(ಕಾರ್ಟೂನ್ ಕೃಪೆ :ಪಿ ಮಹಮ್ಮದ್)
ವಸಂತರಾಜ ಎನ್.ಕೆ
ಆತ್ಮೀಯ ಗೋರ್ಬಚೇವ್,
ಈ ಪತ್ರವನ್ನು ನೀನು ಇರುವಾಗಲೇ ಬರೆಯಬೇಕಿತ್ತು. ಆದರೆ ಈಗಲಾದರೂ ಬರೆಯದೆ ವಿಧಿಯಿಲ್ಲ. ನೀನು ಇದ್ದಿ ಎಂದು ಎಲ್ಲರಂತೆ ನನಗೂ ನಿನ್ನ ನಿಧನದ ಸುದ್ದಿ ಬಂದಾಗಲೇ ಗೊತ್ತಾಗಿದ್ದು. ಒಂದು ಕಾಲದಲ್ಲಿ ನಿನ್ನ ‘ಅಭಿಮಾನಿ’ಯಾಗಿದ್ದ ನನಗೆ ಈಗಲಾದರೂ ವಿಶ್ವದಲ್ಲಿ ನಿನ್ನ ಚಾರಿತ್ರಿಕ ಪಾತ್ರ ನೆನೆಸಿಕೊಂಡು, ಕೆಲವು ಪ್ರಶ್ನೆಗಳನ್ನು ಕೇಳಿ ಪತ್ರ ಬರೆಯಬೇಕೇನಿಸಿತು.
ನೀನು ಇತ್ತೀಚೆಗೆ ಸತ್ತಾಗ ಪಶ್ಚಿಮದ ನಾಯಕರು, ಮಾಧ್ಯಮಗಳು ನಿನ್ನನ್ನು ಹೊಗಳಿ ಅಟ್ಟಕ್ಕೇರಿಸಿದರು. ಶೀತಸಮರವನ್ನು ರಕ್ತಪಾತವಿಲ್ಲದೆ ‘ಶಾಂತಿಯುತವಾಗಿ’ ಕೊನೆಗೊಳಿಸಿದ್ದಕ್ಕೆ, ಸೋವಿಯೆಟ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಜನತೆಗೆ ‘ಪ್ರಜಾಪ್ರಭುತ್ವ’, ‘ಸ್ವಾತಂತ್ರ್ಯ’ ಕೊಟ್ಟಿದ್ದಕ್ಕೆ ಕೊಂಡಾಡಿದರು.
ಆದರೆ ನೀನು ಅಧ್ಯಕ್ಷನಾಗಿದ್ದ ಸೋವಿಯೆಟ್ ಒಕ್ಕೂಟದ ರಶ್ಯ ಮತ್ತಿತರ ಗಣರಾಜ್ಯಗಳಲ್ಲಾಗಲಿ, ಪೂರ್ವ ಯುರೋಪಿನ ದೇಶಗಳಲ್ಲಾಗಲಿ ಜನರಾಗಲಿ, ಸರಕಾರಗಳಾಗಲಿ (ಅಧಿಕೃತ ಶಿಷ್ಷಾಚಾರದ ಶೋಕ ಸಂದೇಶ ಬಿಟ್ಟರೆ) ಕಂಬನಿ ಸುರಿಸಲಿಲ್ಲ. ನಮಗೆ ‘ಸ್ವಾತಂತ್ರ್ಯ’ ಕೊಟ್ಟ ನಾಯಕ ಎಂದು ಕೊಂಡಾಡಲಿಲ್ಲ. ಮಾತ್ರವಲ್ಲ ಈತನಿಂದ ದೇಶ ಅಧೋಗತಿಗೆ ಹೊಯಿತು, ನಮ್ಮ ಜೀವನ ದುರ್ಭರವಾಯಿತು ಎಂದು ತಮ್ಮ ಆಕ್ರೋಶವನ್ನು ಸಾಮಾಜಿಕ ಮಾಧ್ಯಮದಲ್ಲೂ ಇತರೆಡೆಯಲ್ಲೂ ಜನ ಹೊರಹಾಕಿದರು ಎಂದು ವರದಿಯಾಗಿದೆ.
1996ರಲ್ಲಿ ನೀನು ರಶ್ಯನ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ನಿನಗೆ ಕೇವಲ 0.5% ಮತ ಬಂತಂತೆ. ನಿನ್ನ ಆಡಳಿತದಲ್ಲಿ ಸೋವಿಯೆಟ್ ಒಕ್ಕೂಟ ಎಲ್ಲ ರೀತಿಯಲ್ಲೂ ಹಿನ್ನಡೆ ಅನುಭವಿಸಿತು ಎಂದು ಕಳೆದ ವರ್ಷದ ಸಮೀಕ್ಷೆಯೊಂದರಲ್ಲಿ ಶೇ. 70 ಜನ ಹೇಳಿದರಂತೆ. ಇನ್ನೊಂದು ಸಮೀಕ್ಷೆಯಲ್ಲಿ ರಶ್ಯದಲ್ಲಿ ಕಳೆದ ಶತಮಾನದ ಅತ್ಯಂತ ಕಡಿಮೆ ಜನಪ್ರಿಯತೆ ಪಡೆದ ನಾಯಕ ನೀನು ಎಂದು ಜನ ಗುರುತಿಸಿದ್ದಾರಂತೆ. ಸಮಾಜವಾದಿ ಮತ್ತು ಮೂರನೇಯ ಜಗತ್ತಿನ ದೇಶಗಳಲ್ಲಿ ಸಹ ಹೆಚ್ಚು ನಕಾರಾತ್ಮಕ ಪ್ರತಿಕ್ರಿಯೆಯೇ ವ್ಯಕ್ತವಾಯಿತಂತೆ.
ಇದು ಯಾಕೆ ಹೀಗೆ, ಗುರುಬಸ್ಯಾ?!
ಹೌದು ನೀನು ಜಾಗತಿಕವಾಗಿ 1980ರ ದಶಕದಲ್ಲಿ ಭಾರೀ ಸುದ್ದಿಯಲ್ಲಿದ್ದಾಗ, ಕರ್ನಾಟಕದಲ್ಲಿ ನಿನ್ನನ್ನು ಪ್ರೀತಿಯಿಂದ (ಕೆಲವರು ವ್ಯಂಗ್ಯವಾಗಿಯೂ!) ನಿನ್ನ ಹೆಸರನ್ನು ಕನ್ನಡೀಕರಿಸಿ ಹೀಗೆ ಕರೆಯುತ್ತಿದ್ದರು. ಗೊತ್ತಾ?
