ಅಕ್ಟೋಬರ್ 3ರ ಬೃಹತ್ ಪ್ರಮಾಣದ ದಾಳಿಯ ನಂತರ ಸ್ವತಂತ್ರ ಮಾಧ್ಯಮವಾದ ನ್ಯೂಸ್ ಕ್ಲಿಕ್ ಅಕ್ಟೋಬರ್ 11ರಂದು ಮತ್ತೊಂದು ಕೇಂದ್ರೀಯ ಸಂಸ್ಥೆಯ ‘ಶೋಧ’ಕ್ಕೆ ಗುರಿಯಾಗಿದೆ. “ಇದು ನಮ್ಮ ಬಗ್ಗೆ ತನಿಖೆ ನಡೆಸುತ್ತಿರುವ ಐದನೇ ಸಂಸ್ಥೆಯಾಗಿದೆ. ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ” ಎಂದು ಈ ಬಗ್ಗೆ ಟ್ವಿಟರ್‌ನಲ್ಲಿ ಅದು ತಿಳಿಸಿದೆ- ಇ.ಡಿ. ಆರ್ಥಿಕ ಅಪರಾಧಗಳ ವಿಭಾಗ, ಐಟಿ, ದಿಲ್ಲಿ ಪೊಲಿಸ್ ಮತ್ತು ಈಗ ಸಿಬಿಐ.
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿಯಲ್ಲಿ ವಿದೇಶಿ ಹಣಕಾಸು ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಈಗ ಸಿಬಿಐ ಹೊಸ ಕಾನೂನು ಕ್ರಮವನ್ನು ಆರಂಭಿಸಿದೆ.
ಅಕ್ಟೋಬರ್ 11ರ ಬೆಳಗ್ಗೆ ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳ ತಂಡವು ಎರಡು ಸ್ಥಳಗಳಲ್ಲಿ ‘ಶೋಧ’ ಕಾರ್ಯಾಚರಣೆಯನ್ನು ನಡೆಸಿತು.
ಇದನ್ನೂ ಓದಿ: ‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ಫೆಬ್ರವರಿ 2021 ರಲ್ಲಿ, ಒಂದು ಕೇಂದ್ರೀಯ ಸಂಸ್ಥೆ 2018 ರಿಂದ 2021 ರ ನಡುವೆ ನ್ಯೂಸ್‌ಕ್ಲಿಕ್ ಸ್ವೀಕರಿಸಿದೆ ಎಂದು ಹೇಳಲಾದ ವಿದೇಶಿ ಪಾವತಿಗಳ ತನಿಖೆ ನಡೆಸಿತು. ನಂತರ ಇನ್ನೊಂದು, ಚೀನಾದಿಂದ ಅಕ್ರಮ ಹಣವನ್ನು ಅಮೆರಿಕಾದ ಮೂಲಕ ಪಡೆದುಕೊಂಡಿದೆ ಎಂದು ಹೇಳಿತು. ಮತ್ತೊಂದು ಸಂಸ್ಥೆ ಈ ಕುರಿತು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿತು.
ಮುಂದುವರೆಯುತ್ತಿರುವ ಕಿರುಕುಳ-ಪತ್ರಕರ್ತರ ಸಂಘಟನೆಗಳ ಆಕ್ರೋಶ
ನ್ಯೂಸ್‌ಕ್ಲಿಕ್‌ನ ಉದ್ಯೋಗಿಗಳಿಗೆ ಈ ರೀತಿ ನಿರಂತರ ಮತ್ತು ಅವಿರತ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ಆರು ಪತ್ರಕರ್ತರ ಸಂಘಟನೆಗಳು ಮತ್ತೊಮ್ಮೆ ಹೇಳಿಕೆ ನೀಡಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿವೆ.
ನ್ಯೂಸ್‌ಕ್ಲಿಕ್ ಉದ್ಯೋಗಿಗಳ ಮನೆಗಳ ಮೇಲೆ ಅಕ್ಟೋಬರ್ 3 ರಂದು ನಡೆದ ದಾಳಿಯ ಸಮಯದಲ್ಲಿ, ಉದ್ಯೋಗಿಗಳಲ್ಲದೆ, ಅವರ ವೃದ್ಧ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬದ ಸದಸ್ಯರ ಲ್ಯಾಪ್‌ಟಾಪ್ ಮತ್ತು ಫೋನ್‌ಗಳನ್ನು ಲಂಗುಲಗಾಮಿಲ್ಲದೆ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ರತಿಯೊಂದು ಉಪಕರಣಕ್ಕೂ ಜಫ್ತಿ ಮೆಮೊಗಳನ್ನು ನೀಡದೆ ಎಲ್ಲಾ ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ. ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಲು ಉದ್ಯೋಗಿಗಳು ಹೊಸ ಫೋನ್‌ಗಳನ್ನು ಖರೀದಿಸಬೇಕಾಗಿ ಬಂದಿದೆ ಮತ್ತು ಲ್ಯಾಪ್‌ಟಾಪ್‌ಗಳನ್ನು ಹೊಂದಿಸಿಕೊಳ್ಳಬೇಕಾಗಿ ಬಂದಿದೆ. ಪ್ರಸ್ತುತ, ಅವರ ಕೆಲಸ ಮತ್ತು ಜೀವನೋಪಾಯದ ಹಕ್ಕಿಗೆ ಬಾಧೆಯುಂಟಾಗಿದೆ. ಅನೇಕ ನ್ಯೂಸ್‌ಕ್ಲಿಕ್ ಉದ್ಯೋಗಿಗಳು ಅವರ ಕುಟುಂಬಗಳಲ್ಲಿ ಒಂಟಿ ಸಂಬಳದಾರರಾಗಿದ್ದಾರೆ, ವಯಸ್ಸಾದ ಹಿರಿಯರ ಪೋಷಣೆಯ ಹೊಣೆಯಿರುವವರಾಗಿದ್ದಾರೆ.
ಅವರ ಸಾಧನ-ಸಲಕರಣೆಗಳನ್ನು ಸದ್ಯಕ್ಕೆ ವಾಪಾಸು ಕೊಡುವ ಯಾವುದೇ ಭರವಸೆ ಇಲ್ಲದಿರುವುದರಿಂದ, ಪತ್ರಕರ್ತರ ಬಳಗದವರು ಮತ್ತು ಸಾರ್ವಜನಿಕರು ಅವರಿಗೆ ಸಾಧ್ಯವಾದಷ್ಟು ಯಾವುದೇ ರೂಪದಲ್ಲಿ, ಉದಾ, ಅವರು ಕೆಲಸ ಮಾಡಲು ಮತ್ತು ಉಳಿಸಿಕೊಳ್ಳಲು ಸಾಧ್ಯವಾಗುವಂತೆ ಲ್ಯಾಪ್‌ಟಾಪ್‌ಗಳು ಅಥವಾ ಫೋನ್‌ಗಳನ್ನು ಒದಗಿಸುವುದು ಇತ್ಯಾದಿಗಳ ಮೂಲಕ ಸಹಾಯ ಮಾಡಬೇಕೆಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕೋರ್, ಪ್ರೆಸ್ ಅಸೋಸಿಯೇಷನ್, ಡಿಜಿಪಬ್, ಡೆಲ್ಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಮತ್ತು ವರ್ಕಿಂಗ್ ನ್ಯೂಸ್ ಕ್ಯಾಮರಾಮೆನ್ಸ್ ಅಸೋಸಿಯೇಷನ್ ಮನವಿ ಮಾಡಿವೆ.
ವಿಡಿಯೋ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