ಜೂನ್ 15 ನಿರಂಜನರ ಜನುಮದಿನ, ನಿರಂಜನ ರಿಗೆ 100 ವರ್ಷಗಳಾಗುತ್ತಿದೆ. 1970ರಲ್ಲಿ ಅವರು ತನ್ನ ಬಾಲ್ಯದ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಒಂದೂರಿನಲ್ಲಿ ಕಾರಂತರು ಅಂತ ಶೀರ್ಷಿಕೆಯಲ್ಲಿ ಪ್ರಬಂಧ ಮಾದರಿಯ ಕಥಾನಕ ಒಂದನ್ನು ಬರೆಯುತ್ತಾರೆ. ಶಿವರಾಮ ಕಾರಂತರು, ಮಕ್ಕಳ ಕೂಟ, ಪುತ್ತೂರು ನಾಡಹಬ್ಬದ ನೆನಪುಗಳೊಂದಿಗೆ ಬಿಚ್ಚಿಕೊಳ್ಳುವ ಅಪೂರ್ವವಾದ ಬರಹವನ್ನು ಚಿಂತಕ ಐಕೆ ಬೊಳುವಾರ್ ಸಂಗ್ರಹಿಸಿದ್ದಾರೆ. ಈ ಬರಹವನ್ನು ನಿರಂಜನರನ್ನು ನೆನಪಿಸುವುದಕ್ಕಾಗಿ ಈ ಮೂರು ಪುಟಗಳ ಸಣ್ಣ ಬರಹವನ್ನು ಓದಿರಿ….
ಸಾವಿರಾರು ಕಿರಿಯರು ಹಿರಿಯರು ; ಸಾಸಿವೆ ಬಿದ್ದರೆ ಸಪ್ಪಳವಾಗುವ ಮೌನ, ಕತ್ತಲು ; ಎಲ್ಲರೂ ನೋಡುತ್ತಿರುವುದು ರಂಗಮಂಟಪವನ್ನು, ಅಲ್ಲಿ ‘ಮಾಯಾ ಲಾಂದ್ರದ ಮಾಂತ್ರಿಕ’ ಅದ್ಭುತ ಲೋಕವನ್ನು ಸೃಷ್ಟಿಸುತ್ತಿದ್ದಾನೆ. ರಂಗಭೂಮಿಯ ಮೇಲೆಲ್ಲ ಹಿಮ, ಹಿಮ, ಹಿಮ. (ಭೂಮಿಯ ಬದುಕಿನಲ್ಲಿ ಹಿಮಾಚ್ಛಾದಿತ ಅವಧಿ? ಅಥವಾ ಧ್ರುವ ಪ್ರದೇಶ? ಎಸ್ಕಿಮೋ ಜನಜೀವನ ದೃಶ್ಯ ?) ಎತ್ತ ನೋಡಿದರೂ ಬಿಳುಪು.
ನೋಡುತ್ತಿದ್ದ ಮಕ್ಕಳ ಪಾಲಿಗೆ ಅದೊಂದು ಕನಸು,
ಆಗ ಇದ್ದಕ್ಕಿದ್ದಂತೆ :
ಬೆಂಕಿ…ಬೆಂಕಿ
ಅಯ್ಯೋ ಬೆಂಕಿ
“ಏಳಿ ! ಬೆಂಕಿ ಬಿತ್ತು ! ಹೊರಡಿ !”
ಯಾರು ಯಾರದೋ ಕೂಗು, ಓಡಿದ್ದೇ ಓಡಿದ್ದು,
ಹಿಮವೆಂಬ ಭ್ರಮೆ ಹುಟ್ಟಿಸಿದ ಹತ್ತಿಗೆ, ಉರಿಯುತ್ತಿದ್ದ ಬೀಡಿಯದೋ ಸಿಗರೇಟಿ ನದೋ ಸ್ಪರ್ಶವಾಗಿತ್ತು.
ನಡೆಯುತ್ತಿದ್ದುದು ಮಕ್ಕಳ ಸಮ್ಮೇಳನದ ಮನೋರಂಜನೆಯ ಕಾರ್ಯಕ್ರಮ…. ….ಬೆಳಗ್ಗೆ ಎದ್ದಾಗ, ಅಲ್ಲಿ ರಾತ್ರಿ ಏನಾಯಿತೋ ಎಂಬ ಯೋಚನೆ. ಬೇಗನೆ ಶಾಲೆಗೆ ಓಡಿದೆ.
ಬೂದಿಯ ರಾಶಿ ಇರಲಿಲ್ಲ.
ಒಬ್ಬರೆಂದರು :
* ಬೆಂಕಿ ಆರಿಸಿದ್ರು, ಕಾರಂತರು ಬಿಡ್ತಾರಾ? ಮುಂದಿನ ಕಾರ್ಯಕ್ರಮ ನಡೆದೇ ನಡೆಯಿತು.”
ಆಗ ನನಗೆ ಹತ್ತೋ, ಹನ್ನೊಂದೋ,
ಮುಂದಿನ ವರ್ಷ ಮಕ್ಕಳ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಹೋದೆ. ಸ್ವಾಗತ ಕಚೇರಿಯಲ್ಲಿ ಕಾರಂತರು, ಥೇಟು ಕಿಂದರಿಜೋಗಿ, ನಾವೆಲ್ಲ ಬೊಮ್ಮನಹಳ್ಳಿಯ ಪಿಳ್ಳೆಗಳು, ಅವರ ಜೇಬಿನಲ್ಲೊಂದು ಅಳಿಲು. ಹೊರಗೆ ಬರುತ್ತಿತ್ತು; ಹೆಗಲಿಗೆ
ಏರುತ್ತಿತ್ತು. ಸುತ್ತಲೂ ಚಿಕ್ಕವರ ಕಿಸಿ ಕಿಸಿ ನಗೆ, ಗಿಲಿ ಗಿಲಿ ಸದ್ದು, ಸಮ್ಮೇಳನ ನಡೆಯುತ್ತಿದ್ದ ಸ್ಥಳಕ್ಕೆ ಒಂದು ರೇಡಿಯೋ ಬಂತು. ಪುತ್ತೂರಿನ ಡಾಕ್ಟರದು – ಎಂದರು ಯಾರೋ, ಬಟ್ಟ ಬಯಲಿನಲ್ಲಿ ಆ ವಿಚಿತ್ರ ವಸ್ತು, ವಾತಾವರಣದಲ್ಲಿಯ ಅಲೆಗಳು ಹಿಡಿದು ತರುವ ಧ್ವನಿಮೇಳ. ಮಕ್ಕಳೆಲ್ಲ ತೆರೆದ ಕಿವಿ, ತೆರೆದ ಬಾಯಿ, ಆದೊಂದು ಭಾರೀ ಜಾತ್ರೆ,
ಮುಂದಿನ ವರ್ಷ ಎಲ್ಲಿ ?
ಉಪಾಧ್ಯಾಯರೆಂದರು :
” ಇನ್ನು ಸಮ್ಮೇಳನವಿಲ್ಲ.”
ದಂಗುಬಡೆದುದರ ಮೊದಲ ಅನುಭವ.
* ವಿದ್ಯಾಧಿಕಾರಿಗಳು ವಿರೋಧಿಸಿದ್ದಾರೆ. ಶಾಲೆಯ ಪಠ್ಯ ಕ್ರಮಕ್ಕೆ ಇದು ಸಂಬಂಧಿಸಿದ್ದಲ್ಲವಂತೆ. ಶಾಲೆ ಇರುವಾಗ ಮಕ್ಕಳು ಹಾಗೆಲ್ಲ ಹೋಗಬಾರದಂತೆ, ಅವರ ಜೊತೆಗೆ ಹೊರಡುವ ಉಪಾಧ್ಯಾಯರಿಗೆ ಆ ದಿನಗಳ ಸಂಬಳ ಕೊಡುವುದಿಲ್ಲವಂತೆ.”
ಆದರೆ ದಸರೆಯೊಂದಿತ್ತು. ಅದು ವಿದ್ಯಾಧಿಕಾರಿಗಳ ಅಧಿಕಾರಕ್ಷೇತ್ರಕ್ಕೆ ಹೊರ ತಾದದ್ದು, ಕಾರಂತರು ಸೂತ್ರಧಾರರಾಗಿ ನಡೆಸುತ್ತಿದ್ದ ಅದ್ದೂರಿಯ ನಾಡಹಬ್ಬ.
ಆಗ ಕಾರಂತರ ಬಾಲವನವೊಂದು ಧರ್ಮಶಾಲೆ. ಅವರ ಪುತ್ತೂರು ಸಾರಸ್ವತ ಜೇನುತೊಟ್ಟಿ, ಸಹಧರ್ಮಿಣಿಯ ಮೇಲ್ವಿಚಾರಣೆ, ಕಾರಂತರ ಕಾಪು. ಎಷ್ಟು ಜನ ಅಲ್ಲಿರುತ್ತಿದ್ದರು – ಬರೆಹಗಾರರು, ಕವಿಗಳು, ಕಲಾವಿದರು !
ಬಿಡುವಿನ ವೇಳೆ ಲೀಲಾ ಕಾರಂತರು ಓದಲು ಒಂದು ಪುಸ್ತಕ ಕೊಟ್ಟರು. * ಪಾತಾಳದಲ್ಲಿ ಪಾಪಚ್ಚಿ ‘. ಚಿಕ್ಕವನು ನಿಜ, ಆದರೆ ಪಾಪಚ್ಚಿ ಪುಸ್ತಕ ? ಒಂದೇ ಉಸಿರಿಗೆ ಓದಿ, ‘ತಕ್ಕೊಳ್ಳಿ’, ಎಂದೆ. “ ಬೇರೆ ಕೊಡಿ”, ಎಂದು ಮಾತು ಸೇರಿಸಿದೆ. ” ಓದಿ ಆಯ್ತಾ? ” ” ಓಹೊ”, * ಉದಯರಾಗ’ ಕೊಟ್ಟರು. “ ಒಳಗಿದ್ದಾರಲ್ಲ, ಅವರೇ ಬರೆದದ್ದು. ”
ಒಳಗಿದ್ದವರು; ಕಾರಂತರು, ಅ.ನ.ಕೃ., ವಿ. ಸೀ. ಇನ್ನೂ ಒಬ್ಬಿಬ್ಬರು, ನೆನಪಿಲ್ಲ. ಮಾತುಕತೆ ಊಹಿಸಿಕೊಳ್ಳಬಹುದು, ವಿಷಯದಿಂದ ವಿಷಯಕ್ಕೆ ಹಾರುತ್ತ….
ಜಗಲಿಯಲ್ಲಿ ಕುಳಿತ ನನಗೋ ‘ಉದಯರಾಗ’ದ ಓದು, ಮನಸ್ಸು ಇಲ್ಲಿ, ಕಿವಿ ಅಲ್ಲಿ, ಈಗ ಅನಿಸುತ್ತಿದೆ: ಆ ಕೊಠಡಿಯಿಂದ ತರಂಗ ತರಂಗವಾಗಿ ಬಂದುದೇ ನನ್ನ ಪಾಲಿನ ಉದಯರಾಗ, ಓಹೋ, ಒಪ್ಪಿಕೊಳ್ಳಬಹುದು- ನಾನು ಕಣ್ಣು ತೆರೆದುದು ಆಗಲೇ, ಆಗಲೇ.
ಶಾಲೆಗೆ ‘ಕಾಪಿ’ ಬರೆದುಕೊಂಡು ಹೋಗಬೇಕು. ಹಸ್ತಾಕ್ಷರ ತಿದ್ದುವುದು ಉದ್ದೇಶ. ಒಂದು ದಿನ ಕಾಪಿ’ ಪುಸ್ತಕದಲ್ಲಿ ‘ಈ ಲೆಕ್ಕಣಿಕೆಗೆ ದಯೆಯಿಲ್ಲ’ ಎಂದು ಬರೆದೆ.
ಉಪಾಧ್ಯಾಯರು ಕೇಳಿದರು :
ಏನಿದು ?”
ಮೌನ.
* ಯಾವುದನ್ನು ನೋಡಿ ಬರೆದದ್ದು?”
* ಕಾರಂತರ ಪುಸ್ತಕ.”
* ಹೆಸರು ?*
* ಕನ್ಯಾಬಲಿ.*
ಹೊದಿಕೆಯ ಮೇಲಿದ್ದುದು ‘ಕನ್ಯಾಬಲಿ’ ಅಥವಾ ‘ಸೂಳೆಯ ಸಂಸಾರ.’ ಅದರ ಮುನ್ನುಡಿಯಲ್ಲಿತ್ತು ಆ ವಾಕ್ಯ : ಈ ಲೆಕ್ಕಣಿಕೆಗೆ ದಯೆಯಿಲ್ಲ.’ ಏನನ್ನೂ ಹೇಳಲಿಲ್ಲ ಉಪಾಧ್ಯಾಯರು,
ನೆನಪುಗಳು ನೂರು, ಎಷ್ಟು ಬೇಕಾದರೂ ಬರೆಯಬಹುದು, ಆದರೆ ಆ ಎಲ್ಲ ಪದರಾಶಿಯಿಂದ ಹೊರಡುವ ಧ್ವನಿ ಒಂದೇ. ನಾಡಿನ ನವೋದಯದ ವೇಳೆಯಲ್ಲಿ ಕಾರಂತರು ಹೇಮಂತನಾದರು, ವಸಂತನಾದರು.
ಕಹಿ ಸಿಹಿ ಅನುಭವಗಳ ಅಕ್ಷಯಪಾತ್ರೆಯನ್ನು ದೊರಕಿಸಿಕೊಂಡು ನಳನಾದರು. ಜ್ಞಾನದ ಅಡುಗೆ ತಾವೂ ಉಂಡರು. ಇತರ ಎಲ್ಲರಿಗೂ ಉಣಬಡಿಸಿದರು. ತಾವು ನೋಡನೋಡುತ್ತಲಿದ್ದಂತೆಯೇ, ಮನೆ ಮಾತಾದರು. ಅವಸ್ಥಾಂತರಗಳನ್ನು ದಾಟುವ ವೇಳೆಗೆ ದಂತಕಥೆಯಾದರು.
ಕೆಲ ತಲೆಮಾರುಗಳ ಬಳಿಕ ಯಾರಾದರೂ ಖಂಡಿತ ಕತೆ ಹೇಳುತ್ತಾರೆ :
“ನಮ್ಮ ಮುತ್ತಾತನ ತಾತನ ಕಾಲದಲ್ಲಿ ಒಂದೂರಲ್ಲಿ ಕಾರಂತರು ಅಂತ ಒಬ್ಬರಿದ್ದರಂತೆ…..”