ಶಿಕ್ಷಣವನ್ನು ಕೇಸರಿಕರಣ ಹಾಗೂ ಖಾಸಗಿಕರಣ ಮಾಡುವ ಹುನ್ನಾರವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಧೃವನಾರಾಯಣ್

ಬೆಂಗಳೂರು : ‘ಶ್ರೇಣಿಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿ ದೇಶದ ಶಿಕ್ಷಣವನ್ನು ಕೇಸರಿಕರಣ ಮಾಡುವುದರ ಜತೆಗೆ ಖಾಸಗಿಕರಣ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಲ್ಲಿ ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಅವರು ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಧೃವನಾರಾಯಣ್ ಅವರು, ‘ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ನಗರ ಹಾಗೂ ಗ್ರಾಮಾಂತರ, ಬಡವ ಹಾಗೂ ಶ್ರೀಮಂತ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣ ಮಾಡಲಿದೆ’  ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮಾಡಿರುವುದು ರಾಜ್ಯಕ್ಕೆ ಮಾರಕ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾದಕ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಚರ್ಚೆಯಾಗದೇ ಈ ನೀತಿ ಜಾರಿಯಾಗುತ್ತಿರುವುದು ದುರಾದೃಷ್ಠಕರವಾದುದು. ಎನ್ಇಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು, ಈ ಶಿಕ್ಷಣ ನೀತಿ ಅವೈಜ್ಞಾನಿಕವಾದುದು. ಈ ನೀತಿಯ ಕನ್ನಡ ಅವತರಣಿಕೆಯಲ್ಲಿ 11.1ರಲ್ಲಿ 7ನೇ ಶತಮಾನದಲ್ಲಿ ಬಾಣ ಭಟ್ಟ ಬರೆದ ಕೃತಿ ಕಾದಂಬರಿ ಆಧಾರಿತ 64 ವಿದ್ಯೆ ಕಲಿಸಿಕೊಡಲಾಗುವುದು ಎಂದು ಹೇಳಲಾಗಿದೆ. ಅಂದರೆ ಈ ಶಿಕ್ಷಣ ನೀತಿ ಕೇವಲ ಕಾಲ್ಪನಿಕ ಶಿಕ್ಷಣ ನೀತಿಯಾಗಿದ್ದು, ಇದು ಅವೈಜ್ಞಾನಿಕವಾಗಿದೆ’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1968ರಲ್ಲಿ ಇಂದಿರಾ ಗಾಂಧಿ ಅವರು, 1986ರಲ್ಲಿ ರಾಜೀವ್ ಗಾಂಧಿ, 1992ರಲ್ಲಿ ಪಿ.ವಿ ನರಸಿಂಹರಾವ್ ಅವರು ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. 1992ರ ಸಮಯದಲ್ಲಿ ಪ್ರೋ.ಕೊಠಾರಿಯಾ ಅವರ ನೇತೃತ್ವದ ಸಮಿತಿ ಮಾಡಿ ಅದರಲ್ಲಿ 7 ವಿದೇಶಿ ಶಿಕ್ಷಣ ತಜ್ಞರು ಸೇರಿದಂತೆ ಒಟ್ಟು 17 ತಜ್ಞರ ಸದಸ್ಯರನ್ನು ಒಳಗೊಂಡಿತ್ತು. ಈ ಶಿಕ್ಷಣ ನೀತಿಯನ್ನು ಡಾ.ಕಸ್ತೂರಿರಂಗನ್ ಅವರ ಸಮಿತಿ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಅವರು ಇಸ್ರೋ, ಹಾಗೂ ಎಜುಸ್ಯಾಟ್ ಶಿಕ್ಷಣ ವಿಚಾರವಾಗಿ ಸಾಕಷ್ಟು ಕೆಲಸ ಮಾಡಿದ್ದು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಈ ಸಮಿತಿಯಲ್ಲಿ ಬಹುತೇಕ ಸದಸ್ಯರು ಆರ್ ಎಸ್ ಎಸ್ ಮೂಲದವರು. ಶ್ರೀಧರನ್ ಎಂಬುವವರು ಆರ್ ಎಸ್ಎಸ್ ಸಂಚಾಲಕರು. ಇನ್ನು ನಡ್ಡಾ ಅವರ ಜತೆ ಕೆಲಸ ಮಾಡಿದ್ದ ರಾಜೇಂದ್ರ ಪ್ರತಾಪ್ ಗುಪ್ತಾ ಅವರು ಸದಸ್ಯರಾಗಿದ್ದರು. ಆ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಸುಮಾರು 10 ಲಕ್ಷ ಸರ್ಕಾರಿ ಶಾಲೆ ಶಿಕ್ಷಕರ ಕೊರತೆ ಇದೆ. ಅದು ನೇಮಕವಾಗಬೇಕು, ಶಾಲೆ, ಮೂಲಭೂತ ಸೌಕರ್ಯ ಇಲ್ಲದೇ, ತರಾತುರಿಯಲ್ಲಿ ಈ ವರ್ಷವೇ ಈ ನೀತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ನೀತಿ ಜಾರಿಗೆ ತರಲು ಯಾವುದೇ ರಾಜ್ಯವೂ ಮುಂದೆ ಬಂದಿಲ್ಲ. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಕೀರ್ತಿ ಪಡೆಯಲು ಈ ರೀತಿ ಆತುರ ಮಾಡಲಾಗುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಶಿಕ್ಷಕರ ಕೊರತೆ, ಅಂಗನವಾಡಿ ಸೌಲಭ್ಯಗಳ ಕೊರತೆ ಇರುವಾಗ ಜಾರಿಗೆ ತರಲು ಮುಂದಾಗಿದೆ. ಇದರಿಂದ ಯಾರಿಗೆ ಲಾಭ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರಬಂದ ನಂತರ 7 ವರ್ಷಗಳಿಂದ ಸರ್ವ ಶಿಕ್ಷಣ ಅಭಿಯಾನಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಆ ಸಂದರ್ಭದಲ್ಲಿ ಈ ನೀತಿಯಿಂದ ಬಡವ ಹಾಗೂ ಶ್ರೀಮಂತ, ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣವಾಗಲಿದೆ. ಈ ನೀತಿಯಲ್ಲಿ ಆನ್ ಲೈನ್ ಶಿಕ್ಷಣವನ್ನು ಶೇ.20ರಿಂದ ಶೇ.50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಈಗ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಕಂಪ್ಯೂಟರ್ ತರಬೇತಿ ಇರುವ ಶಿಕ್ಷಕರು, ಅಅಂತರ್ಜಾಲ ವ್ಯವಸ್ಥೆ ಕೊರತೆ ಹೆಚ್ಚಾಗಿದೆ. ಒಂದು ವರದಿ ಪ್ರಕಾರ ದೇಶದ ಸರ್ಕಾರಿ ಶಾಲೆಗಳಲ್ಲಿ ಶೇ. 9.87 ರಷ್ಟು ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸೌಲಭ್ಯವಿದೆ. ದೇಶದಲ್ಲಿ ಕೇವಲ 4.09 ರಷ್ಟು ಗ್ರಾಮಾಂತರ ಪ್ರದೇಶದಲ್ಲಿ ಇಂಟರ್ ನೆಟ್ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಂದಕ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

ಇದನ್ನೂ ಓದಿ : ದೇಗುಲ ಪ್ರವೇಶಿಸಿದ ದಲಿತ ವ್ಯಕ್ತಿಗೆ ದಂಡ : ಪಶ್ಚಾತಾಪಕ್ಕೆ 5 ಲಕ್ಷ ದಂಡ ಕಟ್ಟಲು ಆಜ್ಞಾಪಿಸಿದ್ದ ಗ್ರಾಮಸ್ಥರು

‘ಈ ನೀತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರಿಗೆ ಎಲ್ಲಿಯೂ ಮೀಸಲಾತಿ, ವಿದ್ಯಾರ್ಥಿ ವೇತನ ವಿಚಾರವಾಗಿ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಈ ನೀತಿಯಿಂದ ಖಾಸಗಿ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ಹಾಗೂ ಆಡಳಿತ ವಿಚಾರವಾಗಿ ಸ್ವಾಯತ್ತತೆ ನೀಡಲಾಗುವುದು. ಖಾಸಗಿ ಸಂಸ್ಥೆಗಳಿಗೆ ಈ ಅಧಿಕಾರ ನೀಡಿದರೆ, ಈಗಾಗಲೇ ಡೊನೆಷನ್ ಹಾವಳಿ ಹೆಚ್ಚಾಗಿರುವಾಗ ಇದು ಬಡವರನ್ನು ಶಿಕ್ಷಣ ಹೆಸರಿನಲ್ಲಿ ಸುಲಿಗೆ ಮಾಡಲು ಮುಂದಾಗುತ್ತಾರೆ. ಆಗ ಸರ್ಕಾರ ಶುಲ್ಕ ನಿಯಂತ್ರಣ ಮಾಡಲು ಸಾಧ್ಯವಿರುವುದಿಲ್ಲ.’ ಎಂದರು.

ಈ ನೀತಿ ನಮ್ಮ ರಾಜ್ಯಗಳ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಭಂಗ ಉಂಟು ಮಾಡುವ ಶಿಕ್ಷಣ ನೀತಿಯಾಗಿದೆ. ತ್ರಿಭಾಷಾ ನೀತಿ ಮೂಲಕ ಹಿಂದಿ ಹಾಗೂ ಸಂಸ್ಕೃತ ಭಾಷೆ ಹೇರುವ ಪ್ರಯತ್ನ ಈ ನೀತಿ ಮೂಲಕ ನಡೆಯುತ್ತಿದೆ. ಈ ಶಿಕ್ಷಣ ನೀತಿಯನ್ನು  ಕೇರಳ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.

ಈ ಸಂದರ್ಭದಲ್ಲಿ ರಾಜ್ಯ ಎನ್ಎಸ್ ಯುಐ ಘಟಕದ ಅಧ್ಯಕ್ಷರಾದ ಕೀರ್ತಿ ಗಣೇಶ್, ಉಪಾಧ್ಯಕ್ಷರಾದ ಜಯಂದ್, ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಹಾಗೂ ಫರೂಕ್, ರಫಿ, ರಾಷ್ಟ್ರೀಯ ಸಂಚಾಲಕರಾದ ಫಹದ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ಸಲೀಂ ಅವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *