ನೆಟೆ ರೋಗದಿಂದ ತೊಗರಿ ಬೆಳೆ ಹಾನಿ-ಪರಿಹಾರ ಘೋಷಿಸಲು ಜ.17 ಕಲಬುರಗಿ ಬಂದ್‌: ಕೆಪಿಆರ್‌ಎಸ್‌ ಕರೆ

ಕಲಬುರಗಿ: ಜಿಲ್ಲೆಯ ರೈತರು ಬೆಳೆದ ತೊಗರಿ ಬೆಳೆಯು ನೆಟೆ ರೋಗದಿಂದ ಒಣಗಿದ್ದು, ಲಾಗೋಡಿ ಮಾಡಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಸಾಲದ ಭಾದೆ ತಾಳಲಾರದೆ ಬೆಳೆಗಾರರು ಆತ್ಮಹತ್ಯೆ ಶರಣಾಗುತ್ತಿದ್ದಾರೆ. ರಾಜ್ಯ ಸರ್ಕಾರ ಬೆಳಗಾರರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದ ವತಿಯಿಂದ ಜನವರಿ 17ರಂದು ಕಲಬುರಗಿ ಬಂದ್‌ ಗೆ ಕರೆ ನೀಡಲಾಗಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, ಇತ್ತೀಚಿಗೆ ಜರುಗಿದ ಬೆಳಗಾವಿಯಲ್ಲಿ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ ನೆಟೆ ರೋಗದಿಂದ ಒಣಗಿ ಹೋಗಿರುವ ತೊಗರಿ ಬೆಳೆಗೆ ಪರಿಹಾರ ಘೋಷಣೆ ಮಾಡದ ಸರ್ಕಾರ ರೈತರಿಗೆ ಸ್ಪಂದಿಸಲುತ್ತಿಲ್ಲ. ಬದಲಾಗಿ ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ. ಬೇಸತ್ತಿರುವ ಬೆಳೆಗಾರರು ರಾಜ್ಯ ಸರ್ಕಾರದ ಆಕ್ರೋಶಗೊಂಡಿದ್ದಾರೆ. ಈಗಲಾದರು ಎಚ್ಚೆತ್ತುಕೊಂಡು ಸರ್ಕಾರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಇದನ್ನು ಓದಿ: ಬೆಳೆಗಾರರ ಹಿತ ಕಾಪಾಡಲು ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಬಲಪಡಿಸಿ; ಕೆಪಿಆರ್‌ಎಸ್‌ ವಿಚಾರ ಸಂಕಿರಣ

ಬೆಳೆಯ ಉತ್ತಮ ಫಸಲಿಗೆ ಸೂಕ್ತ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ಬೆಳೆದ ಮಾಲು ಹಾಳಾಗಿರುವುದರಿಂದ ರೈತರ ಬದುಕು ಬೀದಿಗೆ ಬಂದಂತಾಗಿದೆ. ಮುಂಗಾರು ಬಿತ್ತನೆ ನಂತರ ಮೊಳಕೆ ಒಡೆದ ನಂತರ ಬಸವನಹುಳ ಕಾಟದಿಂದ ನಾಟಿಕೆ ಹಾನಿಯುಂಟಾಯಿತು ಮತ್ತು ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ಸೋಯಾ, ತೊಗರಿ ಬೆಳೆಗಳು ಸಂಪೂರ್ಣ ಕೈಕೊಟ್ಟಂತಾಗಿದೆ.

ತೊಗರಿ ನಾಡು ಕಲಬುರಗಿ ಜಿಲ್ಲೆಯಲ್ಲಿ 4,80,675 ಹೆಕ್ಟೇರ್ ಭೂಮಿಯಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಅತಿವೃಷ್ಟಿ ಮಳೆಯಿಂದಾಗಿ 1,80,000 ಹೆಕ್ಟೇರ್ ಪ್ರದೇಶದ ತೊಗರಿ ಬೆಳೆ ನಷ್ಟವಾಗಿದೆ. ನೆಟೆ ರೋಗದಿಂದ 50,000 ಹೆಕ್ಟೇರ್ ತೊಗರಿ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ, ತೊಗರಿ ಬೆಳೆ 2,30,000 ಹೆಕ್ಟೇರ್ ಅಷ್ಟು ಬೆಳೆ ನಾಶವಾಗಿದೆ. ಅಂದರೆ ಸರಿಸುಮಾರ 34,50,000 ಕ್ವಿಂಟಲ್‌ ತೊಗರಿ ಬೆಳೆ ನಾಶವಾಗಿದೆ ಎಂದು ವಿವರಿಸಿದ್ದಾರೆ.

ಇದನ್ನು ಓದಿ: ರಾಜ್ಯ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಲು ಕೆಪಿಆರ್‌ಎಸ್‌ ರಾಜ್ಯ ಸಮ್ಮೇಳನ ಕರೆ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ಭೀಮಶೆಟ್ಟಿ ಯಂಪಳ್ಳಿ ಅವರು, ಬೆಳೆ ಹಾನಿಯಿಂದಾಗಿ ರೈತರು ಕಂಗಾಲಾಗಿದ್ದಾರೆ ಮತ್ತು ನೆಟೆ ರೋಗದಿಂದ ಒಣಗಿ ಹೋದ ತೊಗರಿ ರೈತರ ಗೋಳಾಟ ಮುಗಿಲು ಮುಟ್ಟಿದೆ. ರೈತರು ಎಲ್ಲಾ ಬೆಳೆಗಳಿಗೂ ಬೆಳೆವಿಮೆ ಮಾಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ, ವಿಮಾ ಕಂಪನಿಯು ಹಣ ಕಟ್ಟಿದ ರೈತರಿಂದ ಸೂಲಿಗೆಗೆ ಇಳಿದಿದೆ. ವಿಮಾ ಕಂಪನಿಗಳ ಕ್ರಮಗಳು ಒಂದು ಕಣ್ಣಿಗೆ ಸುಣ್ಣಾ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದೆ. ರೈತರು ಕಟ್ಟಿದ ಹಣ ವಾಪಸ್ಸು ಬಂದಂತಾಗಿದೆ ಬಿಟ್ಟರೆ, ಬೆಳೆವಿಮೆ ನಿಯಮಗಳನ್ನು ವಿಮಾ ಕಂಪನಿಗಳು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದೆ. ವಿಮಾ ಕಂಪನಿಗಳು ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ. ಇಂತಹ ರೈತ ವಿರೋಧಿ ಬೆಳೆ ವಿಮಾ ಕಂಪನಿಗಳು ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನು ರೀತ್ಯ ಕ್ರಮಗಳನ್ನು ಅನುಸರಿಸಬೇಕೆಂದು ಕೆಪಿಆರ್‌ಎಸ್‌ ಆಗ್ರಹಿಸಿದೆ. ಅಲ್ಲದೆ, ಬೆಳೆವಿಮಾ ಕಂಪನಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ತೊಗರಿ ರೈತರಿಗೆ ಬೆಳೆವಿಮಾ ಪರಿಹಾರವನ್ನು ಕೊಡಲು ರಾಜ್ಯ ಸರ್ಕಾರ ಮುಂದೆ ಬರಬೇಕೆಂದು ಆಗ್ರಹಿಸಿದ್ದಾರೆ.

ಬೆಳೆ ಹಾನಿಯಿಂದಾಗಿ ಸಾಲಭಾದೆ ತಾಳಲಾರದೆ ಜಿಲ್ಲೆಯಲ್ಲಿ ಹೊಡೆ ಬಿರನಳ್ಳಿ ರೈತ ಸಾಯಬಣ್ಣಾ ಪೂಜಾರಿ, ಕೊಡದುರು ಗ್ರಾಮದ ರೈತ ಬಸ್ಸಪ್ಪಾ ಹಾಗೂ ರಟಕಲ್ ಗ್ರಾಮದ ರೈತ ಮೈನೊದ್ದಿನ್ ಗೂಡುಬಾಯಿ ಅಲ್ಲದೆ ಖಜುರಿ ಗ್ರಾಮದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎಐಯುಇಸಿ ಕಾರ್ಯಾಧ್ಯಕ್ಷ ಎಂ ಬಿ ಸಜ್ಜನ್‌ ಅವರು, ಡಾ||ಎಂ ಎಸ್ ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನು ಜಾರಿ ಮಾಡಬೇಕು ಮತ್ತು ಪ್ರತಿ ಕ್ವಿಂಟಲ್ ತೊಗರಿಗೆ ರೂ.12,000/- ಬೆಂಬಲ ಬೆಲೆ ನಿಗದಿ ಮಾಡಬೇಕು. ಕಲಬುರಗಿ ತೊಗರಿ ಬೋರ್ಡ್ ಬಲಪಡಿಸಿ ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ 1000 ಪ್ರೋತ್ಸಾಹ ಧನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಎಐಯುಇಸಿ ಉಪಾಧ್ಯಕ್ಷ ಮೇಘ ರಾಜ ಕಠಾರೆ ಅವರು, ಹೊರದೇಶದ ತೊಗರಿ ಮೇಲೆ ಕನಿಷ್ಠ ಶೇ. 50% ರಷ್ಟು ಆಮದು ಸುಂಕವನ್ನು ವಿಧಿಸಬೇಕು. ತೊಗರಿ ಕಟಾವು ಮಾಡಿ ರಾಶಿ ಮಾಡಿಕೊಂಡಿರುವ ಬೆಳೆಗಳನ್ನು ಖರೀದಿ ಮಾಡಲು ತಕ್ಷಣವೇ ಗ್ರಾಮ ಪಂಚಾಯತಿಗೊಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು ಆಗ್ರಹಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಜನವರಿ 17ರಂದು ನಡೆಯುವ ಬಂದ್‌ ಕರೆಗೆ ರೈತಪರ, ಕನ್ನಡಪರ ಮತ್ತು ದಲಿತಪರ ಸಂಘಟನೆಗಳು ಸಹಕರಿಸಬೇಕೆಂದು ಕೋರಿದೆ. ಅಲ್ಲದೆ, ಅಂದು ನಸುಕಿನ 5 ಗಂಟೆಗೆ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹೋರಾಟ ಆರಂಭವಾಗಲಿದ್ದು, ಇದರಲ್ಲಿ ವಿವಿಧ ಸಂಘಟನೆಗಳ ನೇತೃತ್ವದ ಜನತೆ ಭಾಗವಹಿಸಲಿದ್ದಾರೆ. ಅಲ್ಲಿಂದ ಸೂಪರ್‌ ಮಾರ್ಕೆಟ್‌ವರೆಗೆ ಮೆರವಣಿಗೆ ನಡೆಸಿ, ನಂತರ ಬಳಿಕ ಪ್ರತಿಭಟನಾ ಸಭೆ ನಡೆಸಲಾಗುವುದು ತಿಳಿಸಲಾಗಿದೆ.

ಕಲಬುರಗಿ ಬಂದ್‌ ಯಶಸ್ಸಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ರಾಜ್ಯ ರೈತ ಸಂಘ(ಹಸಿರು ಸೇನೆ), ಜನವಾದಿ ಮಹಿಳಾ ಸಂಘಟನೆ, ನವಕರ್ನಾಟಕ ಸ್ವಾಭಿಮಾನ ವೇದಿಕೆ, ವೀರಕನ್ನಡಿಗರ ಸೈನ್ಯ, ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘ, ಅಖಿಲ ಭಾರತ ದಲಿತ ಹಕ್ಕುಗಳ ಸಮಿತಿ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್‌) ಸೇರಿ ಹಲವು ಸಂಘಟನೆಗಳ ಮುಖಂಡರು ಸಭೆಯನ್ನು ನಡೆಸಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *