ಡಾ. ಸುಶೀಲಾ ಕೆ
ಫ್ರುಟ್ ಬ್ಯಾಟ್ (Fruit Bat) ಎನ್ನುವ ಜಾತಿಯ ಬಾವಲಿಯನ್ನು ತನ್ನ ಶಾಶ್ವತ ನೆಲೆಯಾಗಿಸಿಕೊಂಡ ನಿಫಾ ವೈರಸ್ ಮಾನವರಲ್ಲಿ ಮೊದಲು ಕಾಣಿಸಿಕೊಂಡದ್ದು 1999ರಲ್ಲಿ ಮಲೇಷ್ಯಾ ಹಾಗೂ ಸಿಂಗಪುರಗಳಲ್ಲಿ. ಮುಂದಿನ ದಿನಗಳಲ್ಲಿ ಮತ್ತೆ ಅಲ್ಲಿ ಇದು ಪುನಃ ಕಾಣಿಸಿಕೊಳ್ಳದಿದ್ದರೂ 2001ರಲ್ಲಿ ಬಾಂಗ್ಲಾದೇಶದ ಜನರಲ್ಲಿ ಕಾಣಿಸಿಕೊಂಡು ಮುಂದೆ ಸಾಧಾರಣ ವರ್ಷಕ್ಕೊಮ್ಮೆ ಅಲ್ಲಿನ ಜನರಲ್ಲಿ ಸೋಂಕುಂಟು ಮಾಡುತ್ತಿತ್ತು. 2001 ಹಾಗೂ 2007 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಫಾ ಖಾಯಿಲೆ ತಲೆದೋರಿದರೂ ಇದನ್ನು ಬಹಳ ಸಮರ್ಪಕವಾಗಿ ನಿವಾರಿಸಲಾಯಿತು. ಮುಂದೆ 2018ರಲ್ಲಿ ನಮ್ಮ ನೆರೆ ರಾಜ್ಯ ಕೇರಳದಲ್ಲಿ ಕಾಣಿಸಿಕೊಂಡು 17 ಜನರ ಸಾವಿಗೆ ಕಾರಣವಾದರೂ, ಅಲ್ಲಿನ ಉತ್ತಮ ಮಟ್ಟದ ಆರೋಗ್ಯ ಸೇವೆಯ ಸಮರ್ಥ ಕಾರ್ಯ ನಿರ್ವಹಣೆಯಿಂದಾಗಿ ಶೀಘ್ರದಲ್ಲೇ ನಿಯಂತ್ರಣಕ್ಕೊಳಗಾಯಿತು.
ಆದರೆ ಇತ್ತೀಚೆಗೆ ಅದಾಗಲೇ ಕೋವಿಡ್-19ರ ಖಾಯಿಲೆಯಿಂದ ಗುಣಮುಖನಾದ 12 ವರ್ಷದ ಬಾಲಕ ನಿಫಾ ಖಾಯಿಲೆಗೆ ತುತ್ತಾದ ಹಾಗೂ ಆತನ ಶುಶ್ರೂಷೆ ಮಾಡಿದ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಈ ಕಾಯಿಲೆಯ ಗುಣಲಕ್ಷಣ ಕಾಣಿಸಿಕೊಂಡಿದೆ ಎಂದು ಬಂದ ವರದಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ.
ನಿಫಾ ಖಾಯಿಲೆ ಹರಡುವ ವಿಧಾನ
ಎ) ಸೋಂಕಿರುವ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ:
`ಫ್ರುಟ್ ಬ್ಯಾಟ್’ಗಳಿಂದ ಇತರ ಪ್ರಾಣಿಗಳಾದ ಹಂದಿ, ಕುರಿ, ಆಡು, ಕುದುರೆ, ನಾಯಿ ಮೊದಲಾದವುಗಳು. ಇವುಗಳಲ್ಲಿ ಹಂದಿಗಳಲ್ಲಿ ಈ ಕಾಯಿಲೆ ಗುಣಲಕ್ಷಣ ಹೆಚ್ಚಾಗಿ ಕಾಣಿಸಿಕೊಂಡು, ಮರಿಗಳಲ್ಲಿ ಮರಣವೂ ಉಂಟಾಗುವ ಸಾಧ್ಯತೆ ಇದೆ. ಹಾಗೂ ಸೋಂಕಿಗೆ ತುತ್ತಾದ ಈ ಪ್ರಾಣಿಗಳು ಇದನ್ನು ಇತರೆ ಪ್ರಾಣಿಗಳಿಗೆ ಹರಡಬಲ್ಲವು.
ಬಿ) `ಫ್ರುಟ್ ಬ್ಯಾಟ್’ಗಳಿಂದ ಹಾಗೂ ಸೋಂಕಿರುವ ಪ್ರಾಣಿಗಳಿಂದ ಮಾನವರಿಗೆ ತಾಳೆ ಮರದಿಂದ ನೀರಾ ತೆಗೆಯುತ್ತಿರುವಾಗ, ಈ ಬಾವಲಿಗಳು ಆ ನೀರಾವನ್ನು ನೆಕ್ಕುವುದರಿಂದ ಅವುಗಳ ಜೊಲ್ಲಿನಿಂದ ನೀರಾ ಕಲುಷಿತವಾಗುತ್ತದೆ. ಇಂತಹ ನೀರಾ ಕುಡಿಯುವುದರಿಂದ ಅಥವಾ ಇವುಗಳ ಜೊಲ್ಲು, ಮೂತ್ರದಿಂದ ಕಲುಷಿತವಾದ ಹಣ್ಣು, ಇತರ ಆಹಾರ ಸಾಮಗ್ರಿಗಳನ್ನು ತಿಂದಾಗ ಈ ನಿಫಾ ವೈರಸ್ ಮನುಷ್ಯರ ದೇಹ ಪ್ರವೇಶಿಸಬಹುದು. ಬಾವಲಿ ಕಚ್ಚಿದ ಹಣ್ಣನ್ನು ತಿನ್ನುವುದರಿಂದ 2018ರಲ್ಲಿ ಕೇರಳದಲ್ಲಿ ಈ ಖಾಯಿಲೆಯ ಮೊದಲ ಪ್ರಕರಣ ಉಂಟಾಗಿತ್ತು.
ಸಿ) ಸೋಂಕಿರುವ ಪ್ರಾಣಿಗಳಿಂದ ಮನುಷ್ಯರಿಗೆ: ಮಲೇಷ್ಯಾದಲ್ಲಿ ಕಾಣಿಸಿಕೊಂಡ ನಿಫಾ ಕಾಯಿಲೆ ಆ ಸೋಂಕಿನಿಂದ ಬಳಲುತ್ತಿದ್ದ ಹಂದಿಗಳ ಸಂಪರ್ಕದಿಂದಾಗಿ ಮನುಷ್ಯರಲ್ಲಿ ತಲೆದೋರಿತ್ತು.
ಡಿ) ಸೋಂಕಿತ ಮನುಷ್ಯರಿಂದ ಆರೋಗ್ಯವಂತ ಮನುಷ್ಯರಿಗೆ ಈ ಕಾಯಿಲೆಯಿಂದ ಬಳಲುವ ರೋಗಿಗಳ ದೇಹದ ದ್ರವ-ಜೊಲ್ಲು, ಮೂಗಿನ ಸ್ರಾವ, ರಕ್ತ, ಮೂತ್ರ – ಮೊದಲಾದವುಗಳ ಸಂಪರ್ಕಕ್ಕೆ ಆರೋಗ್ಯವಂತರು ಬಂದಾಗ ಅವರಿಗೆ ಈ ಸೋಂಕು ತಗಲುತ್ತದೆ.
ಈ ವೈರಸ್ ಮಾನವರ ಬಾಯಿ, ಮೂಗಿನ ಮೂಲಕ ಗಂಟಲನ್ನು ಪ್ರವೇಶಿಸುವುದು. ಮುಂದೆ ದೇಹದ ಇತರ ಭಾಗಗಳಾದ ಶ್ವಾಸಕೋಶ, ಮೂತ್ರಪಿಂಡ, ಮಿದುಳು ಮೊದಲಾದವುಗಳಿಗೆ ಹರಡುವುದು. ರೋಗಾಣು ದೇಹ ಪ್ರವೇಶಿಸಿದ ನಂತರ ಸಾಧಾರಣ 4 ರಿಂದ 14 ದಿನಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುವುದು. ಈ ಅವಧಿ 45 ದಿನದ ತನಕವೂ ವಿಸ್ತರಿಸಿದ ವರದಿಯೂ ಇದೆ.
ರೋಗದ ಗುಣಲಕ್ಷಣ:
ಇದು ರೋಗಲಕ್ಷಣ ರಹಿತ ಸೋಂಕಾಗಿರಬಹುದು. ಬಹಳ ಕನಿಷ್ಠ ಮಧ್ಯಮ ಮಟ್ಟದ ಸೋಂಕಾಗಿರಬಹುದು.
ಪ್ರಾರಂಭಿಕ ಹಂತದಲ್ಲಿ, ಉಳಿದ ಇತರ ವೈರಲ್ ಸೋಂಕಿನ ಗುಣಲಕ್ಷಣಗಳಾದ – ಕೆಮ್ಮು, ಗಂಟಲು ನೋವು, ಜ್ವರ, ಮೈಕೆನೋವು ವಾಂತಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ ಹಾಗೂ ಮುಂದೆ ನ್ಯೂಮೋನಿಯಾ ಬರಬಹುದು.
ಇನ್ನು ತೀಕ್ಷ್ಣಮಟ್ಟದ ಕಾಯಿಲೆಯಲ್ಲಿ ಮಿದುಳಿನ ಊರಿಊತದಿಂದಾಗಿ ತೀವ್ರ ತಲೆನೋವು, ಮಂಪರು, ಸುತ್ತ ಮುತ್ತಲಿನ ಪರಿಸರ ಮತ್ತು ಸಮಯದ ಬಗ್ಗೆ ಗೊಂದಲ ಉಂಟಾಗಬಹುದು. ಫಿಟ್ಸ್ ಕಾಣಿಸಿಕೊಳ್ಳಬಹುದು. ಹಾಗೂ ರೋಗಿ ಅರೆಪ್ರಜ್ಞಾವಸ್ಥೆಯ ಸ್ಥಿತಿ ತಲುಪಿ ಸಂಪೂರ್ಣ ಮೂರ್ಛೆಗೊಳಗಾಗಬಹುದು. ಇದು ಸಾವಿಗೆ ಕಾರಣವಾಗಬಹುದು. ಈ ತೀಕ್ಷ್ಣ ಕಾಯಿಲೆಯಿಂದ ಬದುಕುಳಿದವರಲ್ಲಿ ಸಾಧಾರಣ ಪ್ರತಿಶತ 20 ರೋಗಿಗಳಲ್ಲಿ ಮುಂದೆ ನಡವಳಿಕೆಯಲ್ಲಿ ಬದಲಾವಣೆಯಾಗಬಹುದು, ಫಿಟ್ಸ್ ಆಗಾಗ ಬರಬಹುದು.
ನಿಫಾ ಖಾಯಿಲೆಯಿಂದ ಮರಣದ ಪ್ರಮಾಣ ಪ್ರತಿಶತ 40 ರಿಂದ 75 ರ ತನಕ ಇರುವುದರಿಂದ ಈ ಖಾಯಿಲೆ ಅಪಾಯಕಾರಿ.
ಖಾಯಿಲೆಯ ಪತ್ತೆ ಹಚ್ಚುವಿಕೆ:
- ಮೂಗು ಮತ್ತು ಗಂಟಲಿನ ಮಾದರಿ ತೆಗೆದು ಅದನ್ನು ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಡಿಸುವುದರಿಂದ ನಿಫಾ ಸೋಂಕಿತರಲ್ಲಿ ಈ ವೈರಸ್ಸನ್ನು ಪತ್ತೆ ಹಚ್ಚಬಹುದು.
- ಖಾಯಿಲೆ ಪ್ರಾರಂಭವಾಗಿ ಕೆಲ ದಿನಗಳ ನಂತರ ಈ ವೈರಸ್ ವಿರುದ್ಧದ ಆ್ಯಂಟಿಬೋಡಿ (ಪ್ರತಿಕಾಯ) ರೋಗಿಯ ದೇಹದಲ್ಲಿ ಕಾಣಿಸಿಕೊಳ್ಳುವುದು. ಎಲಿಝಾ (Eliza) ರಕ್ತ ಪರೀಕ್ಷೆಯಿಂದ ಇದನ್ನು ಪತ್ತೆ ಹಚ್ಚಬಹುದು.
- ರೋಗಿಯ ದೇಹದ ದ್ರವ ಕಲ್ಟರ್ ಮೂಲಕವೂ ಈ ವೈರಸ್ ಪತ್ತೆ ಹಚ್ಚಬಹುದು.
ಚಿಕಿತ್ಸೆ:
ಇತರೆ ವೈರಸ್‌ಗಳಂತೆ, ನಿಫಾ ವೈರಸ್ ನಾಶಪಡಿಸಲು ಕೂಡಾ ಇಲ್ಲಿಯ ತನಕ ಯಾವುದೇ ಔಷಧ ದೊರೆತಿಲ್ಲ. ಹಾಗಾಗಿ ಖಾಯಿಲೆಯ ಗುಣಲಕ್ಷಣಗಳ ಶಮನಕ್ಕೆ ಬೇಕಾದ ಚಿಕಿತ್ಸೆ ನೀಡುವುದು ಸೂಕ್ತ. ಹಾಗೂ ರೋಗಿಗೆ ವಿಶ್ರಾಂತಿ ನೀಡುವುದರೊಂದಿಗೆ ದೇಹದಲ್ಲಿ ದ್ರವಾಂಶವು ಕಡಿಮೆಯಾಗದಂತೆ ಜಾಗ್ರತೆ ವಹಿಸುವುದು ಅವಶ್ಯ.
ರೋಗ ಬರದಂತೆ ತಡೆಗಟ್ಟುವಿಕೆ:
ಈ ನಿಫಾ ವೈರಸ್ ಸೋಂಕು ಬರದಂತೆ ತಡೆಯುವ ಲಸಿಕೆಯ ಅವಿಷ್ಕಾರ ಆಗಿಲ್ಲ. ಚಿಕಿತ್ಸೆ, ಲಸಿಕೆ ಇಲ್ಲದಾಗ ಜನರು ರೋಗ ತಡೆಗಟ್ಟುವ ಇತರ ವಿಧಾನಗಳನ್ನು ಅನುಸರಿಸುವುದು ಅಗತ್ಯ.
- ಬಾವಲಿಗಳು ಹೆಚ್ಚಾಗಿರುವ ಪ್ರದೇಶ ಹಾಗೂ ಅವುಗಳು ಹೆಚ್ಚಾಗಿ ಭೇಟಿ ನೀಡುವ ತಾಳೆ ಮರಗಳಿರುವ ಪ್ರದೇಶದಲ್ಲಿ ಅವುಗಳ ಮೂತ್ರ ಎಂಜಲಿನಿಂದ ಕಲುಷಿತವಾಗುವ ಸಂದರ್ಭವಿರುವುದರಿಂದ ಅಲ್ಲಿಗೆ ಭೇಟಿ ನೀಡದಿರುವುದು.
- ತಾಳೆ ಮರದ ತಾಜಾ ನೀರಾವನ್ನು ಕುದಿಸಿ ಉಪಯೋಗಿಸುವುದು.
- ಬಾವುಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು. ಯಾವುದೇ ಹಣ್ಣನ್ನು ತಿನ್ನುವ ಮೊದಲು ಅದನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆ ತೆಗೆದು ತಿನ್ನುವುದು ಸೂಕ್ತ.
- ನಮ್ಮದ್ದಲ್ಲದ ಪ್ರಾಣಿಗಳನ್ನು ಮುದ್ದು ಮಾಡದೆ ಅವುಗಳಿಂದ ದೂರವಿರುವುದು.
- ಹಂದಿ ಸಾಕಣೆಯ ಜಾಗವನ್ನು ಸೂಕ್ತ ರೋಗಾಣು ನಾಶಕಗಳನ್ನು ಉಪಯೋಗಿಸಿ ಸ್ವಚ್ಛವಾಗಿಡುವುದು. ಖಾಯಿಲೆಯಿಂದ ಬಳಲುವ ಪ್ರಾಣಿಗಳನ್ನು ಜನರಿಂದ ಇತರ ಪ್ರಾಣಿಗಳಿಂದ ಪ್ರತ್ಯೇಕಿಸುವುದು.
- ಪ್ರಾಣಿಗಳ ಆರೈಕೆ ಮಾಡುವವರು, ಕಸಾಯಿಖಾನೆಯಲ್ಲಿ ಕಾರ್ಯನಿರ್ವಹಿಸುವವರು ಕೈಗಳಿಗೆ ಗ್ಲೌಸ್, ಮಾಸ್ಕ್‌ಗಳನ್ನು ಧರಿಸುವುದು.
- ನಿಫಾ ಖಾಯಿಲೆಯ ರೋಗಿಗಳನ್ನು ಹಾಗೂ ಆವರ ಸಂಪರ್ಕಕ್ಕೆ ಬಂದವರನ್ನು ಇತರರಿಂದ ಪ್ರತ್ಯೇಕವಾಗಿಡುವುದು; ರೋಗಿಗಳ ಶುಶ್ರೂಷೆ ಮಾಡುವವರು ಈ ವೈರಸಿನ ಸೋಂಕಿನಿಂದ ತಮ್ಮ ರಕ್ಷಣೆಗೆ ಬೇಕಾದ ಸಂಪೂರ್ಣ ವಿಧಾನಗಳನ್ನು ಉಪಯೋಗಿಸತಕ್ಕದ್ದು.
- ಯಾರ ಕೈ ಹೇಗೆ, ಯಾವಾಗ ಈ ವೈರಸ್‌ನಿಂದ ಕಲುಷಿತವಾಗುತ್ತದೆ ಎಂದು ಹೇಳಲು ಅಸಾಧ್ಯ. ಹಾಗಾಗಿ ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆದು ಶುಚಿಯಾಗಿಡುವುದು ಅಗತ್ಯ.