ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನ 1928ರಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಚಂದ್ರಶೇಖರ ವೆಂಕಟ ರಾಮನ್ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಪ್ರಮುಖ ಆವಿಷ್ಕಾರವನ್ನು ಮಾಡಿದರು. ನಂತರ ಅದನ್ನು ರಾಮನ್ ಎಫೆಕ್ಟ್ ಎಂದು ಹೆಸರಿಸಲಾಯಿತು. ಅವರ ಕೆಲಸಕ್ಕಾಗಿ, 1930 ರಲ್ಲಿ ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್, 1986 ರಲ್ಲಿ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲು ಭಾರತ ಸರ್ಕಾರವನ್ನು ಕೇಳಿತು. ಸರ್ಕಾರ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಅಂಗೀಕರಿಸಿ ಘೋಷಿಸಿತು. ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಯಿತು.
ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಭಾಷಣಗಳು, ರೇಡಿಯೋ, ಟಿವಿ, ವಿಜ್ಞಾನ ಚಲನಚಿತ್ರಗಳು, ವಿಷಯಗಳು ಮತ್ತು ಪರಿಕಲ್ಪನೆಗಳ ಕುರಿತು ವಿಜ್ಞಾನ ಪ್ರದರ್ಶನಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು ಮತ್ತು ವಿಜ್ಞಾನ ಮಾದರಿ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತವೆ.
ರಾಮನ್ ಎಫೆಕ್ಟ್ ಎಂದರೇನು?
ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು.
ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ.
1934ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ಸಿ.ವಿ. ರಾಮನ್, ತದನಂತರ 1943ರಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.
ಪ್ರೊ. ಸಿ.ವಿ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು “ರಾಮನ್ ರೀಸರ್ಚ್ ಇನ್ಸ್ಟಿಟ್ಯೂಟ್ ” ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ.
ನೋಬೆಲ್ ಪ್ರಶಸ್ತಿ ಪಡೆದ ಸರ್ ಸಿ.ವಿ.ರಾಮನ್
ಸಿ.ವಿ. ರಾಮನ್ ಅವರು 1954ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಅಲಂಕರಿಸಿದರು. ರಾಮನ್ ಅವರಿಗೆ 1930ರಲ್ಲಿ “ಬೆಳಕಿನ ಚದುರುವಿಕೆಯ ಮೇಲಿನ ಅವರ ಕೆಲಸಕ್ಕಾಗಿ ಮತ್ತು ಅವರ ಹೆಸರಿನ ಪರಿಣಾಮದ ಆವಿಷ್ಕಾರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ
ಈ ಬಾರಿ ಅಂದರೆ, 2022ರ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ ಹೀಗಿದೆ ‘ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ವಿಧಾನ’.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಒಳಗೊಂಡಿರುವ ವೈಜ್ಞಾನಿಕ ವಿಷಯಗಳ ಬಗ್ಗೆ ಸಾರ್ವಜನಿಕ ಮೆಚ್ಚುಗೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ.
ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಪರಿಣಾಮಕಾರಿ ಪರಿಹಾರಗಳ ಕುರಿತು ಚರ್ಚಿಸಲು ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಳಗೊಂಡ ರಾಷ್ಟ್ರೀಯ ವಿಜ್ಞಾನ ಸಮಾವೇಶವನ್ನು ಮುಂಬರುವ ದಿನಗಳಲ್ಲಿ ಯೋಜಿಸುವ ಬಗ್ಗೆ ಪ್ರಕಟಣೆ ನೀಡಿದೆ.
ಗೌರಿಬಿದನೂರಿನಲ್ಲೊಂದು ವಿಜ್ಞಾನ ಕೇಂದ್ರ
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ, ಹೊಸಕೋಟೆ ಬಳಿ ಸರ್ಕಾರವು ಶಿಕ್ಷಣ ತಜ್ಞ, ವೈಜ್ಞಾನಿಕ ಮನೋಭಾವದ ಡಾ. ಎಚ್. ನರಸಿಂಹಯ್ಯ ಹೆಸರಿನಲ್ಲಿ ವಿಜ್ಞಾನ ಕೇಂದ್ರವೊಂದನ್ನು ಆರಂಭಿಸಿದ್ದು, ಜನರ ಗಮನ ಸೆಳೆಯುತ್ತಿದೆ. ತರಗತಿಗಳಲ್ಲಿ, ಲ್ಯಾಬೊರೆಟರಿಗಳಲ್ಲಿ, ವಿಜ್ಞಾನ ಗಣಿತದ ಬಗ್ಗೆ ಕೇಳಿ ತಿಳಿಯವುದರ ಬದಲು, ಪರಿಚಯಿಸುವ, ಅನುಭವಿಸುವ ಹಾಗೂ ಮಕ್ಕಳಲ್ಲಿ ಚಿಂತನೆ ಉದ್ಭವ ಆಗುವ ರೀತಿಯಲ್ಲಿ ಕಲಿಯುವ ಉದ್ದೇಶದಿಂದ ನಿರ್ಮಿಸಲಾಗಿದೆ.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನಾಗಿ ಸರ್ಕಾರ ಮೇಲ್ದರ್ಜೆಗೆರಿಸಿದ್ದು, ವಿವಿಧ ಗ್ಯಾಲರಿಗಳ ಶಂಕು ಸ್ಥಾಪನೆ, ಉದ್ಘಾಟನೆ ಮಾಡಲಾಗುತ್ತಿವೆ.