ನವ-ಉದಾರವಾದವೂ ಮತ್ತು ಉಗ್ರ ಬಲ ಪಂಥವೂ ಹಾಗೂ ಕಾರ್ಪೊರೇಟ್-ಹಿಂದುತ್ವ ಮೈತ್ರಿಯೂ

ಪ್ರೊ. ಪ್ರಭಾತ್ ಪಟ್ನಾಯಕ್

ನವ-ಉದಾರವಾದಿ ಆರ್ಥಿಕ ನೀತಿಗಳ ಬಗ್ಗೆ ವಿಶ್ವಾದ್ಯಂತ ಸಮಕಾಲೀನ ನವ-ಫ್ಯಾಸಿಸ್ಟ್ ಮತ್ತು ಉಗ್ರ ಬಲಪಂಥೀಯ ಚಳುವಳಿಗಳು ಜಾಣ ಮೌನ ವಹಿಸುತ್ತಿರುವುದು ಎದ್ದು ಕಾಣುತ್ತದೆ. ಈ ಜಾಣ ಮೌನದ ಮೂಲಕ ಅವು ನವ-ಉದಾರ ಆರ್ಥಿಕ ನೀತಿಗಳನ್ನು ಅನುಮೋದಿಸುತ್ತವೆ. ಈ ಮೌನ ಸಮ್ಮತಿಗೆ ವಿರುದ್ಧವಾಗಿ, ಕೆಲವು ಸಂದರ್ಭಗಳಲ್ಲಿ, ಈ ನೀತಿಗಳ ಹಿಂದೆ ನಿಂತಿರುವ ದೊಡ್ಡ ಬಂಡವಾಳಗಾರರಿಗೆ ಬೆಂಬಲ ತೋರಿಸುವ ಪ್ರವೃತ್ತಿಗೆ ಒಂದು ಪ್ರಮುಖ ಉದಾಹರಣೆಯೆಂದರೆ, ದೊಡ್ಡ ಉದ್ಯಮಗಳು ಮತ್ತು ಜಾಗತೀಕರಣಗೊಂಡ ಬಂಡವಾಳದೊಂದಿಗೆ ಬಾಂಧವ್ಯ ಹೊಂದಿರುವ ನರೇಂದ್ರ ಮೋದಿಯವರ ನಾಯಕತ್ವದ ಬಿಜೆಪಿ. ತಮ್ಮನ್ನು ಅಧಿಕಾರದ ಗದ್ದುಗೆಗೆ ಏರಿಸಲು ನೆರವಾದ ಈ ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಮೋದಿಯವರು ಪರಿಣಾಮಕಾರಿಯಾಗಿ ಬೆಸೆದರು. ಅಧಿಕಾರಕ್ಕೆ ಬಂದ ಕೂಡಲೇ, ಈ ಕಾರ್ಪೊರೇಟ್ ಬೆಂಬಲಿಗರು ತಿಂದು ತೇಗುವಷ್ಟು ಪ್ರತಿಫಲಗಳನ್ನು ಪಡೆದಿದ್ದಾರೆ. ದೊಡ್ಡ ಬಂಡವಾಳಗಾರರೇ ದೇಶದ “ಸಂಪತ್ತಿನ ಸೃಷ್ಟಿಕರ್ತರು” ಎಂಬ ನೆಲೆಯಲ್ಲಿ ಅವರನ್ನು ಮೋದಿ ಸಮರ್ಥಿಸಿಕೊಳ್ಳುತ್ತಾರೆ! ದೇಶದ ಸಂಪತ್ತಿನ ಹಸ್ತಾಂತರವನ್ನೂ ಸಹ ಅವರು ಸಮರ್ಥಿಸುವುದೂ ಇದೇ ರೀತಿಯಲ್ಲಿ!

ಉಗ್ರ ಬಲಪಂಥೀಯ, ಫ್ಯಾಸಿಸ್ಟ್, ಅರೆ-ಫ್ಯಾಸಿಸ್ಟ್ ಅಥವಾ ನವ-ಫ್ಯಾಸಿಸ್ಟ್ ಪಕ್ಷಗಳು ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಹೆಚ್ಚುತ್ತಿರುವ ಸಂಗತಿಯು 1930ರ ದಶಕದಲ್ಲಿ ಕಂಡುಬಂದ ವಿದ್ಯಮಾನವನ್ನು ನೆನಪಿಸುತ್ತದೆ. ಫ್ಯಾಸಿಸ್ಟ್ ಸರ್ಕಾರಗಳು ಸರ್ವೇಸಾಮಾನ್ಯವಾಗಿ ಏಕಸ್ವಾಮ್ಯ ಬಂಡವಾಳದ ಹಿತಾಸಕ್ತಿಗಳನ್ನು, ಅದರಲ್ಲೂ ವಿಶೇಷವಾಗಿ ಅದರ ಹೊಸ, ಕಡಿಮೆ “ಉದಾರವಾದಿ” ಮತ್ತು ಹೆಚ್ಚು ಪ್ರತಿಗಾಮಿ ವಿಭಾಗದ ಹಿತಾಸಕ್ತಿಗಳನ್ನು ಕಾಪಾಡುತ್ತವೆ. ಆದ್ದರಿಂದಲೇ, ಕಮ್ಯುನಿಸ್ಟ್ ಅಂತಾರಾಷ್ಟ್ರೀಯದ ಏಳನೇ ಕಾಂಗ್ರೆಸ್‌ನಲ್ಲಿ ಅದರ ಅಧ್ಯಕ್ಷ ಜಾರ್ಜಿ ದಿಮಿತ್ರೋವ್, ಫ್ಯಾಸಿಸ್ಟ್ ಪ್ರಭುತ್ವವನ್ನು “ಹಣಕಾಸು ಬಂಡವಾಳದ ಅತ್ಯಂತ ಪ್ರತಿಗಾಮಿ ವಿಭಾಗದ ನಗ್ನ ಭಯೋತ್ಪಾದಕ ಸರ್ವಾಧಿಕಾರ” ಎಂದು ಬಣ್ಣಿಸಿದ್ದರು.

ಆ ಕಾಲದ ಫ್ಯಾಸಿಸ್ಟ್ ಚಳುವಳಿಗಳು ದೊಡ್ಡ ದೊಡ್ಡ ಉದ್ಯಮಗಳ ವಿರುದ್ಧದ ಚಳುವಳಿಗಳಾಗಿಯೇ ಆರಂಭವಾಗಿದ್ದವು. ದೊಡ್ಡ ವ್ಯವಹಾರೋದ್ಯಮ-ವಿರೋಧಿ ನಿಲುವಿನ ಬಣ್ಣದ ಮಾತುಗಳ ಮೂಲಕ ಸಾಕಷ್ಟು ಮಂದಿ ಬೆಂಬಲಿಗರನ್ನು ಸೆಳೆದು ಬುಟ್ಟಿಗೆ ಹಾಕಿಕೊಂಡ ನಂತರ, ಈ “ಬಲ-ತೀವ್ರಗಾಮಿ”ಗಳು (ಫ್ಯಾಸಿಸ್ಟರು) ಅಧಿಕಾರ ಹಿಡಿಯುವ ಸಲುವಾಗಿ ತಾವು ವಿರೋಧಿಸಿದ ಅದೇ ದೊಡ್ಡ ದೊಡ್ಡ ವ್ಯವಹಾರೋದ್ಯಮಗಳೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಕಟ್ಟಾ ಬೆಂಬಲಿಗರಿಗೇ ದ್ರೋಹ ಬಗೆದವು. ಹಿಟ್ಲರ್ ಮಾಡಿದ್ದು ಇದನ್ನೇ-ಅತ್ಯಂತ ರಕ್ತಸಿಕ್ತ ರೀತಿಯಲ್ಲಿ. ಹಿಟ್ಲರ್‌ನ ಆದೇಶದ ಮೇರೆಗೆ ಅವನ ನಿಕಟ ಸಹವರ್ತಿಯೂ ಮತ್ತು ವಿರೋಧಿಗಳನ್ನು ಸದೆಬಡಿಯುತ್ತಿದ್ದ ನಾಜಿ ಪಡೆಯ(ಬ್ರೌನ್ ಷರ್ಟ್) ಮುಖ್ಯಸ್ಥನೂ ಆಗಿದ್ದ ಅರ್ನ್ಸ್ಟ್ ರೋಹ್ಮ್ ಮತ್ತು ಇತರೆ ಕೆಲವು ನಾಜಿಗಳನ್ನು ಕೊಲೆ ಮಾಡಲಾಯಿತು. ಹೀಗೆ ತಮ್ಮ ಸಹಚರರನ್ನೇ ಅತ್ಯಂತ ಅಮಾನುಷ ರೀತಿಯಲ್ಲಿ ಕೊಲೆಗೈದ ಈ ರಕ್ತ ರಾತ್ರಿಯನ್ನು “ಉದ್ದನೆಯ ಚಾಕು-ಚೂರಿಗಳ ರಾತ್ರಿ” ಎಂದೂ ಕರೆಯಲಾಗಿದೆ.

ಇದನ್ನು ಓದಿ: ಕೊರೊನಾ ಮುನ್ನವೇ ದುಡಿಯುವ ಜನರ ವರಮಾನ ಕುಸಿದಿತ್ತು

ದೊಡ್ಡ ವ್ಯವಹಾರೋದ್ಯಮಗಳನ್ನು ವಿರೋಧಿಸುವ ವಿಷಯದಲ್ಲಿ, ಸಮಕಾಲೀನ ನವ-ಫ್ಯಾಸಿಸ್ಟ್ ಮತ್ತು ಉಗ್ರ ಬಲಪಂಥೀಯ ಚಳುವಳಿಗಳು ಈ ಹಿಂದಿನ ಇಂತಹ ಚಳುವಳಿಗಳಿಗಿಂತ ಭಿನ್ನವಾಗಿವೆ. ಈ ಚಳವಳಿಗಳು ದೊಡ್ಡ ವ್ಯವಹಾರೋದ್ಯಮಗಳ ವಿರೋಧವನ್ನು ಆರಂಭದಿಂದಲೇ ಕೈಬಿಟ್ಟಿರುತ್ತವೆ. ದೊಡ್ಡ ದೊಡ್ಡ ಉದ್ಯಮಗಳ ವಿರುದ್ಧ ಅವರು ಅಬ್ಬರಿಸಿ ಬೊಬ್ಬಿರಿಯುವುದಿಲ್ಲ. ತಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ವ್ಯವಸ್ಥೆಯ ವಿರುದ್ಧ ಜನರಿಗಿರುವ ಸಹಜ ಕೋಪವನ್ನು ಬಳಸಿಕೊಳ್ಳುವ ಪ್ರಯತ್ನವನ್ನೂ ಸಹ ಅವರು ಮಾಡುವುದಿಲ್ಲ. ಇಂದಿನ ಪರಿಸ್ಥಿತಿಯಲ್ಲಾದರೆ, ಅಂತಹ ವಿರೋಧವು ಅಗತ್ಯವಾಗಿ ನವ-ಉದಾರ ಆರ್ಥಿಕ ನೀತಿಗಳ ಮೇಲೆ ದಾಳಿ ಮಾಡುವ ರೂಪವನ್ನು ಪಡೆಯಲೇಬೇಕಾಗುತ್ತದೆ. ಏಕೆಂದರೆ. ಈ ನೀತಿಗಳು, ದೇಶದ ದೊಡ್ಡ ದೊಡ್ಡ ಉದ್ಯಮಗಳು ಯಾವ ಜಾಗತೀಕರಣಗೊಂಡ ಬಂಡವಾಳದೊಂದಿಗೆ ಸಮಗ್ರೀಕರಿಸಿಕೊಂಡಿವೆಯೋ ಅದರ ಜೀವಾಳವೇ ಆಗಿವೆ. ಆದಾಗ್ಯೂ, ನವಉದಾರವಾದಿ ಆರ್ಥಿಕ ನೀತಿಗಳ ಬಗ್ಗೆ ವಿಶ್ವಾದ್ಯಂತ ಸಮಕಾಲೀನ ನವ-ಫ್ಯಾಸಿಸ್ಟ್ ಮತ್ತು ಉಗ್ರ ಬಲಪಂಥೀಯ ಚಳುವಳಿಗಳು ಜಾಣ ಮೌನ ವಹಿಸುತ್ತಿರುವುದು ಎದ್ದು ಕಾಣುತ್ತದೆ. ಈ ಜಾಣ ಮೌನದ ಮೂಲಕ ಅವು ನವ-ಉದಾರ ಆರ್ಥಿಕ ನೀತಿಗಳನ್ನು ಅನುಮೋದಿಸುತ್ತವೆ.

ಕಾರ್ಪೊರೇಟ್-ಹಿಂದುತ್ವ ಮೈತ್ರಿ

ಈ ಮೌನ ಸಮ್ಮತಿಗೆ ವಿರುದ್ಧವಾಗಿ, ಕೆಲವು ಸಂದರ್ಭಗಳಲ್ಲಿ, ಈ ನೀತಿಗಳಿಗೆ ಮತ್ತು ಅವುಗಳ ಹಿಂದೆ ನಿಂತಿರುವ ದೊಡ್ಡ ಬಂಡವಾಳಗಾರರಿಗೆ ಬೆಂಬಲ ತೋರಿಸುವುದು ಮೊದಲಿನಿಂದಲೂ ಇದ್ದದ್ದೇ. ಈ ಮಾತಿಗೆ ಒಂದು ಪ್ರಮುಖ ಉದಾಹರಣೆಯೆಂದರೆ, ದೊಡ್ಡ ಉದ್ಯಮಗಳು ಮತ್ತು ಜಾಗತೀಕರಣಗೊಂಡ ಬಂಡವಾಳದೊಂದಿಗೆ ಬಾಂಧವ್ಯ ಹೊಂದಿರುವ ನರೇಂದ್ರ ಮೋದಿಯವರ ನಾಯಕತ್ವದ ಬಿಜೆಪಿ. ವಾಸ್ತವವಾಗಿ, ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ಉದ್ಯಮಗಳೊಂದಿಗಿನ ಅವರ ಸಾಮೀಪ್ಯದಿಂದಾಗಿ, ಕೆಲವು ವರ್ಷಗಳ ಹಿಂದೆ ಗುಜರಾತ್ ಹೂಡಿಕೆದಾರರ ಶೃಂಗಸಭೆಯ ನಂತರ ಅವರನ್ನು ಬಹಿರಂಗವಾಗಿ “ದತ್ತು” ತೆಗೆದುಕೊಳ್ಳಲು ಮತ್ತು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಅವರನ್ನು ಯಶಸ್ವಿಯಾಗಿ ಬಿಂಬಿಸಲು ಭಾರತದ ದೊಡ್ಡ ಉದ್ಯಮಗಳು ಮುಂದಾದವು. ತಮ್ಮನ್ನು ಅಧಿಕಾರದ ಗದ್ದುಗೆಗೆ ಏರಿಸಲು ನೆರವಾದ ಈ ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಮೋದಿಯವರು ಪರಿಣಾಮಕಾರಿಯಾಗಿ ಬೆಸೆದರು. ಈ ಮೈತ್ರಿಯನ್ನು ರೂಪಿಸಿದ ಒಂದು ನಿರ್ಣಾಯಕ ಆಯಾಮವೆಂದರೆ, ಈ ಹಿಂದೆ ಒಂದು ರೀತಿಯ ಉಗ್ರ-ಬಲಪಂಥೀಯ ಕಾರ್ಯಕ್ರಮವನ್ನು ಪ್ರತಿಪಾದಿಸುತ್ತಿದ್ದ ಸ್ವದೇಶಿ ಜಾಗರಣ ಮಂಚ್ ನಂತಹ ಹಿಂದುತ್ವದ ಸಂಘಟನೆಗಳ ಕಡೆಗಣನೆ.

ಅಧಿಕಾರಕ್ಕೆ ಬಂದ ಕೂಡಲೇ, ತಮ್ಮ ಕಾರ್ಪೊರೇಟ್ ಬೆಂಬಲಿಗರಿಗೆ ತಿಂದು ತೇಗುವಷ್ಟು ಪ್ರತಿಫಲಗಳನ್ನು ಮೋದಿ ನೀಡಿದ್ದಾರೆ. ಕೇವಲ ನಿರ್ದಿಷ್ಟ ಗುತ್ತಿಗೆಗಳು ಮತ್ತು ಗುಪ್ತ ಒಪ್ಪಂದಗಳು ಮಾತ್ರವಲ್ಲ (ಇವುಗಳಲ್ಲಿ ರಫೇಲ್ ಒಪ್ಪಂದವನ್ನು ಒಂದು ಪ್ರಮುಖ ಉದಾಹರಣೆ ಎಂದು ಪರಿಗಣಿಸಲಾಗಿದೆ), ಅಥವಾ ಶಾಸನಗಳ ಮೂಲಕ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವಂಥಹ ಮತ್ತು ರೈತರ ಸ್ವಾತಂತ್ರ‍್ಯವನ್ನು ಒಳಗೊಳಗೇ ಕೊರೆದು ಹಾಕುವಂಥಹ ಕ್ರಮಗಳನ್ನು ಕೈಗೊಂಡದ್ದು ಮಾತ್ರವಲ್ಲ, ಸಾರ್ವಜನಿಕ ವಲಯದ ಅನೇಕ ಬೃಹತ್ ಉದ್ಯಮಗಳನ್ನು ಖಾಸಗೀಕರಿಸುವ ಮೂಲಕವೂ ತಮ್ಮ ಕಾರ್ಪೊರೇಟ್ ಮಿತ್ರರಿಗೆ ರಸಗವಳವನ್ನೇ ಬಡಿಸಿದ್ದಾರೆ. ಇವೆಲ್ಲವನ್ನೂ ದೊಡ್ಡ ಬಂಡವಾಳಗಾರರೇ ದೇಶದ “ಸಂಪತ್ತಿನ ಸೃಷ್ಟಿಕರ್ತರು” ಎಂಬ ನೆಲೆಯಲ್ಲಿ ಅವರು ಸಮರ್ಥಿಸಿಕೊಳ್ಳುತ್ತಾರೆ! ದೇಶದ ಸಂಪತ್ತಿನ ಹಸ್ತಾಂತರವನ್ನೂ ಸಹ ಅವರು ಈ ರೀತಿಯಲ್ಲಿ ಸಮರ್ಥಿಸುವುದು ಒಂದು ವಿಡಂಬನೆಯೇ ಸರಿ.

ಇದನ್ನು ಓದಿ: ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯ ಬದಲು ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದೇಕೆ?

ಯುರೋಪಿನಲ್ಲಿ

ಎಲ್ಲರಿಗಿಂತಲೂ ತುಸು ಭಿನ್ನವಾಗಿ ಕಾಣುವ ಮೋದಿ ಅವರನ್ನು ಒತ್ತಟ್ಟಿಗಿಡೋಣ. ಐರೋಪ್ಯ ಒಕ್ಕೂಟದ ಸನ್ನಿವೇಶದಲ್ಲಿ ನವ-ಉದಾರ ನೀತಿಗಳನ್ನು ವಿರೋಧಿಸಿದಂತೆ ತೋರಿದ ಮತ್ತು ಈ ನೀತಿಗಳ ಅಭಿವ್ಯಕ್ತಿಯಾದ ‘ಯುರೋ’ ಕರೆನ್ಸಿಯನ್ನು (ಐರೋಪ್ಯ ಒಕ್ಕೂಟದ ಎಲ್ಲರ ಏಕ ಕರೆನ್ಸಿ) ಮೂಲತಃ ವಿರೋಧಿಸಿದ ಇಟಲಿಯ ಮ್ಯಾಟಿಯೊ ಸಾಲ್ವಿನಿಯ ನಾರ್ದರ್ನ್ ಲೀಗ್‌ನಂತಹ ವಿಶ್ವದ ಇತರ ಉಗ್ರ ಬಲಪಂಥೀಯ ಪಕ್ಷಗಳೂ ಸಹ ಈಗ ಶಾಂತವಾಗಿವೆ ಮತ್ತು ಒಕ್ಕೂಟದ ಸಾಂಪ್ರದಾಯಿಕ ಆರ್ಥಿಕ ನೀತಿಗಳನ್ನು ಮತ್ತು ಕಾರ್ಯಕ್ರಮಗಳ ವ್ಯಾಪ್ತಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿವೆ.

ಯುರೋಪಿನ ಹದಿನಾರು ಉಗ್ರ ಬಲಪಂಥೀಯ ಪಕ್ಷಗಳು ನವ-ಉದಾರವಾದವನ್ನು ಅನುಮೋದಿಸಿರುವುದಾಗಿ ಇತ್ತೀಚೆಗೆ ಒಂದು ಜಂಟಿ ಘೋಷಣೆಯ ಮೂಲಕ ಹೇಳಿವೆ. ಹಂಗೇರಿಯ ವಿಕ್ಟರ್ ಒರ್ಬಾನ್, ಫ್ರಾನ್ಸ್‌ನ ಮರಿನ್ ಲೆ ಪೆನ್ ಅವರ ನ್ಯಾಷನಲ್ ಫ್ರಂಟ್, ಆಸ್ಟ್ರಿಯಾದ ಫ್ರೀಡಂ ಪಾರ್ಟಿ, ಪೋಲೆಂಡ್‌ನ ಲಾ ಅಂಡ್ ಜಸ್ಟೀಸ್ ಪಾರ್ಟಿ, ಸ್ಪೇನ್‌ನ ವೋಕ್ಸ್ ಮತ್ತು ಇಟಲಿಯ ನಾರ್ದರ್ನ್ ಲೀಗ್ ಹಾಗೂ ಬ್ರದರ್ಸ್ ಆಫ್ ಇಟಲಿ, ಇವೇ ಆ ಹದಿನಾರು ಪಕ್ಷಗಳು. ಈ ಘೋಷಣೆಯಲ್ಲಿ ಆರ್ಥಿಕ ನೀತಿ-ನಿಲುವುಗಳಿಗೆ ಸಂಬಂಧಿಸಿದ ಒಂದೇ ಒಂದು ಶಬ್ದವೂ ಇಲ್ಲ (ಥಾಮಸ್ ಫಾಜಿ, ದಿ ಡೆಲ್ಫಿ ಇನಿಶಿಯೇಟಿವ್). ಆದರೆ, ಆ ಖಂಡದ ಜೂಡಿಯೋ-ಕ್ರಿಶ್ಚಿಯನ್ ಸಂಪ್ರದಾಯದಂತೆ ಯುರೋಪಿನೊಳಗೆ ರಾಷ್ಟ್ರೀಯ ಸಂಸ್ಕೃತಿಗಳನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಲಾಗಿದೆ (ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡುವಾಗ ಬಲಪಂಥೀಯರು ಈ ಸಂಪ್ರದಾಯದ ಮೊರೆ ಹೋಗುತ್ತಾರೆ). ಆದರೆ, ಒಕ್ಕೂಟದ ಎಲ್ಲರ ಏಕ ಕರೆನ್ಸಿಯಿಂದ(ಕಾಮನ್ ಕರೆನ್ಸಿ) ಹಿಂದೆಸರಿಯುವ ಅಥವಾ ಕಾಮನ್ ಕರೆನ್ಸಿಯೊಂದಿಗೆ ಸಂಬಂಧ ಹೊಂದಿರುವ ಸದಸ್ಯ-ದೇಶಗಳ ಮೇಲೆ ಕಠಿಣ ಮಿತವ್ಯಯ ಕ್ರಮಗಳ ಹೇರಿಕೆಯನ್ನು ನಿರಾಕರಿಸುವ ಬಗ್ಗೆ ಏನನ್ನೂ ಹೇಳಲಿಲ್ಲ.

ಇದನ್ನು ಓದಿ: ಕಾರ್ಪೊರೇಟ್-ಹಿಂದುತ್ವ ಕಥನಕ್ಕೆ ರೈತ ಚಳುವಳಿಯ ಸವಾಲು

ಈ ಮಹಾ ಸಾಂಕ್ರಾಮಿಕದ ಸಮಯದಲ್ಲಿ ಯೂರೋಪಿಯನ್ ಒಕ್ಕೂಟವು ತನ್ನ ‘ಸ್ಥಿರತೆ ಮತ್ತು ಬೆಳವಣಿಗೆ ಒಪ್ಪಂದ’ದ (ಎಸ್‌ಜಿಪಿ) ಬಿಗಿ ಹಣಕಾಸು ಶಿಸ್ತನ್ನು ಸ್ಥಗಿತಗೊಳಿಸಿದೆ ಮತ್ತು ವಿತ್ತೀಯ ಕೊರತೆಗಳ ವಿಷಯದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸ್ವಲ್ಪ ವಿನಾಯ್ತಿ ಕೊಟ್ಟಿದೆ, ನಿಜ. ಆದರೆ, ಈ ವಿನಾಯ್ತಿಯು ಕೇವಲ ತಾತ್ಕಾಲಿಕ ಮತ್ತು ಒಪ್ಪಂದದ ನಿಯಮಗಳು 2023 ರಲ್ಲಿ ಮತ್ತೆ ಜಾರಿಯಾಗಲಿವೆ ಎಂಬುದನ್ನು ಯುರೋಪಿಯನ್ ಆಯೋಗವು ಈಗಾಗಲೇ ಹೇಳಿದೆ. ಆದರೆ, ಈ ಬಲಪಂಥೀಯ ಪಕ್ಷಗಳ ಜಂಟಿ ಘೋಷಣೆಯು ಎಸ್‌ಜಿಪಿಯ ಮರು ಹೇರಿಕೆಯ ದಿನಾಂಕವನ್ನು ಮುಂದೂಡುವಂತೆಯೂ ಕೇಳಲಿಲ್ಲ.

