ಕೇಂದ್ರ ಬಜೆಟ್ : NEP ಅನುಷ್ಠಾನಗೊಳಿಸುವ ಬಜೆಟ್

ಬೆಂಗಳೂರು  : ಕೇಂದ್ರ ಬಜೆಟ್ 2022-23, ವ್ಯಾಪಕ ವಿರೋಧಕ್ಕೆ ಒಳಗಾಗಿದ್ದ NEP -2020 ನೀತಿಯನ್ನು ಅನುಷ್ಠಾನಗೊಳಿಸುವ ಬಜೆಟ್ ಆಗಿದೆ. ಈ ಬಾರಿ ಸರ್ಕಾರದ ಪ್ರಮುಖ ಉದ್ದೇಶ ಡಿಜಿಟಲೀಕರಣವಾಗಿದೆ, ಮತ್ತು ಇದೆ NEPಯ ಪ್ರಮುಖ ಅಜೆಂಡಾ ಕೂಡ ಆಗಿದೆ ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.

ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೆಚ್ಚು ಕಡಿಮೆ ಎರಡು ಶೈಕ್ಷಣಿಕ ವರ್ಷ ಕಳೆದು ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಬಜೆಟ್ ನಲ್ಲಿ ‘ ಒಂದು ತರಗತಿ- ಒಂದು ಟಿವಿ ಚಾನೆಲ್ ‘ ಪಿಎಂ – ಇ- ವಿದ್ಯಾ ಕಾರ್ಯಕ್ರಮವನ್ನು ಸುಮಾರು 12 ರಿಂದ 200 ಟಿವಿ ಚಾನೆಲ್ ಗಳ ಮೂಲಕ ಆಯೋಜಿಸಲು ನಿರ್ಧರಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ, ಆನ್ ಲೈನ್ ಶಿಕ್ಷಣದ ಮೇಲೆ ಅವಲಂಬಿತರಾಗಿ ವಿದ್ಯಾರ್ಥಿಗಳು ಪಟ್ಟ ಪಾಡು, ಸಂಕಟದ ಅನುಭವ ಇದ್ದರೂ ಸಹ, ಡಿಜಿಟಲ್ ಮಾಧ್ಯಮದ ಮೂಲಕ ಕಳೆದು ಹೋದ ಎರಡು ವರ್ಷಗಳ ವಿದ್ಯಾಭ್ಯಾಸವನ್ನು ಸರಿದೂಗಿಸುತ್ತೇವೆ ಎನ್ನುವುದು ಸಾಧ್ಯವೇ? ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆರೋಪಿಸಿದ್ದಾರೆ.

ಇಂಟರ್ ನೆಟ್, ಮೊಬೈಲ್ ಫೋನ್, ಟಿವಿ ಮತ್ತು ರೇಡಿಯೋ, ಡಿಜಿಟಲ್ ಶಿಕ್ಷಕರ ಮೂಲಕ ಉತ್ತಮ ಗುಣಮಟ್ಟದ ಇ – ಕಂಟೆಂಟ್ ಅನ್ನು ಎಲ್ಲ ಮಾತನಾಡುವ ಭಾಷೆಗಳಲ್ಲಿ ಒದಗಿಸುತ್ತೇವೆ ಎಂದು ಬಜೆಟ್ ಹೇಳುತ್ತದೆ. ಡಿಜಿಟಲ್ ವಿಶ್ವವಿದ್ಯಾಲಯದ ಬಗ್ಗೆ ಮಾತನಾಡುತ್ತಾ, ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯದಲ್ಲಿ 750 ವರ್ಚುವಲ್ ಲ್ಯಾಬ್ ಗಳನ್ನು ಮತ್ತು 75 ಕೌಶಲ್ಯ ಆಧಾರಿತ ಇ – ಲ್ಯಾಬ್ ಗಳನ್ನು ತೆರೆಯುವ ಯೋಚನೆ ಇದೆ.

ಸೋಮವಾರದಂದು ನಡೆದ ಆರ್ಥಿಕ ಸಮೀಕ್ಷೆಯಲ್ಲಿ, ಸರ್ಕಾರವು ಡಿಜಿಟಲ್ ವಿಭಜನೆ ಅತ್ಯಂತ ಗಂಭೀರವಾಗಿದ್ದು ಇದು ಶೈಕ್ಷಣಿಕ ವಲಯದಲ್ಲಿ ‘ ಗಮನಾರ್ಹ ಪ್ರಭಾವ ‘ ಹೊಂದಿದ್ದು, ದೇಶದ ಲಕ್ಷಾಂತರ ಶಾಲಾ – ಕಾಲೇಜುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ. ಹಾಗಾದರೆ, ಈ ಡಿಜಿಟಲೀಕರಣದಿಂದ ಯಾರಿಗೆ ಲಾಭ? ಭಾರತ ಡಿಜಿಟಲ್ ಮಾರ್ಕೆಟ್ ನಲ್ಲಿ ಎರಡನೇ ಸ್ಥಾನದಲ್ಲಿ ಇರುವುದರಿಂದ ವಾಸ್ತವದಲ್ಲಿ ಈ ಡಿಜಿಟಲ್ ಕಲಿಕಾ ವಿನ್ಯಾಸವು ದೇಶದ ಖಾಸಗಿ ಸಂಸ್ಥೆಗಳು ಲಾಭ ಮಾಡಲು ಸರ್ಕಾರ ಸೃಷ್ಟಿಸಿರುವ ವೇದಿಕೆ ಆಗಿದೆ. ಈ ಡಿಜಿಟಲ್ ಶಿಕ್ಷಣವು ಕ್ಯಾಂಪಸ್ ಗಳಲ್ಲಿ ಶೈಕ್ಷಣಿಕ ವಾತಾವರಣ ಹಾಗೂ ಶಿಕ್ಷಕರ ನೇಮಕಾತಿಯನ್ನು ಅರ್ಥಹೀನಗೊಳಿಸಿ, ಅಳಿವಿನಂಚಿಗೆ ತಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್  ತಿಳಿಸಿದ್ದಾರೆ.

ಶಿಕ್ಷಣ ತಜ್ಞರ ಶಿಫಾರಸಿನಂತೆ ಜಿಡಿಪಿಯಲ್ಲಿ ಶೇ. 6 ರಷ್ಟು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದರ ಹತ್ತಿರವೂ ಈ ಬಜೆಟ್ ಸುಳಿದಿಲ್ಲ. ಅಲ್ಲದೆ, ನ್ಯಾಷನಲ್ ಸ್ಕೀಮ್ ಫಾರ್ ಇನ್ಸೆಂಟೀವ್ ಟು ಗರ್ಲ್ ಮತ್ತು ಪಢನಾ ಲಿಖನಾ ಅಭಿಯಾನ್ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳಿಂದ ಅಧಿಕ ಪ್ರಮಾಣದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಮತ್ತೊಂದು ಗಮನ ಹರಿಸಬೇಕಾದ ಅಂಶವೆಂದರೆ, ಶೈಕ್ಷಣಿಕ ವಲಯಕ್ಕೆ ಬಜೆಟ್ ಮಿಸಲಿಟ್ಟಾಗಿಯು ಪ್ರತಿ ವರ್ಷ ಬಜೆಟ್ ನ ದೊಡ್ಡ ಮೊತ್ತ ಬಳಕೆಯಾಗದೆ ಹಾಗೆ ಉಳಿಯುತ್ತಿದೆ. ಶಾಲಾ ಕಾಲೇಜುಗಳ ಅತ್ಯಂತ ಕಳಪೆ ಮಟ್ಟದ ಮೂಲ ಸೌಕರ್ಯಗಳನ್ನು ನೋಡಿದರೆ ನಮಗೆ ಇದು ಅರಿವಾಗುತ್ತದೆ.

ಭಾರತದ ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ (ಸಿಎಜಿ) ಪ್ರಕಾರ, ಶಿಕ್ಷಣ, ನೈರ್ಮಲ್ಯ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಸುಮಾರು 2.18 ಲಕ್ಷ ಕೋಟಿಯಷ್ಟು ರೂಪಾಯಿ ಬಳಕೆಯಾಗದೆ ಉಳಿದಿದೆ. ಅಂದರೆ, ಸರ್ಕಾರದ ಬಳಿ ಹಣದ ಕೊರತೆ ಇಲ್ಲ, ಬದಲಾಗಿ ಜನ ಪರವಾದ ಕಾಳಜಿಯಲ್ಲಿ ಕೊರತೆ ಇದೆ.

ಇದರೊಂದಿಗೆ, ಮಾನ್ಯ ಹಣಕಾಸು ಮಂತ್ರಿಗಳು ಶೈಕ್ಷಣಿಕ ವಲಯದಲ್ಲಿ ವಿದೇಶಿ ಬಂಡವಾಳವನ್ನು ಹೂಡಿಕೆ ಮಾಡುವುದರ ಕುರಿತು ಸಹ ಮಾತನಾಡಿ, ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಾರ್ಪೊರೇಟ್ ವಲಯಗಳ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಸಿಟಿ (GIFT – ಸಿಟಿ) ಯಲ್ಲಿ ಒಂದು ವಿದೇಶಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ಹಣಕಾಸು ನಿರ್ವಹಣೆ, ಫಿನ್ – ಟೆಕ್, ಗಣಿತಶಾಸ್ತ್ರ ಮುಂತಾದ ಕೋರ್ಸ್ ಗಳನ್ನು ತೆರೆಯುವ ಯೋಜನೆ ನಡೆಸಿದ್ದಾರೆ.

ಈ ಪ್ರಸ್ತುತ ಬಜೆಟ್ ಕಡು ಜನ – ವಿರೋಧಿ, ವಿದ್ಯಾರ್ಥಿ – ವಿರೋಧಿಯಾಗಿದೆ ಎಂದು AIDSO ರಾಜ್ಯ ಸಮಿತಿ ಅಭಿಪ್ರಾಯ ಪಡುತ್ತದೆ. ರಾಜ್ಯದ ವಿದ್ಯಾರ್ಥಿಗಳು ಒಟ್ಟಾಗಿ ಈ ಬಜೆಟ್ ಅನ್ನು ತಿರಸ್ಕರಿಸಬೇಕು ಮತ್ತು ಇದರೊಂದಿಗೆ NEP – ವಿರೋಧದ ಹೋರಾಟಕ್ಕೆ ಸಜ್ಜಾಗಬೇಕು ಎಂದು AIDSO ಕರೆ ನೀಡುತ್ತದೆ.

Donate Janashakthi Media

Leave a Reply

Your email address will not be published. Required fields are marked *