ನವ-ಉದಾರವಾದ ಸಾಮೂಹಿಕ ಬಡತನವನ್ನು ಹೆಚ್ಚಿಸಿದೆ

-ಪ್ರೊ.ಉತ್ಸಾಪಟ್ನಾಯಕ್

ಅನು: ಕೆ.ವಿ.

ಬಡತನದ ಇಳಿದಿದೆ ಎಂಬ ಅಧಿಕೃತ ದಾವೆಗಳನ್ನು ನಂಬುವವರು, ‘ಬಡತನ ಕಡಿಮೆಯಾಗಿರುವಾಗ ಹಸಿವು ಹೆಚ್ಚಲು ಹೇಗೆ ಸಾಧ್ಯ?’ ಎಂದು ಕೇಳುತ್ತಿದ್ದಾರೆ. ಆದರೆ ಕೇಳಬೇಕಾಗಿರುವ ಪ್ರಶ್ನೆಯೆಂದರೆ ‘ಹಸಿವು ಹೆಚ್ಚಾಗಿರುವಾಗ ಬಡತನ ಹೇಗೆ ತಾನೇ ಕಡಿಮೆಯಾಗಲು ಸಾಧ್ಯ?’. ವಾಸ್ತವವಾಗಿ ಕಳೆದ ಮೂರು ದಶಕಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಬಡವರ ಪ್ರಮಾಣ ಇಳಿ ಮುಖವಾಗುವ ಬದಲು ಗಮನಾರ್ಹವಾಗಿ ಏರಿದೆ. ಈ ಅಧಿಕೃತ ಸುಳ್ಳು ದಾವೆಗಳು ದಕ್ಷಿಣಗೋಳಾರ್ಧದ ದೇಶಗಳ ಸರ್ಕಾರಗಳು ಮತ್ತು ವಿಶ್ವ ಬ್ಯಾಂಕ್‌ ತಾವೇ ಸೃಷ್ಟಿಸಿಕೊಂಡಿರುವ ಗೋಜಲು ಮತ್ತು ಅದರ ಪರಿಣಾಮವಾಗಿ ಒಂದು ಸರಳ ತಾರ್ಕಿಕ ತಪ್ಪಿನ ಫಲಿತಾಂಶ.

ನವ- ಉದಾರವಾದಿ ಆರ್ಥಿಕ ನೀತಿಗಳನ್ನು ನೋಡಿದ ಕಳೆದ ಮೂರು ದಶಕಗಳಲ್ಲಿ ಜಾಗತಿಕ ದಕ್ಷಿಣದಲ್ಲಿ ಲಕ್ಷಾಂತರ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ಮತ್ತು ಸರ್ಕಾರಗಳ ಹೇಳಿಕೆಗಳಿಂದ ಮಾಧ್ಯಮಗಳು ತುಂಬಿವೆ. ಈ ವರ್ಷದ ಆರಂಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀತಿ ಆಯೋಗವು 2022-23ರ ವೇಳೆಗೆ ಭಾರತವು ಶೂನ್ಯ ಬಡತನದ ಸಮೀಪದಲ್ಲಿದೆ, ಇದು ಈ‍ಗ ಜನಸಂಖ್ಯೆಯ ಶೇಕಡಾ 5 ರಷ್ಟು ಜನಗಳನ್ನು ಮಾತ್ರ ತಟ್ಟಿದೆ ಎಂದು ಹೇಳಿಕೊಂಡಿದೆ. ಆದರೆ ಪೌಷ್ಠಿಕಾಂಶದ ಸೇವನೆಯ ನಿಷ್ಠುರದತ್ತಾಂಶಗಳು ಕಳೆದ ಮೂರು ದಶಕಗಳಲ್ಲಿ ಹಸಿವು ಬಹಳವಾಗಿ ಏರಿದೆ ಎಂದು ತೋರಿಸುತ್ತವೆ, ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಮೂರನೇ ಎರಡಕ್ಕಿಂತಲೂ ಹೆಚ್ಚು ಮಂದಿಗೆ ಕ್ಯಾಲೊರಿ ಮತ್ತು ಪ್ರೋಟೀನ್‌  ಸೇವನೆಯ ದೃಷಿಯಿಂದಲೂ ಕನಿಷ್ಠ ಅಗತ್ಯಗಳಿಗೆ ಸಾಕಷ್ಟು ಖರ್ಚುಮಾಡಲು ಸಾಧ್ಯವಾಗುತ್ತಿಲ್ಲ; ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಅತ್ಯಂತ ಕೆಳಗಿನ ಶ್ರೇಯಾಂಕವು (2023 ರಲ್ಲಿ 125 ದೇಶಗಳಲ್ಲಿ 111) ಮುಂದುವರಿದಿದೆ ಮತ್ತು ಕೆಲವು ಆರೋಗ್ಯ ಸೂಚಕಗಳು ಸುಧಾರಿಸಿದ್ದರೂ, ಇತರವು ಹದಗೆಟ್ಟಿವೆ.