ಬಲಪಂಥೀಯ ನಂಟು

ಈ ದೇಶಗಳ ಉಗ್ರ ಬಲಪಂಥೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮೊದಲೇ, ದೊಡ್ಡ ಉದ್ಯಮಗಳಿಗೆ ಎಷ್ಟೊಂದು ಪಳಗಿವೆ, ಎಷ್ಟೊಂದು ಒಗ್ಗಿಕೊಂಡಿವೆ ಏಕೆ ಎಂಬ ಪ್ರಶ್ನೆಗೆ ಮತ್ತು 1930ರ ದಶಕದ ತಮ್ಮ ಹಿಂದಿನ ಅವತಾರಕ್ಕಿಂತ ಹೇಗೆ ಭಿನ್ನವಾಗಿವೆ ಎಂಬ ಪ್ರಶ್ನೆಗೆ ಉತ್ತರವನ್ನು ಹೀಗೆ ಹೇಳಬಹುದು: 1930ರ ದಶಕದಲ್ಲಿ ಹಣಕಾಸು ಬಂಡವಾಳವು ದೇಶೀಯ ಲಕ್ಷಣ ಹೊಂದಿತ್ತು. ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿದ್ದರೂ ಸಹ ಅದು ಮೂಲಭೂತವಾಗಿ ರಾಷ್ಟ್ರ-ಮೂಲ ನೆಲೆಯ ಮತ್ತು ರಾಷ್ಟ್ರ-ಪ್ರಭುತ್ವ ನೆರವಿನ ಬಲದ ಮೇಲೆ ನಿಂತಿತ್ತು. ಆದರೆ, ಸಮಕಾಲೀನ ಹಣಕಾಸು ಬಂಡವಾಳವು ಜಾಗತಿಕ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನೂ ಹೊಂದಿದೆ. ಜಾಗತೀಕರಣಗೊಂಡ ಈ ಹಣಕಾಸು ಬಂಡವಾಳವು ರಾಷ್ಟ್ರ-ಪ್ರಭುತ್ವಗಳಿಗೆ ಎದುರು-ಬದರಾಗಿ ನಿಂತು ಅವುಗಳನ್ನು ಇನ್ನಿಲ್ಲದಂತೆ ಕಾಡುತ್ತದೆ. ಅವುಗಳ ಹಣಕಾಸಿನ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ.

ನವ-ಉದಾರವಾದವನ್ನು ಮತ್ತು ಅದನ್ನು ಅನಿವಾರ್ಯವಾಗಿ ಹಿಂಬಾಲಿಸುವ ಮಿತವ್ಯಯ ನೀತಿಗಳನ್ನು ಒಂದು ದೇಶವು ಎದುರಿಸಬೇಕು ಎಂದಾದರೆ, ಅದು ಸಿಲುಕಿಕೊಂಡಿರುವ ಜಾಗತಿಕ ಹಣಕಾಸು ಬಂಡವಾಳದ ಹರಿವಿನ ಸುಳಿಯಿಂದ ಹೊರ ಬರಬೇಕಾಗುತ್ತದೆ. ಯುರೋಪಿಯನ್ ಸನ್ನಿವೇಶದಲ್ಲಿ, ಯುರೋಪಿಯನ್ ಒಕ್ಕೂಟದಿಂದ ಹೊರ ಬರುವುದು ಎಂದಾಗುತ್ತದೆ. ಏಕೆಂದರೆ, ಯೂರೋಪಿಯನ್ ಒಕ್ಕೂಟವು ಜಾಗತೀಕರಣಗೊಂಡ ಬಂಡವಾಳದ ಆಧಿಪತ್ಯವನ್ನು ವ್ಯಕ್ತಪಡಿಸುವ ಸಾಧನವಾಗಿದೆ. ಯಾವುದೇ ನಿರ್ದಿಷ್ಟ ದೇಶದಲ್ಲಿ ಹುಟ್ಟಿಕೊಂಡ ಹಣಕಾಸು ಬಂಡವಾಳವು ಜಾಗತೀಕರಣಗೊಂಡ ಹಣಕಾಸು ಬಂಡವಾಳ ವ್ಯವಸ್ಥೆಯೊಂದಿಗೆ ಸಮಗ್ರೀಕೃತಗೊಂಡಿರುವುದರಿಂದ ಅದರಿಂದ ಹೊರ ಬರುವುದನ್ನು ವಿರೋಧಿಸುತ್ತದೆ. ಹಾಗಾಗಿ, ಜಾಗತೀಕರಣದಿಂದ ಹೊರ ಬರುವ ಕಾರ್ಯವು ಇತರ ವರ್ಗಗಳ ಬೆಂಬಲವನ್ನು, ಎಲ್ಲಕ್ಕಿಂತ ಮಿಗಿಲಾಗಿ, ಕಾರ್ಮಿಕ ವರ್ಗದ ಬೆಂಬಲವನ್ನು ಆಧರಿಸಿರಬೇಕಾಗುತ್ತದೆ. ಉಗ್ರ ಬಲಪಂಥೀಯರಿಗೆ ಕಾರ್ಮಿಕರಿಗೆ ಟೋಪಿ ಹಾಕುವುದನ್ನು ಬಿಟ್ಟರೆ, ದುಡಿಯುವ ವರ್ಗದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದಾಗಲಿ ಅಥವಾ ಸಕ್ರಿಯವಾಗಿ ಅವರಿಗೆ ಒತ್ತಾಸೆ ಕೊಡುವುದಾಗಲಿ ತಿಳಿದಿಲ್ಲ.

