– ಮಗಳ ಶಿಕ್ಷಣಕ್ಕಾಗಿ ಊರು, ಮನೆ ತೊರೆದ ಕುಟುಂಬ
– ಆನ್ಲೈನ್ ಕ್ಲಾಸ್ಗಾಗಿ ನಗರಕ್ಕೆ ವಿದ್ಯಾರ್ಥಿಗಳ ಅಲೆದಾಟ
ಚಿಕ್ಕಮಗಳೂರು: ಕೋವಿಡ್- 19 ಸೋಂಕಿನ ಕಾರಣದಿಂದ ದೇಶದೆಲ್ಲೆಡೆ ಶಿಕ್ಷಣ ವ್ಯವಸ್ಥೆ ಆಫ್ ಲೈನ್ ನಿಂದ ಆನ್ ಲೈನ್ ಕಡೆಗೆ ಶಿಫ್ಟ್ ಆಗಿದೆ. ಆದರೆ ಆನ್ಲೈನ್ ತರಗತಿ ನಡೆಸಲು ಬೇಕಾದ ಅನುಭವ ಮತ್ತು ಮೂಲಸೌಕರ್ಯ ಎರಡೂ ಎಲ್ಲಾ ಕಡೆ ಲಭ್ಯವಿಲ್ಲ. ನಗರ ಪ್ರದೇಶದಲ್ಲೂ ಸರಿಯಾದ ನೆಟ್ವರ್ಕ್ ಸಿಗದೆ ಹಿಡಿಶಾಪ ಹಾಕುವ ಸ್ಥಿತಿ ಇರುವಾಗ ಗ್ರಾಮೀಣ ಪ್ರದೇಶದ ಪರಿಸ್ಥಿತಿ ಹೇಳುವಂತೆಯೇ ಇಲ್ಲ.
ಶಾಲಾ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಆನ್ಲೈನ್ ಮೂಲಕ ಆರಂಭಿಸಿವೆ. ಸರ್ಕಾರಿ ಶಾಲೆಗಳ ಆರಂಭ ಇನ್ನೂ ಆಗಬೇಕಿದೆ. ಈ ನಡುವೆ ಆನ್ಲೈನ್ ಶಿಕ್ಷಣದ ಒಂದೊಂದೆ ಮುಖಗಳು ಗ್ರಾಮೀಣ ಭಾರತದಲ್ಲಿ ಅನಾವರಣಗೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ಮಲೆನಾಡಿನ ಕುಟುಂಬವೊಂದು ಆನ್ಲೈನ್ ಶಿಕ್ಷಣಕ್ಕಾಗಿ ನೆಟ್ವರ್ಕ್ ಸಮಸ್ಯೆಯಿಂದ ಊರು ತೊರೆದಿದೆ. ಮತ್ತಷ್ಟು ಕುಟುಂಬಗಳು ಇದೇ ದಾರಿ ಎದುರು ನೋಡುತ್ತಿವೆ.
ಚಿಕ್ಕಮಗಳೂರು ತಾಲ್ಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಗಾಳಿಗುಡ್ಡೆ ಗ್ರಾಮದ ಕಲ್ಲೇಶ್ ಎಂಬುವರು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ಊರು ತೊರೆದಿದ್ದಾರೆ. ತನ್ನಜ್ಜನ ಕಾಲದ ತೋಟವನ್ನು ತೊರೆದು, ಅಪ್ಪನ ಕಾಲದ ಮನೆಯನ್ನು ಜೊತೆಗೆ ಊರು ಸ್ನೇಹಿತರನ್ನು ಬಿಟ್ಟು ತಮ್ಮ ಊರಿಗೆ ತಾವೇ ಅತಿಥಿಗಳಾಗಿದ್ದಾರೆ. ಧೋ ಎಂದು ಸುರಿಯುವ ಮಳೆ, ಮೈ ಮೂಳೆ ಕೊರೆಯುವ ಕುಳಿರ್ಗಾಳಿ, ಅರಣ್ಯ ಸಂಪತ್ತಿನ ಜೊತೆಗೆ ಮೃಗಗಳ ಭಯವಿದ್ದರೂ ತನ್ನೂರನ್ನು ಬಿಟ್ಟು ನಗರದ ಬಗ್ಗೆ ವ್ಯಾಮೋಹ ಇಲ್ಲದಿದ್ದ ಜನರೀಗ ಮಕ್ಕಳ ವಿದ್ಯಾಭ್ಯಾಸಕ್ಕೊಸ್ಕರ ಹಳ್ಳಿ ತೊರೆದು ಪಟ್ಟಣ ಸೇರುವಂತಾಗಿದೆ.
ಆನ್ಲೈನ್ ಶಿಕ್ಷಣಕ್ಕೆ ಹಳ್ಳಿ ತೊರೆದ ಕುಟುಂಬ
ಕಲ್ಲೇಶ್ ಅವರ ಎರಡನೇ ಪುತ್ರಿ ಸಿರಿ ಮೈಸೂರಿನಲ್ಲಿ ಅಂತಿಮ ವರ್ಷದ ಪದವಿ ಅಭ್ಯಾಸ ಮಾಡುತ್ತಿದ್ದು, ಕೋವಿಡ್ ಕಾರಣಕ್ಕೆ ಆಫ್ ಲೈನ್ ತರಗತಿಗಳು ನಡೆಯುುತ್ತಿಲ್ಲ. ತರಗತಿಗಳು ಇಲ್ಲದ ಪರಿಣಾಮ ಊರು ಸೇರಿಕೊಂಡಿದ್ದರು. ಆದರೆ ಕಳೆದ ಕೆಲದಿನಗಳಿಂದ ಕಾಲೇಜಿನಲ್ಲಿ ಆನ್ಲೈನ್ ಶಿಕ್ಷಣ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಯಲ್ಲಿ ನೆಟ್ವರ್ಕ್ ಸಿಗದ ಕಾರಣ ಹಳ್ಳಿಯನ್ನು ತೊರೆದು ಅಪ್ಪ_ಅಮ್ಮನನ್ನು ಕರೆದುಕೊಂಡು ಬಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ತನ್ನಳ್ಳಿಯಲ್ಲಿ ಮನೆ, ತೋಟ ಎಲ್ಲವೂ ಇದ್ದರೂ ನಗರದ ಮಾರ್ಕೆಟ್ ರಸ್ತೆಯಲ್ಲಿ ತಿಂಗಳಿಗೆ 5 ಸಾವಿರ ನೀಡಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.
*ನೆಟ್ವರ್ಕ್ ಸಮಸ್ಯೆ
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸಾಕಷ್ಟು ನೆಟ್ವರ್ಕ್ ಸಮಸ್ಯೆ ಇದೆ. ಅದರಲ್ಲಿಯೂ ಈ ಭಾಗದಲ್ಲಿ ಹೆಚ್ಚು ಬಿಎಸ್ಎನ್ಎಲ್ ನೆಟ್ವರ್ಕ್ ಇದ್ದು ಅದು ಫ್ರೀಕ್ವೆನ್ಸಿ ಸರಿಯಾಗಿಲ್ಲ. ಈ ಕಾರಣದಿಂದ ಆನ್ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಸಾಕಷ್ಟು ಪರದಾಡ ಬೇಕು. ಹೀಗಾಗಿ ಕೆಲ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಲೇಶ್ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಹಲವು ದಶಕಗಳ ಕಾಲ ಬದುಕಿನ ತನ್ನೂರನ್ನು ಬಿಟ್ಟು ನಗರದತ್ತ ಬಂದಿದ್ದಾರೆ. ಕಲ್ಲೇಶ್ ರಂತಹ ಮಧ್ಯಮ ವರ್ಗದ ಕುಟುಂಬಗಳು ಧೈರ್ಯವಾಗಿ ಹಳ್ಳಿ ತೊರೆದು ನಗರದತ್ತ ಬಂದು ಜೀವನ ಸಾಗಿಸಬಹುದು. ಆದರೆ ಇಂತಹ ಸಮಸ್ಯೆ ಎದುರಿಸುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಕೈಬೀಡುವಂತಾಗಿದೆ.
ನಗರದೆಡೆಗೆ ಅಲೆದಾಟ
ಮಲೆನಾಡು ಭಾಗದ ಇನ್ನು ಬಹಳಷ್ಟು ವಿದ್ಯಾರ್ಥಿಗಳು ನೆಟ್ವರ್ಕ್ ಸಿಗದ ಕಾರಣ ಹಳ್ಳಿಯಿಂದ ನಗರಕ್ಕೆ ನೆಟ್ವರ್ಕ್ ಹುಡುಕಿಕೊಂಡು ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಚಿಕ್ಕಮಗಳೂರು ಸುತ್ತಮುತ್ತಲಿನ ಸಿದ್ದಾಪುರ, ಕೊಂಕಮನೆ, ಕೊಳವಾಸೆ, ಮಲ್ಲಂದೂರು, ಕೋಲಾರ್ಖಾನ್, ಜಾಗರ, ಹೊಸ್ಕಾನ್ ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್ ಪುರ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು ತಮ್ಮ ಅಪ್ಪ, ಅಣ್ಣ ಅಥವಾ ಸ್ನೇಹಿತರನ್ನು ಕರೆದುಕೊಂಡು ಇಲ್ಲವೇ ಬೇರೆ ವಾಹನಗಳನ್ನು ಹಿಡಿದು ಪ್ರತಿದಿನ ನಗರಕ್ಕೆ ಬಂದು ಸ್ನೇಹಿತರು ಅಥವಾ ಸಂಬಂಧಿಕರ ಮನೆಯಲ್ಲಿ ಆನ್ಲೈನ್ ಕ್ಲಾಸ್ಗೆ ಹಾಜರಾಗಿ ವಾಪಾಸ್ಸಾಗುವಂತಹ ಪರಿಸ್ಥಿತಿ ಎದುರಾಗಿದೆ. ಮತ್ತೆ ಕೆಲವರು ನಗರದ ಪಾರ್ಕ್ಗಳಲ್ಲಿ ಲ್ಯಾಪ್ಟಾಪ್ ಮೊಬೈಲ್ ಮೂಲಕ ಆನ್ಲೈನ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹಿಂದಿರುಗುವಂತಹ ಪರಿಸ್ಥಿತಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಂಡು ಬರುತ್ತಿದೆ.
ಸಚಿವರು ಬೇಟಿ ನಂತರವೂ ಬಗೆಹರಿದಿಲ್ಲ ಸಮಸ್ಯೆ
ನೆಟ್ವರ್ಕ್ ಸಮಸ್ಯೆಯ ಬಗ್ಗೆ ಶೃಂಗೇರಿ ತಾಲ್ಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಗಮನ ಸೆಳೆದಿದ್ದ. ಈ ಹಿನ್ನೆಲೆ ಕಳೆದ ತಿಂಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಶಿಕ್ಷಣ ಸಚಿವರು ಪ್ರವಾಸ ಕೈಗೊಂಡು ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದ್ದರು. ಕೂಡಲೇ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ತಿಳಿಸಿದ್ದರು. ಆದರೆ ಈ ವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಸರ್ಕಾರ ಹಾಗೂ ಜನಪ್ರತಿನಿಧಿಗಳು ನಮ್ಮದು ಡಿಜಿಟಲ್ ಇಂಡಿಯಾ ಅಂತಿದ್ದಾರೆ. ಆದ್ರೆ, ಆನ್ಲೈನ್ ಶಿಕ್ಷಣಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿದ್ಯಾರ್ಥಿ ಸಮೂಹ ಡಿಜಿಟಲ್ ಭಾರತ ಅಂದ್ರೆ ಇದೇನಾ ಅಂತಾ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಮಕ್ಕಳು ಶಾಲೆಗೆ ಹೋಗಲು ಆಗ್ತಿಲ್ಲ. ನೆಟ್ವರ್ಕ್ನಲ್ಲಿ ಪಾಠ ಕೇಳೋದು, ಓದೋದು ಮಲೆನಾಡಿಗರಿಗೆ ಅಸಾಧ್ಯ. ಹಾಗಾಗಿ, ಸರ್ಕಾರ ಆನ್ಲೈನ್ ಕ್ಲಾಸ್ ಜಾರಿಗೆ ತರೋ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಬೇಕಾದ ಅಗತ್ಯತೆ ಬಹಳಷ್ಟಿದೆ ಎಂಬುದು ಮಲೆನಾಡಿಗರ ಅಭಿಪ್ರಾಯ.
ಕೋವಿಡ್ ಸಂದರ್ಭದಲ್ಲಿ ಕಾಲೇಜಿನಲ್ಲಿ ಆನ್ಲೈನ್ ತರಗತಿಗಳು ಪ್ರಾರಂಭವಾಗಿದೆ. ನಮ್ಮೂರಿನಲ್ಲಿ ನೆಟ್ವರ್ಕ್ ಸಿಗದ ಕಾರಣ ಹೀಗೆ ಹಳ್ಳಿಯಿಂದ ಬಂದು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದೇವೆ. ಚಿಕ್ಕಮಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ಹೋಗಿ ಬರಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇವೆ. ದೇಶದೆಲ್ಲೆಡೆ ಡಿಜಿಟಲ್ ಇಂಡಿಯಾ ಅಂತಿದ್ದಾರೆ ಆದರೆ ಡಿಜಿಟಲ್ ಇಂಡಿಯಾ ಪರಿಸ್ಥಿತಿ ಹೇಗಿದೆ ಅಂತಾ ಕೇಳೋರು ಯರು ಇಲ್ಲ. ಇನ್ನು ನಮ್ಮೂರಿನ ಸುತ್ತಮುತ್ತಾ ಬಹಳಷ್ಟು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗೆ ಹಾಜರಾಗಲು ಪರದಾಡುತ್ತಿದ್ದಾರೆ.
ಸಿರಿ, ವಿದ್ಯಾರ್ಥಿನಿ
ಆನ್ಲೈನ್ ಕ್ಲಾಸ್ಗೆ ನೆಟ್ವರ್ಕ್ ಸಿಗದ ಕಾರಣ ಹಾಗೂ ವಿದ್ಯುತ್ ಸಮಸ್ಯೆಯಿಂದ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ, ಊರು, ತೋಟ, ಜಮೀನು, ದನಕರುಗಳನ್ನು ಬಿಟ್ಟು ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದೇವೆ. ಶುಕ್ರವಾರ ಸಂಜೆ ಊರಿಗೆ ಹೋಗಿ ತೋಟವನ್ನು ನೋಡಿಕೊಂಡು ಮತ್ತೆ ಸೋಮವಾರ ಬರುತ್ತೇನೆ. ಇದ್ದವರು ಹೀಗೆ ಮಾಡಬಹುದು. ಆದರೆ ಬಡ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತಗೆದುಕೊಳ್ಳಬೇಕು.
ಕಲ್ಲೇಶ್, ಪೋಷಕರು