ಮಾಧ್ಯಮಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳಕ್ಕೆ ನೂತನ ಪತ್ರಿಕೋದ್ಯಮ ಕಾಲೇಜು ಆರಂಭ

ಬೆಂಗಳೂರು: ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ವಿಸ್ತಾರ್‌ ಟ್ರಸ್ಟ್‌, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮಾಧ್ಯಮಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಹೆಚ್ಚಾಗುವಂತೆ ಮಾಡುವ ಪ್ರಯತ್ನಕ್ಕಾಗಿ ಬೆಂಗಳೂರಿನಲ್ಲಿ ‘ವಿಸ್ತಾರ್‌ ಕಾಲೇಜ್‌ ಆಫ್‌ ಆರ್ಟ್ಸ್‌ ಫಾರ್‌ ವುಮೆನ್ಸ್‌’ (ವಿಸಿಎಡಬ್ಲ್ಯೂ) ಎಂಬ ನೂತನ ಪದವಿ ಕಾಲೇಜನ್ನು ಪ್ರಾರಂಭಿಸಿದೆ.

ವಿಸ್ತಾರ್‌ ಟ್ರಸ್ಟ್‌ನ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ ದೇವಿಡ್‌ ಸೆಲ್ವರಾಜ್‌ ಮಾತನಾಡಿ “ನೂತನ ಕಾಲೇಜಿನಲ್ಲಿ ಸಮರ್ಥ ಸಿಬ್ಬಂದಿ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೋಧಿಸುವ ಸಹಾಯಕ ಪ್ರಾಧ್ಯಪಕರಿದ್ದಾರೆ. ವೃತ್ತಿನಿರತ ಪತ್ರಕರ್ತರು, ನೀತಿ ನಿರೂಪಕರು ಮತ್ತು ಸಾರ್ವಜನಿಕ ಬುದ್ಧಿಜೀವಿಗಳು ಸಹ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿ ಮತ್ತು ಪರ್ಯಾಯ ಮಾಧ್ಯಮಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಮತ್ತು ಉದ್ಯೋಗ ಒದಗಿಸಲು ನೆರವು ನೀಡಲಾಗುತ್ತದೆ. ನೇರ ತರಗತಿ ಮತ್ತು ಆನ್‌ಲೈನ್ ಮೂಲಕ ಕಲಿಕೆ ಎರಡು ರೀತಿಯಲ್ಲಿ ಕಲಿಸುತ್ತಿದ್ದು, ಬೆಂಗಳೂರಿನಲ್ಲಿರುವ ಆರು ಎಕರೆ ವಿಶಾಲ ಕ್ಯಾಂಪಸ್‌ನಲ್ಲಿ ಕಾರ್ಯಾರಂಭ ಮಾಡಲಾಗುತ್ತಿದೆʼʼ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗಾಗಿ ‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಇಂಗ್ಲಿಷ್‌’ ನಲ್ಲಿ ಪದವಿ ತರಗತಿಗಳು ಇದೇ ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ಬೆಂಗಳೂರು ನಗರದ ಹೊರವಲಯದ ಹೆಣ್ಣೂರು ರಸ್ತೆಯಲ್ಲಿರುವ ಗುಬ್ಬಿ ಕ್ಯಾಂಪಸ್‌ನಲ್ಲಿ ತರಗತಿಗಳು ಆರಂಭವಾಗಲಿವೆ.

“ಸಾಮಾಜಿಕ ಬದ್ದತೆ ಹೊಂದಿರುವ ಪತ್ರಕರ್ತರಿಗೆ ಈ ಕೋರ್ಸ್‌ ಅನ್ನು ಅರ್ಪಿಸುತ್ತೇವೆ. ಈ ಸಂದರ್ಭದಲ್ಲಿ ನಮಗೆ ಗೌರಿ ಲಂಕೇಶ್‌ ಮತ್ತು ರಾಮನ್‌ ಕಶ್ಯಪ್‌ ನೆನಪಾಗುತ್ತಾರೆ. ಗೌರಿ ಕರ್ನಾಟಕದ ಪ್ರಸಿದ್ಧ ಪತ್ರಕರ್ತೆಯಾಗಿದ್ದರೆ, ರಾಮನ್‌ ಲಖಿಂಪುರ್‌ ಖೇರಿಯಲ್ಲಿ ರೈತರ ಹೋರಾಟವನ್ನು ವರದಿ ಮಾಡುವಾಗ ಕೊಲೆಯಾದ ಪತ್ರಕರ್ತರಾಗಿದ್ದಾರೆ. ನಮ್ಮ ಕಾಲೇಜಿನ ಪ್ರಾರಂಭದ ಸಮಯದಲ್ಲಿಯೇ ಫಿಲಿಫೈನ್ಸ್‌ನ ಪತ್ರಕರ್ತೆ ಶ್ರೀಮತಿ ಮರಿಯಾ ರೆಸ್ಸಾ ಅವರಿಗೆ 2021ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿದೆ. ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ರಕ್ಷಿಸುವ ನಿಟ್ಟಿನಲ್ಲಿ ಅವರ ನಿರಂತರ ಬದ್ಧತೆಯ ಕೆಲಸವನ್ನು ನಾವು ಪ್ರಶಂಸಿಸುತ್ತೇವೆ” ಎಂದಿದ್ದಾರೆ.

“ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೆಚ್ಚಿಸುವುದು ನಮ್ಮ ನೈತಿಕ ಹೊಣೆಗಾರಿಕೆ ಎಂದು ನಾವು ನಂಬುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸುವುದು ಅದರ ಒಂದು ಮಾರ್ಗವಾಗಿದೆ. ಮೂಲಭೂತ ಹಕ್ಕುಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವುದು ನಮ್ಮ ಯೋಜನೆಯ ಉದ್ದೇಶವಾಗಿದೆ” ಎಂದು ಅವರು ವಿವರಿಸಿದ್ದಾರೆ.

‘ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತಿ ಕಡಿಮೆ ಮಟ್ಟದಲ್ಲಿದೆ. ಮುಖ್ಯವಾಹಿನಿ ಮಾಧ್ಯಮಗಳ ಸಂಪಾದಕರ ಮತ್ತು ಮುಖ್ಯ ಹುದ್ದೆಗಳಲ್ಲಿ ಮಹಿಳೆಯರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದೆ. ಹಾಗಾಗಿ ಅಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವುದು, ಅತ್ಯುತ್ತಮ ಶಿಕ್ಷಣ ನೀಡಿ, ಗುಣಮಟ್ಟದ ಮಹಿಳಾ ಪತ್ರಕರ್ತರನ್ನು ಸೃಷ್ಟಿಸುವುದು ನಮ್ಮ ಮೊದಲ ಉದ್ದೇಶವಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಿಂದ ಹೊರಗುಳಿದಿರುವ ಜನಸಾಮಾನ್ಯರ, ಶೋಷಿತರ ಸಮಸ್ಯೆಗಳು, ಸಮಕಾಲೀನ ವಿಷಯಗಳು ಮುನ್ನೆಲೆಗೆ ಬರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಎರಡನೆ ಉದ್ದೇಶ.  ತಳ ಸಮುದಾಯಗಳ ಯುವತಿಯರಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಲು ಅನುವು ಮಾಡಿಕೊಡುವುದು ಮತ್ತು ಉದ್ಯೋಗದ ಸಾಧ್ಯತೆಗಳನ್ನು ವಿಸ್ತರಿಸುವುದು ನಮ್ಮ ಮೂರನೇ ಉದ್ದೇಶ. ಈ ವಿಷಯಗಳನ್ನು ಕೇಂದ್ರೀಕರಿಸಿ ಪದವಿ ಶಿಕ್ಷಣವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಸ್ತಾರ್‌ ಕಾಲೇಜ್‌ ಆಫ್‌ ಆರ್ಟ್ಸ್‌ ಫಾರ್‌ ವುಮೆನ್ಸ್‌ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಸಂಯೋಜಿತವಾಗಿದೆ. ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಅರಂಭವಾಗಿದ್ದು, ಹಲವು ಪರಿಣಿತ ಪತ್ರಕರ್ತರಿಂದ ತರಗತಿಗಳು ನಡೆಯಲಿವೆ. ಕನ್ನಡ ಭಾಷೆಗೆ ಮಹತ್ವ ನೀಡಿರುವ ಕಾಲೇಜು ಕನ್ನಡ ಪ್ರಾಧ್ಯಾಪಕರಾದ ನಾಗಮಣಿ ಶಿವಾರರನ್ನು ಪ್ರಾಂಶುಪಾಲರನ್ನಾಗಿ ನೇಮಿಸಿದೆ.

Donate Janashakthi Media

Leave a Reply

Your email address will not be published. Required fields are marked *