ಧರ್ಮರಕ್ಷಕ ಗುಂಪುಗಳಿಗೆ ಮಾನ್ಯತೆ ನೀಡುವ ಮೂಲಕ ಪಿತೃಪ್ರಧಾನ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುತ್ತಿವೆ. ಸಾಂಪ್ರದಾಯಿಕ ಶಕ್ತಿಗಳು ಮತ್ತು ಮತಾಂಧರು ಎಲ್ಲ ಧರ್ಮಗಳಲ್ಲೂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಹೆಣ್ತನದ ಘನತೆಯನ್ನು ನಿರ್ಲಕ್ಷಿಸುತ್ತಿವೆ. ಈ ಸಮಾಜೋ ಸಾಂಸ್ಕೃತಿಕ ಧೋರಣೆಗೆ ಪೂರಕವಾಗಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯೂ ಇಲ್ಲವಾಗುತ್ತಿರುವುದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಮಹಿಳಾ ಸಬಲೀಕರಣದ ಘೋಷಣೆಗಳು ಸಮಾಜದ ಮೇಲ್ ಸ್ತರದ ವರ್ಗಗಳನ್ನು ಮಾತ್ರವೇ ಹೆಚ್ಚಾಗಿ ತಲುಪುತ್ತಿದ್ದು, ತಳಮಟ್ಟದ ಗ್ರಾಮೀಣ ಮಹಿಳೆಯರು ಇಂದಿಗೂ ಪುರುಷ ಸಮಾಜದ ಅಧಿಪತ್ಯಕ್ಕೆ ಒಳಗಾಗಿದ್ದಾರೆ. ಕೃಷಿ ಕಾರ್ಮಿಕರಿಂದ ಹಿಡಿದು ಕಾರ್ಖಾನೆಯಲ್ಲಿ ದುಡಿಮೆ ಮಾಡುವ ಮಹಿಳೆಯರವರೆಗೆ, ವೇತನ ನಿಗದಿಪಡಿಸುವ ಸಂದರ್ಭದಲ್ಲೂ, ಈ ತಾರತಮ್ಯವನ್ನು ಗಮನಿಸಬಹುದಾಗಿದೆ.

ಇಂದು ಭಾರತೀಯ ಮಹಿಳೆ ನಾಲ್ಕೂ ದಿಕ್ಕುಗಳಿಂದ ತಾರತಮ್ಯ , ಕಿರುಕುಳ, ದೌರ್ಜನ್ಯ ಎದುರಿಸಬೇಕಿದೆ. ಆರ್ಥಿಕವಾಗಿ ಮಾರುಕಟ್ಟೆ ಆರ್ಥಿಕತೆ ಮಹಿಳೆಯರನ್ನು ಅಗ್ಗದ ಶ್ರಮ ಸರಕುಗಳಂತೆ ಭಾವಿಸುತ್ತದೆ. ತನ್ನ ಲಾಭ ಹೆಚ್ಚಿಸಿಕೊಳ್ಳಲು ಔದ್ಯಮಿಕ ವಲಯ ಕಡಿಮೆ ವೇತನ ನೀಡುವ ಮೂಲಕ, ಮುಷ್ಕರದ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ, ಹೆಚ್ಚಿನ ದುಡಿಮೆ ಮಾಡಿಸಿಕೊಳ್ಳುವ ಮೂಲಕ ಮಹಿಳೆಯರನ್ನು ಶೋಷಣೆಗೊಳಪಡಿಸುತ್ತಿದೆ. ಸಾಮಾಜಿಕವಾಗಿ ಮಹಿಳೆ ಪುರುಷ ಸಮಾಜ ತನ್ನ ಸುತ್ತಲೂ ನಿರ್ಮಿಸಲಾಗಿರುವ ಬೇಲಿಗಳನ್ನು ದಾಟಲು ನಿರಂತರ ಹೋರಾಟ ಮಾಡಬೇಕಿದೆ. ಸಾಂಸ್ಕೃತಿಕವಾಗಿ ಸಾಂಪ್ರದಾಯಿಕ-ಮತಾಂಧ ಶಕ್ತಿಗಳು ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಲು ಸದಾ ಸನ್ನದ್ಧವಾಗಿರುತ್ತವೆ. ಶಹೀನ್‍ಭಾಗ್ ಪ್ರತಿಭಟನೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು “ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸುವುದೇಕೆ ?” ಎಂದು ಪ್ರಶ್ನಿಸುವ ಮೂಲಕ ಇದೇ ಮನಸ್ಥಿತಿಯನ್ನು ಬಿಂಬಿಸಿದ್ದರು.

ಇಷ್ಟರ ನಡುವೆ ಅತ್ಯಾಚಾರ ಇಂದು ನಿತ್ಯ ಸುದ್ದಿಯಾಗಿಬಿಟ್ಟಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಹತ್ಯೆ ಮಾಡುವುದು ನಾಗರಿಕ ಸಮಾಜದ ಒಂದು ವರ್ಗಕ್ಕೆ ಸುದ್ದಿ ಎನಿಸುವುದೇ ಇಲ್ಲ. ಭಾರತದ ವಿದ್ಯುನ್ಮಾನ ಮಾಧ್ಯಮಗಳ ಸುದ್ದಿಮನೆಗಳಿಗೆ ಮಹಿಳೆಯರ ಮೇಲಿನ ಈ ದೌರ್ಜನ್ಯಗಳು  ಟಿ ಆರ್ ಪಿ ಹೆಚ್ಚಿಸಿಕೊಳ್ಳುವ ರೋಚಕ ಸುದ್ದಿಗಳಾಗಿ ಕಾಣುತ್ತವೆ. ಹಾಗಾಗಿಯೇ ಅವೈಜ್ಞಾನಿಕ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಪಟ್ಟ ಬವಣೆ ಮತ್ತು ಅದರಲ್ಲೂ ಮಹಿಳಾ ವಲಸೆ ಕಾರ್ಮಿಕರು ಎದುರಿಸಿದ ದುರ್ಭರ ದಿನಗಳು ಮುನ್ನೆಲೆಗೆ ಬರಲೇ ಇಲ್ಲ. ಇಂದು ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ರೈತ ಮುಷ್ಕರದ ಸಂದರ್ಭದಲ್ಲೂ ಮಹಿಳಾ ಕೃಷಿ ಕಾರ್ಮಿಕರ ಮತ್ತು ಮಹಿಳಾ ರೈತರ ಸಮಸ್ಯೆಗಳು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿಲ್ಲ ಎನ್ನುವುದೂ ಗಮನಿಸಬೇಕಾದ ಸಂಗತಿ.

ವಿಶ್ವ ಮಹಿಳಾ ದಿನ ಕೇವಲ ಮಹಿಳೆಯರ ಪ್ರತಿರೋಧದ ದಿನ ಆಗಬಾರದು, ಮಹಿಳೆಯರ ಹಕ್ಕೊತ್ತಾಯಗಳ ದಿನ ಆಗಬಾರದು. ಮಾರ್ಚ್ 8 ಭಾರತದಂತಹ ಸಾಂಪ್ರದಾಯಿಕ ಸಮಾಜಕ್ಕೆ ಆತ್ಮಾವಲೋಕನದ ದಿನ ಆಗಬೇಕು. ಈ ಒಂದು ದಿನವಾದರೂ ಆತ್ಮಾವಲೋಕನದ ಬಗ್ಗೆ ಆಲೋಚನೆ ಮಾಡುವ ಮನಸ್ಥಿತಿಯನ್ನು ಭಾರತದ ಪುರುಷ ಸಮಾಜ ಹೊಂದಿರಬೇಕು. ಆಗ ಮಾತ್ರ ಸ್ತ್ರೀ ಸಮಾನತೆ, ಸ್ತ್ರೀ ಸಂವೇದನೆ, ಹೆಣ್ತನದ ಘನತೆ, ಲಿಂಗತ್ವ ಸಮಾನತೆ ಮುಂತಾದ ಉದಾತ್ತ ಪದಗಳು ಅರ್ಥಪೂರ್ಣವಾಗುತ್ತವೆ.

-0-0-0-0-

 

 

Donate Janashakthi Media

Leave a Reply

Your email address will not be published. Required fields are marked *