ಪ್ರೊ.ಪ್ರಭಾತ್ ಪಟ್ನಾಯಕ್
ರಾಜಕೀಯ ಸ್ವಾತಂತ್ರ‍್ಯದ ವರ್ಗಾವಣೆಯೊಂದಿಗೆ ಕೊನೆಗೊಳ್ಳದ ಸಾಮ್ರಾಜ್ಯಶಾಹಿಯ ದಾಳಿಯ ವಿರುದ್ಧ “ರಾಷ್ಟ್ರ”ವು ಬದುಕುಳಿದು ತನ್ನ ರಾಷ್ಟ್ರೀಯವಾದವನ್ನು ಮುಂದುವರಿಸಿಕೊಂಡು ಸಾಗಬೇಕು ಎಂದಾದರೆ ಅದನ್ನು ರೈತರ ಸಕ್ರಿಯ ಬೆಂಬಲದಿಂದ ಮಾತ್ರ ಸಾಧಿಸಬಹುದು. ಹಾಗಾಗಿ, ರೈತರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಅಭಿವೃದ್ಧಿಯ ಕಾರ್ಯತಂತ್ರವು ರಾಷ್ಟ್ರ ನಿರ್ಮಾಣದ ಯೋಜನೆಗೆ ವಿರುದ್ಧವಾಗುತ್ತದೆ. ಆದ್ದರಿಂದ ರೈತರನ್ನು ಹಿಂಡುವ ನವ-ಉದಾರವಾದದೊಂದಿಗೆ ಮೈತ್ರಿ ಹೊಂದಿರುವ ಹಿಂದುತ್ವವು, ಅದರ ದ್ವೇಷ ಕೆರಳಿಸುವ ಲಕ್ಷಣದ ಹೊರತಾಗಿಯೂ, ಅಲ್ಪಾವಧಿಯಲ್ಲಿ ಎಷ್ಟೇ ಯಶಸ್ವಿಯಾಗಲಿ, ‘ರಾಷ್ಟ್ರೀಯವಾದ’ದ ಬಗ್ಗೆ ಎಷ್ಟೇ ಮಾತಾಡಲಿ, ಅಂತಿಮವಾಗಿ ಯಶಸ್ವಿಯಾಗದು.
ಎಲ್ಲರೂ ತಿಳಿದಿರುವಂತೆ ಮೂರನೆಯ ಜಗತ್ತಿನ ದೇಶಗಳ ವಿಮೋಚನಾ ಹೋರಾಟವನ್ನು ಪ್ರೇರೇಪಿಸಿದ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದವು, ಹದಿನೇಳನೇ ಶತಮಾನದಲ್ಲಿ ಯುರೋಪಿನಲ್ಲಿ ಹೊರಹೊಮ್ಮಿದ ಬೂರ್ಜ್ವಾ ರಾಷ್ಟ್ರೀಯವಾದಕ್ಕಿಂತ ಸಂಪೂರ್ಣವಾಗಿ ಭಿನ್ನ ಸ್ವರೂಪದ್ದಾಗಿತ್ತು. ಕೆಲವು ಪ್ರಗತಿಪರರೂ ಸೇರಿದಂತೆ, ಪಾಶ್ಚಾತ್ಯ ದೇಶಗಳಲ್ಲಿ ಎಲ್ಲ “ರಾಷ್ಟ್ರೀಯವಾದ”ಗಳನ್ನೂ ಸಮರೂಪದವು ಮತ್ತು ಪ್ರತಿಗಾಮಿ ಸ್ವಭಾವದವುಗಳೆಂದು ಪರಿಗಣಿಸುವ ಒಂದು ಪ್ರವೃತ್ತಿ ಇದೆ. ಇವೆರಡೂ ರೂಪದ ರಾಷ್ಟ್ರೀಯವಾದಗಳ ನಡುವೆ ಹಲವಾರು ನಿರ್ಣಾಯಕ ವ್ಯತ್ಯಾಸಗಳಿದ್ದರೂ ಸಹ, ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದವು ಯುರೋಪಿಯನ್ ಬೂರ್ಜ್ವಾ ರಾಷ್ಟ್ರೀಯವಾದಕ್ಕಿಂತ ಭಿನ್ನವಾದದ್ದಲ್ಲ ಎಂದೇ ಅವರು ಪರಿಗಣಿಸುತ್ತಾರೆ.
ಈ ರಾಷ್ಟ್ರೀಯವಾದಗಳ ನಡುವಿನ ಹಲವು ವ್ಯತ್ಯಾಸಗಳ ಪೈಕಿ ಕನಿಷ್ಠ ಮೂರು ವ್ಯತ್ಯಾಸಗಳು ಮಹತ್ವಪೂರ್ಣವಾಗಿವೆ. ಮೊದಲನೆಯದು, ಯುರೋಪಿಯನ್ ರಾಷ್ಟ್ರೀಯವಾದವು ಮೊದಲಿನಿಂದಲೂ ಸಾಮ್ರಾಜ್ಯ-ದಾಹದಿಂದ ಕೂಡಿತ್ತು. ಎರಡನೆಯದು, ಎಲ್ಲರನ್ನೂ ಒಳಗೊಳ್ಳುವ ಲಕ್ಷಣವನ್ನು ಯಾವತ್ತೂ ಹೊಂದಿರಲಿಲ್ಲ, ಬದಲಿಗೆ ಯುರೋಪಿಯನ್ ರಾಷ್ಟ್ರೀಯವಾದವು ಸದಾ ಒಂದು “ಒಳಗಿನ ಶತ್ರು”ವನ್ನು ಗುರುತಿಸಿಕೊಂಡಿತ್ತು. ಮೂರನೆಯದು, “ರಾಷ್ಟ್ರ”ವನ್ನು ದೈವತ್ವಕ್ಕೇರಿಸಿ, ಅದನ್ನು ಜನರಿಗಿಂತ ಎತ್ತರದಲ್ಲಿ ಇರಿಸಿದ ಯುರೋಪಿಯನ್ ರಾಷ್ಟ್ರೀಯವಾದವು, ಜನರಿಂದ ತ್ಯಾಗಗಳನ್ನು ಬಯಸಿತೇ ವಿನಃ, ಪ್ರತಿಯಾಗಿ ಜನರಿಗೆ ಏನೂ ನೀಡಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಸಾಮ್ರಾಜ್ಯ ಸಂಪಾದನೆಯಲ್ಲಿ ತೊಡಗದ, ಮತ್ತು ಎಲ್ಲರನ್ನೂ ಒಳಗೊಂಡು ಜನ ಜೀವನವನ್ನು ಸುಧಾರಿಸುವುದೇ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದ ಮೂಲೋದ್ದೇಶವಾಗಿತ್ತು. ರಾಷ್ಟ್ರೀಯ ಬೂರ್ಜ್ವಾ ವರ್ಗದ ಜೊತೆಗೆ ಕಾರ್ಮಿಕರು ಮತ್ತು ರೈತರನ್ನೂ ಒಳಗೊಂಡಂತೆ ಬಹು-ವರ್ಗಗಳು ಒಟ್ಟುಗೂಡಿ ನಡೆಸಿದ ವಸಾಹತುಶಾಹಿ-ವಿರೋಧಿ ಹೋರಾಟದ ಮೇಲೆ ಯುರೋಪಿಯನ್ ಮಾದರಿಯ ಬೂರ್ಜ್ವಾ ರಾಷ್ಟ್ರೀಯವಾದದ ಮುದ್ರೆ ಒತ್ತುವುದು ಸಾಧ್ಯವಿರಲಿಲ್ಲ.
ವಸಾಹತುಶಾಹಿ ದಬ್ಬಾಳಿಕೆಯಲ್ಲಿ ಅತಿ ಹೆಚ್ಚು ನಲುಗಿದ್ದ ಮತ್ತು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತಾಪಿಯೇ ಒಂದು ಮಹತ್ವದ ವರ್ಗವಾಗಿದ್ದರಿಂದ, ಕೆಲವು ಬರಹಗಾರರು ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು “ರೈತ ರಾಷ್ಟ್ರೀಯವಾದ” ಎಂದೂ ಕರೆದಿದ್ದಾರೆ. ವಿಷಯವೆಂದರೆ, ರಾಜಕೀಯ ಸ್ವಾತಂತ್ರ‍್ಯದ ವರ್ಗಾವಣೆಯೊಂದಿಗೆ ಕೊನೆಗೊಳ್ಳದ ಸಾಮ್ರಾಜ್ಯಶಾಹಿಯ ದಾಳಿಯ ವಿರುದ್ಧ “ರಾಷ್ಟ್ರ”ವು ಬದುಕುಳಿದು ತನ್ನ ಈ ರಾಷ್ಟ್ರೀಯವಾದವನ್ನು ಮುಂದುವರಿಸಿಕೊಂಡು ಸಾಗಬೇಕು ಎಂದಾದರೆ ಅದನ್ನು ರೈತರ ಸಕ್ರಿಯ ಬೆಂಬಲದಿಂದ ಮಾತ್ರ ಸಾಧಿಸಬಹುದು. ಹಾಗಾಗಿ, ರೈತರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಅಭಿವೃದ್ಧಿಯ ಕಾರ್ಯತಂತ್ರವು ರಾಷ್ಟ್ರ ನಿರ್ಮಾಣದ ಯೋಜನೆಗೆ ವಿರುದ್ಧವಾಗುತ್ತದೆ. ನಗುವವರ ಎದುರಿಗೆ ಎಡವಿ ಬಿದ್ದ ರೀತಿಯಲ್ಲಿ ಸಾಮ್ರಾಜ್ಯಶಾಹಿಯ ಎದುರಿನಲ್ಲೇ ರಾಷ್ಟ್ರವನ್ನು ಚೂರು ಚೂರು ಮಾಡಿದಂತಾಗುತ್ತದೆ.
