ನವ-ಉದಾರವಾದೀ ಆಳ್ವಿಕೆಯಲ್ಲಿ ಹಣದುಬ್ಬರ-ತಡೆ ಸರಕಾರಗಳ ಕೈಯಲ್ಲಿಲ್ಲ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್

ಹಣದುಬ್ಬರವನ್ನು ಎದುರಿಸುವ ಒಂದು ಸಾಧನವಾಗಿ ಬಡ್ಡಿ ದರಗಳನ್ನು ಹೆಚ್ಚಿಸುವ ವಿವೇಕದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಚರ್ಚೆಯು ಸಾಮಾನ್ಯವಾಗಿ ನವಉದಾರವಾದಿ ಸನ್ನಿವೇಶವನ್ನು ಭಾವಿಸಿಕೊಳ್ಳುತ್ತದೆ. ಇಂತಹ  ಸನ್ನಿವೇಶದಲ್ಲಿ  ನಿರುದ್ಯೋಗ ಹಾಗೂ ಹಣದುಬ್ಬರ ಇವುಗಳ ನಡುವೆ ಯಾವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡಬೇಕು ಎಂಬ ಅಂಶವು ಉದ್ಭವವಾಗುವುದೇ, ಇತರ ಸಾಧನಗಳನ್ನು ಸರ್ಕಾರದ ಕೈಯಿಂದ ಕಿತ್ತುಕೊಳ್ಳುವುದರಿಂದಾಗಿ. ಹಾಗಾಗಿ, ವಿಶ್ವದ ಪ್ರತಿಯೊಂದು ದೇಶದ, ಅಂದರೆ ಇಡೀ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯ ಮತ್ತು ಉದ್ಯೋಗದ ಮಟ್ಟವನ್ನು ಕೆಲವೇ ಅಮೆರಿಕನ್ ಜೂಜುಕೋರರ ಒಂದು ಗುಂಪು ನಿರ್ಧರಿಸುವ ಪರಿಸ್ಥಿತಿ ಉಂಟಾಗಿದೆ...

ಕೊರೊನಾ ಪಿಡುಗಿನಿಂದ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳದ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ತಡೆಬಡೆ ಇಲ್ಲದೆ ಹಬ್ಬುತ್ತಿರುವ ಪ್ರಸ್ತುತ ಹಣದುಬ್ಬರವನ್ನು ಎದುರಿಸುವ ಒಂದು ಸಾಧನವಾಗಿ ವಿಶ್ವದ ಎಲ್ಲ ಬಂಡವಾಳಶಾಹಿ ದೇಶಗಳ ಕೇಂದ್ರ ಬ್ಯಾಂಕುಗಳೂ ಬಡ್ಡಿ ದರಗಳನ್ನು ಹೆಚ್ಚಿಸುತ್ತಿವೆ ಅಥವಾ ಹೆಚ್ಚಿಸಲು ಹೊರಟಿವೆ. ಈ ಕ್ರಮವು ಅರ್ಥವ್ಯವಸ್ಥೆಯನ್ನು ಅಂತಿಮವಾಗಿ ಸ್ಥಗಿತತೆಯತ್ತ ಮತ್ತು ಹೆಚ್ಚಿನ ಮಟ್ಟದ ನಿರುದ್ಯೋಗದತ್ತ ತಳ್ಳುವುದು ಖಚಿತ.

ನಿಜ, ಎಲ್ಲ ದೇಶಗಳ ಕೇಂದ್ರ ಬ್ಯಾಂಕುಗಳಿಗೂ ಬಡ್ಡಿದರ ಏರಿಕೆಯ ವಿಷಯದಲ್ಲಿ ಒಂದು ಮಾನದಂಡವನ್ನು ನಿಗದಿಪಡಿಸುವ ಅಮೆರಿಕಾದ ಫೆಡರಲ್ ರಿಸರ್ವ್ ಬೋರ್ಡ್ ಮಂಡಿಸುವ ವಾದವೇ ಬೇರೆ. ತಾನು ನಿರ್ಣಯಿಸುವ ಬಡ್ಡಿ ದರ ಹೆಚ್ಚಳವು ನಿಜ ಅರ್ಥವ್ಯವಸ್ಥೆಯ ಮೇಲೆ ಬೀರುವ ಪರಿಣಾಮವು ನಗಣ್ಯ ಅಥವಾ ಹೆಚ್ಚೆಂದರೆ ತಾತ್ಕಾಲಿಕವಾಗಿ ಅಲ್ಪ ಸ್ವಲ್ಪ ಪರಿಣಾಮ ಬೀರಬಹುದು ಮತ್ತು ಬಡ್ಡಿ ದರ ಏರಿಕೆಯಿಂದಾಗಿ ಅರ್ಥವ್ಯವಸ್ಥೆಯ ಚೇತರಿಕೆಗೆ ಧಕ್ಕೆಯಾಗುವುದಿಲ್ಲ ಎಂದು ಅದು ವಾದಿಸುತ್ತದೆ. ಆದರೆ, ಈ ವಾದವು ಮೂಲಭೂತವಾಗಿ ದೋಷಪೂರಿತವಾದ ತರ್ಕವನ್ನು ಆಧರಿಸಿದೆ. ಫೆಡರಲ್ ರಿಸರ್ವ್ ಬೋರ್ಡ್‍ನ ತರ್ಕವು ಈ ಕೆಳಗಿನಂತಿದೆ.

ಅಮೆರಿಕದ ಇಂದಿನ ಹಣದುಬ್ಬರವು ಹಣ-ವೇತನದ ಒತ್ತಡದಿಂದ (ವೇತನಗಳ ಹೆಚ್ಚಳದಿಂದ) ಉಂಟಾಗಿದೆ. ಹಣದುಬ್ಬರವಾಗುತ್ತದೆ ಎಂದು ಜನರು ನಿರೀಕ್ಷಿಸುವುದರಿಂದಲೇ ಈ ಹಣದುಬ್ಬರ ಉದ್ಭವಿಸುತ್ತದೆ. ಬಡ್ಡಿ ದರ ಏರಿಕೆಯ ಕ್ರಮವು ಜನರನ್ನು ಹಣದುಬ್ಬರದ ಇಳಿಕೆಯನ್ನು ನಿರೀಕ್ಷಿಸುವಂತೆ ಮಾಡುತ್ತದೆ ಮತ್ತು ಹಣ-ವೇತನದ ತಳ್ಳುವಿಕೆಯಿಂದಾದ ಹಣದುಬ್ಬರವನ್ನು ಕೊನೆಗೊಳಿಸುತ್ತದೆ. ಹಾಗಾಗಿ, ಹಣದುಬ್ಬರ ನಿಜಕ್ಕೂ ಇಳಿಯುತ್ತದೆ. ಈ ಎಲ್ಲ ಹೊಂದಾಣಿಕೆಗಳೂ ನಿರೀಕ್ಷಿತ ಬೆಲೆಗಳ ವಲಯಕ್ಕೆ ಸೀಮಿತಗೊಳ್ಳುವುದರಿಂದ ಮತ್ತು ಆ ಮಾರ್ಗವಾಗಿ ವಾಸ್ತವಿಕ ಬೆಲೆಗಳ ವಲಯವನ್ನು ಪ್ರಭಾವಿಸುವುದರಿಂದ, ಉತ್ಪಾದನೆ ಮತ್ತು ಉದ್ಯೋಗದ ನಿಜ ಅರ್ಥವ್ಯವಸ್ಥೆಯು ಹಿಂಜರಿತಕ್ಕೊಳಗಾಗುವುದಿಲ್ಲ ಎಂದು ಅಮೆರಿಕಾದ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ವಾದಿಸುತ್ತಾರೆ. ಆದರೆ, ಒಂದು ಸರಳ ಸಂಗತಿಯಿAದಾಗಿ ಈ ಇಡೀ ವಾದವೇ ತಪ್ಪಾಗಿದೆ: ಹಣದುಬ್ಬರದ ಮಟ್ಟಕ್ಕೆ ಹೋಲಿಸಿದರೆ ಕಾರ್ಮಿಕರ ಹಣ-ವೇತನಗಳು ಕೆಳ ಮಟ್ಟದಲ್ಲಿರುತ್ತವೆ. ಹಾಗಾಗಿ, ಅವರ ನಿಜ ವೇತನಗಳು ಇಳಿಕೆಯಾಗುತ್ತವೆ. ಆದ್ದರಿಂದ, ಅಮೆರಿಕದಲ್ಲಿ ಹಣದುಬ್ಬರವು ಹಣ-ವೇತನ ತಳ್ಳುವಿಕೆಯಿಂದಾಗಿ ಉಂಟಾಗಿದೆ ಎಂದು ವಾದಿಸುವುದು ಒಂದು ಭಾರೀ ಪ್ರಮಾದವಾಗುತ್ತದೆ.

ಅದೇ ರೀತಿಯಲ್ಲಿ ಹಣದುಬ್ಬರದ ಬಗ್ಗೆ ನೀಡಲಾದ ಮತ್ತೊಂದು ಸಾಮಾನ್ಯ ವಿವರಣೆಯೆಂದರೆ, ರಷ್ಯಾ-ಉಕ್ರೇನ್ ಯುದ್ಧವು ವಿಶ್ವ ಮಾರುಕಟ್ಟೆಯಲ್ಲಿ ಅನೇಕ ಸರಕುಗಳ, ವಿಶೇಷವಾಗಿ ತೈಲ ಮತ್ತು ಆಹಾರ ಧಾನ್ಯಗಳ ಕೊರತೆಯನ್ನು ಸೃಷ್ಟಿಸಿದೆ ಎಂಬುದು. ಈ ವಿವರಣೆಯೂ ಸಹ ಒಪ್ಪಲಾಗದ್ದು: ಯುದ್ಧವು ಅನೇಕ ವಸ್ತುಗಳ ಅಭಾವವನ್ನು ಉಂಟುಮಾಡಬಹುದಾದರೂ, ಈವರೆಗೂ ಅಂತಹÀ ಕೊರತೆ ಕಾಣಿಸಿಕೊಂಡಿಲ್ಲ. ಯುದ್ಧದಿಂದಾಗಿ ವಿಶ್ವ ಮಾರುಕಟ್ಟೆಯಲ್ಲಿ ವಾಸ್ತವವಾಗಿ ಸರಕುಗಳ ಪೂರೈಕೆಯಲ್ಲಿ ಯಾವುದೇ ಇಂತಹ ಕುಸಿತದ ಬಗ್ಗೆ ಪುರಾವೆಗಳಿಲ್ಲ. ಆದ್ದರಿಂದ, ಅಮೆರಿಕದ ಸಂದರ್ಭದಲ್ಲಿ ಹಣದುಬ್ಬರವನ್ನು ಯುದ್ಧ-ಪ್ರೇರಿತ ಅಭಾವವೆಂದು ಆರೋಪಿಸುವುದು ಖಂಡಿತವಾಗಿಯೂ ತಪ್ಪು.

ಜೂಜಕೋರ ನಡವಳಿಕೆಯ ಪರಿಣಾಮ– ಅತಾರ್ಕಿಕತೆಯ ಪರಾಕಾಷ್ಠೆ

ಅಮೆರಿಕದಲ್ಲಿ ಹಣದುಬ್ಬರವಾಗುತ್ತಿರುವುದಕ್ಕೆ ಕಾರಣವೆಂದರೆ, ಲಾಭಾಂಶವು ಸ್ವಾಯತ್ತವಾಗಿ ಏರುತ್ತಿರುವುದರಿಂದಾಗಿ ಸರಕು- ಸಾಮಗ್ರಿಗಳ ಬೆಲೆಗಳು ವೇತನಕ್ಕಿಂತ ವೇಗವಾಗಿ ಏರುತ್ತಿವೆ. ಕೆಲವು ಸರಕುಗಳ ಕೊರತೆ ಉಂಟಾದಾಗ ಲಾಭದ ಅಂತರ ಹೆಚ್ಚಾಗುತ್ತದೆ ಎಂದು ಭಾವಿಸುವುದು ಸಾಮಾನ್ಯ. ಆದರೆ, ಇಂದಿನ ಸಂದರ್ಭದಲ್ಲಿ ಹಣದುಬ್ಬರದ ಒತ್ತಡಗಳಿಗೆ ಒಳಗಾಗಿರುವ ಸರಕುಗಳಲ್ಲಿ ಕೊರತೆ ಇಲ್ಲವೇ ಇಲ್ಲ ಎನ್ನಬಹುದು. ಕೊರೊನಾದ ಕಾರಣದಿಂದಾಗಿ ಪೂರೈಕೆಯಲ್ಲಿ ಉದ್ಭವವಾದ ಕೆಲವು ಅಡಚಣೆಗಳಿಂದಾಗಿ ತಕ್ಷಣವೇ ಕೊರತೆಯಾದ ಸರಕುಗಳ ವಿಷಯದಲ್ಲಿಯೂ ಸಹ, ಬೆಲೆ ಏರಿಕೆಯು ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಮಾತ್ರವಲ್ಲ ಅದು ನಿರಂತರವಾಗುತ್ತಿದೆ. ಈ ವಿಷಯವನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅಮೆರಿಕದಲ್ಲಿ ಇಂದಿನ ಹಣದುಬ್ಬರವನ್ನು ಮೇಲೆ ತಳ್ಳುತ್ತಿರುವ ಅಂಶವೆAದರೆ ಅದು ಸ್ವಾಯತ್ತವಾಗುತ್ತಿರುವ ಲಾಭದ ಪ್ರಮಾಣದ ಹೆಚ್ಚಳವೇ. ಇದು ಜೂಜುಕೋರ ನಡವಳಿಕೆಯನ್ನು ಸೂಚಿಸುತ್ತದೆ.

ಈ ಜೂಜುಕೋರ (ಅಥವಾ ಕುರುಡು ಲಾಭ ಬೇಟೆಗಾರಿಕೆಯ) ಪ್ರವೃತ್ತಿಯು ಕೇವಲ ವ್ಯಾಪಾರಿಗಳಲ್ಲಿ ಮತ್ತು ಮಧ್ಯವರ್ತಿಗಳಲ್ಲಿ ಮಾತ್ರ ಇದೆ , ಉತ್ಪಾದಕರಲ್ಲಿ ಇಲ್ಲ ಎಂಬ ಭಾವನೆ ಸಾಮಾನ್ಯ. ಆದರೆ, ಈ ಭಾವನೆಯು ಆಧಾರ-ರಹಿತವಾದದ್ದು. ಏಕೆಂದರೆ, ಬಹುರಾಷ್ಟ್ರೀಯ ಕಂಪನಿಗಳೂ ಸಹ ತಮ್ಮ ಮಾರಾಟದ ಬೆಲೆಯನ್ನು ನಿಗದಿಪಡಿಸುವಾಗ ಈ ಕುರುಡು ಲಾಭದ ಪ್ರವೃತ್ತಿಯಲ್ಲಿ ತೊಡಗುತ್ತವೆ. ಹಾಗಾಗಿ, ಲಾಭಾನ್ವೇಷಣಾ-ಪ್ರೇರಿತ ಹಣದುಬ್ಬರವು ವಿಶ್ವದ ಅತಿದೊಡ್ಡ ಅರ್ಥವ್ಯವಸ್ಥೆಯನ್ನು ಬಾಧಿಸಲು ಕಾರಣವೆಂದರೆ, ಇಲ್ಲಿಯವರೆಗೂ ಅಮೆರಿಕ ಅನುಸರಿಸಿದ ಒಂದು ಅಸಾಧಾರಣ ರೀತಿಯ ಸುಲಭ ಹಣಕಾಸು ನೀತಿಯೇ. ಅಗಾಧ ಪ್ರಮಾಣದ ಸಾಲಗಳು ಅಮೆರಿಕದ ಅರ್ಥವ್ಯವಸ್ಥೆಗೆ ಲಭ್ಯವಾಗುವಂಥಹ ಸುಲಭ ಹಣಕಾಸು ನೀತಿಯನ್ನು(“ಪರಿಮಾಣಾತ್ಮಕ ಸರಾಗಗೊಳಿಸುವಿಕೆ”-quantitative easing), ಫೆಡರಲ್ ರಿಸರ್ವ್ ಅನುಸರಿಸಿತು. ಇದರಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಾಲಗಳ ಮೇಲಿನ ಬಡ್ಡಿಯ ದರವನ್ನು ಹತ್ತಿರ ಹತ್ತಿರ ಶೂನ್ಯ ಮಟ್ಟದಲ್ಲಿ ಇಡಲಾಗಿತ್ತು. ಹಾಗಾಗಿ, ಅಮೆರಿಕದ ಅರ್ಥವ್ಯವಸ್ಥೆಯು ಹಣದ ಸುಲಭ ಲಭ್ಯತೆಯಿಂದ ತುಳುಕಾಡುತ್ತಿತ್ತು. ಈ ಪರಿಸ್ಥಿತಿಯು ಸ್ವಾಯತ್ತ ಲಾಭಾಂಶ ಏರಿಕೆಯನ್ನು ಇನ್ನೂ ಮೇಲೆ ತಳ್ಳಲು ಅನುಕೂಲಕರವಾಗಿತ್ತು. ಇದುವೇ, ಉತ್ಪಾದನೆಯ ಮಟ್ಟವು ಪೂರ್ಣ ಸಾಮರ್ಥ್ಯವನ್ನು ತಲುಪುವ ಮೊದಲೇ ಹಣದುಬ್ಬರದ ರೂಪದಲ್ಲಿ ಪ್ರಕಟಗೊಂಡಿದೆ. ಇಷ್ಟೇ ಅಲ್ಲದೆ, ಈ ವಿತ್ತೀಯ ನೀತಿಯ ಅನುಸರಣೆಯಿಂದ ಉಂಟಾಗಿರುವ ಹಣದುಬ್ಬರದ ವಿರುದ್ಧ ಲಭ್ಯವಿರುವ ಒಂದೇ ಕ್ರಮವೆಂದರೆ, “ವಿತ್ತೀಯ ಮಿತವ್ಯಯ” ಪಾಲನೆ ಅಥವಾ ಈಗ ಸಂಭವಿಸುತ್ತಿರುವ ಬಡ್ಡಿ ದರಗಳ ಏರಿಕೆಯೇ. ಇವೆರಡೂ ಆರ್ಥಿಕ ಹಿಂಜರಿತವನ್ನು ಮತ್ತು ನಿರುದ್ಯೋಗವನ್ನು ಉಂಟುಮಾಡುವ ಕ್ರಮಗಳೇ.

ಈಗ ನಾವು ಸಮಸ್ಯೆಯ ಸಾರಾಂಶಕ್ಕೆ ಬರೋಣ. ಸಮಕಾಲೀನ ಬಂಡವಾಳಶಾಹಿಯ ಅಡಿಯಲ್ಲಿ ಆರ್ಥಿಕ ವ್ಯವಸ್ಥೆ ಹೇಗಿದೆಯೆಂದರೆ, ಅಮೆರಿಕಾದ ಬೆರಳೆಣಿಕೆಯಷ್ಟು ಮಂದಿ ಜೂಜುಕೋರರ ಲಾಭದಾಹಕ್ಕಾಗಿ, ಅಮೆರಿಕದಲ್ಲಿ ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸಬೇಕಾಗಿತ್ತು. ಇದೊಂದು ಅಸಂಬದ್ಧ ಅಂಶವೇ. ಆದರೆ ಈಗ ಇದೂ ಸಾಲದು ಎಂಬAತೆ, ಇಡೀ ವಿಶ್ವದ ಅರ್ಥವ್ಯವಸ್ಥೆಯಲ್ಲೂ ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸಬೇಕಾಗುತ್ತದೆ. ವಿಶ್ವದ ಅರ್ಥವ್ಯವಸ್ಥೆಯ ಅಂಶ ಇಲ್ಲಿ ಉದ್ಭವಿಸುತ್ತದೆ, ಏಕೆಂದರೆ, ನವ-ಉದಾರವಾದದ ಅಡಿಯಲ್ಲಿ, ಬಂಡವಾಳವು ಅದರಲ್ಲೂ ವಿಶೇಷವಾಗಿ ಹಣಕಾಸು ಬಂಡವಾಳವು, ಜಾಗತಿಕವಾಗಿ ಹರಿದಾಡುತ್ತಿರುವುದರಿಂದ, ಅಮೆರಿಕದಲ್ಲಿ ಬಡ್ಡಿ ದರಗಳನ್ನು ಏರಿಸಿದಾಗ ವಿಶ್ವಾದ್ಯಂತವೂ ಬಡ್ಡಿದರಗಳನ್ನು ಏರಿಸಬೇಕಾಗುತ್ತದೆ. ಇಲ್ಲದಿದ್ದರೆ, ಬಲಶಾಲಿಯಲ್ಲದ ಅರ್ಥವ್ಯವಸ್ಥೆಗಳಿಂದ ಹಣಕಾಸು ಬಂಡವಾಳವು ಅಮೆರಿಕದತ್ತಲೇ ಹರಿಯುತ್ತದೆ ಮತ್ತು ಈ ಹೊರ ಹರಿವಿನ ಪರಿಣಾಮವಾಗಿ, ಡಾಲರ್ ಎದುರು ಈ ದೇಶಗಳ ಕರೆನ್ಸಿಗಳು ನಿರಂತರ ಅಪಮೌಲ್ಯಕ್ಕೆ ಒಳಗಾಗುತ್ತವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅಮೆರಿಕಾದ ಕೆಲವರ ಜೂಜುಕೋರತನದಿಂದ ಸೃಷ್ಟಿಯಾದ ಸಮಸ್ಯೆಯನ್ನು ಇತರ ವಿಧಾನಗಳ ಮೂಲಕ ನೇರವಾಗಿ ನಿಭಾಯಿಸುವುದರ ಬದಲು, “ಉದಾರೀಕರಣದ” ಆಳ್ವಿಕೆಯಲ್ಲಿ, ವಿಶ್ವಾದ್ಯಂತ ಸಾಮೂಹಿಕ ನಿರುದ್ಯೋಗವನ್ನು ಸೃಷ್ಟಿಸುವ ಮೂಲಕ ನಿಭಾಯಿಸಲಾಗುತ್ತದೆ. ಇದು ಅತಾರ್ಕಿಕತೆಯ ಪರಾಕಾಷ್ಠೆಯೇ.

ನಿಯಂತ್ರಕ ನೀತಿ”ಗಳ ಕಾಲದಲ್ಲಿ

ರಷ್ಯಾದ ಬೋಲ್ಷೆವಿಕ್ ಕ್ರಾಂತಿಯ ಹಿನ್ನೆಲೆಯಲ್ಲಿ ಮತ್ತು ಮಹಾ ಆರ್ಥಿಕ ಕುಸಿತದ ಸಂದರ್ಭದಲ್ಲಿ ಜಾನ್ ಮೇನಾರ್ಡ್ ಕೀನ್ಸ್ ಈ ಅತಾರ್ಕಿಕತೆಯ ಬಗ್ಗೆ ಕೂಲಂಕುಷವಾಗಿ ಅರಿತಿದಿದ್ದರು. ಬಂಡವಾಳಶಾಹಿ ವ್ಯವಸ್ಥೆಯ ಸಂರಕ್ಷಣೆಯನ್ನು ಗುರಿಯಾಗಿ ಹೊಂದಿದ್ದ ಕೀನ್ಸ್, “ಹೂಡಿಕೆಯ ಸಾಮಾಜೀಕರಣವನ್ನು” ಪ್ರತಿಪಾದಿಸಿದ್ದರು. ಪ್ರಭುತ್ವದ ಈ ರೀತಿಯ ವಿತ್ತೀಯ ಮಧ್ಯಪ್ರವೇಶವೂ ಸಹ, ಒಂದು ಸೂಕ್ತವಾದ ಹಣ ನೀತಿಯು(monetary policy))ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾಗುತ್ತದೆ. ಇವೆರಡೂ ನೀತಿಗಳೂ ಇಡೀ ಸಮಾಜದ ಅಗತ್ಯಗಳಿಗೆ ಹಣಕಾಸು ಹಿತಾಸಕ್ತಿಗಳನ್ನು ಅಧೀನಗೊಳಿಸುವುದು ಅವಶ್ಯವಾಗುತ್ತದೆ.

ಇಂಥಹ ಒಂದು ಬೌದ್ಧಿಕ ವಾತಾವರಣದಲ್ಲಿ, ಯುದ್ಧಾನಂತರದಲ್ಲಿ ಹೊಸದಾಗಿ ವಿಮೋಚನೆಗೊಂಡ ಮೂರನೆಯ ಜಗತ್ತಿನ ಅನೇಕ ದೇಶಗಳು ನವ ನವೀನ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿದವು. ಈ ಸಂಸ್ಥೆಗಳು, ಸಾಮೂಹಿಕ ನಿರುದ್ಯೋಗವಷ್ಟೇ ಅಲ್ಲ, ಯಾವ ಚಟುವಟಿಕೆಯನ್ನೂ ಕಡಿತಗೊಳಿಸದ ರೀತಿಯಲ್ಲಿ ಜೂಜುಕೋರತನಕ್ಕೆ ನೇರವಾಗಿ ಕಡಿವಾಣ ಹಾಕಿದವು. ಉದಾಹರಣೆಗೆ, ಭಾರತದಲ್ಲಿ ಹೂಡಿಕೆಗಾಗಿ ದೀರ್ಘಾವಧಿ ಸಾಲಗಳನ್ನು ಕೊಡುವ ಅನೇಕ ವಿಶೇಷ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಗಳು, ಸಾಮಾನ್ಯವಾಗಿ ಬ್ಯಾಂಕುಗಳು ಅಲ್ಪಾವಧಿ ಸಾಲಗಳ ಮೇಲೆ ವಿಧಿಸುವ ಬಡ್ಡಿ ದರಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಒದಗಿಸುತ್ತಿದ್ದವು. ಜೂಜುಕೋರ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಬ್ಯಾಂಕುಗಳು ಹಲವಾರು ನಿರ್ದಿಷ್ಟ ಸಾಧನಗಳನ್ನು ಬಳಸುತ್ತಿದ್ದವು. ಜೂಜುಕೋರತನಕ್ಕೆ ಗುರಿಯಾದ ನಿರ್ದಿಷ್ಟ ವಲಯಗಳಿಗೆ (ಉದಾಹರಣೆಗೆ, ಗೃಹ ಬಳಕೆ, ರಿಯಲ್ ಎಸ್ಟೇಟ್, ವ್ಯಾಪಾರ, ಷೇರು ಮಾರುಕಟ್ಟೆ ಮುಂತಾದ ವಲಯಗಳಿಗೆ) ಸಾಲದ ಹರಿವನ್ನು ನೇರವಾಗಿ ನಿರ್ಬಂಧಿಸಲಾಗಿತ್ತು. ಇವನ್ನು “ಆಯ್ದ ಸಾಲ ನಿಯಂತ್ರಣಗಳು” (selective credit controls) ಎಂದು ಕರೆಯಲಾಗಿತ್ತು. ಹಣದುಬ್ಬರದ ನಿಯಂತ್ರಣವನ್ನು ವಿತ್ತೀಯ ಮತ್ತು ಹಣಕಾಸು ನೀತಿಗಳ ಮೂಲಕ ಮಾತ್ರವಲ್ಲದೆ “ಪೂರೈಕೆ ನಿರ್ವಹಣೆ”ಯ ಮೂಲಕ ಮತ್ತು ಸಾರ್ವಜನಿಕ ವಿತರಣೆ ಮತ್ತು ಪಡಿತರ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕವೂ ಖಚಿತಪಡಿಸಲಾಗಿತ್ತು. ಈ ಎಲ್ಲ ಕ್ರಮಗಳಿಂದಾಗಿ ಹೂಡಿಕೆ, ಉತ್ಪಾದನೆ ಮತ್ತು ಉದ್ಯೋಗಗಳು ಬಹಳ ಮಟ್ಟಿಗೆ ಜೂಜುಕೋರರ ವರ್ತನೆಗಳಿಂದ ರಕ್ಷಿಸಲ್ಪಟ್ಟವು.

ಈಗ “ಉದಾರೀಕರಣ”ದ ಪ್ರಪಂಚದಲ್ಲಿ

ಬ್ರೆಟನ್ ವುಡ್ಸ್ ಸಂಸ್ಥೆಗಳು (ವಿಶ್ವ ಬ್ಯಾಕ್ ಮತ್ತು ಐಎಂಎಫ್) ಮತ್ತು ಅದರ ನಿಷ್ಠಾವಂತ ನವ-ಉದಾರವಾದಿ ಅರ್ಥಶಾಸ್ತ್ರಜ್ಞರು ಈ ಎಲ್ಲ ವ್ಯವಸ್ಥೆಗಳನ್ನೂ ಕಟುವಾಗಿ ಟೀಕಿಸುತ್ತಲೇ ಬಂದರು. ಮೂರನೆಯ ಜಗತ್ತಿನ ದೇಶಗಳು ಸ್ಥಾಪಿಸಿದ ಈ ನವ ನವೀನ ಹಣಕಾಸು ಸಂಸ್ಥೆಗಳ ಏರ್ಪಾಟನ್ನು ಅವರು “ಆರ್ಥಿಕ ದಬ್ಬಾಳಿಕೆ” ಎಂದು ಕರೆದರು. ಬದಲಿಗೆ, ಹಣಕಾಸು ಮಾರುಕಟ್ಟೆಗಳಲ್ಲಿ ಇಂಥಹ ನೇರ ಹಸ್ತಕ್ಷೇಪಗಳನ್ನು ತ್ಯಜಿಸಬೇಕೆಂದೂ ಮತ್ತು ಹಣಕಾಸು ವ್ಯವಸ್ಥೆಯನ್ನು “ಉದಾರೀಕರಣ”ಗೊಳಿಸುವಂತೆ ಒತ್ತಾಯಿಸಿದರು. ಆಹಾರ ಧಾನ್ಯಗಳ ವಿಷಯದಲ್ಲಿ ಇನ್ನೂ ಮುಂದುವರಿಯುತ್ತಿರುವ ಸಾರ್ವಜನಿಕ ವಿತರಣೆ ಮತ್ತು ಪಡಿತರವನ್ನು ಕಿತ್ತೊಗೆಯುವುದನ್ನು ಕೂಡ ಅವರು ಬಯಸಿದ್ದರು ಮತ್ತು ಈ ನಿಟ್ಟಿನಲ್ಲಿ ಮೂರು ಕುಖ್ಯಾತ ಕೃಷಿ ಕಾನೂನುಗಳನ್ನು ಜಾರಿಗೆ ತರುವಂತೆ ಮೋದಿ ಸರ್ಕಾರವನ್ನು ಒತ್ತಾಯಿಸಿದರು. ಸಾರ್ವಜನಿಕ ವಿತರಣೆ ಮತ್ತು ಪಡಿತರವನ್ನು ಕಿತ್ತೆಸೆಯುವ ತಮ್ಮ ಪ್ರಯತ್ನದಲ್ಲಿ ಅವರು ಯಶಸ್ವಿಯಾಗದಿದ್ದರೂ, ನವ-ಉದಾರವಾದಿ “ಸುಧಾರಣೆಗಳ” ಭಾಗವಾಗಿ “ಆರ್ಥಿಕ ಉದಾರೀಕರಣ”ವನ್ನು ಅವರು ಜಾರಿಗೆ ತಂದರು.

“ಆರ್ಥಿಕ ಉದಾರೀಕರಣ” ಎಂದರೆ, ಹಣಕಾಸು ನೀತಿಯ ಸಾಧನವಾಗಿ ಬಡ್ಡಿ ದರವನ್ನು ಏಕೈಕವಾಗಿ ಅವಲಂಬಿಸುವುದು ಎಂದರ್ಥ. ಹಣಕಾಸು ಬಂಡವಾಳವು ಸುಲಭವಾಗಿ ಹರಿದಾಡುವ ಜಗತ್ತಿನಲ್ಲಿ ಬಡ್ಡಿ ದರಗಳು ಅಮೆರಿಕದ ಬಡ್ಡಿ ದರಗಳೊಂದಿಗೆ ತುಲನಾತ್ಮಕವಾಗಿ ಸಂಬಂಧಿಸಿರುವುದರಿಂದ (ಈ ಅಂಶವನ್ನು ಆರಂಭದಲ್ಲಿ ಗಮನಿಸಿದಂತೆ), ಬಡ್ಡಿ ದರದ ವಿಷಯದಲ್ಲೂ ದೇಶವು ಹೆಚ್ಚಿನ ಸ್ವಾತಂತ್ರ‍್ಯವನ್ನು ಹೊಂದಿಲ್ಲ. ಮತ್ತು, “ವಿತ್ತೀಯ ಜವಾಬ್ದಾರಿ” ಶಾಸನದ ಪ್ರಕಾರ ಸರ್ಕಾರದ ಖರ್ಚು-ವೆಚ್ಚಗಳು ಸರ್ಕಾರದ ಆದಾಯಕ್ಕೆ ಸೀಮಿತಗೊಳಿಸಬೇಕಾಗುತ್ತದೆ ಮತ್ತು ಸರ್ಕಾರದ ಆದಾಯವನ್ನು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವ ಮೂಲಕ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲದ (ಸಾಧ್ಯವಿಲ್ಲ ಏಕೆಂದರೆ, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ಹೇರಿದರೆ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆಗೆದು ಬೇರೆ ದೇಶಗಳಿಗೆ ಹೋಗುತ್ತಾರೆ ಎಂಬ ಭಯ ಭೀತಿಗೆ ಸರ್ಕಾರವು ಒಳಗಾಗಿದೆ) ಕಾರಣದಿಂದ, ಹಣದುಬ್ಬರದ ನಿಯಂತ್ರಣಕ್ಕಾಗಿ ಹಿಂದೆ ಬಳಸುತ್ತಿದ್ದ ಇದೇ ಬಡ್ಡಿ ದರವು ಈಗ ಹೂಡಿಕೆ, ಉತ್ಪಾದನೆ, ಉದ್ಯೋಗ ಮತ್ತು ಬೆಳವಣಿಗೆ ಇವುಗಳ ನಿರ್ಣಾಯಕ ಅಂಶವಾಗಿದೆ.

ಇ್ಟವೆಲ್ಲದರ ಅರ್ಥ, ಒಂದು ದೇಶದ ಉತ್ಪಾದನೆ ಮತ್ತು ಉದ್ಯೋಗವನ್ನು ದೇಶದ ಕೆಲವೇ ಜೂಜುಕೋರರ ಗುಂಪು ನಿರ್ಧರಿಸುತ್ತದೆ ಎಂಬAತಿರುವ ಪ್ರಪಂಚಕ್ಕೆ ಮರಳುತ್ತಿದ್ದೇವೆ ಎಂದಷ್ಟೇ ಅಲ್ಲ, ವಿಶ್ವದ ಪ್ರತಿಯೊಂದು ದೇಶದ, ಅಂದರೆ ಇಡೀ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯ ಮತ್ತು ಉದ್ಯೋಗದ ಮಟ್ಟವನ್ನು ಕೆಲವೇ ಅಮೆರಿಕನ್ ಜೂಜುಕೋರರ ಒಂದು ಗುಂಪು ನಿರ್ಧರಿಸುವ ಪ್ರಪಂಚದಲಿದ್ದೇವೆ.

ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಕೆ.ಎನ್. ರಾಜ್ ಅವರು ಒಮ್ಮೆ ‘ನಿಯಂತ್ರಣ ನೀತಿÀ’ಗಳ (ಡಿರಿಜಿಸ್ಟ್) ಯುಗವನ್ನು, ಅದು ಲಕ್ಷಾಂತರ ಕಾರ್ಮಿಕರ ಉದ್ಯೋಗಾವಕಾಶಗಳನ್ನು ನಿರ್ಧರಿಸುವ ಅವಕಾಶವನ್ನು ಬೆರಳೆಣಿಕೆಯ ಜೂಜುಕೋರ ಗುಂಪಿನ ಮರ್ಜಿಗೆ ಬಿಟ್ಟಿರಲಿಲ್ಲ ಎಂಬ ನೆಲೆಯಲ್ಲಿ ಶ್ಲಾಘಿಸಿದ್ದರು. ಆರ್ಥಿಕ ಉದಾರೀಕರಣವು ಈ ನಿರೋಧಕವನ್ನು(insulation) ನಿಖರವಾಗಿ ನಾಶಪಡಿಸಿತು ಮತ್ತು ಅದಕ್ಕಿಂತಲೂ ಹೆಚ್ಚಾಗಿ, ಪ್ರತಿಯೊಂದು ದೇಶದ ಉದ್ಯೋಗದ ಮಟ್ಟವನ್ನು ನಿರ್ಧರಿಸುವ ಅಂಶವನ್ನು ಕೆಲವು ಮಂದಿ ಅಮೆರಿಕನ್ ಜೂಜುಕೋರರ ಮರ್ಜಿಯೊಂದಿಗೆ ಜೋಡಿಸಿತು.

ಹಣದುಬ್ಬರವನ್ನು ಎದುರಿಸುವ ಒಂದು ಸಾಧನವಾಗಿ ಬಡ್ಡಿ ದರಗಳನ್ನು ಹೆಚ್ಚಿಸುವ ವಿವೇಕದ ಬಗ್ಗೆ ನಡೆಯತ್ತಿರುವ ಚರ್ಚೆಯ ಕುರಿತು ವಿಶ್ವಾದ್ಯಂತ ಬಹಳಷ್ಟು ಬರೆಯಲಾಗಿದೆ. ಈ ಚರ್ಚೆಯು ಸಾಮಾನ್ಯವಾಗಿ ನವ-ಉದಾರವಾದಿ ಸನ್ನಿವೇಶವನ್ನು ಭಾವಿಸಿಕೊಳ್ಳುತ್ತದೆ ಮತ್ತು ನಿರುದ್ಯೋಗ ಹಾಗೂ ಹಣದುಬ್ಬರ ಇವುಗಳ ನಡುವೆ ಯಾವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡಬೇಕು ಎಂದು ತಿಳಿಯಲು ಯಾವ ನಿರ್ದಿಷ್ಟ ಅಂಶವನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ನಿಲುವುಗಳನ್ನು ನಂತರ ತೆಗೆದುಕೊಳ್ಳುತ್ತದೆ. ಆದರೆ, ನವ-ಉದಾರವಾದಿ ಸನ್ನಿವೇಶದಲ್ಲಿ ಈ ಪ್ರಾಶಸ್ತ್ಯದ ಅಂಶವು ಉದ್ಭವವಾಗುವುದೇ, ಇತರ ಸಾಧನಗಳನ್ನು ಸರ್ಕಾರದ ಕೈಯಿಂದ ಕಿತ್ತುಕೊಳ್ಳುವುದರಿಂದಾಗಿ. ಹಾಗಾಗಿ, ಇಲ್ಲಿರುವ ಒಟ್ಟು ಅಂಶವೆAದರೆ, ಇಂತಹ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದಾದರೆ, ಅದು ನವ-ಉದಾರವಾದಿ ಸನ್ನಿವೇಶವನ್ನು ಮೀರುವ ಮೂಲಕವೇ ಆಗಬೇಕಾಗುತ್ತದೆ. ಆದರೆ, ಹಣದುಬ್ಬರದ ನಿಯಂತ್ರಣದ ಚರ್ಚೆಯಲ್ಲಿ ಈ ಅಂಶವು ಕಂಡುಬರುವುದೇ ವಿರಳ.

“ಪರ್ವಾಗಿಲ್ಲ ಬಿಡು, ಇದು ಅವನಿಗೆ ಹೊಡೆಯಲಿಕ್ಕೆ, ನಿನಗಲ್ಲ”
(ವ್ಯಂಗ್ಯಚಿತ್ರ ಕೃಪೆ: ಅಲೋಕ್‍ ನಿರಂತರ್)

Donate Janashakthi Media

Leave a Reply

Your email address will not be published. Required fields are marked *