“ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕರಾಳತೆಯ ಅನಾವರಣ

ಎಚ್.ಆರ್. ನವೀನ್ ಕುಮಾರ್ ಹಾಸನ

“ಧರ್ಮ ಹೃದಯದಲ್ಲಿ ಇದ್ದಿದ್ದು ನೆತ್ತಿಗೇರಿದಾಗ ನಂಜಾಗುತ್ತದೆ.” ಹಿಂದೂ ಮುಸ್ಮಿಮರ ರಕ್ತ ಮಂದಿರ ಮಸೀದಿಗಳಲ್ಲಿ ಒಂದಾಗದಿದ್ದರೆ, ಕೊನೆಗೂ ನಗರದ ಚರಂಡಿ ಗಟರ್‌ಗಳಲ್ಲಿ ಒಂದಾಗುತ್ತದೆ.”

ಸಾದತ್ ಹಸನ್ ಮಂಟೊ

ಸಾದತ್ ಹಸನ್ ಮಂಟೊರವರ ಈ ಮಾತಿನ ಮೂಲಕ ಆರಂಭವಾಗುವ ಪತ್ರಕರ್ತ ನವೀನ್ ಸೂರಿಂಜೆಯವರ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕ ಕರಾವಳಿ ಪ್ರದೇಶದ ಕೋಮುವಾದದ ಘಟನೆಗಳಿಗೆ ಕಾರಣ, ಅದರ ಹಿಂದಿರುವ ಹಿಂದುತ್ವವಾದಿ ಶಕ್ತಿಗಳ ಕೆಲಸ ಮತ್ತು ಪೊಲೀಸ್ ವ್ಯವಸ್ಥೆ ಮತೀಯಗೊಂಡರೆ ಸಮಾಜದ ಸೌಹಾರ್ದತೆ ಹೇಗೆ ಹಾಳಾಗುತ್ತದೆ ಎಂಬ ಆತಂಕಕಾರಿ ಅಂಶಗಳ ಕುರಿತು ಧಾಖಲೆಗಳ ಸಮೇತ ಘಟನೆಗಳನ್ನು ವಿವರಿಸುತ್ತಾ ಕರಾವಳಿಯ ಕರಾಳತೆಯನ್ನು ನಮ್ಮಗಳ ಕಣ್ಣ ಮುಂದೆ ತೆರೆದಿಟ್ಟಿದ್ದಾರೆ. ಈ ಪುಸ್ತಕ ಮಂಗಳೂರು, ಉಡುಪಿ ಭಾಗದ ಕರಾವಳಿಯ ಕೋಮುವಾದದ ಕರಾಳತೆಯನ್ನು ಕಟ್ಟಿಕೊಡುವುದರ ಜೊತೆಗೆ ಅಲ್ಲಿನ ಜನ ಅದರಲ್ಲೂ ಅಲ್ಪಸಖ್ಯಾತರು, ಮಹಿಳೆಯರು ಅನುಭವಿಸುತ್ತಿರುವ ಕಷ್ಟಗಳನ್ನು ನೆನೆಸಿಕೊಂಡರೆ ಎಂತಹ ಕಲ್ಲು ಹೃದಯವಾದರೂ ಒಂದು ಕ್ಷಣ ಮಿಡಿಯುತ್ತದೆ ಮಾತ್ರವಲ್ಲ ಆತಂಕಗೊಳ್ಳುತ್ತದೆ.

ನವೀನ್ ಸೂರಿಂಜೆ ಒಬ್ಬ ಪತ್ರಕರ್ತರಾಗಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡವರಾಗಿ ಕರಾವಳಿಯಲ್ಲಿ ನಡೆದ ಕೋಮುಗಲಭೆಯ ಹಿಂದಿನ ಕಟು ಸತ್ಯಗಳನ್ನು ಹುಡುಕುತ್ತಾ ಅವರ ಅನುಭವಗಳನ್ನು ಧಾಖಲಿಸುವ ಕೆಲಸ ಮಾಡಿದ್ದಾರೆ. ಮಾತ್ರವಲ್ಲ ಈ ಘಟನೆಗಳನ್ನು ಓದುತ್ತಾ ಓದ ಹಾಗೆ ಕೋಮು ಸಾಮರಸ್ಯವನ್ನ ಹೊಂದಿದ ಪತ್ರಕರ್ತ, ಪೊಲೀಸ್, ಅಧಿಕಾರಿ, ನ್ಯಾಯಾಧೀಶರುಗಳು ಇದ್ದರೆ ಸಮಾಜವನ್ನು ಹಳಿತಪ್ಪದಂತೆ ನೋಡಿಕೊಳ್ಳಬಹುದು ಎಂಬುದನ್ನೂ ತೋರಿಸಿದ್ದಾರೆ.

ಮೊದಲ ಬುರ್ಕಾ/ಸ್ಕಾಫ್ ಬ್ಯಾನ್ ಪ್ರಕರಣ, ಮೊದಲ ಲೌವ್ ಜಿಹಾದ್ ಪ್ರಕರಣ, ಹೋಂಸ್ಟೇ ಮೇಲಿನ ದಾಳಿ, ಗೋರಕ್ಷಣೆಯ ಹೆಸರಿನಲ್ಲಿ ಕೆಲಸ ಮಾಡುವ ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳ ಹಿಂದಿನ ಮುಖವಾಡದ ಕರಾಳ ಸತ್ಯಗಳು, ಹಿಂದುತ್ವ ಕೋಮುವಾದಿ ಶಕ್ತಿಗಳು, ಪೊಲೀಸ್ ವ್ಯವಸ್ಥೆ ಮತ್ತು ಕಾರ್ಪೊರೇಟ್ ಶಕ್ತಿಗಳ ಮೈತ್ರಿ ಹೇಗೆ ಬಡ, ಅಮಾಯಕ ಮುಸ್ಲಿಮರನ್ನು ಅತ್ಯಂತ ಕ್ರೂರ ಹಿಂಸೆಗೆ ತಳ್ಳುತ್ತದೆ, ಜೈಲಿನ ಒಳಗಿನ ಕರಾಳತೆಯನ್ನೂ ಸೇರಿ ಹತ್ತು ಹಲವು ಘಟನೆಗಳನ್ನು ವಿವರಿಸುವ ಮೂಲಕ ಮುಚ್ಚಿಡಲ್ಪಟ್ಟ ಸತ್ಯವನ್ನು ಸಮಾಜದ ಮುಂದೆ ತೆರೆದು ತೋರಿಸಿ ಸಮಾಜವನ್ನು ಎಚ್ಚರಿಸುವ ಜವಾಬ್ದಾರಿಯುವ ಪತ್ರಕರ್ತರ ಕೆಲಸ ಈ ಪುಸ್ತಕದಲ್ಲಿ ಎದ್ದು ಕಾಣುತ್ತಿದೆ.

ದೇಶದ ಮುಸ್ಮಿಮರ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿದರೆ ಕೋಮು ಸೂಕ್ಷ್ಮ ಪ್ರದೇಶವನ್ನಾಗಿಸಿರುವ ಕರಾವಳಿಯಲ್ಲಿ ಸ್ಥಿತಿ ಹೇಗಿದೆ ಎಂಬುದನ್ನ ಲೇಖಕರ ಮಾತಿನಲ್ಲೇ ಹೇಳುವುದಾದರೆ “ನಮ್ಮ ದೇಶದ ಮುಸ್ಲಿಮರೂ ಕೂಡಾ ಕ್ರಿಮಿನಲ್ ಟ್ರೈಬ್ ತರಹ ಕ್ರಿಮಿನಲ್ ಕಮ್ಯೂನಿಟಿ ಎಂದೇ ಪರಿಗಣಿಸಲ್ಪಟ್ಟಿರುವ ಅನುಮಾನಿತ ಮತ್ತು ಅವಮಾನಿತ ಸಮುದಾಯ. ಕಳ್ಳತನ ಆದ ತಕ್ಷಣ ಕೆಲ ಆದಿವಾಸಿ ಸಮುದಾಯವನ್ನು ಹೇಗೆ ಬಂಧಿಸಲಾಗುತ್ತೋ, ಕೋಮುಗಲಭೆ, ಹಿಂದೂಗಳ ಸಾವು, ಬಾಂಬು ಕಂಡಾಕ್ಷಣ ಮುಸ್ಲಿಮರನ್ನು ಆರೋಪಿಯನ್ನಾಗಿಸುವ, ಅವಮಾನಿಸುವ, ಅನುಮಾನಿಸುವ ಕೆಲಸ ನಡೆಯುತ್ತದೆ.” ಈ ಮನಸ್ಥಿತಿಯೇ ಇಂದಿನ ಎಲ್ಲ ಸಮಸ್ಯೆಗಳಿಗೂ ಮುಸ್ಲಿಮರೇ ಕಾರಣ ಎಂದು ಬಿಂಬಿಸಲಾಗುತ್ತಿದೆ.

ಒಂದೆಡೆ ಧಾರ್ಮಿಕ ಮತಾಂದತೆಯಿಂದಾಗಿ ಬದುಕಿನ ಪ್ರಶ್ನೆಗಳು ಮುಖ್ಯವಾಗದಿದ್ದಾಗ ಹಸಿವನ್ನ ನೀಗಿಸಿಕೊಳ್ಳಲು ಬಡವರು ಪಡುವ ಕಷ್ಟ ಎಂತದ್ದು “ಹೊಟ್ಟೆಯಲ್ಲಿರುವಾಗಲೇ ಇನ್ನೂ ಜಗತ್ತು ಕಾಣದ ಮಗುವನ್ನು ಹಸಿವಿಗಾಗಿ ಮಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇಂತಹ ನೂರಾರು ತಾಯಿ ಮತ್ತು ಮಗುವಿನ ಕೂಗು ಕರಾವಳಿಯ ಯಾವ ಧರ್ಮರಕ್ಷಕರಿಗೂ ಕೇಳುವುದಿಲ್ಲ…!”

ಮಾನವೀಕತೆಯನ್ನು ಕಳೆದುಕೊಂಡ ಸಮಾಜದಲ್ಲಿ ದ್ವೇಷವನ್ನೇ ತುಂಬಿಕೊಂಡು ಧರ್ಮದ ಮದವೇರಿರುವವರ ನಡುವೆ ಬದುಕುವವರ ಸ್ಥಿತಿ ಹೀಗೆಯೇ ಆಗುವುದು. ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆಂದು ಹೇಳಿ ಪೊಲೀಸರು ಮತ್ತು ಕೇಸರಿ ಶಾಲುದಾರಿಗಳು ಜಂಟಿ ಕಾರ್ಯಾಚರಣೆಯ ಮೂಲಕ ದಾಳಿ ನಡೆಸಿದಾಗ “ಪೆಟ್ಟು ತಿಂದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮುಸ್ಲಿಂ ಹುಡುಗರನ್ನು ಆಸ್ಪತ್ರೆಗೆ ಧಾಖಲಿಸಲು ಆಂಬುಲೆನ್ಸ್ ತರಿಸುವ ಬದಲು ದನಗಳ ರಕ್ಷಣೆಗೆ ಪೊಲೀಸರು ಲಾರಿ ತರಿಸಿದ್ರು. ಎಲ್ಲಾ ದನಗಳನ್ನು ರಕ್ಷಣೆ ಮಾಡಿದ ಬಳಿಕ ಅಂಬುಲೆನ್ಸ್ ತರಿಸಿ ಚಾಲಕ ಅಬ್ದುಲ್ ಸಮೀರ್, ಫಯಾಸ್ ಮತ್ತು ಶೌಕತ್‌ರನ್ನು ಆಸ್ಪತ್ರೆಗೆ ಧಾಖಲಿಸಲಾಯ್ತು.” ಈ ಘಟನೆ ಪೊಲೀಸ್ ವ್ಯವಸ್ಥೆ ಎಷ್ಟು ಮತೀಯಗೊಂಡಿದೆ ಮತ್ತು ಕೇಸರಿ ಪಡೆಗಳ ಅಟ್ಟಹಾಸ ಕರಾವಳಿಯಲ್ಲಿ ಗೋರಕ್ಷಣೆ, ಧರ್ಮರಕ್ಷಣೆಯ ಹೆಸರಿನಲ್ಲಿ ಹೇಗೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

“ಇಡೀ ದಕ್ಷಿಣ ಕನ್ನಡದ ಮತೀಯವಾದಿ ರಕ್ತ ಚರಿತ್ರೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕೆ ಜೀವ ನೀಡಿಲ್ಲ.” ಈ ಸತ್ಯವನ್ನು ಅರ್ಥಮಾಡಿಕೊಂಡರೆ ಸಾಕು ಬ್ರಾಹ್ಮಣಶಾಹಿಯ ಕುತಂತ್ರಕ್ಕೆ ಕರಾವಳಿಯ ದಲಿತ, ಶೂದ್ರ, ಹಿಂದುಳಿದ ವರ್ಗದ ಹುಡುಗರು ಹೇಗೆ ಬಲಿಯಾಗುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದರ ಜೊತೆಗೆ ಹಿಂದುತ್ವ ಕೋಮುವಾದ ಕಾರ್ಪೋರೇಟ್ ಶಕ್ತಿಗಳೊಂದಿಗೆ ಸೇರಿರುವುದನ್ನು ಲೇಖಕರು ಗುರುತಿಸುತ್ತಾರೆ. “ಹಿಂದುತ್ವ ಮತ್ತು ರೌಡಿಸಂ, ಹಿಂದುತ್ವ ಮತ್ತು ರಿಯಲ್ ಎಸ್ಟೇಟ್ ಮೈತ್ರಿಯಾಗಿ ಮೈತ್ರಿ ಜನಕಂಟಕವಾಗಿರುವುದು ನೋಡಿದ್ದೇವೆ. ಹಿಂದುತ್ವ ಮತ್ತು ಕಾರ್ಪೋರೇಟ್ ಎಷ್ಟೊಂದು ಜನಪೀಡಕ ಎಂಬುದನ್ನು ಕರಾವಳಿಯ ಹಿಂದುತ್ವ ತೋರಿಸಿಕೊಟ್ಟಿದೆ. ದೇಶದಲ್ಲಿ ಈಗ ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿ ಇದೆ. ಈ ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿಯ ಪ್ರಯೋಗಶಾಲೆ ಮಂಗಳೂರು ಎಂಬುದು ಆಶ್ಚರ್ಯವಾದರೂ ಸತ್ಯ.”

ಈ ಪುಸ್ತಕದ ಕುರಿತು ನಿವೃತ್ತ ಎಸಿಪಿ ಬಿಕೆ.ಶಿವರಾಂ ರವರು ಪುಸ್ತಕದ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ……”ಭಾರತ ಬಹುಸಂಸ್ಕೃತಿಯ ದೇಶ. ಬಹುತ್ವದಲ್ಲಿ ಏಕತೆಯನ್ನು ಪ್ರತಿಪಾದಿಸುತ್ತಾ, ವಿಭಿನ್ನ ಸಂಸ್ಕೃತಿ, ಹಲವು ಭಾಷೆ, ಲಕ್ಷಾಂತರ ಆಚರಣೆ, ನೂರಾರು ವಿಚಾರ, ವಿಭಿನ್ನ ಭೌಗೋಳಿಕ ಪರಿಸರದಲ್ಲಿ ನಾವಿದ್ದರೂ ನಾನು ಭಾರತೀಯ ಎನ್ನುವ ಘೋಷವಾಕ್ಯದಲ್ಲಿ ನಾವೆಲ್ಲಾ ಒಟ್ಟಾಗಿದ್ದರಿಂದ ಇಲ್ಲಿಯವರೆಗೆ ಭಾರತವು ಒಂದು ದೇಶವಾಗಿ ಉಳಿದಿದೆ. ದೇಶದ ದುರಾದೃಷ್ಟವೆಂದರೆ ಇತ್ತೀಚೆಗೆ ಏಕ ಸಂಸ್ಕೃತಿಯ ಪ್ರತಿಪಾದಕರು ಹೆಚ್ಚುತ್ತಿದ್ದು, ದೇಶದೊಳಗೆ ‘ನಾಗರಿಕ ಭಯೋತ್ಪಾದನೆ’ಯನ್ನು ಮಾಡುತ್ತಿದ್ದಾರೆ. ಈ ರೀತಿಯ ಆಂತರಿಕ ಭಯೋತ್ಪಾದನೆಯು ದೇಶದ ಗಡಿರಕ್ಷಣಾ ಸಮಸ್ಯೆಗಿಂತಲೂ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ದೇಶವನ್ನು ಆಂತರಿಕವಾಗಿ ವಿಭಜನೆಗೆ ಪ್ರೇರೇಪಿಸುತ್ತದೆ. ದೇಶಪ್ರೇಮಿ ಭಾರತೀಯರು ಈಗಲೇ ಎಚ್ಚೆತ್ತುಕೊಂಡು ಇದನ್ನು ಪ್ರತಿಭಟಿಸದೇ ಇದ್ದರೆ ದೇಶವಿಭಜನೆಯೋ, ವಿನಾಶವೋ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ”.