ಪ್ರಸ್ತುತ ಸರ್ಕಾರವು ಆಹಾರ ಬೆಳೆಗಳಿಗೆ ಕೊಡುತ್ತಿದ್ದ ಬೆಲೆ-ಬೆಂಬಲವನ್ನು ಹಿಂತೆಗೆದುಕೊಳ್ಳುವ ಮೂಲಕ ರೈತ ಕೃಷಿಯ ಮೇಲಿನ ದಾಳಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ದಿದೆ. ಈ ದಾಳಿಯನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿ ಗಡಿಯ ಬಳಿ ಒಂಬತ್ತು ತಿಂಗಳುಗಳಿಂದಲೂ ಪ್ರತಿಭಟನಾ-ಪ್ರದರ್ಶನ ನಡೆಸುತ್ತಿದ್ದಾರೆ. ರೈತರ ಮೇಲಿನ ಈ ದಾಳಿಗಳು ಆಕಸ್ಮಿಕವೂ ಅಲ್ಲ ಅಥವಾ ಭಾರತಕ್ಕೆ ನಿರ್ದಿಷ್ಟವೂ ಅಲ್ಲ. ಅವು, ಬಂಡವಾಳದಲ್ಲಿ ಅಂತರ್ಗತವಾಗಿರುವ ಪ್ರವೃತ್ತಿಗಳನ್ನು ಅನುಸರಿಸಿವೆ. ಈಗ, ನವ-ಉದಾರವಾದದ ಅಡಿಯಲ್ಲಿ ಈ ಪ್ರವೃತ್ತಿಗಳನ್ನು ಸ್ವೇಚ್ಛೆಯಾಗಿ ಬಿಟ್ಟುಬಿಡಲಾಗಿದೆ.
ಸಾಮ್ರಾಜ್ಯಶಾಹಿಯ ಬಿಗಿ ಮುಷ್ಠಿಯಿಂದ ಆಗ ತಾನೇ ವಿಮೋಚನೆಗೊಂಡ ಸನ್ನಿವೇಶದಲ್ಲಿ ಮೂರನೇ ಜಗತ್ತಿನ ದೇಶಗಳು ತಕ್ಷಣವೇ ಬಂಡವಾಳಶಾಹಿ ಅಭಿವೃದ್ಧಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಶಕ್ಯವಿರಲಿಲ್ಲ. ಏಕೆಂದರೆ, ರೈತ ಕೃಷಿಯೂ ಸೇರಿದಂತೆ ಕಿರು ಉತ್ಪಾದನಾ ವಲಯವನ್ನು ಅತಿಕ್ರಮಿಸುವ ಮತ್ತು ದುರ್ಬಲಗೊಳಿಸುವ ಪ್ರವೃತ್ತಿಯು ಬಂಡವಾಳಶಾಹಿಯಲ್ಲಿ ಅಂತರ್ಗತವಾಗಿದೆ. ಇದು ಬಂಡವಾಳಶಾಹಿಯ ಒಂದು ವಿಶಿಷ್ಟ ಲಕ್ಷಣ. ಈ ಅಂಶವನ್ನು ವಸಾಹತುಶಾಹಿ-ವಿರೋಧಿ ವಿಮೋಚನಾ ಚಳುವಳಿಯು ಗುರುತಿಸಿತ್ತು. ಇಂತಹ ವಸಾಹತುಶಾಹಿ-ವಿರೋಧಿ ವಿಮೋಚನಾ ಚಳುವಳಿಗಳನ್ನು ಕಮ್ಯುನಿಸ್ಟರು ಮುನ್ನಡೆಸದಿದ್ದರೂ ಸಹ, ಈ ಚಳುವಳಿಯ ನಾಯಕತ್ವವು ಬಂಡವಾಳಶಾಹಿಗಳಿಗೆ ಕಾರ್ಯಾಚರಣೆ ಮಾಡುವ ಅವಕಾಶವನ್ನು ಕೊಡುವುದರ ಜೊತೆಯಲ್ಲೇ ಅದರ ಮೇಲೆ ನಿಯಂತ್ರಣವನ್ನೂ ಸಾಧಿಸಿತು. ಅವರು ಅನುಸರಿಸಿದ ಅಭಿವೃದ್ಧಿಯ ಈ ಕಾರ್ಯತಂತ್ರವನ್ನು ನಿಯಂತ್ರಣ ನೀತಿಯ (ಡಿರಿಜಿಸ್ಟ್) ಆಳ್ವಿಕೆ ಎಂದು ಕರೆಯಲಾಗಿದೆ.
ಈ ಡಿರಿಜಿಸ್ಟ್ ಕಾರ್ಯತಂತ್ರದ ಅಡಿಯಲ್ಲಿ, ಭೂ ಮರುಹಂಚಿಕೆಯ ಪ್ರಕ್ರಿಯೆಯು ಆಮೂಲಾಗ್ರವಾಗಿ ನಡೆಯದ ಕಾರಣದಿಂದಾಗಿ, ಕೃಷಿಯಲ್ಲಿ ರೈತರ ನಡುವೆ ವಿಭಿನ್ನೀಕರಣದ ಪ್ರಕ್ರಿಯೆ ನಡೆಯಿತು ಮತ್ತು ಈ ಕಾರಣದಿಂದಾಗಿ ಕೃಷಿ ವಲಯದೊಳಗೇ ಬಂಡವಾಳಶಾಹಿಯ ಅಭಿವೃದ್ಧಿಯು ಭೂಮಾಲೀಕ ಬಂಡವಾಳಶಾಹಿಯ ಜೊತೆಗೇ ಸಾಗಿತು. ಆದಾಗ್ಯೂ, ಹೊರಗಿನ ಬಂಡವಾಳಗಾರರಿಗೆ ಈ ವಲಯದ ಮೇಲೆ ಯಾವುದೇ ಪ್ರಭಾವ ಬೀರಲು ಅಥವಾ ಹಿಡಿತ ಸಾಧಿಸಲು ಅವಕಾಶವಿರಲಿಲ್ಲ. ವಿದೇಶಿ ಕೃಷಿ ವ್ಯವಹಾರ-ಕಂಪೆನಿಗಳ ಮಾತಿರಲಿ, ದೇಶೀಯ ಏಕಸ್ವಾಮ್ಯ ಬೂರ್ಜ್ವಾ ವರ್ಗದಿಂದಲೂ ರೈತ ಕೃಷಿಯನ್ನು ರಕ್ಷಿಸಲಾಯಿತು.
ನವ-ಉದಾರವಾದಿ ಆಳ್ವಿಕೆಯ ಆಗಮನದೊಂದಿಗೆ ಈ ಎಲ್ಲ ರಕ್ಷಣೆಗಳು ಇಲ್ಲವಾದವು. ರೈತ ಕೃಷಿಯನ್ನು “ಹೊರಗಿನ ಬಂಡವಾಳಶಾಹಿಗಳಿಂದ” ರಕ್ಷಿಸುವ ಸಲುವಾಗಿ ಪ್ರಭುತ್ವದ ನಿಯಂತ್ರಣಗಳಲ್ಲಿ ಸಿಲುಕಿದ ಬಂಡವಾಳಶಾಹಿಯ ಬದಲು, ಅನಿರ್ಬಂಧಿತ ಬಂಡವಾಳಶಾಹಿ ಅಭಿವೃದ್ಧಿಯನ್ನು ಹರಿಯಬಿಡುವುದೇ ನವ-ಉದಾರವಾದದ ಉದ್ದೇಶವಾಗಿದೆ. ಆದ್ದರಿಂದ, ನವ-ಉದಾರವಾದವು ರೈತ ಕೃಷಿಯನ್ನು ದುರ್ಬಲಗೊಳಿಸುತ್ತದೆ.
ಭಾರತದಲ್ಲಿ ರೈತ ಕೃಷಿಯ ಮೇಲೆ ಹಲವು ರೀತಿಗಳಲ್ಲಿ ಹಲ್ಲೆಯಾಗುತ್ತದೆ. ಮೊದಲನೆಯದಾಗಿ, ಬೆಲೆ ಏರಿಳಿತಗಳು, ಅದರಲ್ಲೂ ವಿಶೇಷವಾಗಿ ತೀಕ್ಷ್ಣ ಬೆಲೆ ಕುಸಿತಗಳು ರೈತರಿಗೆ ಆಘಾತಕಾರಿಯಾಗುತ್ತವೆ. ಸರ್ಕಾರಿ ಸಂಸ್ಥೆಗಳ ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಆಹಾರ ಮತ್ತು ರೊಕ್ಕದ-ಬೆಳೆಗಳ ಕುಸಿತವನ್ನು ಡಿರಿಜಿಸ್ಟ್ ಆಡಳಿತದಲ್ಲಿ ತಪ್ಪಿಸಲಾಗಿತ್ತು. ಹಿಂದಿನ ಯಾವುದೇ ಸರ್ಕಾರವೂ, ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬರುವ ಹಿಂದಿನ ಸರ್ಕಾರಗಳು ಆಹಾರ ಬೆಳೆಗಳಿಗೆ ಒದಗಿಸುತ್ತಿದ್ದ ರಕ್ಷಣೆಯನ್ನು ಹಿಂತೆಗೆದುಕೊಂಡಿಲ್ಲವಾದರೂ, ಡಿರಿಜಿಸ್ಟ್ ಆಡಳಿತದಲ್ಲಿ ಸರ್ಕಾರಿ ಸಂಸ್ಥೆಗಳ ಮಾರುಕಟ್ಟೆ ಮಧ್ಯಪ್ರವೇಶವನ್ನು ನಿಲ್ಲಿಸುವ ಮೂಲಕ ರೊಕ್ಕದ-ಬೆಳೆಗಳಿಗೆ ನೀಡಲಾದ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಪರಿಣಾಮವಾಗಿ, ಬೆಲೆ ಕುಸಿತದ ವರ್ಷಗಳಲ್ಲಿ ಸಾಲದ ಬಲೆಗೆ ಸಿಲುಕಿದ ರೈತರು, ಆನಂತರ ಸಾಲ ತೀರಿಸುವುದು ಎಂದಿಗೂ ಸಾಧ್ಯವಾಗಲಿಲ್ಲ.
