ನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ

ವಿನೋದ ಶ್ರೀರಾಮಪುರ

ನವ-ಉದಾರವಾದವು ತನ್ನ ಉಚ್ಛ್ರಾಯ ಕಾಲದಲ್ಲೂ ಸಹ ಆರ್ಥಿಕ ಅಸಮಾನತೆಯನ್ನು ಅಗಾಧವಾಗಿ ಹೆಚ್ಚಿಸುತ್ತದೆ. ಪ್ರಭುತ್ವದ ಕಾರ್ಯನಿರ್ವಹಣೆಯಲ್ಲಿದ್ದ ಪ್ರಜಾಸತ್ತಾತ್ಮಕ ತಿರುಳನ್ನು ನಾಶಪಡಿಸುತ್ತದೆ. ಪ್ರಭುತ್ವದ ಸ್ವಾಯತ್ತತೆಯನ್ನು ಬುಡಮೇಲು ಮಾಡುತ್ತದೆ. ಕಡು ಬಡತನವನ್ನು ಹೆಚ್ಚಿಸುತ್ತದೆ ಮತ್ತು ಅದು ಅರ್ಥವ್ಯವಸ್ಥೆಯನ್ನು ನಿಶ್ಚಲತೆಯತ್ತ ಕೊಂಡೊಯ್ಯುವಲ್ಲಿ ಮತ್ತು ಬೃಹತ್‌ ನಿರುದ್ಯೋಗ ಸೃಷ್ಟಿಸುವಲ್ಲಿ ಪರ್ಯವಸಾನಗೊಳ್ಳುತ್ತದೆ – ಇದನ್ನು ಹೇಳಿರುವುದು ಪ್ರಖ್ಯಾತ ಆರ್ಥಿಕ ತಜ್ಞ ಪ್ರೊ. ಪ್ರಭಾತ್‌ ಪಟ್ನಾಯಕ್‌ ಅವರು….

ನವ ಉದಾರೀಕರಣದಿಂದ ಒಂದೆಡೆ ಶೋಷಕ ಶಕ್ತಿಗಳ ಶೋಷಣೆಯ ಪ್ರಮಾಣ ಹೆಚ್ಚಳವಾಗುತ್ತಿದ್ದರೆ. ದುಡಿಯುವ ವರ್ಗ ಉದ್ಯೋಗ ಭದ್ರತೆ ಕಳೆದುಕೊಳ್ಳುತ್ತಿದ್ದಾರೆ. ಅಸಮಾನತೆ ಹೆಚ್ಚಳಗೊಳ್ಳುತ್ತಿದೆ. ನಿರುದ್ಯೋಗಿಗಳ ಪ್ರಮಾಣ ಅಧಿಕಗೊಳ್ಳುತ್ತಿದೆ. ಇದರ ನಡುವೆ ಬಂಡವಾಳಶಾಹಿ ಅಡಿಯಾಳದ ಆಳುವ ಸರ್ಕಾರ ಕ್ಷಿಪ್ರಗತಿಯಲ್ಲಿ ಜಾರಿಗೊಳಿಸುತ್ತಿರುವ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಗಳಿಂದಾಗಿ ಶೋಷಕರು ಮತ್ತು ಶೋಷಿತರ ಎರಡು ವರ್ಗದ ಸೃಷ್ಠಿಯಿಂದಾಗಿ ಶೋಷಣೆಗೊಳಪಡುವವರ ಸಂಖ್ಯೆಯೂ ಹೆಚ್ಚುತ್ತದೆ.

ಇದನ್ನು ಓದಿ: 75 ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ – ಮತ್ತೆ ವಿದೇಶಿ ಹಣಕಾಸು ಆಧಿಪತ್ಯದೊಳಕ್ಕೆ

ಒಂದೆಡೆ ಅಪಾರ ಪ್ರಮಾಣದಲ್ಲಿ ಖಾಸಗೀಕರಣದ ಪ್ರಕ್ರಿಯೆಗಳು, ಉದ್ಯೋಗ ಸೃಷ್ಟಿಗೆ ಮನಸ್ಸು ಮಾಡದ ಆಳುವ ಸರ್ಕಾರಗಳು, ಖಾಯಂ ಉದ್ಯೋಗಿಗಳ ಕೊರತೆ, ಹೆಚ್ಚುತ್ತಲೇ ಇರುವ ನಿರುದ್ಯೋಗದ ಪ್ರಮಾಣ, ಗುತ್ತಿಗೆ ಆಧಾರಿತ ಕೆಲಸದ ನಿರ್ವಹಣೆಯಿಂದಾಗಿ ಆಡಳಿತ ಯಂತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಆಡಳಿತ ಯಂತ್ರದ ಹುದ್ದೆಗಳು ಅಪಾರ ಪ್ರಮಾಣದಲ್ಲಿ ಖಾಲಿ ಇದ್ದರೂ ಅವುಗಳ ಭರ್ತಿಗೆ ಕ್ರಮವಹಿಸದಿರುವುದು. ಇದರಿಂದ ಉದ್ಯೋಗದ ಆಕಾಂಕ್ಷಿಗಳ ಸಂಖ್ಯೆ ಲಕ್ಷ ಲಕ್ಷ ಪ್ರಮಾಣದಲ್ಲಿ ಹೆಚ್ಚಳ.

