ನ್ಯೂಸ್‌ ಕ್ಲಿಕ್ ಪ್ರಕರಣ | ತನಿಖೆಗೆ ಹೆಚ್ಚಿನ ಸಮಯ ಕೋರಿದ್ದ ದೆಹಲಿ ಪೊಲೀಸ್‌ ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

ನವದೆಹಲಿ: ನ್ಯೂಸ್‌ ಕ್ಲಿಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಆದೇಶವನ್ನು ಇಲ್ಲಿನ ನ್ಯಾಯಾಲಯ ಶುಕ್ರವಾರ ಕಾಯ್ದಿರಿಸಿದೆ.

ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರ ಮುಂದೆ ದೆಹಲಿ ಪೊಲೀಸರು ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಇಬ್ಬರು ಆರೋಪಿಗಳಾದ ನ್ಯೂಸ್‌ ಕ್ಲಿಕ್ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ಈ ಹಿಂದೆ ವಿಸ್ತರಿಸಿದ ನ್ಯಾಯಾಂಗ ಬಂಧನವು ಶುಕ್ರವಾರ ಮುಕ್ತಾಯಗೊಳ್ಳುತ್ತದೆ.

ಇದನ್ನೂ ಓದಿ: 146 ಸಂಸದರ ಅಮಾನತು ವಿರುದ್ಧ ಜಂತರ್ ಮಂತರ್‌ನಲ್ಲಿ ಇಂಡಿಯಾ ಒಕ್ಕೂಟ ಪ್ರತಿಭಟನೆ

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಸೇರಿದಂತೆ ವಿಶೇಷ ಕಾಯ್ದೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ, ಆರೋಪಿಗಳ ಬಂಧನವನ್ನು 180 ದಿನಗಳವರೆಗೆ ಕಾನೂನಿನಡಿಯಲ್ಲಿ ಅನುಮತಿಸಲಾದ ಗರಿಷ್ಠ ಅವಧಿಗೆ ವಿಸ್ತರಣೆ ಮಾಡುವಂತೆ ಪೊಲೀಸರ ಅರ್ಜಿಯಲ್ಲಿ ಕೋರಲಾಗಿತ್ತು.

ಆರೋಪಿಗಳ ತನಿಖೆ ನಡೆಸಲು ತನಿಖಾ ಸಂಸ್ಥೆಯು ನ್ಯಾಯಾಲಯದ ಅನುಮತಿಯಿಲ್ಲದೆ ಬಂಧನವನ್ನು ಮೂರು ತಿಂಗಳುಗಳ ಕಾಲ ಮಾಡಬಗಹುದಾಗಿದ್ದು, ಅದರ ನಂತರ ಆರೋಪಿಗಳು ಜಾಮೀನು ಪಡೆಯುವ ಶಾಸನಬದ್ಧ ಹಕ್ಕನ್ನು ಹೊಂದಿರುತ್ತಾರೆ.

ದೆಹಲಿ ಪೊಲೀಸರ ಅರ್ಜಿಯು ಪ್ರಕರಣದ ದಾಖಲೆಗಳು ಮತ್ತು ಸಾಕ್ಷ್ಯಗಳ ಬೃಹತ್ ಸ್ವರೂಪವನ್ನು ಒತ್ತಿಹೇಳಿದ್ದು, ತನಿಖೆಗಾಗಿ ದೆಹಲಿಯ ಹೊರಗಿನ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಅಗತ್ಯವಿದೆ ಎಂದು ಹೇಳಿದೆ. ಹಾಗಾಗಿ ತನಿಖೆಯು ನಿರೀಕ್ಷಿತ ಸಮಯಕ್ಕಿಂತ ವಿಳಂಬವಾಗಲಿದೆ ಎಂದು ವಾದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳು ಅಥವಾ ಸಂಭಾವ್ಯ ಸಾಕ್ಷಿಗಳನ್ನು ಪ್ರಶ್ನಿಸಲು ನ್ಯಾಯಾಂಗ ಆದೇಶಗಳ ಅಗತ್ಯವನ್ನು ಅರ್ಜಿಯು ಉಲ್ಲೇಖಿಸಿದೆ.

ಇದನ್ನೂ ಓದಿ: ಬೆಂಗಳೂರು | ಸಂಸದರ ಅಮಾನತು ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಇತ್ತೀಚೆಗೆ ತನಿಖೆಗಾಗಿ ವಶಪಡಿಸಿಕೊಂಡ ತನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವಂತೆ ಪುರ್ಕಾಯಸ್ಥ ಅವರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು. ಈ ಹಂತದಲ್ಲಿ ಅರ್ಜಿಗೆ ಅನುಮತಿ ನೀಡಲು ಅವರು ನೀಡಿದ್ದ ಕಾರಣ ಸಾಕಾಗುವುದಿಲ್ಲ ಎಂದು ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿತ್ತು. ಪುರಕಾಯಸ್ಥ ಮತ್ತು ಚಕ್ರವರ್ತಿ ಇಬ್ಬರೂ ಕ್ರಮವಾಗಿ ಪೊಲೀಸರು ವಶಪಡಿಸಿಕೊಂಡ ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವಂತೆ ಮತ್ತು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಡಿಸೆಂಬರ್ 1 ರಂದು ನ್ಯಾಯಾಲಯವು ಪುರಕಾಯಸ್ಥ ಮತ್ತು ಚಕ್ರವರ್ತಿ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 22 ರವರೆಗೆ ವಿಸ್ತರಿಸಿತ್ತು. ಅಕ್ಟೋಬರ್ 3 ರಂದು ದೆಹಲಿ ಪೋಲೀಸರ ವಿಶೇಷ ತಂಡವು ಪುರಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಬಂಧಿಸಿತ್ತು.

ಅದಕ್ಕೂ ಮುಂಚೆ ಆಗಸ್ಟ್‌ನಲ್ಲಿ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ತನಿಖಾ ವರದಿಯೊಂದು, ನ್ಯೂಸ್‌ ಕ್ಲಿಕ್‌ ಚೀನೀ ಪ್ರೊಪಗಾಂಡ ನಡೆಸುವ ಅಮೆರಿಕೆ ಮೂಲದ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್‌ನೊಂದಿಗೆ ಸಂಪರ್ಕ ಹೊಂದಿದ ನೆಟ್‌ವರ್ಕ್‌ ಮೂಲಕ ಹಣ ನೀಡಿದೆ ಎಂದು ಆರೋಪಿಸಿತ್ತು.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *