ಕೊಡಗು: ಕೋವಿಡ್ ಸಾಂಕ್ರಾಮಿಕ ಸೋಂಕು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇವುಗಳ ನಡುವೆ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಹರಡುತ್ತಿರುವುದು ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.
ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣಿಸಿಕೊಂಡು ಒಬ್ಬರು ನಿಧನರಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಕೊಡಗು ಡಿಎಚ್‍ಓ ಆರ್.ವೆಂಕಟೇಶ್ ಅವರು ಸಾರ್ವಜನಿಕರಲ್ಲಿ ಜ್ವರ, ಮೈಕೈ ನೋವು, ಶೀತ, ನೆಗಡಿ ಅಥವಾ ತಲೆಸುತ್ತು ಮುಂತಾದ ರೋಗ ಲಕ್ಷಣಗಳೇನಾದರೂ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೋರಿಸಿಕೊಂಡು ಎಚ್ಚರವಹಿಸಬೇಕೆಂದು ಹೇಳಿದ್ದಾರೆ.
ಕೇರಳ ಮತ್ತು ಕೊಡಗು ಜಿಲ್ಲೆಗಳ ನಡುವೆ ವಿವಿಧ ಕಾರಣಗಳಿಗಾಗಿ ಜನರ ಓಡಾಟ ಇವೆ. ಜೊತೆಗೆ ಸಾವಿರಾರು ಪಕ್ಷಿಗಳು ಕೇರಳದಿಂದ ಕೊಡಗಿಗೆ ವಲಸೆ ಬರುತ್ತವೆ. ಕೊಡಗಿನಲ್ಲೂ ನಿಫಾ ವೈರಸ್ಸಿನ ಆತಂಕ ಎದುರಾಗಿದೆ. ಆದರೆ ಜಿಲ್ಲೆಯಲ್ಲಿ ನಿಫಾ ವೈರಸ್‌ನಂತಹ ಪ್ರಕರಣವು ಇದುವರೆಗೂ ಕಂಡು ಬಂದಿಲ್ಲ ಎಂದು ಅಧಿಕಾರಿ ಅವರ ಹೇಳಿಕೆಯಾಗಿದೆ.
ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ಸಿನಿಂದಾಗಿ ಜಿಲ್ಲೆಯಲ್ಲಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಜನರು ಯಾವುದೇ ಕಾರಣಕ್ಕೂ ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಉಳಿದ ಹಣ್ಣುಗಳನ್ನು ತಿನ್ನುವುದಾದರೆ ಚೆನ್ನಾಗಿ ತೊಳೆದು ತಿನ್ನಬೇಕೆಂದು ಸೂಚನೆ ನೀಡಿದ್ದಾರೆ.
ನಿಫಾ ವೈರಸ್ ಕೊರೊನಾ ವೈರಸ್ನಂತೆ ಅಲ್ಲ. ಏಕೆಂದರೆ, ನಿಫಾ ವೈರಸ್ಗೆ ಇದುವರೆಗೂ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ಲಸಿಕೆಯ ಸಂಶೋಧನೆಯೂ ಮುಗಿದಿಲ್ಲ. ನಿಫಾ ವೈರಸ್ ತಗುಲಿದವರ ಪೈಕಿ ಶೇ.40 ರಿಂದ ಶೇ.75 ರಷ್ಟು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ನಿಫಾ ವೈರಸ್ಗೆ ಯಾವುದೇ ನಿರ್ದಿಷ್ಟ, ನಿಖರವಾದ ಔಷಧಿಯೂ ಇಲ್ಲ. ಹೀಗಾಗಿ ನಿಫಾ ವೈರಸ್ ಹೆಚ್ಚಿನ ಅಪಾಯಕಾರಿಯಾಗಿದೆ.
ಜಿಲ್ಲಾಡಳಿತವು ಕೇರಳದ ಗಡಿಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಸಾಕಷ್ಟು ಮುನ್ನಚ್ಚರಿಕೆಯನ್ನು ವಹಿಸಿದೆ.