ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್‌ ಆರೋಪ

ನವದೆಹಲಿ :ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಹಾಗೂ ಅದುಮಿಡುವ ಪ್ರಯತ್ನ ಇದಾಗಿದೆ ಎಂದು ನ್ಯೂಸ್‌ಕ್ಲಿಕ್‌ ಆರೋಪಿಸಿದೆ.

ಈ ಬಗ್ಗೆ ನ್ಯೂಸ್ ಕ್ಲಿಕ್ ಬುಧವಾರ ರಾತ್ರಿ ಹೇಳಿಕೆಯೊಂದನ್ನು ನೀಡಿದ್ದು, ಚೀನಾ ಪರ ಪ್ರಚಾರಾಂದೋಲನವನ್ನು ತಾನು ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಟೀಕೆಗಳನ್ನು ದೇಶದ್ರೋಹ ಅಥವಾ ರಾಷ್ಟ್ರವಿರೋಧಿ ಕೃತ್ಯವೆಂಬಂತೆ ಕಾಣುತ್ತಿದೆ ಎಂದು ನ್ಯೂಸ್‌ಕ್ಲಿಕ್‌ ಟೀಕಿಸಿದೆ.

ಸುದ್ದಿತಾಣದಲ್ಲಿನ ವಸ್ತು-ವಿಷಯ ಏನಿರಬೇಕು ಎಂಬ ವಿಚಾರದಲ್ಲಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿಲ್ಲ, ವಸ್ತು-ವಿಷಯದ ವಿಚಾರದಲ್ಲಿ ವೃತ್ತಿಯಲ್ಲಿನ ಅತ್ಯುನ್ನತ ಮಾನದಂಡಗಳನ್ನು ಪಾಲಿಸುತ್ತಿರುವುದಾಗಿ ನ್ಯೂಸ್‌ಕ್ಲಿಕ್ ಹೇಳಿದೆ.

ರೈತರು, ಕಾರ್ಮಿಕರು ಹಾಗೂ ಸಮಾಜದ ಇತರ ನಿರ್ಲಕ್ಷಿತ ವರ್ಗಗಳನ್ನೊಳಗೊಂಡ ವಾಸ್ತವಿಕ ಭಾರತದ ಕಥೆಯನ್ನು ಪ್ರಸ್ತುತಪಡಿಸುವ ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಹಾಗೂ ಅದುಮಿಡುವ ಪ್ರಯತ್ನ ಇದಾಗಿದೆ ಎಂದು ನ್ಯೂಸ್ ಕ್ಲಿಕ್ ಹೇಳಿಕೆಯಲ್ಲಿ ತಿಳಿಸಿದೆ.

ತಾನು ಪಡೆದಿರುವ ಹಣಕಾಸಿನ ನೆರವು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಬಂದಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ನ್ಯೂಸ್‌ಕ್ಲಿಕ್‌ ಹೇಳಿದೆ.

‘ನಮ್ಮ ಅಧಿಕಾರಿಗಳ ಮೇಲೆ ಜಾರಿ ನಿರ್ದೇಶನಾಲಯ, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಮೊದಲು ದಾಳಿ ನಡೆಸಿದ್ದಾರೆ. ಆದರೆ ಕೆಲವು ಡಿಜಿಟಲ್ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಹೊರತುಪಡಿಸಿದರೆ ಯಾವುದೇ ದೋಷಾರೋಪಪಟ್ಟಿ ಸಲ್ಲಿಸಿಲ್ಲ’ ಎಂದು ಅದು ಹೇಳಿದೆ.

ನ್ಯೂಸ್‌ಕ್ಲಿಕ್‌ ಮೇಲಿನ ಕ್ರಮವನ್ನು ವಿರೋಧಿಸಿ ಪತ್ರಕರ್ತರ ವಿವಿಧ ಸಂಘಟನೆಗಳು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬಳಿ ಬುಧವಾರ ಪ್ರತಿಭಟನೆ ನಡೆಸಿವೆ. ಪತ್ರಕರ್ತರ ಕೆಲವು ಪ್ರಮುಖ ಸಂಘಟನೆಗಳು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂ‌ರ್ತಿ ಡಿ.ವೈ. ಚಂದ್ರಚೂಡ್ ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿವೆ.

ಪ್ರಕರಣದ ಹಿನ್ನೆಲೆ : ಚೀನಾ ಪ್ರಚಾರ ಅಭಿಯಾನದಲ್ಲಿ ನ್ಯೂಸ್‌ಕ್ಲಿಕ್‌ ನಿರತವಾಗಿದೆ ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಪೊಲೀಸರು ಬಂಧಿಸಿದ್ದರು. ನ್ಯೂಸ್‌ಕ್ಲಿಕ್‌ನ ಪತ್ರಕರ್ತರ ಮನೆಯ ಮೇಲೆ, ಕಚೇರಿಯ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್, ಕ್ಯಾಮರಾ, ಹಲವು ಸಾಫ್ಟವೇರ್ ಗಳನ್ನು ವಶಪಡಿಸಿಕೊಂಡಿದ್ದರು. ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲಿನ ದಾಳಿ ಕೇಂದ್ರದ ಸರ್ವಾಧಿಕಾರಿ ಮನಸ್ಥಿತಿಯ ಪ್ರತೀಕ ಎಂದು ಪತ್ರಕರ್ತರು, ವಿಪಕ್ಷಗಳು ಆರೋಪಿಸಿದ್ದವು.

Donate Janashakthi Media

Leave a Reply

Your email address will not be published. Required fields are marked *