ಇದನ್ನೂ ಓದಿ: ನವೀಕರಿಸಬಹುದಾದದ ಇಂಧನ ವಲಯದಿಂದ ಉದ್ಯೋಗ ಸೃಷ್ಟಿ: ಗೌರವ್‌ಗುಪ್ತಾ

ಅಧಿಕೃತದಾವೆಗಳನ್ನು ನಂಬುವವರು, ‘ಬಡತನ ಕಡಿಮೆಯಾಗಿರುವಾಗ ಹಸಿವು ಹೆಚ್ಚಲು ಹೇಗೆ ಸಾಧ್ಯ?’ ಎಂದು  ಕೇಳುತ್ತಿದ್ದಾರೆ. ಆದರೆ ಕೇಳಬೇಕಾಗಿರುವ ಪ್ರಶ್ನೆಯೆಂದರೆ ‘ಹಸಿವು ಹೆಚ್ಚಾಗಿರುವಾಗ ಬಡತನ ಹೇಗೆ ತಾನೇ ಕಡಿಮೆಯಾಗಲು ಸಾಧ್ಯ?’. ತರ್ಕಹೀನ ಮತ್ತು ಪಾರದರ್ಶಕವಲ್ಲದ ಲೆಕ್ಕಾಚಾರದ ವಿಧಾನಗಳನ್ನು ಆಧರಿಸಿದ ಅಧಿಕೃತ ಬಡತನದ ಅಂದಾಜುಗಳಿಗೆ ತದ್ವಿರುದ್ಧವಾಗಿ, ಹಸಿವು ಹೆಚ್ಚಿದೆ ಎಂಬುದು ಸುಲಭವಾಗಿ ಲಭ್ಯವಿರುವ ಮತ್ತು ಪರಿಶೀಲಿಸಬಹುದಾದ ಅಂಕಿ-ಅಂಶಗಳ ಮೇಲೆ ಆಧರಿತವಾಗಿವೆ, ಇದು ಬಡತನ ಬೃಹತ್‌ ಪ್ರಮಾಣದಲ್ಲಿ ಇಳಿದಿದೆ ಎಂಬುದು ಕಪಟದಾವೆ ಎಂದು ನಿರೂಪಿಸುತ್ತದೆ. ಬಡತನದ ಇಳಿದಿದೆ ಎಂಬ ಕಪಟದಾವೆಗೆ ವಿಶ್ವ ಬ್ಯಾಂಕ್‌ನ ತರ್ಕಹೀನ ವಿಧಾನದ ಆಶೀರ್ವಾದವಿದೆ.

ಏಕೆ ತರ್ಕಹೀನ-ನಕಲಿ?

ಅಧಿಕೃತ ವಿಧಾನವು ಏಕೆ ತರ್ಕಹೀನವಾಗಿದೆ, ಬಡತನ ಇಳಿದಿದೆ ಎಂಬ ತೀರ್ಮಾನವು ಏಕೆ ನಕಲಿಯಾಗಿದೆ? ಏಕೆಂದರೆ ಅದರ ವಿಧಾನವು ಬಡತನದ ರೇಖೆಗಳನ್ನು ಕ್ರಮೇಣ ಕೀಳಂದಾಜು ಮಾಡುತ್ತ ಬಂದಿದೆ. ಇದರಿಂದಾಗಿ ಈ ಬಡತನ ರೇಖೆಗಳನ್ನು ಲೆಕ್ಕಹಾಕುವಲ್ಲಿ ಪರಿಗಣಿಸ ಬೇಕಾದ ಜನಗಳ ಪೋಷಕಾಂಶಗಳ ಪ್ರಮಾಣ ಇಳಿಯುತ್ತ ಬಂದಿದೆ. ಯಾವುದೇ ನಿಜವಾದ ಹೋಲಿಕೆ ಮಾಡಲು, ಮಾನದಂಡವು ಸ್ಥಿರವಾಗಿರ ಬೇಕು. ಉದಾಹರಣೆಗೆ, ಒಂದು ಶಾಲೆಯು 30 ವರ್ಷಗಳ ಅವಧಿಯಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣರಾಗಿರುವವರ ಪ್ರಮಾಣ 55% ದಿಂದ 5%ಕ್ಕೆ ಇಳಿದಿದೆ ಎಂದು ಹೇಳಿಕೊಳ್ಳುವಾಗ, ಉತ್ತೀರ್ಣರಾಗುವ ಅಂಕಗಳನ್ನು ಆರಂಭದಲ್ಲಿ ಇದ್ದ 50%ದಿಂದ ಸದ್ದಿಲ್ಲದೆ ಇಳಿಸುತ್ತ ಬಂದು 30ನೇ ವರ್ಷದ ಕೊನೆಯಲ್ಲಿ ಅದು 15%ಕ್ಕೆ ಇಳಿದಿದೆ ಎಂದು ತಿಳಿದರೆ ಅದನ್ನು ಹೇಗೆ ತಾನೇ ನಂಬಲು ಸಾಧ್ಯ?

ಅದೇ ರೀತಿ, 1973-74ರಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬಡತನರೇಖೆಯನ್ನು ನಿರ್ಧರಿಸಲು, ನಗರಗಳಲ್ಲಿ 2,200 ಕ್ಯಾಲೋರಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2,100 ಕ್ಯಾಲೋರಿ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗ ಬೇಕೆಂಬ ಪರಿಕಲ್ಪನೆಯಿತ್ತು, ನಾಲ್ಕು ದಶಕಗಳ ನಂತರ ಬಹಳಷ್ಟು ರಾಜ್ಯಗಳಲ್ಲಿ ಆಹಾರ ಸೇವನೆಯ ಪ್ರಮಾಣವನ್ನು 1700 ಕ್ಯಾಲರಿಗೆ ಮತ್ತು ಪೊಟೀನ್ ಸೇವನೆಯ ಪ್ರಮಾಣವನ್ನು ಕೂಡ ಇಳಿಸಿ ಬಡತನ ರೇಖೆಗಳನ್ನು ಲೆಕ್ಕ ಹಾಕಲಾಗಿದೆ ಎಂದಿದ್ದರೆ, ಇದರ ಆಧಾರದಲ್ಲಿ ಬಡತನ ಇಳಿದಿದೆ ಎಂಬದಾವೆಗೆ ಅರ್ಥವಿರುವುದಿಲ್ಲ. ತೆಂಡೂಲ್ಕರ್ಸಮಿತಿಯ ಬಡತನ ರೇಖೆಗಳ ಪ್ರಕಾರ (ಪ್ರಸ್ತುತ ನೀತಿ ಆಯೋಗ ಅದನ್ನೇ ಅನುಸರಿಸುತ್ತಿದೆ) 2011-12 ರಲ್ಲಿ ಗ್ರಾಮೀಣ ಗುಜರಾತ್‌ನಲ್ಲಿ ಬಡತನದ ರೇಖೆ ತಲಾಮಾಸಿಕವೆಚ್ಚ 932 ರೂ.ನಲ್ಲಿ 21.9 ಶೇ.ದಷ್ಟಿತ್ತು. ಆದರೆಇದರಲ್ಲಿಆಹಾರಸೇವನೆಯಮಟ್ಟವುಕೇವಲ 1,670 ಕ್ಯಾಲೊರಿಗಳು ಎಂದು ಕಂಡು ಬರುತ್ತದೆ. 2,200 ಕ್ಯಾಲೊರಿಗಳ ಸೇವನೆಗೆ ರೂ 2,000 ಬೇಕಿತ್ತು, ಅಂದರೆ ಅಧಿಕೃತ ಬಡತನ ರೇಖೆಗಿಂತ ಎರಡು ಪಟ್ಟು ಹೆಚ್ಚು ಖರ್ಚುಮಾಡ ಬೇಕಾಗಿತ್ತು. ಇದನ್ನು ಪರಿಗಣಿಸಿದರೆ, 87ಶೇ. ಮಂದಿ ಈ ಮಟ್ಟಕ್ಕಿಂತ ಕೆಳಗಿದ್ದಾರೆ. 21.9 ರಷ್ಟು ಅಧಿಕೃತ ಬಡತನ ಮತ್ತು ಶೇಕಡಾ 87 ರ ನೈಜ ಬಡತನ.!

ಗ್ರಾಮೀಣ ಪಂಜಾಬ್‌ನಲ್ಲಿ, ಅಧಿಕೃತ ಬಡತನ 7.7ಶೇ. ಇದರಲ್ಲಿ ಪರಿಗಣಿಸಿದ ಆಹಾರ ಸೇವನೆಯ ಪ್ರಮಾಣ ದಿನಕ್ಕೆ 1,800 ಕ್ಯಾಲೊರಿಗಳು. ಇದು 2,200 ಕ್ಯಾಲೊರಿ ಎಂದು ಲೆಕ್ಕ ಹಾಕಿದರೆ, 38 ಶೇ.ದಷ್ಟು ಜನರು ಬಡತನ ರೇಖೆಯ ಕೆಳಗೆ ಬೀಳುತ್ತಾರೆ. 2009 ರಲ್ಲಿ ಗ್ರಾಮೀಣ ಪುದುಚೇರಿಯಲ್ಲಿಅಧಿಕೃತ ಬಡತನದ ಪ್ರಮಾಣ 0.2 ಶೇ. ದಷ್ಟಿತ್ತು, ಅಂದರೆ ಸುಮಾರಾಗಿ ಬಡವರೇ ಇಲ್ಲ ಎಂದಾಗುತ್ತದೆ. ಆದರೆ ಇದನ್ನು ಲೆಕ್ಕ ಹಾಕಿದ್ದು, ಕೇವಲ 1040 ಕ್ಯಾಲೊರಿ ಆಹಾರ ಸೇವನೆಯಲ್ಲಿ ಎಂದು ಪರಿಗಣಿಸಿ. ಆದರೆ ವಾಸ್ತವವಾಗಿ ಬಡವರು 2200 ಕ್ಯಾಲೋರಿ ಮಾನ ದಂಡವನ್ನು ತಲುಪಲು ಸಾಧ್ಯವಾಗದವರ ಪ್ರಮಾಣ 58 ಶೇ.! ಅಧಿಕೃತ ಬಡತನ ರೇಖೆಯನ್ನು ಎಷ್ಟು ಕೆಳಮಟ್ಟದಲ್ಲಿ ಇಡಲಾಗಿದೆ ಎಂದರೆ, ಅದರ ಕೆಳಗೆ ಜನ ಬದುಕಿರಲೂ ಸಾಧ್ಯವಿಲ್ಲ! ಆದ್ದರಿಂದ ಲೆಕ್ಕಕ್ಕೇ ಬರುವುದಿಲ. ಇದೇ ರೀತಿ ನಗರ ಪ್ರದೇಶದಲ್ಲಿಯೂ ಬಡತನ ಹೆಚ್ಚುತ್ತಲೇ ಬಂದಿರುವುದನ್ನು ನೋಡಬಹುದು.

ಹಸಿವಿನ ರೇಖೆ

ಬಡತನದ ಪ್ರಮಾಣ ಕೇವಲ 5ಶೇ. ಎನ್ನುವ ನೀತಿ ಆಯೋಗದ ದಾವೆ ತೆಂಡೂಲ್ಕರ್ಸಮಿತಿಯ ಬಡತನ ರೇಖೆಯನ್ನು 2023-24 ಬೆಲೆ ಸೂಚ್ಯಂಕಕ್ಕೆ ಹೊಂದಿಸಿ ಮಾಡಿರುವ ಲೆಕ್ಕಾಚಾರವನ್ನು ಆಧರಿಸಿದೆ. ಈ ರೀತಿಯಲ್ಲಿ ಬಡತನ ರೇಖೆಗಳನ್ನು 2023-24 ಕ್ಕೆಮುಂದಕ್ಕೆ ತಂದಾಗ, ಗ್ರಾಮೀಣ/ನಗರ ಪ್ರದೇಶಗಳಿಗೆ ಪ್ರತಿದಿನ ತಲಾವೆಚ್ಚ ರೂ 57/ ರೂ.69 ಆಗುತ್ತದೆ. ಇದರಲ್ಲಿ ಆಹಾರದ ಭಾಗವು ಅನುಕ್ರಮವಾಗಿ ರೂ. 26.6 ಮತ್ತು ರೂ. 27 ಮತ್ತು ಆಹಾರೇತರ ಭಾಗವು ರೂ. 30.4 ಮತ್ತು ರೂ. 42.

ಬಾಡಿಗೆ, ಸಾರಿಗೆ, ಆರೋಗ್ಯ ಪಾಲನೆ ಮತ್ತು ತಯಾರಿಸಿದ ಸರಕುಗಳನ್ನು ಪಡೆಯಲು (ಶಿಕ್ಷಣ ಮತ್ತು ಮನರಂಜನೆಯನ್ನು ಬಿಟ್ಟು) ಒಬ್ಬ ವ್ಯಕ್ತಿಯ ಕನಿಷ್ಠ ಆಹಾರೇತರ ದೈನಂದಿನ ಅಗತ್ಯಗಳನ್ನು ದಿನಕ್ಕೆ 30.4 ರೂ.ನಿಂದ ಅಥವ ರೂ.42 ರಲ್ಲಿ ಪೂರೈಸಬಹುದು ಎಂದು ಯೋಚಿಸುವುದು ವಾಸ್ತವತೆಯ ಅರಿವಿರುವ ಯಾರಿಂದಲೂ ಸಾಧ್ಯವಿಲ್ಲ, ಅಧಿಕೃತ ಅಂದಾಜುಗಾರರಿಗೆ ಮಾತ್ರ ಅದು ಸಾಧ್ಯ. ಅವರು ಬಡತನದ ರೇಖೆ ಎಂದು ಕರೆಯುವಂತದ್ದು ದಟ್ಟ ದಾರಿದ್ರ್ಯ ಮತ್ತು ಹಸಿವಿನ ರೇಖೆಗಳು; ಅವರ ಪ್ರಕಾರ ಗ್ರಾಮೀಣ ಜನ ಸಂಖ್ಯೆಯ 6.6 ಶೇ. ಮತ್ತು ನಗರ ಜನ ಸಂಖ್ಯೆಯ 1.6 ಶೇ. ಜನರು ಇನ್ನೂ ಮನುಷ್ಟ ಮಾತ್ರರು ಬದುಕಿರಲಾಗದ ಈ ಮಟ್ಟದಲ್ಲಿ ಉಳಿದುಕೊಂಡಿದ್ದಾರೆ. ಇದನ್ನು ಹೀಗೇ ಮುಂದುವರೆಸಿದರೆ, ಇನ್ನು ಮೂರು ವರ್ಷಗಳಲ್ಲಿ, ಅಧಿಕೃತವಾಗಿ ‘ಶೂನ್ಯ ಬಡತನ’ ಎಂದು ಹೇಳಿಕೊಳ್ಳುವ ಸಾಧ್ಯತೆಯಿದೆ, ಏಕೆಂದರೆ ಅಧಿಕೃತ ಬಡತನ ರೇಖೆಗಳ ಕೆಳಗೆಯಾರೂ ಬದುಕುಳಿದಿರಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಂಕವು( ಪಾಸ್ಮಾರ್ಕ್) ಶೂನ್ಯವನ್ನು ತಲುಪಿದರೆ, ಅನುತ್ತೀರ್ಣರಾಗಿರುವವರ ಸಂಖ್ಯೆ ಶೂನ್ಯ ತಾನೇ.