ಇದೇ ಸಮಯದಲ್ಲಿ 1997ರ ‘ಪಿಜ್ಜಾ ಹಟ್’ ತಯಾರಿಸಿದ ಜಾಹೀರಾತು ಒಂದು ಎಲ್ಲ ಮಾಧ್ಯಮಗಳಲ್ಲೂ ವೈರಲ್ ಆಯಿತು. ಈ ಜಾಹೀರಾತು ವಿಡಿಯೊದಲ್ಲಿ ಮಾಸ್ಕೋದ ಕೆಂಪು ಚೌಕದ ಬಳಿ ಇರುವ ‘ಪಿಜ್ಜಾ ಹಟ್’ಗೆ ನೀನು ಮೊಮ್ಮಗಳ ಜತೆ ಹೋಗುತ್ತಿ. ನಿನ್ನನ್ನು ನೋಡಿ ಅಲ್ಲಿಯ ಒಂದು ಟೇಬಲ್ ನಲ್ಲಿ ಕುಳಿತು ಊಟ ಮಾಡುತ್ತಿರುವವರಲ್ಲಿ ನಿನ್ನ ಪಾತ್ರದ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಕೆಲವರು ನಿನ್ನಿಂದ ‘ಅವಕಾಶ’ ಮತ್ತು ‘ಸ್ವಾತಂತ್ರ್ಯ’ ಸಿಕ್ಕಿತು ಎಂದರು. ಕೆಲವರು ನೀನು ಕೊಟ್ಟಿದ್ದು ‘ಆರ್ಥಿಕ ಗೊಂದಲ’ ಮತ್ತು ‘ರಾಜಕೀಯ ಅಸ್ಥಿರತೆ’ ಮಾತ್ರ ಎಂದರು. ಆಗ ಒಬ್ಬಾಕೆ ನೀನು “ಅವರೇ ನಮಗೆ ಈ ಪಿಜ್ಜಾ ಹಟ್ ಕೊಟ್ಟಿದ್ದು ಅಲ್ವಾ?” ಎನ್ನುತ್ತಾಳೆ. ಆಗ ಎಲ್ಲರೂ ಎದ್ದು ‘ಹೈಲ್ ಗೋರ್ಬಚೆವ್’ ಅನ್ನುತ್ತಾರೆ.
ಈ ವಿಡಿಯೊವನ್ನು ನಿನ್ನನ್ನು ಕೊಂಡಾಡುವವರೂ, ಕಟುಟೀಕೆ ಮಾಡುವವರೂ ಹಂಚಿಕೊಂಡರು. ಏನಿದರ ಅರ್ಥ? ಇದಕ್ಕೆ ಎಲ್ಲರ ಸಹಮತಿ ಇದೆಯಂತಲಾ? ನೀನೂ ಈ ಜಾಹೀರಾತಿನಲ್ಲಿ ಭಾಗವಹಿಸಿದಿ. ಅಂದರೆ ನೀನೂ ಇದನ್ನು ಒಪ್ಪಿದ್ದಿ ಅಂತಲಾ?
ಎಂಥ ಮಾರಾಯ ಇದು! ನಿನ್ನ ಬಗ್ಗೆ ನನಗೂ ಟೀಕೆ ಇದೆ. ಆದರೆ ರಶ್ಯನರಿಗೆ ನಿನ್ನ ಕೊಡುಗೆ ‘ಪಿಜ್ಜಾ ಹಟ್’ ಮಾತ್ರ ಅನ್ನುವುದು ನಿನಗೆ ಮಾಡುವ ದೊಡ್ಡ ಅವಮಾನ. ನಿನ್ನನ್ನು ಹೀಗೆ ಕಂಡೆಮ್ ಮಾಡುವುದನ್ನು ನಾನಂತೂ ಒಪ್ಪುವುದಿಲ್ಲ.
ಆಗ ಅಮೆರಿಕ-ಸೋವಿಯೆಟ್ ಪೈಪೋಟಿಯು ಅಣ್ವಸ್ತ್ರ ಯುದ್ಧದಲ್ಲಿ ಮತ್ತು ಮನುಕುಲದ ನಾಶದಲ್ಲಿ ಕೊನೆಗೊಳ್ಳುವ ಭೀತಿ ನಿವಾರಿಸಿದ್ದರಲ್ಲಿ ನಿನ್ನ ಪಾತ್ರ ಮರೆಯಲು ಸಾಧ್ಯವೇ? ವಿಶ್ವಶಾಂತಿಗೆ ನೀನು ಹಲವು ಹೊಸ ದಿಟ್ಟ ಪ್ರಸ್ತಾವಗಳನ್ನು ಪುಂಖಾಂನುಪುಂಖವಾಗಿ, ಅಮೇರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳ ಮುಂದಿಟ್ಟೆ. ಹಲವು ಸೋವಿಯೆತ್ ಶಸ್ತ್ರಾಸ್ತ್ರ ಕಡಿತಗಳು, ಮೊದಲ ಅಣ್ವಸ್ತ್ರ ದಾಳಿ ಸನ್ಯಾಸ, ಹೊಸ ರೀತಿಯ ಶಸ್ತ್ರಾಸ್ತ್ರ ಬೆಳವಣಿಗೆ ಸನ್ಯಾಸ – ಮುಂತಾದ ಸ್ವಯಂ-ಸ್ಪೂರ್ತ ನಿರ್ಧಾರಗಳನ್ನು ಘೋಷಿಸಿದಿ. ಸಾಮೂಹಿಕ ನಾಶದ ಮಾರಕಾಸ್ತ್ರಗಳನ್ನು ತೀವ್ರವಾಗಿ ಕಡಿತ ಮಾಡಿ 2000ರೊಳಗೆ ಪೂರ್ಣ ನಾಶ ಮಾಡುವ ನಿನ್ನ ಪ್ರಸ್ತಾವಗಳು ಅದಕ್ಕೆ ಪಶ್ಚಿಮದ ದೇಶಗಳು ಸೇರಿದಂತೆ ಜಗತ್ತಿನಲ್ಲೂ ಜನತೆಯ ಅತ್ಯುತ್ಸಾಹ-ಭರಿತ ಸಂಭ್ರಮದ ಪ್ರತಿಕ್ರಿಯೆ ಈ ಕುರಿತು ಮನಸ್ಸಿಲ್ಲದ ಅಮೇರಿಕನ್ ಸರ್ಕಾರದ ಮೇಲೆ ಭಾರಿ ಒತ್ತಡ ಹೇರಿತು. ಇದು ಸೋವಿಯೆತ್ ಶಾಂತಿ ದಾಳಿ (Peace Offensive) ಎಂದು ಹೆಸರಾಯಿತು. ವಿಶ್ವ ಶಾಂತಿಗೆ ಸೋವಿಯೆತ್ ಒಕ್ಕೂಟ ಪೂರ್ಣವಾಗಿ ಬದ್ಧವಾಗಿದೆ. ಇದು ಸೋವಿಯೆತ್ ಒಕ್ಕೂಟಕ್ಕೂ ಇಡೀ ವಿಶ್ವಕ್ಕೂ ಒಳ್ಳೆಯದು. ಶಸ್ತ್ರಾಸ್ತ್ರಗಳನ್ನು ತೀವ್ರವಾಗಿ ಕಡಿತ ಮಾಡಿ ನಾಶ ಮಾಡುವ ಮತ್ತು ಆ ಮೂಲಕ ಸಿಗುವ ಅಪಾರ ಸಂಪನ್ಮೂಲಗಳನ್ನು ಜನರ ಜೀವನಮಟ್ಟ ಉತ್ತಮಪಡಿಸಲು ತೀವ್ರ ಬೆಳವಣಿಗೆಯ ಹೂಡಿಕೆಗೆ ಬಳಸುವುದು, ನಿನ್ನ ‘ಶಾಂತಿ ದಾಳಿ’ಯ ಉದ್ದೇಶವಾಗಿತ್ತು. ಅಲ್ಲದೆ ಸೋವಿಯೆತ್ ಒಕ್ಕೂಟದ ರಕ್ಷಣೆಗೆ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳ ಉತ್ಪಾದನೆಯ ಬದಲು ಶಾಂತಿ ಬಗ್ಗೆ ತೀವ್ರ ರಾಜಕೀಯ ಪ್ರಚಾರದ, ಸೋವಿಯೆತ್ ಮತ್ತು ವಿಶ್ವದ ಜನತೆಯ ರಾಜಕೀಯ ಪ್ರಜ್ಞೆ ಎತ್ತರಿಸುವ ಹೊಸ ವಿಧಾನವನ್ನು ನೀನು ಅನುಸರಿಸಿದ್ದು ಕಡಿಮೆ ಸಾಧನೆಯಲ್ಲ.
ಇದು ABM, INF, START 1 ಎಂಬ ಮೂರು ಪ್ರಮುಖ ಶಸ್ತ್ರಾಸ್ತ್ರ ಕಡಿತ ಒಪ್ಪಂದಗಳಿಗೆ ಕಾರಣವಾಯಿತು. ಮೊದಲ ಹಂತಗಳಲ್ಲಿ ಇದು ಸಾಕಷ್ಟು ಯಶಸ್ವಿಯೂ ಆಯಿತು. ಆಗಿದ್ದ ಅಣ್ವಸ್ತ್ರಗಳ ಐದನೇ ಒಂದು ಭಾಗ ಮತ್ತು ದೂರಗಾಮಿ ಕ್ಷಿಪಣಿಗಳಲ್ಲೂ ಕಡಿತವಾಯಿತು. ಎರಡನೇ ಮಹಾಯುದ್ಧದ ಭೀಕರ ಅನುಭವ ಇದ್ದ ಸೋವಿಯೆತ್ ಜನತೆ ಸಹ ‘ಶಾಂತಿದಾಳಿ’ ಯನ್ನು ಉತ್ಸಾಹದಿಂದ ಸ್ವಾಗತಿಸಿತು. ಶಾಂತಿ ಮತ್ತು ಬೆಳವಣಿಗೆಯ ಈ ಹೊಸ ಪ್ರಯೋಗವನ್ನು ಜಗತ್ತಿನ ಜನ ಅತಿ ಕುತೂಹಲದಿಂದ ಗಮನಿಸುತ್ತಿದ್ದರು. ಆ ನಂತರ ಈ ಎರಡು ಒಪ್ಪಂದಗಳಿಂದ ಅಮೆರಿಕ ಹಿಂದೆ ಸರಿಯಿತು. ಒಂದು ಒಪ್ಪಂದದ ಅವಧಿ ಕೊನೆಗೊಂಡಿದೆ.
ಆದರೂ ನಿನ್ನ ‘ಶಾಂತಿ ದಾಳಿ’ ಮತ್ತು ಶಸ್ತ್ರಾಸ್ತ್ರ ಕಡಿತ ಒಪ್ಪಂದಗಳಲ್ಲಿ ನಿನ್ನ ವೈಯಕ್ತಿಕ ಪಾತ್ರ ಯಾವತ್ತೂ ನೆನೆಯಬೇಕಾದ್ದು.
ಗ್ಲಾಸ್‌ನೋಸ್ತ್ (Openenes – ಮುಕ್ತತೆ) ಮತ್ತು ಪೆರೆಸ್ತ್ರೊಯಿಕ (Restructuring – ಪುನರ‍್ರಚನೆ) ಎಂಬ ಎರಡು ಶಬ್ದಗಳ ಮೂಲಕ ನೀನು ಸಾರಿದ ಸಂದೇಶ ಸಹ ಬೇರೇ ಅರ್ಥದಲ್ಲಿ ಮರೆಯಲಾಗದ್ದು. ಈ ಎರಡು ಶಬ್ದಗಳಲ್ಲಿ ಸೋವಿಯೆಟ್ ಒಕ್ಕೂಟದ ಸಮಾಜವಾದದ ಸಮಗ್ರ ಸುಧಾರಣೆಗಳ ಆಶಯ ಮತ್ತು ಸಾರವನ್ನು ನೀನು ಸಂಕ್ಷಿಪ್ತವಾಗಿ ಪರಿಣಾಮಕಾರಿಯಾಗಿ ಸಾರಿದಿ. ಸೋವಿಯೆತ್ ಕಮ್ಯುನಿಸ್ಟ್ ಪಕ್ಷದ 27ನೇ ಮಹಾಧಿವೇಶನದಲ್ಲಿ ನೀನು ಮುಂದಿಟ್ಟ – ಸಮಗ್ರ ಸುಧಾರಣೆಗಳು, ಬೆಳವಣಿಗೆಯ ವೇಗವರ್ಧನೆ ಮತ್ತು ಪ್ರಜಾಪ್ರಭುತ್ವೀಕರಣದ – ಪ್ರಸ್ತಾವಗಳನ್ನು ಹೀಗೆ ವ್ಯಕ್ತಪಡಿಸಿದ್ದಿ. ಇದಕ್ಕೆ ಸೋವಿಯೆತ್ ಒಕ್ಕೂಟದಲ್ಲಿ, ಇಡೀ ಜಗತ್ತಿನಲ್ಲೂ ಸಂಭ್ರಮದ ಸ್ವಾಗತ ಸಿಕ್ಕಿತು. ಆ ಬಗ್ಗೆ ಪ್ರಜ್ಞೆ, ಆಸಕ್ತಿ ಮತ್ತು ಉತ್ಸಾಹ ತುಂಬುವುದರಲ್ಲಿ ಸಾಕಷ್ಟು ಯಶಸ್ವಿಯಾದಿ. “ಈ ಮಹಾನ್ ಕ್ರಾಂತಿಯ 70ನೇ ವಾರ್ಷಿಕೋತ್ಸವ ಒಂದು ಹೆಮ್ಮೆಯ ಕ್ಷಣ.. ಸಮಾಜವಾದಕ್ಕಾಗಿ ದುಡಿದ ಲಕ್ಷಾಂತರ ಜನರನ್ನು ನೆನೆಸಿಕೊಳ್ಳುವ ಒಂದು ನೆನಪಿನ ಕ್ಷಣ… ಸಮಾಜವಾದದ ವಿಜಯಗಳು, ಸೋಲುಗಳ ಬಗ್ಗೆ ಒಂದು ಚಿಂತನೆಯ ಕ್ಷಣ. ವಿಶ್ವದ ಭವಿಷ್ಯದ ಬಗ್ಗೆ ಒಂದು ಮುಂಗಾಣ್ಕೆಯ ಕ್ಷಣ..” ಎಂದು ನೀನು ಅಕ್ಟೋಬರ್ ಕ್ರಾಂತಿಯ 70ನೇ ವಾರ್ಷಿಕೋತ್ಸವದಲ್ಲಿ ಕೊಟ್ಟ ಸಮಾಜವಾದಿ ಪುನರ್ನವೀಕರಣದ ಚೈತನ್ಯಶೀಲ ಸಂದೇಶ ನನ್ನಲ್ಲಿ ಮಾತ್ರವಲ್ಲ, ಸಮಸಮಾಜದ ಆಶಯಗಳನ್ನು ಹೊತ್ತಿದ್ದ ಕೋಟ್ಯಾಂತರ ಜಗತ್ತಿನ ಜನರಲ್ಲೂ ಪುಳಕ ತಂದಿತ್ತು.
ಆದರೆ ಗ್ಲಾಸ್‌ನೋಸ್ತ್ ಮತ್ತು ಪೆರೆಸ್ತ್ರೊಯಿಕ ಆಶಯಗಳ ಜಾರಿಯಲ್ಲಿ ನೀನು ಪೂರ್ಣವಾಗಿ ಎಡವಿದಿ ಮಾರಾಯ!
ಸೋವಿಯೆಟ್ ಕಮ್ಯುನಿಸ್ಟ್ ಪಕ್ಷದ 27ನೆಯ ಮಹಾಧಿವೇಶನದ ನಿರ್ದೇಶನಗಳು ಸ್ಪಷ್ಟವಾಗಿದ್ದವು, ಸರಿಯಾಗಿದ್ದವು. ಅದರ ಸರಿಯಾದ ಜಾರಿ ಮಾಡಿದ್ದರೆ ಪ್ರಜಾಪ್ರಭುತ್ವ, ಆರ್ಥಿಕತೆಯ ಸುಧಾರಣೆಗಳು ಸಮಾಜವಾದಿ ವ್ಯವಸ್ಥೆಯ ಪುನರ್ನವೀಕರಣ ಮಾಡುತ್ತಿದ್ದವು. ಆದರೆ ಸ್ವಲ್ಪ ಆರಂಭಿಕ ಪ್ರಗತಿಯ ನಂತರ ಸುಧಾರಣೆಗಳು ಸಂಪೂರ್ಣವಾಗಿ ಹಾದಿ ತಪ್ಪಿದವು. ಆರ್ಥಿಕ ಸುಧಾರಣೆಗಳು ಹಾದಿ ತಪ್ಪಿ ವಿಪರೀತ ಬೆಲೆ ಏರಿಕೆ, ಅಗತ್ಯ ವಸ್ತುಗಳ ಅಭಾವ, ಕೃಷಿ-ಕೈಗಾರಿಕಾ ಉತ್ಪಾದನೆಯ ಕುಂಠಿತಗೊಳ್ಳುವುದರಲ್ಲಿ ಅವಸಾನ ಗೊಂಡಿತು. ಸರಕಾರದ ನೀತಿಗಳಲ್ಲಿ ಕ್ರಮಗಳಲ್ಲಿ ಪೂರ್ಣ ಅರಾಜಕತೆ ತಾಂಡವವಾಡಿತು.
ಆದರೆ ನಿನ್ನ ಮೇಲಿನ ಅತ್ಯಂತ ಗುರುತರವಾದ ಆಪಾದನೆ ಪೂರ್ವ ಯುರೋಪಿನ ಸಮಾಜವಾದಿ ವ್ಯವಸ್ಥೆ, ಸೋವಿಯೆಟ್ ಒಕ್ಕೂಟದ ಮತ್ತು ಸೋವಿಯೆಟ್ ಕಮ್ಯುನಿಸ್ಟ್ ಪಕ್ಷದ ವಿಸರ್ಜನೆಗೆ ನೀನು ಪ್ರಮುಖ ಕಾರಣ ಎಂಬುದು. ಮಾತ್ರವಲ್ಲ ಈ ವಿಸರ್ಜನೆಗಳ ನಂತರ ಬಂದ ಸರಕಾರಗಳ ಯೆಲ್ಸಿನ್ ಮುಂತಾದ ನಾಯಕರು ನೀನು ನಾಯಕತ್ವಕ್ಕೆ ತಂದ ನಿನ್ನ ಶಿಷ್ಯರೇ. ಸೋವಿಯೆಟ್ ಒಕ್ಕೂಟದ ಮತ್ತು ಪೂರ್ವ ಯೂರೋಪಿನ ದೇಶಗಳಲ್ಲಿ ಈ ನಾಯಕರ ಆಡಳಿತದಲ್ಲಿ ಈ ದೇಶಗಳು ಪೂರ್ಣವಾಗಿ ದುರ್ಬಲಗೊಂಡವು. ಸೋವೀಯೆಟ್ ಒಕ್ಕೂಟದ ದೇಶಗಳಲ್ಲಿ 70 ವರ್ಷಗಳಲ್ಲಿ ಮತ್ತು ಪೂರ್ವ ಯುರೋಪಿನ ದೇಶಗಳಲ್ಲಿ 45 ವ಼ರ್ಷಗಳಲ್ಲಿ ಮಾಡಿದ ಸಾಧನೆಗಳೆಲ್ಲ ಮಣ್ಣುಪಾಲಾದವು. ಎಲ್ಲೆಡೆ ಪೆರೆಸ್ತ್ರೊಯಿಕ ಹೆಸರಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಮರುಸ್ಥಾಪಿಸಲಾಯಿತು ಮತ್ತು ಇದು ದೇಶಗಳನ್ನು ದುರ್ಬಲಗೊಳಿಸಿದವು ಮತ್ತು ಜನರ ಬದುಕನ್ನು ದುರ್ಭರಗೊಳಿಸಿದವು. 15 ಮಾಜಿ ಸೋವಿಯೆಟ್ ದೇಶಗಳಲ್ಲಿ 1991ರ ಉತ್ಪಾದನೆಯ ಮಟ್ಟ ಮುಟ್ಟಲು 2 ದೇಶಗಳಿಗೆ 10 ವರ್ಷಗಳು, 4 ದೇಶಗಳಿಗೆ 15 ವರ್ಷಗಳು, ಉಳಿದ 5 ದೇಶಗಳಿಗೆ ಇನ್ನೂ ಹೆಚ್ಚು ಕಾಲ ಬೇಕಾದವು. ಪೆರೆಸ್ತ್ರೊಯಿಕ ಅಥವಾ ಬಂಡವಾಳಶಾಹಿ ವ್ಯವಸ್ಥೆ ಸೋವಿಯೆತ್ ಒಕ್ಕೂಟದ ದೇಶಗಳಿಗೆ ಭಾರಿ ಸಮೃದ್ಧಿ ತರುವುದೆಂಬ ಭರವಸೆ ಪೊಳ್ಳಾಯಿತು.
ಇದಕ್ಕೆ ನಿನ್ನ ಉತ್ತರವೇನು? ಯಾಕೆ ಹೀಗಾಯಿತು?
ಒಂದು ವ್ಯವಸ್ಥೆ, ದೇಶ ಮತ್ತು ಪಕ್ಷವನ್ನು ಒಬ್ಬ ವ್ಯಕ್ತಿ ಮಾತ್ರ ಕಟ್ಟುವುದೂ ಸಾಧ್ಯವಿಲ್ಲ, ಕೆಡವುದು ಸಾಧ್ಯವಿಲ್ಲ ಎಂದು ನನಗೂ ಗೊತ್ತು. ಇವುಗಳ ಕಟ್ಟುವಿಕೆ, ಕೆಡವುವಿಕೆ ಸಂಕೀರ್ಣ ಪ್ರಕ್ರಿಯೆಗಳು. ಇದರಲ್ಲಿ ಹಲವು ಚಾರಿತ್ರಿಕ ಅಂಶಗಳು, ಶಕ್ತಿಗಳ ಪ್ರಭಾವ ಇರುತ್ತವೆ. ಅವುಗಳ ಆಂತರಿಕ ದೌರ್ಬಲ್ಯಗಳು ದೊಡ್ಡ ಪಾತ್ರ ವಹಿಸುತ್ತವೆ ಎಂಬುದು ನಿಜ. ಆದರೆ ಒಂದು ವ್ಯವಸ್ಥೆ, ದೇಶ ಮತ್ತು ಪಕ್ಷವನ್ನು ಸುಧಾರಿಸುವ ಪುರ್ನವೀಕರಿಸುವ ಭರವಸೆ ಮೂಡಿಸಿದ್ದ ಆಶ್ವಾಸನೆ ಕೊಟ್ಟಿದ್ದ ಮೇರು ನಾಯಕನಿಗೆ ಯಾವ ಜವಾಬ್ದಾರಿಯಿಲ್ಲವೇ? ಮಾತ್ರವಲ್ಲ ಸೋವಿಯೆಟ್ ಒಕ್ಕೂಟವನ್ನು ಮತ್ತು ಕಮ್ಯುನಿಸ್ಟ್ ಪಕ್ಷವನ್ನು ವಿಸರ್ಜನೆ ಮಾಡಲು ನಿನಗೆ ಅಧಿಕಾರ ಕೊಟ್ಟವರು ಯಾರು? ಅದನ್ನು ಮಾಡಲು ಕಾರಣವಾದರೂ ಏನು? ದೇಶದಲ್ಲೂ ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನಿನಗೆ ಒಂದೊಮ್ಮೆ ಅದನ್ನು ಮಾಡಬೇಕೆಂದಿದ್ದರೆ ನೀನು ಜನಮತ ಸಂಗ್ರಹ ಮಾಡಬೇಕಿತ್ತಲ್ಲ, ಪಕ್ಷದ ಮಹಾಧಿವೇಶನ ಕರೆಯಬೇಕಿತ್ತಲ್ಲ. ನಿನಗೆ ನಿರ್ವಹಣೆ ಮಾಡುವುದು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ಕೊಡಬಹುದಿತ್ತಲ್ಲ.
(ಕಾರ್ಟೂನ್ ಕೃಪೆ :ಪಿ ಮಹಮ್ಮದ್)
ಇದಕ್ಕೆ ನಿನ್ನ ಬಳಿ ಉತ್ತರವಿಲ್ಲ ಅಂತ ನನಗೆ ಗೊತ್ತು. ನನ್ನ ಉತ್ತರ ಕೇಳು.
ನಿನ್ನ ಗ್ಲಾಸ್‌ನೋಸ್ತ್ ಮತ್ತು ಪೆರೆಸ್ತ್ರೊಯಿಕ ಈ ದುರಂತಕಾರಿ ಅಂತ್ಯ ಕಂಡದ್ದು ಹೇಗೆ? ಉತ್ತಮ ಆರಂಭಿಕ ಪ್ರಗತಿಯ ನಂತರ ಪೆರೆಸ್ತ್ರೊಯಿಕ ಮತ್ತು ಗ್ಲಾಸ್‌ನೋಸ್ತ್ ಕ್ರಮೇಣ ಹಲವು ಭಾಷ್ಯಗಳಿಗೆ-ಅರ್ಥಗಳಿಗೆ ಒಳಗಾಗುತ್ತಾ ಹೋಯಿತು. ಪಕ್ಷ, ಸರ್ಕಾರ ಮತ್ತು ಸೋವಿಯೆತ್ ಸಮಾಜದಲ್ಲೂ ಈ ಹಲವು ಭಾಷ್ಯಗಳಿಗೆ-ಅರ್ಥಗಳಿಗೆ ಅಂಟಿಕೊಂಡ ಹಲವು ಬಣಗಳು ಹುಟ್ಟಿಕೊಂಡವು. ಮುಂದಿನ ಹಾದಿಯ ಬಗ್ಗೆ ಚರ್ಚೆ-ವಿವಾದ ಆರಂಭವಾಯಿತು. ಇಂತಹ ಚರ್ಚೆ ವಿವಾದ ಸೋವಿಯೆತ್ ಸಮಾಜದಲ್ಲಿ ಹೊಸತೇನಲ್ಲ. ಇಂತಹ ಸಂದರ್ಭಗಳಲ್ಲಿ ಸೋವಿಯೆತ್ ಕಮ್ಯುನಿಸ್ಟ್ ಪಕ್ಷ ಮತ್ತು ಸರ್ಕಾರದ ಹಿರಿಯ ನಾಯಕತ್ವ, ಈ ಚರ್ಚೆ ವಿವಾದಗಳನ್ನೆಲ್ಲಾ ಕ್ರೋಢೀಕರಿಸಿ, ಸಂಯೋಜಿಸಿ ಸಾಧ್ಯವಾದಷ್ಟು ಸರ್ವಸಮ್ಮತ ಹಾದಿ ಆಯ್ಕೆ ಮಾಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಈ ಪಾತ್ರ ವಹಿಸುವುದರಲ್ಲಿ ನೀನು ಮತ್ತು ನಿನ್ನ ನಿಕಟ ಸಹಚರರು ಪೂರ್ಣವಾಗಿ ವಿಫಲವಾದಿರಿ.
ಗ್ಲಾಸ್‌ನೋಸ್ತ್ ಮತ್ತು ಪೆರೆಸ್ತ್ರೊಯಿಕಾದ ಹಲವು ಭಾಷ್ಯಗಳು ಅರ್ಥಗಳು ಒದಗಿಸಿದ ಅವಕಾಶಗಳ ದುರುಪಯೋಗ ಮಾಡಿ ಹಲವು ನಕಾರಾತ್ಮಕ ಪ್ರವೃತ್ತಿಗಳು ಮೂಡಿ ಬರಲಾರಂಭಿಸಿದವು. ಸಮಾಜವಾದದ ಸಮಸ್ಯೆಗಳಿಗೆ ಪರಿಹಾರ ಎಂದು ಒಂದೊಂದಾಗಿ ಬಂಡವಾಳಶಾಹಿ ಪಥ್ಯಗಳನ್ನು ಸೂಚಿಸಲಾಯಿತು. ಅಮೇರಿಕನ್ ಆರ್ಥಿಕ ತಜ್ಞರ (ವಿಶ್ವಬ್ಯಾಂಕ್-ಐ.ಎಂ.ಎಫ್ ಸೇರಿದಂತೆ) ಅತಿಯಾದ ಪ್ರಭಾವದಲ್ಲಿದ್ದ ನಿನ್ನ ಹಲವು ನಿಕಟ ಸಲಹಾಗಾರರು ಆರ್ಥಿಕ ನೀತಿ ರೂಪಿಸುವ ಜವಾಬ್ದಾರಿಯನ್ನು ಪೂರ್ಣವಾಗಿ ‘ಹೈಜಾಕ್’ ಮಾಡಿದರು. ಸೋವಿಯೆಟ್ ಸಮಾಜದಲ್ಲಿ ರಾಜಕೀಯ, ಆರ್ಥಿಕ ಸಾಮಾಜಿಕ ಸುಧಾರಣೆ ತರುವ ದಾರಿ, ಹಂತಗಳ, ಆದ್ಯತೆಗಳ (ಅಥವಾ ಅದನ್ನು ಮುಟ್ಟಲು ಸ್ಪಷ್ಟ ವ್ಯೂಹ, ತಂತ್ರ) ಬಗ್ಗೆ ನಿನಗೆ ಸ್ಪಷ್ಟ ಕಲ್ಪನೆ ಇರಲಿಲ್ಲ.
ಈ ಎಲ್ಲ ಅವಾಂತರಗಳಿಗೆ ಒಬ್ಬ ವ್ಯಕ್ತಿಯನ್ನು ಜವಾಬ್ದಾರರಾಗಿಸುವುದು ತಪ್ಪು ಎಂದು ನನಗೆ ಗೊತ್ತು. ಸೋವಿಯೆಟ್ ಒಕ್ಕೂಟದಲ್ಲಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸವಾಲುಗಳು ಇದ್ದವು. ಸಾಕಷ್ಟು ವಿಚ್ಛಿದ್ರಕಾರಿ, ವಿಘಟನಾ, ಸಮಾಜವಾದ-ವಿರೋಧಿ, ವಿಸರ್ಜನಾವಾದಿ ಶಕ್ತಿಗಳು ಇದ್ದವು. ಆದರೆ ಇವೆಲ್ಲವನ್ನು ಒಂದೆಡೆಗೆ ತಂದು ಈ ವಿನಾಶಕಾರಿ ಕೆಲಸಕ್ಕೆ ಹಚ್ಚಲಿಕ್ಕೆ ನಿನ್ನ ‘ರಾಜಕೀಯ ಜಾಣತನ’ವಿಲ್ಲದೆ ಸಾಧ್ಯವಾಗುತ್ತಿರಲಿಲ್ಲವೇನೋ?
ಕಾಮ್ರೇಡ್ ಗೋರ್ಬಚೇವ್!
(ಕಾರ್ಟೂನ್ ಕೃಪೆ : ಆರ್.ಪ್ರಸಾದ್)
ಜಗತ್ತಿನ ಮೊದಲ ಸಮಾಜವಾದಿ ಪ್ರಭುತ್ವ ಸ್ಥಾಪಿಸಿದ ಮತ್ತು ಅತ್ಯಂತ ಪ್ರಬಲ ಕಮ್ಯುನಿಸ್ಟ್ ಪಕ್ಷದ ವಿಸರ್ಜನೆ ಮಾಡಿದವನನ್ನು ಕಾಮ್ರೇಡ್ ಅನ್ನಲು ನನಗೆ ನಾಚಿಕೆಯಾಗುತ್ತದೆ. ಆದರೆ ನೀನು ಆ ಪಕ್ಷದ ಕೊನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದವನೂ ಹೌದಲ್ಲ!
ಸಮಾಜವಾದಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಕಷ್ಟದ ಅಥವಾ ಅಸಾಧ್ಯವಾದ ಕೆಲಸ ಎಂದು ನೀನು ಹೇಳಬಹುದು. ನಿನ್ನ ಪ್ರಮಾದಗಳಿಂದಾಗಿ ಹಲವರು ಇದು ಅಸಾಧ್ಯವಾದ ಕೆಲಸ ಅಂದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಚೀನಾದ ಕಮ್ಯುನಿಸ್ಟರು ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಇನ್ನಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ (ಸೋವಿಯೆಟ್ ಒಕ್ಕೂಟದ ವಿಘಟನೆ ಅದನ್ನು ಇನ್ನಷ್ಟು ಕಷ್ಟಕರವಾಗಿಸಿತ್ತು) ತಮ್ಮ ಸಮಾಜವಾದಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಂದರು. ಜನರ ಜೀವನವೂ ಹಂತಹಂತವಾಗಿ ಉತ್ತಮಗೊಂಡಿದೆ. ಎರಡನೆಯ ದೊಡ್ಡ ಆರ್ಥಿಕವಾಗಿದ್ದು ಈಗ ಮೊದಲನೆಯ ಆರ್ಥಿಕವಾಗುವತ್ತ ದಾಪುಗಾಲು ಹಾಕುತ್ತಿದೆ. ನಿನ್ನ ನಾಯಕತ್ವ ತಂದ ಸುಧಾರಣೆಗಳ ಚರಿತ್ರೆಯನ್ನು ಚೀನೀ ಕಮ್ಯುನಿಸ್ಟ್ ಪಕ್ಷದ ಸೈದ್ಧಾಂತಿಕ ಶಿಕ್ಷಣ ತರಗತಿಗಳಲ್ಲಿ ಕಲಿಸುತ್ತಾರಂತೆ. ‘ಹೇಗೆ ಸುಧಾರಣೆಗಳನ್ನು ತರಬಾರದು, ಜಾಗರೂಕರಾಗಿರದಿದ್ದರೆ ಯಾವ ರೀತಿಯ ಪ್ರಮಾದಗಳು ಆಗಬಹುದು’ ಎಂಬುದಕ್ಕೆ ಮಾದರಿಯಾಗಿ ಕಲಿಸುತ್ತಾರಂತೆ! ಮಾರ್ಕ್ಸ್‌ವಾದ-ಲೆನಿನ್‌ವಾದ, ಸಮಾಜವಾದಿ ಗುರಿ, ಸಮಾಜವಾದ ಕಟ್ಟುವಲ್ಲಿ ಕಮ್ಯುನಿಸ್ಟ್ ಪಕ್ಷದ ನಿರ್ದೇಶಕ ಮಾರ್ಗದರ್ಶಕ ಪಾತ್ರದ ಪ್ರಾಧಾನ್ಯಗಳನ್ನು ನಿರ್ಲಕ್ಷ್ಯ ಮಾಡಿದ್ದು ಸೋವಿಯೆಟ್ ಸುಧಾರಣೆಗಳ ದುರಂತಕಾರಿ ಪರಿಣಾಮಗಳಿಗೆ ಕಾರಣ ಎಂದು ಒಬ್ಬ ವಕ್ರಾರ ಹೇಳಿದ್ದಾರಂತೆ. ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಬಗ್ಗೆ ನಿನ್ನ ಬೊಳೇತನವನ್ನೂ ಅವರು ಗುರುತಿಸಿದ್ದಾರೆ.
ಇದಕ್ಕೆ ನೀನು ಏನಂತಿ?
ಇವನ್ಯಾರು ಒಬ್ಬ ಇಂಡಿಯನ್ ನನ್ನನ್ನು ಕೇಳೋಕೆ ಅಂತಿಯಾ?
ಹೌದು. ನನಗೆ ಕೇಳಲು ಹಕ್ಕಿದೆ. ಯಾಕೆಂದರೆ ಸೋವಿಯೆಟ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಜಂಟಿ ಸಮಾಜವಾದಿ ವ್ಯವಸ್ಥೆ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ಯಜಮಾನಿಕೆಗೆ ಸೆಡ್ಡು ಹೊಡೆದಿತ್ತು, ತಡೆಯೊಡ್ಡಿತ್ತು. ನನ್ನ ಇಂಡಿಯಾ ಸೇರಿದಂತೆ ಆಗ ತಾನೇ ವಸಾಹತುಶಾಹಿಯಿಂದ ಸ್ವತಂತ್ರವಾಗಿದ್ದ ಮೂರನೆಯ ಜಗತ್ತಿನ ದೇಶಗಳ ಸ್ವತಂತ್ರ ಬೆಳವಣಿಗೆಗೆ ಒತ್ತಾಸೆಯಾಗಿತ್ತು. ಸೋವಿಯೆಟ್ ನಾಯಕತ್ವದ ವಾರ್ಸಾ ಒಪ್ಪಂದದ ಸಮಾನ ಮಿಲಿಟರಿ ಬಲವು, ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ನಾಟೋ ಮಿಲಿಟರಿ ಕೂಟದ ಆಕ್ರಾಮಕತೆಯನ್ನು ಹದ್ದುಬಸ್ತಿನಲ್ಲಿಟ್ಟಿತ್ತು. ಆ ಮೂಲಕ ಮೂರನೆಯ ಜಗತ್ತಿನ ದೇಶಗಳು ಶಾಂತಿಯಲ್ಲಿ ಬೆಳವಣಿಗೆಯತ್ತ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತ್ತು. ವಾರ್ಸಾ ಒಪ್ಪಂದವನ್ನು ನೀನು ಏಕಪಕ್ಷೀಯವಾಗಿ ಬರ್ಖಾಸ್ತು ಮಾಡಿದ್ದು ಮೂರನೆಯ ಜಗತ್ತಿನ ನಮ್ಮೆಲ್ಲರ ದೃಷ್ಟಿಯಲ್ಲಿ ಅಕ್ಷಮ್ಯ ಅಪರಾಧ. ಜರ್ಮನ್ ಐಕ್ಯತೆಗೆ ವಾರ್ಸಾ ಒಪ್ಪಂದದ ಮತ್ತು ನಾಟೋ ಕೂಟ ಎರಡೂ ಸಹ ಬರ್ಖಾಸ್ತಾಗಬೇಕು ಅಂತ ಷರತ್ತನ್ನು ಯಾಕೆ ನೀನು ಹಾಕಲಿಲ್ಲ? ಶೃಂಗಸಭೆಯಲ್ಲಿ ನೀನು ವಾರ್ಸಾ ಒಪ್ಪಂದದ ಬರ್ಖಾಸ್ತಿಗೆ ಪ್ರಸ್ತಾವವಿಟ್ಟಿದ್ದಿ ಎಂದು ಕೇಳಿ ಅಮೆರಿಕದ ವಿದೇಶಾಂಗ ಸಚಿವ ಬೇಕರ್ ಥರ ಥರ ನಡುಗುತ್ತಿದ್ದನಂತೆ. ನಾಟೋ ಬರ್ಖಾಸ್ತಿಗೆ ಖಂಡಿತ ನೀನು ಷರತ್ತು ಹಾಕುತ್ತಿ, ನಾಟೋ ಕತೆ ಮುಗಿಯಿತು ಅಂತ. ಹೀಗಾಗಲಿಲ್ಲ ಅಂದಾಗ ಅವನು ಹಿರಿ ಹಿರಿ ಹಿಗ್ಗಿದನಂತೆ.
ನಿನ್ನ ವಿರೋಧಿಗಳು ನಿರೀಕ್ಷಿಸಿದ್ದ, ಬಹುಶಃ ಒಪ್ಪಲು ತಯಾರಿದ್ದ ಷರತ್ತು ಹಾಕಲು ಆಗಲಿಲ್ಲ ಅಂದರೆ, ಎಂಥ ಬೋಳೆ ಸುಬ್ರಾಯ ಮಾರಾಯ ನೀನು!
ಸೋವಿಯೆಟ್ ಒಕ್ಕೂಟ ಪಶ್ಚಿಮ ಯುರೋಪು ಮತ್ತು ಅಮೆರಿಕಾಕ್ಕೆ ತೆರೆದುಕೊಳ್ಳುವುದು, ಅದೂ ಅವರ ಅನುಕೂಲಕ್ಕೆ ತಕ್ಕಂತೆ, ನಿನ್ನ ಏಕಮಾತ್ರ ಆದ್ಯತೆಯಿದ್ದಂತೆ ಕಾಣುತ್ತದೆ. ‘ಯುರೋಪು ನಮ್ಮೆಲ್ಲರ ಮನೆ’ ಅಂತ ಯಾವಾಗಲೂ ಬಡಕೊಳ್ಳುತ್ತಿದ್ದಿ. ಆದರೆ ಪೂರ್ವ ಯುರೋಪಿನ ಮತ್ತು ಮೂರನೆಯ ಜಗತ್ತಿನ ಜನರ ಆಶೋತ್ತರಗಳು ಆಶಯಗಳು ನಿನಗೆ ಆದ್ಯತೆಯಾಗಿರಲಿಲ್ಲ.
ವಾರ್ಸಾ ಒಪ್ಪಂದದ ಏಕಪಕ್ಷೀಯ ಬರ್ಖಾಸ್ತು ಮೂರನೆಯ ಜಗತ್ತಿನ ದೇಶಗಳ ಮರಣ ಶಾಸನವಾಯಿತು. ಅಮೆರಿಕ ಜಗತ್ತಿನ ಏಕಮಾತ್ರ ಸೂಪರ್ ಪವರ್ ಆಯಿತು. ಒಂದು ಕಡೆ ನವ-ಉದಾರವಾದಿ ಲೂಟಿಗೆ ಇಡೀ ಜಗತ್ತನ್ನು ತೆರೆಯುವುದು ಅದಕ್ಕೆ ಸುಲಭವಾಯಿತು. ಇನ್ನೊಂದು ಕಡೆ ಕೊಲ್ಲಿ ಯುದ್ಧ-1 ರಿಂದ ಆರಂಭವಾಗಿ ಯುಗೋಸ್ಲಾವಿಯ, ಇರಾಕ್, ಲಿಬ್ಯಾ, ಅಫ್ಘಾನಿಸ್ತಾನ, ಸಿರಿಯಾಗಳಲ್ಲಿ ಸ್ವತಂತ್ರ ನೀತಿಗಳ ರಾಷ್ಟ್ರವಾದಿ ಸರಕಾರಗಳನ್ನು ಉರುಳಿಸಲು ನೇರ ಮಿಲಿಟರಿ ಅತಿಕ್ರಮಣ ಮತ್ತು ವಿನಾಶಕಾರಿ ಯುದ್ಧಕ್ಕೆ ಕಾರಣವಾಯಿತು. ಉಕ್ರೇನಿ ಯುದ್ಧ ಇವುಗಳಲ್ಲಿ ಇತ್ತೀಚಿನದ್ದು. ಈ ಯುದ್ಧಗಳು ಮತ್ತು ಅದರಲ್ಲಿ ಕಷ್ಟ-ನಷ್ಟಗಳಿಗೂ ನೀನು ವಾರ್ಸಾ ಒಪ್ಪಂದದ ಏಕಪಕ್ಷೀಯ ಬರ್ಖಾಸ್ತು ಮೂಲಕ ಕಾರಣವಾದಿ. ‘ರಕ್ತಪಾತವಿಲ್ಲದೆ ಶೀತಸಮರವನ್ನು’ ನೀನು ‘ಕೊನೆಗೊಳಿಸಲಿಲ್ಲ’ ಶೀತಸಮರದಲ್ಲಿ ಅಮೆರಿಕ ಕೂಟಕ್ಕೆ ಸೋವಿಯೆಟ್ ಒಕ್ಕೂಟದ ಶರಣಾಗತಿ ಮಾಡಿಸಿದಿ, ಅಂತ ನಾನು. ಆಪಾದಿಸ್ತೇನೆ. ಏನಂತಿ?
ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳು ಸಮಾಜವಾದಿ ವಾರ್ಸಾ ಒಪ್ಪಂದ ಕೂಟವನ್ನು ‘ಸೋವಿಯೆಟ್ ಸಾಮ್ರಾಜ್ಯ’ ಅಂತ (ಕೆಡುಕಿನ ಸಾಮ್ರಾಜ್ಯ ಅಂತಲೂ) ಕರೆಯುತ್ತಿದ್ದರು. ಜಗತ್ತಿನ ಇತಿಹಾಸದಲ್ಲೇ ಯಾವುದೇ ‘ಸಾಮ್ರಾಜ್ಯ’ ಸ್ವಯಂ-ವಿಸರ್ಜನೆ ಮಾಡಿಕೊಂಡಿದ್ದು ಇದು ಮೊದಲ ಬಾರಿಗೆ ಇರಬೇಕು. ಇಂತಹ ಅಸಾಧ್ಯ ಕೆಲಸವನ್ನು ಮಾಡಿದ ನಿನ್ನನ್ನು ಮರೆಯುವುದು ಹೇಗೆ?
ಇವೆಲ್ಲ ಬರೆಯುತ್ತಿದ್ದಂತೆ ಕೆಲವು ಅನುಮಾನಗಳು ಬರುತ್ತಿವೆ. ಜನತೆಯ ಮುಂದೆ ಇಟ್ಟ ಉದಾತ್ತ ಉದ್ದೇಶಗಳನ್ನು ಪೂರೈಸುವತ್ತ ನಡೆಸಲು ನಾಯಕತ್ವದ ವೈಫಲ್ಯ ಮಾತ್ರವೇ ನಿನ್ನದು? ನಿನ್ನ ಉದ್ದೇಶಗಳು ಪ್ರಾಮಾಣಿಕವಾಗಿದ್ದವೇ? ಯಾಕೆಂದರೆ ಈ ಮೇಲೆ ಹೇಳಿದ ಸ್ವಯಂ-ವಿದಿತ ಪ್ರಮಾದಗಳ ಕುರಿತು ನೀನು ಯಾವುದೇ ಸ್ವಯಂ_ಟೀಕೆ ಮಾಡಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ.
ನಿನ್ನನ್ನು ಯಾವುದಕ್ಕೆ ನೆನೆಸಲಿ? ಯಾವ ನಿನ್ನ ಪ್ರಮಾದಗಳನ್ನು ಮರೆಯಲಿ ? ನನಗೆ ಗೊಂದಲವಾಗುತ್ತಿದೆ.
ಬಹುಶಃ ಆ ಜಾಹೀರಾತಿನಲ್ಲಿ ತೋರಿಸಿದಂತೆ ರಶ್ಯವನ್ನು ‘ಪಿಜ್ಜಾ ಹಟ್’ ಗೆ (ಮಾಕ್ ಡೊನಾಲ್ಡ್, ಸ್ಟಾರ್‌ಬಕ್ಸ್ ಗಳಿಗೆ) ತೆರೆದಿದ್ದು ಮಾತ್ರ ನಿನ್ನ ‘ಸಾಧನೆ’ ಏನೋ ಎಂದು ಅನುಮಾನ ಬರುತ್ತಿದೆ.
ಆದರೆ ನಿನ್ನ ಅಭಿಮಾನಿಯಾಗಿದ್ದ ನನಗೆ ಇದನ್ನು ಒಪ್ಪಲು ಕಷ್ಟವಾಗುತ್ತಿದೆ. ಇದಕ್ಕೆ ಉತ್ತರ ಕೊಟ್ಟು ಅಲ್ಲ ಅಂತ ಸಾಧಿಸು. ಪ್ಲೀಸ್!
ಹೋಗಿ ಬಾ ಗುರುಬಸ್ಯಾ!
ಇತಿ
ನಿನ್ನ ಮಾಜಿ ಅಭಿಮಾನಿ