ನಿರಂಜನ100 | ನಿರಂಜನ ಮರು ಓದು ಆರಂಭವಾಗಲಿದೆ

ಕನ್ನಡ ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನ (1924-1992) – ಸೃಜನಶೀಲ ಬರಹಗಾರ, ಸಾಹಿತ್ಯ ಚಳುವಳಿಕಾರ, ವಿಮರ್ಶಕ, ಪತ್ರಕರ್ತ, ಚಿಂತಕ, ಸಾಮಾಜಿಕ ರಾಜಕೀಯ ಕಾರ್ಯಕರ್ತ-ನಾಯಕ, ‘ಮಕ್ಕಳ ವಿಶ್ವಕೋಶ’, ವಿಶ್ವ ಕಥಾಕೋಶ ದಂತಹ ಮಹಾ ಕನಸು ಕಂಡು ಅವನ್ನು ನನಸು ಮಾಡಬಲ್ಲ ಧೀಮಂತ – ಹೀಗೆ ಹಲವು ಆಯಾಮಗಳನ್ನು ನಿರಂಜನ ಹೊಂದಿದ್ದರು.

ನಿರಂಜನರು ಸ್ವತಃ ಬರೆದಿರುವ ಮತ್ತು ಸಂಪಾದಿಸಿರುವ ಹಾಗೂ ಅನುವಾದಿಸಿರುವ ಕೃತಿಗಳ ಒಟ್ಟು ಸಂಖ್ಯೆ 88ಕ್ಕೂ ಹೆಚ್ಚು. ಅವುಗಳಲ್ಲಿ ಸ್ವತಂತ್ರ ಕೃತಿಗಳೇ 50ಕ್ಕೂ ಮೀರಿವೆ. ಅವುಗಳಲ್ಲಿ ಪ್ರಸಿದ್ಧ ಕತೆ ‘ಕೊನೆಯ ಗಿರಾಕಿ’ಯೂ ಸೇರಿದಂತೆ ಕಥಾ ಸಂಗ್ರಹಗಳು (9) ಕಾದಂಬರಿಗಳು (25) ಅಂಕಣ ಬರಹಗಳು (7) ನಾಟಕ (3) ಹಾಗೂ ಪ್ರಬಂಧಗಳು ಇತ್ಯಾದಿ. ಅವರು ಸಂಪಾದಕರಾಗಿ ಹೊರ ತಂದಿರುವ ಕಿರಿಯ ವಿಶ್ವ ಕೋಶವಾದ ‘ಜ್ಞಾನಗಂಗೋತ್ರಿ’ಯ 7 ಸಂಪುಟಗಳು, ವಿಶ್ವಕಥಾ ಕೋಶದ 25ಸಂಪುಟಗಳು ಅಲ್ಲದೆ 10 ಭಾಷಾಂತರ ಕೃತಿಗಳು ಅವರಿಗೆ ಕನ್ನಡ ಸಾಹಿತ್ಯದಲ್ಲಿ ಅನನ್ಯವಾದ ಸ್ಥಾನ ನೀಡಿವೆ.

ಕಡು ಬಡತನದಲ್ಲಿ ನಿರಂಜನ ಅವರ ತಾಯಿ ಏಕಾಂಗಿಯಾಗಿ ತಮ್ಮ ಏಕಮಾತ್ರ ಮಗನನ್ನು ಬೆಳೆಸಿದರು.  ತಮ್ಮ ಬಾಲ್ಯದಲ್ಲಿ ಶಿವರಾಮ ಕಾರಂತರ ಮಕ್ಕಳ ಕೂಟಗಳಲ್ಲಿ ಭಾಗಿಯಾಗಿದ್ದ ಮತ್ತು ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದ ಅವರು ‘ಕಿಶೋರ’ ಮೊದಲಾದ ಕಾವ್ಯನಾಮಗಳಿಂದ ಕತೆ, ಲೇಖನಗಳನ್ನು ಬರೆಯುತ್ತಿದ್ದರು. ಹತ್ತನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ಮಂಗಳೂರಿನಲ್ಲಿ ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರಬಂಧು’ ಪತ್ರಿಕೆಯಲ್ಲಿ ಉದ್ಯೋಗಿಯಾಗಿ ಸೇರಿದರು. ಮುಂದೆ ಅವರು ಬೆಂಗಳೂರಿನಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದರು. ಪತ್ರಕರ್ತರಾಗಿ ಕಯ್ಯೂರು ಹೋರಾಟದ ನಾಯಕರ ವಿರುದ್ಧ ಮೊಕದ್ದಮೆ ಬಗ್ಗೆ ವರದಿ ಮಾಡುತ್ತಾ ಕಮ್ಯುನಿಸ್ಟ್ ಚಳುವಳಿಯತ್ತ ಆಕರ್ಷಿತರಾದರು. ಎಡಪಂಥೀಯ ನಿಲುವಿನ ಕುಳಕುಂದ ಶಿವರಾಯರು ತೆಲಂಗಾಣ ಚಳವಳಿ ಬಗ್ಗೆ ಬರೆಯಲು ಆ ಸಂದರ್ಭದಲ್ಲಿ ಬಳಸಿದ ಗುಪ್ತನಾಮ ‘ನಿರಂಜನ’ ಮುಂದಿನ ಅವರ ಸಾಹಿತ್ಯ ಬರಹಗಳ ಕಾವ್ಯನಾಮವಾಗಿ ಪರಿವರ್ತಿತವಾಯಿತು.

 

 

 

 

 

 

 

 

 

 

 

 

 

ಇಷ್ಟು ಕೊಡುಗೆಯನ್ನು ನೀಡಿದ ಸಾಹಿತಿಯೊಬ್ಬರ ಬರಹಗಳು ಇಂದಿನ ಹೊಸ ಪೀಳಿಗೆಯ ಎಷ್ಟುಜನ ಓದುಗರಿಗೆ ತಿಳಿದಿದೆ?  ಹಾಗಾಗಿ  ನಿರಂಜನರ ಕೃತಿಗಳ ಮರು ಓದು ಹಾಗೂ ನಿರಂಜನ ನೆನಪು ಇಂದಿನ ಅಗತ್ಯವಾಗಿದೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ: ಬಿ ನಾಗೇಂದ್ರಗೆ ಆಗಸ್ಟ್‌ 3ರ ವರೆಗೆ ನ್ಯಾಯಾಂಗ ಬಂಧನ

ನಿರಂಜನರ ಬರಹಗಳನ್ನು ಅದರಲ್ಲೂ ಮುಖ್ಯವಾಗಿ ಕಾದಂಬರಿಗಳನ್ನು ಗಮನಿಸಿದಾಗ ಅವರ ಜನಪರ ದೃಷ್ಟಿ ಸ್ಪಷ್ಟವಾಗಿ ಗೋಚರಿಸುವುದು ಸ್ಪಷ್ಟವೇ ಇದೆ. ಆದರೆ ಅವರ ಬರವಣಿಗೆಯಲ್ಲಿ ಹೊಸ ಸಮಾಜವನ್ನು ಕಟ್ಟುವ ಅವರ ಆದರ್ಶ ಕೇವಲ ಕನಸುಗಾರಿಕೆ ಅಲ್ಲ. ಬರವಣಿಗೆಯ ಚಿತ್ರಕ ಶಕ್ತಿಯ ವಿವರ ಹಾಗೂ ರೂಪಕ ಶಕ್ತಿಯ ವೈವಿಧ್ಯಗಳಿಂದ ನಿರಂಜನರ ಸಾಹಿತ್ಯ ಅವರ ಸಾಹಿತ್ಯಿಕ ಆಶಯವನ್ನು ವಾಸ್ತವದ ವಿವರವಾಗಿ ಕಟ್ಟುತ್ತದೆ. ಇದೊಂದು ರೀತಿಯಲ್ಲಿ ಕಲ್ಪಿತ ವಾಸ್ತವ ರೀತಿಯ ಸೃಷ್ಟಿಯೂ ಹೌದಾದರೂ ನಿರಂಜನರು ಆಶಯದ ಅಭಿವ್ಯಕ್ತಿಯನ್ನು ವಾಸ್ತವದ ಚಿತ್ರಕ ವಿವರಗಳಲ್ಲಿ ನೀಡುತ್ತಾರೆ.

ಕನ್ನಡ ನಾಡಿನಲ್ಲಿ 1943ರ ಡಿಸೆಂಬರ್‌ನಲ್ಲಿ ಪ್ರಗತಿಶೀಲ ಲೇಖಕರ ಸಂಘ ಅಸ್ತಿತ್ವಕ್ಕೆ ಬಂದಿತು.  ಎಡಪಂಥೀಯ ಸ್ಪಷ್ಟ ನಿಲುವಿನ ನಿರಂಜನ ಅವರು ‘ಕಲೆಗಾಗಿ ಕಲೆ’ ಎಂಬ  ಒಲವನ್ನು ಸಂಪೂರ್ಣ ವಿರೋಧಿಸುತ್ತಿದ್ದರು. . ‘ಪ್ರಗತಿಶೀಲ ಸಾಹಿತ್ಯ’ ಎಂಬ ಪ್ರಬಂಧಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆಯುತ್ತಾ  ”ಪ್ರಗತಿಶೀಲ ಸಾಹಿತಿಗಳ ಗುರಿ ಕೇವಲ ಸಾಮಾಜಿಕವಾದ ಸಾಹಿತ್ಯವನ್ನು ನಿರ್ಮಾಣ ಮಾಡುವುದೇ ಅಲ್ಲ, ಸಾಹಿತ್ಯದಲ್ಲಿ ನೈಸರ್ಗಿಕತೆಯೂ ಇರಬೇಕು. ಅಜೇಯ ಶಕ್ತಿಯೂ ಇರಬೇಕು. ಅದು ನಮ್ಮ ಜನತೆಯ  ಮಾರ್ಗದರ್ಶಕವಾಗಿರಬೇಕು. ತನ್ನ ಬಾಳಿನಿಂದ, ಭಾವನೆಯಿಂದ, ವಿಚಾರದಿಂದ ಈ ಉದ್ದೇಶದಿಂದ ಹೊರಗೆ ನಿಂತ ಸಾಹಿತ್ಯ ಸತ್ತ ಸಾಹಿತ್ಯ,” ಎಂದು ಘೋಷಿಸಿದ್ದರು. ನಿರಂಜನ ತಮ್ಮ ತತ್ವಕ್ಕೆ ಬದ್ಧರಾಗಿಯೂ ಬದುಕಿನ ವಿವರಗಳನ್ನು ಅಗಾಧ ಜೀವ ಪ್ರೀತಿಯಿಂದ ಬರಹಗಳಲ್ಲಿ ಕಟ್ಟಿದರು.

ನಿರಂಜನ ಅವರ ಮರು ಓದನ್ನು ಸಾಧ್ಯ ಮಾಡುವತ್ತ ಐ.ಬಿ.ಎಚ್ ಮತ್ತು ಕ್ರಿಯಾ ಮಾಧ್ಯಮ ವರ್ಷ ಪೂರ್ತಿ ಪ್ರಕಟಣೆ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಆರಂಭಿಕ ಕಾರ್ಯಕ್ರಮವಾಗಿ ನಾಲ್ಕು ಪುಸ್ತಕಗಳ ಬಿಡುಗಡೆ ಮತ್ತು ಮರು ಓದು ಮಾತುಕತೆ ಹಮ್ಮಿಕೊಂಡಿದೆ. ಜುಲೈ 27 ಶನಿವಾರದಂದು ಸಂಜೆ 4 ಗಂಟೆಯಿಂದ ಈ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರಿನ ಕುವೆಂಪು ಸಬಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ತೇಜಸ್ವಿನಿ ನಿರಂಜನ ಪುಸ್ತಕ ಬಿಡುಗಡೆ ಮಾಡುತ್ತಾರೆ. ಇದೇ ವೇಳೆ ಮರು ಓದು – ಮಾತುಕತೆ ಕಾರ್ಯಕ್ರಮ ನಡೆಯಲಿದೆ. ನಿರಂಜನರ ಕಥಾ ಪ್ರಪಂಚ ಕುರಿತು ಚಿಂತಕ ಡಾ. ಬಿ.ಆರ್. ಮಂಜುನಾಥ್ ಮಾತನಾಡಲಿದ್ದಾರೆ. ನಿರಂಜನರ ಕಾದಂಬರಿಗಳ ಕುರಿತು, ಚ.ಹ. ರಘುನಾಥ್ ಮಾತನಾಡಲಿದ್ದಾರೆ. ದೃಶ್ಯ ಮಾಧ್ಯಮಗಳಲ್ಲಿ ನಿರಂಜನರ ಕತೆ ಕಾದಂಬರಿ ಕುರಿತು ಬಿ. ಸುರೇಶ್ ಮಾತನಾಡಲಿದ್ದಾರೆ. ಡಾ.ಎಂಜಿ ಹೆಗಡೆ, ಐಬಿಎಚ್ ಪ್ರಕಾಶನದ ಸಂಜಯ್ ಅಡಿಗ, ಕ್ರಿಯಾ ಮಾಧ್ಯಮದ ಕೆ.ಎಸ್. ವಿಮಲಾ, ವಸಂತರಾಜ್ ಉಪಸ್ಥಿತರಿರುವರು.  ಈ ಕಾರ್ಯಕ್ರಮವು ಜನಶಕ್ತಿ ಮೀಡಿಯ ಫೆಸ್ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *