‘ವಿದೇಶಿ ಸರ್ಕಾರದಿಂದ ಎಂದಿಗೂ ಹಣವನ್ನು, ನಿರ್ದೇಶನವನ್ನು ಪಡೆದಿಲ್ಲ’ ನ್ಯೂಸ್‌ಕ್ಲಿಕ್ ಪ್ರಕರಣ ಕುರಿತಂತೆ ನೆವಿಲ್ಲ್ ರಾಯ್ ಸಿಂಘಮ್ ಕಂಪನಿ ಹೇಳಿಕೆ

ದಿಲ್ಲಿ ಪೋಲೀಸ್‍ನ ಎಫ್‍ಐಆರ್‌ಗೆ ಗುರಿಯಾಗಿರುವ ‘ನ್ಯೂಸ್‍ಕ್ಲಿಕ್‍’ ನ ಮೇಲಿರುವ ಗಹನವಾದ ಆರೋಪವೆಂದರೆ ಅದು ಭಾರೀ ಪ್ರಮಾಣದಲ್ಲಿ ಚೀನೀ ಹಣವನ್ನು ಭಾರತ ಸರಕಾರದ ಧೋರಣೆಗಳನ್ನು ಟೀಕಿಸುವುದಕ್ಕಾಗಿ ಮತ್ತು ಚೀನೀಯರ ಧೋರಣೆಗಳನ್ನು ಉತ್ತೇಜಿಸುವ “ಕಾಸಿಗಾಗಿ ಸುದ್ದಿ’ಗಳನ್ನು ಪ್ರಕಟಿಸಲಿಕ್ಕಾಗಿ ಪಡೆದಿದೆ ಎಂಬುದು. ಅಮೆರಿಕಾದ ವ್ಯಾಪಾರಸ್ಥ ನೆವಿಲ್ಲ್ ರಾಯ್‍ ಸಿಂಘಂ ಮೂಲಕ ಅದನ್ನು ಪಡೆಯಲಾಗಿದೆ ಎನ್ನುವ ನ್ಯೂಯಾರ್ಕ್‍ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ ಈ ಆರೋಪ ಹೊರಿಸಲಾಗಿದೆ. ಆದರೆ ಇದು ಸುಳ್ಳು ಆರೋಪ ಎಂದು ಈಗ ಇದಕ್ಕೆ ಸಂಬಂಧಪಟ್ಟ ಕಂಪನಿಯ ವಕೀಲರ ಹೇಳಿಕೆ ತಿಳಿಸಿದೆ( ದಿ ವೈರ್, ಅಕ್ಟೋಬರ್‌ 7). ಅಲ್ಲದೆ ಇದನ್ನು ನ್ಯೂಯಾರ್ಕ್ ಟೈಮ್ಸ್‌ಗೂ ಆ ಲೇಖನ ಪ್ರಕಟವಾಗುವ ಮೊದಲೇ ತಿಳಿಸಲಾಗಿತ್ತು. ಆದರೆ ಅದನ್ನು ಲೇಖನದ ಪ್ರಕಟಣೆಯೊಂದಿಗೆ ಪ್ರಕಟಿಸುವಲ್ಲಿ ಆ ಪತ್ರಿಕೆ ವಿಫಲವಾಗಿದೆ ಎಂದೂ ಅವರು ಹೇಳಿದ್ದಾರೆ.

ನ್ಯೂಯಾರ್ಕ್‍ ಟೈಮ್ಸ್ ಮತ್ತು ದಿಲ್ಲಿ ಪೋಲಿಸ್‍ ಉಲ್ಲೇಖಿಸಿರುವ ಹೂಡಿಕೆ ಮಾಡಿರುವ ಕಂಪನಿಯ ಹೆಸರು ‘ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್’ (ಡಬ್ಲ್ಯುಎಂಎಚ್), ಇದು ಯುಎಸ್ ಮೂಲದ ಲಾಭೋದ್ದೇಶದ ಗುಂಪು. ಇದು ಪೀಪಲ್ಸ್ ಸಪೋರ್ಟ್‍ ಫೌಂಡೇಷನ್’ ಎಂಬುದರ ಉಪಸಂಸ್ಥೆ. ಇದರಲ್ಲಿರುವುದು ಸಂಪೂರ್ಣವಾಗಿ ನೆವಿಲ್ಲ್ ರಾಯ್‍ ಸಿಂಘಂ ರವರ ಕಂಪನಿ ‘ಥಾಟ್‍ ವರ್ಕ್ಸ್’ನ ಮಾರಾಟದಿಂದ ಬಂದ ಹಣ ಮಾತ್ರ. “ಅದು ಎಂದೂ ಯಾವುದೇ ವಿದೇಶಿ ಸರಕಾರದಿಂದ ಹಣ ಪಡೆದಿಲ್ಲ , ಯಾವುದೇ ವಿದೇಶಿ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷ , ಅಥವ ಸರಕಾರದಿಂದ ನಿರ್ದೇಶನಗಳನ್ನು ತಗೊಂಡಿಲ್ಲ” ಎಂದು ಡಬ್ಲ್ಯುಎಂಎಚ್‌ನ ವಕೀಲ ಜೇಸನ್ ಪಿಫೆಚರ್ ಹೇಳಿಕೆ ನೀಡಿದ್ದಾರೆ. ನ್ಯೂಸ್‍ಕ್ಲಿಕ್‌ನಲ್ಲಿ ತಮ್ಮ ಸಂಸ್ಥೆಯ ಹೂಡಿಕೆಯನ್ನು ಕುರಿತಂತೆ ದಾಖಲೆಯನ್ನು ನೆಟ್ಟಗೆ ಮಾಡಲು ಈ ಹೇಳಿಕೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ | ನ್ಯೂಸ್‌ ಕ್ಲಿಕ್ ಮಾಜಿ ಉದ್ಯೋಗಿಯ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್ ಮೊಬೈಲ್ ವಶಕ್ಕೆ ಪಡೆದ ದೆಹಲಿ ಪೊಲೀಸ್

