ಹೊಸ ಆಳ್ವಿಕೆಯೂ ನಾಗರಿಕ ಸಮಾಜದ ಜವಾಬ್ದಾರಿಯೂ

ಕರ್ನಾಟಕದ ಮತದಾರರ ತೀರ್ಪು ಸಾರ್ಥಕವಾಗುವಂತೆ ಪ್ರಗತಿಪರರು ಜನಜಾಗೃತಿ ಮೂಡಿಸಬೇಕಿದೆ  

ನಾ ದಿವಾಕರ

ಬಲಪಂಥೀಯರು ʼ ಅನ್ಯ ʼರನ್ನು ಸೃಷ್ಟಿಸುವಂತೆಯೇ ಎಡಪಂಥೀಯ-ಪ್ರಜಾಪ್ರಭುತ್ವವಾದಿಗಳು ʼಅನ್ಯʼರನ್ನು ಸೃಷ್ಟಿಸುವುದು ಪ್ರತಿಗಾಮಿ ಧೋರಣೆಯಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವಂತಹ ಹೃದಯ ವೈಶಾಲ್ಯದೊಂದಿಗೇ ಸಮಾಜದೊಳಗಿನ ಹುಳುಕು-ಕೊಳಕುಗಳನ್ನು, ಬೌದ್ಧಿಕ ಮಾಲಿನ್ಯವನ್ನು ತೊಡೆದುಹಾಕುವ ದೃಢ ನಿಶ್ಚಯದೊಂದಿಗೆ ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಐಕ್ಯತೆಯತ್ತ ಸಾಗಬೇಕಿದೆ.

 2023ರ ಕರ್ನಾಟಕದ ಚುನಾವಣಾ ಫಲಿತಾಂಶಗಳು ಖಚಿತ ಗೆಲುವಿನ ಭ್ರಮೆಯಲ್ಲಿದ್ದ ಬಿಜೆಪಿ ನಾಯಕರನ್ನು ಸಂಪೂರ್ಣವಾಗಿ ವಿಚಲಿತಗೊಳಿಸಿದೆ. ಅಧಿಕಾರ ಕಳೆದುಕೊಂಡು 40 ದಿನಗಳು ಕಳೆದಿದ್ದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ಪಕ್ಷ ವಿಫಲವಾಗಿರುವುದು ಒಂದೆಡೆ ಪಕ್ಷದೊಳಗಿನ ಆಂತರಿಕ ತಲ್ಲಣವನ್ನೂ ಮತ್ತೊಂದೆಡೆ ಜವಾಬ್ದಾರಿಯ ಕೊರತೆಯನ್ನೂ ತೋರಿಸುತ್ತದೆ. ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿ ಆಯ್ಕೆಗಿಂತಲೂ ವಿರೋಧ ಪಕ್ಷ ನಾಯಕನ ಆಯ್ಕೆ ಜಟಿಲವಾಗುವುದು ಅಧಿಕಾರ ರಾಜಕಾರಣದ ಒಂದು ಮಜಲನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಹೊಸ ಸರ್ಕಾರದ ಅವಸರದ ನಿರ್ಧಾರಗಳನ್ನು ಅಥವಾ ಅವೈಜ್ಞಾನಿಕವಾಗಿ-ಪೂರ್ವಸಿದ್ಧತೆಯಿಲ್ಲದೆ ಘೋಷಿಸಲಾದ ಕೆಲವು ಯೋಜನೆಗಳನ್ನು ವಿರೋಧಿಸುವುದನ್ನೇ ಪ್ರಧಾನ ಅಸ್ತ್ರವನ್ನಾಗಿ ಪರಿಗಣಿಸಿರುವ ಬಿಜೆಪಿ ನಾಯಕರಿಗೆ ತಾವು ಎಡವಿದ್ದೆಲ್ಲಿ ಎಂದು ಅರ್ಥವಾಗುವುದು ತುಸು ಕಷ್ಟವೇ ಆಗಬಹುದು. ಏಕೆಂದರೆ ಭಾರತದ ರಾಜಕಾರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ತಮ್ಮ ಅಧಿಕಾರಾವಧಿಯ ದುರಾಡಳಿತವನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆಗೊಳಪಡಿಸುವುದಿಲ್ಲ. ಬಿಜೆಪಿಯೂ ಇದಕ್ಕೆ ಹೊರತಲ್ಲ.

