-ನಾ ದಿವಾಕರ
ತಳಮಟ್ಟದ ಸಮಾಜದಲ್ಲಿ ಸಾರ್ವಜನಿಕ ಆರೋಗ್ಯದ ಅಗತ್ಯಗಳು ವಿವಿಧ ಸ್ವರೂಪದ್ದಾಗಿರುತ್ತವೆ. ಸಮಾಜದ ವಿವಿಧ ಸ್ತರಗಳಲ್ಲಿ ಆರೋಗ್ಯ ಸೇವೆಯ ಆದ್ಯತೆಗಳೂ ಭಿನ್ನವಾಗಿರುತ್ತವೆ. ಯಾವುದೇ ಸರ್ಕಾರವಾದರೂ ತನ್ನ ಆರೋಗ್ಯ ನೀತಿಯನ್ನು ರೂಪಿಸುವ ಸಂದರ್ಭದಲ್ಲಿ ಈ ವೈವಿಧ್ಯತೆ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟು ನೀತಿ ನಿರೂಪಣೆ ಮಾಡಬೇಕಾಗುತ್ತದೆ. ತಳಮಟ್ಟದಲ್ಲಿನ ಸಾಮಾನ್ಯ ಜನತೆಯ ಆರೋಗ್ಯದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರಗಳು ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಜನಸಾಮಾನ್ಯರಿಗೆ ತಮ್ಮ ನಿತ್ಯ ಬದುಕಿನಲ್ಲಿ ಅನಿವಾರ್ಯ ಎನಿಸುವ ಅಗತ್ಯಗಳು ಒಂದೆಡೆಯಾದರೆ ಮತ್ತೊಂದು ಬದಿಯಲ್ಲಿ ವೈದ್ಯಕೀಯ ತಜ್ಞರು, ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ನಿರ್ಧರಿಸುವ ಅಗತ್ಯಗಳು ಇರುತ್ತವೆ. ಯಾವುದೇ ಸಾರ್ವಜನಿಕ ಆರೋಗ್ಯ ನೀತಿಯನ್ನು ರೂಪಿಸುವಾಗ ಈ ತಜ್ಞರ ಅಭಿಪ್ರಾಯ ಮುಖ್ಯವಾಗುತ್ತದೆ. ನಿರ್ಲಕ್ಷ್ಯ
ಆದರೆ ಮೋದಿ ಎನ್‌ಡಿಎ ಆಳ್ವಿಕೆಯ ಮೊದಲ ಬಜೆಟ್‌ನಲ್ಲಿ ಸಾಮಾಜಿಕ ಕ್ಷೇತ್ರದ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಲಾಗಿದ್ದು, ವಿಶೇಷವಾಗಿ ಆರೋಗ್ಯ ವಲಯವನ್ನು ಹೆಚ್ಚು ಕಡೆಗಣಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಸರ್ಕಾರದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ಗಮನಿಸಿದರೆ, ತಳಮಟ್ಟದ ಸಮಾಜದಲ್ಲಿ ವಂಚಿತ ಜನಸಮುದಾಯಗಳ ಕಾಳಜಿಗಳನ್ನು ಪರಿಹರಿಸುವಂತಹ ಯಾವುದೇ ಸ್ಪಷ್ಟ ನೀತಿ ನಿರೂಪಣೆಗಳನ್ನು ಕಾಣಲಾಗುವುದಿಲ್ಲ. ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಬಡತನ-ದಾರಿದ್ರ್ಯದ ಕಾರಣಕ್ಕೆ ಉಂಟಾಗುವ ಅಗತ್ಯಗಳು. ಕ್ಷಯ ರೋಗ, ಮಲೇರಿಯಾ, ಅಪೌಷ್ಟಿಕತೆ, ಗರ್ಭಿಣಿ ಮಹಿಳೆಯರ ಮರಣ, ಆಹಾರ-ಜಲ ಮಾಲಿನ್ಯದ ಸೋಂಕಿನಿಂದ ಉಂಟಾಗುವ ಟೈಫಾಯ್ಡ್, ಹೆಪಾಟೆಟಿಸ್, ಅತಿಸಾರ (Diarreha) ಇವೆಲ್ಲವೂ ದುರ್ಬಲ ಬಡ ಜನತೆಯನ್ನು ಕಾಡುವ ಆರೋಗ್ಯ ಸಮಸ್ಯೆಗಳು. ಈ ರೋಗಗಳನ್ನು ತಡೆಗಟ್ಟಲು ಕೈಗೊಳ್ಳುವ ಯಾವುದೇ ಕ್ರಮಗಳು ಜನತೆಯ ಜೀವನೋಪಾಯದ ಪ್ರಶ್ನೆಗಳನ್ನೂ ಗಮನದಲ್ಲಿಡಬೇಕಾಗುತ್ತದೆ. ಹಾಗಾಗಿ ಇದು ಸವಾಲಿನ ಪ್ರಶ್ನೆಯಾಗುತ್ತದೆ. ನಿರ್ಲಕ್ಷ್ಯ
ಎರಡನೆಯ ಅಗತ್ಯ ಎಂದರೆ ಮಧ್ಯಮ ವರ್ಗಗಳ ಹಾಗೂ ಹಿತವಲಯದ ಜನರು ಎದುರಿಸುವ ಆರೋಗ್ಯ ಸಮಸ್ಯೆಗಳು. ವಾಯು ಮಾಲಿನ್ಯ, ಜಲ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಇಲ್ಲಿ ಪ್ರಧಾನ ಸಮಸ್ಯೆಳಾಗಿ ಎದುರಾಗುತ್ತವೆ. ಒಳಚರಂಡಿ ವ್ಯವಸ್ಥೆಯ ಕೊರತೆ ಅಥವಾ ಅಸಮರ್ಪಕ ನಿರ್ವಹಣೆ, ನಿತ್ಯ ಜೀವನದಲ್ಲಿ ಜನರು ಸೇವಿಸುವ ಆಹಾರಗಳಲ್ಲಿ ಆರೋಗ್ಯಕರ ಗುಣಮಟ್ಟ ಇಲ್ಲದಿರುವುದು ಈ ವರ್ಗಗಳನ್ನು ಕಾಡುವ ಪ್ರಶ್ನೆಗಳಾಗಿರುತ್ತವೆ. ಸಾರ್ವಜನಿಕ ವಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಅಥವ ಕಳಪೆ ನಿರ್ವಹಣೆ ಹಾಗೂ ಮಾರುಕಟ್ಟೆ ನಿಬಂಧನೆಗಳ ಕೊರತೆ ಈ ಸಮಸ್ಯೆಗಳನ್ನು ಜಟಿಲಗೊಳಿಸುತ್ತವೆ. ರಸ್ತೆ ಅಪಘಾತಗಳು, ಹವಾಮಾನ ಬದಲಾವಣೆ ಮತ್ತು ದೀರ್ಘಕಾಲದ ಅನಾರೋಗ್ಯದ ಸಮಸ್ಯೆಗಳು ಸಹ ಸವಾಲಿನ ಪ್ರಶ್ನೆಗಳಾಗುತ್ತವೆ. ಈ ಸಮಸ್ಯೆಗಳು ಮೊದಲನೆಯ ವರ್ಗಗಳಲ್ಲೂ ಇದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಕಾಣುವುದಿಲ್ಲ. ನಿರ್ಲಕ್ಷ್ಯ
ಇದನ್ನೂ ಓದಿ: ಮುಡಾ ಹಗರಣ: ಕೋರ್ಟ್ ತೀರ್ಪಿನ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಸಾರ್ವಜನಿಕ ಆರೋಗ್ಯ ವಲಯದ ಮೂರನೆಯ ಗುಂಪನ್ನು ಸಾಮಾನ್ಯ ಜನತೆಯ ಚಿಕಿತ್ಸಾತ್ಮಕ ಅಗತ್ಯಗಳಲ್ಲಿ ಗುರುತಿಸಬಹುದು. ಆಡಳಿತಾತ್ಮಕವಾಗಿ ನೋಡಿದಾಗ ಸಾರ್ವಜನಿಕವಾಗಿ ಚಿಕಿತ್ಸಾತ್ಮಕ ಆರೋಗ್ಯ ಸೇವೆಯನ್ನು ಒದಗಿಸುವುದು ಸರ್ಕಾರಗಳಿಗೆ ಸಾಕಷ್ಟು ಜಟಿಲ ಸವಾಲುಗಳನ್ನು ಮುಂದೊಡ್ಡುತ್ತದೆ. ಈ ಚಿಕಿತ್ಸಾತ್ಮಕ ಸೇವೆಗಳನ್ನು ಪ್ರಾಥಮಿಕ, ಅನುಷಂಗಿಕ (Secondary) ಮತ್ತು ಮೂರನೆ ಶ್ರೇಣಿಯ ಹಂತಗಳಲ್ಲಿ ವಿಂಗಡಿಸಬಹುದು. ಕಡುಬಡತನದ ದುರ್ಬಲ ವರ್ಗಗಳು ಪ್ರಾಥಮಿಕ ಆರೋಗ್ಯ ಸೇವೆಯನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಅವಲಂಬಿಸುತ್ತವೆ. ತಮ್ಮ ಮನೆಗಳಿಗೆ ಹತ್ತಿರ ಇರುವ, ಅಗ್ಗದ ವೆಚ್ಚದ ಚಿಕಿತ್ಸೆಗಳನ್ನು ಅಪೇಕ್ಷಿಸುತ್ತವೆ. ಅನುಷಂಗಿಕ ಗುಂಪುಗಳು ಆರಂಭದಿಂದಲೂ ಆಳ್ವಿಕೆಯ ನಿರ್ಲಕ್ಷ್ಯಕ್ಕೊಳಗಾಗಿದ್ದು ಜನಸಂಖ್ಯಾ ನಿಯಮಗಳಿಗೆ ಹೋಲಿಸಿದಾಗ ಮೂಲ ಸೌಕರ್ಯಗಳ, ತಜ್ಞ ಆರೋಗ್ಯ ಸಿಬ್ಬಂದಿಗಳ ಮತ್ತು ಸೂಕ್ತ ಸೌಲಭ್ಯಗಳ ಕೊರತೆಯನ್ನು ಗುರುತಿಸಬಹುದು. ನಿರ್ಲಕ್ಷ್ಯ
ಸರ್ಕಾರದ ಆರೋಗ್ಯ ಯೋಜನೆಗಳು
ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ (ಪಿಎಂಜೆಎವೈ) ಈ ಮೂರನೆ ಗುಂಪನ್ನು ಉದ್ದೇಶಿಸಿ ರೂಪಿಸಲಾಗಿದೆ. 2005ರಲ್ಲಿ ಜಾರಿಯಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಹಾಗೂ ತದನಂತರ 2013ರಲ್ಲಿ ರೂಪಿಸಲಾದ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಮ್) ಈ ಎರಡೂ ಯೋಜನೆಗಳು 2002ರಲ್ಲಿ ಪ್ರಸ್ತಾಪಿಸಲಾದ ಆರೋಗ್ಯ ಸೇವೆಯ ಖಾಸಗೀಕರಣದ ಸಲಹೆಗಳಿಗೆ ವ್ಯತಿರಿಕ್ತವಾಗಿದ್ದವು. ಎನ್‌ಎಚ್‌ಎಮ್ ಬಹುಮುಖ್ಯವಾಗಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದು , 1990ರ ಜಾಗತೀಕರಣದ ನಂತರದಲ್ಲಿ ಕುಸಿಯುತ್ತಿದ್ದ ಆರೋಗ್ಯ ಕ್ಷೇತ್ರದ ಸಂರಚನೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾಗಿತ್ತು. ಕಳೆದ ಒಂದು ದಶಕದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ಗಮನಿಸಿದಾಗ ಸರ್ಕಾರವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಗೋಚರಿಸುತ್ತದೆ. ನಿರ್ಲಕ್ಷ್ಯ
ಪ್ರಾಥಮಿಕ ಆರೋಗ್ಯ ಕಾಳಜಿಯ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವ ಉಪಕ್ರಮಗಳನ್ನು ಎನ್‌ಎಚ್‌ಎಮ್ ಮೂಲಕ ಕೈಗೊಳ್ಳಲಾಗಿತ್ತು. ತನ್ಮೂಲಕ ಸಾರ್ವಜನಿಕರಲ್ಲಿ ಸಾರ್ವಜನಿಕ ಆರೋಗ್ಯ ವಲಯದ ಬಗ್ಗೆ ವಿಶ್ವಾಸ ಮೂಡಿಸಲಾಗಿತ್ತು. ಅಂಕಿ ಅಂಶಗಳು ಇದನ್ನು ಸ್ಪಷ್ಟಪಡಿಸುತ್ತವೆ. ಈ ಹಂತದಲ್ಲಿ ಭಾರತದಲ್ಲಿ 1,53,655 ಉಪಕೇಂದ್ರಗಳು, 25,308 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5,396 ಸಾಮುದಾಯಿಕ ಆರೋಗ್ಯ ಕೇಂದ್ರಗಳು ಕಾರ್ಯೋನ್ಮುಖವಾಗಿದ್ದವು ಎಂದು 2015ರ ಗ್ರಾಮೀಣ ಆರೋಗ್ಯದ ಅಂಕಿಸಂಖ್ಯೆಗಳು ಸೂಚಿಸುತ್ತವೆ. ಒಂದು ವೇಳೆ ಆನಂತರದ ಆರೋಗ್ಯ ನೀತಿಗಳು ಅನುಷಂಗಿಕ ಹಾಗೂ ತೃತೀಯ ಶ್ರೇಣಿಯ(tertiary) ಆರೋಗ್ಯ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೆ ಬಹುಶಃ ಈ ಅಡಿಪಾಯ ಮತ್ತಷ್ಟು ಬಲವಾಗುತ್ತಿತ್ತು. ಆದರೆ ದುರದೃಷ್ಟವಶಾತ್ 2018ರ ಆಯುಷ್ಮಾನ್ ಭಾರತ ಯೋಜನೆಯ ಅಡಿಯಲ್ಲಿ ಸಾರ್ವಜನಿಕ ಅನುದಾನಿತ ಆರೋಗ್ಯ ವಿಮಾ ಯೋಜನೆಯನ್ನು (ಪಿಎಫ್‌ಎಚ್‌ಐ) ಜಾರಿಗೊಳಿಸಲಾಯಿತು. ಈ ಯೋಜನೆಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳು ಜಾರಿಗೊಳಿಸಿದವು. ನಿರ್ಲಕ್ಷ್ಯ
ಭಾರತದ ಸಂದರ್ಭದಲ್ಲಿ ಪಿಎಫ್‌ಎಚ್‌ಐ ಅಥವಾ ಆಯುಷ್ಮಾನ್ ವಿಮಾ ಯೋಜನೆಯ ಪ್ರಮುಖ ಫಲಾನುಭವಿಗಳಾಗಿ ಹೊರಹೊಮ್ಮಿದ್ದು ಖಾಸಗಿ ಆರೋಗ್ಯ ಕ್ಷೇತ್ರ. ಭಾರತದ ಆರೋಗ್ಯ ವಿಮಾ ಯೋಜನೆಗಳು ಕೇವಲ ಆಸ್ಪತ್ರೆಗೆ ದಾಖಲಾದ ಸಂದರ್ಭಗಳಲ್ಲಿ ಮಾತ್ರ ಉಪಯುಕ್ತವಾಗುತ್ತವೆ. ಈ ಯೋಜನೆಗೆ ದಾಖಲಾಗಿರುವ 12 ಕೋಟಿ ಕುಟುಂಬಗಳ 50 ಕೋಟಿ ಸದಸ್ಯರ ಪೈಕಿ ಎರಡೂವರೆ ಕೋಟಿ ಜನರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಾರೆ (Hospitalise) ಆಗುತ್ತಾರೆ ಎಂಬ ಮಾರುಕಟ್ಟೆ ಅಂದಾಜಿನ ಮೇಲೆ ಈ ಯೋಜನೆಯನ್ನು ರೂಪಿಸಲಾಗಿತ್ತು. ಮೇಲಾಗಿ ಈ ಯೋಜನೆಯಡಿ ಅನುಷಂಗಿಕ (Secondary) ಮತ್ತು ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಮಾರುಕಟ್ಟೆ ದರದಲ್ಲಿ ಖಾಸಗಿ ಕ್ಷೇತ್ರದ ಉದ್ದಿಮೆಗಳು ಒದಗಿಸಲು ಅವಕಾಶ ನೀಡಿರುವುದು, ಈ ಎರಡೂ ಹಂತಗಳಲ್ಲಿ ಸರ್ಕಾರದ ಭಾಗವಹಿಸುವಿಕೆಯನ್ನು ಹಿಂಪಡೆಯುವ ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ನಿರ್ಲಕ್ಷ್ಯ
ಇದನ್ನೂ ನೋಡಿ: ಮೂರು ಜನ ವಿಕಲಚೇತನ ಮಕ್ಕಳು, ಮಕ್ಕಳ ಆರೈಕೆಗಾಗಿ ಕೆಲಸಕ್ಕೂ ಹೋಗದ ಪೋಷಕರು | ಬದುಕು ಬೀದಿಗೆ
ಇದರ ಪರಿಣಾಮ ಇನ್ನುಳಿದ ನೂರು ಕೋಟಿ ಜನರಿಗೆ ಯಾವುದೇ ಸರ್ಕಾರಿ ಪ್ರಾಯೋಜಿತ ಯೋಜನೆ ಲಭ್ಯವಾಗದ ಕಾರಣ ಅವರು ವಾಣಿಜ್ಯೀಕರಣಗೊಂಡ ಖಾಸಗಿ ಆರೋಗ್ಯ ಕ್ಷೇತ್ರವನ್ನೇ ಅವಲಂಬಿಸಬೇಕಾಗುತ್ತದೆ. ಈಗ ಸರ್ಕಾರವು 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕುಟುಂಬದ ಆಧಾರದಲ್ಲಿ 5 ಲಕ್ಷ ರೂ ವಿಮೆ ಒದಗಿಸುವ ಆಯುಷ್ಮಾನ್ ಯೋಜನೆಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹವಾಗಿದ್ದು, ಇದರ ಸಾಧ್ಯಾಸಾಧ್ಯತೆಗಳು ಇನ್ನು ಮುಂದೆ ಸ್ಪಷ್ಟವಾಗಲಿವೆ. ಈ ಯೋಜನೆಗಳ ಮುಖಾಂತರ ಖಾಸಗಿ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದಿಮೆಗಳಿಗೆ ಏಕಸ್ವಾಮ್ಯ ದೊರೆತಂತಾಗಿದ್ದು, ಕಾರ್ಪೋರೇಟ್ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲೇ ವೈದ್ಯಕೀಯ ಚಿಕಿತ್ಸೆ, ಸೇವೆಯನ್ನು ಒದಗಿಸುವುದಾಗಿ ಹೇಳಿದರೂ, ಮತ್ತೊಂದು ಬದಿಯಲ್ಲಿ ಈ ಗ್ರಾಹಕ ವಲಯಕ್ಕೆ ಸಾರ್ವಜನಿಕ ಆರೋಗ್ಯಸೇವೆ ದೊರೆಯದಂತೆ ಮಾಡಲು ಆ ಕ್ಷೇತ್ರವನ್ನೇ ದುರ್ಬಲಗೊಳಿಸುತ್ತವೆ. ನಿರ್ಲಕ್ಷ್ಯ
ಸಾರ್ವಜನಿಕ ಆರೋಗ್ಯ ಕ್ಷೇತ್ರದ ಕಡೆಗಣನೆ
ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಒಂದು ಉಪಕ್ರಮ ಎಂದರೆ 2018ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಮತ್ತು ಸಾಮುದಾಯಿಕ ಆರೋಗ್ಯ ಕೇಂದ್ರಗಳನ್ನು (ಸಿಎಚ್‌ಸಿ) ಉಪಕೇಂದ್ರಗಳಾಗಿ ರೂಪಾಂತರಗೊಳಿಸಿರುವುದು. ಈ ಯೋಜನೆಯ ಅನುಸಾರ ದೇಶಾದ್ಯಂತ ಒಂದೂವರೆ ಲಕ್ಷ ಗ್ರಾಮಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು (-ಎಚ್‌ಡಬ್ಲ್ಯುಸಿ-Health and Welness Centres)ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ವಿಡಂಬನೆ ಎಂದರೆ 2015ರ ಗ್ರಾಮೀಣ ಆರೋಗ್ಯ ಸೇವೆಯ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಆರೋಗ್ಯ ಕೇಂದ್ರಗಳ ಸ್ಥಾಪನೆಯಾಗಿತ್ತು. ಈ ಹೊಸ ಎಚ್‌ಡಬ್ಲ್ಯುಸಿ ಯೋಜನೆಯ ಅನುಸಾರ ಸಮುದಾಯ ಆರೋಗ್ಯ ಅಧಿಕಾರಿಯು ಒಂದು ಬ್ರಿಡ್ಜ್ ಕೋರ್ಸ್ ಪೂರೈಸುವ ಮೂಲಕ ಗ್ರಾಮೀಣ ಜನತೆಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಅಂದರೆ ಮೊದಲು ಇದ್ದಂತೆ, ಗ್ರಾಮೀಣ ಜನರನ್ನು ಖುದ್ದಾಗಿ ತಲುಪಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉಪಕೇಂದ್ರಗಳು ಕೇವಲ ಗುಣಪಡಿಸುವ ಕೇಂದ್ರಗಳಾಗಿ ಪರಿವರ್ತನೆಯಾದವು.
ಸರ್ಕಾರದ ಈ ನೀತಿಯಲ್ಲಿ ಇತ್ತೀಚಿನ ಬದಲಾವಣೆ ಎಂದರೆ 2023ರಲ್ಲಿ ಎಲ್ಲ ಎಚ್‌ಡಬ್ಲ್ಯುಸಿಗಳನ್ನೂ ಆಯುಷ್ಮಾನ್ ಆರೋಗ್ಯ ಮಂದಿರ ಎಂದು ಮರುನಾಮಕರಣ ಮಾಡಿದ್ದು. ಈ ಹೊಸ ಹೆಸರು ಹಿಂದಿಯೇತರ ಭಾಷೆಯ ರಾಜ್ಯಗಳಿಗೆ ಹೇಗೆ ಸಮಂಜಸವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದು ಸೆಕ್ಯುಲರ್ ಆರೋಗ್ಯ ಸಂಸ್ಥೆಯನ್ನು ಮಂದಿರ ಎಂದು ಕರೆಯುವುದನ್ನು ಹೇಗೆ ಸಮರ್ಥಿಸಿಕೊಳ್ಳುವುದು ? ಭಾರತದಂತಹ ದೇಶದಲ್ಲಿ ಸಾರ್ವಜನಿಕ ಆರೋಗ್ಯದ ಸವಾಲುಗಳು ಬಹುಮುಖಿ ಆಗಿರುತ್ತವೆ. ಹಾಗಾಗಿ ಆರೋಗ್ಯ ಸೇವೆಯನ್ನು ಎಲ್ಲ ವರ್ಗಗಳಿಗೂ ಸಮನಾಗಿ ತಲುಪುವಂತೆ ಎಚ್ಚರ ವಹಿಸಬೇಕಾಗುತ್ತದೆ. ದುರ್ಬಲ ವರ್ಗಗಳಿಗೆ, ಬಡಜನತೆಗೆ ರೋಗ ನಿರೋಧಕ ಯೋಜನೆಗಳಾಗಲೀ, ಆರೋಗ್ಯವೃದ್ಧಿಯನ್ನು ಉತ್ತೇಜಿಸುವ ಚಟುವಟಿಕೆಗಳಾಗಲೀ ಕೈಗೆಟುಕದ ಲಕ್ಸುರಿಗಳಾಗಿರುತ್ತವೆ. ಏಕೆಂದರೆ ಈ ಉಪಕ್ರಮಗಳು ಅವರ ಜೀವನೋಪಾಯದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ.
ಹಾಗಾಗಿ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಪ್ರಾಥಮಿಕ ಹಾಗೂ ಅನುಷಂಗಿಕ ಹಂತದ ಚಿಕಿತ್ಸಕ ಕಾಳಜಿಯ ಸೇವೆಗಳು ಬಹಳ ಮುಖ್ಯವಾಗುತ್ತದೆ. ಚಾರಿತ್ರಿಕವಾಗಿ ನೋಡಿದಾಗ, ಪ್ರಾಥಮಿಕ ಆರೋಗ್ಯ ಸಂಸ್ಥೆಗಳು ಈ ಜವಾಬ್ದಾರಿಯನ್ನು ಹೊರುತ್ತಿದ್ದುದೇ ಅಲ್ಲದೆ ಜನರ ಮನೆಯ ಸಮೀಪದಲ್ಲೇ ಲಭ್ಯವಾಗುವಂತೆ ಚಿಕಿತ್ಸಕ ಸೇವೆಗಳನ್ನು ಒದಗಿಸುತ್ತಿದ್ದವು. ಇದು ಜನಸಾಮಾನ್ಯರಿಗೆ ಸಾಂಸ್ಕೃತಿಕವಾಗಿಯೂ ಹೆಚ್ಚು ಪ್ರಸ್ತುತ ಎನಿಸುವಂತಿರುತ್ತಿತ್ತು. ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿರುವ ಕಾರಣ ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲಿನ ವಿಶ್ವಾಸ ಕುಸಿಯುತ್ತಲೇ ಇದೆ. ಖಾಸಗಿ ವಲಯದ ಮಾರುಕಟ್ಟೆ ದರಗಳು ಈ ಜನತೆಯನ್ನು ದೂರ ಇರಿಸುತ್ತವೆ. ಈ ಕೇಂದ್ರಗಳಿಗೆ ಧಾವಿಸುವ ಅಪಾರ ಸಂಖ್ಯೆಯ ಜನರನ್ನು ನಿರ್ವಹಿಸಲು ಅಗತ್ಯವಾದ ಸೌಕರ್ಯಗಳನ್ನು ಒದಗಿಸಿದೆ ಇರುವುದೂ ಒಂದು ಕಾರಣವಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ 1600 ಕೋಟಿಯ ವೆಚ್ಚದಲ್ಲಿ ನಿರ್ಮಾಣವಾಗುತಿದ್ದ ಸೇತುವೆ ಕುಸಿತ
ಸಾರ್ವಜನಿಕ ಆರೋಗ್ಯ ವಲಯದಲ್ಲಿ ಅನುಷಂಗಿಕ ಹಾಗೂ ತೃತೀಯ ಹಂತದ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸದಿರುವ ಕಾರಣ ಸರ್ಕಾರಗಳು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಹುಮಟ್ಟಿಗೆ ಶಿಥಿಲಗೊಳಿಸಿವೆ. ಬದಲಾಗಿ ಖಾಸಗಿ ಆರೋಗ್ಯ ವಲಯವನ್ನು ಬಲಪಡಿಸುತ್ತಿವೆ. ಪ್ರಾಥಮಿಕ ಆರೋಗ್ಯ ಸೇವೆಯ ಸಂಸ್ಥೆಗಳನ್ನು ಕೇವಲ ಗುಣಪಡಿಸುವ, ಚಿಕಿತ್ಸಕ ಕೇಂದ್ರಗಳು ಎಂದು ಸತತವಾಗಿ ಬಿಂಬಿಸುವ ಮೂಲಕ ಆರೋಗ್ಯ ಯೋಜನೆಗಳಲ್ಲಿ ಈ ಸಂಸ್ಥೆಗಳ ಮಹತ್ತರ ಪಾತ್ರವನ್ನು ಕಡೆಗಣಿಸಲಾಗುತ್ತಿದೆ. ತಳಮಟ್ಟದಲ್ಲಿರುವ ಆರೋಗ್ಯ ಕಾಳಜಿಯ ಕೇಂದ್ರಗಳೊಡನೆ ಈ ಸಂಸ್ಥೆಗಳ ಅಂತರ್ ಸಂಬಂಧಗಳನ್ನು ಗುರುತಿಸಲು ವಿಫಲವಾಗಿರುವ ಸರ್ಕಾರಗಳು, ತಳಸಮಾಜದ ಜನರನ್ನು ಸೌಲಭ್ಯವಂಚಿತರನ್ನಾಗಿ ಮಾಡುತ್ತಿವೆ.
ಭಾರತದಂತಹ ದೇಶದಲ್ಲಿ ಶೇಕಡಾ 60ಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದರಿಂದ, ಈ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ. ಆದರೆ ನವ ಉದಾರವಾದಿ ಆರ್ಥಿಕತೆಯಲ್ಲಿ ಆರೋಗ್ಯ ಕ್ಷೇತ್ರವನ್ನು ವಿರುದ್ಧ ದಿಕ್ಕಿನಲ್ಲಿ ಕರೆದೊಯ್ಯಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷವೂ ಈ ನೀತಿಯ ಬಗ್ಗೆ ಸೊಲ್ಲೆತ್ತದಿರುವುದು ದೇಶ ಸಾಗುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಕನಿಷ್ಠ ಎಡಪಕ್ಷಗಳು ಈ ನಿಟ್ಟಿನಲ್ಲಿ ಜನಸಾಮಾನ್ಯರ ನಡುವೆ ಜಾಗೃತಿ ಮೂಡಿಸಲು ಮುಂದಾಗಬೇಕಿದೆ.