ಎರಡನೆಯದಾಗಿ, ನವ-ಉದಾರ ಅವಧಿಯಲ್ಲಿ, ರೊಕ್ಕದ-ಬೆಳೆಗಳ ಮಾರಾಟದ ಬೆಲೆಗಳು ವಿಶ್ವ ಮಾರುಕಟ್ಟೆಯಲ್ಲಿ ನಿರ್ಧರಿಸಲ್ಪಡುತ್ತಿದ್ದ ಸಮಯದಲ್ಲಿ ಲಾಗುವಾಡುಗಳ ಬೆಲೆಗಳು ಹೆಚ್ಚಾದವು. ಬ್ಯಾಂಕುಗಳ ಖಾಸಗೀಕರಣದೊಂದಿಗೆ ರೈತರ ಸಾಲಗಳು ದುಬಾರಿಯಾದವು. ಒಟ್ಟು ಇಂತಿಷ್ಟು ಮೊತ್ತದ “ಆದ್ಯತಾ ವಲಯ”(ಇದರಲ್ಲಿ ಕೃಷಿಯು ಪ್ರಮುಖವಾಗಿದೆ) ಸಾಲಗಳನ್ನು ಒದಗಿಸಬೇಕೆಂಬ ನಿಯಮಗಳನ್ನು ಅನುಸರಿಸಲು ಬದ್ಧವಾಗಿದ್ದ ಖಾಸಗಿ ಬ್ಯಾಂಕುಗಳು ಈ ನಿಯಮಗಳನ್ನು ನಿರ್ಭಯವಾಗಿ ಉಲ್ಲಂಘಿಸಿದವು. ಈ ವಿಷಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯನಿರ್ವಹಣೆಯು ಉತ್ತಮವಾಗಿದ್ದರೂ ಸಹ, “ಕೃಷಿ ಸಾಲ”ಗಳ ವ್ಯಾಖ್ಯಾನವನ್ನು ಸಡಿಲಗೊಳಿಸಿದರ ಲಾಭ ಪಡೆದು, ರೈತ ಕೃಷಿಗೆ ಸಾಲವನ್ನು ನಿರಾಕರಿಸುತ್ತವೆ. ಹೀಗೆ ರೈತರನ್ನು ಖಾಸಗಿ ಲೇವಾದೇವಿದಾರರ ತೆಕ್ಕೆಗೆ ತಳ್ಳಲಾಯಿತು. ಲೇವಾದೇವಿದಾರರು ರೈತರಿಂದ ವಿಪರೀತ ಬಡ್ಡಿ ವಸೂಲು ಮಾಡಿದರು.
ಮೂರನೆಯದಾಗಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಸೇವೆಗಳಿಗೆ ಮತ್ತು ಜೀವನ ನಿರ್ವಹಣೆಗಾಗಿ ಬಳಕೆಯಾಗುವ ಸರಕು-ಸರಂಜಾಮುಗಳಿಗೆ ಹಾಗೂ ಲಾಗುವಾಡುಗಳಿಗೆ ಏರಿಕೆಯಾದ ಬೆಲೆಗಳಿಗೆ ಹೋಲಿಸಿದಾಗ ರೈತರ ಫಸಲಿಗೆ ಸಿಗುವ ಬೆಲೆಗಳು ತೀರಾ ಕಡಿಮೆಯೇ. ಅವರ ಈ ಪರಿಸ್ಥಿತಿಗೆ, ವ್ಯಾಪಾರ ನಿಯಮಗಳನ್ನು ರೈತರ ವಿರುದ್ಧವಾಗಿ ಬದಲಾಯಿಸಿರುವುದೇ ಕಾರಣ ಎಂಬುದು ಕಂಡುಬರುತ್ತದೆ. ಎದ್ದು ಕಾಣುವ ಇನ್ನೊಂದು ಕಾರಣವೆಂದರೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದ ಸರ್ಕಾರವು ಈ ಅಗತ್ಯ ಸೇವೆಗಳನ್ನು ಖಾಸಗೀಕರಿಸಿದೆ. ನವ-ಉದಾರವಾದದ ಲಕ್ಷಣವೇ ಆಗಿರುವ ಈ ಕ್ರಮವು ರೈತರಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ.
ನಾಲ್ಕನೆಯದಾಗಿ, ಈ ಹಿಂದಿನ ಸರ್ಕಾರಗಳು ಹೊರಗಿನ ಬಂಡವಾಳಶಾಹಿಗಳ ಮತ್ತು ರೈತ ಕೃಷಿಯ ನಡುವೆ ಒಂದು ಸೇತುವೆಯಂತಿದ್ದವು. ನವ-ಉದಾರವಾದದ ಅಡಿಯಲ್ಲಿ ಈ ಸಂಬಂಧವು ಕೊನೆಗೊಂಡಿದೆ. ಬಂಡವಾಳಗಾರರು ರೈತರನ್ನು ನೇರವಾಗಿ ಸಂಪರ್ಕಿಸುತ್ತಾರೆ. ತಮ್ಮ ಏಜೆಂಟರ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಬೀಜ ಮತ್ತು ಕೀಟನಾಶಕ ಸಂಸ್ಥೆಗಳು ರೈತರಿಗೆ ಸಾಲವನ್ನೂ ಸಹ ಒದಗಿಸುತ್ತವೆ. ಒಮ್ಮೆ ರೈತನು ಈ ಸಂಸ್ಥೆಗಳ ಹಿಡಿತಕ್ಕೆ ಸಿಲುಕಿದರೆ, ಹೊರಬರುವುದು ಅಸಾಧ್ಯವೇ. ಗುತ್ತಿಗೆ ಕೃಷಿಯು ಈಗ ರೈತರ ಬಾಗಿಲಲ್ಲಿ ನಿಂತು ಕದ ತಟ್ಟುತ್ತಿದೆ. ವಿವಿಧ ವಿಧಾನಗಳ ಮೂಲಕ ಕೊಡಬೇಕಾಗಿದ್ದುದಕ್ಕಿಂತ ಕಡಿಮೆ ಹಣ ಕೊಟ್ಟು ರೈತರನ್ನು ಮೋಸಗೊಳಿಸಲಾಗುತ್ತಿದೆ.
ಮೇಲೆ ತಿಳಿಸಿದ ಅಂಶಗಳು ರೈತ ಕೃಷಿಯ ಮೇಲಿನ ಹಲ್ಲೆಗಳ ಸಮಗ್ರ ಪಟ್ಟಿಯಲ್ಲ. ಇವು ಕೆಲವು ಮಾತ್ರ. ಈ ಎಲ್ಲ ಬೆಳವಣಿಗೆಗಳ ಫಲಶೃತಿಯೆಂದರೆ, ಹೊರಲಾರದಷ್ಟು ಸಾಲ ಭಾರದಲ್ಲಿ ಸಿಲುಕಿದ ರೈತಾಪಿಯು ಗತಿಯಿಲ್ಲದಂತಾಗಿದೆ. 1995ರಿಂದ ಭಾರತದಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ರೈತರ ಆತ್ಮಹತ್ಯೆಯ ಪ್ರಕರಣಗಳು ರೈತಾಪಿಯ ನಿರ್ಗತಿಕತನದ ಸ್ಪಷ್ಟ ಲಕ್ಷಣವಾಗಿದೆ. ಪ್ರಸ್ತುತ ಸರ್ಕಾರವು ಆಹಾರ ಬೆಳೆಗಳಿಗೆ ಕೊಡುತ್ತಿದ್ದ ಬೆಲೆ-ಬೆಂಬಲವನ್ನು ಹಿಂತೆಗೆದುಕೊಳ್ಳುವ ಮೂಲಕ ರೈತ ಕೃಷಿಯ ಮೇಲಿನ ದಾಳಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ದಿದೆ. ಈ ದಾಳಿಯನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿ ಗಡಿಯ ಬಳಿ ಒಂಬತ್ತು ತಿಂಗಳುಗಳಿಂದಲೂ ಪ್ರತಿಭಟನಾ-ಪ್ರದರ್ಶನ ನಡೆಸುತ್ತಿದ್ದಾರೆ.
ಭಾರತದಂತಹ ದೇಶಗಳಲ್ಲಿ ರಾಷ್ಟ್ರ ನಿರ್ಮಾಣದ ಯೋಜನೆಗೆ ರೈತ ಕೃಷಿಯನ್ನು ರಕ್ಷಿಸುವಂಥಹ ಒಂದು ಅಭಿವೃದ್ಧಿ-ಕಾರ್ಯತಂತ್ರದ ಅಗತ್ಯವಿದೆ. ಸಮಾಜವಾದದ ಉದಯಕ್ಕೆ ಕಾರಣವಾಗುವ ಈ ಕಾರ್ಯತಂತ್ರವು ರೈತಾಪಿಯು ಸ್ವ-ಇಚ್ಛೆಯಿಂದ ಸಾಮೂಹಿಕ ಮತ್ತು ಸಹಕಾರಿ ಸಂಘಗಳಾಗಿ ಸ್ವಯಂ-ಪರಿವರ್ತನೆ ಹೊಂದುವವರೆಗೂ ಚಾಲನೆಯಲ್ಲಿ ಇರಬೇಕಾಗುತ್ತದೆ. ಅಂತಹ ಒಂದು ಸಂದರ್ಭದಲ್ಲಿ ಸಮಾಜವಾದಿ ಕಾರ್ಯತಂತ್ರವನ್ನು ಮುಂದುವರೆಸುವುದು ಕೇವಲ ಅಪೇಕ್ಷೆಯ ಒಂದು ವಿಷಯವಲ್ಲ; ಒಂದು ಸ್ವತಂತ್ರ ಘಟಕವಾಗಿ ರಾಷ್ಟ್ರದ ಉಳಿವಿಗೂ ಇದು ಅತ್ಯಗತ್ಯವಾಗುತ್ತದೆ.
ರೈತರ ಮೇಲಿನ ಈ ದಾಳಿಗಳು ಆಕಸ್ಮಿಕವೂ ಅಲ್ಲ ಅಥವಾ ಭಾರತಕ್ಕೆ ನಿರ್ದಿಷ್ಟವೂ ಅಲ್ಲ. ಅವು, ಬಂಡವಾಳದಲ್ಲಿ ಅಂತರ್ಗತವಾಗಿರುವ ಪ್ರವೃತ್ತಿಗಳನ್ನು ಅನುಸರಿಸಿವೆ. ಈ ಪ್ರವೃತ್ತಿಗಳನ್ನು ನಿರ್ವಸಾಹತೀಕರಣದ ನಂತರದ ಅನೇಕ ವರ್ಷಗಳ ಕಾಲ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿಡಲಾಗಿತ್ತು. ಆದರೆ, ಈಗ, ನವ-ಉದಾರವಾದದ ಅಡಿಯಲ್ಲಿ ಈ ಪ್ರವೃತ್ತಿಗಳನ್ನು ಸ್ವೇಚ್ಛೆಯಾಗಿ ಬಿಟ್ಟುಬಿಡಲಾಗಿದೆ. ಹಾಗಾಗಿ, ರೈತ ಕೃಷಿಯು ಹಾನಿಗೀಡಾಗಿದೆ.
ರೈತಾಪಿಯು ನಿರ್ಗತಿಕತನಕ್ಕೆ ಒಳಗಾಗಿರುವಾಗ ಮೂರನೇ ಜಗತ್ತಿನ ಒಂದು ದೇಶದಲ್ಲಿ ರಾಷ್ಟ್ರ ನಿರ್ಮಾಣವು ಅಸಾಧ್ಯವೇ ಸರಿ. ಯೂರೋಪಿನಲ್ಲಿ ಬೂರ್ಜ್ವಾ ರಾಷ್ಟ್ರೀಯವಾದವು ಸಂಪಾದಿಸಿದ ಬೆಂಬಲ ಮತ್ತು ಗೌರವಾದರಗಳು ದುಡಿಯುವ ಜನರ ಪರಿಸ್ಥಿತಿಗಳನ್ನು ಅದು ಸ್ವಲ್ಪ ಮಟ್ಟಿಗೆ ಸುಧಾರಿಸಿದ ಕಾರಣದಿಂದ ಲಭ್ಯವಾಗಿದ್ದವು. ಈ ಬೆಂಬಲ ಮತ್ತು ಗೌರವಾದರಗಳು ಎಷ್ಟು ಮೇಲು ಮೇಲಿನವು ಎಂಬುದನ್ನು ಮೊದಲ ಮಹಾಯುದ್ಧವು ಬಯಲುಮಾಡಿತು. ಜನರ ಸ್ಥಿತಿ-ಗತಿಗಳು ಅಲ್ಲಿ ಉತ್ತಮಗೊಂಡದ್ದು ಬಂಡವಾಳಶಾಹಿಯ ಯಾವುದೇ ಅಂತರ್ಗತ ಪ್ರವೃತ್ತಿಯ ಕಾರಣದಿಂದಾಗಿ ಅಲ್ಲ, ಯುರೋಪಿಯನ್ ಬಂಡವಾಳಶಾಹಿಯ ಸಾಮ್ರಾಜ್ಯಶಾಹಿಯ ವ್ಯಾಪ್ತಿಯ ಕಾರಣದಿಂದಾಗಿ.
ಸಾಮ್ರಾಜ್ಯಶಾಹಿಯ ಈ ವ್ಯಾಪ್ತಿಯು ಯುರೋಪಿಯನ್ ಕಾರ್ಮಿಕರ ವಿಶಾಲ ಸಮೂಹವನ್ನು ಬಿಳಿಯರು ಅದಾಗಲೇ ನೆಲೆಸಿದ್ದ ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋಗಲು ಅನುವು ಮಾಡಿಕೊಟ್ಟಿತು. ಈ ವಿದ್ಯಮಾನವು ಯುರೋಪಿಯನ್ ಕಾರ್ಮಿಕ ಮಾರುಕಟ್ಟೆಗಳಲ್ಲಿ ಬಿಗಿತವನ್ನು ಸೃಷ್ಟಿಸಿತು. ಪರಿಣಾಮವಾಗಿ, ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳವನ್ನು ಪಡೆಯುವಲ್ಲಿ ಯಶಸ್ವಿಯಾದವು. ಉಷ್ಣವಲಯದ ವಸಾಹತುಗಳ ಅಪ-ಕೈಗಾರಿಕೀಕರಣವು ನಿರುದ್ಯೋಗದ ರಫ್ತಿನ ಮೂಲಕ ಅದೇ ರೀತಿಯ ಪಾತ್ರವನ್ನು ವಹಿಸಿತು. ಅಂತಿಮವಾಗಿ ಈ ಉಷ್ಣವಲಯದ ವಸಾಹತುಗಳಿಂದ ಮಿಗುತಾಯವನ್ನು ಹೀರುವ ಮೂಲಕ, ಲಾಭದ ಪ್ರಮಾಣವನ್ನು ಹಿಂಡದೆ, ಮಹಾನಗರೀಯ (ಪಾಶ್ಚಿಮಾತ್ಯ)ಅರ್ಥವ್ಯವಸ್ಥೆಗಳಲ್ಲಿ ವೇತನ ಹೆಚ್ಚಳವನ್ನು ಸಾಧ್ಯವಾಗಿಸಿತು.
