ಕರ್ನಾಟಕ ಸರ್ಕಾರ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ, ಅಭಿವೃದ್ಧಿ ಸೂಚ್ಯಂಕಗಳನ್ನು ಪರಿಗಣಿಸದೆ ಮತ್ತು ಸಮಾಜೋ ಆರ್ಥಿಕ ನ್ಯಾಯದಿಂದ ವಂಚಿತರಾಗಿರುವವರ ಪ್ರಮಾಣವನ್ನು ಗುರುತಿಸದೆ ಎರಡು ಪ್ರಬಲ ಸಮುದಾಯಗಳಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಒಂದೆಡೆ ಜಾತಿ ರಾಜಕಾರಣಕ್ಕೆ ಪುಷ್ಟಿ ನೀಡಿದರೆ ಮತ್ತೊಂದೆಡೆ ಮತಬ್ಯಾಂಕುಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ವಿಭಿನ್ನ ಜಾತಿಗಳು, ಭಾಷಿಕರು ನಿಗಮಗಳಿಗಾಗಿ ಹಾತೊರೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪೈಪೋಟಿಯಲ್ಲಿ ಮತ್ತೊಮ್ಮೆ ಉಳ್ಳವರು ಲಾಭ ಗಳಿಸುತ್ತಾರೆ. ಇದು ಬಂಡವಾಳ ವ್ಯವಸ್ಥೆಯ ವಿಕೃತಿಗಳ ಒಂದು ಆಯಾಮ. ಅಭಿವೃದ್ಧಿಯ ಹೆಸರಿನಲ್ಲಿ ಜಾತಿ ಸಮುದಾಯಗಳ ಪ್ರಬಲ ವರ್ಗಗಳನ್ನು ಸಂತೃಪ್ತಗೊಳಿಸಿ, ಅವಕಾಶ ವಂಚಿತರ ಆಕ್ರೋಶದ ದನಿಯನ್ನು ಶಾಶ್ವತವಾಗಿ ನಿಯಂತ್ರಿಸುವ ಈ ತಂತ್ರ ಭಾರತದಂತಹ ಜಾತಿ ಪೀಡಿತ ಸಮಾಜದಲ್ಲಿ ಹೆಚ್ಚು ಯಶಸ್ಸು ಪಡೆಯುತ್ತದೆ. ಬಂಡವಾಳ ವ್ಯವಸ್ಥೆ ಸೃಷ್ಟಿಸುತ್ತಿರುವ ತಾರತಮ್ಯಗಳು, ಬಡವ ಶ್ರೀಮಂತರ ನಡುವಿನ ಕಂದರಗಳನ್ನು ಮರೆಮಾಚಲು ಭಾರತದ ಆಳುವ ವರ್ಗಗಳು ಈ ರೀತಿಯ ವಾಮ ಮಾರ್ಗಗಳನ್ನು ಕಳೆದ ಐದು ದಶಕಗಳಿಂದಲೂ ಅನುಸರಿಸುತ್ತಲೇ ಇವೆ.
– ನಾ ದಿವಾಕರ
ಬಂಡವಾಳ ವ್ಯವಸ್ಥೆಯ ಬಿಕ್ಕಟ್ಟು ಹೆಚ್ಚಾಗುತ್ತಿರುವಂತೆಲ್ಲಾ ನವ ಉದಾರವಾದಿ ಆರ್ಥಿಕ ನೀತಿಯನ್ನೇ ಅವಲಂಬಿಸಿರುವ ಅರ್ಥವ್ಯವಸ್ಥೆಗಳಲ್ಲಿ ಬಿಕ್ಕಟ್ಟುಗಳ ಹೊಸ ಹಾದಿಗಳು ತೆರೆದುಕೊಳ್ಳುತ್ತಿವೆ. ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಬಂಡವಾಳದ ಹರಿವು ಹೇಗೆ ಅಡೆತಡೆಯಿಲ್ಲದೆ ಮುಂದುವರೆಯುವುದೋ ಹಾಗೆಯೇ ಬಿಕ್ಕಟ್ಟಿನ ಲಕ್ಷಣಗಳೂ ಸಹ ಹರಿದಾಡುತ್ತವೆ. ಬಂಡವಾಳದ ಕೊರತೆಯನ್ನು ನೀಗಿಸದೆ ಇದ್ದರೆ ಮಾರುಕಟ್ಟೆ ಸುಧಾರಣೆಯಾಗುವುದಿಲ್ಲ. ಮಾರುಕಟ್ಟೆಯ ಸೂಚ್ಯಂಕ ಕುಸಿದಂತೆಲ್ಲಾ ಬಂಡವಾಳ ಹೂಡಿಕೆ ಹಿನ್ನಡೆ ಕಾಣುತ್ತದೆ. ಲಾಭ ಹುಟ್ಟದ ಯಾವುದೇ ಉದ್ಯಮದಲ್ಲಿ ಬಂಡವಾಳ ಹೂಡಲು ಬಂಡವಾಳಿಗರು ಬಯಸುವುದಿಲ್ಲ. ಇದೇ ವೇಳೆ ಅತಿ ಹೆಚ್ಚಿನ ಲಾಭ ಪಡೆಯಬಹುದಾದ ಕ್ಷೇತ್ರಗಳಲ್ಲಿ ಬಂಡವಾಳದ ಹೊಳೆ ಹರಿಯುತ್ತದೆ.
ಈ ನಡುವೆಯೇ ಹಣಕಾಸು ಬಂಡವಾಳ ಮತ್ತು ಮಾರುಕಟ್ಟೆಯನ್ನೇ ಅವಲಂಬಿಸುವ ಅರ್ಥವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಅಥವಾ ಸರ್ವಾಂಗೀಣ ಅಭಿವೃದ್ಧಿಯ ಪರಿಕಲ್ಪನೆಗಳಿಂದ ಬಹಳ ದೂರ ಸರಿದಿರುವ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮಾರುಕಟ್ಟೆ ಪೂರ್ಣ ಅಧಿಪತ್ಯ ಸಾಧಿಸುತ್ತಿದೆ. ಕೋವಿದ್ 19ರ ಬಿಕ್ಕಟ್ಟಿನ ಸಂದರ್ಭದಲ್ಲೂ ಸರ್ಕಾರ ಸಾರ್ವತ್ರಿಕ ಆರೋಗ್ಯ ಸೇವೆಯ ಬಗ್ಗೆ ಆಲೋಚನೆಯನ್ನೂ ಮಾಡದೆ ಇರುವುದು ಇದರ ಸೂಚನೆಯಾಗಿದೆ. ಕೋವಿದ್ ನಂತರದಲ್ಲಿ ಬಹುಶಃ ಶಿಕ್ಷಣ ಕ್ಷೇತ್ರದಂತೆಯೇ ಆರೋಗ್ಯ ಕ್ಷೇತ್ರವೂ ಹಂತಹಂತವಾಗಿ ಕಾರ್ಪೋರೇಟ್ ಪಾಲಾಗುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗುವುದಿಲ್ಲ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನ ಅವಕಾಶಗಳನ್ನು ಕಲ್ಪಿಸುವ ಮತ್ತು ನ್ಯಾಯ ಒದಗಿಸುವ ಅಂಬೇಡ್ಕರ್ ಮತ್ತಿತರ ನಿರ್ಮಾತೃಗಳ ಕಲ್ಪನೆಗೆ ಬಹುಶಃ ಭಾರತೀಯ ಪ್ರಭುತ್ವ ತಿಲಾಂಜಲಿ ನೀಡಿದಂತೆ ತೋರುತ್ತಿದೆ. ಅಭಿವೃದ್ಧಿಯ ಆಯಾಮಗಳು ಮತ್ತು ಮಾನದಂಡಗಳು ಬದಲಾಗಿದ್ದು ಮಾರುಕಟ್ಟೆಯ ನಿರ್ವಾಹಕರಿಂದ ನಿರ್ಧರಿಸಲ್ಪಡುತ್ತವೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಭವಿಸುವ ಸಮಸ್ಯೆ ಎಂದರೆ ಇಲ್ಲಿ ಕೇಂದ್ರೀಕೃತ ಮಾರುಕಟ್ಟೆ ಮತ್ತು ಅರ್ಥವ್ಯವಸ್ಥೆ ಇರುತ್ತದೆ. ಆದರೆ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕಾದ ಅನಿವಾರ್ಯತೆಯನ್ನೂ ಎದುರಿಸುತ್ತವೆ. ಸ್ವಾಯತ್ತತೆಯಿಲ್ಲದ ರಾಜ್ಯ ಸರ್ಕಾರಗಳು ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಅನುದಾನವನ್ನೇ ಅವಲಂಬಿಸಿ ತನ್ನ ಅರ್ಥವ್ಯವಸ್ಥೆಯನ್ನು ನಿರ್ವಹಿಸಬೇಕಾದ ಸಂದರ್ಭಗಳೂ ಎದುರಿಸಬೇಕಾಗುತ್ತದೆ.
ಇದರ ಒಂದು ಆಯಾಮವನ್ನು ಕಳೆದ ಆರು ವರ್ಷಗಳಲ್ಲಿ ಕಾಣುತ್ತಿದ್ದೇವೆ. ಕರ್ನಾಟಕದಲ್ಲೇ ನೆರೆ ಪರಿಹಾರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗಾಗಿ ಕೇಂದ್ರದ ಬಳಿ ಅಂಗಲಾಚಿದರೂ ಪೂರ್ಣ ಪ್ರಮಾಣದ ನೆರವು ದೊರೆಯದೆ ಇರುವುದನ್ನು ಕಂಡಿದ್ದೇವೆ. ಕೊರೋನಾ ಬಿಕ್ಕಟ್ಟು ತೀವ್ರವಾದ ಸಂದರ್ಭದಲ್ಲೂ ಈ ಸಮಸ್ಯೆ ಎದುರಾಗಿದೆ. ರಾಜ್ಯ ಸರ್ಕಾರ ಹಣಕಾಸು ಹೊಂದಿಸಲು ಕೋವಿದ್ 19 ವ್ಯಾಪಿಸುತ್ತಿರುವ ಸಂದರ್ಭದಲ್ಲೇ ಮದ್ಯ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತ್ತು. ನಂತರ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳನ್ನು ಹರಾಜು ಹಾಕುವ ಮೂಲಕವೂ ಕ್ರೋಢೀಕರಿಸಲು ಯತ್ನಿಸಿದೆ.