ಸರ್ಕಾರಿ ಖಾಲಿ ಹುದ್ದೆಗಳ ಪ್ರಮಾಣ ಶೇ. 34

ಹೀಗಿರುವಾಗ, ಕರ್ನಾಟಕದಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ ಒಟ್ಟು ಸರ್ಕಾರಿ ಹುದ್ದೆಗಳ ಸಂಖ್ಯೆ : 7,69,981, ಇದರಲ್ಲಿ ಭರ್ತಿಯಾದ ಹುದ್ದೆಗಳ ಸಂಖ್ಯೆ: 5,11,272 ಆಗಿದ್ದು, 2,58,709 ಹುದ್ದೆಗಳು ಖಾಲಿ ಇವೆ. ಇದು ಸರ್ಕಾರ ಒಟ್ಟು ಹುದ್ದೆಗಳಲ್ಲಿ ಶೇ. 34 ರಷ್ಟು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2022ರ ಡಿಸೆಂಬರ್‌ 19ರಿಂದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯರ ಪ್ರಶ್ನೆಗೆ ರಾಜ್ಯದ ಮುಖ್ಯಮಂತ್ರಿ ಉತ್ತರಿಸಿ ಇಲಾಖಾವಾರು ಖಾಲಿ ಹುದ್ದೆಗಳ ವಿವರಣೆ ನೀಡಿದರು.

ಸರ್ಕಾರಿ ಹುದ್ದೆಗಳ ಪೈಕಿ ಮೂರನೇ ಒಂದು ಭಾಗ ಅಂದರೆ, ಶೇ. 34 ರಷ್ಟು ಹುದ್ದೆಗಳು ಖಾಲಿಯಿದ್ದು, ಕರ್ನಾಟಕದಲ್ಲಿ ನಿರುದ್ಯೋಗದ ಪ್ರಮಾಣ ಶೇ. 3.8ರಷ್ಟು ಇದೆ. ಕಳೆದ ಐದು ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ನೇಮಕಗೊಂಡ ಉದ್ಯೋಗಿಗಳ ಸಂಖ್ಯೆ ಕೇವಲ 20,000 ಮಾತ್ರ. ಎ ಮತ್ತು ಬಿ ವೃಂದ ಸರ್ಕಾರಿ ನೌಕರರು ಹೆಚ್ಚುವರಿ ಹುದ್ದೆಗಳನ್ನು ನಿಭಾಯಿಸುತ್ತಿದ್ದರೆ, ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಗುತ್ತಿಗೆ ನೌಕರರೇ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ನಿರುದ್ಯೋಗ: ಸಂಖ್ಯೆ 5.1 ಕೋಟಿ, ದರ 8.9%

ಸರ್ಕಾರಿ ಹುದ್ದೆಗಳ ಖಾಲಿಯಿಂದಾಗಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಿನ್ನಡೆ ಆಗುವುದಂತೂ ಸತ್ಯ. ಹಾಗಿದ್ದರೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಲಿಯಿರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರ ಹುದ್ದೆಗಳನ್ನು ನೀಡಿ ಕಾರ್ಯನಿರ್ವಹಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ವಿಳಂಬವಾಗುತ್ತಿಲ್ಲ ಎಂದು ಸರ್ಕಾರದ ವಾದವಾಗಿದೆ.

ದಿನಾಂಕ : 22.12.2022ರಂದು, ವಿಧಾನ ಪರಿಷತ್‌ ಸದಸ್ಯ ಸಿ.ಎನ್.‌ ಮಂಜೇಗೌಡ ಅವರು, ರಾಜ್ಯದಲ್ಲಿ ಇರುವ ಇಲಾಖೆಗಳ ವಿವರ ಹಾಗೂ ಒಟ್ಟು ಹುದ್ದೆಗಳ ಸಂಖ್ಯೆ ಹಾಗೂ ಖಾಲಿ ಹುದ್ದೆಗಳ ಸಂಖ್ಯೆ, ಇದರಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಫರಿಹಾರ ಏನು ಮತ್ತು ಖಾಲಿ ಹುದ್ದೆಗಳ ಭರ್ತಿಗೆ ಕೈಗೊಂಡ ಕ್ರಮದ ಕುರಿತು ಪ್ರಶ್ನೆಗಳನ್ನು ಕೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿ, ರಾಜ್ಯ ಸರ್ಕಾರದಲ್ಲಿ ಒಟ್ಟು 43 ವಿವಿಧ ಇಲಾಖೆಗಳಿವೆ. ʻಎʼ ವೃಂದದಿಂದ ʻಡಿʼ ವೃಂದದವರೆಗಿನ ಒಟ್ಟು ಮಂಜೂರಾದ / ಖಾಲಿಯಿರುವ ಹುದ್ದೆಗಳ ಇಲಾಖಾವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಮಂಜೂರಾದ ಹುದ್ದೆಗಳ ಪೈಕಿ ಶೇ. 34ರಷ್ಟು ಹುದ್ದೆಗಳು ಖಾಲಿ ಇವೆ. ಅದಾಗ್ಯೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಲಿಯಿರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ವಿಳಂಬವಾಗುತ್ತಿರುವುದಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬವಾಗಿದ್ದು, ಅಲ್ಲಿಯವರೆಗೂ ಆಯಕಟ್ಟಿನ ಜಾಗಕ್ಕೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸಿ ವೃಂದದ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ವಾಹನ ಚಾಲಕರು ಹಾಗೂ ಗ್ರೂಪ್‌-ಡಿ ವೃಂದದಲ್ಲಿನ ಖಾಲಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ಭರ್ತಿ ಮಾಡಲಾಗಿದೆ. ಈ ಪೈಕಿ ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತುಂಬಲಾಗಿದೆ. ಜತೆಗೆ ಎ ಹಾಗೂ ಬಿ ವೃಂದದ ಹುದ್ದೆಗಳನ್ನು ಹೆಚ್ಚುವರಿ ಪ್ರಭಾರವಹಿಸಲಾಗಿದೆ ಎಂದರು.

ಅನುಬಂಧ

26 ಇಲಾಖೆ ವ್ಯಾಪ್ತಿಯಲ್ಲಿ ಆರ್ಧಕ್ಕೂ ಹೆಚ್ಚು ಹುದ್ದೆ ಖಾಲಿ

ಮೇಲಿನ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 2.58 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಒಟ್ಟು 43 ಇಲಾಖೆಗಳಲ್ಲಿ 26 ಇಲಾಖೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ ಕೃಷಿ ವಿಭಾಗ, ಕೌಶಲ್ಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಉನ್ನತ ಶಿಕ್ಷಣ, ಅಲ್ಪಸಂಖ್ಯಾತ ಮತ್ತು ದಲಿತ ವಿಭಾಗದ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಇರುವುದು ಗಮನಾರ್ಹವಾದದ್ದು. ಅಲ್ಲದೆ, ಇನ್ನೂ ಕೆಲವು ಇಲಾಖೆಗಳಲ್ಲಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿನ ಹುದ್ದೆಗಳು ಭರ್ತಿ ಇದ್ದರೂ ಖಾಲಿ ಹುದ್ದೆಗಳ ಪ್ರಮಾಣಕ್ಕೆ ಹಾಗೂ ಇಲಾಖೆಯ ಕಾರ್ಯನಿರ್ವಹಣೆಗೆ ಹೋಲಿಸಿದ್ದಲ್ಲಿ ಹೆಚ್ಚಿನ ವ್ಯತ್ಯಾಸವೇನು ಇಲ್ಲ.

ಇಲಾಖೆ ಮಟ್ಟದಲ್ಲಿ ಅತಿ ಹೆಚ್ಚಿನ ಸರ್ಕಾರಿ ಹುದ್ದೆಗಳು ಇರುವುದು ಅಷ್ಟೇ ಪ್ರಮಾಣದಲ್ಲಿ ಖಾಲಿ ಇರುವುದು ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಮಾತ್ರ. ಈ ಕ್ಷೇತ್ರದಲ್ಲಿ ಒಟ್ಟು 2,81,862 ಹುದ್ದೆಗಳು ಇದ್ದು, 2,15,803 ಹುದ್ದೆಗಳು ಭರ್ತಿಯಾಗಿದ್ದು, 66,059 ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರ ತಿಳಿಸಿದೆ. ಅದರಲ್ಲೂ ಶಿಕ್ಷಕರ ಹುದ್ದೆಗಳೆ ದೊಡ್ಡ ಪ್ರಮಾಣದಲ್ಲಿ ಇರುವುದೆಂದು ವರದಿಯಾಗಿದೆ. ಇದರೊಂದಿಗೆ ಮತ್ತೊಂದು ಹೆಚ್ಚು ಸರ್ಕಾರಿ ಹುದ್ದೆ ಇರುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಇದರಲ್ಲಿ 74,857 ಹುದ್ದೆಗಳು ಇದ್ದು, ಇದರಲ್ಲಿ 40,213 ಹುದ್ದೆಗಳು ಭರ್ತಿಯಾಗಿವೆ ಮತ್ತು 34,644 ಹುದ್ದೆಗಳು ಖಾಲಿ ಇವೆ. ಈ ಎರಡು ಇಲಾಖೆ ಖಾಲಿ ಹುದ್ದೆಗಳ ಸಂಖ್ಯೆ 1 ಲಕ್ಷ 703 ಸಂಖ್ಯೆಯಾಗಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಇಲಾಖೆ ಮಟ್ಟದಲ್ಲಿಯೂ ಖಾಲಿ ಹುದ್ದೆಗಳ ಪ್ರಮಾಣ ಅಧಿಕವಾಗಿಯೇ ಇವೆ. ಒಟ್ಟಾರೆ 43 ಇಲಾಖೆಗಳಲ್ಲಿ ಹುದ್ದೆಗಳಿಗೆ ನಾಲ್ಕು ವೃಂದ ಹುದ್ದೆಗಳನ್ನಾಗಿ ವಿಂಗಡಿಸಲಾಗಿದ್ದು, ಅತ್ಯಂತ ಅನಿವಾರ್ಯವಾದ ಸಿ ಹಾಗೂ ಡಿ ವೃಂದದ ಹುದ್ದೆಗಳು ಅತ್ಯಧಿಕವಾಗಿ ಖಾಲಿ ಇವೆ ಎಂದು ತಿಳಿದುಬಂದಿದೆ. ಇಂಥಹ ಸ್ಥಳಗಳಲ್ಲಿ ಖಾಯಂ ಉದ್ಯೋಗಿಗಳಿಗೆ ಬದಲಾಗಿ ಗುತ್ತಿಗೆ ಆಧಾರಿತ ನೌಕರರನ್ನು ನೇಮಿಸಿಕೊಳ್ಳಲಾಗಿದ್ದು, ಖಾಲಿ ಇರುವ ಪ್ರಮಾಣದಲ್ಲೇನೂ ಭರ್ತಿ ಮಾಡಿಕೊಂಡಿಲ್ಲ. ಹೊರಗುತ್ತಿಗೆ ನೌಕರರ ಮೇಲಿನ ಕೆಲಸ ಹೊರೆಯೂ ಅಧಿಕವಾಗಿಯೇ ಇದೆ.

ಇದನ್ನು ಓದಿ: ಬಂಡವಾಳಶಾಹಿ ಸರ್ಕಾರಗಳು ನಿರುದ್ಯೋಗಕ್ಕಿಂತ ಹಣದುಬ್ಬರದ ಬಗ್ಗೆಯೇ ಏಕೆ ತಲೆಕೆಡಿಸಿಕೊಳ್ಳುತ್ತವೆ?

ರಾಜ್ಯದಲ್ಲಿ ಹಲವು ವರ್ಷಗಳಿಂದ ಅಧಿಕ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಸರ್ಕಾರಿ ಹುದ್ದೆಯಿಂದ ನಿವೃತ್ತರಾದರೆ. ಖಾಲಿ ಹುದ್ದೆಗಳ ಸಂಖ್ಯೆಯ ಪ್ರಮಾಣವೂ ಹೆಚ್ಚಳವಾಗುತ್ತಲೇ ಇರುತ್ತವೆ. ವಿಶೇಷವಾಗಿ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳನ್ನು ಭರ್ತಿ ಮಾಡದ ಸರಕಾರ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ, ಸೂಕ್ಷ್ಮ ಕಡತಗಳ ನಿರ್ವಹಣೆಯಲ್ಲೂ ಹೊಣೆಗಾರಿಕೆ ನಿರೀಕ್ಷಿಸಲಾಗುತ್ತಿಲ್ಲ ಎಂಬ ದೂರುಗಳು ಇವೆ.

ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ

ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ಸುಮಾರ 2.58 ಲಕ್ಷ ಹುದ್ದೆಗಳಲ್ಲಿ ಒಂದು ಲಕ್ಷ ಹುದ್ದೆಗಳನ್ನು ಒಂದು ವರ್ಷದೊಳಗಾಗಿ ಭರ್ತಿ ಮಾಡಿಕೊಳ್ಳುವುದಾಗಿ ಇತ್ತೀಚಿಗೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಅಂದರೆ, ಇನ್ನೂ 1.58 ಲಕ್ಷ ಹುದ್ದೆಗಳು ಇನ್ನೂ ಖಾಲಿ ಇರಲಿವೆ ಮತ್ತು 1 ಲಕ್ಷ ಹುದ್ದೆ ಭರ್ತಿಗೆ ಒಂದ ವರ್ಷದವರೆಗೆ ಕಾಯಬೇಕು. (2023ರ ಏಪ್ರಿಲ್‌-ಮೇ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.) ಪ್ರಸಕ್ತ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಅವಧಿ ಇರುವುದು ಕೇವಲ ಮೂರು ತಿಂಗಳು ಮಾತ್ರ. ಸರ್ಕಾರಿ ಹುದ್ದೆಗಳ ಭರ್ತಿ ಭರವಸೆ ಮತ್ತೆ ಚುನಾವಣಾ ಆಸ್ತ್ರವಾಗಿಯೂ ಉಪಯೋಗವಾಗುವ ಸಾಧ್ಯತೆಗಳಿವೆ. ಹೀಗಿರುವಾಗ, ಯುವಜನತೆಯ ಸರ್ಕಾರಿ ಉದ್ಯೋಗಕಾಂಕ್ಷೆಗಳ ಕನಸು ಕನಸ್ಸಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚಿದೆ.

ಖಾಲಿ ಇರುವ ಸರ್ಕಾರಿ ಹುದ್ದೆಗಳಲ್ಲಿ ಸುಮಾರು 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ವರ್ಷದ ಒಂದು ವರ್ಷದ ಒಳಗಾಗಿ ಭರ್ತಿಯಾಗಲಿದೆ ಎಂದಿದ್ದಾರೆ. ಅವರು ಹೇಳಿದಂತೆ ಆದಲ್ಲಿ ಒಂದು ವರ್ಷದೊಳಗೆ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆಯನ್ನು ಶೀಘ್ರವಾಗಿಯೇ ಆರಂಭಿಸಬೇಕಿದೆ. ಖಾಲಿ ಹುದ್ದೆಗಳಿರುವ ಇಲಾಖಾ ಸಚಿವರು, ಕಾರ್ಯದರ್ಶಿಗಳು, ನೇಮಕ ಪ್ರಾಧಿಕಾರಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕರೆ ನೀಡಬೇಕಿದೆ. ಹಾಗೇ ಪ್ರಕ್ರಿಯೆಗಳನ್ನು ಜರೂರಾಗಿ ನಡೆಸುವಂತೆಯೂ ಎಚ್ಚರಿಕೆ ನೀಡಬೇಕಿದೆ. ಕಾರಣ ಕೆಪಿಎಸ್‌ಸಿ, ಕೆಇಎ ಯಂತಹ ರಾಜ್ಯದ ನೇಮಕ ಪ್ರಾಧಿಕಾರಗಳು ಒಂದೊಂದು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 2 ವರ್ಷಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಂಡಿರುವುದು ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ.

ಆದರೆ, ಪ್ರಶ್ನೆ ಇರುವುದು ಹುದ್ದೆಗಳ ಭರ್ತಿ ಪ್ರಕ್ರಿಯೆ ಒಂದು ವರ್ಷದೊಳಗೆ ಮುಗಿಯುವಂತೆ ನೇಮಕ ಪ್ರಾಧಿಕಾರಗಳು ಕೆಲಸ ಮಾಡುತ್ತವೆಯೆ ಎಂಬುದು ಉದ್ಯೋಗಕಾಂಕ್ಷಿ ಯುವಜನತೆಯ ಪ್ರಶ್ನೆ ಆಗಿದೆ.

1991ರಿಂದ ಹೆಚ್ಚಳವಾಗದ ಹುದ್ದೆಗಳ ಸಂಖ್ಯೆ

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕೆ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಜಾರಿಗೊಂಡ ನಂತರ ಆಡಳಿತಾತ್ಮಕವಾಗಿ ಕಾಲಕಾಲಕ್ಕೆ ಬದಲಾವಣೆಗಳಾಗುತ್ತಿರುತ್ತವೆ. ಆಡಳಿತ ಆಧಾರಸ್ತಂಭಗಳಾದ ಶಾಂಸಕಾಂಗ ಮತ್ತು ಕಾರ್ಯಾಂಗದಲ್ಲಿಯೂ ಆಡಳಿತದ ಚುಕ್ಕಾಣಿ ಹಿಡಿದ ಪಕ್ಷಗಳು ಆಡಳಿತ ಯಂತ್ರದಲ್ಲಿ ಮಾರ್ಪಾಟುಗಳನ್ನು ಮಾಡುವ ಮೂಲಕ ಅಧಿಕಾರ ನಡೆಸಲಿದ್ದಾರೆ.

ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಾಂಗದಲ್ಲಿಯೂ ಹುದ್ದೆಗಳ ಮಂಜೂರಾತಿ ಆಗಲಿದ್ದು, ಜನಸಂಖ್ಯೆ ಅಥವಾ ಇಲಾಖೆ ಮಟ್ಟದಲ್ಲಿ ಹುದ್ದೆಗಳ ಸಂಖ್ಯೆಯೂ ಹೆಚ್ಚಳಗೊಳ್ಳಲಿದೆ. ಆದರೆ ಕಳೆದ 25 ವರ್ಷಗಳಿಂದ ಹುದ್ದೆಗಳ ಹೆಚ್ಚಳದ ಅಂದುಕೊಂಡಷ್ಟು ಏನೂ ಹೆಚ್ಚಳವಾಗಿಲ್ಲ.

ಇದನ್ನು ಓದಿ : ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತನ್ನಿ: ಮುನೀರ್ ಕಾಟಿಪಳ್ಳ

2022ರ ಜೂನ್‌ ತಿಂಗಳ ಅಂಕಿಅಂಶದ ಪ್ರಕಾರ 1991ರ ಜನಗಣತಿ ಆಧರಿಸಿ ಒಟ್ಟು 7,63,063 ಹುದ್ದೆಗಳ ಮಂಜೂರಾತಿ ಆಗಿತ್ತು. ಪ್ರಸ್ತುತ ಜನಸಂಖ್ಯೆ ಹಾಗೂ ಇಲಾಖೆಗಳ ಸಂಖ್ಯೆ ಹೆಚ್ಚಾಗಿದ್ದರೂ ಸರ್ಕಾರಿ ಹುದ್ದೆಗಳ ಸಂಖ್ಯೆ ಹೆಚ್ಚಿಲ್ಲ ಮತ್ತು ಖಾಲಿ ಹುದ್ದೆಗಳ ಭರ್ತಿಯೂ ಪೂರ್ಣವಾಗಲಿಲ್ಲ. ಇದರಿಂದಾಗಿ, ಸರಕಾರಿ ನೌಕರರು ಕೆಲಸದ ಒತ್ತಡವೂ ಹೆಚ್ಚಳವಾಗುತ್ತಲೇ ಇವೆ. ಮತ್ತೊಂದೆಡೆ, ನೌಕರಶಾಹಿಗೆ ಹೊಸ ಆಲೋಚನೆ, ಉತ್ಸಾಹಿ ಯುವಶಕ್ತಿಯ ಸೇರ್ಪಡೆಯಾಗುತ್ತಿಲ್ಲ.

(ಮೇಲಿನ ಅಂಕಿ ಅಂಶಗಳು 2022ರ ಜೂನ್‌ ತಿಂಗಳು)

ಭಷ್ಟಾಚಾರ ಮತ್ತು ಜಾತಿ ಪ್ರಭಾವ

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಎಷ್ಟು ಪ್ರಮಾಣದಲ್ಲಿ ಖಾಲಿ ಇವೆಯೋ ಅದಕ್ಕಿಂತ 5 ಹೆಚ್ಚು ಯುವಜನತೆ ಸರ್ಕಾರಿ ಹುದ್ದೆಗಳ ದೊರಕಲಿ ಎಂಬ ಆಸೆಯಿಂದ ಇರಲಿದ್ದಾರೆ. ಇದರ ನಡುವೆಯೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಪ್ರಭಾವಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಭ್ರಷ್ಟತೆಗೆ ಸಿಲುಕುವ ಯುವಜನತೆ ಲಕ್ಷಾಂತರ ರೂಪಾಯಿ ಹಣವನ್ನು ಲಂಚ ನೀಡುತ್ತಿರುವುದು ನಡೆದೆ ಇದೆ. ಭ್ರಷ್ಟಾಚಾರ ರಹಿತವಾಗಿ ಉದ್ಯೋಗ ಪಡೆದುಕೊಳ್ಳುವುದು ದೊಡ್ಡ ಸವಾಲೇ ಆಗಿದೆ. ಕೆಲವು ಬಹಿರಂಗೊಂಡರೂ, ಹಲವು ಸಂದರ್ಭದಲ್ಲಿ ಇದು ಗುಪ್ತವಾಗಿ ನಡೆಯುವ ದೊಡ್ಡ ವ್ಯವಹಾರವಾಗಿ ರೂಪುಗೊಂಡಿದೆ.

ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಜಾತಿ ಪ್ರಭಾವವೂ ಜೋರಾಗಿದ್ದು, ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬದ ಹತ್ತಿರ ಇರುವವರಿಗೆ ಅಥವಾ ತಮ್ಮ ಜಾತಿಯವರಿಗೆ ಸರ್ಕಾರಿ ಹುದ್ದೆಗಳು ಲಭಿಸುವಂತೆ ಮಾಡಲು ಭಾರಿ ಕಸರತ್ತು ನಡೆಸುತ್ತಿರುವುದು ಕಂಡುಬಂದಿದೆ.

ಅಲ್ಲದೆ, ಸರ್ಕಾರಿ ಹುದ್ದೆಯನ್ನು ಪಡೆಯಲು ಮೀಸಲು ವಿಭಾಗದ ಹುದ್ದೆಗಳಿಗೆ ನಕಲಿ ದಾಖಲೆಗಳನ್ನು, ನಕಲಿ ಜಾತಿ ಪ್ರಮಾಣಪತ್ರವನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವ ಮಂದಿಯೂ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಈಗಾಗಲೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿರುವ ಹಲವು ಮಂದಿ ನಕಲಿ ಜಾತಿ ಪ್ರಮಾಣ ಪತ್ರ ಬಳಕೆ ಮಾಡಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಕ್ಕೆ ಪ್ರೋತ್ಸಾಹಿಸುವ ದಂಧೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಸಂಸದೀಯ ಸದಸ್ಯರು ಇರುವುದು ಇತ್ತೀಚಿಗೆ ಬೆಳಕಿಗೆ ಬಂದಿದ್ದು ಇದೊಂದು ದೊಡ್ಡ ವ್ಯವಸ್ಥಿತ ಜಾಲವಾಗಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಉದ್ಯೋಗ ಪಡೆದುಕೊಂಡ ಬಗ್ಗೆ ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲೂ ಚರ್ಚೆ ಆಗಿತ್ತು.

ಗುತ್ತಿಗೆ ಪದ್ಧತಿ

ನವ ಉದಾರೀಕರಣ ಜಾರಿಯಿಂದಾಗಿ ಇಂದು ಖಾಯಂ ಹುದ್ದೆಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಸರ್ಕಾರಿ ಹುದ್ದೆಗಳಲ್ಲಿ ಗುತ್ತಿಗೆ ಆಧಾರಿತ ನೌಕರರ ನೇಮಕಾತಿಯಿಂದಾಗಿ ಒಬ್ಬ ಉದ್ಯೋಗಿ ತನ್ನ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುವಂತಿಲ್ಲ. ಅಲ್ಲದೆ, ಯಾವ ಉದ್ಯೋಗ ಭದ್ರತೆಯಿಲ್ಲದೆ ಯಾವಾಗ ಬೇಕಾದರೂ ಉದ್ಯೋಗವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರೊಂದಿಗೆ, ಖಾಯಂ ನೌಕಕರಿಗಿಂತ ಅತ್ಯಲ್ಪ ಪ್ರಮಾಣದಲ್ಲಿ ಕಡಿಮೆ ಸಂಬಳಕ್ಕೆ ದುಡಿಮೆ ಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ಉದ್ಯೋಗಿಗಳು ಕೌಟುಂಬಿಕ ನಿರ್ವಹಣೆ ಕಷ್ಟಕರವಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಹಾಗಾಗಿ, ಖಾಲಿ ಇರುವ ಸರ್ಕಾರಿ ಹುದ್ದೆಗಳು ಭರ್ತಿಯಾಗಬೇಕು. ಖಾಯಂ ಉದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳಬೇಕು. ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು. ಗುತ್ತಿಗೆ ಆಧಾರಿತ ನೌಕರರ ಮೇಲಿನ ದಬ್ಬಾಳಿಕೆಗಳು ಕೊನೆಗೊಳ್ಳಬೇಕಿದೆ.

ಶಿಕ್ಷಣ ರಂಗದಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗಗಳು ಖಾಲಿ ಇವೆ. ಇಲ್ಲಿಯೂ ಖಾಯಂ ನೌಕರರ ಬದಲಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಮೂಲಕ ಸರ್ಕಾರಿ ಸೌಲಭ್ಯಗಳಿಂದ ಶಿಕ್ಷಕರು ವಂಚಿತರಾಗಿದ್ದಾರೆ. ಅತ್ಯಂತ ಕಡಿಮೆ ಸಂಬಳದಲ್ಲಿ, ಯಾವ ಸೌಲಭ್ಯಗಳು ಇಲ್ಲದೆ ಅತಿಥಿ ಉಪನ್ಯಾಸಕರು ತಮ್ಮ ಅಧ್ಯಾಪನ ವೃತ್ತಿಯನ್ನು ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ 9.79 ಲಕ್ಷ ಹುದ್ದೆಗಳು ಖಾಲಿ

ರಾಜ್ಯದಂತೆಯೇ ದೇಶದಲ್ಲಿಯೂ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಪ್ರಮಾಣ ಹೆಚ್ಚಾಗಿಯೇ ಇದೆ. ಕೋಟಿಗಟ್ಟಲೆ ಯುವಜನತೆ ಉತ್ತಮವಾದ ಹಾಗೂ ಖಾಯಂ ನೌಕರಿ ನಿರೀಕ್ಷೆಯಲ್ಲಿದ್ದರೂ ಸಹ ಆಳುವ ಸರ್ಕಾರಗಳು ಇರುವ ಖಾಲಿ ಹುದ್ದೆಗಳನ್ನು ಪೂರ್ಣ ಮಟ್ಟದಲ್ಲ ಭರ್ತಿ ಮಾಡುತ್ತಿಲ್ಲ. ಬದಲಾಗಿ, ಇರುವ ಸರ್ಕಾರಿ ಒಡೆತನದ ಸಂಸ್ಥೆಗಳ ಮಾರಾಟಕ್ಕೂ ಮುಂದಾಗಿವೆ.

ದೇಶದಲ್ಲಿ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಖಾಲಿ ಹುದ್ದೆಗಳ ಸಂಖ್ಯೆ 2 ಪಟ್ಟು ಹೆಚ್ಚಳವಾಗಿದೆ. ರಾಜ್ಯ ವಿಧಾನಮಂಡಲ ಅಧಿವೇಶನದ ಅವಧಿಯಲ್ಲೇ ನಡೆದ ಸಂಸತ್‌ ಅಧಿವೇಶನದಲ್ಲಿಯೂ ಸರ್ಕಾರಿ ಹುದ್ದೆಗಳ ಬಗ್ಗೆ ಚರ್ಚೆ ನಡೆಸಿದ್ದು, ಲೋಕಸಭೆಯಲ್ಲಿ ಸರ್ಕಾರ ಹುದ್ದೆಗಳ ಕುರಿತು ಲಿಖಿತ ವರದಿನೀಡಿದ್ದು, ಕೇಂದ್ರ ತನಿಖಾ ಸಂಸ್ಥೆ, ನಾಗರಿಕ ಸೇವೆಗಳು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9,79,327 ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ ವರದಿಯಾಗಿದೆ.

ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದೆಂದು ಭರವಸೆ ನೀಡಿದ್ದ ಕೇಂದ್ರದ ಮೋದಿ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರ ಹಿಡಿದರೂ ಸಹ ಉದ್ಯೋಗ ಸೃಷ್ಟಿಯಾಗುವುದಿರಲಿ, ಇರುವ ಹುದ್ದೆಗಳ ಭರ್ತಿಗೆ ಕ್ರಮವನ್ನೇ ವಹಿಸಿಲ್ಲ. ಕೇವಲ ಆಡಂಬರದ ಮಾತುಗಳನ್ನಷ್ಟ ದೇಶದ ಯುವಜನತೆ ಆಲಿಸುತ್ತಿದ್ದಾರೆ.

ಡಿಸೆಂಬರ್ 1ರಂದು 30 ದಿನಗಳ ಸರಾಸರಿ ನಿರುದ್ಯೋಗ 8.2% ಇದ್ದದ್ದು, ಡಿಸೆಂಬರ್ 16 ರವೇಳೆಗೆ 9.3%ಕ್ಕೆ ಏರಿದೆ. ಅದರಲ್ಲೂ ನಗರದಲ್ಲಿನ ನಿರುದ್ಯೋಗ ದರ 9.7%. ಗ್ರಾಮೀಣ ಪ್ರದೇಶಗಳಲ್ಲಿ 9%. ಇದು ಕೋವಿಡ್‌ ನಂತರದ ಅತಿ ಹೆಚ್ಚು ಪ್ರಮಾಣ. ಡಿಸೆಂಬರ್ 2021ರಲ್ಲಿ ಇದು 7.9% ಇತ್ತು.

ಆತ್ಮಹತ್ಯೆ ಪ್ರಕರಣಗಳು ಹೆಚ್ಚಳ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇತ್ತೀಚಿಗೆ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು ಅದರ ಪ್ರಕಾರ, 2021ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ಆತ್ಮಹತ್ಯೆಗೆ ಈಡಾಗಿದ್ದಾರೆ. ಆತ್ಮಹತ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, 2021ರಲ್ಲಿ ಸ್ವ-ಉದ್ಯೋಗಿಗಳು, ನಿರುದ್ಯೋಗಿಗಳು, ದಿನಗೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು, ಕೃಷಿ ರಂಗದಲ್ಲಿ ತೊಡಗಿಸಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: 2021ರಲ್ಲಿ ಆತ್ಮಹತ್ಯೆಗೀಡಾದವರ ಒಟ್ಟು ಸಂಖ್ಯೆ 164033-ಕಾರ್ಮಿಕರು, ನಿರುದ್ಯೋಗಿಗಳು, ರೈತರೇ ಹೆಚ್ಚು

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ನಿರುದ್ಯೋಗಿಗಳ ಪ್ರಮಾಣದಲ್ಲಿ ಬಾರಿ ಏರಿಕೆ ಕಂಡುಬಂದಿದ್ದು, ನವೆಂಬರ್ 2022 ರಲ್ಲಿ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ 5.1 ಕೋಟಿ ಎಂದು ವರದಿಯಾಗಿದೆ.  ಕೋವಿಡ್‌ ಕಾಲದ ಸಂಖ್ಯೆಯಷ್ಟೇ ಇದೆ ಎಂದು ಸರ್ಕಾರಿ ಸಂಸ್ಥೆಗಳೇ ಉಲ್ಲೇಖಿಸಿವೆ.

ಮುಂದೇನು….

ಒಟ್ಟಾರೆ ಆಳುವ ಸರ್ಕಾರಗಳು ಜನತೆ ಜೀವನಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ ಕೈಗೊಳ್ಳುವ ನಿರ್ಧಾರಗಳು ಜನಪರವಾಗಿದ್ದರೆ ಮಾತ್ರ ಜನರು ಉದ್ಯೋಗ ವಂಚನೆಯಿಂದ ಬಿಡುಗಡೆ ಹೊಂದಲಿದ್ದಾರೆ. ನಿರುದ್ಯೋಗ ಪ್ರಮಾಣವೂ ಕಡಿಮೆಯಾಗಲಿದೆ. ಮುಖ್ಯ ಗ್ರಾಮೀಣ ಭಾಗದಲ್ಲಿ ಕೃಷಿ ರಂಗದ ರೈತಾಪಿ ವರ್ಗದ ನಷ್ಟಕ್ಕೆ ಈಡಾಗದಂತೆ ಕ್ರಮವನ್ನು ವಹಿಸಬೇಕು. ಉತ್ತಮ ಶಿಕ್ಷಣವನ್ನು ಒದಗಿಸಲು, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ತಡೆಗಟ್ಟಲು ಸರ್ಕಾರ ಶಿಕ್ಷಣ ರಂಗಕ್ಕೆ ವಿನಿಯೋಗಿಸುವ ಹಣವನ್ನು ಹೆಚ್ಚಿಸಬೇಕು.

ಇಂದಿಗೂ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿರುವುದು ಕೃಷಿ ರಂಗ ಮಾತ್ರ. ಇದರೊಂದಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಹೆಚ್ಚಿನ ಸಂಖ್ಯೆ ಗ್ರಾಮೀಣ ಜನತೆ ಉದ್ಯೋಗದಲ್ಲಿ ತೊಡಗಿದ್ದಾರೆ. ಹಾಗಾಗಿ ಸರ್ಕಾರ ಈ ರಂಗಕ್ಕೆ ಹೆಚ್ಚಿನ ಅನುದಾನವನ್ನು ಒದಗಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು.

ಉದ್ಯೋಗ ಸೃಷ್ಟಿಸುವ ದೊಡ್ಡ ಕ್ಷೇತ್ರವೆಂದರೆ ಶಿಕ್ಷಣ ಮತ್ತು ಆರೋಗ್ಯ ಈ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಹಣವನ್ನು ವಿನಿಯೋಗಿಸುವ ಮೂಲಕ ಆದ್ಯತೆಯಾಗಿ ಪರಿಗಣಿಸಬೇಕು. ಆ ಮೂಲಕ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಅತ್ಯಧಿಕ ಯುವಜನ ಮಾನವ ಸಂಪನ್ಮೂಲ ಇರುವುದು ನಮ್ಮ ದೇಶದಲ್ಲಿಯೇ, ಹಾಗಾಗಿ ಜನತೆಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ.

ಇದನ್ನು ಓದಿ: “ನಿರುದ್ಯೋಗಿ ಯುವಜನರ ಆಕಾಂಕ್ಷೆಗಳನ್ನು ಗುರುತಿಸಿ-ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಿ” : ಎಐಕೆಎಸ್

ಹಸಿವು, ಬಡತನ, ನಿರುದ್ಯೋಗದಂತ ಗಂಭೀರ ಸ್ವರೂಪದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಿಯಾ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕು. ಸರ್ಕಾರ ಆಯವ್ಯಯದಲ್ಲಿ ಕೃಷಿ, ಶಿಕ್ಷಣ, ಉದ್ಯೋಗದಂತ ಕ್ಷೇತ್ರಗಳಿಗೆ ಹೆಚ್ಚಿನ ವೆಚ್ಚ ಮಾಡುವ ಮೂಲಕ ಕಾರ್ಯಪ್ರವೃತ್ತರಾಗಬೇಕು.

ದೇಶದಲ್ಲಿ ಜಿಎಸ್‌ಟಿ ತೆರೆಗೆ ಪದ್ಧತಿ ಜಾರಿಗೆ ಬಂದಾಗಿನಿಂದ ಸರ್ಕಾರದ ಆದಾಯದ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಹಾಗಾಗಿ ಸರ್ಕಾರ ಹೆಚ್ಚು ಉದ್ಯೋಗ ಸೃಷ್ಟಿಯ ಕಡೆ ಗಮನಹರಿಸಬೇಕು.

ಗುತ್ತಿಗೆ ಪದ್ದತಿಯನ್ನು ತೆಗೆದು ಹಾಕುಬೇಕು. ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಿದೆ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಜನರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳು ಸರಿಯಾಗಿ ಸಿಗುವಂತೆ ಮಾಡಬೇಕಾಗಿದೆ. ಆ  ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ನೆಲೆಗೊಳಿಸಬೇಕು.

ಸರ್ಕಾರಿ ಅಧಿಕಾರಿಗಳ ಲಂಚಗುಳಿತನಕ್ಕೆ ಕಡಿವಾಣ ಹಾಕಲು ಸರ್ಕಾರ ಮತ್ತು ಜನತೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಉದ್ಯೋಗ ವಂಚಿತ ಯುವಜನತೆ ನಿರುದ್ಯೋಗದ ವಿರುದ್ಧ ಪ್ರಬಲವಾದ ಜನಚಳುವಳಿಯನ್ನು ಸಂಘಟಿಸುವ ಮೂಲಕ ಉದ್ಯೋಗ ಸೃಷ್ಟಿಗೊಳಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು.

ಸರ್ಕಾರ ನವ ಉದಾರೀಕರಣ ನೀತಿಗಳನ್ನು ತಿಲಾಂಜಲಿ ನೀಡಿ ಸರ್ಕಾರಿ ಒಡೆತನ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಆ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗದಂತ ಗಂಭೀರ ಸಮಸ್ಯೆಯ ನಿವಾರಣೆಯಾಗಲಿದೆ ಮತ್ತು ಆಡಳಿತ ಯಂತ್ರ ಸುಗಮವಾಗಿ ಸಾಗಲು ಸಾಧ್ಯವಿದೆ.

Donate Janashakthi Media

Leave a Reply

Your email address will not be published. Required fields are marked *