ನಾವು ಮತ್ತೆ ಗೋಕಾಕ್ ಚಳುವಳಿಯ ಸಂದರ್ಭಕ್ಕೆ ಮರುಳುತ್ತಿದ್ದೇವೆಯೆ?

ಪ್ರೊ. ರಾಜೇಂದ್ರ ಚೆನ್ನಿ

ವಿಚಿತ್ರವಾದ ರೀತಿಯಲ್ಲಿ ಮನುಸ್ಮೃತಿಯ ಸಂಸ್ಕೃತದ ಕಲಿಕೆಯ ಮೇಲೆ ಹೇರಿದ ನಿಬಂಧನೆಗಳು 21ನೇ ಶತಮಾನದಲ್ಲಿ ಮುಂದುವರೆಯುತ್ತಿವೆ. ಹೇಗಿದ್ದರೂ ಕನ್ನಡವು ಶೂದ್ರ, ದಲಿತರು ಮತ್ತು ಮಹಿಳೆಯರ ಭಾಷೆಯಲ್ಲವೆ? ಸಂಸ್ಕೃತ ಮತ್ತು ಆರ್ಯಕುಲ ಸಂಭೂತ ಇಂಗ್ಲಿಷ್‌ಗಳು ನವ ಬ್ರಾಹ್ಮಣ್ಯದ ಭಾಷೆಗಳಾಗಿ ಬೆಳಗುತ್ತಿವೆ. ನಾವೆಲ್ಲಿದ್ದೇವೆ ಅಲ್ಲೇ ಇದ್ದೇವೆ. ಗೋಕಾಕ ಚಳುವಳಿಯ ಸಂದರ್ಭಕ್ಕೆ ಮರಳಿದ್ದೇವೆ….. ಕಡ್ಡಾಯ ಕನ್ನಡದ ವಿರುದ್ಧ ಕೋರ್ಟಿಗೆ ಹೋಗುವ ದುಸ್ಥಿತಿಯಲ್ಲಿ ಪ್ರಭುತ್ವ ಪೋಷಿತ ಸಂಸ್ಕೃತ ಭಾಷೆ ಇದೆಯೆ? ಅದು ನ್ಯಾಯಾಲಯದಲ್ಲಿ ಕನ್ನಡದ ಪ್ರತಿವಾದಿಯಾಗಿ ನಿಲ್ಲಬೇಕೆ? ಅಥವಾ ಇದರ ಹಿಂದೆ ಕೆಲಸ ಮಾಡುತ್ತಿರುವ ಸಿದ್ಧಾಂತವು ಸಂಸ್ಕೃತಕ್ಕಾಗಿ ಎಲ್ಲಾ ನಾಡಭಾಷೆಗಳನ್ನು ತುಳಿಯುವ ಹುನ್ನಾರವನ್ನು ಹೊಂದಿದೆಯೆ?

ನಾವು ಮತ್ತೆ ಗೋಕಾಕ್ ಚಳುವಳಿಯ ಸಂದರ್ಭಕ್ಕೆ ಮರುಳುತ್ತಿದ್ದೇವೆಯೆ? ಈ ಪ್ರಶ್ನೆ ಉದ್ಭವಿಸಲು ಕಾರಣವೆಂದರೆ ನೂತನ ಶಿಕ್ಷಣ ಪದ್ಧತಿ ಎನ್.ಇ.ಪಿ.ಯ ಅನುಷ್ಠಾನದಲ್ಲಿ ಪದವಿ ತರಗತಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಾದ-ವಿವಾದಗಳನ್ನು ಸ್ವಲ್ಪ ನೆನಪು ಮಾಡಿಕೊಳ್ಳೋಣ. ಗೋಕಾಕ್ ಚಳುವಳಿಗೆ ಮೂಲ ಕಾರಣವೆಂದರೆ ಶಾಲೆಗಳಲ್ಲಿ ವಿಶೇಷವಾಗಿ ಹೈಸ್ಕೂಲುಗಳಲ್ಲಿ ವಿದ್ಯಾರ್ಥಿಯು ಯಾವುದೇ ಎರಡು ಭಾಷೆಗಳನ್ನು ಕಲಿಯಬಹುದು ಎನ್ನುವ ನಿಯಮವನ್ನು ಬಳಸಿಕೊಂಡು ಅನೇಕ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಹಾಗೂ ಸಂಸ್ಕೃತವನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿತ್ತು. ಹೀಗಾಗಿ ಕನ್ನಡವನ್ನು ಓದದೇ ಕನ್ನಡದ ಮಕ್ಕಳು ಶಾಲೆ ವಿದ್ಯಾಭ್ಯಾಸ ಮುಗಿಸುತ್ತಿದ್ದರು. ಇದು ಯಾವುದೇ ದೃಷ್ಟಿಯಿಂದಲೂ ಅಸಂಗತವಾದ ವಿದ್ಯಮಾನವಾಗಿತ್ತು. ಈ ಸಂದರ್ಭದಲ್ಲಿ ಕೂಡ ಕನ್ನಡದ ಪ್ರತಿಸ್ಪರ್ಧಿ ಸಂಸ್ಕೃತವಾಗಿತ್ತು. ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯುವ ಸವಲತ್ತು, ತುಂಬಾ ಸರಳವಾದ ಪ್ರಾಥಮಿಕ ಬಗೆಯ ಪಠ್ಯಗಳು, ಗರಿಷ್ಠ ಅಂಕಗಳ ಸಂಪಾದನೆ ಇವುಗಳು ಸಂಸ್ಕೃತ ಓದುವುದರ ಲಾಭಗಳಾಗಿದ್ದವು. ತಮ್ಮ ಮಕ್ಕಳು ಕನ್ನಡ ಓದುತ್ತಿಲ್ಲವೆಂದು ಪಾಲಕರು ಯಾರೂ ದೂರಲಿಲ್ಲ. ಏಕೆಂದರೆ ಆಗ ರ‍್ಯಾಂಕ್ ಕೊಡುವಾಗ ಭಾಷೆಯ ಪೇಪರ್‌ಗಳ ಅಂಕವನ್ನು ಪರಿಗಣಿಸಲಾಗುತ್ತಿತ್ತು. ಕರ್ನಾಟಕ ಸರಕಾರವು (ದೇವರಾಜ ಅರಸರು) ಈ ಅಸಂಗತ ವಿದ್ಯಮಾನವನ್ನು ಸರಿಪಡಿಸಲು ಕನ್ನಡವನ್ನು ಕಡ್ಡಾಯ ಮಾಡಿದಾಗ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಈ ಹಿನ್ನೆಲೆಯಲ್ಲಿ ಗೋಕಾಕ್ ಚಳುವಳಿಯು ಹುಟ್ಟಿಕೊಂಡಿತು. ವಿಶೇಷವಾಗಿ ರಾಜ್‌ಕುಮಾರ್ ಅವರ ಭಾಗವಹಿಸುವಿಕೆಯಿಂದಾಗಿ ಅದು ಯಶಸ್ವಿಯಾಯಿತು. ಆದರೆ ಕೊನೆಗೂ ನ್ಯಾಯಾಲಯಗಳು ಕನ್ನಡವನ್ನು ಕಡ್ಡಾಯ ಮಾಡುವುದರ ವಿರುದ್ಧವೇ ತೀರ್ಪು ನೀಡಿದವು. ಮಾಧ್ಯಮ ಮತ್ತು ಭಾಷೆಯ ಆಯ್ಕೆಯನ್ನು ಪಾಲಕರಿಗೆ ನೀಡಲಾಯಿತು! ಹೇಗಿದ್ದರೂ ಅವರು ಸಂವಿಧಾನವು ನೀಡಿದ ಹಲವು ಮೂಲಭೂತ ಹಕ್ಕುಗಳಲ್ಲಿ, ಸ್ವಾತಂತ್ರ್ಯಗಳಲ್ಲಿ ಇದೊಂದನ್ನೇ ಬಳಸಿಕೊಂಡಿದ್ದಾರಲ್ಲವೆ?

ಈಗ ಅದೇ ದೃಶ್ಯವು ಮತ್ತೆ ಅಭಿನಯವಾಗುತ್ತಿದೆ. ಸಂಸ್ಕೃತ ಬೋಧಕರ ಸಂಘಗಳು ಮತ್ತು ಸಂಸ್ಕೃತಪರ ಸಂಘಗಳು ಎನ್.ಇ.ಪಿ.ಯಲ್ಲಿ ಕನ್ನಡ ಕಡ್ಡಾಯವನ್ನು ಪ್ರಶ್ನಿಸಿವೆ. ಕನ್ನಡವು ಮಾತೃಭಾಷೆಯಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ ಎಂದು ಅವರ ವಾದ. ಅಂದ ಹಾಗೆ ಸಂಸ್ಕೃತವು ಯಾರ ಮಾತೃಭಾಷೆಯೂ ಅಲ್ಲವೆಂದು ಭಾಷಾತಜ್ಞರು ಹೇಳುತ್ತಾರೆ. ಅದು ಮಹಾನ್ ಭಾಷೆ ಆದರೆ ಯಾರ ಮಾತೃಭಾಷೆಯೂ ಅಲ್ಲ. ಅಲ್ಲದೆ ಒಂದು ವೇಳೆ ನ್ಯಾಯಾಲಯ ಸಂಸ್ಕೃತ ಪರವಾಗಿ ತೀರ್ಪು ನೀಡಿದರೆ ಅದನ್ನು ಓದುವವರಲ್ಲಿ ಬಹುಸಂಖ್ಯಾತರು ಕನ್ನಡ ಮಕ್ಕಳೇ ಆಗಿರುತ್ತಾರೆ. ಮತ್ತೆ ಕನ್ನಡ ಓದದ ಕನ್ನಡ ಮಕ್ಕಳು ನಮ್ಮ ಕಾಲೇಜುಗಳಿಂದ ಹೊರಬರುತ್ತಾರೆ. ಎಲ್ಲರೂ ಅಲ್ಲ, ಸರಕಾರಿ ಕಾಲೇಜುಗಳ, ಬಡ ಕುಟುಂಬಗಳ ಮಕ್ಕಳು ಇಂಗ್ಲಿಷ್ (ಹೊಟ್ಟೆಪಾಡಿಗಾಗಿ) ಕನ್ನಡ ಭಾಷೆಗಳನ್ನು ಓದುತ್ತಾರೆ. ವಿಚಿತ್ರವಾದ ರೀತಿಯಲ್ಲಿ ಮನುಸ್ಮೃತಿಯ ಸಂಸ್ಕೃತದ ಕಲಿಕೆಯ ಮೇಲೆ ಹೇರಿದ ನಿಬಂಧನೆಗಳು 21ನೇ ಶತಮಾನದಲ್ಲಿ ಮುಂದುವರೆಯುತ್ತವೆ. ಹೇಗಿದ್ದರೂ ಕನ್ನಡವು ಶೂದ್ರ, ದಲಿತರು ಮತ್ತು ಮಹಿಳೆಯರ ಭಾಷೆಯಲ್ಲವೆ? ಸಂಸ್ಕೃತ ಮತ್ತು ಆರ್ಯಕುಲ ಸಂಭೂತ ಇಂಗ್ಲಿಷ್‌ಗಳು ನವ ಬ್ರಾಹ್ಮಣ್ಯದ ಭಾಷೆಗಳಾಗಿ ಬೆಳಗುತ್ತಿವೆ. ನಾವೆಲ್ಲಿದ್ದೇವೆ ಅಲ್ಲೇ ಇದ್ದೇವೆ. ಗೋಕಾಕ ಚಳುವಳಿಯ ಸಂದರ್ಭಕ್ಕೆ ಮರಳಿದ್ದೇವೆ. ಕನ್ನಡ ಕಡ್ಡಾಯ ಮಾಡಿದರೆ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ಕನ್ನಡವನ್ನು ಓದುತ್ತಾರೆ; ಹೀಗಾಗಿ ಸಂಸ್ಕೃತ, ಹಿಂದಿ, ಉರ್ದು ಇವುಗಳನ್ನು ಓದುವವರು ಯಾರು? ಎನ್ನುವ ಚರ್ಚೆ ನಡೆದಿದೆ. ಆ ಭಾಷೆಗಳನ್ನು ಬೋಧನೆ ಮಾಡುವ ಶಿಕ್ಷಕರ ಉದ್ಯೋಗಗಳ ಮೇಲೆ ಪರಿಣಾಮವಾಗುವುದಿಲ್ಲವೆ ಎನ್ನುವ ವಾದ ಮಂಡಿಸಲಾಗುತ್ತಿದೆ. ವಾಸ್ತವವೆಂದರೆ ಅಪಾರ ಸಂಖ್ಯೆಯ ಸಂಸ್ಕೃತ ಶಾಲೆಗಳಿಗೆ ಅನುಮತಿ ನೀಡಿ ಆರಂಭಿಸಲಾಗಿದ್ದು ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆದಿಲ್ಲ. ಪ್ರಸಕ್ತ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಮಾತೃಸಂಸ್ಥೆಯು ಸಂಸ್ಕೃತವನ್ನು ಜಗತ್ತಿನ ಅತಿ ಶ್ರೇಷ್ಠ ಭಾಷೆಯೆಂದು ಪರಿಗಣಿಸುತ್ತದೆ. ಒಟ್ಟಾರೆ ಸಂಸ್ಕೃತ ಭಾಷೆಗೆ ಇಂದಿನ ಪ್ರಭುತ್ವದಿಂದ ದೊರೆಯುತ್ತಿರುವ ಆರ್ಥಿಕ ಬೆಂಬಲದ ವಿವರಗಳನ್ನು ಪರೀಕ್ಷಿಸಬೇಕಿದೆ. ಕಡ್ಡಾಯ ಕನ್ನಡದ ವಿರುದ್ಧ ಕೋರ್ಟಿಗೆ ಹೋಗುವ ದುಸ್ಥಿತಿಯಲ್ಲಿ ಪ್ರಭುತ್ವ ಪೋಷಿತ ಸಂಸ್ಕೃತ ಭಾಷೆ ಇದೆಯೆ? ಅದು ನ್ಯಾಯಾಲಯದಲ್ಲಿ ಕನ್ನಡದ ಪ್ರತಿವಾದಿಯಾಗಿ ನಿಲ್ಲಬೇಕೆ? ಅಥವಾ ಇದರ ಹಿಂದೆ ಕೆಲಸ ಮಾಡುತ್ತಿರುವ ಸಿದ್ಧಾಂತವು ಸಂಸ್ಕೃತಕ್ಕಾಗಿ ಎಲ್ಲಾ ನಾಡಭಾಷೆಗಳನ್ನು ತುಳಿಯುವ ಹುನ್ನಾರವನ್ನು ಹೊಂದಿದೆಯೆ?

ಕೃಪೆ: ಸತೀಶ್ ಆಚಾರ್ಯ

ಇರಲಿ. ಈಗ ಬಹುಮುಖ್ಯ ಪ್ರಶ್ನೆಯೆಂದರೆ ನ್ಯಾಯಾಲಯದ ಒಲವು. ನಾನು ಅನೇಕ ವರ್ಷಗಳಿಂದ ನ್ಯಾಯಾಲಯದ ತೀರ್ಪುಗಳಿಗಿಂತ ಅಲ್ಲಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರ ಟೀಕೆ ಟಿಪ್ಪಣಿಗಳನ್ನು ಗಮನಿಸುತ್ತಾ ಬಂದಿದ್ದೇನೆ. ಒಂದಿಬ್ಬರನ್ನು ಬಿಟ್ಟರೆ ಇಲ್ಲಿಯವರೆಗೆ ಅವರು ಇಂಗ್ಲಿಷ್ ಪರವಾಗಿದ್ದಾರೆ. ಕನ್ನಡ ಅವರಿಗೆ ಆಧುನಿಕತೆ ಹಾಗೂ ಅಭಿವೃದ್ಧಿಯ ಭಾಷೆ ಆಗಿಲ್ಲ. ಅಲ್ಲದೆ ಅವರು ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಬಿಡಿಯಾಗಿ, ಸಂಬಂಧವೇ ಇಲ್ಲದಂತೆ ನೋಡುತ್ತಾರೆ. ಹೀಗಾಗಿ ಅವರಿಗೆ ಆಯ್ಕೆಯ ಸ್ವಾತಂತ್ರ್ಯವು ಪವಿತ್ರವಾಗಿ ಕಾಣುತ್ತದೆಯೆ ಹೊರತು, ಭಾಷೆಯ ಆಯ್ಕೆಯ ಹಿಂದಿರುವ ಚರಿತ್ರೆ, ಸಾಂಸ್ಕೃತಿಕ ರಾಜಕೀಯ ಹಾಗೂ ಆರ್ಥಿಕ ಒತ್ತಡಗಳನ್ನು ಗಮನಿಸುವುದೇ ಇಲ್ಲ. ಹೇಗಿದ್ದರೂ ಈಗಾಗಲೇ ಈ ಹಿಂದಿನ ತೀರ್ಪುಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಖಚಿತವಾಗಿ ತೀರ್ಮಾನಿಸಿದಂತೆ ಅದು ಮಾತೃಭಾಷೆ ಕಡ್ಡಾಯ ಮಾಡುವುದರ ಪರವಾಗಿಲ್ಲ. ಎನ್.ಇ.ಪಿ. ವಿದ್ಯಮಾನದ ತಾರ್ಕಿಕ ಅಂತ್ಯವು ಹಾಗೇ ಆಗುತ್ತದೆ. ಬಹಳ ವರ್ಷಗಳಿಂದ ಎಲ್ಲಾ ತಜ್ಞರು ಹೇಳಿದಂತೆ ಸಂಸತ್ತಿನಲ್ಲಿ ಒಮ್ಮತದಿಂದ ಭಾಷಾ ನೀತಿಯಲ್ಲಿ ಮಾತೃಭಾಷೆಯ ಪರವಾಗಿ ಶಾಸನಗಳನ್ನು ಮಾಡಬೇಕಿದೆ; ತಿದ್ದಬೇಕಿದೆ. ಅಲ್ಲಿಯವರೆಗೆ ಮಾತೃಭಾಷೆಯ ಬಗ್ಗೆ ವೀರಾವೇಶದಿಂದ ಮಾತನಾಡಿ ಮತ್ತೆ ಸುಮ್ಮನಾಗುವ ನಾಟಕ ನಡೆಯುತ್ತಲೇ ಇರುತ್ತದೆ. ಪ್ರಾಮಾಣಿಕವಾದ ಭಾಷಾ ಹೋರಾಟಗಳು ಬುಡಕಟ್ಟು ಭಾಷೆಗಳ ಪರವಾಗಿ, ನಶಿಸಿ ಹೋಗುತ್ತಿರುವ ಮಾತೃಭಾಷೆಗಳ ಪರವಾಗಿ ಇರಬೇಕು. ಆದರೆ ಅವುಗಳ ಬಗ್ಗೆ ಮಾತನಾಡುವವರು ಯಾರು? ಕ್ರಮೇಣವಾಗಿ ಆ ಭಾಷೆಯ ಯುವ ಜನಾಂಗಗಳು ಆಡಳಿತ ಭಾಷೆ, ಇಂಗ್ಲಿಷ್ ಆ ಕಡೆಗೆ ವಾಲುತ್ತಿದ್ದಾರೆ… ಆ ಭಾಷೆಗಳು ವಾರಸುದಾರರಿಲ್ಲದೆ ಅನಾಥವಾಗುತ್ತವೆ.

Donate Janashakthi Media

Leave a Reply

Your email address will not be published. Required fields are marked *