ಈ ಸಮಸ್ಯೆಗಳ ನಡುವೆ ಜಿ.ಎಸ್‍ಟಿಯಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾದ ಪಾಲು ನೀಡಲೂ ಕೇಂದ್ರ ಸರ್ಕಾರ ನಿರಾಕರಿಸಿದ್ದು, ರಾಜ್ಯ ಸರ್ಕಾರ ಸಾಲ ಪಡೆಯುವಂತಾಗಿದೆ. ಒಂದು ಒಕ್ಕೂಟ ವ್ಯವಸ್ಥೆಯ ಮೂಲ ನಿಯಮಗಳಿಗೆ ತದ್ವಿರುದ್ಧವಾದ ಪ್ರವೃತ್ತಿ ಇದಾಗಿದೆ. ಅಥವಾ ಭಾರತ ತನ್ನ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಂದ ದೂರ ಸರಿಯುತ್ತಿದ್ದು ಕೇಂದ್ರೀಕೃತ ಆಡಳಿತದತ್ತ ವಾಲುತ್ತಿರುವುದರ ಲಕ್ಷಣ ಎನ್ನಬಹುದು. ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಸಂಸ್ಕೃತಿ, ಒಂದು ಭಾಷೆ, ಒಂದು ಧರ್ಮ ಹೀಗೆ ಎಲ್ಲವನ್ನೂ ಒಂದುಗೂಡಿಸುವುದರ ಹಿಂದೆ ಒಂದು ಪ್ರಬಲ ಪ್ರಭುತ್ವವನ್ನು ಸ್ಥಾಪಿಸುವ ಪ್ರಜಾತಂತ್ರ ವಿರೋಧಿ ಧೋರಣೆ ಇರುವುದನ್ನೂ ಗಂಭೀರವಾಗಿ ಗಮನಿಸಬೇಕಿದೆ.
ಈ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರದ ನಿಗಮ-ಪ್ರಾಧಿಕಾರದ ರಾಜಕಾರಣವನ್ನೂ ಗಮನಿಸಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕನಸು ಕಂಡಂತಹ ಸರ್ವಾಂಗೀಣ ಅಭಿವೃದ್ಧಿ ರಾಜಕಾರಣವನ್ನು ಭಾರತ ಎಂದೋ ಕೈಬಿಟ್ಟಿದೆ. ಹಾಗಾಗಿಯೇ ಸ್ವತಂತ್ರ ಭಾರತದಲ್ಲಿ ಅನುಸರಿಸಲಾದ ಅರೆ ಸಮಾಜವಾದಿ ಅರ್ಥವ್ಯವಸ್ಥೆಯಲ್ಲೇ ಜನಸಮುದಾಯಗಳು ತಮ್ಮ ಅಭಿವೃದ್ಧಿಗೆ ಸಂಪನ್ಮೂಲಗಳ ಹಂಚಿಕೆಗಿಂತಲೂ ಹೆಚ್ಚಾಗಿ ಸರ್ಕಾರಗಳ ಅನುದಾನವನ್ನೇ ಅವಲಂಬಿಸಿಕೊಂಡು ಬಂದಿದ್ದನ್ನು ಗಮನಿಸಬಹುದು. ಉತ್ಪಾದನಾ ಸಂಬಂಧಗಳು ಬದಲಾಗದೆ, ಉತ್ಪಾದನಾ ಸಾಧನಗಳು, ಉತ್ಪಾದನಾ ವಿಧಾನ ಮತ್ತು ಉತ್ಪಾದಕೀಯ ಶಕ್ತಿಗಳು ಸಮಸ್ತ ಜನತೆಯ ಒಡೆತನಕ್ಕೆ ಒಳಪಡದೆ ಹೋದರೆ ಉತ್ಪಾದಿತ ಸಂಪತ್ತು ಮತ್ತು ಲಭ್ಯ ಸಂಪನ್ಮೂಲ ಎರಡೂ ಸಹ ಕೆಲವೇ ಜನರ ಪಾಲಾಗುತ್ತದೆ.
ಈ ವೈರುಧ್ಯವನ್ನು ಸರಿದೂಗಿಸುವ ಒಂದು ತಂತ್ರ ಉದ್ದಿಮೆಗಳ ರಾಷ್ಟ್ರೀಕರಣ. ಭಾರತದಲ್ಲಿ ಯಾವುದೇ ನೈಸರ್ಗಿಕ ಸಂಪತ್ತನ್ನು, ನೆಲ, ಜಲ, ಅರಣ್ಯ ಮತ್ತು ಖನಿಜ, ಇದಾವುದನ್ನೂ ರಾಷ್ಟ್ರೀಕರಣಗೊಳಿಸಿಲ್ಲ. ಈ ಸಂಪನ್ಮೂಲಗಳ ನಿರ್ವಹಣೆಯನ್ನು ರಾಷ್ಟ್ರೀಕರಣಗೊಳಿಸಲಾಗಿದೆ. ಇದರಿಂದ ಅವಕಾಶವಂಚಿತ ಜನಸಮುದಾಯಗಳಿಗೆ ಮತ್ತು ಅಭಿವೃದ್ಧಿ ಚೌಕಟ್ಟಿನಲ್ಲಿ ಅಂಚಿನಲ್ಲಿರುವವರಿಗೆ ಮತ್ತು ಸಾಮಾಜಿಕ-ಆರ್ಥಿಕ-ರಾಜಕೀಯ ನ್ಯಾಯದ ಪರಿಧಿಯಿಂದ ಸಂಪೂರ್ಣವಾಗಿ ಹೊರಗಿರುವವರಿಗೆ ನಿತ್ಯ ಬದುಕು ಸಾಗಿಸಲು ಅವಶ್ಯಕವಾದದ್ದನ್ನು ಪೂರೈಸಲು ಸಾಧ್ಯವಾಯಿತೇ ಹೊರತು ಅವರ ಸ್ವಾವಲಂಬಿ ಬದುಕಿಗೆ ಕಾಯಕಲ್ಪ ನೀಡಲು ಸಾಧ್ಯವಾಗಲಿಲ್ಲ. ಬಂಡವಾಳ ವ್ಯವಸ್ಥೆಯಲ್ಲಾಗಲೀ, ಪ್ರಭುತ್ವ ಬಂಡವಾಳ ವ್ಯವಸ್ಥೆಯಲ್ಲಾಗಲೀ ಇದು ಸಾಧ್ಯವಾಗುವುದೂ ಇಲ್ಲ.