ನ್ಯೂಸ್‌ಕ್ಲಿಕ್‌ನಲ್ಲಿ ಡಬ್ಲ್ಯುಎಂಎಚ್ ನ ಹೂಡಿಕೆಯನ್ನು ಮಾರ್ಚ್ 2018 ರಲ್ಲಿ ಅಂತಿಮಗೊಳಿಸಲಾಯಿತು, ಹೂಡಿಕೆಯು “ಭಾರತೀಯ ಕಾನೂನಿನ ಎಲ್ಲಾ ಅಂಶಗಳನ್ನು, ನಿರ್ದಿಷ್ಟವಾಗಿ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ಅಂಶಗಳನ್ನೂ ಒಳಗೊಂಡಂತೆ, ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ,” ಎಂದು ಖಚಿತಪಡಿಸಿಕೊಳ್ಳಲು ಪ್ರತಿಷ್ಠಿತ ವಕೀಲರು ಮತ್ತು ಕಾನೂನು ಸಂಸ್ಥೆಗಳೊಂದಿಗೆ ಸಮಾಲೋಚನೆಯ ನಂತರವೇ ಈ ಹೂಡಿಕೆ ಮಾಡಲಾಗಿದೆ ಎಂದಿರುವ ಅವರು, ತಾನು ಡಬ್ಲ್ಯುಎಂಎಚ್‍ ಪರವಾಗಿ ವಿವಿಧ ಷೇರುದಾರರ ಸಭೆಗಳಲ್ಲಿ ಭಾಗವಹಿಸಿದ್ದೇನೆ, ಆದರೆ ತಮ್ಮ ಕಂಪನಿಗೆ ಸಂಪರ್ಕ ಹೊಂದಿರುವ ಯಾರೂ ನ್ಯೂಸ್‌ಕ್ಲಿಕ್‌ನ ಪತ್ರಿಕೋದ್ಯಮದ ಕೆಲಸವನ್ನು “ಎಂದೂ ಪ್ರಭಾವಿಸಿಲ್ಲ, ಮಾರ್ಗದರ್ಶನ ಮಾಡಿಲ್ಲ ಅಥವಾ ನಿರ್ದೇಶಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

” ಡಬ್ಲ್ಯುಎಂಎಚ್‍ ಭಾರತೀಯ ಅಧಿಕಾರಿಗಳಿಗೆ ಎಲ್ಲಾ ಸಂಗತಿಗಳನ್ನು ತಿಳಿಸಿದ್ದರೂ, ನ್ಯೂಸ್‌ಕ್ಲಿಕ್‌ನಲ್ಲಿ ಹೂಡಿಕೆ ಮಾಡಿದ ನಿಧಿಗಳ ಬಗ್ಗೆ ಸುಳ್ಳು ಆರೋಪಗಳು ಪ್ರಸಾರವಾಗುತ್ತಲೇ ಇವೆ. ಈ ಆಘಾತಕಾರಿ ಸನ್ನಿವೇಶದಿಂದಾಗಿ ನಾನು ದಾಖಲೆಯನ್ನು ನೇರಗೊಳಿಸಲೇಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲೇ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸುತ್ತ ಅವರು ಲೇಖನ ಪ್ರಕಟವಾಗುವ ಮೊದಲು ತಾವು ಕಳಿಸಿದ ಇದೇ ಸ್ಪಷ್ಟೀಕರಣವನ್ನು ಸೇರಿಸಲು ಪತ್ರಿಕೆ ವಿಫಲವಾದುದರಿಂದ ರಾಯ್‍ ಸಿಂಘಂ ರವರ ಹಣ ಚೀನಾದಿಂದ ಬಂದಿರಬಹುದೇ ಹೊರತು, ಥಾಟ್‍ ವರ್ಕ್ಸ್ ನ ಮಾರಾಟದಿಂದಲ್ಲ ಎಂದು ಓದುಗರು ನಂಬುವಂತಾಗಿದೆ, “ಅವರ ಹೊಲಸು ಆಶಯದ ಶಿರೋನಾಮೆಗಳು ಮತ್ತು ದಾರಿ ತಪ್ಪಿಸುವ ವರದಿಗಾರಿಕೆ ಈಗ ಅಮಾಯಕ ಪತ್ರಕರ್ತರ ಬಂಧನಕ್ಕೆ ಕಾರಣವಾಗಿದೆ” ಎಂದು ಡಬ್ಲ್ಯುಎಂಎಚ್‍ನ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈಗ ನಡೆಯುತ್ತಿರುವ ದಮನವನ್ನು ಗಮನಿಸಿದರೆ, ಭಾರತೀಯ ಕಾನೂನನ್ನು ಎಚ್ಚರಿಕೆಯಿಂದ ಅನುಸರಿಸುವ ವಿದೇಶಿ ಹೂಡಿಕೆದಾರರಿಗೆ ಭಾರತವು ಸುರಕ್ಷಿತ ಸ್ಥಳವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ” ಎಂದೂ ಡಬ್ಲ್ಯುಎಂಎಚ್‍ನ ವಕೀಲರು ತಮ್ಮ ಹೇಳಿಕೆಯ ಕೊನೆಯಲ್ಲಿ ಟಿಪ್ಪಣಿ ಮಾಡಿದ್ದಾರೆ.

ವಿಡಿಯೋ ನೋಡಿ: ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ

Donate Janashakthi Media

Leave a Reply

Your email address will not be published. Required fields are marked *