ಬಿ. ಶ್ರೀಪಾದ ಭಟ್
ಇಲ್ಲಿನ ಕೆಲ ಶಿಕ್ಷಣ ತಜ್ಞರು, ಶಿಕ್ಷಣ ಚಳುವಳಿಯಲ್ಲಿರುವವರು 2015 ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆಯ ಮತ್ತು 2020ರ ಕಸ್ತೂರಿ ರಂಗನ್ ಅದ್ಯಕ್ಷತೆಯ ಹೊಸ ಶಿಕ್ಷಣ ನೀತಿ (ಎನ್ ಇಪಿ 2020) ಕುರಿತು ನಿರಂತರವಾಗಿ ಚರ್ಚೆ, ಸಂವಾದ ಸೆಮಿನಾರ್ ನಡೆಸಿದ್ದೆವು ಮತ್ತು ವಿದ್ಯಾರ್ಥಿ ಸಂಘಟನೆಗಳ ಮೂಲಕ ಶಿಕ್ಷಣದ ಭಾಗೀದಾರರನ್ನು ತಲುಪಲು ಪ್ರಯತ್ನಿಸಲಾಯಿತು
ಈ ಎನ್ ಇಪಿ ಸಮಿತಿಯಲ್ಲಿ ಶಿಕ್ಷಣ ತಜ್ಞರಿಲ್ಲ, ಅದು ಇಲ್ಲಿನ 29 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶದೊಂದಿಗೆ (2018ರಲ್ಲಿ ಜಮ್ಮುಕಾಶ್ಮೀರ ರಾಜ್ಯವಾಗಿತ್ತು) ಸಮಗ್ರವಾಗಿ ಸಮಾಲೋಚನೆ ಮಾಡಲಿಲ್ಲ ಮತ್ತು ಶಿಕ್ಷಣದ ಭಾಗೀದಾರರೊಂದಿಗೂ ಚರ್ಚಿಸಲಿಲ್ಲ ಹೀಗಾಗಿ ಇದರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ ಎಂದು ಪದೇ ಪದೇ ಎಚ್ಚರಿಸಲಾಗಿತ್ತು
ಈ ಎನ್ ಇಪಿಯನ್ನು ಸಂಸತ್ತಿನಲ್ಲಿ ಚರ್ಚಿಸದೆ ನೇರವಾಗಿ ಜಾರಿಗೊಳಿಸುತ್ತಿರುವುದರ ಕಾರಣ ಹೇಗೆ ಸಂವಿಧಾನಬಾಹಿರವಾಗಿದೆ, ಅದರ ರಚನೆಯೇ ಶಾಸನಬದ್ಧವಾಗಿಲ್ಲ, ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸದೆ ಎಕಪಕ್ಷೀಯವಾಗಿ ಜಾರಿಗೊಳಿಸುವುದರ ಮೂಲಕ ಅದು ಶೆಡ್ಯೂಲ್ 7ನ ನೀತಿಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ವಿವರಿಸಲಾಯಿತು
ನಂತರ ಆ 484 ಪುಟಗಳ ಕಸ್ತೂರಿ ರಂಗನ್ ವರದಿಯೊಳಗಿನ ಮಿಥ್ ಗಳು, ಅವೈಜ್ಞಾನಿಕ ಚಿಂತನೆಗಳು ಮತ್ತು ಪ್ರಾಚೀನ ಗುರುಕುಲ ಪದ್ಧತಿ, ಆ ಕಾಲದ ವೇದ ಪುರಾಣಗಳನ್ನು ವೈಭವೀಕರಿಸುವುದರ ಮೂಲಕ ಆರೆಸ್ಸೆಸ್ ಸಿದ್ದಾಂತವನ್ನು ಜಾರಿಗೊಳಿಸಲು ಶಿಫಾರಸು ಮಾಡುತ್ತಿದೆ ಎಂದು ವಿವರಿಸಲಾಯಿತು
ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಅದು ಸೂಚಿಸುವ ಬದಲಾವಣೆಗಳು ವಂಚಿತ ಸಮುದಾಯಗಳ ಶೈಕ್ಷಣಿಕ ಭವಿಷ್ಯವನ್ನೇ ಮೊಟಕುಗೊಳಿಸುತ್ತದೆ ಎಂದು ಸಾಕ್ಷಿ ಸಮೇತ ವಿವರಿಸಲಾಯಿತು
ಸಂಸ್ಕೃತವನ್ನು ಕಡ್ಡಾಯಗೊಳಿಸುವುದರ ಮೂಲಕ ಶಿಕ್ಷಣದ ಬ್ರಾಹ್ಮಣೀಕರಣಕ್ಕೆ ಮುಂದಾಗುತ್ತಿರುವುದನ್ನು ವಿವರಿಸಲಾಯಿತು ಆ ಸಮಿತಿ ಕಣ್ಣೊರೆಸುವ ತಂತ್ರವಾಗಿ ಸ್ಥಳೀಯ ಭಾಷೆಗಳ ಪ್ರಾಮುಖ್ಯತೆ ಮತ್ತು ಮಾತೃಭಾಷೆ ಶಿಕ್ಷಣದ ಕುರಿತು ಮಾತನಾಡುತ್ತಿದೆ, ಆದರೆ ಅದರ ಪ್ರಕಾರ ಸಂಸ್ಕೃತ, ಹಿಂದಿ ಪ್ರಮುಖವಾದ ಸ್ಥಳೀಯ ಭಾಷೆಗಳು ಮತ್ತು ಇದನ್ನು ಮಾತ್ರ ಪ್ರಾಮುಖ್ಯವಾಗಿ ಪರಿಗಣಿಸುತ್ತದೆ ಎಂದು ಅದರ ಗುಪ್ತ ಕಾರ್ಯಸೂಚಿಯನ್ನು ವಿವರಿಸಲಾಯಿತು
ಇನ್ನೂ ಆ ಸಮಿತಿಯ ಅನೇಕ ಮಿತಿಗಳನ್ನು ವಿವರಿಸಲಾಯಿತು, ಪುಟಗಟ್ಟಲೆ ಬರೆಯಲಾಯಿತು, ಪಿಪಿಟಿ ಮೂಲಕವೂ ವಿವರಿಸಲಾಯಿತು. ಆದರೆ ಈ ಎಲ್ಲಾ ಪ್ರಯತ್ನಗಳಿಗೆ ಇಲ್ಲಿನ ಬಹುತೇಕ ಪ್ರಜ್ಞಾವಂತರು ತಣ್ಣಗೆ ಪ್ರತಿಕ್ರಿಯಿಸಿದರು. ಹಲವರು ಸಿನಿಕತನದಿಂದ ಉತ್ತರಿಸಿದರು. ಬಹುತೇಕರು ನಿರಾಸಕ್ತಿ ತೋರಿಸಿದರು.
ಆದರೆ ಕರ್ನಾಟಕದ ಬಿಜೆಪಿ ಸರಕಾರ ಎನ್ ಇಪಿ ಜಾರಿಗೊಳಿಸಲು ನಿರ್ದರಿಸಿದಾಗ ಇದರ ವಿರುದ್ಧ ಆತಂಕ ವ್ಯಕ್ತಪಡಿಸಿದರು, ಚರ್ಚೆ, ಸಂವಾದ, ಪ್ರತಿಭಟನೆ ನಡೆಸಲಾಯಿತು
ಆದರೆ ಆರೆಸ್ಸಸ್ ನ ದೈತ್ಯ ಶಕ್ತಿಯ ಮುಂದೆ ಈ ಪ್ರತಿರೋಧ ಅಲೆಯಂತೆ ಆವರಿಸಿಕೊಳ್ಳಲಿಲ್ಲ ನಾವು ಜನಾಂದೋಲನ ರೂಪಿಸಲು ವಿಫಲರಾದೆವು
ಈಗ ಬಿಲದಿಂದ ಹಾವು ಹೊರಬರುತ್ತಿದೆ ಇಲ್ಲಿನ ಬಿಜೆಪಿ ಸರಕಾರ ಎನ್ ಇಪಿ ಜಾರಿಗೊಳಿಸಲು ನೇಮಿಸಿದ 26 ಸಮಿತಿಗಳ position papers ಒಂದೊಂದಾಗಿ ಪ್ರಟಕಗೊಳ್ಳುತ್ತಿದೆ ಆರೆಸ್ಸೆಸ್ ಸಿದ್ದಾಂತಗಳನ್ನು ಶಿಫಾರಸ್ಸು ಮಾಡುತ್ತಿದೆ. ವೈಜ್ಞಾನಿಕ ಶಿಕ್ಷಣವನ್ನೇ ತಿರಸ್ಕರಿಸುತ್ತಿದೆ. ಹಾಲು, ಮೊಟ್ಟೆ ಹಾನಿಕರ ಎಂದು ಹೇಳುತ್ತಿದೆ.
ಇದನ್ನು ಓದಿ ಇದರ ಅಪಾಯಗಳ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದರ ಬ್ರಾಹ್ಮಣೀಕರಣದ ಕುರಿತು ಬರೆಯುತ್ತಿದ್ದಾರೆ. ನಿಜಕ್ಕೂ ಇದು ಸ್ವಾಗತಾರ್ಹ. ಆದರೆ ಏಳು ವರ್ಷಗಳಿಂದ
ಎನ್ ಇಪಿ ವಿರುದ್ಧ ನಿರಂತರವಾಗಿ ಪ್ರತಿಭಟಿಸಿದ್ದರೆ, ಅದರ ವಿರುದ್ಧ ಜನಾಂದೋಲನ ರೂಪಿಸಿದ್ದರೆ ಕನಿಷ್ಠ ಇಂದಿನ ಅಸಹಾಯಕ ಪರಿಸ್ಥಿತಿ ತಲುಪುತ್ತಿರಲಿಲ್ಲ. ಸರಕಾರದ ನಿರ್ದಾರವು ಚಣಕಾಲ ಸ್ಥಗಿತಗೊಳ್ಳುತ್ತಿತ್ತು
ಆದರೆ ಸಕ್ರಿಯವಾಗಬೇಕಾದ ಸಂದರ್ಭದಲ್ಲಿ ನಿಷ್ಕ್ರಿಯವಾಗುವ ನಮ್ಮ ಜಾಯಮಾನದ ಫಲವೇ ಇಂದಿನ ದುಸ್ಥಿತಿ. ತುಂಬಾ ತಡವಾದ ನಂತರ ಕೈಯೂರಿ ಎದ್ದೇಳಲು ಪ್ರಯತ್ನಿಸುತ್ತೇವೆ
ಇರಲಿ, ಇನ್ನೂ ಕಾಲ ಮಿಂಚಿಲ್ಲ