“ನಾವು ಒಂದು ದೇಶವಾಗಿ ವಿಶ್ವಭ್ರಾತೃತ್ವವನ್ನು ಪೋಷಿಸಿಕೊಂಡು ಬಂದವರು. ಹಿಂದೂ ಧರ್ಮವು ‘ವಸುದೈವ ಕುಟುಂಬಕಂ’ ಮತ್ತು ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ವಾಕ್ಯಗಳಲ್ಲಿ ನಂಬಿಕೆ ಇಟ್ಟುಕೊಂಡು ಬೆಳೆದಿದೆ. ಕರ್ನಾಟಕವು ಶರಣ ಶ್ರೇಷ್ಠರ ಶರಣ ಸಾಹಿತ್ಯ, ದಾಸ ಶ್ರೇಷ್ಠರ ದಾಸ ಸಾಹಿತ್ಯ, ತೀರಾ ಇತ್ತೀಚೆಗೆ ಕುವೆಂಪು ಸಾರಿದ ವಿಶ್ವಮಾನವ ತತ್ವಗಳನ್ನು ರೂಢಿಸಿಕೊಂಡಿದೆ. ಆದ್ದರಿಂದ ನಾವು ಎಲ್ಲರನ್ನು ಒಳಗೊಂಡು, ಪ್ರೀತಿಸಿ ಬದುಕುವುದರಿಂದಷ್ಟೇ ದೇಶಪ್ರೇಮಿ, ಕನ್ನಡ ಪ್ರೇಮಿ, ಧರ್ಮ ಪ್ರೇಮಿ ಆಗಿರಲು ಸಾಧ್ಯ. ಈ ಸತ್ಯವನ್ನು ಹಿಂದೂ ಧರ್ಮದ ಪ್ರತಿಪಾದಕರು ಎಂದು ಹೇಳಿಕೊಳ್ಳುತ್ತಿರುವ ಧರ್ಮಾಂಧರು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕಿದೆ”.

“ಪೊಲೀಸರಿಗೆ ಪೊಲೀಸ್ ಮ್ಯಾನುವಲ್ ಮಾತ್ರ ಧರ್ಮಗ್ರಂಥವಾಗಬೇಕು. ತಮ್ಮ ವೈಯಕ್ತಿಕ ಬದುಕಿನ ಧರ್ಮಗ್ರಂಥವನ್ನು ಮನೆಯಲ್ಲಿಟ್ಟು ಬಂದು ಯೂನಿಫಾರಂ ಧರಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡ ಪೊಲೀಸರ ಕ್ರೂರ ಬದುಕು ಈ ಪುಸ್ತಕದಲ್ಲಿ ದಾಖಲಾಗಿದೆ”.

ಲೇಖಕ ನವೀನ್ ಸೂರಂಜೆಯವರೆ ಹೇಳುವಂತೆ ‘ಕೇಸರಿ ಶಾಲು’, ‘ನೈತಿಕ ಪೊಲೀಸುಗಿರಿ’, ‘ಧರ್ಮ ರಕ್ಷಣೆ’, ‘ಭಾರತೀಯ ಸಂಸ್ಕೃತಿ ರಕ್ಷಣೆ’ ಇವೆಲ್ಲದರ ಹಿಂದೆ ಬೇರೆಯದ್ದೇ ರಾಜಕೀಯ ಅಜೆಂಡಾ ಇದೆ ಎಂಬುದು ಹಿಂದುಳಿದ ವರ್ಗಗಳಿಗೆ ಗೊತ್ತಾಗಬೇಕಿದೆ. ಎಲ್ಲಾ ಸಂದರ್ಭದಲ್ಲೂ ಹಿಂದುತ್ವದ ‘ರಾಜಕೀಯ ಅಜೆಂಡಾ’ ಬಯಲಾಗುತ್ತಿದ್ದರೂ ಮರೆವಿನ ಕಾರಣದಿಂದ ಜನರು ಮತ್ತೆ ಮತ್ತೆ ತಮಗೆ ಸಂವಿಧಾನ ದತ್ತ ಸವಲತ್ತುಗಳನ್ನು ತೆಗೆದು ಹಾಕಲು ಚಿತಾವಣೆ ನಡೆಸುತ್ತಿರುವವರಿಂದ ಈ ಕೋಮುವಾದಿ ದಾಳಕ್ಕೆ ಸಿಲುಕಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಮೇಲು-ಕೀಳು ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು, ಕೆಳವರ್ಗಗಳು ಅಭಿವೃದ್ಧಿ ಹೊಂದದಂತೆ ನೋಡಿಕೊಳ್ಳಲು, ಬ್ರಾಹ್ಮಣ್ಯದ ರಕ್ಷಣೆಗಾಗಿ ಊಳಿಗಮಾನ್ಯ ಯಜಮಾನಿಕ ವ್ಯವಸ್ಥೆಯು ಹಿಂದುತ್ವದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈಗ ಕಾರ್ಪೋರೇಟ್ ಮತ್ತು ಹಿಂದುತ್ವದ ನಡುವೆ ಮೈತ್ರಿಯಾಗಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡೇ ಹಿಂದುಳಿದ ವರ್ಗಗಳನ್ನು ತುಳಿಯುತ್ತಲೇ ಮೇಲ್ವರ್ಗದ ಯಜಮಾನಿಕೆ ಮತ್ತು ಕಾರ್ಪೋರೇಟ್ ವ್ಯವಸ್ಥೆಯ ಪರ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಹಿಂದುತ್ವ ರಾಜಕಾರಣದ ಸುಳ್ಳುಗಳು, ಅಪ್ರಾಮಾಣಿಕತೆ ಮತ್ತು ಹಿಡನ್ ಅಜೆಂಡಾ, ಸರ್ಕಾರಿ ಭಾಗಿದಾರಿಕೆಯನ್ನು ಘಟನೆಗಳ ಸಹಿತ “ನೇತ್ರಾವತಿಯಲ್ಲಿ ನೆತ್ತರು” ಪುಸ್ತಕದಲ್ಲಿ ಕ್ರೋಢೀಕರಿಸಲಾಗಿದೆ.

ಭವಿಷ್ಯದಲ್ಲಿ ಸೌಹಾರ್ದ ಕರ್ನಾಟಕದುದ್ದಕ್ಕೂ ಎದುರಾಗಬಹುದಾದ ಕೋಮುವಾದದ ಕರಾಳತೆಯನ್ನು, ಮತಾಂದ ಪೊಲೀಸ್ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಎಚ್ಚತ್ತು ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ, ಭಾರತವನ್ನ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಎಲ್ಲರೂ ಈ ಪುಸ್ತಕವನ್ನು ಓದಲೇ ಬೇಕು.

ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಬೆಲೆ ರೂ 185.

 

Donate Janashakthi Media

Leave a Reply

Your email address will not be published. Required fields are marked *