ಬಂಡವಾಳದ ಆಧಿಪತ್ಯಕ್ಕೆ ಮೌನಸಮ್ಮತಿ

ಹಾಗಾಗಿ, ಐರೋಪ್ಯ ಒಕ್ಕೂಟಕ್ಕೆ ಉಗ್ರ ಬಲಪಂಥೀಯರಿಂದ ಬರಬಹುದಾದ ಆಕ್ಷೇಪಣೆಗಳು, ಜಾಗತೀಕರಣಗೊಂಡ ಬಂಡವಾಳದ ಆಧಿಪತ್ಯಕ್ಕೆ ಯಾವ ಬೆದರಿಕೆಯನ್ನೂ ಒಡ್ಡದೆ, ಕೆಲವು “ಸಾಂಸ್ಕೃತಿಕ” ವಿಷಯಗಳಿಗಷ್ಟೇ ಸೀಮಿತವಾಗುತ್ತವೆ. ಅವುಗಳನ್ನು ಹೇಗೂ ನೋಡಿಕೊಳ್ಳಬಹುದು. ಆದ್ದರಿಂದ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಗಳಂತಹ ಜೀವನೋಪಾಯದ ಸಮಸ್ಯೆಗಳನ್ನು ಬದಿಗೊತ್ತಿ, ಚರ್ಚೆಗಳನ್ನು “ರಾಷ್ಟ್ರೀಯ ಅಸ್ಮಿತೆ” ಮತ್ತು “ಜುಡಿಯೋ-ಕ್ರಿಶ್ಚಿಯನ್ ಪರಂಪರೆ” ಮುಂತಾದ ವಿಷಯಗಳಿಗೆ ಸೀಮಿತಗೊಳಿಸುವುದರಿಂದ ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಕಾರ್ಯಾಚರಣೆ ಸಲೀಸಾಗುತ್ತದೆ ಮತ್ತು ಕಾರ್ಮಿಕ ವರ್ಗವನ್ನು ಬಾಧಿಸುವ ಲೌಕಿಕ ಸಮಸ್ಯೆಗಳಿಂದ ಚರ್ಚೆ-ಪ್ರವಚನಗಳನ್ನು ವಿಮುಖಗೊಳಿಸುತ್ತದೆ. ಇದು, ಜಾಗತೀಕರಣಗೊಂಡ ಬಂಡವಾಳದ ಉದ್ದೇಶಗಳಿಗೆ ಆಪ್ಯಾಯಮಾನವಾಗುತ್ತದೆ.

ಅದೇನೇ ಇರಲಿ, ಜಾಗತೀಕರಣಗೊಂಡ ಬಂಡವಾಳದ ಆಧಿಪತ್ಯಕ್ಕೆ ಉಗ್ರ ಬಲಪಂಥೀಯರ ಮೌನಸಮ್ಮತಿಯ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮೆಟ್ರೋಪಾಲಿಟನ್ ಬಂಡವಾಳಶಾಹಿಯು ಎದುರಿಸುತ್ತಿರುವ ಸ್ಥಗಿತತೆಯ ಬಿಕ್ಕಟ್ಟಿನಿಂದಾಗಿ ಮತ್ತು ಆದ್ದರಿಂದಾಗಿ ವಿಶ್ವ ಬಂಡವಾಳಶಾಹಿ ಆರ್ಥಿಕತೆಯೂ ಒಳಗಾಗಿರುವ ಸ್ಥಗಿತತೆಯ ಬಿಕ್ಕಟ್ಟನ್ನು ನಿವಾರಿಸಲು, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಕೀನ್ಸ್ ಮಾದರಿ ನೀತಿಗಳನ್ನು ಪುನಃ ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ವಿತ್ತೀಯ ಕೊರತೆಯ ಹೆಚ್ಚಳ ಮತ್ತು ಬಂಡವಾಳಗಾರರ ಮೇಲಿನ ತೆರಿಗೆಗಳ ಮೂಲಕ ಹಣ ಒದಗಿಸಿಕೊಂಡು, ಸರ್ಕಾರದ ಖರ್ಚು-ವೆಚ್ಚಗಳನ್ನು ಗಣನೀಯವಾಗಿ ಹೆಚ್ಚಿಸುವ ಒಂದಷ್ಟು ಕ್ರಮಗಳನ್ನು ಬಿಡೆನ್ ಘೋಷಿಸಿದ್ದಾರೆ. ಈ ಉದ್ದೇಶಕ್ಕಾಗಿ, ಕಾರ್ಪೊರೇಟ್ ತೆರಿಗೆಗಳ ಕನಿಷ್ಠ ದರದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮ್ಮತಿ ಮೂಡಿಸುವ ಪ್ರಯತ್ನದಲ್ಲಿ ಅಮೇರಿಕಾ ತೊಡಗಿದೆ ಕೂಡಾ. ಬಿಡೆನ್ ಅವರ ಕಾರ್ಯಸೂಚಿಯು ಯಶಸ್ವಿಯಾಗಲು ಇತರ ಬಂಡವಾಳಶಾಹಿ ಸರ್ಕಾರಗಳೂ ಸಹ, ಇದೇ ಉದ್ದೇಶಕ್ಕಾಗಿ, ಇದೇ ಅಜೆಂಡಾದೊಂದಿಗೆ, ತೆರಿಗೆಗಳ ಕನಿಷ್ಠ ದರದ ಬಗ್ಗೆ ಸಮ್ಮತಿಸುವುದು ಅಗತ್ಯವಾಗುತ್ತದೆ. ಮುಂದುವರಿದ ಎಲ್ಲಾ ದೇಶಗಳ ಸರ್ಕಾರಗಳು ಈ ಕಾರ್ಯಸೂಚಿಯನ್ನು ಒಪ್ಪಿದರೂ ಸಹ, ಮೂರನೇ ಜಗತ್ತಿನ ದೇಶಗಳಿಗೂ ಹಣಕಾಸಿನ ಸ್ವಾಯತ್ತತೆಯನ್ನು ಅನುಮತಿಸದಿದ್ದರೆ, ಅಂದರೆ ಕತ್ತು ಹಿಸುಕುವ “ಮಿತವ್ಯಯ” ಪಟ್ಟುಗಳನ್ನು ಸಡಿಲಗೊಳಿಸದಿದ್ದರೆ, ಆಗ “ಕಠಿಣ-ಮಿತವ್ಯಯಿ” ಮೂರನೇ ಜಗತ್ತು ಮತ್ತು ನ್ಯೂ ಡೀಲ್ ಮಾದರಿಯ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವ ಮೊದಲನೆಯ ಜಗತ್ತಿನ ದೇಶಗಳ ನಡುವಿನ ದ್ವಿಭಜನೆಯು ಮೂರನೆಯ ಜಗತ್ತಿನ ದೇಶಗಳ ಮತ್ಸರಕ್ಕೆ ಕಾರಣವಾಗುತ್ತದೆ. ಆದರೆ, ಮೊದಲನೆ ಜಗತ್ತೂ ಸಹ ಕೀನ್ಸಿಯನ್ ಪ್ರಸ್ತಾಪವನ್ನು ಒಪ್ಪದಿದ್ದರೆ, ಅಮೇರಿಕಾ ಕೈಗೊಂಡಿರುವ ಕಾರ್ಯವನ್ನು ಅದು ಒಂಟಿಯಾಗಿಯೇ ಸಾಧಿಸಲಾಗದು.

ಕೀನ್ಸಿಯನ್ ನೀತಿಗಳನ್ನು ಒಂಟಿಯಾಗಿ ಅಮೇರಿಕಾ ಅಳವಡಿಸಿಕೊಳ್ಳಲಾಗದು. ಏಕೆಂದರೆ, ಆಮದು ನಿರ್ಬಂಧಗಳ ಮೂಲಕ ತನ್ನನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳದ ಹೊರತು, ಅಮೇರಿಕಾ ಕೀನ್ಸಿಯನ್ ನೀತಿಗಳನ್ನು ಅಳವಡಿಸಿಕೊಂಡಾಗ, ಅಂತಹ ನೀತಿಯನ್ನು ಅನುಸರಿಸದ ಇತರ ದೇಶಗಳಿಂದ ಆಮದುಗಳು ಹೆಚ್ಚಿದಾಗ ಅಮೇರಿಕಾದ ವ್ಯಾಪಾರ ಕೊರತೆ ಹೆಚ್ಚುತ್ತದೆ. ಅಂದರೆ, ಅಮೇರಿಕಾ ಇತರ ದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ತನ್ನ ವ್ಯಾಪಾರ ಕೊರತೆಯನ್ನು ನೀಗಿಸಿಕೊಳ್ಳಲು ಆ ದೇಶಗಳಿಗೆ ಋಣಿಯಾಗುತ್ತದೆ. ಇಂಥಹ ಪರಿಸ್ಥಿತಿ ದೀರ್ಘಕಾಲ ಮುಂದುವರೆಯುವುದು ಸಾಧ್ಯವಿಲ್ಲ. ಯುರೋಪಿನಲ್ಲಿ “ವ್ಯವಸ್ಥೆ-ಪರ” ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ವಿತ್ತೀಯ ಮಿತವ್ಯಯ ನೀತಿಯ ಮರು ಹೇರಿಕೆಯನ್ನು ಉಗ್ರ ಬಲಪಂಥೀಯರು ಮೌನವಾಗಿ ಸಮ್ಮತಿಸುತ್ತಿರುವಾಗ ಮತ್ತು ಯುರೋಪಿಯನ್ ಎಡಪಂಥೀಯರು ಅದನ್ನು ವಿರೋಧಿಸುವಷ್ಟು ಪ್ರಬಲವಾಗಿಲ್ಲದ ಕಾರಣದಿಂದಾಗಿ, ಬಿಡೆನ್ ಶೈಲಿಯ ಕಾರ್ಯಸೂಚಿಯನ್ನು ಯೂರೋಪ್ ಅನುಸರಿಸುವ ಸಂಭಾವ್ಯತೆಗಳಿಲ್ಲ. ಹಾಗಾಗಿ, ವಿಶ್ವ ಬಂಡವಾಳಶಾಹಿಯ ಪ್ರಸ್ತುತ ಸ್ಥಗಿತತೆ ಮತ್ತು ಅದು ಮುಳುಗಿರುವ ಬಿಕ್ಕಟ್ಟು ಮುಂದುವರೆಯುತ್ತದೆ ಎಂದಾಗುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *