ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ತನ್ನ ವರದಿಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದ್ದು, 2021ರಲ್ಲಿ ನಡೆದಿರುವ ಅಧಿಕೃತ ಅಪರಾಧ ಪ್ರಕರಣಗಳ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ದೇಶದಲ್ಲಿ 1,64,033 ಮಂದಿ ಆತ್ಮಹತ್ಯೆ ಈಡಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ, ದೌರ್ಜನ್ಯದಂತಹ ಪ್ರಕರಣಗಳು ಸಹ ಏರಿಕೆ ಕಂಡಿದ್ದು, ಅಘಾತಕಾರಿಯಾಗಿದೆ. ಅಲ್ಲದೆ, ಮಾನವ ಕಳ್ಳಸಾಗಣೆ, ಅಪರಾಧ ಪ್ರಕರಣಗಳು ಪ್ರಮಾಣವು ಅಧಿಕಗೊಂಡಿವೆ.
1,64,033 ಆತ್ಮಹತ್ಯೆ ಪ್ರಕರಣಗಳು ದಾಖಲು
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, 2021ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆಗೆ ಈಡಾಗಿದ್ದಾರೆ. ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2021ರಲ್ಲಿ ಸ್ವ-ಉದ್ಯೋಗಿಗಳು, ನಿರುದ್ಯೋಗಿಗಳು, ದಿನಗೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು, ಕೃಷಿ ರಂಗದಲ್ಲಿ ತೊಡಗಿಸಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2021ರಲ್ಲಿ ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು ಮತ್ತು ಮಧ್ಯಪ್ರದೇಶ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಕರ್ನಾಟಕ ಐದನೇ ಸ್ಥಾನದಲ್ಲಿದೆ.
ಎನ್ಸಿಆರ್ಬಿ ವರದಿಯ ಪ್ರಕಾರ, “2021ರಲ್ಲಿ ಒಟ್ಟು 1,18,979 ಪುರುಷರು ಹಾಗೂ 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 37,751 ದಿನಗೂಲಿ ಕಾರ್ಮಿಕರು, 18,803 ಸ್ವಯಂ ಉದ್ಯೋಗಿಗಳು ಮತ್ತು 11,724 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5,318 ರೈತರು ಮತ್ತು 5,563 ಕೃಷಿ ಕಾರ್ಮಿಕರು ಸೇರಿದಂತೆ ಕೃಷಿ ವಲಯದಲ್ಲಿ ಒಟ್ಟು 10,881 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆʼʼ ಎಂದು ದಾಖಲಾಗಿವೆ. ಇದು ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 6.6 ರಷ್ಟಿದೆ.
ದೇಶದಲ್ಲಿ 2020ರಲ್ಲಿ 1,53,052 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದರೆ. 2021 ರಲ್ಲಿ ಒಟ್ಟು 1,64,033 ಪ್ರಕರಣಗಳು ದಾಖಲಾಗಿವೆ ಎಂದು ಎನ್ಸಿಆರ್ಬಿ ತಿಳಿಸಿದೆ.
ಮಹಿಳೆರ ಮೇಲಿನ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳಲ್ಲಿಯೂ ಏರಿಕೆ
ಭಾರತದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯದಂತಹ ಗಂಭೀರ ಪ್ರಕರಣದ ಅಪರಾಧ ಕೃತ್ಯದ ಸಂಖ್ಯೆಯೂ ಏರಿಕೆ ಕಂಡಿರುವುದು ಅಘಾತಕಾರಿಯಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯು ಮಹಿಳಯರ ಪಾಲಿಗೆ ಅಸುರಕ್ಷಿತ ನಗರ ಎನ್ನುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಎರಡು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ 2021ರಲ್ಲಿ, ರಾಜಧಾನಿ ದೆಹಲಿಯಲ್ಲಿ ಅಪಹರಣ (3,948), ಗಂಡನಿಂದ ಕ್ರೌರ್ಯ (4,674) ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ (833) ಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳ ಪ್ರಕರಣಗಳನ್ನು ವರದಿ ಮಾಡಿದೆ.
ದೆಹಲಿಯಲ್ಲಿ 2021ರಲ್ಲಿನ ವರದಿ ಪ್ರಕಾರ ಪ್ರತಿದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ದಾಖಲಾಗಿದೆ. 2021ರಲ್ಲಿ ಮಹಿಳೆಯರ ವಿರುದ್ಧದ 13,892 ಅಪರಾಧ ಪ್ರಕರಣಗಳು ದಾಖಲಾಗಿದ್ದು, 2020ಕ್ಕೆ ಹೋಲಿಸಿದರೆ ಶೇ. 40ರಷ್ಟು ಹೆಚ್ಚಳ ಕಂಡಿದೆ. 2020ರಲ್ಲಿ 9,782 ಆಗಿತ್ತು ಎಂದು ಅಂಕಿಅಂಶಗಳು ತೋರಿಸಿವೆ.
ನವದೆಹಲಿಯಲ್ಲಿ ದಿನಕ್ಕೆ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದೆ. 2021ರ ಸಾಲಿನಲ್ಲಿ ನವದೆಹಲಿಯೊಂದರಲ್ಲೇ 833ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಪೋಕ್ಸೋ ಕಾಯ್ದೆ ಅಡಿ 1357ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಎನ್ಸಿಆರ್ಬಿ ವರದಿಯ ಪ್ರಕಾರ, ದೇಶದಾದ್ಯಂತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯು ಅಗ್ರಸ್ಥಾನದಲ್ಲಿದೆ. ದೆಹಲಿಯಲ್ಲಿ ಇತರೆ ಎಲ್ಲಾ 19 ಮಹಾನಗರಗಳ ಪೈಕಿ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆ ಶೇ. 32.20 ರಷ್ಟಿದೆ.
19 ಮಹಾನಗರಗಳ ಬಗೆಗಿನ ದಾಖಲಾತಿ ವರದಿಯ ಪ್ರಕಾರ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಅಗ್ರಸ್ಥಾನದಲ್ಲಿದ್ದು, ಶೇ. 32.20ರಷ್ಟು ಹೊಂದಿದೆ. ದೆಹಲಿ ನಂತರ ಮುಂಬೈನಲ್ಲಿ 5,543 ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ 3,127 ಪ್ರಕರಣಗಳು ದಾಖಲಾಗಿವೆ. 19 ಮಹಾನಗರಗಳ ಪೈಕಿ ಒಟ್ಟು ಅಪರಾಧಗಳಲ್ಲಿ ಕ್ರಮವಾಗಿ ಶೇ 12.76 ಮತ್ತು ಶೇ 7.2 ಹೊಂದಿವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ಅಪರಾಧಗಳು
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ)ದ 2019-2021ರ ವರದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ 2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚು ಸಂಭವಿಸಿದೆ ಎಂದು ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 56,083. ಇದು ದೇಶದಲ್ಲೇ ಅತಿ ಹೆಚ್ಚಾಗಿದ್ದು, ಮೊದಲ ಸ್ಥಾನ ಪಡೆದುಕೊಂಡಿದೆ.
ಉತ್ತರ ಪ್ರದೇಶದ ನಂತರ ರಾಜಸ್ಥಾನದಲ್ಲಿ 40,738 ಪ್ರಕರಣಗಳು ದಾಖಲಾಗಿವೆ. 39,526 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352) ನಂತರದ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ 14,468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯಲ್ಲಿ 14,277 ಪ್ರಕರಣಗಳು ವರದಿಯಾಗಿವೆ.
ದೇಶದ 19 ಮಹಾನಗರಗಳಲ್ಲಿ ಅಪರಾಧಗಳ ಸಂಖ್ಯೆ 43,414ರಷ್ಟು ಇದೆ ಎಂದು ವರದಿ ತಿಳಿಸುತ್ತದೆ.
ಎರಡು ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ ನವದೆಹಲಿಯಲ್ಲಿ 4674 ಗಂಡನಿಂದ ಹಿಂಸೆಯ ಪ್ರಕರಣ, 833 ಅತ್ಯಾಚಾರಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ವರದಿಯಾಗಿವೆ.
ಅಪಹರಣ ಪ್ರಕರಣಗಳು
ಎನ್ಸಿಆರ್ಬಿಯ ವರದಿ ಪ್ರಕಾರ, 5,901 ಅಪಹರಣ ಪ್ರಕರಣಗಳು ದಾಖಲಾಗುವುದರೊಂದಿಗೆ 19 ಮಹಾನಗರಗಳ ಪೈಕಿ ಅತಿ ಹೆಚ್ಚು ಅಪಹರಣ ಪ್ರಕರಣಗಳು ದೆಹಲಿಯೊಂದರಲ್ಲೇ ದಾಖಲಾಗಿವೆ. 2020ರಲ್ಲಿ 5,475 ಪ್ರಕರಣಗಳು ಮತ್ತು 2019ರಲ್ಲಿ 4,011 ಅಪಹರಣ ಪ್ರಕರಣಗಳು ದಾಖಲಾಗಿದ್ದವು.
ದೆಹಲಿಯಲ್ಲಿನ ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದು, 2020ರಲ್ಲಿ 461 ಮತ್ತು 2019ರಲ್ಲಿ 500ಕ್ಕೆ ಹೋಲಿಸಿದರೆ, 2021ರಲ್ಲಿ 454 ಕೊಲೆ ಪ್ರಕರಣಗಳು ವರದಿಯಾಗಿವೆ.
2021ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಹೆಣ್ಣು ಮಕ್ಕಳ ಬಲಿಪಶುಗಳು ಮಾತ್ರ) ಅಡಿಯಲ್ಲಿ 1,357 ಪ್ರಕರಣಗಳು ವರದಿಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂಕಿಅಂಶಗಳ ಪ್ರಕಾರ 2021ರಲ್ಲಿ ಮೆಟ್ರೋಪಾಲಿಟನ್ ನಗರಗಳಲ್ಲಿ ಅತಿ ಹೆಚ್ಚು ಹೆಣ್ಣು ಮಕ್ಕಳ ಅತ್ಯಾಚಾರದ ಪ್ರಕರಣಗಳು (833) ವರದಿಯಾಗಿವೆ.
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದೆಹಲಿ ಮೊದಲು
ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿಯಲ್ಲಿ ಅತಿ ಹೆಚ್ಚು ಮಾನವ ಕಳ್ಳಸಾಗಣೆ ಪ್ರಕರಣಗಳು 2021ರಲ್ಲಿ ದಾಖಲಾಗಿದ್ದು, 2020 ರಲ್ಲಿ ಪ್ರಕರಣಗಳಿಗೆ ಹೋಲಿಸಿದ್ದಲ್ಲಿ ಶೇಕಡಾ 73.5ರಷ್ಟು ಏರಿಕೆಯಾಗಿದೆ ಎಂದು ಎನ್ಸಿಆರ್ಬಿ ವರದಿ ತಿಳಿಸಿದೆ. ವರದಿಯ ಪ್ರಕಾರ, ಮಾನವ ಕಳ್ಳ ಸಾಗಣೆಗೊಳಗಾದವರಲ್ಲಿ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದು ಅವರಲ್ಲಿ ಕೆಲವರು ಲೈಂಗಿಕ ಶೋಷಣೆ, ಮನೆಯ ಚಾಕರಿ ಮತ್ತು ಸಣ್ಣ ಅಪರಾಧಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ಅಶ್ಲೀಲ ಚಿತ್ರಗಳು, ಭಿಕ್ಷಾಟನೆ, ಅಂಗಾಂಗ ತೆಗೆದು ಮಾರಾಟ ಮಾಡಲು, ಮಾದಕ ವಸ್ತು ಕಳ್ಳಸಾಗಣೆಗೆ ಇವರನ್ನು ಬಳಸಿಕೊಂಡಿಲ್ಲ ಎಂದು ತಿಳಿಸಿದೆ. 2021ರಲ್ಲಿ ಮಾನವ ಕಳ್ಳಸಾಗಣೆಯ ಎಲ್ಲಾ 509 ಜನರನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ.
ಎನ್ಸಿಆರ್ಬಿ ಅಂಕಿಅಂಶದ ಪ್ರಕಾರ, 2021ರಲ್ಲಿ 509 ಜನರನ್ನು ಕಳ್ಳಸಾಗಣೆ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಪುರುಷರು ಮತ್ತು 143 ಮಹಿಳೆಯರು. ದೆಹಲಿಯಲ್ಲಿ ಮಾನವ ಕಳ್ಳಸಾಗಣೆಗೆ ಸಿಲುಕಿದ 437 ಮಂದಿಯಲ್ಲಿ 100 ಹುಡುಗಿಯರು ಸೇರಿದಂತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರಲ್ಲಿ 43 ಮಹಿಳೆಯರು ಸೇರಿದಂತೆ 72 ವಯಸ್ಕರು ಸೇರಿದ್ದಾರೆ.
2021 ರಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ 174 ವ್ಯಕ್ತಿಗಳನ್ನು ಬಂಧಿಸಲಾಗಿದೆ. 13 ಆರೋಪ ಪಟ್ಟಿ ಸಿದ್ದಪಡಿಸಲಾಗಿದ್ದು, ನ್ಯಾಯಾಲಯ ಯಾರನ್ನೂ ಅಪರಾಧಿ ಅಥವಾ ನಿರಪರಾಧಿ ಎಂದು ಹೇಳಿಲ್ಲ.
ಕೋವಿಡ್ ಸಾಂಕ್ರಾಮಿಕತೆ ನಿಮಿತ್ತ 2020ರಲ್ಲಿ ಬಹುತೇಕ ದಿನಗಳು ಲಾಕ್ಡೌನ್ ಘೋಷಣೆಯಾಗಿತ್ತು. ಲಾಕ್ಡೌನ್ ನಂತರ ಜನರ ಸಂಚಾರವು ಪುನರಾರಂಭಗೊಂಡಾಗ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಳ ಕಂಡಿವೆ. ವಲಸೆ ಹೋಗುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ದೆಹಲಿ ಉದ್ಯೋಗಾವಕಾಶಗಳ ಕೇಂದ್ರವಾಗಿರುವುದರಿಂದ, ಯುವಕರು ಮತ್ತು ನಿರುದ್ಯೋಗಿಗಳು ಇಲ್ಲಿಗೆ ಆಗಮಿಸುವುದು ಸಹ ಅಧಿಕ. ಅಲ್ಲದೆ, ಲಾಭದಾಯಕ ಉದ್ಯೋಗ ಮತ್ತು ಉತ್ತಮ ಸಂಬಳದ ಆಮಿಷ ಒಡ್ಡುತ್ತಾರೆ. ಈ ಆಮಿಷಕ್ಕೊಳಗಾದವರು ಕಳ್ಳಸಾಗಣೆಯ ಬಲಿಪಶುಗಳಾಗುತ್ತಿದ್ದಾರೆ. ಕೆಲವೊಂದು ಬಾರಿ ಅವರಿಗೆ ಸಂಬಳ ನೀಡುವುದಿಲ್ಲ ಅಥವಾ ಭರವಸೆ ನೀಡಿದ್ದಕ್ಕಿಂತ ಕಡಿಮೆ ಪಾವತಿಸಲಾಗುತ್ತದೆ ಎಂಬ ವರದಿಯೂ ಇದೆ.