ಭಾರತ ಅನುಸರಿಸಿದ ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ ಒಂದೆಡೆ ಖಾಸಗಿ ಬಂಡವಾಳ ಮತ್ತೊಂದೆಡೆ ಪ್ರಭುತ್ವದ ಬಂಡವಾಳದ ನಡುವೆ ಸಮನ್ವಯ ಸಾಧಿಸಲು ಯತ್ನಿಸಲಾಗಿತ್ತು. ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಸಾಮಾಜಿಕ ಉತ್ಪಾದನೆಯ ಪ್ರಕ್ರಿಯೆಯನ್ನು ಪ್ರಭುತ್ವದ ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಕಲ್ಪಿಸುವ ಒಂದು ಅರೆ ಸಮಾಜವಾದಿ ಕಲ್ಪನೆಯನ್ನು ಭಾರತದಲ್ಲಿ ಅನುಸರಿಸಲಾಗಿತ್ತು. ಇದನ್ನೇ ರಾಜಕೀಯ ಪರಿಭಾಷೆಯಲ್ಲಿ ಸಮಾಜವಾದಿ ಆರ್ಥಿಕತೆ ಎಂದೂ, ಸಾಮಾಜಿಕ ಪರಿಭಾಷೆಯಲ್ಲಿ ಸಮತೆಯ ಸಿದ್ಧಾಂತ ಎಂದೂ, ಮಾರುಕಟ್ಟೆ ಪರಿಭಾಷೆಯಲ್ಲಿ ಲೈಸೆನ್ಸ್ ಪರ್ಮಿಟ್ ರಾಜ್ ಎಂದೂ ಕರೆಯಲಾಗುತ್ತಿತ್ತು. 1991ರಲ್ಲಿ ಭಾರತ ಮಾರುಕಟ್ಟೆ ಆರ್ಥಿಕತೆಯನ್ನು ಸ್ವೀಕರಿಸಿ ಜಾಗತೀಕರಣಕ್ಕೆ ಬಾಗಿಲು ತೆರೆದಾಗ ಕೊನೆಗೊಂಡಿದ್ದು ಈ ಒಂದು ಅರೆ ಸಮಾಜವಾದಿ ಅರ್ಥವ್ಯವಸ್ಥೆ.
ವಾಸ್ತವದಲ್ಲಿ ಈ ನಿಗಮ ಮತ್ತು ಪ್ರಾಧಿಕಾರಗಳು ಅಧಿಕಾರ ಕೇಂದ್ರಗಳಲ್ಲಿನ ಅತೃಪ್ತರ ಆಶ್ರಯ ತಾಣಗಳಾಗಿ ಪರಿಣಮಿಸಿದ್ದು, ಉದ್ದೇಶಿತ ಜನರನ್ನು ತಲುಪುವುದರಲ್ಲಿ ವಿಫಲವಾಗಿರುವುದನ್ನು ಗಮನಿಸಬೇಕಿದೆ. ಈ ನಿಗಮಗಳು ಮೂಲತಃ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಕೊಡಿಸುವ ಏಜೆನ್ಸಿಗಳಾಗಿದ್ದು, ಪ್ರಬಲ ರಾಜಕಾರಣಿಗಳು, ಸಮುದಾಯದ ಪ್ರಬಲ ನಾಯಕರು ಮತ್ತು ಪುಢಾರಿಗಳ ನಿಯಂತ್ರಣದಲ್ಲಿರುವುದು ಗುಟ್ಟಿನ ಮಾತೇನಲ್ಲ. ಸಚಿವ ಸಂಪುಟದಲ್ಲಿ ಅವಕಾಶ ದೊರೆಯದವರು, ಚುನಾವಣೆಗಳಲ್ಲಿ ಟಿಕೆಟ್ ದೊರೆಯದವರು , ಪಕ್ಷದಲ್ಲಿ ಸ್ಥಾನಮಾನ ದೊರೆಯದೆ ಇದ್ದವರು ಈ ನಿಗಮಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ತಮ್ಮ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸುವುದನ್ನು ನೋಡುತ್ತಲೇ ಇದ್ದೇವೆ.
ಉತ್ಪಾದನಾ ಸಂಬಂಧಗಳಲ್ಲಿ ಯಾವುದೇ ಬದಲಾವಣೆಗೆ ಪ್ರಯತ್ನಿಸದೆ, ಉತ್ಪಾದನಾ ಸಾಧನಗಳು, ಉತ್ಪಾದನಾ ವಿಧಾನಗಳು ಮತ್ತು ಉತ್ಪಾದಕ ಶಕ್ತಿಗಳ ನಡುವೆ ಸಮನ್ವಯ ಸಾಧಿಸಿ ಇಡೀ ದೇಶದ ಉತ್ಪಾದನೆಯನ್ನು ಸಾರ್ವತ್ರೀಕರಿಸುವ ಪ್ರಯತ್ನಗಳನ್ನು ಮಾಡದೆ ಸಮಾಜವಾದ ಸೃಷ್ಟಿಯಾಗುವುದಿಲ್ಲ. ಬಡವ ಶ್ರೀಮಂತರ ನಡುವಿನ ಕಂದರ ಕಡಿಮೆಯಾಗುವುದಿಲ್ಲ. ಸಂಪತ್ತಿನ ಸಮಾನ ವಿತರಣೆಯೂ ಆಗುವುದಿಲ್ಲ. ಈ ದಾರಿಯಲ್ಲಿ ಭಾರತ ಇನ್ನೂ ಬಹುದೂರ ಕ್ರಮಿಸಬೇಕಿದೆ. ಆದರೆ ಈ ಹಾದಿ ಇಂದು ಸಂಪೂರ್ಣ ಬದಲಾಗುತ್ತಿದೆ. ಭಾರತದ ಪ್ರಭುತ್ವ ಸಮ ಸಮಾಜದ ಪರಿಕಲ್ಪನೆಯನ್ನೇ ನಿರಾಕರಿಸಿ ಉಳ್ಳವರ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗಿರುವುದನ್ನು ಕಳೆದ ಆರು ವರ್ಷಗಳ ಬೆಳವಣಿಗೆಗಳಲ್ಲಿ ಗುರುತಿಸಬಹುದು.
ಈ ಸಂದಿಗ್ಧತೆಯ ನಡುವೆಯೇ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳೂ ಸೃಷ್ಟಿಯಾಗುತ್ತಿವೆ. ನರೇಂದ್ರ ಮೋದಿ ಸರ್ಕಾರ ರಾಜ್ಯಗಳ ಸ್ವಾಯತ್ತತೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೂ ಕಸಿದುಕೊಂಡು ಕೇಂದ್ರೀಕೃತ ಆಡಳಿತದತ್ತ ಹೆಚ್ಚು ಗಮನ ನೀಡುತ್ತಿದೆ. ರಾಜ್ಯಗಳು ತಮ್ಮ ಆದಾಯದಲ್ಲಿನ ಕೊರತೆಯನ್ನು ಸರಿದೂಗಿಸಲು ತಮ್ಮದೇ ಸಂಪನ್ಮೂಲಗಳ ಸಮರ್ಪಕ ಬಳಕೆಯತ್ತ ಗಮನಹರಿಸಬೇಕಿದೆ. ರಾಜ್ಯದೊಳಗಿನ ವಿಭಿನ್ನ ಜನಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳೇ ಯೋಜನೆಗಳನ್ನು ರೂಪಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದಲೇ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಸಮಾಜೋ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಮೂರು ಆಯೋಗಗಳನ್ನು ರಚಿಸಲಾಗಿತ್ತು. ಈಗ ಶಾಶ್ವತವಾದ ಆಯೋಗವೂ ಕಾರ್ಯ ನಿರ್ವಹಿಸುತ್ತಿದೆ.
ಅಭಿವೃದ್ಧಿ ಯೋಜನೆಗಳಿಂದ ವಂಚನೆಗೊಳಗಾದವರು, ಅಭಿವೃಧ್ಧಿ ಪಥದ ಅಂಚಿನಲ್ಲಿರುವವರು, ಸಮಾಜೋ ಆರ್ಥಿಕ ಸಮಾನತೆ ಮತ್ತು ಸ್ವಾತಂತ್ರ್ಯದಿಂದ ವಂಚಿತರಾದವರನ್ನು ಪ್ರತಿಯೊಂದು ಸಮುದಾಯದಲ್ಲೂ ಗುರುತಿಸುವುದೇ ಅಲ್ಲದೆ, ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆಯನ್ನು ಶತಮಾನಗಳಿಂದ ಅನುಭವಿಸುತ್ತಿರುವ ಜನಸಮುದಾಯಗಳನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ಸೂಕ್ತ ಆರ್ಥಿಕ ಪುನಶ್ಚೇತನ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕೆ ಬೇಕಾಗುವ ಹಣಕಾಸು ಹೊಂದಿಸುವುದೂ ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಭಾರತದ ಬಹುತೇಕ ರಾಜ್ಯಗಳು ವಿಫಲವಾಗಿರುವುದನ್ನು ಉತ್ತರದಿಂದ ದಕ್ಷಿಣದವರೆಗೂ ಗುರುತಿಸಬಹುದು. ಕರ್ನಾಟಕವೂ ಹೊರತೇನಲ್ಲ.
ಕರ್ನಾಟಕದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಹಲವಾರು ಜಿಲ್ಲೆಗಳು ಇಂದಿಗೂ ಅಭಿವೃದ್ಧಿಯಿಂದ ವಂಚಿತವಾಗಿವೆ. ಕರ್ನಾಟಕದ ಹಲವು ಜನಸಮುದಾಯಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗಿವೆ. ಬಂಡವಾಳ ವ್ಯವಸ್ಥೆಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿರುವುದರಿಂದಲೇ ಜಾತಿ ಅಥವಾ ಸಮುದಾಯ ಆಧಾರಿತ ಅಭಿವೃದ್ಧಿ ಪ್ರಾಧಿಕಾರ ಮತ್ತು ನಿಗಮಗಳನ್ನು ಸ್ಥಾಪಿಸುವ ಆಡಳಿತ ವ್ಯವಸ್ಥೆಯೂ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಎಸ್‍ಸಿ/ಎಸ್‍ಟಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹೀಗೆ ಹತ್ತಾರು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದ್ದು ಇದರ ಮೂಲ ಉದ್ದೇಶ ಆಯಾ ಸಮುದಾಯಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಅವಕಾಶವಂಚಿತರಾಗಿರುವ ಜನರನ್ನು ಸಬಲೀಕರಣಗೊಳಿಸುವುದೇ ಆಗಿರುತ್ತದೆ.
ಆದರೆ ವಾಸ್ತವದಲ್ಲಿ ಈ ನಿಗಮ ಮತ್ತು ಪ್ರಾಧಿಕಾರಗಳು ಅಧಿಕಾರ ಕೇಂದ್ರಗಳಲ್ಲಿನ ಅತೃಪ್ತರ ಆಶ್ರಯ ತಾಣಗಳಾಗಿ ಪರಿಣಮಿಸಿದ್ದು, ಉದ್ದೇಶಿತ ಜನರನ್ನು ತಲುಪುವುದರಲ್ಲಿ ವಿಫಲವಾಗಿರುವುದನ್ನು ಗಮನಿಸಬೇಕಿದೆ. ಈ ನಿಗಮಗಳು ಮೂಲತಃ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಕೊಡಿಸುವ ಏಜೆನ್ಸಿಗಳಾಗಿದ್ದು, ಪ್ರಬಲ ರಾಜಕಾರಣಿಗಳು, ಸಮುದಾಯದ ಪ್ರಬಲ ನಾಯಕರು ಮತ್ತು ಪುಢಾರಿಗಳ ನಿಯಂತ್ರಣದಲ್ಲಿರುವುದು ಗುಟ್ಟಿನ ಮಾತೇನಲ್ಲ. ಸಚಿವ ಸಂಪುಟದಲ್ಲಿ ಅವಕಾಶ ದೊರೆಯದವರು, ಚುನಾವಣೆಗಳಲ್ಲಿ ಟಿಕೆಟ್ ದೊರೆಯದವರು , ಪಕ್ಷದಲ್ಲಿ ಸ್ಥಾನಮಾನ ದೊರೆಯದೆ ಇದ್ದವರು ಈ ನಿಗಮಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ತಮ್ಮ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸುವುದನ್ನು ನೋಡುತ್ತಲೇ ಇದ್ದೇವೆ.
ಈ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರ ಎರಡು ಪ್ರಬಲ ಸಮುದಾಯಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದು ನೈತಿಕ ಕ್ರಮವಲ್ಲ ಎಂದು ಹೇಳಬಹುದು. 1982ರಲ್ಲಿ ರಚಿಸಲಾಗಿದ್ದ ಹಿಂದುಳಿದ ವರ್ಗಗಳ ಆಯೋಗವು ಲಿಂಗಾಯತ ಮತ್ತು ಒಕ್ಕಲಿಗರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡಿತ್ತು. ಕರ್ನಾಟಕದಲ್ಲಿರುವ ಮರಾಠರು ಮತ್ತು ವೀರಶೈವ ಲಿಂಗಾಯತರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕೆಳಸ್ತರದಲ್ಲಿರುವ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗಿರುವ ಗುಂಪುಗಳನ್ನು ಗುರುತಿಸಿ ಅವರಿಗೆ ಸೂಕ್ತ ಸೌಲಭ್ಯ, ಸೌಕರ್ಯಗಳನ್ನು ಒದಗಿಸಲು ನಿಗಮ ಪ್ರಾಧಿಕಾರಗಳೇ ಬೇಕಿಲ್ಲ. ಇದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎನ್ನುವುದನ್ನು ಸರ್ಕಾರ ಮತ್ತು ಜನತೆ ಮನಗಾಣಬೇಕಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಾಂಸ್ಥಿಕ ನೆಲೆಯೂ ಅಧಿಕಾರ ಕೇಂದ್ರಿತ ರಾಜಕಾರಣದ ಅಡ್ಡೆಗಳಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮತ್ತೆರಡು ಅಡ್ಡೆಗಳನ್ನು ರೂಪಿಸಿದೆ.
ಅಭಿವೃದ್ಧಿ ನಿಗಮಗಳು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಒಂದು ಮಾರ್ಗವಷ್ಟೇ. ಇಲ್ಲಿ ಹಣಕಾಸು ಸಂಸ್ಥೆಗಳನ್ನು, ಬ್ಯಾಂಕುಗಳನ್ನು ಮತ್ತು ಇತರ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಉದ್ದೇಶಿತ ಜನಸಮುದಾಯಗಳನ್ನು ತಲುಪುವ ಪ್ರಯತ್ನ ಮಾಡಲಾಗುತ್ತದೆ. ಸಹಾಯಧನವನ್ನು ಆಧರಿಸಿದ ಸಾಲ ಸೌಲಭ್ಯ ಅಥವಾ ಸಾಲದ ಒಂದು ಭಾಗವನ್ನು ಅಭಿವೃದ್ಧಿ ನಿಗಮವೇ ಪೂರೈಸುವ ಮಾರ್ಜಿನ್ ಮನಿ ಯೋಜನೆಯಲ್ಲಿ ಬ್ಯಾಂಕುಗಳು ನೀಡುವ ಸಾಲಗಳ ಪೈಕಿ ಶೇ 60 ರಿಂದ 80ರಷ್ಟು ಮರುಪಾವತಿಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಇದಕ್ಕೆ ಕಾರಣ ಸಾಲ ಪಡೆದ ಫಲಾನುಭವಿಗಳು ಉದ್ದೇಶಿತ ಜನರೇ ಆಗಿರುವುದಿಲ್ಲ. ರಾಜಕೀಯ ಪ್ರಾಬಲ್ಯ ಮತ್ತು ನಿರ್ದಿಷ್ಟ ಜಾತಿ ಪ್ರಾಬಲ್ಯ ಇಲ್ಲಿಯೂ ಸಹ ಮೇಲುಗೈ ಸಾಧಿಸುವುದರಿಂದ, ಯೋಜನೆಗಳೆಲ್ಲವೂ ಉಳ್ಳವರ ಪಾಲಾಗುತ್ತದೆ.
ಈಗ ಕರ್ನಾಟಕ ಸರ್ಕಾರ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ, ಅಭಿವೃದ್ಧಿ ಸೂಚ್ಯಂಕಗಳನ್ನು ಪರಿಗಣಿಸದೆ ಮತ್ತು ಸಮಾಜೋ ಆರ್ಥಿಕ ನ್ಯಾಯದಿಂದ ವಂಚಿತರಾಗಿರುವವರ ಪ್ರಮಾಣವನ್ನು ಗುರುತಿಸದೆ ಎರಡು ಪ್ರಬಲ ಸಮುದಾಯಗಳಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಒಂದೆಡೆ ಜಾತಿ ರಾಜಕಾರಣಕ್ಕೆ ಪುಷ್ಟಿ ನೀಡಿದರೆ ಮತ್ತೊಂದೆಡೆ ಮತಬ್ಯಾಂಕುಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ವಿಭಿನ್ನ ಜಾತಿಗಳು, ಭಾಷಿಕರು ನಿಗಮಗಳಿಗಾಗಿ ಹಾತೊರೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಪೈಪೋಟಿಯಲ್ಲಿ ಮತ್ತೊಮ್ಮೆ ಉಳ್ಳವರು ಲಾಭ ಗಳಿಸುತ್ತಾರೆ. ಸರ್ವತೋಮುಖ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದ ಒಂದು ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಜಾತಿ ಆಧಾರಿತ ನಿಗಮಗಳನ್ನು ಸ್ಥಾಪಿಸುವುದು ವಿಘಟನೆಯ ಮಾರ್ಗವಾಗುತ್ತದೆ. ಈ ನಿಗಮಗಳ ಹುದ್ದೆಗಳನ್ನು ಅಲಂಕರಿಸಲು ಅತೃಪ್ತ ಆತ್ಮಗಳು ಸಾಲುಗಟ್ಟಿ ನಿಂತಿರುವುದು ಗುಟ್ಟಿನ ಮಾತೇನಲ್ಲ.
ಇದು ಬಂಡವಾಳ ವ್ಯವಸ್ಥೆಯ ವಿಕೃತಿಗಳ ಒಂದು ಆಯಾಮ. ಅಭಿವೃದ್ಧಿಯ ಹೆಸರಿನಲ್ಲಿ ಜಾತಿ ಸಮುದಾಯಗಳ ಪ್ರಬಲ ವರ್ಗಗಳನ್ನು ಸಂತೃಪ್ತಗೊಳಿಸಿ, ಅವಕಾಶ ವಂಚಿತರ ಆಕ್ರೋಶದ ದನಿಯನ್ನು ಶಾಶ್ವತವಾಗಿ ನಿಯಂತ್ರಿಸುವ ಈ ತಂತ್ರ ಭಾರತದಂತಹ ಜಾತಿ ಪೀಡಿತ ಸಮಾಜದಲ್ಲಿ ಹೆಚ್ಚು ಯಶಸ್ಸು ಪಡೆಯುತ್ತದೆ. ಮರಾಠ ನಿಗಮದ ಸ್ಥಾಪನೆಯ ವಿರುದ್ಧ ರಾಜ್ಯವ್ಯಾಪಿ ಬಂದ್ ಆಚರಿಸುತ್ತಿರುವವರು ಈ ದೃಷ್ಟಿಯಿಂದ ಯೋಚಿಸುವುದಿಲ್ಲ, ಅದು ಕೇವಲ ಭಾವನಾತ್ಮಕ ಪ್ರತಿಕ್ರಿಯೆಯಾಗಿರುತ್ತದೆ. ಅಭಿವೃದ್ಧಿ ರಾಜಕಾರಣದ ವಿಕೃತ ತಂತ್ರಗಳನ್ನು ಹಿಮ್ಮೆಟ್ಟಿಸಲು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ವಿಶ್ಲೇಷಣೆ ಅತ್ಯಗತ್ಯ ಎನ್ನುವುದನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಬಂಡವಾಳ ವ್ಯವಸ್ಥೆ ಸೃಷ್ಟಿಸುತ್ತಿರುವ ತಾರತಮ್ಯಗಳು, ಬಡವ ಶ್ರೀಮಂತರ ನಡುವಿನ ಕಂದರಗಳನ್ನು ಮರೆಮಾಚಲು ಭಾರತದ ಆಳುವ ವರ್ಗಗಳು ಈ ರೀತಿಯ ವಾಮ ಮಾರ್ಗಗಳನ್ನು ಕಳೆದ ಐದು ದಶಕಗಳಿಂದಲೂ ಅನುಸರಿಸುತ್ತಲೇ ಇವೆ.
