- ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಕ್ಷಣದಲ್ಲಿ ಮೀಸಲಾತಿ ಕುರಿತು ಪ್ರಧಾನಿಗೆ ಸೀತಾರಾಂ ಯೆಚೂರಿ ಪತ್ರ
ಹೊಸ ರಾಷ್ಟ್ರೀಯ ಶಿಕ್ಷಣ ಧೋರಣೆ(ಎನ್.ಇ.ಪಿ.2020) ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಇತರ ಹಿಂದುಳಿದ ಜಾತಿಗಳು ಮತ್ತು ವಿಕಲಾಂಗರಿಗೆ ‘ಮೀಸಲಾತಿ’ಗಳ ಧೋರಣೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆಯೇ? ಇಲ್ಲವಾದರೆ, ಎನ್‌ಇ.ಪಿ. 2020 ಮೀಸಲಾತಿಗಳ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಏಕೆ ಎಂಬುದನ್ನು ನೀವು ದಯವಿಟ್ಟು ಸ್ಪಷ್ಟೀಕರಿಸುತ್ತೀರಾ? ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ನವಂಬರ್ 23ರಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕೇಳಿದ್ದಾರೆ.
ಎನ್.ಇ.ಪಿ.2020ರ ದಸ್ತಾವೇಜಿನಲ್ಲಿ ಎಲ್ಲಿಯೂ ‘ಮೀಸಲಾತಿ’ ಎಂಬ ಪದವೂ ಕಾಣಿಸಿಕೊಳ್ಳುವುದಿಲ್ಲ. ಇದು, ಇದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆಯೇ, ಈ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ, ಪ್ರಮಾಣ ಮತ್ತು ಸಮತ್ವವನ್ನು ಸಮಗ್ರೀಕರಿಸಿರುವ ಹಲವು ದಶಕಗಳ ಪ್ರಯತ್ನಗಳನ್ನು ತಿರುಗು ಮುರುಗುಗೊಳಿಸುವ ಆಶಯವನ್ನು ತಿಳಿಯಪಡಿಸುತ್ತಿದೆಯೇ ಎಂಬ ವ್ಯಾಪಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಯೆಚುರಿ ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ.
ಪತ್ರ ಹೀಗಿದೆ…
ಶ್ರೀ ನರೇಂದ್ರ ಮೋದಿ
ಪ್ರಧಾನ ಮಂತ್ರಿ
ವಿಷಯ: ‘ರಾಷ್ಟ್ರೀಯ ಶಿಕ್ಷಣ ನೀತಿ ’(ಎನ್.ಇ.ಪಿ.)2020 ರಲ್ಲಿ ‘ಮೀಸಲಾತಿಗಳು’ ಬಗ್ಗೆಯಾವುದೇ ಪ್ರಸ್ತಾಪದ ಅಭಾವ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಮ್ಮ ಸರಕಾರ ಮೊದಲಿಗೆ ಪ್ರಸ್ತಾವಿಸಿದಾಗ ಸಿಪಿಐ(ಎಂ) ಹಲವು ಕಾರಣಗಳಿಂದಾಗಿ ಅದನ್ನು ಸಂಸತ್ತಿನಲ್ಲಿ ವಿರೋಧಿಸಿತ್ತು ಎಂಬುದರತ್ತ ನಿಮ್ಮ ಗಮನ ಸೆಳೆಯಲು ಈ ಪತ್ರ. ನಾವೀಗ, ಯಾವುದೇ ಸಂಸದೀಯ ಮಂಜೂರಾತಿ ಇಲ್ಲದೆ ಎನ್ಇಪಿ-2020ರ ಜಾರಿಯ ಅನಾವರಣವನ್ನು ಕಾಣುತ್ತಿದ್ದೇವೆ. ಈ ವಿಷಯದಲ್ಲಿ ಪ್ರಮುಖ ಪಣಧಾರಿಗಳಾದ ರಾಜ್ಯ ಸರಕಾರಗಳು (ಶಿಕ್ಷಣ ಸಮವರ್ತಿ ಪಟ್ಟಯಲ್ಲಿದೆ), ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಶಿಕ್ಷಣ ತಜ್ಞರು ಮತ್ತು ಇತರ ಪರಿಣಿತರೊಂದಿಗೆ ಚರ್ಚೆಗಳನ್ನು ನಡೆಸುವ ಬದಲು, ಎನ್.ಇ.ಪಿ.ಯ ವಿವಿಧ ಅಂಶಗಳನ್ನು ದೇಶದ ವಿವಿಧ ಭಾಗಗಳಲ್ಲಿ ತಾತ್ಪೂರ್ತಿಕವಾಗಿ, ಬಿಡಿ-ಬಿಡಿಯಾಗಿ ಬಿಚ್ಚಲಾಗುತ್ತಿದೆ. ಇದು ನಿಮ್ಮ ಸರಕಾರ ಈ ಧೋರಣೆಯ ಅಡಿಯಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಪ್ರಸ್ತಾವಿಸಿರುವ ನಿಜವಾದ ದಿಕ್ಕಿನ ಬಗ್ಗೆ ಅನಿಶ್ಚಿತತೆ ಮತ್ತು ಗೊಂದಲವನ್ನು ಉಂಟು ಮಾಡುತ್ತಿದೆ.
ನಾನು ನಿರ್ದಿಷ್ಟವಾಗಿ ಒಂದು ಪ್ರಶ್ನೆಯನ್ನು ಎತ್ತಿ ತೋರಲು ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ಇದು, ವಿಶೇಷವಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ಒಬಿಸಿ ಮುದಾಯಗಳು ಮತ್ತು ವಿಕಲಾಂಗರ ನಡುವೆ ಬಹಳಷ್ಟು ತಲ್ಲಣಗಳನ್ನು ಉಂಟು ಮಾಡಿರುವ ಪ್ರಶ್ನೆ. ಎನ್.ಇ.ಪಿ. ಈ ವಿಭಾಗಗಳಿಗೆ, ತರಗತಿಗಳಿಗೆ ಪ್ರವೇಶದಲ್ಲಿಯಾಗಲೀ, ಅಥವ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿಯಲ್ಲಾಗಲೀ ಮೀಸಲಾತಿಯ ಪ್ರಸ್ತಾಪವನ್ನೇ ಮಾಡುವುದಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ. ನಿಜ ಹೇಳಬೇಕೆಂದರೆ, ಈ ಧೋರಣೆಯ ದಸ್ತಾವೇಜಿನಲ್ಲಿ ಎಲ್ಲಿಯೂ ‘ಮೀಸಲಾತಿ’ ಎಂಬ ಪದವೂ ಕಾಣಿಸಿಕೊಳ್ಳುವುದಿಲ್ಲ. ಇದು, ಇದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆಯೇ, ಈ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ, ಪ್ರಮಾಣ ಮತ್ತು ಸಮತ್ವವನ್ನು ಸಮಗ್ರೀಕರಿಸಿರುವ ಹಲವು ದಶಕಗಳ ಪ್ರಯತ್ನಗಳನ್ನು ತಿರುಗು-ಮುರುಗುಗೊಳಿಸುವ ಆಶಯವನ್ನು ತಿಳಿಯಪಡಿಸಲಾಗುತ್ತಿದೆಯೇ ಎಂಬ ವ್ಯಾಪಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.
ಆದ್ದರಿಂದ, ನಾನು, ಈ ಮುಂದಿನ ಪ್ರಶ್ನೆಗೆ ನಿಮ್ಮ ಸ್ಪಷ್ಟವಾದ ಮತ್ತು ದೃಢತಾಪೂರ್ವಕವಾದ ಸ್ಪಂದನೆಯನ್ನು ಕೇಳುತ್ತಿದ್ದೇನೆ: ಅಂದರೆ, ಎನ್.ಇ.ಪಿ. 2020 ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಇತರ ಹಿಂದುಳಿದ ಜಾತಿಗಳು ಮತ್ತು ವಿಕಲಾಂಗರಿಗೆ ‘ಮೀಸಲಾತಿ’ಗಳ ಧೋರಣೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆಯೇ? ಇಲ್ಲವಾದರೆ, ಎನ್.ಇ.ಪಿ. 2020 ಮೀಸಲಾತಿಗಳ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಏಕೆ ಎಂಬುದನ್ನು ನೀವು ದಯವಿಟ್ಟು ಸ್ಪಷ್ಟೀಕರಿಸುತ್ತೀರಾ?
ನಿಮ್ಮ ವಿಶ್ವಾಸಿ
ಸೀತಾರಾಮ್ ಯೆಚುರಿ
ಪ್ರಧಾನ ಕಾರ್ಯದರ್ಶಿ