ಬೆಂಗಳೂರು: ರಾಜ್ಯದಲ್ಲಿ NEP-2020 ಮತ್ತು ಅದರ ಭಾಗವಾಗಿ ತರಾತುರಿಯಲ್ಲಿ ಹೇರಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಹಿಂಪಡೆಯಲು ಒತ್ತಾಯಿಸಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಜನಸಾಮಾನ್ಯರ ಬೃಹತ್ ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಎಐಡಿಎಸ್ಓ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಅಭಯಾ ದಿವಾಕರ್ ಹೇಳಿದರು.
ಇಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಒ) ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್ಇಸಿ) ಬೆಂಗಳೂರು ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಪದವಿ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರುಗಳು, ಹಲವು ಉಪನ್ಯಾಸಕರು ಹಾಗೂ ಜನಸಾಮಾನ್ಯರು, ರಾಜ್ಯ ಸರ್ಕಾರದ ಎನ್ಇಪಿ-2020 ಅಡಿಯಲ್ಲಿ ಅನುಷ್ಠಾನಕ್ಕೆ ತಂದಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ವಿರೋಧಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ಎಐಎಸ್ಇಸಿ ರಾಜ್ಯ ಉಪಾಧ್ಯಕ್ಷರಾದ ಪ್ರೊ. ಸೋಮಶೇಖರಪ್ಪ ‘ಅತ್ಯಂತ ತರಾತುರಿಯಲ್ಲಿ ರಾಜ್ಯ ಸರ್ಕಾರ ಎನ್ಇಪಿ-2020 ಅನ್ನು ಜಾರಿ ಮಾಡಿದೆ. ಕೇವಲ 15 ದಿನಗಳ ಕಾಲಾವಕಾಶದಲ್ಲಿ ಒಂದು ಹೊಸ ಶೈಕ್ಷಣಿಕ ನೀತಿಯಡಿ ನೂತನ ಪಠ್ಯಕ್ರಮ ರಚಿಸಲು ನನಗೆ ಕರೆ ಬಂದಿತ್ತು. ನಾನು ಅದನ್ನು ತಿರಸ್ಕರಿಸಿದ್ದೆ. ಕಾರಣ, ಕೇವಲ 15 ದಿನಗಳಲ್ಲಿ ಒಂದು ಪಠ್ಯಕ್ರಮ ತಯಾರಿ ಮಾಡಲು ಅಸಾಧ್ಯ ಅಷ್ಟೇ ಅಲ್ಲ, ಆ ಪ್ರಕ್ರಿಯೆ ಅವೈಜ್ಞಾನಿಕ ಎನಿಸಿಕೊಳ್ಳುತ್ತದೆ. ಎನ್ಇಪಿ-2020ಯ ಕಲಿಕಾ ಮಾದರಿಯು ಕೌಶಲ್ಯ ಆಧಾರಿತವಾಗಿ ಇರುತ್ತದೆ. ಇಲ್ಲಿ ನಮಗೆ ಬರುವ ಪ್ರಶ್ನೆ ಎಂದರೆ, ಅ) ಈ ಮಾದರಿಯ ಶಿಕ್ಷಣಕ್ಕೆ ಮಾನ್ಯತೆ ಇದೆಯೇ? ಆ) ಮುಂದುವರೆದು, ಕೌಶಲ್ಯ ಶಿಕ್ಷಣಕ್ಕೆ ಅಗತ್ಯವಾದ ಪಠ್ಯಕ್ರಮ, ಪಠ್ಯಪುಸ್ತಕ ಸಿದ್ಧತೆ ಆಗಿದೆಯೇ? ಈ ಕೌಶಲ್ಯಗಳನ್ನು ಕಲಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗಿದೆಯೇ? ಕೌಶಲ್ಯದ ಹೆಸರಿನಲ್ಲಿ ನೃತ್ಯ, ಸಂಗೀತ ಮುಂತಾದವನ್ನು ಕಲಿಯುವ ವಿದ್ಯಾರ್ಥಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿ ಇದೆಯೇ? ಇವಕ್ಕೆ ಸರ್ಕಾರದ ಬಳಿ ಉತ್ತರ ಇಲ್ಲ. ಇಷ್ಟು ಲೋಪದೋಷಗಳು, ಪೂರ್ವ ತಯಾರಿ ಇಲ್ಲದೇ ಇರುವ ನೀತಿಯನ್ನು ಕ್ರಾಂತಿಕಾರಕ ಎಂದು ಕರೆಯಲು ಹೇಗೆ ಸಾಧ್ಯ?’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಪ್ರತಿಭಟನೆಯಲ್ಲಿ ಎಐಎಡಿಎಸ್ಒ ಜಿಲ್ಲಾ ಅಧ್ಯಕ್ಷೆ ಅಭಯಾ ದಿವಾಕರ್ ಮಾತನಾಡಿ ʻʻಈಗಾಗಲೆ ಪ್ರಥಮ ಡಿಗ್ರಿ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಆದರೂ ಸಹ, ಪಠ್ಯಕ್ರಮ ತಯಾರಾಗಿಲ್ಲ. ಅಂದರೆ, ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳು ಇಲ್ಲ!! ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ ಕಳೆದ 2 ತಿಂಗಳಿನಿಂದ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ. ಇದರೊಂದಿಗೆ, ಎನ್ಇಪಿಯ ನಾಲ್ಕು ವರ್ಷದ ಪದವಿ ಕೋರ್ಸ್ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿಭಾಗದ ಮೂಲ ವಿಷಯದ ಜೊತೆಗೆ ಸಿಬಿಸಿಎಸ್ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್) ಅಡಿಯಲ್ಲಿ ಮತ್ತೊಂದು ವಿಭಾಗದ ವಿಷಯ ಓದಬೇಕು ಎಂಬುದನ್ನು ಹೇಳುತ್ತದೆ. ಅಂದರೆ, ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನ್ನ ವಿಷಯಕ್ಕೆ ಸಂಬಂಧವೇ ಇರದ ವಾಣಿಜ್ಯ / ಕಲಾ ವಿಭಾಗದ ಒಂದು ವಿಷಯ ಓದಲೇಬೇಕು. ಓದುವುದು ನಮ್ಮ ಆಯ್ಕೆಯ ವಿಷಯಕ್ಕೆ ಬದಲಾಗಿ, ಹೇರಿಕೆಯಾಗಿ ಎನ್ಇಪಿಯಲ್ಲಿ ಮಾರ್ಪಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣ ಶೇ.೫೦ ರಷ್ಟು ಏರಿಕೆ ಆಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಸುಮಾರು ಎರಡುವರೆ ಲಕ್ಷದಷ್ಟು ಅಧಿಕ ವಿದ್ಯಾರ್ಥಿಗಳು ಡಿಗ್ರಿ ಪ್ರವೇಶಾತಿಗೆ ಅರ್ಹರಾಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಕಾರವು 50% ಅಧಿಕ ಉಪನ್ಯಾಸಕರನ್ನು ನೇಮಕ ಮಾಡಬೇಕು, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು, ತರಗತಿಗಳ ಸಂಖ್ಯೆಯನ್ನು ಏರಿಸಬೇಕು, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿಯಿರುವ 70% ನಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಿಸುಮಾರು 14 ಸಾವಿರ ಅಥಿತಿ ಉಪನ್ಯಾಸಕರನ್ನು ಖಾಯಂ ಮಾಡುವಲ್ಲಿ ಯೋಚನೆ ನಡೆಸಬೇಕಿತ್ತು. ಆದರೆ, ಸರ್ಕಾರ ಇದರ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಏಕಾಏಕಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿ ಉಪನ್ಯಾಸಕರ ಮೇಲೆ ಹೇರಿದೆ. ಇದನ್ನು ರಾಜ್ಯದ ವಿದ್ಯಾರ್ಥಿಗಳು ಅತ್ಯಂತ ತೀವ್ರವಾಗಿ ಖಂಡಿಸಬೇಕು. ಮುಂದಿನ ದಿನಗಳಲ್ಲಿ ಈ ನೀತಿ ವಾಪಸ್ ಆಗದಿದ್ದರೆ ಒಂದು ಬಲಿಷ್ಠ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಕರೆ ಕೊಟ್ಟರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಎಸ್ಇಸಿ ಬೆಂಗಳೂರು ಕಾರ್ಯದರ್ಶಿಯಾದ ರಾಜೇಶ್ ಭಟ್ ಹಾಗೂ ಉಪಾಧ್ಯಕ್ಷರಾದ ಐಶ್ವರ್ಯ ಮಾತನಾಡಿದರು. ಅಧ್ಯಕ್ಷತೆಯನ್ನು ಎಐಡಿಎಸ್ಒ ಬೆಂಗಳೂರು ಉಪಾಧ್ಯಕ್ಷರಾದ ಅಪೂರ್ವ ವಹಿಸಿದ್ದರು.
ವರದಿ: ಕಲ್ಯಾಣ್ ಕುಮಾರ್