ಬಂಡವಾಳ, ಬಂಡವಾಳ ಹೂಡಿಕೆ ಮತ್ತು ಕ್ರೋಢೀಕರಣ, ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ, ಸಂಪನ್ಮೂಲಗಳ ಬಳಕೆ ಮತ್ತು ಸದುಪಯೋಗ ಹಾಗೂ ಈ ಎಲ್ಲ ಪ್ರಕ್ರಿಯೆಗಳಲ್ಲಿ ದುಡಿಯುವ ವರ್ಗಗಳು ವಹಿಸುವ ಪಾತ್ರ ಇವೆಲ್ಲವನ್ನೂ ಸಮಗ್ರ ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸದೆ ಹೋದಲ್ಲಿ ಈ ರೀತಿಯ ಬಾಹ್ಯ ಸ್ವರೂಪಿ ಅಭಿವೃದ್ಧಿ ಮಾರ್ಗಗಳು ಸೃಷ್ಟಿಯಾಗುತ್ತಲೇ ಹೋಗುತ್ತವೆ. ಆಂತರಿಕವಾಗಿ ಸಮಾಜ ಮತ್ತು ದುರ್ಬಲ ಸಮುದಾಯಗಳು ಕುಸಿಯುತ್ತಲೇ ಹೋಗುತ್ತವೆ. ಇಂದು ದೇಶಾದ್ಯಂತ ವ್ಯಾಪಿಸಿರುವ ರೈತರ ಹೋರಾಟ ಭಾರತದ ಸಮಸ್ತ ದುಡಿಯುವ ವರ್ಗಗಳ ಕಣ್ತೆರೆಸಬೇಕಿದೆ. ಭೂ ಹೋರಾಟಗಳನ್ನು ನಡೆಸದೆ, ಭೂಮಿಯ ಸಮಾನ ಹಂಚಿಕೆಗಾಗಿ ಆಗ್ರಹಿಸದೆ ರೈತ ಹೋರಾಟಗಳ ದಿಕ್ಕು ತಪ್ಪಿಸಿದ ಸಂಘಟನೆಗಳು ಇಂದು ತಮ್ಮ ಮೂಲ ನೆಲೆಯೇ ಕುಸಿಯುವ ಸಂದರ್ಭವನ್ನು ಎದುರಿಸುತ್ತಿವೆ.
ಅಭಿವೃದ್ಧಿ ಪಥದಲ್ಲಿ ಸಂಪನ್ಮೂಲದ ಒಡೆತನವೇ ವಿತರಣೆಯ ವಿಧಾನವನ್ನೂ ನಿರ್ಧರಿಸುತ್ತದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಎರಡೂ ಪ್ರಕ್ರಿಯೆಗಳನ್ನು ಕಾರ್ಪೋರೇಟ್ ಉದ್ಯಮಗಳು ನಿರ್ವಹಿಸುತ್ತವೆ. ಈ ಅಪಾಯದ ಮುನ್ಸೂಚನೆ ಕೃಷಿ ಮಸೂದೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಭಿವೃದ್ಧಿ ನಿಗಮಗಳು ಕೇವಲ ಅಲಂಕಾರಿಕ ಸಾಂಸ್ಥಿಕ ನೆಲೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ಅಭಿವೃದ್ಧಿಯಿಂದ ವಂಚಿತರಾದವರನ್ನು ಗುರುತಿಸಿ ನೆರವು ನೀಡಲು ಬೇಕಿರುವುದು ಸಮಾಜಮುಖಿ ಸಾಮಾಜಿಕ ಮತ್ತು ಆರ್ಥಿಕ ನೀತಿಗಳೇ ಹೊರತು ಸಾಂಸ್ಥಿಕ ಸ್ಥಾವರಗಳಲ್ಲ. ಭಾಷಿಕ, ಪ್ರಾದೇಶಿಕ, ಮತಧಾರ್ಮಿಕ ಮತ್ತು ಜಾತಿ ನೆಲೆಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವುದರಿಂದ ಇಡೀ ವ್ಯವಸ್ಥೆಯೇ ವಿಘಟನೆಯತ್ತ ಸಾಗುತ್ತದೆ. ಕರ್ನಾಟಕದಲ್ಲಿ ಈ ವಿದ್ಯಮಾನವನ್ನು ಕಾಣುತ್ತಿದ್ದೇವೆ. ಇದು ನಮ್ಮ ಮುಂದಿನ ಅಪಾಯವೂ ಹೌದು, ಸವಾಲು ಸಹ.