ಹೀಗೆ, ಭಾರತದಂತಹ ದೇಶದಲ್ಲಿ ವಸಾಹತುಶಾಹಿ ವಿರೋಧಿ ರಾಷ್ಟ್ರೀಯವಾದವನ್ನು ಮುನ್ನಡೆಸುವುದು ನವ-ಉದಾರವಾದಿ ಬಂಡವಾಳಶಾಹಿಯ ಆಡಳಿತದಲ್ಲಿ ಅಸಾಧ್ಯವೇ ಸರಿ. ಅದು ರೈತರ ಮೇಲೆ ತೀವ್ರ ಒತ್ತಡವನ್ನು ಹೇರುತ್ತದೆ. ಅಂತೆಯೇ, ರಾಷ್ಟ್ರವನ್ನು ನಿರ್ಮಿಸಲು ಬೂರ್ಜ್ವಾ ರಾಷ್ಟ್ರೀಯವಾದವನ್ನು ಪ್ರಚೋದಿಸುವುದೂ ಅಷ್ಟೇ ಅಸಾಧ್ಯದ ಕೆಲಸ. ಏಕೆಂದರೆ, ಅಂತಹ ದೇಶವು ಯುರೋಪ್ ಹೊಂದಿದ್ದಂತೆ ಸಾಮ್ರಾಜ್ಯವನ್ನು ಹೊಂದುವ ಅವಕಾಶವಿಲ್ಲ. “ಹಿಂದುತ್ವ”ದ ಜೊತೆಗೆ ಬೂರ್ಜ್ವಾ ರಾಷ್ಟ್ರೀಯತ್ವವನ್ನು ರಾಷ್ಟ್ರ ನಿರ್ಮಾಣ ಯೋಜನೆಯ ಆಧಾರವಾಗಿ ಬಳಸುವುದೂ ಸಹ ವ್ಯರ್ಥವೇ. ರೈತರನ್ನು ಹಿಂಡುವ ನವ-ಉದಾರವಾದದೊಂದಿಗೆ ಮೈತ್ರಿ ಹೊಂದಿರುವ ಹಿಂದುತ್ವವು, ಅದರ ದ್ವೇಷ ಕೆರಳಿಸುವ ಲಕ್ಷಣದ ಹೊರತಾಗಿಯೂ, ಅಲ್ಪಾವಧಿಯಲ್ಲಿ ಎಷ್ಟೇ ಯಶಸ್ವಿಯಾಗಲಿ, ಅಂತಿಮವಾಗಿ ಯಶಸ್ವಿಯಾಗದು. ಹಿಟ್ಲರ್ ಕೂಡ 1930ರ ಬಿಕ್ಕಟ್ಟಿನಿಂದ ಜರ್ಮನ್ ಅರ್ಥವ್ಯವಸ್ಥೆಯ ಚೇತರಿಕೆಗಾಗಿ ಉದ್ಯೋಗ ಸೃಷ್ಟಿಯ ಮೂಲಕ ತನ್ನ “ರಾಷ್ಟ್ರೀಯವಾದಿ” ನಿವೇದನೆಯನ್ನು ಗಟ್ಟಿಗೊಳಿಸಿಕೊಳ್ಳಬೇಕಾಯಿತು ಎಂಬುದನ್ನು ನೆನಪಿನಲ್ಲಿಡಬೇಕು.
ಭಾರತದಂತಹ ದೇಶಗಳಲ್ಲಿ ರಾಷ್ಟ್ರ ನಿರ್ಮಾಣದ ಯೋಜನೆಗೆ ರೈತ ಕೃಷಿಯನ್ನು ರಕ್ಷಿಸುವಂಥಹ ಒಂದು ಅಭಿವೃದ್ಧಿ-ಕಾರ್ಯತಂತ್ರದ ಅಗತ್ಯವಿದೆ. ಸಮಾಜವಾದದ ಉದಯಕ್ಕೆ ಕಾರಣವಾಗುವ ಈ ಕಾರ್ಯತಂತ್ರವು ರೈತಾಪಿಯು ಸ್ವ-ಇಚ್ಛೆಯಿಂದ ಸಾಮೂಹಿಕ ಮತ್ತು ಸಹಕಾರಿ ಸಂಘಗಳಾಗಿ ಸ್ವಯಂ-ಪರಿವರ್ತನೆ ಹೊಂದುವವರೆಗೂ ಚಾಲನೆಯಲ್ಲಿರಬೇಕಾಗುತ್ತದೆ. ಅಂತಹ ಒಂದು ಸಂದರ್ಭದಲ್ಲಿ ಸಮಾಜವಾದಿ ಕಾರ್ಯತಂತ್ರವನ್ನು ಮುಂದುವರೆಸುವುದು ಕೇವಲ ಅಪೇಕ್ಷೆಯ ಒಂದು ವಿಷಯವಲ್ಲ; ಒಂದು ಸ್ವತಂತ್ರ ಘಟಕವಾಗಿ ರಾಷ್ಟ್ರದ ಉಳಿವಿಗೂ ಇದು ಅತ್ಯಗತ್ಯವಾಗುತ್ತದೆ.
ಅನು: ಕೆ.ಎಂ. ನಾಗರಾಜ್