ಕಳೆದ ಮೂರು ದಶಕಗಳಲ್ಲಿ ಗ್ರಾಮೀಣ ಮತ್ತು ನಗರಗಳೆರಡರಲ್ಲೂ ವಾಸ್ತವವಾಗಿ ಬಡವರ ಪ್ರಮಾಣ ಇಳಿ ಮುಖವಾಗುವ ಬದಲು ಗಮನಾರ್ಹವಾಗಿ ಏರಿದೆ. 1993-94 ರಲ್ಲಿ, ಬಡವರು ಗ್ರಾಮೀಣ/ನಗರ ಪ್ರದೇಶಗಳಲ್ಲಿ ಅನುಕ್ರವಾಗಿ ಶೇ 58.5 ಮತ್ತು 57 ರಷ್ಟಿದ್ದರು. ಏಕೆಂದರೆ ಅವರು ದಿನಕ್ಕೆ 2200/2100 ಕ್ಯಾಲೋರಿಗಳ ಪೌಷ್ಟಿಕಾಂಶದ ಮಾನ ದಂಡಗಳನ್ನು ತಲುಪಲು ಸಾಧ್ಯವಾಗಲಿಲ್ಲ, ಆದರೆ 2004-05 ರ ಹೊತ್ತಿಗೆ ಆಯಾಗ್ರಾಮೀಣ/ನಗರ ಬಡತನ ಅನುಪಾತಗಳು 69.5ಶೇ./ 65 ಶೇ.ಕ್ಕೆ ಏರಿದವು. ಬರಗಾಲದ ವರ್ಷ 2009-10 ರಲ್ಲಿ ಒಂದು ತೀವ್ರ ಏರಿಕೆಯ ನಂತರ 2011-12 ರ ವೇಳೆಗೆ 67ಶೇ. / 62 ಶೇಕಡಾಕ್ಕೆ ಇಳಿಕೆ ಕಂಡು ಬಂದಿದೆ.

2017-18ರಲ್ಲಿ ಪೌಷ್ಟಿಕಾಂಶ ಸೇವನೆಯ ಪ್ರಮಾಣ ಎಷ್ಟಿತ್ತು ಎಂಬ ದತ್ತಾಂಶವನ್ನು ಬಿಡುಗಡೆ ಮಾಡಲಾಗಿಲ್ಲ ಆದರೆ ಅದನ್ನು ಕನಿಷ್ಟ ಮಟ್ಟದಲ್ಲಿಅಂದಾಜು ಮಾಡ ಬಹುದು, ನಂತರದ ವರ್ಷಗಳ ಬೆಲೆ ಸೂಚ್ಯಂಕಗಳನ್ನು 2011-12ರ ಸೂಚ್ಯಂಕಕ್ಕೆ ಹೊಂದಿಸಿ ಇದನ್ನು ಮಾಡಬಹುದು. ಇದು ಗ್ರಾಮೀಣ ಬಡತನದಲ್ಲಿ ತೀವ್ರ ಏರಿಕೆಯನ್ನು ತೋರಿಸುತ್ತದೆ- ಜನಸಂಖ್ಯೆಯ ಶೇಕಡಾ 80 ಕ್ಕಿಂತ ಹೆಚ್ಚು, ನಗರದಲ್ಲಿ ಬಡತನವು 2011-12 ರ ಮಟ್ಟದಲ್ಲೇ ಉಳಿದಿತ್ತು. 2023-24ರ ಸಂಪೂರ್ಣ ಮಾಹಿತಿಯು ಇನ್ನೂ ಬಿಡುಗಡೆಯಾಗ ಬೇಕಿದೆ. ಆದರೆ ಮಹಾ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಮಂದಗತಿ ಮತ್ತು ಹೆಚ್ಚುತ್ತಿರುವ ನಿರುದ್ಯೋಗವನ್ನು ನೋಡಿದರೆ, ನಿಜವಾದ ಬಡತನದ ಮಟ್ಟವು ಹೆಚ್ಚಿರುವ ಸಾಧ್ಯತೆಯಿದೆ.

ಸ್ವಯಂಸೃಷ್ಟಿಯ ಗೋಜಲು

ಸರ್ಕಾರಗಳು ಮತ್ತು ವಿಶ್ವಬ್ಯಾಂಕ್  ತಾವೇ ಸೃಷ್ಟಿಸಿಕೊಂಡಿರುವ ಗೋಜಲು ಮತ್ತು ಅದರ ಪರಿಣಾಮವಾಗಿ ಇಳಿ ಮುಖವಾಗುತ್ತಿರು ವಬಡತನದ ಸುಳ್ಳು ದಾವೆಗಳು ಒಂದು ಸರಳತಾರ್ಕಿಕ ತಪ್ಪಿನ ಫಲಿತಾಂಶ. ಅವರು ಮೊದಲು ಬಡತನದ ರೇಖೆಗಳನ್ನು ಆರಂಭಿಕ ವರ್ಷದಲ್ಲಿ ಪೌಷ್ಟಿಕಾಂಶದ ಮಾನದಂಡಗಳ ಆಧಾರದ ಮೇಲೆ ಸರಿಯಾಗಿ ವ್ಯಾಖ್ಯಾನಿಸಿದರು, ಮತ್ತು ನಂತರದ ವರ್ಷಗಳಲ್ಲಿ ಅದನ್ನು ಅಸಂಗತ ರೀತಿಯಲ್ಲಿ ಬದಲಾಯಿಸಿದರು, ಪೌಷ್ಟಿಕಾಂಶದ ಮಾನ ದಂಡಗಳನ್ನು ಬಳಸಲಿಲ್ಲ. ಅವರು ಪ್ರತಿ ದೇಶಕ್ಕೂ ಇದನ್ನು ಮಾಡಿದ್ದಾರೆ. ಭಾರತದಲ್ಲಿ 1973-4 ರಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ 2200 ಕ್ಯಾಲೊರಿಗಳನ್ನು ಮತ್ತು ನಗರ ಪ್ರದೇಶಗಳಲ್ಲಿ 2100 ಕ್ಯಾಲೊರಿಗಳನ್ನು ಪಡೆಯಲು ತಲಾಮಾಸಿಕ ಖರ್ಚು ಅನುಕ್ರಮವಾಗಿ ರೂ 49 ಮತ್ತು ರೂ 56.6 ಆಗಿತ್ತು, ಇದರಿಂದಾಗಿಅಧಿಕೃತಬಡತನದಪ್ರಮಾಣಗ್ರಾಮೀಣಪ್ರದೇಶಗಳಲ್ಲಿ 56.4 ಶೇಕಡಾ ಮತ್ತು ನಗರ ಪ್ರದೇಶಗಳಲ್ಲಿ 49.2 ಶೇಕಡಾ. ಪೌಷ್ಟಿಕಾಂಶದ ಸೇವನೆಯ ಅಗತ್ಯ ದತ್ತಾಂಶ ಪ್ರತಿ ಐದು ವರ್ಷಗಳಿಗೊಮ್ಮೆ ಲಭ್ಯವಿದ್ದರೂ, ಪೌಷ್ಟಿಕಾಂಶದ ಮಾನ ದಂಡಗಳನ್ನು ನೇರವಾಗಿ ಬಳಸಿಕೊಂಡು ಬಡತನ ರೇಖೆಯನ್ನು ಲೆಕ್ಕಹಾಕುವ ವಿಧಾನವನ್ನು ಮತ್ತೆಂದೂ ಬಳಸಲಿಲ್ಲ.

ಬದಲಿಗೆ ಈ ನಿರ್ದಿಷ್ಟ 1973ರ ಬಡತನ ರೇಖೆಗಳನ್ನು ಮೇಲೆ ವಿವರಿಸಿದಂತೆ ಬೆಲೆ ಸೂಚ್ಯಂಕಗಳನ್ನು ಬಳಸಿಕೊಂಡು ನಂತರದ ವರ್ಷಗಳಿಗೆ ಸರಳವಾಗಿ ಹೊಂದಿಸಲಾಗಿದೆ, ಪೌಷ್ಟಿಕಾಂಶದ ಮಾನ ದಂಡಗಳನ್ನು ತಲುಪಲಾಗಿದೆಯೇ ಅಥವಾ ಇಲ್ಲವೇ ಎಂದು ಎಂದಿಗೂ ಕೇಳಲೇ ಇಲ್ಲ. ಬಡತನ ರೇಖೆಯ ಒಂದು ನಿರೂಪಣೆಯೊಂದಿಗೆ ಆರಂಭಿಸಿ, ನಂತರ ಸದ್ದಿಲ್ಲದೆ ಇನ್ನೊಂದು ಸಂಪೂರ್ಣ ವಿಭಿನ್ನ ನಿರೂಪಣೆಗೆ ಬದಲಾಯಿಸುವುದು ಎಂದರೆ ಒಂದು ತಾರ್ಕಿಕ ಆಭಾಸ, ಅನುಮಾನಾಸ್ಪದ ತರ್ಕಾಭಾಸ. ಈ ಆಭಾಸಕಾರಿ ವಿಧಾನದಲ್ಲಿ 1973-4 ರಲ್ಲಿ ಲಭ್ಯವಿದ್ದ ಮತ್ತು ಬಳಸಿದ ಸರಕು ಮತ್ತು ಸೇವೆಗಳ ನಿರ್ದಿಷ್ಟ ಪಟ್ಟಿಯನ್ನು ಹಾಗೆಯೇ ಇರಿಸಲಾಗಿದೆ, 50 ವರ್ಷಗಳ ನಂತರವೂ ಅದೇ ಪಟ್ಟಿಯನ್ನು ಇಟ್ಟು ಕೊಂಡು, ಬೆಲೆ ಸೂಚ್ಯಂಕವನ್ನು ಅನ್ವಯಿಸಲಾಗುತ್ತದೆ ಯಷ್ಟೇ.

ಆದರೆ, ವಾಸ್ತವದಲ್ಲಿ ಕಳೆದ ಮೂರು ದಶಕಗಳ ನವ-ಉದಾರವಾದಿ ಮಾರುಕಟ್ಟೆ ಸುಧಾರಣೆಗಳಿಂದಾಗಿ, ಅಂದರೆ ಹೆಚ್ಚೆಚ್ಚು ಖಾಸಗೀಕರಣ ಮತ್ತು ಮಾರುಕಟ್ಟೆಯೇ ಬೆಲೆ ನಿರ್ಧರಿಸುವುದರಿಂದಾಗಿ ಲಭ್ಯವಿರುವ ಸರಕು ಮತ್ತು ಸೇವೆಗಳ ಪಟ್ಟಿ ವೇಗವಾಗಿ ಬದಲಾಗಿದೆ. 50 ವರ್ಷಗಳ ಕಾಲ ಅದೇ ಪಟ್ಟಿಯನ್ನು ಅನುಸರಿಸುವುದು ಬಡತನದ ನೈಜಪ್ರವೃತ್ತಿಯನ್ನು ತಿಳಿಯದಂತೆ ಮಾಡುತ್ತದೆ, ಏಕೆಂದರೆ ಜನರು ಬಡತನದ ಅದೇ ಮಟ್ಟದಲ್ಲಿ ಉಳಿದಿದ್ದಾರೆಯೇ, ಅದು ಹದಗೆಟ್ಟಿದೆಯೇ ಅಥವಾ ಉತ್ತಮಗೊಂಡಿದೆಯೇ ಎಂಬುದು ಆಯಾಯ ಸಮಯದಲ್ಲಿ ಅವರಿಗೆ ಲಭ್ಯವಿರುವ ಸರಕು ಮತ್ತು ಸೇವೆಗಳ ಈ ಪಟ್ಟಿಯಲ್ಲಿ ಏನು ಬದಲಾವಣೆಯಾಗಿದೆ ಎಂಬುದರ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿದೆ. ಆರೋಗ್ಯ, ಶಿಕ್ಷಣ, ಮತ್ತು ವಸತಿ ಮತ್ತು ಬಹಳಷ್ಟು ಉಪಯುಕ್ತತೆಗಳನ್ನು ಮಾರುಕಟ್ಟೆ ಬೆಲೆಗಳ ವಲಯದಿಂದ ತೆಗೆದುಹಾಕಿ, ಅವು ಸಾರ್ವಜನಿಕ ಸರಕುಗಳೆಂದು ಪರಿಗಣಿಸಲ್ಪಟ್ಟಿರು ವಧೋರಣೆಗಳನ್ನು ಅನುಸರಿಸಿದ ದೇಶಗಳಲ್ಲಿ ಬಡತನವು ಗಮನಾರ್ಹವಾಗಿ ಇಳಿದಿದೆ ಅಥವಾ ಸಂಪೂರ್ಣವಾಗಿ ನಿವಾರಣೆಗೊಂಡಿದೆ.

ಅಲ್ಲಿ ಉಚಿತ ಆರೋಗ್ಯ ಪಾಲನೆ ಮತ್ತು ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ, ಅಥವಾ ಕೇವಲ ನಾಮಮಾತ್ರ ಶುಲ್ಕವನ್ನು ವಿಧಿಸಲಾಯಿತು. ಕಡಿಮೆ ಬಾಡಿಗೆಯೊಂದಿಗೆ ಕೈಗೆಟುಕುವ ಕಡಿಮೆ-ವೆಚ್ಚದ ವಸತಿ ನಿರ್ಮಾಣ, ಮತ್ತುಸಾರ್ವಜನಿಕ ಸಾರಿಗೆ ಮತ್ತು ನೀರು, ಬೆಳಕು ಮತ್ತು ಅಡುಗೆ ಇಂಧನಗಳ ಮೇಲೆ ನಾಮ ಮಾತ್ರ ಶುಲ್ಕಗಳು, ಆಹಾರ, ತಯಾರಿಸಿದ ಅಗತ್ಯತೆಗಳು ಮತ್ತು ಮನರಂಜನೆಯ ಖರ್ಚುಗಳು ಕಡಿಮೆಯಾಗಿ ಕುಟುಂಬದ ಬಜೆಟಿನಿಂದ ಬಹಳಷ್ಟು ಹೊರೆಗಳು ಇಳಿದವು. ಹೀಗೆ ಸಾರ್ವಜನಿಕ ಸರಕುಗಳನ್ನು ಒದಗಿಸುವ ಕ್ರಮಗಳನ್ನು ಏಷ್ಯಾ ಮತ್ತು ಯುರೋಪಿನ ಸಮಾಜವಾದಿ ರಾಷ್ಟ್ರಗಳಲ್ಲಿ ಮಾತ್ರವಲ್ಲ; ಎರಡನೇ ಮಹಾಯುದ್ಧದ ನಂತರದ ಅವಧಿಯಲ್ಲಿ ಬಹುತೇಕ ಎಲ್ಲಾ ಪಾಶ್ಚಿಮಾತ್ಯ ಯುರೋಪಿಯನ್‌ ಬಂಡವಾಳ ಶಾಹಿ ರಾಷ್ಟ್ರಗಳಲ್ಲಿಯೂ ಕೈಗೊಳ್ಳಲಾಯಿತು.

ಕಷ್ಟಕರ ಸಂಗತಿಯೇನಲ್ಲ

ನಂತರ ತದ್ವಿರುದ್ಧವಾದುದೇ ನಡೆಯಿತು. ಜಾಗತಿಕ ದಕ್ಷಿಣ ದದೇಶಗಳಲ್ಲಿ ಮಾರುಕಟ್ಟೆ ಆಧಾರಿತ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುವುದರೊಂದಿಗೆ, ಲಭ್ಯವಿರುವ ಸರಕು ಮತ್ತು ಸೇವೆಗಳ ಪಟ್ಟಿಯಲ್ಲಿ ಗ್ರಾಹಕರಿಗೆ ಹಾನಿತರುವಂತಹ ತೀವ್ರ ಬದಲಾವಣೆಗಳಾದವು, ಏಕೆಂದರೆ ಈ ಕ್ರಮಗಳು ಆರೋಗ್ಯ, ಶಿಕ್ಷಣ ಮತ್ತು ಉಪಯುಕ್ತತೆಗಳನ್ನು ಸಾರ್ವಜನಿಕ ಸರಕುಗಳ ಪಟ್ಟಿಯಿಂದ ಗಣನೀಯವಾಗಿ ಅಥವಾ ಸಂಪೂರ್ಣವಾಗಿ ತೆಗೆದು ಹಾಕಿದವು. ಅವುಗಳನ್ನು ಮಾರುಕಟ್ಟೆ ಬೆಲೆಗಳಲ್ಲಿ ಪಡೆಯಬೇಕಾಗಿ ಬಂದಿದೆ. ಇದರ ಪರಿಣಾಮವಾಗಿ ಉಂಟಾದ ಕುಟುಂಬ ವೆಚ್ಚಗಳ ಹೆಚ್ಚಳವು ಬಹುಪಾಲು ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡಲು ಲಭ್ಯವಾಗುವ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಿದೆ, ಹೆಚ್ಚೆಚ್ಚು ಜನರನ್ನು ಪೌಷ್ಟಿಕಾಂಶ ಪಡೆಯಲಾರದ ಒತ್ತಡಕ್ಕೆ ತಳ್ಳಿದೆ. 2016 ರ ನೋಟುರದ್ಧತಿ ಯಂತಹ ಅವಿವೇಕದ ಕ್ರಮಗಳು ಅಥವಾ 2021-22ರ ಮಹಾ ಸೋಂಕು-ಪ್ರೇರಿತ ಆರ್ಥಿಕ ಹಿಂಜರಿತ ಬಡತನದ ಸಮಸ್ಯೆಯನ್ನು ಉಲ್ಬಣಗೊಳಿಸಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಘಟನೆಗಳೇ ಬಡತನದ ಏರಿಕೆಯ ಮೂಲ ಕಾರಣಗಳಲ್ಲ. ಅದಕ್ಕಿಂತ ಮೊದಲೇ ಇದು ಆರಂಭವಾಗಿತ್ತು.

ಪುನರ್ವಿತರಣಾಕ್ರಮಗಳ ಮೂಲಕ ಬಡತನವನ್ನು ಗಣನೀಯವಾಗಿ ಕಡಿಮೆ ಮಾಡುವುದು ಕಷ್ಟಕರವಾದ ಸಂಗತಿಯೇಯಲ್ಲ. ಭಾರತದ ಜನರಿಗೆ ಸಾಕಷ್ಟು ಆಹಾರ, ಮೂಲಭೂತ ಮತ್ತು ಸಮಗ್ರ ಆರೋಗ್ಯ, ಕಡ್ಡಾಯ ಉಚಿತ ಶಿಕ್ಷಣ, ಉದ್ಯೋಗ ಖಾತರಿ ಮತ್ತು ವೃದ್ಧಾಪ್ಯ ಪಿಂಚಣಿಗಳನ್ನು ಒದಗಿಸಲು ಭಾರತದ ಜಿಡಿಪಿಯ ಸುಮಾರು ಹತ್ತನೇ ಒಂದು ಭಾಗದಷ್ಟು ವಿನಿಯೋಗಿಸಬೇಕಾದೀತಷ್ಟೇ. ಇದಕ್ಕೆ ಜಿಡಿಪಿಯ ಶೇಕಡ 7ರಷ್ಟು ಹೆಚ್ಚುವರಿ ತೆರಿಗೆಯ ಅಗತ್ಯವಿದೆ. ಇದನ್ನು ಶ್ರೀಮಂತರು ಮತ್ತುಅತಿ ಶ್ರೀಮಂತರು ಸುಲಭವಾಗಿ ಭರಿಸಬಹುದು. ಇದರೊಂದಿಗೆ ಈಗಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ ತೀವ್ರ ಅನುಷ್ಠಾನದಿಂದ ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿಜವಾಗಿಯೂ ಇಳಿಸಬಹುದು. ಆದರೆ ಇದಕ್ಕೆ ಅತ್ಯಗತ್ಯ ಪೂರ್ವ-ಷರತ್ತೆಂದರೆ ಪ್ರಾಯೋಗಿಕ ಕೆಲಸಕ್ಕೆ ಮಾರ್ಗದರ್ಶನ ನೀಡುವ ಪರಿಕಲ್ಪನೆಗಳು ಮತ್ತು ಅವುಗಳನ್ನು ಆಧರಿಸಿದ ತೀರ್ಮಾನಗಳು. ರಾಷ್ಟ್ರೀಯವಾಗಿ ಮಾತ್ರವಲ್ಲದೆ ಅಂತರಾಷ್ಟ್ರೀಯವಾಗಿ ಪ್ರಚಲಿತದಲ್ಲಿರುವ ಬಡತನದ ತಪ್ಪಾದ ಮಾಪನವನ್ನು ಕೈ ಬಿಡಬೇಕು ಮತ್ತು ಬಡತನ ಇಳಿಕೆಯ ಹುಸಿದಾವೆಗಳ ಬದಲು ವಾಸ್ತವಿಕವಾದ ಮತ್ತು ತಾರ್ಕಿಕವಾಗಿ ಸರಿಯಾದ ಅಂದಾಜುಗಳನ್ನು ಮಾಡಬೇಕು.

ಇದನ್ನೂ ನೋಡಿ: ಪರಿಸರ ಸಂರಕ್ಷಣೆ ನಮ್ಮ ಹೊಣೆ : ಮರುಭೂಮಿಯಾಗದಂತೆ ನೋಡಿಕೊಳ್ಳೋಣ Janashakthi Media

Donate Janashakthi Media

Leave a Reply

Your email address will not be published. Required fields are marked *