ಈ ನಡುವೆ ತನ್ನ ಅಭೂತಪೂರ್ವ ಗೆಲುವಿನಿಂದ ಅತಿರೇಕದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್‌ ಪಕ್ಷವೂ ಸಹ ತನ್ನ ಪೂರ್ವೇತಿಹಾಸದತ್ತ ಒಮ್ಮೆ ಹೊರಳಿ ನೋಡುವುದು ಅತ್ಯವಶ್ಯವಾಗಿದೆ. ಆದರೂ ಪಕ್ಷದ ಯಾವುದೇ ನಾಯಕರಲ್ಲೂ ಈ ಧೋರಣೆ ಕಂಡುಬರುತ್ತಿಲ್ಲ. ರಾಜ್ಯದ ಜನತೆ ಬಿಜೆಪಿಯ ಆಡಳಿತ ಭ್ರಷ್ಟತೆ-ಕೋಮುವಾದಿ ಮತದ್ವೇಷದ ವಿರುದ್ಧ ಮತ ನೀಡಿದ್ದರೂ, ಇದಕ್ಕೂ ಮೀರಿದ ಸಾಮಾಜಿಕ-ಆರ್ಥಿಕ ಕಾರಣಗಳಿರುವುದನ್ನು ಪಕ್ಷದ ಆಂತರಿಕ ಚಿಂತನಕಟ್ಟೆಯಲ್ಲಿ ಚರ್ಚೆಗೊಳಪಡಿಸಬೇಕಿದೆ. ಹಿಂದುತ್ವ ರಾಜಕಾರಣದ ಕೆಲವು ಜನವಿರೋಧಿ ನೀತಿಗಳನ್ನು ಬದಲಿಸುವುದಷ್ಟೇ ಅಲ್ಲದೆ, ಕಳೆದ 20 ವರ್ಷಗಳಿಂದಲೂ ರಾಜ್ಯದಲ್ಲಿ ವಿವಿಧ ಸರ್ಕಾರಗಳು ಅನುಸರಿಸುತ್ತಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಸೃಷ್ಟಿಸಿರುವ ಅಸಮಾನತೆಗಳನ್ನು ಸರಿಪಡಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಈ ದುರವ್ಯವಸ್ಥೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ಕೊಡುಗೆಯೂ ಇದೆ ಎಂಬ ಪ್ರಾಮಾಣಿಕ ಅರಿವು ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯವಶ್ಯವಾಗಿ ಇರಬೇಕು.

ಫಲಿತಾಂಶ ಬಿಚ್ಚಿಟ್ಟ ವಾಸ್ತವಗಳು

ಈ ರಾಜಕೀಯ ಆಯಾಮಗಳ ಹೊರತಾಗಿಯೂ 2023ರ ಫಲಿತಾಂಶಗಳು ಎರಡು ಸುಡುವಾಸ್ತವಗಳನ್ನು ರಾಜ್ಯದ ಜನತೆಯ ಮುಂದೆ ತೆರೆದಿಟ್ಟಿದೆ. ಮೊದಲನೆಯದು, ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ರೀತಿಯ ಭಾವನಾತ್ಮಕ ವಿಚಾರಗಳು ಒಂದು ಹಂತದವರೆಗೆ ಮಾತ್ರವೇ ಪ್ರಭಾವ ಬೀರಲು ಸಾಧ್ಯ. ತಮ್ಮ ಜೀವನ ಹಾಗೂ ಜೀವನೋಪಾಯ ಮಾರ್ಗಗಳ ನಿರಂತರ ಶೋಧದಲ್ಲಿರುವ ಬಹುಸಂಖ್ಯೆಯ ಜನತೆಗೆ ನಿತ್ಯ ಬದುಕಿನ ಸವಾಲುಗಳು ಸದಾ ಪ್ರಧಾನವಾಗಿಯೇ ಇರುತ್ತದೆ. ಭಾರತದಂತಹ ಸಾಂಪ್ರದಾಯಿಕ ಶ್ರೇಣೀಕೃತ ಸಮಾಜದಲ್ಲಿ ಲಾಭಕೋರ ಬಂಡವಾಳಶಾಹಿಯು ಸೃಷ್ಟಿಸುವ ಅಸಮಾನತೆಗಳು ತಳಸಮುದಾಯಗಳನ್ನೇ ಹೆಚ್ಚು ಕಾಡುತ್ತವೆ. ಈ ಜನಸಮುದಾಯಗಳು ಎದುರಿಸುವ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳು ಹಾಗೂ ಆರ್ಥಿಕ ಕಂದರಗಳನ್ನು ಸರಿಪಡಿಸಲು ಹಾಗೂ ತಮ್ಮ ಜೀವನಮಟ್ಟ ಸುಧಾರಣೆಗಾಗಿ ಸರ್ಕಾರಗಳತ್ತ ಗಮನಹರಿಸುವುದು ಸಹಜ. ಈ ಬಹುಸಂಖ್ಯೆಯ ಜನತೆ ತಾವು ಎದುರಿಸುವ ಸಾಮಾಜಿಕ-ಆರ್ಥಿಕ ಸವಾಲುಗಳಿಗೆ ಪರಿಹಾರವನ್ನೂ ಸರ್ಕಾರಗಳ ಆಡಳಿತ-ಆರ್ಥಿಕ ನೀತಿಗಳಲ್ಲೇ ಕಂಡುಕೊಳ್ಳಲು ಯತ್ನಿಸುತ್ತಾರೆ. ಇಲ್ಲಿ ಜನಸಾಮಾನ್ಯರು ಜನಪ್ರತಿನಿಧಿಗಳಿಂದ ಆರ್ಥಿಕ ಪ್ರಾಮಾಣಿಕತೆ, ನೈತಿಕ ಸಂಯಮ, ಸಂವಿಧಾನಬದ್ಧತೆ ಹಾಗೂ ಜನಪರ ಕಾಳಜಿಯನ್ನು ನಿರೀಕ್ಷಿಸುತ್ತಲೇ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುತ್ತಾರೆ.

ಎರಡನೆಯ ವಾಸ್ತವ ಎಂದರೆ ಹಿಂದುತ್ವ ರಾಜಕಾರಣವು ದೇಶಾದ್ಯಂತ ಪ್ರತಿಪಾದಿಸುತ್ತಿರುವ ಬಹುಸಂಖ್ಯಾವಾದದ ಸಮೀಕರಣಗಳು ದೇಶದ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯಲ್ಲಿ ನೆಲೆ ಕಾಣಲಾಗುವುದಿಲ್ಲ. ಬಹುಸಂಖ್ಯಾತ ಸಮುದಾಯವನ್ನು ತನ್ನದಾಗಿಸಿಕೊಳ್ಳುವ ಬಿಜೆಪಿಯ ಆಡಳಿತ ಸೂತ್ರ ಹೇಗೆ ವಿಫಲವಾಗಬಹುದು ಅಥವಾ ತಿರುಗುಬಾಣವಾಗಬಹುದು ಎನ್ನುವುದನ್ನು ಮಣಿಪುರದ ಬೆಳವಣಿಗೆಗಳು ನಿರೂಪಿಸಿವೆ. ಶತಮಾನಗಳಿಂದಲೂ ಬಹುಸಾಂಸ್ಕೃತಿಕ ನೆಲೆಗಳಲ್ಲೇ ತನ್ನ ಸಮಾಜ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡುಬಂದಿರುವ ಭಾರತ ಪ್ರಾದೇಶಿಕ-ಧಾರ್ಮಿಕ-ಭಾಷಿಕ-ಪ್ರಾಂತೀಯ ವೈವಿಧ್ಯತೆಗಳನ್ನೂ ಪೋಷಿಸಿಕೊಂಡೇ ಒಂದು ಸಮನ್ವಯದ ಭೂಮಿಯಾಗಿದೆ. ಈ ಸಾಂಸ್ಕೃತಿಕ ಚೌಕಟ್ಟಿನೊಳಗೇ ಗಟ್ಟಿಯಾಗಿ ಬೇರೂರಿರುವ ಜನಸಾಂಸ್ಕೃತಿಕ ನೆಲೆಗಳೇ ಭಾರತೀಯರಲ್ಲಿ ಸಂಯಮ ಮತ್ತು ಸಹನಶೀಲತೆಯನ್ನೂ ಪೋಷಿಸಿದೆ. ತಳಮಟ್ಟದಲ್ಲಿರುವ ಈ ಗುಣಲಕ್ಷಣಗಳನ್ನು ತಮ್ಮ ಮತೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಯಾವುದೇ ಪ್ರಯತ್ನಗಳು ಒಂದು ಹಂತದಲ್ಲಿ ವಿಫಲವಾಗುವ ಸಾಧ್ಯತೆಗಳಿರುತ್ತವೆ.

ನಾಗರಿಕ ಸಮಾಜದ ಪಾತ್ರ

ಈ ಎರಡು ವಾಸ್ತವಿಕ ಸನ್ನಿವೇಶಗಳ ನಡುವೆಯೇ ಕರ್ನಾಟಕದ ನಾಗರಿಕ ಸಮಾಜದ ನೂರಾರು ಸಂಘಟನೆಗಳು ಕಳೆದ ಚುನಾವಣೆಗಳಲ್ಲಿ ಕರ್ನಾಟಕದ ಸಮನ್ವಯದ ನೆಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿದಿವೆ. ರಾಜ್ಯದ ದುಡಿಯುವ ವರ್ಗಗಳಲ್ಲೂ ವ್ಯಾಪಕವಾಗಿ ನೆಲೆಯೂರಿದ್ದ ಮತದ್ವೇಷ ಮತ್ತು ಕೋಮುವಾದಿ ಭಾವನೆಗಳ ಹಿಂದಿನ ರಾಜಕೀಯ ಚೌಕಟ್ಟುಗಳನ್ನು ಭೇದಿಸುವುದೇ ಅಲ್ಲದೆ ದ್ವೇಷ ರಾಜಕಾರಣದಿಂದ ಉಂಟಾಗಬಹುದಾದ ಅಪಾಯಗಳನ್ನು  ಸಾಮಾನ್ಯ ಜನತೆಗೆ ಮನದಟ್ಟು ಮಾಡುವಲ್ಲಿ ಈ ಸಂಘಟನೆಗಳು ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ. ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ಮತಗಳಿಕೆಯ ಪ್ರಮಾಣ ಯಥಾಸ್ಥಿತಿಯಲ್ಲಿದ್ದರೂ, ಪಕ್ಷವು ಮತದಾರರ ನಡುವೆ ವಿಶ್ವಾಸವನ್ನು ಕಳೆದುಕೊಂಡಿರುವುದು ಕರಾವಳಿ-ದಕ್ಷಿಣ ಕನ್ನಡವನ್ನೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಅಥವಾ ಬಿಜೆಪಿಯ ಪರಾಭವಕ್ಕೆ ನಾಗರಿಕ ಸಮಾಜದ ಸಂಘಟನೆಗಳ ಕಾರ್ಯಸೂಚಿ ಮತ್ತು ಕಾರ್ಯಾಚರಣೆ ಪೂರಕವಾಗಿದ್ದರೂ, ಅದೊಂದೇ ನಿರ್ಣಾಯಕ ಕಾರಣವಲ್ಲ ಎಂಬ ಪರಿವೆಯೂ ಪ್ರಗತಿಪರ ಸಂಘಟನೆಗಳಲ್ಲಿ ಇರಬೇಕಾಗುತ್ತದೆ.

ಏಕೆಂದರೆ ರಾಜ್ಯವ್ಯಾಪಿಯಾಗಿ ಹರಡಿ ಬೇರೂರಿರುವ ಕೋಮು-ಜಾತಿ-ಮತ-ಮಹಿಳಾ ದ್ವೇಷದ ನೆಲೆಗಳನ್ನು ಕೇವಲ ಒಂದು ಚುನಾವಣಾ ಫಲಿತಾಂಶದ ಮೂಲಕ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಆಡಳಿತಾರೂಢ ಪಕ್ಷ ಅನುಸರಿಸುವ ನೀತಿಗಳು ಮತ್ತು ಜಾರಿಗೊಳಿಸುವ ಕಾಯ್ದೆ ಕಾನೂನುಗಳು ಸಮಾಜದ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಕಂಡರೂ, ಆಂತರಿಕವಾಗಿ ಪ್ರತಿಯೊಂದು
ಸಮಾಜ-ಸಮುದಾಯದ ಒಳಗೂ ಸದಾ ತಲ್ಲಣಿಸುತ್ತಿರುವ ಈ ತಾರತಮ್ಯದ ಭಾವನೆಗಳು ಕ್ರಿಯಾಶೀಲವಾಗಿಯೇ ಇರುತ್ತವೆ.  ಕಾಂಗ್ರೆಸ್‌ಗೆ ಮತ ನೀಡಿರುವವರಲ್ಲಿ ಇರುವಷ್ಟೇ ಪ್ರಮಾಣದಲ್ಲಿ ಈ ದುರ್ಭಾವನೆಗಳು ಬಿಜೆಪಿಯನ್ನು ವಿರೋಧಿಸುವವರಲ್ಲೂ ಇರುವ ಸಾಧ್ಯತೆಗಳಿವೆ. ಏಕೆಂದರೆ ಮೂಲತಃ ಮನುಜ ಸಮಾಜದಲ್ಲಿ ತಾರತಮ್ಯದ ಗೋಡೆಗಳನ್ನು ಕಟ್ಟಲು ಬಯಸುವ ಮನಸುಗಳಿಗೆ ರಾಜಕೀಯ ಒಲವು ಸಾಪೇಕ್ಷವಾಗಿ ಮಾತ್ರವೇ ಕಾಣುತ್ತದೆ.

ಇದನ್ನೂ ಓದಿ:ಸಾಮಾಜಿಕ ತಳಹದಿಯೂ ಭ್ರಷ್ಟಾಚಾರದ ಬೇರುಗಳೂ

ಈ ಗೋಡೆಗಳನ್ನು ಕೆಡವುವ ಯಾವುದೇ ಪ್ರಯತ್ನಗಳಿಗೆ ಭಂಗ ಉಂಟುಮಾಡುವ ಸುಪ್ತ ಶಕ್ತಿಗಳು ಎಲ್ಲ ಮತಧರ್ಮಗಳ ನಡುವೆಯೂ ಕ್ರಿಯಾಶೀಲವಾಗಿರುತ್ತವೆ. ಯಾವುದೇ ಪಕ್ಷವು ಅಧಿಕಾರದಲ್ಲಿದ್ದರೂ ಇಂತಹ ವಿಭಜಕ ಶಕ್ತಿಗಳು ತಮ್ಮ ಕಾರ್ಯಾಚರಣೆಯಿಂದ ವಿಮುಖವಾಗುವುದಿಲ್ಲ. ಸರ್ಕಾರ ಅನುಸರಿಸುವ ಕಾನೂನಾತ್ಮಕ ಕ್ರಮಗಳಿಂದಷ್ಟೇ ಕೋಮುವಾದಿ-ಮತಾಂಧ ಶಕ್ತಿಗಳನ್ನು ನಿಯಂತ್ರಿಸಲೂ ಆಗುವುದಿಲ್ಲ. ಆಳಕ್ಕೆ ಇಳಿದಿರುವ ಮತೀಯ ಭಾವನೆಗಳನ್ನು ಹೋಗಲಾಡಿಸಲು ಜನಸಾಮಾನ್ಯರ ನಡುವೆ ನಿರಂತರ ಸಂವಾದ-ಸಂವಹನ ಅವಶ್ಯವಾಗಿ ನಡೆಸಬೇಕಾಗುತ್ತದೆ. ಮಹಿಳಾ ದೌರ್ಜನ್ಯ, ಅತ್ಯಾಚಾರ, ಮರ್ಯಾದಾಹೀನ ಹತ್ಯೆ, ಅಸ್ಪೃಶ್ಯತೆ, ಜಾತಿ ದೌರ್ಜನ್ಯ ಹಾಗೂ ಮತದ್ವೇಷದ ಪ್ರಕರಣಗಳ ಅಂಕಿಅಂಶಗಳಲ್ಲಿ ಕಾಣುವ ಏರಿಳಿತಗಳು ಕಾನೂನು ಸುವ್ಯವಸ್ಥೆಯ ಸ್ಥಿತಿಗತಿಗಳನ್ನಷ್ಟೇ ಸೂಚಿಸುತ್ತವೆ. ಸರ್ಕಾರಗಳು ಇದರಿಂದಲೇ ಸಂತೃಪ್ತವಾಗುತ್ತವೆ. ಆದರೆ ಇದನ್ನೂ ದಾಟಿ ನೋಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿರುತ್ತದೆ.

ನಾಗರಿಕ ಸಮಾಜದ ಪುರೋಗಾಮಿ ಸಂಘಟನೆಗಳು ಇದರಿಂದಲೇ ಸಂತೃಪ್ತರಾಗುವುದೂ ತರವಲ್ಲ. ಸಮಾಜದ ಗರ್ಭದಲ್ಲೇ ಅಡಗಿರುವ ತಾರತಮ್ಯದ ನೆಲೆಗಳೊಂದಿಗೇ ಮತೀಯವಾದಿ-ಮತಾಂಧ ಶಕ್ತಿಗಳಿಂದ ಉತ್ತೇಜಿತವಾಗುವ ಮನುಕುಲ ವಿರೋಧಿ ಭಾವನೆಗಳ ವಿರುದ್ಧ ಈ ಸಂಘಟನೆಗಳು ನಿರಂತರ ಸಂಘರ್ಷದಲ್ಲಿರಬೇಕಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಗಳನ್ನು, ಕೋಮುಹಲ್ಲೆ ಅಥವಾ ಹತ್ಯೆಗಳನ್ನು ರಾಜಕೀಯ ಸಿದ್ಧಾಂತಗಳ ಚೌಕಟ್ಟಿನಲ್ಲಿಟ್ಟು ನೋಡದೆ, ವಿಶಾಲ ಸಮಾಜದಲ್ಲಿ ಅಂತರ್ಗತವಾಗಿರಬಹುದಾದ ತಾರತಮ್ಯ ಹಾಗೂ ದ್ವೇಷದ ಭಾವನೆಗಳನ್ನು ಸಮಗ್ರ ನೆಲೆಯಲ್ಲಿ ಪರಾಮರ್ಶಿಸಬೇಕಾಗುತ್ತದೆ. ಕರಾವಳಿಯಲ್ಲಿ ಉಂಟಾಗಿರುವ ಮತದ್ವೇಷದ ಬೇರುಗಳನ್ನು ಭೇದಿಸಿದಲ್ಲಿ ಈ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬಹುದು. ರಾಜಕೀಯವಾಗಿ ಇಂತಹ ದುರ್ಭಾವನೆಗಳನ್ನೇ ಬಳಸಿಕೊಳ್ಳುವ ಪಕ್ಷಗಳ ವಿರುದ್ಧ ಜನಸಾಮಾನ್ಯರನ್ನು ಸಂಘಟಿಸುತ್ತಲೇ, ಈ ಆಲೋಚನೆಗಳ ಮೂಲ ಬೇರುಗಳನ್ನು ಸಾಮಾಜಿಕ ಬದುಕಿನ, ಸಾಂಸ್ಕೃತಿಕ ಚಟುವಟಿಕೆಗಳ ನಡುವೆಯೇ ಗುರುತಿಸಬೇಕಾಗುತ್ತದೆ. ಎಡಪಕ್ಷಗಳನ್ನೂ ಒಳಗೊಂಡಂತೆ ಪ್ರಗತಿಪರ ಎನಿಸಿಕೊಳ್ಳುವ ಎಲ್ಲ ಪುರೋಗಾಮಿ ಸಂಘಟನೆಗಳ ಹೆಜ್ಜೆ ಈ ನಿಟ್ಟಿನಲ್ಲೇ ಕ್ರಮಿಸಬೇಕಿದೆ.

ಸೌಹಾರ್ದತೆ-ಸಮನ್ವಯದ ಹೆಜ್ಜೆಗಳು

ಶೈಕ್ಷಣಿಕ ಪಠ್ಯಕ್ರಮದಲ್ಲಿದ್ದ ಪ್ರತಿಗಾಮಿ-ಪ್ರಾಚೀನ-ಪ್ರಜಾತಂತ್ರ ವಿರೋಧಿ ಆಲೋಚನೆಗಳನ್ನು ತೆಗೆದುಹಾಕುವುದರಿಂದ ಶಾಲಾ ಮಕ್ಕಳನ್ನು ಸಮನ್ವಯದ ಹಾದಿಯಲ್ಲಿ ಕೊಂಡೊಯ್ಯುವುದು ಸಾಧ್ಯವಾಗಬಹುದು. ಆದರೆ ಈ ಆಲೋಚನೆಗಳು ಮೂಲತಃ ಸಾಮಾಜಿಕ ಚೌಕಟ್ಟುಗಳನ್ನು ಬಂಧಿಸಿರುವುದು ನಿತ್ಯ ಸಾಮಾಜಿಕ ಆಚರಣೆಗಳಲ್ಲಿ, ಚಟುವಟಿಕೆಗಳಲ್ಲಿ ಹಾಗೂ ಸಾಂಸ್ಕೃತಿಕ ಬೋಧನೆಗಳಲ್ಲಿ. ಅಧ್ಯಾತ್ಮ ಅಥವಾ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರಿಗೆ ಬೋಧಿಸಲಾಗುವ ಸಂಹಿತೆಗಳು ಯುವ ಪೀಳಿಗೆಯಲ್ಲಿ ಪರಧರ್ಮ ಸಹಿಷ್ಣುತೆ-ಮಾನವೀಯ ಮೌಲ್ಯಗಳನ್ನು ಉದ್ಧೀಪನಗೊಳಿಸುವಂತಿರುವುದು ಅಪೇಕ್ಷಣೀಯ. ಆದರೆ ಈ ಅಧ್ಯಾತ್ಮ ಕೇಂದ್ರಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಆಚರಿಸಲಾಗುವ ಅಸ್ಪೃಶ್ಯತೆ, ಜಾತಿ-ಲಿಂಗ ತಾರತಮ್ಯ ಮತ್ತು ಮೌಢ್ಯಾಚರಣೆಗಳು ಬಹುಸಂಖ್ಯಾತ ಜನರನ್ನು ಪ್ರಾಚೀನತೆಯೆಡೆಗೆ ಕೊಂಡೊಯ್ಯುವಂತಿರುತ್ತದೆ. ದೈವೀಕ ಶಕ್ತಿ ಅಥವಾ ಯಾವುದೇ ಅತೀತ ಶಕ್ತಿಯಲ್ಲಿ ಜನಸಾಮಾನ್ಯರಿಗೆ ಇರುವ ನಂಬಿಕೆಗಳು ಆ ಜನತೆಯ ವ್ಯಕ್ತಿಗತ ಬದುಕಿಗೆ ಸಾಂತ್ವನ ನೀಡುವಂತಿರುವುದು ಸಹಜ.

ಆದರೆ ಈ ನಂಬಿಕೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಮೂಲಭೂತವಾದಿ ಶಕ್ತಿಗಳು ಎಲ್ಲ ಮತಧರ್ಮಗಳಲ್ಲೂ-ಜಾತಿ ಗುಂಪುಗಳಲ್ಲೂ ಆಳವಾಗಿ ಬೇರೂರಿವೆ. ಸಂಘಟನಾತ್ಮಕವಾಗಿ, ಸಾಂಸ್ಥಿಕ ನೆಲೆಯಲ್ಲಿ, ಸ್ಥಾವರ-ಜಂಗಮ ರೂಪದಲ್ಲಿ ಹಾಗೂ ಸಾಮಾನ್ಯ ಮನುಷ್ಯನನ್ನು ಸುಲಭವಾಗಿ ಆಕರ್ಷಿಸುವ ಅಧ್ಯಾತ್ಮದ ನೆಲೆಗಳಲ್ಲೂ ಸಹ ಈ ಶಕ್ತಿಗಳು ಕ್ರಿಯಾಶೀಲತೆಯಿಂದ ಸಕ್ರಿಯವಾಗಿರುವುದು ಮಾನವ ಕುಲಕ್ಕೇ ಕಂಟಕಪ್ರಾಯವಾಗಿ ಪರಿಣಮಿಸುತ್ತದೆ. ಈ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಹೋರಾಡಬೇಕಾದರೆ ಸಮನ್ವಯ-ಸೌಹಾರ್ದತೆ-ಸೋದರತ್ವ ಬಯಸುವ ಎಲ್ಲ ಪ್ರಜಾಸತ್ತಾತ್ಮಕ ಸಂಘಟನೆಗಳು ತಮ್ಮೊಳಗಿನ ಮಡಿವಂತಿಕೆ, ಅಹಮಿಕೆ, ಸ್ವಪ್ರತಿಷ್ಠೆ ಮತ್ತು ಅಸ್ಮಿತೆಯ ಹಂಗು ತೊರೆದು ಒಂದಾಗಬೇಕಾಗುತ್ತದೆ. ಬಲಪಂಥೀಯರು ʼ ಅನ್ಯ ʼರನ್ನು ಸೃಷ್ಟಿಸುವಂತೆಯೇ ಎಡಪಂಥೀಯ-ಪ್ರಜಾಪ್ರಭುತ್ವವಾದಿಗಳು ʼಅನ್ಯʼರನ್ನು ಸೃಷ್ಟಿಸುವುದು ಪ್ರತಿಗಾಮಿ ಧೋರಣೆಯಾಗುತ್ತದೆ. ಎಲ್ಲರನ್ನೂ ಒಳಗೊಳ್ಳುವಂತಹ ಹೃದಯ ವೈಶಾಲ್ಯದೊಂದಿಗೇ ಸಮಾಜದೊಳಗಿನ ಹುಳುಕು-ಕೊಳಕುಗಳನ್ನು, ಬೌದ್ಧಿಕ ಮಾಲಿನ್ಯವನ್ನು ತೊಡೆದುಹಾಕುವ ದೃಢ ನಿಶ್ಚಯದೊಂದಿಗೆ ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಐಕ್ಯತೆಯತ್ತ ಸಾಗಬೇಕಿದೆ.

ಕರ್ನಾಟಕದ 2023ರ ಚುನಾವಣೆಗಳು ಇಂತಹ ಒಂದು ಸದವಕಾಶವನ್ನು ಒದಗಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗೆ ಒಂದು ಪಕ್ಷದ ಗೆಲುವು ಅಥವಾ ಸೋಲು ನಿರ್ಣಾಯಕ ಅಂಶವಾಗುವುದಿಲ್ಲ. ಪ್ರಜಾಪ್ರಭುತ್ವ ತನ್ನ ಬೇರುಗಳನ್ನು ಉಳಿಸಿಕೊಳ್ಳಬೇಕಾದರೆ, ಸಂವಿಧಾನ ಪ್ರಜ್ಞೆಯ ಬೇರುಗಳು ಸಮಾಜದ ಅಂತರಾಳದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಬೇರುಗಳಿಗೆ ವಿಷವುಣಿಸುವ ಶಕ್ತಿಗಳ ವಿರುದ್ಧ ಹೋರಾಡುತ್ತಲೇ, ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಸಮಾನತೆಯ ಸೂಕ್ಷ್ಮಸಂವೇದನೆಯನ್ನು ಉದ್ಧೀಪನಗೊಳಿಸುವ ಕಾರ್ಯಸೂಚಿಯನ್ನು ಪುರೋಗಾಮಿ ಶಕ್ತಿಗಳು ರೂಪಿಸಬೇಕಿದೆ. ಈ ಹೆಜ್ಜೆಗಳಿಗೆ ತೊಡಕಾಗಬಹುದಾದ ಆರ್ಥಿಕ ಅಸಮಾನತೆ ಮತ್ತು ಅಸಮಾನತೆ ಸೃಷ್ಟಿಸುವ ಬಂಡವಾಳಶಾಹಿಯ ಆರ್ಥಿಕ ನೀತಿಗಳ ಆಳ-ಅಗಲವನ್ನು ಶೋಷಿತರಿಗೆ, ಅವಕಾಶವಂಚಿತರಿಗೆ, ದಮನಿತ ಜನಸಮುದಾಯಗಳಿಗೆ, ಅಂಚಿಗೆ ತಳ್ಳಲ್ಪಟ್ಟವರಿಗೆ ಹಾಗೂ ಅಭಿವೃದ್ಧಿ ಪಥದಿಂದ ಹೊರಗುಳಿದಿರುವ ಬೃಹತ್‌ ಜನಸ್ತೋಮಕ್ಕೆ ಪರಿಚಯಿಸುವುದು ಪ್ರಧಾನ ಆದ್ಯತೆಯಾಗಬೇಕಿದೆ.

ಪ್ರಗತಿಪರರ ಜವಾಬ್ದಾರಿಗಳು

ಆರ್ಥಿಕ ಅಸಮಾನತೆ ಸೃಷ್ಟಿಸುವ ಕಂದರಗಳು ಸಾಮಾನ್ಯ ಜನರಲ್ಲಿ ಉಂಟುಮಾಡುವ ಹತಾಶೆ, ಆಕ್ರೋಶ, ತಲ್ಲಣ ಹಾಗೂ ಅಸಮಾಧಾನಗಳು ರಾಜಕೀಯ ಪಕ್ಷಗಳಿಗೆ ಚುನಾವಣಾ ಲಾಭದ ಸರಕುಗಳಂತೆ ಕಾಣುತ್ತವೆ. ಹಾಗೆಯೇ ಸಮಾಜವನ್ನು ವಿಭಜಿಸಲು ಬಯಸುವ ಮತಾಂಧರಿಗೆ, ಮತೀಯವಾದಿಗಳಿಗೆ, ಮೂಲಭೂತವಾದಿಗಳಿಗೆ ಹಾಗೂ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವವರಿಗೂ ಬೌದ್ಧಿಕ ಲಾಭದ ಅಸ್ತ್ರಗಳಾಗಿಯೇ ಕಾಣುತ್ತವೆ. 2023ರ ಚುನಾವಣೆಗಳಲ್ಲಿ ಜನತೆಯಲ್ಲಿ ಮಡುಗಟ್ಟಿದ್ದ ಈ ಅಸಮಾಧಾನಗಳು ಹಿಂದಿನ ಸರ್ಕಾರದ ಪರಾಭವಕ್ಕೆ ಕಾರಣವಾಗಿವೆಯಾದರೂ, ತಳಮಟ್ಟದಲ್ಲಿ ಈ ಹತಾಶೆ ಮತ್ತು ತಲ್ಲಣಗಳನ್ನು ನಿವಾರಿಸುವ ಪ್ರಯತ್ನಗಳನ್ನು ಮಾಡದೆ ಹೋದರೆ ಭವಿಷ್ಯದ ಆಡಳಿತವಿರೋಧಿ ಅಲೆಗಳಿಗೆ ಈ ಅಂಶಗಳೇ ಪೂರಕವಾಗುವ ಸಾಧ್ಯತೆಗಳಿರುತ್ತವೆ.

ಸಮ ಸಮಾಜದ ಕನಸು ಹೊತ್ತು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ನೂರಾರು ಸಂಘಟನೆಗಳು ಸಾಮಾನ್ಯ ಜನತೆಯಲ್ಲಿ ಮಡುಗಟ್ಟಿರುವ ಆತಂಕಗಳತ್ತ ಗಮನಹರಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ ಪ್ರಗತಿಪರ ಎಂದು ಬೆನ್ನುತಟ್ಟಿಕೊಳ್ಳುವ ಎಲ್ಲ ಸಂಘಟನೆಗಳೂ ತಮ್ಮ ವೈಯುಕ್ತಿಕ ಚಿಹ್ನೆ-ಲಾಂಛನ ಮತ್ತು ಪ್ರತಿಷ್ಠೆಗಳನ್ನು ಬದಿಗೊತ್ತಿ ಐಕ್ಯಮತ್ಯ ಸಾಧಿಸಬೇಕಿದೆ. ಭಿನ್ನ ರಾಜಕೀಯ ಸಿದ್ಧಾಂತಗಳ ಹೊರತಾಗಿಯೂ ಇದು ಕಾರ್ಯಸಾಧ್ಯ ಎನ್ನುವುದನ್ನು ಇತಿಹಾಸ ಅನೇಕ ಸನ್ನಿವೇಶಗಳಲ್ಲಿ ನಿರೂಪಿಸಿವೆ. ಸಮಕಾಲೀನ ಭಾರತವೇ ಇದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ. ರಾಜಕೀಯ ಹಿತಾಸಕ್ತಿಗಳಿಲ್ಲದೆ, ಆಡಳಿತಾರೂಢ ಸರ್ಕಾರಗಳು ಒಡ್ಡುವ ಆಸೆ ಆಮಿಷಗಳಿಗೆ ಬಲಿಯಾಗದೆ, ಅಧಿಕಾರ ಕೇಂದ್ರಗಳನ್ನು ಆಶ್ರಯಿಸದೆ, ಸ್ವತಂತ್ರ ನೆಲೆಯಲ್ಲಿ ಶೋಷಿತ ಜನಸಮುದಾಯಗಳ ನಿತ್ಯ ಬದುಕಿನ ಜಟಿಲ-ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ವೇದಿಕೆ ಇಂದು ಅತ್ಯವಶ್ಯವಾಗಿದೆ.

ವಾಸ್ತವದಲ್ಲಿ ಎಡಪಕ್ಷಗಳು, ದಲಿತ ಸಂಘಟನೆಗಳು, ಸಮಾಜಮುಖಿ ಸಂಸ್ಥೆಗಳು, ಮಾನವ ಹಕ್ಕು ಸಂಘಟನೆಗಳು ತಮ್ಮ ಮೂಲ ಅಸ್ಮಿತೆಗಳನ್ನು ವಿಸರ್ಜಿಸದೆಯೇ ಈ ರೀತಿಯ ವೇದಿಕೆಯನ್ನು ರೂಪಿಸಲು ಖಂಡಿತವಾಗಿಯೂ ಸಾಧ್ಯವಿದೆ. ಡಾ. ಬಿ.ಆರ್.‌ ಅಂಬೇಡ್ಕರ್‌, ಮಾರ್ಕ್ಸ್‌, ಲೋಹಿಯಾ, ಪೆರಿಯಾರ್‌, ಮಹಾತ್ಮ ಗಾಂಧಿ ಮುಂತಾದ ಮಹಾನ್‌ ಚಿಂತಕರ ಆಲೋಚನೆಗಳನ್ನು ಗಂಭೀರವಾಗಿ ಮನನ ಮಾಡಿಕೊಂಡರೆ ಇಂತಹ ಒಂದು ವೇದಿಕೆಯ ಅನಿವಾರ್ಯತೆ ಹಾಗೂ ಕಾರ್ಯಸಾಧ್ಯತೆ ಎರಡೂ ಸಹ ಮನದಟ್ಟಾಗಲು ಸಾಧ್ಯ. ಈ ದಿಟ್ಟ ಹೆಜ್ಜೆಗೆ ತೊಡಕಾಗಿರುವ ಸಂಘಟನಾತ್ಮಕ ಚೌಕಟ್ಟುಗಳನ್ನು ವಿಸರ್ಜಿಸದಿದ್ದರೂ, ಭೇದಿಸುವ ಕ್ಷಮತೆ ಮತ್ತು ಪ್ರಾಮಾಣಿಕತೆಯಾದರೂ ನಮ್ಮಲ್ಲಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅಧಿಕಾರ ರಾಜಕಾರಣವು ಈ ಎಲ್ಲ ನೆಲೆಗಳನ್ನೂ ವ್ಯಾಪಿಸಿ ನಿಷ್ಕ್ರಿಯಗೊಳಿಸಿಬಿಡುತ್ತದೆ. 1980ರ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸುಲಭಗ್ರಾಹ್ಯವಾದೀತು.

ಬಂಡವಾಳಶಾಹಿ ವ್ಯವಸ್ಥೆಯು ಮೇಲ್ಮಟ್ಟದಲ್ಲಿ ಭೌಗೋಳಿಕ ಅಖಂಡತೆಯನ್ನು ಅಪೇಕ್ಷಿಸಿದರೂ, ತಳಮಟ್ಟದಲ್ಲಿ ವಿಭಜಕ ಶಕ್ತಿಗಳನ್ನೇ ಪೋಷಿಸುತ್ತಿರುತ್ತದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಬಹುಧಾರ್ಮಿಕ-ಬಹುಸಾಂಸ್ಕೃತಿಕ ನೆಲೆಗಳು ಇದಕ್ಕೆ ಪ್ರಶಸ್ತ ಭೂಮಿಕೆಯನ್ನು ಒದಗಿಸುತ್ತದೆ. ಬಂಡವಾಳಶಾಹಿಯನ್ನು ಪೋಷಿಸುವ ಕಾರ್ಪೋರೇಟ್‌ ಮಾರುಕಟ್ಟೆಯು ಈ ಭೂಮಿಕೆಯನ್ನು ಫಲವತ್ತಾಗಿ ಪೋಷಿಸಲು ನಿರಂತರ ಪ್ರಯತ್ನದಲ್ಲಿರುತ್ತದೆ. ಜಾಗತಿಕ ಇತಿಹಾಸದಲ್ಲೇ ಇದರ ನಿದರ್ಶನಗಳು ಹೇರಳವಾಗಿವೆ. ಭಾರತವೂ ಹೊರತಾಗಿಲ್ಲ. ಹಾಗಾಗಿ ಜಾತೀಯತೆ-ಮತೀಯವಾದ-ಮತಾಂಧತೆ-ಲಿಂಗಭೇದ-ಸ್ತ್ರೀದ್ವೇಷ ಮತ್ತು ನವ ಉದಾರವಾದದ ಬಂಡವಾಳಶಾಹಿ ಆರ್ಥಿಕತೆ ಇವೆಲ್ಲವನ್ನೂ ಒಟ್ಟಿಗೆ ಎದುರಿಸಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ʼ ಪ್ರಗತಿಪರ ʼ ಎಂದು ಭಾವಿಸಿಕೊಳ್ಳುವ ಯಾವುದೇ ಸಂಘಟನೆ ಅಥವಾ ಸಂಸ್ಥೆ ಈ ನಿಟ್ಟಿನಲ್ಲೇ ಆಲೋಚನೆ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *