ಹೊಸ ಕ್ರಿಮಿನಲ್ ಕಾನೂನುಗಳನ್ನು ಈಗ ಜಾರಿಗೊಳಿಸಬಾರದು -ಸಿಪಿಐ(ಎಂ) ಕೇಂದ್ರಸಮಿತಿಯ ಆಗ್ರಹ

ನವದೆಹಲಿ :ಜುಲೈ 1, 2024 ರಿಂದ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲು ಮೋದಿ ಸರ್ಕಾರ ಪಟ್ಟು ಹಿಡಿದಿರುವುದಕ್ಕೆ ಸಿಪಿಐ(ಎಂ) ಕೇಂದ್ರ ಸಮಿತಿಯು ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

ತರಾತುರಿಯಲ್ಲಿ, ಚರ್ಚೆಯಿಲ್ಲದೆ, ನಿರಂಕುಶವಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ, ಸಂಸತ್ತಿನಿಂದ ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದಾಗ ಪಾಸು ಮಾಡಿಸಿಕೊಂಡ ಈ ಕಾನೂನುಗಳು ಸ್ವಭಾವತಃ ಕರಾಳ ಕಾನೂನುಗಳು ಎಂದು ಅದು ವರ್ಣಿಸಿದೆ.

ಸುಪ್ರೀಂ ಕೋರ್ಟ್ ‘ದೇಶದ್ರೋಹ’ವನ್ನು ನಿರೂಪಿಸಿದ ಐಪಿಸಿಯ ಸೆಕ್ಷನ್ 124 ಎ ಅನ್ನು ಸಾಕಷ್ಟು ಸರಿಯಾಗಿಯೇ ತೆಗೆದು ಹಾಕಿದ್ದರೂ, ಇದನ್ನು ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 152 ಆಗಿ ಕಳ್ಳತನದಿಂದ ತೂರಲಾಗಿದೆ ಮತ್ತು ಇದರೊಂದಿಗೆ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಉಲ್ಲೇಖಗಳಿವೆ. ಮೂಲ ಸೆಕ್ಷನ್ 124A ನಲ್ಲಿ ಇವು ಇರಲಿಲ್ಲ. ಇದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಹೊಸ ಕಾನೂನಿನಿಂದ ಜನರನ್ನು ‘ರಾಷ್ಟ್ರ ವಿರೋಧಿ’ಗಳೆಂದು ಆರೋಪಿಸುವುದು ಮತ್ತು ಶಿಕ್ಷೆಗೆ ಗುರಿಪಡಿಸುವುದು ಈಗ ಹೆಚ್ಚು ಸುಲಭವಾಗುತ್ತದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಇವುಗಳಲ್ಲಿ ನಾಗರಿಕರಿಗೆ ಹಾನಿಯಾಗುವಂತಹ ಪೊಲೀಸ್ ಅಧಿಕಾರಗಳನ್ನು ಹೆಚ್ಚಿಸುವ ಅನೇಕ ನಿಬಂಧನೆಗಳಿವೆ. ಉದಾಹರಣೆಗೆ, ಹೊಸ ಕಾನೂನು ಹಿಂದಿನ ಕಾನೂನಿನಲ್ಲಿ ನಿಗದಿಪಡಿಸಿದ 15 ದಿನಗಳ ಮಿತಿಯನ್ನು ಮೀರಿ ಆರೋಪಿಯ ಪೊಲೀಸ್ ಕಸ್ಟಡಿಗೆ ಅವಕಾಶವನ್ನು ನೀಡುತ್ತದೆ. ಹೊಸ ನಿಬಂಧನೆಯ ಅರ್ಥ ನ್ಯಾಯಾಧೀಶರು ಒಬ್ಬ ಆರೋಪಿಯನ್ನು 90 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಬಹುದು. ಒಂದು ದಂಡನೀಯ ಅಪರಾಧದದ ಸಂದರ್ಭದಲ್ಲಿ ಎಫ್‌ಐಆರ್ ನ್ನು ಕೂಡ 15 ದಿನಗಳ ವರೆಗೆ ಪೊಲೀಸ್ ಅಧಿಕಾರಿಯಿಂದ ವಿಚಾರಣೆಯ ನಂತರವೇ ಹಾಕಲಾಗುವುದು.

ಮತ್ತೊಂದು ಅತ್ಯಂತ ಅಪಾಯಕಾರಿ ಅಂಶವೆಂದರೆ ಯುಎಪಿಎ ಅಡಿಯಲ್ಲಿ ಆರೋಪಗಳ ತನಿಖೆಯನ್ನು ಹಿರಿಯ ಪೊಲೀಸ್ ಅಧಿಕಾರಿ ನಡೆಸುತ್ತಾರಾದರೂ, ಹೊಸ ಸೆಕ್ಷನ್ 152 ರ ಅಡಿಯಲ್ಲಿ ಆರೋಪಗಳನ್ನು ಪೊಲೀಸ್ ಠಾಣೆಯಲ್ಲಿ ಒಬ್ಬ ಐ.ಒ. ತನಿಖೆ ಮಾಡುತ್ತಾರೆ. ಯುಎಪಿಎ ಅಡಿಯಲ್ಲಿ, ಸರ್ಕಾರವು ಯಾರನ್ನಾದರೂ ವಿಚಾರಣೆಗೆ ಒಳಪಡಿಸಲು ಮಂಜೂರಾತಿ ನೀಡಬೇಕಾಗಿತ್ತು, ಹೊಸ ನ್ಯಾಯ ಸಂಹಿತೆಯ ಅಡಿಯಲ್ಲಿ, ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿ ಭಯೋತ್ಪಾದನೆಗಾಗಿ ಯಾರನ್ನಾದರೂ ವಿಚಾರಣೆಗೆ ಒಳಪಡಿಸಬಹುದು.

‘ಒಬ್ಬ ವ್ಯಕ್ತಿ ಎಸಗಿದ ಕೃತ್ಯ ಆ ಸಮಯದಲ್ಲಿ ಕ್ರಿಮಿನಲ್ ಆಗಿದ್ದ ಹೊರತು ಯಾರನ್ನೂ ಶಿಕ್ಷೆಗೆ ಗುರಿಪಡಿಸುವಂತಿಲ್ಲ’ ಎಂಬುದು ಕಾನೂನಿನ ಮೂಲಭೂತ ತತ್ವವಾಗಿದ್ದರೂ, ಜುಲೈ 1 ರ ನಂತರ ಏನಾಗುತ್ತದೆ ಎಂದರೆ ಜುಲೈ 1 ರ ಮೊದಲು ಎಫ್‌ಐಆರ್ ಹಾಕಿದ್ದರೆ ಆ ಸಮಯದಲ್ಲಿ ಜಾರಿಯಲ್ಲಿದ್ದ ಕಾನೂನು ಅನ್ವಯವಾಗುತ್ತದೆ, ಆದರೆ ಜುಲೈ 1 ರ ನಂತರ ದಾಖಲಿಸಲಾದ ಎಫ್‌ಐಆರ್‌ಗಳಿಗೆ ಹೊಸ ಅಂಶಗಳಿರುವ ಕಾನೂನು ಅನ್ವಯಿಸುತ್ತದೆ.

ಇದರರ್ಥ ಎರಡೂ ಕಾನೂನುಗಳು ಏಕಕಾಲದಲ್ಲಿ ಇರುತ್ತವೆ ಮತ್ತು ಯಾವ ವ್ಯವಸ್ಥೆಯನ್ನು ಅನ್ವಯಿಸಬೇಕು ಎಂಬುದರ ಕುರಿತು ವಿವಾದಗಳುಂಟಾಗುತ್ತವೆ. ಮೇಲ್ಮನವಿಗಳು ತುಂಬಾ ಸಂಕೀರ್ಣವಾಗುತ್ತವೆ. ಕಾನೂನು ಏನು ಹೇಳುತ್ತದೆ ಎಂಬುದರ ಕುರಿತು ಈ ಹೊಸ ಕಾನೂನುಗಳು ಅನಿಶ್ಚಿತತೆ ಮತ್ತು ಅಸ್ಪಷ್ಟತೆ ಎರಡನ್ನೂ ಉಂಟು ಮಾಡುತ್ತವೆ, ಇದು ಸ್ವೀಕಾರಾರ್ಹವಲ್ಲ. ಇದು ಲಕ್ಷಗಟ್ಟಲೆ ಕ್ರಿಮಿನಲ್ ಪ್ರಕರಣಗಳ ಬೃಹತ್ ಬಾಕಿಯನ್ನು ಹೆಚ್ಚಿಸುತ್ತದೆ.

ಹೀಗೆ ಈ ಕಾನೂನುಗಳ ಬಗ್ಗೆ ಹಲವಾರು ನೈಜ ಆತಂಕಗಳಿದ್ದು, ಹಿಂದಕ್ಕೆಳೆಯುವ ಮತ್ತು ಕರಾಳ ಅಂಶಗಳನ್ನು ಹೊಂದಿರುವುದರಿಂದಾಗಿ, ಅವುಗಳನ್ನು ಸದ್ಯಕ್ಕೆ ಅನುಷ್ಠಾನಗೊಳಿಸಬಾರದು ಎಂದು ಈ ಬಗ್ಗೆ ಗಂಭೀರ ಆತಂಕ ವ್ಯಕ್ತಡಿಸಿರುವ ವಕೀಲರ ಸಂಘಗಳು, ಕಾಳಜಿಯುಳ್ಳ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಆಗ್ರಹದೊಂದಿಗೆ ಪಕ್ಷ ದನಿಗೂಡಿಸುವುದಾಗಿ ಸಿಪಿಐ(ಎಂ) ಕೇಂದ್ರಸಮಿತಿ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *